ಅರಮನೆ ಸ್ವಾಧೀನ, ಮೊಕದ್ದಮೆಗಳ ಹಿಂತೆಗೆತ, ನ್ಯಾಯಾಧೀಶರ ನೇಮಕಾತಿ ವಿಷಾದ: ನಾಣಯ್ಯನವರ ನೆನಪಿನಂಗಳದಲ್ಲಿ ಒಂದು ಸುತ್ತು

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರ ಅನುಭವಗಳ ಕಥನ ಈ 'ಅನುಸಂಧಾನ'.
M C Nanaiah
M C Nanaiah

ಕರ್ನಾಟಕದ ರಾಜಕಾರಣದಲ್ಲಿ ಮೌಲ್ಯ, ಪ್ರೌಢಿಮೆ, ದೂರದರ್ಶಿತ್ವ, ವಾಕ್ಪಟುತ್ವ ಹಾಗೂ ನೇರ-ನಿಷ್ಠುರ ವ್ಯಕ್ತಿತ್ವದ ಮೂಲಕ ಪಕ್ಷಾತೀತವಾಗಿ ಗೌರವಿಸಲ್ಪಡುವ ನಾಯಕರಲ್ಲಿ ಎಂ ಸಿ ನಾಣಯ್ಯನವರಿಗೆ ವಿಶೇಷ ಸ್ಥಾನವಿದೆ. ಕರ್ನಾಟಕ ಕಂಡ ಅತ್ಯುತ್ತಮ ಸದನಪಟುಗಳಲ್ಲಿ ನಿರ್ವಿವಾದವಾಗಿ ಮೇಲ್‌ಸ್ತರದಲ್ಲಿ ನಿಲ್ಲುವ ನಾಣಯ್ಯನವರು ತಮ್ಮ ಅಧ್ಯಯನಶೀಲತೆ, ವಿಷಯ ಮಂಡನೆ, ಸೂಕ್ಷ್ಮ ಗ್ರಹಿಕೆಗಳ ಕಾರಣದಿಂದಾಗಿಯೇ ಗುರುತಿಸಲ್ಪಟ್ಟವರು. ಯಾವುದೇ ಚರ್ಚೆಯನ್ನು ಮಾನವೀಯಗೊಳಿಸುವ, ನೈತಿಕ ಚೌಕಟ್ಟಿನಲ್ಲಿ ಬಂಧಿಸುವ, ವಿವಿಧ ಜ್ಞಾನಶಿಸ್ತುಗಳ ಸತ್ವವನ್ನು ಮಂಡಿಸುವ ಮೂಲಕ ಸಮೃದ್ಧವಾಗಿಸುವ ಅನನ್ಯತೆ ಅವರಿಗೆ ಸಿದ್ಧಿಸಿದೆ. ತಾವು ಸಚಿವರಾಗಿದ್ದ ಸಂದರ್ಭದಲ್ಲಿ ತಮ್ಮ ಮುತ್ಸದ್ದಿತನದ ಮೂಲಕ ಗಮನಸೆಳೆದ ನಾಣಯ್ಯನವರು ತಮ್ಮ ದಿಟ್ಟ ನಿರ್ಧಾರಗಳ ಕಾರಣಕ್ಕೆ ಚರ್ಚೆಯಲ್ಲಿದ್ದವರು.

ಡಿ ದೇವರಾಜ ಅರಸು, ಎಸ್‌ ಆರ್‌ ಬೊಮ್ಮಾಯಿ ಅವರ ಸಂಪುಟದಲ್ಲಿ ಕಿರು ಅವಧಿಗೆ ಸಚಿವರಾಗಿದ್ದ ನಾಣಯ್ಯನವರು ಎಚ್‌ ಡಿ ದೇವೇಗೌಡ ಮತ್ತು ಜೆ ಎಚ್‌ ಪಟೇಲ್‌ ಅವರ ಸಚಿವ ಸಂಪುಟದಲ್ಲಿ ಕಾನೂನು ಮತ್ತು ಸಂಸದೀಯ ಸಚಿವರಾಗಿ ಪೂರ್ಣಾವಧಿ ಕೆಲಸ ಮಾಡಿದರು. ತಮ್ಮ ಸುದೀರ್ಘ ರಾಜಕೀಯ ಜೀವನದ ಬಹುಕಾಲವನ್ನು ವಿಪಕ್ಷದ ಅಂಗಳದಲ್ಲಿ ಕಳೆದಿರುವ ನಾಣಯ್ಯನವರು ಇಂದಿನ ಅಧಿಕಾರ ರಾಜಕಾರಣದ ಹಪಾಹಪಿ, ವರಸೆಗಳಿಂದ ಗಾವುದ ದೂರದಲ್ಲಿರುವವರು.

ಸುಮಾರು ಐದು ದಶಕಗಳ ರಾಜಕೀಯ ಬದುಕಿನಲ್ಲಿ ಅಧಿಕಾರ ರಾಜಕಾರಣದ ಒಳ-ಹೊರಗನ್ನು ಹತ್ತಿರದಿಂದ ಕಂಡಿರುವ ಅವರು ಸಾರ್ವಜನಿಕ ಬದುಕಿನ ಘನತೆಯನ್ನು ಎತ್ತಿಹಿಡಿದವರು. ನಾಣಯ್ಯನವರ ಐವತ್ತು ವರ್ಷಗಳ ರಾಜಕೀಯ ಯಾನವು ಕರ್ನಾಟಕದ ರಾಜಕೀಯ ಇತಿಹಾಸವೂ ಆಗಿದೆ. ಈ ಕುರಿತು ಅವರು ತಮ್ಮ “ನೆನಪುಗಳು ಮಾಸುವ ಮುನ್ನ…” ಪುಸ್ತಕದಲ್ಲಿ ವಿವರವಾಗಿ ದಾಖಲಿಸಿದ್ದಾರೆ.

ಕಾನೂನು ಮತ್ತು ಸಂಸದೀಯ ಸಚಿವರಾಗಿ ನಾಣಯ್ಯನವರು ಇರಿಸಿದ ದಿಟ್ಟ ಹೆಜ್ಜೆಗಳು, ಎದುರಿಸಿದ ಸವಾಲುಗಳನ್ನು ಅವರ ಹೊತ್ತಿಗೆಯಿಂದ ಆಯ್ದು ಸಾರ-ಸಂಗ್ರಹವಾಗಿ ಇಲ್ಲಿ ನೀಡಲಾಗಿದೆ:

ಮೈಸೂರು ಅರಮನೆಯನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ವಿಧೇಯಕ ಮತ್ತು ಅಡ್ವಾಣಿಯವರ ನಿಲುವು

ಮೈಸೂರು ಅರಮನೆ ಮತ್ತು ಅದರ ಸುತ್ತಮುತ್ತಲಿನ 67 ಎಕರೆ ಜಾಗವನ್ನು ರಾಜ್ಯ ಸರ್ಕಾರದ ವಶಕ್ಕೆ ಪಡೆದುಕೊಳ್ಳುವ ಸಂಬಂಧ ಎಂ ಸಿ ನಾಣಯ್ಯ ಅವರು ವಿಧೇಯಕ ಮಂಡಿಸಿದ್ದರು. ಇಂದಿನ ಮಹಾರಾಜರು ವಾಸ ಮಾಡುತ್ತಿರುವ ಮನೆ ಹೊರತುಪಡಿಸಿ ಉಳಿದಿರುವ ಅರಮನೆ, ಅದರಲ್ಲಿನ ಸಿಂಹಾಸನ, ಇತರೆ ಸಾಮಗ್ರಿ ಮತ್ತು ಜಾಗವನ್ನು ಸರ್ಕಾರದ ವಶಕ್ಕೆ ತೆಗೆದುಕೊಳ್ಳುವ ವಿಧೇಯಕವನ್ನು ಮಂಡಿಸಲು ಅಂದಿನ ಮುಖ್ಯಮಂತ್ರಿ ಜೆ ಎಚ್‌ ಪಟೇಲರೂ ಕೂಡ ಒಪ್ಪಿಗೆ ಸೂಚಿಸಿದ್ದರು. ವಿಧೇಯಕಕ್ಕೆ ಉಭಯ ಸದನಗಳಲ್ಲಿ ಒಪ್ಪಿಗೆ ದೊರೆತು ರಾಷ್ಟ್ರಪತಿ ಅಂಗೀಕಾರಕ್ಕಾಗಿ ದೆಹಲಿಗೆ ಕಳುಹಿಸಿಕೊಡಲಾಗಿತ್ತು.

ಭಾರತೀಯ ಜನತಾ ಪಕ್ಷದಿಂದ ಗೆದ್ದು ಸಂಸದರಾಗಿದ್ದ ಒಡೆಯರ್‌ ಅವರ ಪಕ್ಷವೇ ಕೇಂದ್ರದಲ್ಲಿ ಅಧಿಕಾರದಲ್ಲಿತ್ತು. ಅಟಲ್‌ ಬಿಹಾರಿ ವಾಜಪೇಯಿ ನೇತೃತ್ವದ ಎನ್‌ಡಿಎ ಸರ್ಕಾರದಲ್ಲಿ ಲಾಲ್‌ ಕೃಷ್ಣ ಅಡ್ವಾಣಿ ಅವರು ಗೃಹ ಮಂತ್ರಿಯಾಗಿದ್ದರು. ಈ ವಿಧೇಯಕಕ್ಕೆ ಸಚಿವ ಸಂಪುಟದಲ್ಲಿ ಒಪ್ಪಿಗೆ ದೊರೆತು ಅದನ್ನು ರಾಷ್ಟ್ರಪತಿಯ ಅಂಕಿತಕ್ಕೆ ಕಳುಹಿಸಿಕೊಡಲಾಗಿತ್ತು. ರಾಷ್ಟ್ರಪತಿಯ ಒಪ್ಪಿಗೆಯ ಬಳಿಕ ಗೃಹ ಇಲಾಖೆಗೆ ಹೋಗಿ ಕಾನೂನು ರಾಜ್ಯ ಸರ್ಕಾರಕ್ಕೆ ವಾಪಸಾಗಬೇಕಿತ್ತು.

ಮಸೂದೆಗೆ ರಾಷ್ಟ್ರಪತಿ ಅಂಕಿತವಾಗಿ ಎರಡು ತಿಂಗಳಾದರೂ ಅದು ರಾಜ್ಯ ಸರ್ಕಾರಕ್ಕೆ ತಲುಪಿರಲಿಲ್ಲ. ಈ ಸಂಬಂಧ ಮುಖ್ಯಮಂತ್ರಿ ಮತ್ತು ನಾಣಯ್ಯ ಅವರು ಎರಡು ಪತ್ರ ಬರೆದರೂ ಕೇಂದ್ರ ಸರ್ಕಾರದಿಂದ ಪ್ರತಿಕ್ರಿಯೆ ಬಂದಿರಲಿಲ್ಲ. ಈ ವಿಚಾರವಾಗಿ ಮುಖ್ಯಮಂತ್ರಿ ಜೆ ಎಚ್‌ ಪಟೇಲ್‌ ಹಾಗೂ ಕಾನೂನು ಸಚಿವರಾದ ನಾಣಯ್ಯ ಅವರು ರಾಷ್ಟ್ರಪತಿ ಕೆ ಆರ್‌ ನಾರಾಯಣನ್‌ ಅವರನ್ನು ಭೇಟಿ ಮಾಡಿ ಕೇಂದ್ರ ಸರ್ಕಾರದ ಕರ್ತವ್ಯ ಲೋಪದ ಕುರಿತು ವಿವರಿಸಿದರು. ಇದನ್ನು ಗಂಭೀರವಾಗಿ ಪರಿಗಣಿಸಿದ ರಾಷ್ಟ್ರಪತಿಗಳು ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡ ಹಿನ್ನೆಲೆಯಲ್ಲಿ ಕೆಲವೇ ಗಂಟೆಗಳಲ್ಲಿ ವಿಧೇಯಕದ ಪ್ರತಿ ಜೆ ಎಚ್‌ ಪಟೇಲ್‌ ಮತ್ತು ನಾಣಯ್ಯ ಅವರ ಕೈ ಸೇರಿತ್ತು.

ಬಿಜೆಪಿ ಸಂಸದರಾಗಿದ್ದ ಒಡೆಯರ್‌ ಒತ್ತಡಕ್ಕೆ ಮಣಿದು ಅಂದಿನ ಗೃಹ ಸಚಿವರಾಗಿದ್ದ ಲಾಲ್‌ ಕೃಷ್ಣ ಅಡ್ವಾಣಿ ಅವರು ಸದರಿ ವಿಧೇಯಕವನ್ನು ಪುನರ್‌ ಪರಿಶೀಲನೆಗೆ ಒಳಪಡಿಸುವ ಇರಾದೆ ಹೊಂದಿದ್ದರು ಎಂಬ ವಿಚಾರ ಬಳಿಕ ನಾಣಯ್ಯ ಅವರಿಗೆ ಗೊತ್ತಾಗಿತ್ತು.

ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ನೇಮಕಾತಿಯಲ್ಲಿ ಮೀಸಲಾತಿ ಮಿಸ್!‌

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ ಸಿ ಸೇಥಿ ಅವರು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ನೇಮಕಾತಿ ಪಟ್ಟಿಯೊಂದನ್ನು ರಾಜ್ಯಪಾಲರಾಗಿದ್ದ ಖುರ್ಷಿದ್‌ ಆಲಂ ಖಾನ್‌ ಅವರಿಗೆ ಕಳುಹಿಸಿಕೊಟ್ಟಿದ್ದರು. ಉಮೇದುದಾರರಾಗಿದ್ದವರ ಪೈಕಿ ಕೆಲವರು ರಾಜ್ಯಪಾಲರಿಗೆ ಪತ್ರ ಬರೆದು ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ನೇಮಕಾತಿಗೆ ಸಂಬಂಧಿಸಿದಂತೆ ಮುಖ್ಯ ನ್ಯಾಯಮೂರ್ತಿ ಸೇಥಿ ಅವರು ಕಳುಹಿಸಿರುವ ಪಟ್ಟಿಯಲ್ಲಿ ಮೀಸಲಾತಿ ನಿಯಮಗಳನ್ನು ಪಾಲಿಸಲಾಗಿಲ್ಲ ಎಂದು ದೂರಿದ್ದರು. ಈ ವಿಚಾರವನ್ನು ರಾಜ್ಯಪಾಲರು ನಾಣಯ್ಯ ಅವರ ಗಮನಕ್ಕೆ ತಂದಿದ್ದರು. ಈ ಕಡತವು ಪರಿಶೀಲನೆಗಾಗಿ ಕಾನೂನು ಕಾರ್ಯದರ್ಶಿಯಾಗಿದ್ದ ವೆಂಕಟರೆಡ್ಡಿಯವರ ಕೈಸೇರಿತ್ತು. ಸದರಿ ನೇಮಕಾತಿಯಲ್ಲಿ ಮೀಸಲಾತಿ ವಿಚಾರಗಳನ್ನು ಸರಿಯಾಗಿ ಪಾಲಿಸಿಲ್ಲ. ಇದನ್ನು ಪುನರ್‌ ಪರಿಶೀಲಿಸುವಂತೆ ಕೋರಿ ಮುಖ್ಯ ನ್ಯಾಯಮೂರ್ತಿ ಪಿ ಸಿ ಸೇಥಿ ಅವರಿಗೆ ಸಲಹೆ ಮಾಡುವ ಅಗತ್ಯತೆ ಇತ್ತು. ತಮ್ಮ ಪಾಲಿನ ಕೆಲಸವನ್ನು ವೆಂಕಟರೆಡ್ಡಿಯವರು ಅಚ್ಚುಕಟ್ಟಾಗಿ ಮಾಡಿದ್ದರು.

ಆದಾಗ್ಯೂ, ಮುಖ್ಯಮಂತ್ರಿಯವರು ನಾಣಯ್ಯ ಅವರ ಜೊತೆ ಮಾತನಾಡಿದ ನಂತರ ರಾಜ್ಯಪಾಲರನ್ನು ಭೇಟಿ ಮಾಡಿದ ನಾಣಯ್ಯ ಅವರು ಮುಖ್ಯ ನ್ಯಾಯಮೂರ್ತಿಯವರು ಕಳುಹಿಸಿದ ಪಟ್ಟಿಗೆ ಸರ್ಕಾರದ ಒಪ್ಪಿಗೆಯನ್ನು ತಿಳಿಸಿದರು. ನ್ಯಾಯಾಂಗ ಮತ್ತು ಕಾನೂನು ಇಲಾಖೆಯ ನಡುವೆ ಉಂಟಾಗಬಹುದಾಗಿದ್ದ ಸಂಘರ್ಷವನ್ನು ತಪ್ಪಿಸುವ ಉದ್ದೇಶದಿಂದ ಇದಕ್ಕೆ ಒಲ್ಲದ ಮನಸ್ಸಿನಿಂದಲೇ ಒಪ್ಪಿಗೆ ಸೂಚಿಸಬೇಕಾಯಿತು ಎಂದು ಇಂದಿಗೂ ನಾಣಯ್ಯ ಅವರು ವಿಷಾದ ವ್ಯಕ್ತಪಡಿಸುತ್ತಾರೆ.

“ಮುಖ್ಯ ನ್ಯಾಯಮೂರ್ತಿಯವರು ಆಡಳಿತಾತ್ಮಕವಾಗಿ ಸರಿಪಡಿಸಬಹುದಾಗಿದ್ದ ಪ್ರಕರಣ ಇದು. ಕಾನೂನು ಭಾಗದಲ್ಲಿ ಆಡಳಿತಾತ್ಮಕವಾಗಿ ಸರಿಪಡಿಸುವ ಬದಲು ಅದನ್ನು ಸ್ವೀಕರಿಸಿದ್ದು ಇಂದಿಗೂ ನನ್ನನ್ನು ಕಾಡುತ್ತಿದೆ” ಎಂದು ನಾಣಯ್ಯ ಹೇಳಿದ್ದಾರೆ.

ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ ಸಿ ಸೇಥಿ ಅವರೊಂದಿಗೆ ಎಂ ಸಿ ನಾಣಯ್ಯ
ಕರ್ನಾಟಕ ಹೈಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದ ಪಿ ಸಿ ಸೇಥಿ ಅವರೊಂದಿಗೆ ಎಂ ಸಿ ನಾಣಯ್ಯ

ಆ ಬಳಿಕ ಮುಖ್ಯ ನ್ಯಾಯಮೂರ್ತಿ ಸೇಥಿ ಅವರು ಜಿಲ್ಲಾ ನ್ಯಾಯಾಧೀಶರ ಶ್ರೇಣಿಯವರಾದ ಎರವಲು ಸೇವೆಯ ಮೂಲಕ ನಾಣಯ್ಯ ಅವರಿಗೆ ಕಾನೂನು ಕಾರ್ಯದರ್ಶಿಯಾಗಿದ್ದ ವೆಂಕಟರೆಡ್ಡಿಯವರ ಸೇವೆಯನ್ನು ಹಿಂಪಡೆದಿದ್ದರು. ಸಾಕಷ್ಟು ಹಗ್ಗಜಗ್ಗಾಟದ ಬಳಿಕ ವೆಂಕಟರೆಡ್ಡಿಯವರು ನ್ಯಾಯಾಂಗ ಸೇವೆಗೆ ಮರಳಿದ್ದರು. ವಿಪರ್ಯಾಸವೆಂದರೆ ಅಲ್ಲಿಯೂ ಅವರು ಹೆಚ್ಚು ಕಾಲ ಮುಂದುವರೆಯಲಾಗದೆ ಬಳಿಕ ತಮ್ಮ ಹುದ್ದೆಗೆ ರಾಜೀನಾಮೆ ನೀಡಿ ವಕೀಲಿಕೆಗೆ ಮರಳಿದ್ದರು.

35,000 ಮೊಕದ್ದಮೆಗಳ ಹಿಂತೆಗೆತ

ಎಂ ಸಿ ನಾಣಯ್ಯನವರು 1994ರಲ್ಲಿ ಕಾನೂನು ಸಚಿವರಾಗಿ ಅಧಿಕಾರ ಸ್ವೀಕರಿಸಿದಾಗ ರಾಜ್ಯದ ವಿವಿಧ ನ್ಯಾಯಾಲಯಗಳಲ್ಲಿ 12 ಲಕ್ಷ ಮೊಕದ್ದಮೆಗಳು ಇತ್ಯರ್ಥಕ್ಕೆ ಬಾಕಿ ಇದ್ದವು. ಇವುಗಳ ಪೈಕಿ 6 ಲಕ್ಷ ಕ್ರಿಮಿನಲ್‌ ಸ್ವರೂಪದವುಗಳಾಗಿದ್ದು, ಬಹಳಷ್ಟು ಪ್ರಕರಣಗಳು ವಿಲೇವಾರಿಯಾಗದೇ ಇದ್ದವು.

ಕ್ರಿಮಿನಲ್‌ ಮೊಕದ್ದಮೆಗಳಲ್ಲಿ ಐದು ವರ್ಷಕ್ಕೂ ಮೇಲ್ಪಟ್ಟು ಇತ್ಯರ್ಥವಾಗದೇ ಉಳಿದಿರುವ ಮೊಕದ್ದಮೆಗಳ ಪಟ್ಟಿಯನ್ನು ರಾಜ್ಯದ ಎಲ್ಲಾ ನ್ಯಾಯಾಲಯಗಳಿಂದ ಸಂಗ್ರಹಿಸಲು ನಾಣಯ್ಯನವರು ಸೂಚಿಸಿದರು. ವರದಕ್ಷಿಣೆ ಕಿರುಕುಳ, ಕೊಲೆ, ಅತ್ಯಾಚಾರ, ಮನೆಗೆ ನುಗ್ಗಿ ಬೆಂಕಿ ಹಾಕಿದ್ದು, ಆರ್ಥಿಕ ವ್ಯವಸ್ಥೆಯನ್ನು ಬುಡಮೇಲು ಮಾಡುವ ಅಪರಾಧ ಇವುಗಳನ್ನು ಬಿಟ್ಟು ಉಳಿದ ಮೊಕದ್ದಮೆಗಳ ಪಟ್ಟಿಯನ್ನು ಮಾತ್ರ ತರಿಸಿದರು. ಇಂತಹ ಮೊಕದ್ದಮೆಗಳು ರಾಜಕೀಯ ಹಾಗೂ ಇತರೆ ಕಾರಣಗಳಿಂದ ಹಾಕಲಾದಂಥ ಮೊಕದ್ದಮೆಗಳು. ಇವುಗಳಲ್ಲಿ ಸಾಕ್ಷಿಗಳು ಇರುವುದಿಲ್ಲ. ಇದ್ದರೂ ಅವರು ಬರುವುದಿಲ್ಲ. ಮೇಲಾಗಿ ಬಹುತೇಕ ಅಂತಹ ಮೊಕದ್ದಮೆಗಳು ಖುಲಾಸೆಯಲ್ಲಿ ಅಂತ್ಯ ಕಾಣುತ್ತವೆ. ಅಲ್ಲದೇ ಇದು ಆರೋಪಿಗಳನ್ನು ಅನಗತ್ಯವಾಗಿ ಹಿಂಸೆಗೆ ಗುರಿ ಮಾಡುವ ಕಾರಣದಿಂದ ಇವುಗಳನ್ನು ಹಿಂತೆಗೆಯುವುದು ಒಳ್ಳೆಯದು ಎಂದು ನಾಣಯ್ಯ ನಂಬಿದ್ದರು.

ಇದಕ್ಕೆ ಒಂದು ಸಮಿತಿಯನ್ನು ರಚನೆ ಮಾಡಲಾಯಿತು. ಸಮಿತಿಯ ಅಧ್ಯಕ್ಷರಾಗಿ ನಾಣಯ್ಯನವರಿದ್ದರೆ ಸಮಿತಿಯಲ್ಲಿ ಗೃಹ ಕಾರ್ಯದರ್ಶಿ, ಕಾನೂನು ಕಾರ್ಯದರ್ಶಿ, ಅಭಿಯೋಜಕ ನಿರ್ದೇಶಕರು, ಸಿ.ಒ.ಡಿ ಮುಖ್ಯಸ್ಥರು ಸದಸ್ಯರಾಗಿದ್ದರು. ಈ ಸಮಿತಿಯು ಸುಮಾರು ಐವತ್ತು ಸಾವಿರ ಮೊಕದ್ದಮೆಗಳನ್ನು ಪರಿಶೀಲಿಸಿ, ಪ್ರತಿಯೊಂದು ಪ್ರಕರಣವನ್ನೂ ಅಳೆದು ತೂಗಿ ಅಂದಾಜು 35,000 ಮೊಕದ್ದಮೆಗಳನ್ನು ಸಾರ್ವಜನಿಕ ಹಿತದೃಷ್ಟಿಯ ಕಾರಣದಿಂದ ಹಿಂತೆಗೆಯಲು ತೀರ್ಮಾನ ಮಾಡಿತು. ಮುಖ್ಯಮಂತ್ರಿಯವರನ್ನು ಈ ಸಂಬಂಧದಲ್ಲಿ ಭೇಟಿ ಮಾಡಿದ ನಾಣಯ್ಯನವರು ಅವರ ಒಪ್ಪಿಗೆಯನ್ನು ಪಡೆದರು.

ಆನಂತರ ಜಿಲ್ಲಾವಾರು, ತಾಲ್ಲೂಕುವಾರು ಪಟ್ಟಿ ಮಾಡಿ ಸರ್ಕಾರಿ ಅಭಿಯೋಜಕರುಗಳು ಹಾಗೂ ಸಹಾಯಕ ಸರ್ಕಾರಿ ಅಭಿಯೋಜಕರುಗಳಿಗೆ ಕಳುಹಿಸಿ ಮೊಕದ್ದಮೆಗಳನ್ನು ಸಾರ್ವಜನಿಕ ಹಿತದೃಷ್ಟಿಯಿಂದ ಹಿಂತೆಗೆಯುವಂತೆ ಸೂಚಿಸಲಾಯಿತು. ಇಂತಹ ಪ್ರಯೋಗ ಭಾರತದಲ್ಲಿ ಪ್ರಥಮ ಬಾರಿಗೆ ನಡೆಯಿತು ಎನ್ನುವುದು ಗಮನಾರ್ಹ. ಇದರ ಬಗ್ಗೆ ಅಂದಿನ ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿಗಳು ಮೆಚ್ಚುಗೆ ಸೂಚಿಸಿದರು. ಈ ವಿಷಯವನ್ನು ದೆಹಲಿಯಲ್ಲಿ ನಡೆದ ಕಾನೂನು ಸಚಿವರ ಸಮ್ಮೇಳನದಲ್ಲಿ ನಾಣಯ್ಯನವರು ತಿಳಿಸಿದಾಗ ಅಲ್ಲಿಯೂ ಮೆಚ್ಚುಗೆ ವ್ಯಕ್ತವಾಯಿತು. ಇದೇ ವಿಷಯವನ್ನು ನಾಣಯ್ಯ ಅವರು ನ್ಯಾಯಮೂರ್ತಿಗಳ ಸಮ್ಮೇಳನದಲ್ಲೂ ಪ್ರಸ್ತಾಪಿಸಿದರು. ರಾಜಕೀಯ ಹೋರಾಟಗಾರರಿಗೆ ಮತ್ತು ಸದುದ್ದೇಶದಿಂದ ಜನಪರ ಹೋರಾಟ ಮಾಡಲು ಹೋಗಿ ಮೊಕದ್ದಮೆಗಳನ್ನು ಹಾಕಿಸಿಕೊಂಡ ಜನರಿಗೆ ಇಂಥ ಕ್ರಮದಿಂದ ಅನಗತ್ಯ ಹಿಂಸೆ ತಪ್ಪಿತ್ತು.

ಕಾನೂನು ಇಲಾಖೆಯ ನೇಮಕಾತಿಯಲ್ಲಿ ಬದಲಾವಣೆ

ಕಾನೂನು ಇಲಾಖೆಗೆ ನೇಮಕಾತಿ ಮಾಡುವಾಗ ಇದ್ದ ನಿಯಮಗಳಲ್ಲಿ ನಾಣಯ್ಯ ಬದಲಾವಣೆ ತಂದರು. ಇವರ ಅವಧಿಯಲ್ಲಿ ಉತ್ತಮ ವಕೀಲರನ್ನು ಹುಡುಕಿ 150 ಮಂದಿಯನ್ನು ಸಹಾಯಕ ಸರ್ಕಾರಿ ಅಭಿಯೋಜಕರನ್ನಾಗಿ ನೇಮಕ ಮಾಡಲಾಯಿತು. ಜಿಲ್ಲಾ ಮತ್ತು ರಾಜ್ಯ ಮಟ್ಟದಲ್ಲಿ ವಕೀಲರಾಗಿ ನೇಮಕವಾಗಲು ಹಿಂದೆ ಕ್ರಮವಾಗಿ ಇದ್ದ 7 ಮತ್ತು 12 ವರ್ಷಗಳ ಅನುಭವ ಅವಧಿಯನ್ನು ಜಿಲ್ಲಾ ಮಟ್ಟಕ್ಕೆ 12 ಮತ್ತು ರಾಜ್ಯಮಟ್ಟಕ್ಕೆ 15 ವರ್ಷವೆಂದು ನಿಗದಿಗೊಳಿಸಿದರು.

ವಕೀಲರೊಂದಿಗೆ ಚರ್ಚೆಯಲ್ಲಿ ನಿರತರಾಗಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಎಂ ಸಿ ನಾಣಯ್ಯ
ವಕೀಲರೊಂದಿಗೆ ಚರ್ಚೆಯಲ್ಲಿ ನಿರತರಾಗಿದ್ದ ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡ ಮತ್ತು ಎಂ ಸಿ ನಾಣಯ್ಯ

ಸರ್ಕಾರಿ ವಕೀಲರಿಗೆ ತಾಲ್ಲೂಕು ಮಟ್ಟದಲ್ಲಿ 450 ರೂಪಾಯಿ, ಜಿಲ್ಲಾಮಟ್ಟದಲ್ಲಿ 750 ರೂಪಾಯಿ, ಹೈಕೋರ್ಟ್‌ ಮಟ್ಟದಲ್ಲಿ 1,500 ಮತ್ತು 2,500 ಮಾಸಾಶನ ನೀಡಲಾಗುತ್ತಿತ್ತು. ಸರ್ಕಾರಿ ವಕೀಲರಾಗಿ ಕೆಲಸ ಮಾಡಿದ್ದ ಅನುಭವ ಹೊಂದಿದ್ದ ನಾಣಯ್ಯ ಅವರು ತಾಲ್ಲೂಕು ಮಟ್ಟದಲ್ಲಿ 2,500 ರೂಪಾಯಿ, ಜಿಲ್ಲಾಮಟ್ಟದಲ್ಲಿ 4,000 ರೂಪಾಯಿ, ಹೈಕೋರ್ಟ್‌ ಪ್ಲೀಡರ್‌ಗಳಿಗೆ 7,500 ರೂಪಾಯಿ ಮತ್ತು ಅಡ್ವೊಕೇಟ್‌ಗಳಿಗೆ ಮಾಸಿಕ 10 ಸಾವಿರ ರೂಪಾಯಿ ಮಾಸಾಶನ ಮಾಡಿದರು. ಮಹಿಳಾ ನೋಟರಿಗಳ ನೇಮಕಾತಿಯಲ್ಲೂ ನಾಣಯ್ಯ ಅವರ ಪಾತ್ರ ಮಹತ್ವವಾಗಿದೆ. ಶೇ. 30ರಷ್ಟು ಮಹಿಳಾ ಮೀಸಲಾತಿ ಜಾರಿಗೊಳಿಸುವ ಮೂಲಕ ಪ್ರಮುಖ ನಿರ್ಧಾರ ಕೈಗೊಂಡರು.

ಕಾನೂನು ಇಲಾಖೆಗೆ ಇದ್ದ ವಿವೇಚನಾ ಅಧಿಕಾರ ರದ್ದು

ಕೊಲೆ, ಅತ್ಯಾಚಾರ, ವರದಕ್ಷಿಣೆಗೆ ಸಂಬಂಧಿಸಿದಂತೆ ನಡೆಯುವ ಕೊಲೆ, ಮನೆಗೆ ಬೆಂಕಿ ಇಡುವಂಥ ಪ್ರಕರಣಗಳು ಸೆಷನ್ಸ್‌ ನ್ಯಾಯಾಲಯದಲ್ಲಿ ಬಿದ್ದು ಹೋದರೆ ಅದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸುವ ವಿವೇಚನಾ ಅಧಿಕಾರ ಹಿಂದೆ ಕಾನೂನು ಇಲಾಖೆಗೆ ಇತ್ತು. ಈ ವಿಚಾರದಲ್ಲಿ ಹಣ ಮತ್ತು ರಾಜಕೀಯ ಪ್ರಭಾವ ಕೆಲಸ ಮಾಡುವುದನ್ನು ಗ್ರಹಿಸಿದ ನಾಣಯ್ಯ ಅವರು ಕಾನೂನು ಇಲಾಖೆಗೆ ಇದ್ದ ವಿವೇಚನಾ ಅಧಿಕಾರವನ್ನು ತೆಗೆದು ಮೇಲ್ಮನವಿ ಸಲ್ಲಿಸುವುದನ್ನು ಕಡ್ಡಾಯಗೊಳಿಸಿದರು. ಇದರಿಂದ ನಾನಾ ಕಾರಣಗಳಿಂದ ಕೆಳಹಂತದ ನ್ಯಾಯಾಲಯಗಳಲ್ಲಿ ಬಚಾವಾಗುತ್ತಿದ್ದ ಆರೋಪಿಗಳು ಮೇಲಿನ ನ್ಯಾಯಾಲಯದಲ್ಲಿ ಶಿಕ್ಷೆಗೆ ಗುರಿಯಾಗುವಂತಾಯಿತು.

ಬೆಂಗಳೂರಿನ ಅರಮನೆ ಸುತ್ತಲಿನ 475 ಎಕರೆ ಸರ್ಕಾರದ ವಶಕ್ಕೆ

ಬೆಂಗಳೂರಿನಲ್ಲಿರುವ ಮೈಸೂರು ಮಹಾರಾಜರ ಅರಮನೆಯ ಸುತ್ತಲೂ 475 ಎಕರೆ ಜಮೀನು ಇದ್ದು, ಅದನ್ನು ವಶಪಡಿಸಿಕೊಳ್ಳುವ ಸಂಬಂಧ ಕಾನೂನು ತಜ್ಞರು, ಅಧಿಕಾರಿಗಳೊಂದಿಗೆ ಚರ್ಚಿಸಿ ಈ ಸಂಬಂಧ ವಿಧಾನಸಭೆ ಮತ್ತು ವಿಧಾನ ಪರಿಷತ್‌ನಲ್ಲಿ ವಿಧೇಯಕವನ್ನು ನಾಣಯ್ಯ ಮಂಡಿಸಿದರು. ಉಭಯ ಸದನಗಳಲ್ಲಿ ವಿಸ್ತೃತ ಚರ್ಚೆಯಾದ ಬಳಿಕ ಅದಕ್ಕೆ ರಾಷ್ಟ್ರಪತಿ ಅಂಕಿತ ಹಾಕಿದ್ದರು. ಈ ಕಾನೂನಿನ ಸಿಂಧುತ್ವವನ್ನು ಪ್ರಶ್ನಿಸಿ ಒಡೆಯರ್‌ ಅವರು ಹೈಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಹೈಕೋರ್ಟ್‌ ರಾಜ್ಯ ಸರ್ಕಾರದ ಕ್ರಮವನ್ನು ಎತ್ತಿ ಹಿಡಿಯಿತು. ಮುಂದೆ ಪ್ರಕರಣ ಸುಪ್ರೀಂ ಕೋರ್ಟ್‌ ಮೆಟ್ಟಿಲೇರಿತು.

Also Read
[ಅನುಸಂಧಾನ] ಶಾಸನ ರೂಪಿಸುವ ಹೊಣೆಹೊತ್ತ ಜನಪ್ರತಿನಿಧಿಗಳಿಗೆ ಕಾನೂನು ಹಿನ್ನೆಲೆಯಿದ್ದರೆ ಅನುಕೂಲ: ಜಯಪ್ರಕಾಶ್ ಹೆಗ್ಡೆ

ರೋರಿಚ್‌-ದೇವಿಕಾ ರಾಣಿಯವರ ತಾತಗುಣಿ ಎಸ್ಟೇಟ್‌ ಭೂಗಳ್ಳರ ಪಾಲಾಗದಂತೆ ತಡೆದದ್ದು

ರಷ್ಯಾ ಮೂಲದ ಖ್ಯಾತ ಕಲಾವಿದ ರೋರಿಚ್‌ ಅವರು ಅಭಿನೇತ್ರಿಯಾದ ದೇವಿಕಾ ರಾಣಿ ಅವರನ್ನು ವಿವಾಹವಾಗಿದ್ದರು. ದೇವಿಕಾ ರಾಣಿಯನ್ನು ವರಿಸಿದ ಬಳಿಕ ರೋರಿಚ್‌ ಅವರು ತಮ್ಮ ಜೀವನದ ಬಹುತೇಕ ಸಮಯವನ್ನು ಭಾರತದಲ್ಲಿ ಕಳೆದರು. ಈ ದಂಪತಿಗೆ ವಾರಸುದಾರರಿಲ್ಲದ್ದರಿಂದ ಅವರಿಗೆ ಸೇರಿದ ಬನ್ನೇರುಘಟ್ಟ ರಸ್ತೆಯಲ್ಲಿರುವ 475 ಎಕರೆ ಪ್ರದೇಶವನ್ನೊಳಗೊಂಡ ತಾತಗುಣಿ ಎಸ್ಟೇಟ್‌ ಅನ್ನು ಭೂ ಮಾಫಿಯಾದವರು ವಶಪಡಿಸಿಕೊಳ್ಳಬಹುದು ಎಂದು ಅದನ್ನು ವಿಧೇಯಕದ ಮೂಲಕ ಸರ್ಕಾರದ ವಶಕ್ಕೆ ನಾಣಯ್ಯ ಪಡೆದುಕೊಂಡರು.

Related Stories

No stories found.
Kannada Bar & Bench
kannada.barandbench.com