ವಕೀಲಿಕೆ ಮಾಡಿದರೂ ತಾರತಮ್ಯ ಮುಂದುವರೆಯುತ್ತದೇನೋ ಎಂಬ ಅಳುಕಿದೆ: ತೃತೀಯ ಲಿಂಗಿ ಕಾನೂನು ವಿದ್ಯಾರ್ಥಿ ಶಶಿ

ಸಂವಿಧಾನದ ಅಡಿ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ನಮ್ಮನ್ನು ಅತ್ಯಂತ ಕೆಟ್ಟದಾಗಿ ನೋಡಲಾಗುತ್ತಿದೆ, ನಡೆಸಿಕೊಳ್ಳಲಾಗುತ್ತಿದೆ. ಸಮಾಜದಲ್ಲಿ ತೃತೀಯ ಲಿಂಗಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ, ಶೋಷಣೆ ತಪ್ಪಿಸಬೇಕು ಎನ್ನುವುದು ನನ್ನ ಗುರಿ.
Shashi C
Shashi CTransgender Law student
Published on

ಸಮಾಜದಲ್ಲಿ ಶೋಷಣೆಗೆ ಒಳಗಾಗುತ್ತಿರುವ ಸಮುದಾಯಗಳಲ್ಲಿ ತೃತೀಯ ಲಿಂಗಿ ಸಮುದಾಯವೂ ಒಂದು. ಅವಜ್ಞೆ, ಬಿರುನುಡಿ, ಅವಮಾನಗಳನ್ನು ಸಾಮಾನ್ಯ ಎಂದು ಸ್ವೀಕರಿಸಿರುವ ಈ ಸಮುದಾಯದ ಒಬ್ಬರು ಸಾರ್ವಜನಿಕ ಆಡಳಿತದಲ್ಲಿ ಸ್ನಾತಕೋತ್ತರ ಪದವಿ ಪಡೆದು, ಕಾನೂನು ಪದವಿ ಪಡೆಯುವ ಹಂತದಲ್ಲಿರುವುದು ನಿಜಕ್ಕೂ ಕಡಿಮೆ ಸಾಧನೆಯಲ್ಲ. ಹೀಗೆ ಅಡಿಗಡಿಗೂ ಸವಾಲುಗಳನ್ನು ಎದುರಿಸಿ, ಸ್ಥೈರ್ಯದಿಂದ ಹೆಜ್ಜೆ ಹಾಕುತ್ತಿರುವವರು ಮೈಸೂರಿನವರಾದ ಶಶಿಕುಮಾರ್‌ ಅಲಿಯಾಸ್‌ ಶಶಿ ಸಿ. 28 ವರ್ಷದ ಶಶಿ ಅವರು ಮೈಸೂರಿನ ವಿದ್ಯಾವರ್ಧಕ ಕಾನೂನು ಕಾಲೇಜಿನಲ್ಲಿ ಕಾನೂನು ಪದವಿ ಪೂರೈಸುವ ಹಂತದಲ್ಲಿದ್ದಾರೆ.

ಸಮಾಜದ ಮೂದಲಿಕೆ, ನೆರಹೊರೆಯವರ ಚುಚ್ಚು ನುಡಿ ಎಲ್ಲವನ್ನೂ ಸಹಿಸಿಕೊಂಡು ಸ್ವಶಕ್ತಿಯ ಮೇಲೆ ಬದುಕು ಕಟ್ಟಿಕೊಳ್ಳುತ್ತಿರುವ ಶಶಿ, ಬಹುಶಃ ಕರ್ನಾಟಕದ ಮಟ್ಟಿಗೆ ಕಾನೂನು ಪದವಿ ಪಡೆದಿರುವ ಮೊದಲ ತೃತೀಯ ಲಿಂಗಿ ಇರಬಹುದು. ಓದಿನ ಜೊತೆಗೆ ಜೀವನ ಸಾಗಿಸಲು ಸಣ್ಣಪುಟ್ಟ ಉದ್ಯೋಗ ಮಾಡುತ್ತಲೇ ವಕೀಲ ಯು ನಾಗರಾಜ್‌ ಎಂಬುವರ ಬಳಿ ಜೂನಿಯರ್‌ ಆಗಿ ಸಹಾಯಕ ಆಯುಕ್ತರ ನ್ಯಾಯಾಲಯದಲ್ಲಿ (ಎ ಸಿ ಕೋರ್ಟ್‌ನಲ್ಲಿ) ವೃತ್ತಿ ತರಬೇತಿ ಪಡೆಯುತ್ತಿದ್ದಾರೆ.

“ತೃತೀಯ ಲಿಂಗಿಗಳಿಗೆ ಸಂವಿಧಾನಾತ್ಮಕವಾಗಿ ದಕ್ಕಬೇಕಾಗಿರುವ ಹಕ್ಕುಗಳನ್ನು ಕೊಡಿಸಲು ನಿರಂತರವಾಗಿ ಪ್ರಯತ್ನಿಸುವೆ. ಸಮಾಜದಲ್ಲಿ ಅವರು ಘನತೆಯಿಂದ ಬದುಕುವಂತೆ ಮಾಡುವುದೇ ನನ್ನ ಗುರಿ. ನ್ಯಾಯಾಧೀಶರಾಗಬೇಕೆನ್ನುವ ಆಸೆಯಿದ್ದು, ಈ ನಿಟ್ಟಿನಲ್ಲಿ ಪ್ರಯತ್ನ ಮುಂದುವರಿಸಿರುವೆ” ಎನ್ನುವ ಶಶಿ “ಬಾರ್‌ ಅಂಡ್‌ ಬೆಂಚ್‌” ನೊಂದಿಗೆ ತಮ್ಮ ಬದುಕು, ಕನಸುಗಳನ್ನು ಹಂಚಿಕೊಂಡಿದ್ದಾರೆ.

Q

ಕಾನೂನು ಶಿಕ್ಷಣ ಪಡೆಯಬೇಕು ಎಂದು ನಿಮಗೆ ಅನಿಸಿದ್ದೇಕೆ?

A

ಕರ್ನಾಟಕದಲ್ಲಿ ಸುಮಾರು ಐದು ಲಕ್ಷಕ್ಕೂ ಹೆಚ್ಚು ಮಂದಿ ತೃತೀಯ ಲಿಂಗಿ ಸಮುದಾಯದವರು ಇದ್ದಾರೆ ಎನ್ನಲಾಗುತ್ತಿದೆ. ತೃತೀಯ ಲಿಂಗಿಗಳನ್ನು ಲೈಂಗಿಕ ಕಾರ್ಯಕರ್ತರಂತೆ ನೋಡಲಾಗುತ್ತಿದೆ. ವೈಯಕ್ತಿಕವಾಗಿ ಮನೆಯವರು, ಸಂಬಂಧಿಗಳು, ನೆರೆಹೊರೆಯವರು, ಸ್ನೇಹಿತರು ಇಡಿಯಾಗಿ ಹೇಳಬೇಕೆಂದರೆ ಸಮಾಜದಿಂದ ಸಾಕಷ್ಟು ನೋವುಗಳನ್ನು ಅನುಭವಿಸಿದ್ದೇನೆ. ಶೋಷಿತ ಸಮುದಾಯವರನ್ನು ನೋಡುವುದಕ್ಕಿಂತಲೂ ನಮ್ಮನ್ನು ಅತ್ಯಂತ ಕೆಟ್ಟದಾಗಿ ನೋಡುತ್ತಾರೆ. ಸಂವಿಧಾನದ 19, 20, 21ರಲ್ಲಿ ಜೀವಿಸುವ ಹಕ್ಕು ಎಲ್ಲರಿಗೂ ಇದೆ. ಆದರೆ, ನಮ್ಮನ್ನು ಅತ್ಯಂತ ಕೆಟ್ಟದಾಗಿ ನೋಡಲಾಗುತ್ತಿದೆ, ನಡೆಸಿಕೊಳ್ಳಲಾಗುತ್ತಿದೆ. ಸಮಾಜದಿಂದ ನಮ್ಮ ತೃತೀಯ ಲಿಂಗಿ ಸಮುದಾಯಕ್ಕೆ ಆಗುತ್ತಿರುವ ಅನ್ಯಾಯ, ಶೋಷಣೆಯನ್ನು ನನ್ನ ಮಿತಿಯಲ್ಲಿ ಎಷ್ಟು ಸಾಧ್ಯವೋ ಅಷ್ಟು ತಪ್ಪಿಸಬೇಕು. ಈ ಸಮುದಾಯಕ್ಕೆ ಸಾಧ್ಯವಾದಷ್ಟು ಮಟ್ಟಿಗೆ ಮೂಲಸೌಕರ್ಯ, ಶಿಕ್ಷಣದ ಲಭ್ಯತೆ ದೊರಕಿಸಲು ಶ್ರಮಿಸುವುದರೊಂದಿಗೆ, ಅವರೂ ಮನುಷ್ಯರು ಎಂಬ ಭಾವನೆಯನ್ನು ಸಮಾಜದಲ್ಲಿ ಮೂಡಿಸುವ ಏಕೈಕ ಕಾರಣದಿಂದ ನಾನು ಕಾನೂನು ಶಿಕ್ಷಣ ಪಡೆಯಲು ಮುಂದಾದೆ. ಅಂಬೇಡ್ಕರ್‌ ನನ್ನ ಆದರ್ಶ. ಬಾಬಾ ಸಾಹೇಬರು ಹೇಗೆ ದಮನಿತರ ಪರವಾಗಿ ಕೆಲಸ ಮಾಡಿದರೋ ಅದೇ ರೀತಿ ತೃತೀಯ ಲಿಂಗಿ ಸಮುದಾಯದ ಪರವಾಗಿ ಕೆಲಸ ಮಾಡುವ ಗುರಿ ನನ್ನದು. ನನ್ನ ಎಲ್‌ಎಲ್‌ಬಿ ಪದವಿ ಪೂರ್ಣಗೊಂಡಿಲ್ಲ. ಕೆಲವು ವಿಷಯಗಳು ಬಾಕಿ ಉಳಿದಿವೆ. ಅವುಗಳಲ್ಲಿ ಉತ್ತೀರ್ಣ ಹೊಂದಿ, ವಕೀಲಿಕೆ ಮಾಡುವೆ. ನ್ಯಾಯಾಧೀಶರಾಗಬೇಕೆನ್ನುವ ಬಯಕೆಯೂ ಇದೆ.

Q

ನಿಮ್ಮ ಕುಟುಂಬ, ಬಾಲ್ಯ, ಶಿಕ್ಷಣದ ಬಗ್ಗೆ ತಿಳಿಸಬಹುದೇ?

A

ನಾನು ಮೈಸೂರಿನ ಜಯನಗರ ನಿವಾಸಿ. ನನ್ನ ತಂದೆ ಚೌಡಯ್ಯ, ತಾಯಿ ಪಾರ್ವತಮ್ಮ. ನಾವು ನಾಲ್ಕು ಜನ ಮಕ್ಕಳು. ಅಕ್ಕ, ತಂಗಿ ಮತ್ತು ತಮ್ಮ ಇದ್ದಾರೆ. ನಮ್ಮದು ಆರ್ಥಿಕವಾಗಿ ಹಿಂದುಳಿದ ಕುಟುಂಬ. ಸರ್ಕಾರಿ ಶಾಲೆ, ಕಾಲೇಜುಗಳಲ್ಲಿ ಶಿಕ್ಷಣ ಪೂರೈಸಿದ್ದೇನೆ. ಕುವೆಂಪುನಗರದ ವಾಸುದೇವ ಸೋಮಾನಿ ಕಾಲೇಜಿನಲ್ಲಿ ಇತಿಹಾಸ, ಅರ್ಥಶಾಸ್ತ್ರ ಮತ್ತು ರಾಜಕೀಯ ವಿಜ್ಞಾನದಲ್ಲಿ ಪದವಿ ಪಡೆದಿರುವೆ. ರಾಜ್ಯ ಮುಕ್ತ ವಿಶ್ವವಿದ್ಯಾಲಯದಿಂದ ದೂರ ಶಿಕ್ಷಣದಲ್ಲಿ ಸಾರ್ವಜನಿಕ ಆಡಳಿತ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರೈಸಿದ್ದೇನೆ. ಆ ಬಳಿಕ ಕಾನೂನು ಪದವಿ ಸೇರಿದೆ. ಮೈಸೂರಿನ ಡಾ. ರಶ್ಮಿರಾಣಿ ಅವರ ಚಿರಾಂತ ಆಯುರ್ವೇದ ಕೇಂದ್ರದಲ್ಲಿ ಕೆಲಸ ಮಾಡಿಕೊಂಡೇ ಬಹುತೇಕ ಪದವಿ ಆನಂತರದ ಶಿಕ್ಷಣ ಪೂರೈಸಿದೆ. ಡಾ. ರಶ್ಮಿ ರಾಣಿ ಅವರು ಪ್ರತಿ ವರ್ಷ 30 ಸಾವಿರ ರೂಪಾಯಿಗಳಂತೆ ಮೂರು ವರ್ಷ ನನ್ನ ಕಾನೂನು ಶಿಕ್ಷಣದ ಶುಲ್ಕ ಭರಿಸಿದ್ದಾರೆ. ನನ್ನ ಬಿ ಎ ಪದವಿ ಪಡೆಯುವಾಗ ಗೆಳೆಯನಾದ ಪ್ರದೀಪ ಎಂಬುವರು ಕಾನೂನು ಶಿಕ್ಷಣದ ಎಲ್ಲಾ ಸೆಮಿಸ್ಟರ್‌ ಶುಲ್ಕವನ್ನು ಪಾವತಿಸಿದ್ದಾರೆ.

Q

ನೀವು ತೃತೀಯ ಲಿಂಗಿ ಎಂದು ತಿಳಿದ ಮೇಲೆ ಕುಟುಂಬ ನಿಮ್ಮನ್ನು ನೋಡುವ ರೀತಿ ಹೇಗಿತ್ತು?

A

ನೆರೆಹೊರೆಯವರು ಚುಚ್ಚು ಮಾತುಗಳನ್ನು ಹೊರತುಪಡಿಸಿ ನನ್ನ ಕುಟುಂಬ ಸದಸ್ಯರು ನನಗೆ ಬೆಂಬಲವಾಗಿ ನಿಂತಿದ್ದಾರೆ. ಅಮ್ಮ ಅಂದರೆ ನನಗೆ ಬಹಳ ಪ್ರೀತಿ. ನಾನೇನೆ ಆದರೂ ಪರವಾಗಿಲ್ಲ. ಕುಟುಂಬದ ಜೊತೆಯೇ ಇರಬೇಕು ಎಂದು ಅಮ್ಮ ನನ್ನನ್ನು ಹಿಡಿದಿಟ್ಟರು. ಕುಟುಂಬದ ನೆರವು ಸಿಗದಿದ್ದರೆ ನಾನು ಕಾನೂನು ಪದವಿಯ ಶಿಕ್ಷಣ ಪಡೆಯುವ ಮಟ್ಟಕ್ಕೆ ಏರಲಾಗುತ್ತಿರಲಿಲ್ಲ.

ಅದಾಗ್ಯೂ ನನ್ನ ನಡೆ-ನುಡಿಗಳ ಬಗ್ಗೆ ಮನೆಯಲ್ಲೂ ತಕರಾರುಗಳು ಇದ್ದವು. ಹಾಗೆ ಇರಬಾರದು, ಹೀಗೆ ಇರಬಾರದು ಎಂದು ಹೇಳುತ್ತಿದ್ದರು. ನಾನು 8-9ನೇ ತರಗತಿ ಕಲಿಯುವಾಗಲೇ ನನ್ನಲ್ಲಿ ಹಾರ್ಮೋನು ವ್ಯತ್ಯಾಸಗಳಾಗಿತ್ತು. ಆಗಿನಿಂದಲೇ ನಾನು ಕುಟುಂಬ ಹಾಗೂ ಸಾರ್ವಜನಿಕ ಕಾರ್ಯಕ್ರಮ, ಸಭೆ-ಸಮಾರಂಭಗಳಲ್ಲಿ ಭಾಗವಹಿಸುವುದನ್ನು ನಿಲ್ಲಿಸಿದ್ದೆ. ಶಶಿಕುಮಾರ್‌ ಎಂದಿದ್ದ ನನ್ನ ಹೆಸರನ್ನು ಕಾನೂನು ಪ್ರಕಾರವಾಗಿ ಶಶಿ ಸಿ ಎಂದು ಅಫಿಡವಿಟ್‌ ಮಾಡಿಸಿದ್ದೇನೆ.

Q

ಶಾಲಾ-ಕಾಲೇಜುಗಳಲ್ಲಿ ಬೆಂಬಲ ಹೇಗಿತ್ತು?

A

ಶಾಲಾ-ಕಾಲೇಜುಗಳಲ್ಲೂ ಸಹಪಾಠಿಗಳು ನನ್ನ ಜೊತೆ ಬೆರೆಯುತ್ತಿರಲಿಲ್ಲ, ನನ್ನನ್ನು ಅನ್ಯಗ್ರಹ ಜೀವಿಯಂತೆ ನೋಡುತ್ತಿದ್ದರು. ಸಾಕಷ್ಟು ಮೂದಲಿಕೆ, ಚುಚ್ಚು ಮಾತುಗಳನ್ನು ಕೇಳಿದ್ದೇನೆ. ಅವುಗಳಿಂದ ನೊಂದಿದ್ದೇನೆ. ಕಾನೂನು ಕಾಲೇಜಿನಲ್ಲಿ 120 ಮಂದಿ ಇದ್ದರೂ ಐದೇ ಐದು ಜನರ ಜೊತೆ ಮಾತ್ರ ಸಮೀಪವರ್ತಿಯಾಗಿದ್ದೆ ಎಂಬುದು ವಾಸ್ತವ. ಸಾಕಷ್ಟು ತಾರತಮ್ಯ ಅನುಭವಿಸಿದ್ದೇನೆ. ವಕೀಲಿಕೆ ಆರಂಭಿಸಿದರೂ ತಾರತಮ್ಯ ಮುಂದುವರಿಯುತ್ತದೆಯೇನೋ ಎಂಬ ಅಳುಕು ಮನದಲ್ಲಿದೆ. ಆದರೆ, ನಾನು ಅದೆಲ್ಲಕ್ಕೂ ಸಿದ್ಧವಾಗಿದ್ದೇನೆ.

ಆದರೆ, ಬೋಧಕರು ಮಾತ್ರ ತುಂಬಾ ಪ್ರೀತಿಯಿಂದ ಕಂಡಿದ್ದಾರೆ. ಅವರೆಂದೂ ನನ್ನನ್ನು ವಿಶೇಷವಾಗಿ ನೋಡುತ್ತಿರಲಿಲ್ಲ. ಆದರೆ, ಶಿಕ್ಷಣದ ಭಾಗವಾಗಿ ಸ್ಥಳ ಭೇಟಿಗೆ (ನ್ಯಾಯಾಲಯ, ವಕೀಲರ ಸಂಘ, ವಕೀಲರ ಚೇಂಬರ್‌) ಹೋದಾಗ ಸಾಕಷ್ಟು ಮಂದಿ ವಿಭಿನ್ನ ರೀತಿಯ ಅಭಿಪ್ರಾಯಗಳನ್ನು ವ್ಯಕ್ತಪಡಿಸಿದ್ದಾರೆ. ಅವರು ಹೆಸರುಗಳನ್ನು ಹೇಳುವುದರಲ್ಲಿ ಅರ್ಥವಿಲ್ಲ. ಇಷ್ಟು ಪವಿತ್ರವಾದ ವೃತ್ತಿಯಲ್ಲಿ ಇಷ್ಟು ಸಂಕುಚಿತ ಮನೋಭಾವದ ಜನರು ಇದ್ದಾರಲ್ಲ ಎಂದೆನಿಸಿದೆ.

Q

ಆರ್ಥಿಕ ಪರಿಸ್ಥಿತಿಯ್ನ ಹೇಗೆ ನಿಭಾಯಿಸಿದಿರಿ?

A

ಆರ್ಥಿಕವಾಗಿ ನಮ್ಮ ಕುಟುಂಬವೇನು ಅಷ್ಟು ಸಬಲವಾಗಿರಲಿಲ್ಲ. ದೈನಂದಿನ ಖರ್ಚುಗಳು, ಪರೀಕ್ಷಾ ಶುಲ್ಕ ಭರಿಸುವುದಕ್ಕಾಗಿ ವಯಸ್ಸಾದವರ ಆರೈಕೆ ಮಾಡುವುದು, ಪೇಪರ್‌ ಹಂಚಿಕೆ, ಬ್ಯೂಟಿಷಿಯನ್‌ಗೆ ಸಹಾಯಕರಾಗಿ, ಹೋಟೆಲ್‌ನಲ್ಲಿ ವೆಯ್ಟರ್‌ ಆಗಿ ಕೆಲಸ ಮಾಡಿದ್ದೇನೆ. ಒಂದೊಮ್ಮೆ ವೃದ್ಧರ ಆರೈಕೆಯಲ್ಲಿದ್ದಾಗ ವೈದ್ಯರಾದ ಡಾ. ರಶ್ಮಿ ರಾಣಿ ಅವರು ವೃದ್ಧರೊಬ್ಬರಿಗೆ ಚಿಕಿತ್ಸೆ ನೀಡಲು ಅವರ ಮನೆಗೆ ಬರುತ್ತಿದ್ದರು. ಅವರ ಬಳಿ ಕೆಲಸ ಕೇಳಲಾಗಿ ಆಯುರ್ವೇದ ಕೇಂದ್ರಕ್ಕೆ ಸೇರಿಕೊಳ್ಳುವಂತೆ ಸೂಚಿಸಿದರು. ಹಾಗೆ ಇಲ್ಲಿ ಸೇರಿಕೊಂಡೆ. ಇಲ್ಲಿ ಅವರೊಂದಿಗೆ ಕಾನೂನು ಓದುವ ಇಂಗಿತ ವ್ಯಕ್ತಪಡಿಸಿದೆ. ಅವರು ಅದಕ್ಕೆ ನೆರವು ನೀಡುವುದಾಗಿ ಹೇಳಿದರು. ಹೀಗೆ ಕಾನೂನು ಶಿಕ್ಷಣ ಆರಂಭವಾಯಿತು.

Q

ಕಾನೂನು ಶಿಕ್ಷಣ ಪಡೆಯಲು ಸೀಟು ಹೇಗೆ ಪಡೆದುಕೊಂಡಿರಿ?

A

ಮೊದಲಿಗೆ ನಾನು ಶಾರದಾ ವಿಲಾಸ ಕಾನೂನು ಕಾಲೇಜಿಗೆ ಹೋಗಿದ್ದೆ. ಇಲ್ಲಿ 60 ಸೀಟುಗಳಿದ್ದವು. ನೀವು ತೃತೀಯ ಲಿಂಗಿ ಸರ್ಟಿಫಿಕೇಟ್‌ ತರುವಂತೆ ಆಡಳಿತ ಮಂಡಳಿಯವರು ಸೂಚಿಸಿದರು. ನನ್ನ ಬಳಿ ಆ ಸರ್ಟಿಫಿಕೇಟ್‌ ಇರಲಿಲಲ್ಲ. ಹೀಗಾಗಿ ನಾನು ನಾನು ವಿದ್ಯಾವರ್ಧಕ ಸಂಘ ಕಾನೂನು ಕಾಲೇಜಿನ ವಾಸುದೇವ ಸರ್‌ ಭೇಟಿ ಮಾಡಿದೆ. ಅವರು ನನ್ನೆಲ್ಲಾ ಮಾಹಿತಿ ಪಡೆದು ಹುಬ್ಬಳ್ಳಿಯಲ್ಲಿರುವ ಕರ್ನಾಟಕ ರಾಜ್ಯ ಕಾನೂನು ವಿಶ್ವವಿದ್ಯಾಲಯಕ್ಕೆ ಫೋನ್‌ನಲ್ಲಿ ಮಾತನಾಡಿ ನನಗೆ ಸೀಟು ಕೊಡಿಸಿದರು.

Q

ತೃತೀಯ ಲಿಂಗಿ ಸಮುದಾಯಕ್ಕೆ ಸರ್ಕಾರದಿಂದ ಯಾವೆಲ್ಲಾ ಸವಲತ್ತುಗಳು ಸಿಗುತ್ತಿವೆ?

A

ನಮಗೆ ಮೈತ್ರಿ ಯೋಜನೆಯಡಿ ಮಾಸಿಕವಾಗಿ 600 ರೂಪಾಯಿಗಳನ್ನು ನೀಡುತ್ತಾರೆ. ಇದು ಏತಕ್ಕೆ ಸಾಲುತ್ತದೆ ಹೇಳಿ? ನಮ್ಮ ಹಕ್ಕುಗಳನ್ನು ಖಾತರಿಪಡಿಸಬೇಕು. ಆಹಾರ ಪದಾರ್ಥಗಳನ್ನು ಉಚಿತವಾಗಿ ವಿತರಿಸಬೇಕು. ವಿವಾಹದ ಹಕ್ಕನ್ನು ಖಾತರಿಪಡಿಸಬೇಕು. ಶಿಕ್ಷಣ ಪಡೆಯಲು ಬೆಂಬಲ ನೀಡಬೇಕು. ತೃತೀಯ ಲಿಂಗಿ ಸಮುದಾಯಕ್ಕೆ ವಸತಿ ಯೋಜನೆ ಕಲ್ಪಿಸು ನಿಟ್ಟಿನಲ್ಲಿ ಹೋರಾಟ ಮಾಡಬೇಕಿದೆ. ಈಗಷ್ಟೇ ಪಯಣ ಆರಂಭವಾಗಿದೆ.

Kannada Bar & Bench
kannada.barandbench.com