ಎಎಸ್‌ಜಿ ಹುದ್ದೆ ನೀಡುವ ವೈವಿಧ್ಯಮಯ ಅನುಭವವನ್ನು ಖಾಸಗಿ ಪ್ರಾಕ್ಟೀಸ್‌ ನೀಡಲಾಗದು: ಎಎಸ್‌ಜಿ ಅರವಿಂದ್‌ ಕಾಮತ್‌

"ಎಎಸ್‌ಜಿ ಹುದ್ದೆ ಸವಾಲಿನಿಂದ ಕೂಡಿದ ಅತ್ಯಂತ ಕೌತುಕದ ಜವಾಬ್ದಾರಿ. ಆಸಕ್ತಿಯಿಂದ ಕೆಲಸ ಮಾಡುವವರಿಗೆ ಇದೊಂದು ಅದ್ಭುತ ಅವಕಾಶ" ಎನ್ನುತ್ತಾರೆ ಅರವಿಂದ್‌ ಕಾಮತ್‌.
Senior Advocate Arvind Kamath,
Additional Solicitor General
Senior Advocate Arvind Kamath, Additional Solicitor General
Published on

ಹಿರಿಯ ವಕೀಲರಾದ ಅರವಿಂದ್‌ ಕಾಮತ್‌ ಅವರು ಇತ್ತೀಚೆಗೆ ಹೆಚ್ಚುವರಿ ಸಾಲಿಸಿಟರ್‌ ಜನರಲ್‌ (ಎಎಸ್‌ಜಿ) ಆಗಿ ನೇಮಕಗೊಂಡಿದ್ದಾರೆ. ಕೇಂದ್ರ ಸರ್ಕಾರದ ವಿವಿಧ ಇಲಾಖೆಗಳು, ಸಂಸ್ಥೆಗಳಿಗೆ ಸಂಬಂಧಿಸಿದಂತೆ ರಾಜ್ಯದಲ್ಲಿ ದಾಖಲಾಗುವ ಪ್ರಕರಣಗಳಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವಂತಹ ಗುರುತರ ಜವಾಬ್ದಾರಿ ಹೊಂದಿರುವ ಈ ಹುದ್ದೆ ವ್ಯಾಪ್ತಿ ಸಹಜವಾಗಿಯೇ ವಿಸ್ತಾರವಾದದ್ದು. ವೈವಿಧ್ಯಮಯ ಕಾನೂನು ಜ್ಞಾನವನ್ನು, ಅಪಾರ ಪರಿಶ್ರಮವನ್ನು ಬೇಡುವಂತದ್ದು.

ಮೈಸೂರಿನ ಜೆಎಸ್‌ಎಸ್‌ ಕಾನೂನು ಕಾಲೇಜಿನಲ್ಲಿ 1992ರಲ್ಲಿ ಪದವಿ ಪಡೆದ ಅರವಿಂದ ಕಾಮತ್‌ ಅವರು, ಬೆಂಗಳೂರಿನ ರಾಷ್ಟ್ರೀಯ ಕಾನೂನು ಶಾಲೆಯಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 1993ರ ಜೂನ್‌ 12ರಂದು ಕಾಮತ್‌ ಅವರು ವಕೀಲರಾಗಿ ನೋಂದಣಿ ಮಾಡಿಸಿದ್ದು, ಬೆಂಗಳೂರಿನ ಸಿಟಿ ಸಿವಿಲ್‌ ನ್ಯಾಯಾಲಯದಲ್ಲಿ ಆರಂಭದಲ್ಲಿ ವಕೀಲಿಕೆ ಆರಂಭಿಸಿದರು. 1995-96ರಿಂದ ಕರ್ನಾಟಕ ಹೈಕೋರ್ಟ್‌ನಲ್ಲಿ ಪ್ರಾಕ್ಟೀಸ್‌ ಆರಂಭಿಸಿದ್ದರು.

ಕಾಮತ್‌ ಅವರು ಎಂ ಎಸ್‌ ರಾಮಯ್ಯ ಕಾನೂನು ಕಾಲೇಜಿನಲ್ಲಿ 12 ವರ್ಷ ತೆರಿಗೆ, ಡ್ರಾಫ್ಟಿಂಗ್‌, ಪ್ಲೀಡಿಂಗ್‌ ಕುರಿತು ಅತಿಥಿ ಉಪನ್ಯಾಸಕರಾಗಿ ಕೆಲಸ ಮಾಡಿದ್ದಾರೆ. 2003ರ ಕರ್ನಾಟಕ ಹೈಕೋರ್ಟ್‌ನ ಇಂಡಿಯನ್‌ ಲಾ ರಿಪೋರ್ಟ್ಸ್‌ನ ಸಹಾಯಕ ಸಂಪಾದಕರಾಗಿ ಅವರು ನೇಮಕವಾಗಿದ್ದರು. ಕಾನೂನು ಕ್ಷೇತ್ರದಲ್ಲಿ ಅಪಾರ ಅನುಭವಿಯಾಗಿದ್ದು, ಅವರು “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ವಿಶೇಷ ಸಂದರ್ಶನದ ವಿವರ ಇಲ್ಲಿದೆ.

ಎಎಸ್‌ಜಿ ಹುದ್ದೆಯನ್ನು ನಿರೀಕ್ಷಿಸಿದ್ದೀರಾ?

ವಕೀಲ ಸ್ನೇಹಿತರೊಬ್ಬರು ಎಎಸ್‌ಜಿ ಹುದ್ದೆಯ ಬಗ್ಗೆ ಹೇಳಿದ್ದರು. ಇದು ರಾಜಕೀಯ ನೇಮಕಾತಿ ಎಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಪಕ್ಷ ಪರಿಗಣಿಸಬೇಕು. ರಾಜ್ಯ ವಿಧಾನಸಭೆ ಚುನಾವಣೆಯ ಬಳಿಕ ಪಕ್ಷವು ಎಎಸ್‌ಜಿ ಹುದ್ದೆ ನೇಮಕಾತಿಗೆ ಪರಿಗಣಿಸುತ್ತದೆ ಎಂಬ ಸುದ್ದಿ ಸಿಕ್ಕಿತ್ತು. ಬಳಿಕ ಪಕ್ಷದ ಮಟ್ಟದಲ್ಲಿ ಚರ್ಚೆ ನಡೆದು, ನೇಮಕಾತಿ ಸಮಿತಿಗೆ ಹೆಸರು ತಲುಪಿತು.

ಎಎಸ್‌ಜಿಯಾಗಿ ಕೆಲಸ ಮಾಡಲು ನಾನು ಸಿದ್ದನಿದ್ದೇನೆ ಎಂದು ಒಪ್ಪಿಗೆ ನೀಡಿದ ಬಳಿಕ ನನಗೆ ಹುದ್ದೆಯ ನಿರೀಕ್ಷೆ ಇತ್ತು. ಒಮ್ಮೆ ಎಎಸ್‌ಜಿಯಾಗಿ ನೇಮಕವಾದ ಮೇಲೆ ಖಾಸಗಿ ಪ್ರಾಕ್ಟೀಸ್‌ ಮಾಡಲಾಗುವುದಿಲ್ಲ. ನಾಲ್ಕೈದು ಹೆಸರುಗಳು ಪರಿಗಣನೆಯಲ್ಲಿದ್ದವು ಎಂಬ ಸುದ್ದಿ ನನಗೂ ಲಭ್ಯವಾಗಿತ್ತು.

ಹೊಸ ಜವಾಬ್ದಾರಿ ಹೇಗಿದೆ?

ಇದೊಂದು ಗೌರವಯುತವಾದ ಹುದ್ದೆ. ಕೇಂದ್ರ ಸರ್ಕಾರವು ಅನೇಕ ಇಲಾಖೆಗಳು ಮತ್ತು ಏಜೆನ್ಸಿಗಳನ್ನು ಹೊಂದಿದೆ. ಇವುಗಳಲ್ಲಿ ಈಗ ಬಹುಮುಖ್ಯವಾಗಿರುವುದು ಜಾರಿ ನಿರ್ದೇಶನಾಲಯ. ಅಕ್ರಮ ಹಣ ವರ್ಗಾವಣೆ ಕಾಯಿದೆ (ಪಿಎಂಎಲ್‌ಎ) ಅಡಿ ಸಾಕಷ್ಟು ಪ್ರಕರಣಗಳು ದಾಖಲಾಗುತ್ತವೆ. ಅಂತಾರಾಷ್ಟ್ರೀಯ ಸಂಸ್ಥೆಗಳು ಅಂದರೆ ಫೈನಾನ್ಷಿಯಲ್‌ ಆಕ್ಷನ್‌ ಟಾಸ್ಕ್‌ ಫೋರ್ಸ್‌ ಅವರು ನಾವು ಪಿಎಂಎಲ್‌ಎ ಅನ್ನು ಹೇಗೆ ಜಾರಿ ಮಾಡುತ್ತೇವೆ ಎಂಬುದನ್ನು ಪರಿಶೀಲಿಸುತ್ತಾರೆ.

ಐಎಂಎಫ್‌ ಸಹ ಪಿಎಂಎಲ್‌ಎ ಎಷ್ಟು ಬಲಿಷ್ಠವಾಗಿದೆ. ಅದನ್ನು ಎಷ್ಟು ಸಮರ್ಥವಾಗಿ ಜಾರಿ ಮಾಡಲಾಗುತ್ತಿದೆ ಎಂಬುದನ್ನು ಗಮನಿಸುತ್ತಿರುತ್ತದೆ. ಎಷ್ಟು ಪ್ರಕರಣಗಳಲ್ಲಿ ದೋಷಿಗಳು ಎಂದು ಘೋಷಿಸಲಾಗಿದೆ ಎಂಬುದನ್ನು ಪರಿಶೀಲಿಸಲಾಗುತ್ತದೆ. ಹೀಗಾಗಿ, ಪಿಎಂಎಲ್‌ಎ ಪ್ರಮುಖವಾಗಿದೆ. ಈ ನೆಲೆಯಲ್ಲಿ ಸಾಮಾನ್ಯವಾಗಿ ಪಿಎಂಎಲ್‌ಎ, ಆದಾಯ ತೆರಿಗೆ ಇಲಾಖೆ ಪ್ರಕರಣಗಳಲ್ಲಿ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಲಾಗಿರುತ್ತದೆ.

ಕಪ್ಪು ಹಣ ಕಾಯಿದೆ ಅಸ್ತಿತ್ವದಲ್ಲಿದೆ. ವೈಯಕ್ತಿಕವಾಗಿ ಇದರ ಬಗ್ಗೆ ನಾನು ಒಂದೂ ಪ್ರಕರಣ ನಡೆಸಿರಲಿಲ್ಲ. ಈಗ ಒಬ್ಬರು ಅದರ ಸಾಂವಿಧಾನಿಕ ಸಿಂಧುತ್ವ ಪ್ರಶ್ನಿಸಿದ್ದಾರೆ. ಈ ಪ್ರಕರಣದಲ್ಲಿ ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವುದು ಅತ್ಯಂತ ಮಹತ್ವದ್ದು. ಇದಲ್ಲದೇ, ರಕ್ಷಣಾ ಇಲಾಖೆಯ ಆಸ್ತಿಗಳಿಗೆ ಸಂಬಂಧಿಸಿದ ಪ್ರಕರಣ, ಎಕ್ಸ್‌ ಕಾರ್ಪ್‌ ಮೇಲ್ಮನವಿ ಮುಂತಾದ ಪ್ರಮುಖ ಪ್ರಕರಣಗಳಿವೆ.. ಎಎಸ್‌ಜಿಗೆ ವಿಭಿನ್ನ ಪ್ರಕರಣಗಳನ್ನು ನಡೆಸುವ ಅವಕಾಶ ಇರುತ್ತದೆ. ಇದೆಲ್ಲವೂ ಸಾರ್ವಜನಿಕ ಮಹತ್ವದ ವಿಚಾರಗಳು. ಇಷ್ಟು ವಿಭಿನ್ನ ಅನುಭವವನ್ನು ಖಾಸಗಿ ಪ್ರಾಕ್ಟೀಸ್‌ನಲ್ಲಿ ಪಡೆಯಲಾಗದು.

ಇದೊಂದು ಸವಾಲಿನ ಮತ್ತು ಅತ್ಯಂತ ಕುತೂಹಲದ ಜವಾಬ್ದಾರಿ. ಆಸಕ್ತಿಯಿಂದ ಕೆಲಸ ಮಾಡುವವರಿಗೆ ಇದೊಂದು ಅದ್ಭುತ ಅವಕಾಶ.

ಖಾಸಗಿ ಪ್ರಾಕ್ಟೀಸ್‌ಗಿಂತ ಹೊಸ ಜವಾಬ್ದಾರಿ ಹೇಗೆ ಭಿನ್ನವಾಗಿದೆ?

ಕೇಂದ್ರ ಸರ್ಕಾರವನ್ನು ನಾನು ಪ್ರತಿನಿಧಿಸುತ್ತೇನೆ. ಇದನ್ನು ಯಾವುದೇ ಖಾಸಗಿಯಾಗಿ ಪ್ರಾಕ್ಟೀಸ್‌ ಮಾಡುವವರು ಮಾಡಲಾಗದು. ಹೈಕೋರ್ಟ್‌ನಲ್ಲಿ ಕೇಂದ್ರ ಸರ್ಕಾರದ ವಿರುದ್ಧ ಸಾವಿರಾರು ದಾವೆಗಳು ದಾಖಲಿಸಲ್ಪಡುತ್ತವೆ. ಇವುಗಳಲ್ಲಿ ಮಹತ್ವದ ಮತ್ತು ಗಂಭೀರ ಪ್ರಕರಣಗಳು ಎಎಸ್‌ಜಿಗೆ ನಿಗದಿಯಾಗುತ್ತವೆ. ಇದು ಎಎಸ್‌ಜಿಗೆ ಬರಬೇಕಂದರೆ ಅದರಲ್ಲಿ ಕಾನೂನಿನ ಗಂಭೀರ ಪ್ರಶ್ನೆ ಇರುತ್ತದೆ. ಸಾರ್ವಜನಿಕರ ಮೇಲೆ ಪ್ರಭಾವ ಬೀರುವ ಅಥವಾ ರಾಷ್ಟ್ರೀಯ ಮಹತ್ವದ ವಿಚಾರ ಇರುತ್ತದೆ.

ಎಎಸ್‌ಜಿಯಾಗಿ ಅತ್ಯುತ್ತಮ ಹಿರಿಯ ವಕೀಲರ ವಿರುದ್ಧ ವಾದ ಮಂಡಿಸಬೇಕಾಗುತ್ತದೆ. ಅಗ್ರ ಹಿರಿಯ ವಕೀಲರ ಎದುರು ವಾದಿಸುವುದು ಸವಾಲಿನ ಕೆಲಸ. ಅವರ ವಿರುದ್ಧ ವಾದಿಸಬೇಕೆಂದರೆ ಅಷ್ಟರ ಮಟ್ಟಿಗೆ ತಯಾರಿ ನಡೆಸಬೇಕಾಗುತ್ತದೆ.

ಸರ್ಕಾರಗಳನ್ನು ಸಮರ್ಥಿಸಿಕೊಳ್ಳುವುದು ಎಂದರೆ ಆಳುವ ಪಕ್ಷಗಳ ಸಿದ್ಧಾಂತಗಳನ್ನು ಸಮರ್ಥಿಸಿಕೊಳ್ಳುವುದು ಎನ್ನುವ ಭಾವನೆ ಇದೆ. ನೀವು ಇದನ್ನು ಹೇಗೆ ನೋಡುತ್ತೀರಿ?

ಇಲ್ಲಿ ಸಿದ್ಧಾಂತದ ಪ್ರಶ್ನೆ ಉದ್ಭವಿಸುವುದಿಲ್ಲ. ಕಾನೂನಿನ ಚೌಕಟ್ಟಿನಲ್ಲಿ, ಸಾಂವಿಧಾನಿಕ ಚೌಕಟ್ಟಿನಲ್ಲಿ ಯಾವ ನೀತಿ, ಕಾನೂನು, ಆದೇಶಗಳಿವೆ; ಆಕ್ಷೇಪಿತ ವಿಷಯವು ಸಾಂವಿಧಾನಿಕ ಸಿಂಧುತ್ವ ಹೊಂದಿದೆಯೇ, ಕಾನೂನು ಬದ್ಧವಾಗಿದೆಯೇ ಎಂಬುದಷ್ಟೇ ಇಲ್ಲಿ ವಾದವಾಗುತ್ತದೆ. ನಾನು ಕೇಂದ್ರ ಸರ್ಕಾರವನ್ನು ಪ್ರತಿನಿಧಿಸುವುದರಿಂದ ಸಾಂವಿಧಾನಿಕ ಚೌಕಟ್ಟಿನಲ್ಲಿ ಕೆಲಸ ಮಾಡಬೇಕಾಗುತ್ತದೆ.

ಯುವ ವಕೀಲರಿಗೆ ನಿಮ್ಮ ಸಂದೇಶವೇನು?

ಆಳವಾಗಿ ವಿಶ್ಲೇಷಿಸುವುದನ್ನು ನಾವು ಮರೆತಿದ್ದೇವೆ. ಶಾಸಕಾಂಗ ಮಾಡುವ ಕಾನೂನು ಒಂದು ಶಿಲೆ ಇದ್ದ ಹಾಗೆ. ಆ ಶಿಲೆಗೆ ನ್ಯಾಯಾಂಗದ ಮೂಲಕ, ಅದರ ತೀರ್ಪಿನ ಮೂಲಕ ಮೂರ್ತಿಯ ಸ್ವರೂಪ ಲಭಿಸುತ್ತದೆ. ನ್ಯಾಯಾಲಯಕ್ಕೆ ನೀವು ಕಲ್ಲು ಕೊಂಡೊಯ್ಯಬಾರದು. ಮೂರ್ತಿ ಕೊಂಡೊಯ್ಯಬೇಕು. ಅಂದರೆ ಕಾನೂನಿನ ಇತ್ತೀಚಿನ ಸ್ವರೂಪ ತಿಳಿದಿರಬೇಕು. ಇದರರ್ಥ ಬಾರ್‌ ಅಂಡ್‌ ಬೆಂಚ್‌ ಸೇರಿದಂತೆ ಕಾನೂನು ಪುಸ್ತಕಗಳನ್ನು ಓದಿ ಅಪ್‌ಡೇಟ್‌ ಆಗಬೇಕು. ಕಾನೂನಿನ ಸ್ವರೂಪ ದಿನೇದಿನೇ ಬದಲಾಗುತ್ತದೆ. ಏಕೆಂದರೆ ನ್ಯಾಯಾಲಯವು ಕಾನೂನನ್ನು ವ್ಯಾಖ್ಯಾನಿಸುತ್ತದೆ. ಇದನ್ನು ಮಾಡದಿದ್ದರೆ 'ಯು ಆರ್‌ ಲೆಫ್ಟ್‌ ವಿತ್‌ ಪೀಸ್‌ ಆಫ್‌ ರಾಕ್' (ನಿಮ್ಮ ಬಳಿ ಕೇವಲ ಶಿಲೆ ಮಾತ್ರವಿರುತ್ತದೆ).‌

ಕಠಿಣ ಪರಿಶ್ರಮ, ಶ್ರದ್ಧೆ, ಕೆಲಸವನ್ನು ಆಸ್ವಾದಿಸಬೇಕು. ಇದರಿಂದ ಉತ್ಸಾಹ ಬರುತ್ತದೆ. ನ್ಯಾಯಾಲಯದ ಮುಂದೆ ಸಮರ್ಥವಾಗಿ ಮಂಡಿಸಲು ಯಾವ ರೀತಿ ಸಂಶೋಧನೆ ಮತ್ತು ಸಿದ್ಧತೆ ಮಾಡಿಕೊಳ್ಳಬೇಕು ಎಂಬುದು ತಿಳಿಯುತ್ತದೆ. ಪ್ರಕರಣವನ್ನು ನ್ಯಾಯಾಲಯದ ಮುಂದಿಡುವುದೇ ಒಂದು ಕಲೆ. ಇಲ್ಲಿ ಪ್ರಕರಣದ ತಿರುಳು ಏನು ಎಂದು ತಿಳಿಯಬೇಕು. ಯಾವ ರೀತಿ ಪ್ರೆಸೆಂಟ್‌ ಮಾಡಿದರೆ ನ್ಯಾಯಾಲಯ ಸಂತುಷ್ಟವಾಗುತ್ತದೆ ಎಂಬುದನ್ನು ಅರಿಯಬೇಕು.

ನಿಮ್ಮ ಆರಂಭಿಕ ಪ್ರಾಕ್ಟೀಸ್‌ ದಿನಗಳಿಗೂ ಇಂದಿಗೂ ಏನು ಭಿನ್ನತೆ ಇದೆ?

ಡಿಜಿಟೈಸೇಷನ್‌ನಿಂದ ಕಾನೂನು ಸಂಶೋಧನೆ ಸುಲಭವಾಗಿದೆ. ನಮ್ಮ ಕಾಲದಲ್ಲಿ ಗ್ರಂಥಾಲಯಕ್ಕೆ ಹೋಗಿ ಕಾಮೆಂಟರಿ ಓದಿ, ಸೈಟೇಷನ್‌ ತೆಗೆದು, ಅದನ್ನು ಹುಡುಕಿ ಜೆರಾಕ್ಸ್‌ ಮಾಡಿಸಬೇಕಿತ್ತು. ಈಗ ಬೆರಳ ತುದಿಯಲ್ಲಿ ಎಲ್ಲವೂ ಸಿಗುತ್ತದೆ.

ಕಳೆದ 10-15 ವರ್ಷಗಳಿಂದ ನಮ್ಮ ವಕೀಲರ ಗಮನ ತಾವು ತಮ್ಮದೇ ಕಚೇರಿ ಆರಂಭಿಸುವುದು ಯಾವಾಗ, ಕಾರ್‌ ಕೊಳ್ಳುವುದು ಯಾವಾಗ, ಯಾವ ಹಿರಿಯ ವಕೀಲರು ಯಾವ ಕಾರ್‌ ಕೊಂಡಿದ್ದಾರೆ ಎನ್ನುವಂತಹ ಅಂಶಗಳೆಡೆಗೆ ಹೊರಳಿದೆ. ಅವರ ದೃಷ್ಟಿ ಮೆಟರೀಯಲಿಸ್ಟಿಕ್‌ ಆಗಿದೆ.

ನೀವು 5-10ರಿಂದ ಬೆಂಚ್‌ ಪರಿಗಣನೆಗೆ ಗಿಟ್ಟಿಸಿದರೆ, ಕಕ್ಷಿದಾರರು ನಿಮ್ಮನ್ನು ಹುಡುಕಿಕೊಂಡು ಬರುತ್ತಾರೆ. ನ್ಯಾಯಮೂರ್ತಿಗಳು ಒಳ್ಳೆಯ ವಕೀಲರು ಎಂದು ಗುರುತಿಸಿ, ಪರಿಚಯಿಸುತ್ತಾರೆ. ಅವರೇ ನಮ್ಮನ್ನು ಸರ್ಕಾರದ ವಕೀಲರನ್ನಾಗಿ ನೇಮಿಸುವಂತೆ ಸೂಚಿಸುತ್ತಾರೆ, ನ್ಯಾಯಮೂರ್ತಿಗಳನ್ನಾಗಿಸುತ್ತಾರೆ... ಈ ಹಿನ್ನೆಲೆಯಲ್ಲಿ ಫೋಕಸ್‌ ಮತ್ತೆ ವೃತ್ತಿಯ ಕಡೆಗೆ ಮರಳಬೇಕು. ಬಾರ್‌ನಲ್ಲಿ ಗುರುತಿಸಿಕೊಂಡರೆ ಹಣ ತಾನಾಗಿಯೇ ಹುಡುಕಿಕೊಂಡು ಬರುತ್ತದೆ.

ಹಿಂದೆ ನ್ಯಾಯಮೂರ್ತಿಗಳು ತಮ್ಮ ಜ್ಞಾನವನ್ನು ಬಿಂಬಿಸುತ್ತಿದ್ದರು. ಈಗ ಆ ರೀತಿಯಲ್ಲ. ಈಗ ಪ್ರಾಕ್ಟೀಸ್‌ ಮಾಡಲು ಸೂಕ್ತ ಸಮಯ. ನ್ಯಾಯಾಂಗದ ಕಾರ್ಯಚಟುವಟಿಕೆಯಲ್ಲಿ ಸಾಕಷ್ಟು ಬದಲಾವಣೆಯಾಗಿದೆ.

ಎಎಸ್‌ಜಿಯಾಗಿ ನಿಮ್ಮ ಆದ್ಯತೆ ಏನು?

ಹತ್ತು ತಿಂಗಳು ಎಎಸ್‌ಜಿ ಹುದ್ದೆ ಖಾಲಿ ಇತ್ತು. ಸಾಕಷ್ಟು ಪ್ರಕರಣಗಳು ಮುಂದೂಡಲ್ಪಟ್ಟಿದ್ದವು. ಪ್ರಮುಖ ಪ್ರಕರಣಗಳನ್ನು ಅಧ್ಯಯನ ಮಾಡುತ್ತಿದ್ದೇನೆ. ನಮ್ಮಲ್ಲಿ 120-125 ಕೇಂದ್ರ ಸರ್ಕಾರದ ವಕೀಲರು ಇದ್ದಾರೆ. ಇವರಲ್ಲಿ ಎರಡನೇ ಮತ್ತು ಮೂರನೇ ಹಂತದ ವಕೀಲರನ್ನು ರೂಪಿಸಬೇಕು. ನಮ್ಮದು 3 ವರ್ಷ ಅವಧಿ ಇರುತ್ತದೆ. ನಾವು ಹೋದ ಮೇಲೆ ಯಾರು ಎಂಬ ಪ್ರಶ್ನೆ ಬರಬಾರದು. ಅದಕ್ಕಾಗಿ ಅತ್ಯುತ್ತಮ ಯುವ ತಂಡವನ್ನು ರೂಪಿಸಬೇಕು. ಸಿಜಿಸಿ (ಸೆಂಟ್ರಲ್‌ ಗೌರ್ಮೆಂಟ್‌ ಕೌನ್ಸೆಲ್ಸ್‌) ಸಮುದಾಯದಲ್ಲಿ ಉತ್ತಮ ವಕೀಲರನ್ನು ಗುರುತಿಸಿ ಅವರಿಗೆ ಅವಕಾಶ ಕಲ್ಪಿಸುವುದು ನನ್ನ ಆದ್ಯತೆಗಳಲ್ಲಿ ಒಂದು.

Kannada Bar & Bench
kannada.barandbench.com