[ಅನುಸಂಧಾನ] ಶಾಸನ ರೂಪಿಸುವ ಹೊಣೆಹೊತ್ತ ಜನಪ್ರತಿನಿಧಿಗಳಿಗೆ ಕಾನೂನು ಹಿನ್ನೆಲೆಯಿದ್ದರೆ ಅನುಕೂಲ: ಜಯಪ್ರಕಾಶ್ ಹೆಗ್ಡೆ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'
K Jayaprakash Hegde
K Jayaprakash Hegde

ಸರಳತೆ, ಸಜ್ಜನಿಕೆಯ ಮೂಲಕವೇ ರಾಜಕಾರಣದಲ್ಲಿ ತಮ್ಮದೇ ಆದ ಛಾಪು ಮೂಡಿಸಿರುವವರು ಕೆ ಜಯಪ್ರಕಾಶ್‌ ಹೆಗ್ಡೆ. ಉಡುಪಿ ಜಿಲ್ಲೆಯ ಕುಂದಾಪುರ ತಾಲ್ಲೂಕಿನ ಕೊರ್ಗಿಯವರಾದ ಹೆಗ್ಡೆ ಅವರು ವೃತ್ತಿಯಿಂದ ವಕೀಲರಾಗಿದ್ದು, ಆಕಸ್ಮಿಕವಾಗಿ ರಾಜಕಾರಣ ಪ್ರವೇಶಿಸಿದವರು. ಈ ಹಿಂದಿನ ಬ್ರಹ್ಮಾವರ ವಿಧಾನಸಭಾ ಕ್ಷೇತ್ರದಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿದ್ದ ಹೆಗ್ಡೆ ಅವರು ಒಮ್ಮೆ ಉಡುಪಿ-ಚಿಕ್ಕಮಗಳೂರು ಲೋಕಸಭಾ ಕ್ಷೇತ್ರದ ಸಂಸದರಾಗಿಯೂ ಕೆಲಸ ಮಾಡಿದ್ದಾರೆ. ರಾಜ್ಯ ಸಂಪುಟದಲ್ಲಿ ಮೀನುಗಾರಿಕೆ ಮತ್ತು ಬಂದರು ಸಚಿವರಾಗಿ ಉತ್ತಮವಾಗಿ ಕಾರ್ಯನಿರ್ವಹಿಸಿದ ಹೆಗ್ಗಳಿಕೆಯೂ ಅವರಿಗೆ ಸಲ್ಲುತ್ತದೆ.

ನ್ಯಾಯಾಧೀಶರ ಕುಟುಂಬದಿಂದ ಬಂದ ಜಯಪ್ರಕಾಶ್‌ ಹೆಗ್ಡೆಯವರು ಸಹಜವಾಗಿಯೇ ಕಾನೂನು ಶಿಕ್ಷಣದೆಡೆಗೆ ವಾಲಿದವರು. ಕಾರ್ಮಿಕ, ರಾಜಕೀಯ ಚಳವಳಿಗಳ ಹಿನ್ನೆಲೆಯಲ್ಲಿ ರಾಜಕಾರಣದ ಸೆಳೆತಕ್ಕೆ ಸಿಲುಕಿ ಸಾರ್ವಜನಿಕ ಬದುಕಿಗೆ ಬಂದವರು. ಸಾರ್ವಜನಿಕ ಬದುಕಿನಿಂದ ಸಕಾರಾತ್ಮಕ ಅಂತರವನ್ನು ಕಾಯ್ದುಕೊಳ್ಳುವ ನ್ಯಾಯಾಧೀಶರ ಕುಟುಂಬದ ಹಿನ್ನೆಲೆಯಿಂದ ಸಾಗಿ ಬಂದು ಸಾರ್ವಜನಿಕ ಬದುಕನ್ನೇ ಉಸಿರಾಡಬೇಕಾದ ರಾಜಕಾರಣವನ್ನುಅಪ್ಪಿಕೊಂಡ ಹೆಗ್ಡೆ ಅವರು ತಮ್ಮ ಬದುಕಿನ ಪಯಣದ ಕುರಿತು "ಬಾರ್ ಅಂಡ್‌ ಬೆಂಚ್‌"ಗೆ ನೀಡಿದ ಸಂದರ್ಶನದಲ್ಲಿ ಮೆಲುಕು ಹಾಕಿದ್ದಾರೆ. ತಮಗಿದ್ದ ಕಾನೂನು ಮತ್ತು ವಕೀಲಿಕೆಯ ಹಿನ್ನೆಲೆಯು ತಾವು ಆಯ್ಕೆ ಮಾಡಿಕೊಂಡ ರಾಜಕಾರಣ ಕ್ಷೇತ್ರದಲ್ಲಿ ಸಾಧನೆ ಮಾಡಲು ಸಹಕಾರಿಯಾದ ಬಗ್ಗೆ ವಿವರಿಸಿದ್ದಾರೆ. ಅವರ ಮಾತುಗಳು:

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ನಮ್ಮ ತಂದೆ ಚಂದ್ರಶೇಖರ‌ ಹೆಗ್ಡೆ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು, ಮಂಗಳೂರು, ಬೆಳಗಾವಿ ಮತ್ತು ಬೆಂಗಳೂರಿನಲ್ಲಿ ನ್ಯಾಯಾಧೀಶರಾಗಿದ್ದರು. ಬೆಂಗಳೂರಿನಲ್ಲಿ ಜಿಲ್ಲಾ ನ್ಯಾಯಾಧೀಶರಾಗಿ, ವಿಚಕ್ಷಣಾ ಆಯೋಗದ ಉಪ ನಿರ್ದೇಶಕ ಮತ್ತು ಹೈಕೋರ್ಟ್‌ನ ರಿಜಿಸ್ಟ್ರಾರ್‌ ಜನರಲ್‌ ಸಹ ಆಗಿದ್ದರು. ಅಣ್ಣ ವೈದ್ಯಕೀಯ ಶಿಕ್ಷಣದ ವಿದ್ಯಾರ್ಥಿಯಾಗಿದ್ದ. ವೈದ್ಯಕೀಯ ವಿಜ್ಞಾನದತ್ತ ಹೋಗಲು ಇಷ್ಟವಿಲ್ಲದುದರಿಂದ ಪದವಿ ಪೂರೈಸಿದ ಬಳಿಕ ಕಾನೂನು ಕಾಲೇಜು ಸೇರಿದೆ. ಕಾನೂನು ಕ್ಷೇತ್ರದ ಪ್ರವೇಶಿಕೆಗೆ ತಂದೆಯವರೇ ನನಗೆ ಸ್ಫೂರ್ತಿ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ತಂದೆಯವರು ನ್ಯಾಯಾಧೀಶರಾಗಿದ್ದಾಗ ಮನೆಯಲ್ಲಿ ನಡೆದುಕೊಳ್ಳುತ್ತಿದ್ದ ರೀತಿ, ಅಂದಿನ ಕಾಲದಲ್ಲಿ ನ್ಯಾಯಾಂಗದ ಮೇಲಿನ ಗೌರವ ನನ್ನನ್ನು ಹೆಚ್ಚು ಪ್ರಭಾವಿಸಿದ್ದವು. ಚುನಾವಣೆಗೆ ನಿಲ್ಲದಿದ್ದರೆ ನ್ಯಾಯಾಂಗದ ಭಾಗವಾಗಿರುತ್ತಿದ್ದೆನೋ ಏನೋ ಗೊತ್ತಿಲ್ಲ. ಬೆಂಗಳೂರಿನ ಕಾನೂನು ಕಾಲೇಜಿನಲ್ಲಿ 1974ರಲ್ಲಿ ಎಲ್‌ಎಲ್‌ಬಿ ಪದವಿ ಪೂರ್ಣಗೊಳಿಸಿದೆ. ಬೆಳಿಗ್ಗೆ 7-10ರವರೆಗೆ ಕಾಲೇಜು ಇರುತ್ತಿತ್ತು. ಬಳಿಕ ಬಿಡುವಿದ್ದರಿಂದ ವಿಜಯ ಬ್ಯಾಂಕ್‌ನಲ್ಲಿ ಕೆಲಸಕ್ಕೆ ಸೇರಿಕೊಂಡಿದ್ದೆ. ಇದೇ ಸಂದರ್ಭದಲ್ಲಿ ಕಾರ್ಮಿಕರ ಸಂಘಟನೆಯ ಅಧ್ಯಕ್ಷನಾಗಿದ್ದೆ. ಬ್ಯಾಂಕ್‌ ಮತ್ತು ಸಂಘಟನೆಯ ಕೆಲಸ ಹಾಗೂ ಕಾಲೇಜಿಗೆ ನನ್ನ ಚಟುವಟಿಕೆಗಳು ಸೀಮಿತವಾಗಿದ್ದವು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ?

A

ನ್ಯಾಯಮೂರ್ತಿಗಳಾಗಿದ್ದ ಇ ಎಸ್‌ ವೆಂಕಟರಾಮಯ್ಯ (ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಯಾಗಿದ್ದವರು), ಚಂದ್ರಶೇಖರ್‌, ಭೀಮಯ್ಯ ಮತ್ತು ರಾಮಾ ಜೋಯಿಸ್‌ ಅವರು ಕಿರಿಯ ವಕೀಲರಿಗೆ ಬೆಂಬಲ ನೀಡುತ್ತಿದ್ದರು. ಹೈಕೋರ್ಟ್‌ ನಿವೃತ್ತ ನ್ಯಾಯಮೂರ್ತಿ ಹಾಗೂ ಹಾಲಿ ಲೋಕಾಯುಕ್ತರಾದ ವಿಶ್ವನಾಥ್‌ ಶೆಟ್ಟಿ ಅವರ ಜೂನಿಯರ್‌ ಆಗಿಯೂ ಕೆಲಸ ಮಾಡಿದ್ದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಮಂಗಳೂರಿನ ಕಂಪೆನಿಯೊಂದಕ್ಕೆ ಸಂಬಂಧಿಸಿದ ಪ್ರಕರಣವು ನ್ಯಾ. ಇ ಎಸ್‌ ವೆಂಕಟರಾಮಯ್ಯ ಅವರ ಮುಂದಿತ್ತು. ನನ್ನ ಸೀನಿಯರ್‌ ಮತ್ತೊಂದು ಪ್ರಕರಣದಲ್ಲಿ ವ್ಯಸ್ತರಾಗಿದ್ದರು. ಈ ಹಿನ್ನೆಲೆಯಲ್ಲಿ ವಿಚಾರಣೆಗೆ ಹಾಜರಾಗಿ ಕಾಲಾವಕಾಶ ಪಡೆಯುವಂತೆ ತಿಳಿಸಿದ್ದರು. ಹಾಗಾಗಿ ನಾನು ನ್ಯಾಯಮೂರ್ತಿಗಳಲ್ಲಿ ಕಾಲಾವಕಾಶ ಕೋರಿ, ಪ್ರಕರಣದ ದಾಖಲೆ ನನ್ನ ಬಳಿ ಇಲ್ಲ ಎಂದು ತಿಳಿಸಿದೆ. ಆದರೆ, ಇದನ್ನು ಒಪ್ಪದ ಅವರು ನ್ಯಾಯಾಲಯದ ದಾಖಲೆ ನೀಡಿ, ಇದನ್ನು ಅಧ್ಯಯನ ಮಾಡಿ ಮಧ್ಯಾಹ್ನ ವಾದ ಮಂಡಿಸಿ ಎಂದರು. ನ್ಯಾಯಮೂರ್ತಿಗಳ ಸೂಚನೆಯಂತೆ ವಾದ ಮಾಡಿದೆ. ಅಂತಿಮವಾಗಿ ನಾವು ಆ ಪ್ರಕರಣ ಗೆದ್ದಿದ್ದೆವು. ಅದು ನನ್ನ ಮೊದಲ ಪ್ರಕರಣವಾಗಿತ್ತು. ಹೀಗೆ ನ್ಯಾಯಮೂರ್ತಿಗಳು ನಮ್ಮನ್ನು ರೂಪಿಸುವಲ್ಲಿಯೂ ಬೆಂಬಲವಾಗಿದ್ದರು.

Q

ವಕೀಲ ವೃತ್ತಿಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದೆ. ಜಯಪ್ರಕಾಶ್‌ ನಾರಾಯಾಣ್‌ ಅವರ ಸಂಪೂರ್ಣ ಕ್ರಾಂತಿ ಆಂದೋಲನ ಈ ವೇಳೆಗೆ ಆರಂಭವಾಗಿದ್ದರಿಂದ ಜನತಾ ದಳದ ಸ್ನೇಹಿತರು ಒಟ್ಟುಗೂಡಿದೆವು. 1984ರಲ್ಲಿ ಬ್ರಹ್ಮಾವರದಿಂದ (ಕ್ಷೇತ್ರ ಮರುವಿಂಗಡಣೆ ಆಗಿರುವುದರಿಂದ ) ಅಭ್ಯರ್ಥಿಗಳಿಲ್ಲ ಎಂದು ನನ್ನನ್ನು ಸ್ಪರ್ಧಿಸುವಂತೆ ಪಕ್ಷದ ಹಿರಿಯರು ಸೂಚಿಸಿದರು. ಅದೇ ಆರಂಭ.

Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಚುನಾಯಿತ ಪ್ರತಿನಿಧಿ ಶಾಸನ ರೂಪಿಸುವ ಕಾರ್ಯದಲ್ಲಿ ಭಾಗವಹಿಸಬೇಕಿರುವುದರಿಂದ ಕಾನೂನು ಹಿನ್ನೆಲೆಯಿದ್ದರೆ ತುಂಬಾ ಅನುಕೂಲ. ಕಾನೂನು ಪದವೀಧರರಲ್ಲದವರೂ ಸಾಕಷ್ಟು ಅಧ್ಯಯನ ಮಾಡಿ ಶಾಸನ ರೂಪಿಸುವಲ್ಲಿ ಮೌಲ್ಯಯುತ ಕೆಲಸ ಮಾಡಿದ್ದಾರೆ. ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಇಲಾಖೆಯ ಕಾರ್ಯದರ್ಶಿಗಳು ಸಂವಿಧಾನದ ಚೌಕಟ್ಟಿನಲ್ಲಿ ಶಾಸನದ ಕರಡು ರೂಪಿಸುತ್ತಾರೆ. ಅದು ಸಾಮಾನ್ಯ ಜನರಿಗೆ ಅನುಕೂಲಕಾರಿಯಾಗಿದೆಯೇ, ಲೋಪದೋಷಗಳಿವೆಯೇ ಎಂಬುದನ್ನು ಪರಿಶೀಲಿಸಿ, ಸರಿಪಡಿಸಲು ಕಾನೂನಿನ ಬಗ್ಗೆ ತಿಳಿವಳಿಕೆ ಇದ್ದರೆ ಅನುಕೂಲಕಾರಿ.

Q

ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?

A

ನಮ್ಮ ಊರಿನಲ್ಲಿ ಜನರಿಗೆ ಕಾನೂನಿನ ಸಲಹೆಗಳನ್ನು ನೀಡುತ್ತೇನೆ. ಬೆಂಗಳೂರಿನಲ್ಲಿ ಕಚೇರಿ ಇದ್ದು, ಊರಿನಿಂದ ಬಂದವರಿಗೆ ಅಲ್ಲಿ ಕರಡು ಸಿದ್ಧಪಡಿಸುವುದಕ್ಕೆ ಸಹಾಯ ಮಾಡುತ್ತಿದ್ದೇನೆ.

Q

ನೀವು ನಡೆಸಿದ ಪ್ರಮುಖ ಪ್ರಕರಣಗಳ ಬಗ್ಗೆ ವಿವರಿಸಬಹುದೇ?

A

ನಾನು ಹೆಚ್ಚಾಗಿ ಕ್ರಿಮಿನಲ್‌ ಪ್ರಕರಣದ ವಾದ ಮಂಡನೆಯಲ್ಲಿ ಭಾಗವಹಿಸಿಲ್ಲ. ಒಂದೇ ಒಂದು ಪ್ರಕರಣದಲ್ಲಿ ಭಾಗವಹಿಸಿದ್ದೆ. ಇದನ್ನು ಹೊರತುಪಡಿಸಿ ಹಲವು ಪ್ರಕರಣಗಳಲ್ಲಿ ವಾದ ಮಂಡನೆ ಮಾಡಿದ್ದೇನೆ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದೆನಿಸಿದೆಯೇ?

A

ಇಂದಿನ ರಾಜಕಾರಣದ ವಾತಾವರಣ ನೋಡಿದಾಗ ವಕೀಲಿಕೆಯಲ್ಲಿಯೇ ಮುಂದುವರೆಯಬೇಕಿತ್ತು ಎನಿಸುತ್ತದೆ. ಆಡಳಿತ ವ್ಯವಸ್ಥೆ ಸರಿಯಾಗಬೇಕಾದರೆ ವಿಧಾನ ಮಂಡಲ ಮತ್ತು ಸಂಸತ್‌ಗೆ ಅಧ್ಯಯನ ಪ್ರವೃತ್ತಿ ಇರುವವರು ಬರಬೇಕು. ಸ್ವಜನ ಪಕ್ಷಪಾತ ಎಂಬುದು ಬಾಲಿವುಡ್‌ಗೆ ಮಾತ್ರ ಸೀಮಿತವಾಗಿಲ್ಲ.

Related Stories

No stories found.
Kannada Bar & Bench
kannada.barandbench.com