[ಅನುಸಂಧಾನ] ಮುನ್ಸಿಫ್‌ ಪರೀಕ್ಷೆಗೆ ಅರ್ಜಿ ತಂದೆ, ಚುನಾವಣೆಗೆ ನಿಂತು ಶಾಸಕನಾದೆ: ಜಯಚಂದ್ರ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಮುನ್ಸಿಫ್‌ ಪರೀಕ್ಷೆಗೆ ಅರ್ಜಿ ತಂದೆ, ಚುನಾವಣೆಗೆ ನಿಂತು ಶಾಸಕನಾದೆ: ಜಯಚಂದ್ರ
T B JayachandraFormer Law Minister

ರಾಜಕಾರಣದಲ್ಲಿ ಐವತ್ತು ವಸಂತಗಳನ್ನು ಪೂರ್ಣಗೊಳಿಸಿದವರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಟಿ ಬಿ ಜಯಚಂದ್ರ. ಆರು ಬಾರಿ ಶಾಸಕರಾಗಿದ್ದ‌ ಅವರು ಆ ಪೈಕಿ ಹತ್ತು ವರ್ಷಗಳು ಸಂಪುಟ ದರ್ಜೆ ಸಚಿವರಾಗಿ ಎಸ್‌ ಎಂ ಕೃಷ್ಣ ಮತ್ತು ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ ಕೆಲಸ ಮಾಡಿದ್ದಾರೆ. ಮೌಢ್ಯ ನಿಷೇಧ, ಐಷಾರಾಮಿ ವಿವಾಹಕ್ಕೆ ತಡೆ, ಭ್ರಷ್ಟಾಚಾರ ನಿಗ್ರಹ ದಳದಂಥ ಮಹತ್ವದ ಕಾನೂನು ರೂಪಿಸುವಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಅವರು ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದೂ ಉಂಟು.

ಕಾನೂನು ಪದವಿ ಪಡೆದು ಐದು ವರ್ಷಗಳ ಕಾಲ ವಕೀಲರಾಗಿ ಕಾರ್ಯನಿರ್ವಹಿಸಿದ್ದ ಟಿ ಬಿ ಜಯಚಂದ್ರ ಅವರು ನ್ಯಾಯಾಧೀಶರಾಗುವ ಆಸೆಯಿಂದ ಒಂದೊಮ್ಮೆ ಮುನ್ಸಿಫ್‌ ಪರೀಕ್ಷೆ ಬರೆಯಲು ಸಿದ್ಧತೆ ನಡೆಸಿ, ಅರ್ಜಿಯನ್ನೂ ತಂದಿದ್ದರು. ಈ ವೇಳೆಗೆ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದರಿಂದ ಸ್ಪರ್ಧೆಗೆ ಇಳಿದರು. ಅತ್ತ ಅವರ ಕೆಲ ಗೆಳೆಯರು ನ್ಯಾಯಾಧೀಶರಾಗಿ ಆಯ್ಕೆಯಾದರೆ ಜಯಚಂದ್ರ ಅವರು ಸಾರ್ವಜನಿಕ ಸೇವೆಯ ಸೆಳೆತಕ್ಕೊಳಗಾಗಿ ತಮ್ಮ 27ನೇ ವಯಸ್ಸಿಗೇ ಶಾಸಕರಾಗಿ ಆಯ್ಕೆಯಾಗಿ ವಿಧಾನಸಭೆ ಪ್ರವೇಶಿಸಿದರು. ಮುಂದೆ ತಮ್ಮ ಸಾಮರ್ಥ್ಯದಿಂದಾಗಿ ಕಾನೂನು ಸಚಿವರಾಗಿ ಹಿರಿದಾದ ಜವಾಬ್ದಾರಿ ನಿರ್ವಹಿಸಿದರು. ಕಾನೂನು ಶಿಕ್ಷಣ ಹಾಗೂ ವಕೀಲಿಕೆಯಿಂದ ಕಾನೂನು ಸಚಿವರಾಗುವವರೆಗೆ ತಾವು ಬೆಳೆದು ಬಂದ ಪರಿಯನ್ನು “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ಅವರು ವಿವರವಾಗಿ ಹಂಚಿಕೊಂಡಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಕಾನೂನು ಓದಬೇಕೆಂಬ ಆಸೆ ನನಗೆ ಇರಲಿಲ್ಲ. ಆದರೆ, ಸಾಮಾಜಿಕ ಸೇವೆಯಲ್ಲಿ ಆಸಕ್ತಿ ಇತ್ತು. ನಮ್ಮ ತಂದೆ ಸ್ಥಳೀಯ ನಾಯಕರಾಗಿದ್ದು, ಕೋರ್ಟು-ಕಚೇರಿಗೆ ಓಡಾಡುತ್ತಿದ್ದರು. ಹೀಗಾಗಿ ನಾನು ವಕೀಲನಾಗುವುದು ನಮ್ಮ ತಂದೆಯ ಆಸೆ. ಬಿ. ಎಸ್‌ಸಿ ಆದ ಮೇಲೆ ಧಾರವಾಡದಲ್ಲಿ ಸ್ನಾತಕೋತ್ತರ ಪದವಿಗೆ ಸೇರ್ಪಡೆಯಾದೆ. ಅದೇಕೋ ಅದು ಸರಿ ಹೊಂದಲಿಲ್ಲ. ಅಲ್ಲಿಂದ ವಾಪಸ್‌ ಬಂದು ತುಮಕೂರಿನ ವಿದ್ಯೋದಯ ಕಾನೂನು ಕಾಲೇಜಿನಲ್ಲಿ 1970-73ರಲ್ಲಿ ಕಾನೂನು ಪದವಿ ಪೂರ್ಣಗೊಳಿಸಿದೆ. ಎಲ್‌ಎಲ್‌ಎಂ ಓದಬೇಕು, ಹೆಚ್ಚಿನ ಕಾನೂನು ಶಿಕ್ಷಣ ಅಧ್ಯಯನಕ್ಕೆ ಇಂಗ್ಲೆಂಡ್‌ಗೆ ತೆರಳಬೇಕು ಎಂಬ ಆಸೆ ಹೊಂದಿದ್ದೆ. ಅಷ್ಟರ ಮಟ್ಟಿಗೆ ಕಾನೂನು ಶಿಕ್ಷಣವನ್ನು ತಲೆಗೆ ಹಚ್ಚಿಕೊಂಡಿದ್ದೆ. ನಮ್ಮದು ಮಧ್ಯಮ ವರ್ಗ, ಕುಟುಂಬದ ಜವಾಬ್ದಾರಿ ಹೆಚ್ಚಾಗಿದ್ದರಿಂದ ಅದ್ಯಾವುದನ್ನೂ ಮಾಡಲಾಗಲಿಲ್ಲ. 25 ವರ್ಷಕ್ಕೇ ವಿವಾಹವಾಗಿ ಬಿಟ್ಟಿತ್ತು.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ವಿದ್ಯಾರ್ಥಿ ಜೀವನ ಮತ್ತು ಆನಂತರ ವೃತ್ತಿಯ ಸಂದರ್ಭದಲ್ಲಿ ಜನರ ಜೊತೆ ಹೆಚ್ಚು ಒಡನಾಟ ಹೊಂದಿದ್ದೆ. ಸರ್ಕಾರದ ಕಾರ್ಯಕ್ರಮ, ಸವಲತ್ತುಗಳನ್ನು ಜನರಿಗೆ ದೊರಕಿಸಿಕೊಡಲು ನಿರಂತರವಾಗಿ ಕೆಲಸ ಮಾಡುತ್ತಿದ್ದೆ. ಅಂದಿನ ಸರ್ಕಾರ ಜಾರಿಗೊಳಿಸಿದ್ದ ನಾಲ್ಕು ಅಂಶದ ಕಾರ್ಯಕ್ರಮದ ಭಾಗವಾಗಿದ್ದ ಈಚ್‌ ಒನ್‌- ಟೀಚ್‌ ಓನ್‌, ಮರ ನೆಡಿ ಮತ್ತಿತರ ಕಾರ್ಯಕ್ರಮಗಳನ್ನು ಜಾರಿಗೊಳಿಸಲು ಮೋಟಾರ್‌ ಸೈಕಲ್‌ನಲ್ಲಿ ಊರೂರು ಸುತ್ತಿದ್ದೇನೆ.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

1973ರಲ್ಲಿ ವಕೀಲಿಕೆಗೆ ಸನ್ನದು ಸಿಕ್ಕಿತು. ಕಾನೂನು ಕಾಲೇಜಿನ ಪ್ರಾಚಾರ್ಯರಾಗಿದ್ದ ಕೆ ವಿ ಸುಬ್ರಮಣ್ಯ ಸ್ವಾಮಿ ಎಂಬವರು ನಮ್ಮ ಕುಟುಂಬದ ಪ್ರಕರಣಗಳನ್ನು ನಡೆಸುತ್ತಿದ್ದರು. ಅವರ ಬಳಿಗೆ ಪ್ರಾಕ್ಟೀಸ್‌ಗೆ ಹೋಗುವಂತೆ ನಮ್ಮ ತಂದೆ ಸಲಹೆ ನೀಡಿದ್ದರು. ಐದಾರು ತಿಂಗಳು ಅವರ ಬಳಿ ಪ್ರಾಕ್ಟೀಸ್‌ ಮಾಡಿದೆ. ಆದರೆ, ಸ್ವಾಮಿ ಅವರೊಂದಿಗೆ ಹೊಂದಾಣಿಕೆಯಾಗಲಿಲ್ಲ. ಆಗಷ್ಟೇ ಚಿಕ್ಕನಾಯಕನಹಳ್ಳಿಯಲ್ಲಿ ನ್ಯಾಯಾಲಯ ಆರಂಭವಾಯಿತು. ನಾನು ಸೀದಾ ಅಲ್ಲಿಗೆ ತೆರಳಿ ನನ್ನದೇ ಕಚೇರಿ ತೆರೆದು ಪ್ರಾಕ್ಟೀಸ್‌ ಆರಂಭಿಸಿದೆ. ಹೆಚ್ಚು ಕಲಿಯದೇ ಇದ್ದರೂ ನಾನೇ ವಕೀಲ ಎಂದು ಘೋಷಿಸಿಕೊಂಡು, ಜನರ ಸಮಸ್ಯೆಗಳನ್ನು ಬಗೆಹರಿಸುವುದರ ಜೊತೆಗೆ ನ್ಯಾಯಾಲಯದಲ್ಲಿಯೂ ಪ್ರಕರಣಗಳನ್ನು ನಡೆಸುತ್ತಿದ್ದೆ.

ಕಂದಾಯ ನ್ಯಾಯಾಲಯ ಸಂಬಂಧಿ ಪ್ರಕರಣಗಳನ್ನು ಹೆಚ್ಚು ನಡೆಸುತ್ತಿದ್ದೆ. ಇದರಲ್ಲಿ ಕಾನೂನಿನ ಪ್ರಶ್ನೆ ಹೆಚ್ಚಾಗಿರುತ್ತಿರಲಿಲ್ಲ. ತಹಶೀಲ್ದಾರ್, ಸಹಾಯಕ ಆಯುಕ್ತರು, ಜಿಲ್ಲಾ ದಂಡಾಧಿಕಾರಿ ಮತ್ತು ಪ್ರಾದೇಶಿಕ ಆಯುಕ್ತರ ನ್ಯಾಯಾಲಯ, ಕಂದಾಯ ಮೇಲ್ಮನವಿ ನ್ಯಾಯಾಧಿಕರಣಕ್ಕೆ ಸಂಬಂಧಿಸಿದ ಪ್ರಕರಣಗಳನ್ನು ಹೆಚ್ಚಾಗಿ ನಡೆಸುತ್ತಿದೆ. ಹಿಂದೆ ಶಾಸಕರಾಗಿದ್ದ ತಾರೇಗೌಡರಿಗೆ ಚುನಾವಣೆಯಲ್ಲಿ ಬೆಂಬಲ ನೀಡಿದ್ದರಿಂದ ನನ್ನನ್ನು ಭೂಮಿ ಹಕ್ಕು ವಿತರಣಾ ಸಮಿತಿಯ ಸದಸ್ಯನನ್ನಾಗಿ ನೇಮಿಸಿದ್ದರು. ಆ ಸಂದರ್ಭದಲ್ಲಿ ಭೂಮಿ. ಕಂದಾಯ ಸಂಬಂಧಿ ವಿಚಾರಗಳು ಕರಗತವಾದವು. ಇದರಿಂದ ಜನರಿಗೆ ಹೆಚ್ಚಿನ ಅನುಕೂಲ ಮಾಡಿದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಚಿಕ್ಕನಾಯಕನ ಹಳ್ಳಿ ಭಾಗದಲ್ಲಿ ಭೂಮಿ ಹಕ್ಕು ವಿತರಣಾ ಸಮಿತಿಯ ಸದಸ್ಯನನ್ನಾಗಿದ್ದಾಗ ಸುಮಾರು 15-20 ಸಾವಿರ ಎಕರೆ ಭೂಮಿಯನ್ನು ಫಲಾನುಭವಿಗಳಿಗೆ ಸಿಗುವಂತೆ ಮಾಡುವಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದು ನನ್ನ ರಾಜಕೀಯ ಭವಿಷ್ಯಕ್ಕೆ ತಳಹದಿಯಾಯಿತು. ಕೆಲವು ಸಂದರ್ಭದಲ್ಲಿ ಅಂದಿನ ಕಂದಾಯ ಸಚಿವರಾಗಿದ್ದ ಹುಚ್ಚಮಾಸ್ತೇಗೌಡರ ಜೊತೆ ತೆರಳಿ ಸರ್ಕಾರದ ಆದೇಶಗಳನ್ನೇ ಬದಲಿಸಿದ ಉದಾಹರಣೆಗಳೂ ಉಂಟು. ಕಂದಾಯ ಸಂಬಂಧಿ ವಿಚಾರಗಳಲ್ಲಿ ಸಾಕಷ್ಟು ಅನುಭವ ಗಳಿಸಿಕೊಂಡಿದ್ದೆ.

ನಮ್ಮ ಭಾಗದಲ್ಲಿ ಬೋರನ ಕಣಿವೆ ಜಲಾಶಯ ಎಂದಿದೆ. ಅದು ಪ್ರತಿ ವರ್ಷವೂ ತುಂಬಿ ಹರಿಯುತ್ತಿತ್ತು. ಜಲಾಶಯ ತುಂಬಿ ಹಳ್ಳದ ಮೂಲಕ ಶಿರಾದಲ್ಲಿ ಕೆರೆಗೆ ನೀರು ಹರಿಯುತ್ತಿತ್ತು. ಇದರ ಮಧ್ಯ ಭಾಗದಲ್ಲಿನ ರೈತರು ಹಳ್ಳದಲ್ಲಿ ಮೋಟರ್‌ ಇಟ್ಟು ತಮ್ಮ ಜಮೀನುಗಳಿಗೆ ನೀರು ಹಾಯಿಸಿಕೊಳ್ಳುತ್ತಿದ್ದರು. ಇದನ್ನು ಅಂದಿನ ತಹಶೀಲ್ದಾರ್‌ ಆಗಿದ್ದ ವೇದಮೂರ್ತಿಯವರು ನಿಲ್ಲಿಸಿಬಿಟ್ಟರು. ರೈತರಿಗೆ ನೀಡಲಾಗಿದ್ದ ನೋಟಿಸ್‌ಗಳನ್ನು ಅಂದಿನ ಮುಖ್ಯಮಂತ್ರಿ ದೇವರಾಜ್‌ ಅರಸ್‌ ಅವರಿಗೆ ಬಳಿಗೆ ತೆಗೆದುಕೊಂಡು ಹೋಗಿ ತಡೆಯಾಜ್ಞೆ ಪಡೆದುಕೊಂಡೆ. ಇದರಿಂದ 100-150 ರೈತರಿಗೆ ಅನುಕೂಲವಾಗಿತ್ತು. ಯಾವುದೇ ರೈತರಿಂದ ನಾನು ಶುಲ್ಕ ಪಡೆದಿರಲಿಲ್ಲ. ನನ್ನಿಂದ ಒಳಿತಾಗಿದೆ ಎಂದುಕೊಂಡು ರೈತರು ತಮ್ಮದೇ ಹಣ ಹಾಕಿಕೊಂಡು ನನಗೆ ಮೋಟಾರ್‌ ಸೈಕಲ್‌ ಉಡುಗೊರೆಯಾಗಿ ಕೊಡಿಸಿದ್ದರು. ಅದನ್ನು ನನ್ನ ಹೆಸರಿಗೇ ನೋಂದಾಯಿಸಿದ್ದರು.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ಕೇವಲ ಐದು ವರ್ಷಗಳಷ್ಟೇ ಪ್ರಾಕ್ಟೀಸ್‌ ಮಾಡಿದ್ದ ನಾನು ತಜ್ಞ ವಕೀಲನಲ್ಲ. ಆದರೆ, ಕಂದಾಯದ ವಿಚಾರಗಳಲ್ಲಿ ಒಂದು ಮಟ್ಟದಲ್ಲಿ ಪರಿಣತಿ ಸಾಧಿಸಿದ್ದೆ. ಚಿಕ್ಕಂದಿನಿಲೂ ಸಮಾಜ ಸೇವೆಯಲ್ಲಿ ತೊಡಗಿಸಿಕೊಂಡಿದ್ದೆ. ಇದರ ಜೊತೆಗೆ ರಾಜಕಾರಣದ ಜೊತೆ ಸ್ವಲ್ಪ ಸಂಪರ್ಕವೂ ಇತ್ತು. ವಕೀಲನಾಗಿ ಕಂದಾಯ ಸಂಬಂಧಿ ಪ್ರಕರಣಗಳನ್ನು ನಡೆಸಿದ್ದರಿಂದ ಜನರ ಜೊತೆ ಒಡನಾಟ ಹೆಚ್ಚಾಯಿತು. 1978ರಲ್ಲಿ ದೇವರಾಜ ಅರಸು ನನಗೆ ಟಿಕೆಟ್‌ ನೀಡಿದರು. 27ನೇ ವಯಸ್ಸಿಗೇ ನಾನು ಶಾಸಕನಾಗಿದ್ದೆ. ಇದಕ್ಕೂ ಮೊದಲಿನಿಂದಲೂ ಅರಸು ಅವರ ಜೊತೆಗೆ ನನಗೆ ಉತ್ತಮ ಬಾಂಧವ್ಯ ಇತ್ತು. ರಾಜಕಾರಣದಲ್ಲಿ ಐದು ದಶಕ ಪೂರೈಸಿದ್ದೇನೆ. ಈಚೆಗೆ ನಡೆದ ಶಿರಾ ಉಪ ಚುನಾವಣೆಯಲ್ಲಿ ಸೋಲದೇ ಇದ್ದಿದ್ದರೆ ಹಿರಿಯ ಶಾಸಕನಾಗಿರುತ್ತಿದ್ದೆ.

Q

ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ವಕೀಲನಾಗಿದ್ದಾಗ ಹೊಂದಿದ್ದ ಆಸಕ್ತಿಯನ್ನೇ ಶಾಸಕನಾಗಿದ್ದಾಗಲೂ ಹೊಂದಿದ್ದೆ. ವಕೀಲನಾಗಿದ್ದಾಗ ಎಂದೂ ನ್ಯಾಯಾಲಯದ ಕಲಾಪಗಳನ್ನು ತಪ್ಪಿಸಿಕೊಳ್ಳುತ್ತಿರಲಿಲ್ಲ. ಎಲ್ಲವೂ ಮುಗಿಯುವವರೆವಿಗೂ ಕುಳಿತು ಕೇಳಿಸಿಕೊಳ್ಳುತ್ತಿದ್ದೆ. ಅಂತೆಯೇ ಶಾಸಕನಾಗಿದ್ದಾಗಲೂ ಸದನವಿದ್ದಾಗ ತಪ್ಪಿಸಿಕೊಳ್ಳುತ್ತಿರಲಿಲ್ಲ. ಮಂತ್ರಿಯಾಗಿದ್ದಾಗಲೂ ಅದೇ ರೀತಿ ಕೆಲಸ ಮಾಡಿದ್ದೇನೆ. ವಿಷಯದ ಬಗ್ಗೆ ಚೆನ್ನಾಗಿ ಓದಿಕೊಂಡು ಸದನಕ್ಕೆ ತೆರಳುತ್ತಿದ್ದೆ. ಸಚಿವರುಗಳನ್ನು ಬೆವರಳಿಸುತ್ತಿದ್ದೆ. ಕಾನೂನು ಶಿಕ್ಷಣ ಮತ್ತು ವಕೀಲಿಕೆ ರಾಜಕಾರಣಕ್ಕೆ ಪ್ರವೇಶಿಸಲು ಅಪಾರವಾದ ಸಹಾಯ ಮಾಡಿದೆ. ಜನರ ಒಡನಾಟ ಹೆಚ್ಚಲು ವಕೀಲಿಕೆಯೇ ಮೂಲ ಕಾರಣವಾಗಿತ್ತು.

Q

ಐದು ವರ್ಷಗಳ ಕಾಲ ಕಾನೂನು ಸಚಿವರಾಗಿ ಕೆಲಸ ಮಾಡಿದ್ದೀರಿ? ಅಲ್ಲಿನ ಅನುಭವ, ಸವಾಲು ಮತ್ತು ನೀವು ಕೈಗೊಂಡ ಸುಧಾರಣಾ ಕ್ರಮಗಳ ಬಗ್ಗೆ ವಿವರಿಸಬಹುದೇ?

A

ಸಿದ್ದರಾಮಯ್ಯ ಅವರ ಸರ್ಕಾರದಲ್ಲಿ 42 ಸಂಪುಟ ಉಪ ಸಮಿತಿಗಳಲ್ಲಿ ನನಗೆ ಸ್ಥಾನ ದೊರೆತಿತ್ತು. 23 ಸಂಪುಟ ಉಪ ಸಮಿತಿಗಳಿಗೆ ಅಧ್ಯಕ್ಷ, ಎರಡು ಸಮಿತಿಗಳಿಗೆ ಉಪಾಧ್ಯಕ್ಷನಾಗಿದ್ದು, ಉಳಿದ 16 ಸಮಿತಿಗೆ ಸದಸ್ಯನಾಗಿದ್ದೆ. ಯಾವುದೇ ವಿಚಾರವಾದರೂ ತಳಮಟ್ಟದಿಂದಲೂ ಅಧ್ಯಯನ ಮಾಡಿ ಅಭಿಪ್ರಾಯ ನೀಡುತ್ತಿದ್ದೆ. ಸಂಪುಟ ಸಭೆಗೆ ಮುಖ್ಯಮಂತ್ರಿ ಸಿದ್ದರಾಮಯ್ಯನವರು ಬಾರದೇ ಇದ್ದರೂ ಕಾನೂನು ಸಚಿವ ಟಿ ಬಿ ಜಯಚಂದ್ರ ಬಂದಿದ್ದಾರೆ ಸಭೆ ಆರಂಭಿಸಿ ಎಂದು ತಮಾಷೆ ಮಾಡುತ್ತಿದ್ದರು. ಸಿದ್ದರಾಮಯ್ಯನವರು ಯಾವುದೇ ವಿಚಾರವಾದರೂ ಸಂಪುಟ ಉಪ ಸಮಿತಿಗೆ ಕಳುಹಿಸಿ ಅಲ್ಲಿಂದ ಅಭಿಪ್ರಾಯ ಬಂದ ಬಳಿಕ ತೀರ್ಮಾನ ಮಾಡುತ್ತಿದ್ದರು. ಈ ಕಾರಣದಿಂದ ಸಿದ್ದರಾಮಯ್ಯನವರ ಕಾಲದಲ್ಲಿ ಹಗರಣಕ್ಕೆ ಅವಕಾಶ ಇರಲಿಲ್ಲ.

ಹಳ್ಳಿಗಳಲ್ಲಿ ನಡೆಯುತ್ತಿರುವ ಬೆಳವಣಿಗೆಗಳನ್ನು ಗಂಭೀರವಾಗಿ ಪರಿಗಣಿಸಿ ಮೌಢ್ಯ ನಿಷೇಧ ಕಾಯಿದೆ, ಐಷಾರಾಮಿ ವಿವಾಹಕ್ಕೆ ತಡೆ ಹಾಕುವ ಉದ್ದೇಶದಿಂದ ಕಾನೂನು ತಂದೆವು. ಹೆಚ್ಚಿನ ಸಂಖ್ಯೆಯಲ್ಲಿ ಪೊಕ್ಸೊ ವಿಶೇಷ ನ್ಯಾಯಾಲಯಗಳನ್ನು ಆರಂಭಿಸಿದೆವು. ನಾನು ಕಾನೂನು ಸಚಿವನಾಗಿದ್ದಾಗ ಮೂಲಸೌಕರ್ಯ ಕಲ್ಪಿಸಲು ಹೆಚ್ಚಿನ ಒತ್ತು ನೀಡಿದೆ.

ವರ್ಷಕ್ಕೊಮ್ಮೆ ಮುಖ್ಯಮಂತ್ರಿಗಳು ಮತ್ತು ಮುಖ್ಯ ನ್ಯಾಯಮೂರ್ತಿಗಳ ಸಮಾವೇಶವನ್ನು ಪ್ರಧಾನ ಮಂತ್ರಿ ನಡೆಸುತ್ತಾರೆ. ಕಾನೂನು ಸಚಿವನಾಗಿದ್ದಾಗ ನಾನು ಅವುಗಳಲ್ಲಿ ಭಾಗವಹಿಸುತ್ತಿದ್ದೆ. ಆಗ ಅಂದಿನ ಮುಖ್ಯ ನ್ಯಾಯಮೂರ್ತಿ ಟಿ ಎಸ್‌ ಠಾಕೂರ್‌ ಅವರು ಮೂಲಸೌಲಭ್ಯ ಕಲ್ಪಿಸುವ ವಿಚಾರದಲ್ಲಿ ಕರ್ನಾಟಕ ಮುಂಚೂಣಿಯಲ್ಲಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದರು. ನಾನು ಕಾನೂನು ಸಚಿವನಾಗಿದ್ದಾಗ ಕರ್ನಾಟಕ ಹೈಕೋರ್ಟ್‌ನ ಧಾರವಾಡ ಮತ್ತು ಗುಲ್ಬರ್ಗಾ ಪೀಠ ಆರಂಭವಾದವು.

ನ್ಯಾಯಮೂರ್ತಿಗಳ ನೇಮಕ ವಿಚಾರವಾಗಿ ಮುಖ್ಯ ನ್ಯಾಯಮೂರ್ತಿಯವರ ಜೊತೆ ನಿರಂತರವಾಗಿ ಚರ್ಚಿಸುತ್ತಿದ್ದೆ. ಅಧೀನ ನ್ಯಾಯಾಲಯಗಳಲ್ಲಿ ನ್ಯಾಯಾಧೀಶರನ್ನು ನೇಮಕ ಮಾಡುವ ಕುರಿತು ಸಲಹೆ ನೀಡುತ್ತಿದ್ದೆ. ಹೈಕೋರ್ಟ್‌ ಮುಖ್ಯ ನ್ಯಾಯಮೂರ್ತಿ 200 ಕೋಟಿ ರೂಪಾಯಿ ಅನುದಾನ ಕೋರಿದರೆ, ನಾನು 300 ಕೋಟಿ ರೂಪಾಯಿ ಕೊಡಿಸುವೆ ಎಂದು ಹೇಳುತ್ತಿದ್ದೆ. ಅದರಂತೆ ಸಂಪುಟ ಸಭೆಯಲ್ಲಿ ಅದಕ್ಕೆ ಒಪ್ಪಿಗೆ ಪಡೆದು ಅದನ್ನು ಮಂಜೂರು ಮಾಡಿಸುತ್ತಿದ್ದೆ.

ಲೋಕಾಯುಕ್ತ ಮಾಜಿ ನ್ಯಾ. ಭಾಸ್ಕರ್‌ ರಾವ್‌ ಅವರ ಹಗರಣದ ಹಿನ್ನೆಲೆಯಲ್ಲಿ ಭ್ರಷ್ಟಾಚಾರ ನಿಯಂತ್ರಣ ಕಾಯಿದೆಯ (ಪಿಸಿಬಿ) ಅನ್ವಯ ಭ್ರಷ್ಟಾಚಾರ ನಿಗ್ರಹ ದಳ (ಎಸಿಬಿ) ಸೃಷ್ಟಿಸಿ, ಲೋಕಾಯುಕ್ತವನ್ನು ಪ್ರತ್ಯೇಕಗೊಳಿಸುವ ಸಲಹೆಯನ್ನು ಸಿದ್ದರಾಮಯ್ಯ ಅವರಿಗೆ ನೀಡಿದೆ. ಪಿಸಿಬಿ ಅಡಿ ಎಸಿಬಿ ಪೊಲೀಸ್‌ರು ಕರ್ತವ್ಯ ನಿರ್ವಹಿಸಬೇಕು. ರಾಜ್ಯದ ಎಲ್ಲಾ ಕಡೆ ಎಸಿಬಿ ಕಚೇರಿ ಆರಂಭಿಸಲಾಯಿತು. ಇದರಲ್ಲೇ ಲೋಕಾಯುಕ್ತ ಇರಲಿ ಎಂಬ ಸಲಹೆ ನೀಡಿದೆ. ಆದರೆ, ಇದನ್ನು ಸಂಪುಟ ಸಹೋದ್ಯೋಗಿಗಳು ಒಪ್ಪಲಿಲ್ಲ. ಲೋಕಾಯುಕ್ತ ಮತ್ತು ಎಸಿಬಿ ಎರಡೂ ಪ್ರತ್ಯೇಕವಾಗಿ ಇರಬೇಕು ಎಂದರು. ಪಿಸಿ ಕಾಯಿದೆ ಮತ್ತು ಲೋಕಾಯುಕ್ತ ಕಾಯಿದೆಯನ್ನು ಪ್ರತ್ಯೇಕಗೊಳಿಸಿದೆ. ಅಗತ್ಯ ಬಿದ್ದರೆ ಲೋಕಾಯುಕ್ತರು ಎಸಿಬಿ ಪೊಲೀಸರನ್ನು ಬಳಸಬಹುದು ಎಂದು ಹೇಳಿದ್ದೆವು. ಆದರೆ, ಇದಕ್ಕೆ ಬೆಂಬಲ ದೊರೆಯಲಿಲ್ಲ. ಎಸಿಬಿಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಕೆಲಸಕ್ಕೆ ಹಿನ್ನಡೆಯಾಯಿತು.

ಎಸಿಬಿಯ ಉಪ ಪೊಲೀಸ್‌ ವರಿಷ್ಠಾಧಿಕಾರಿ ತಾಲ್ಲೂಕು ಕಚೇರಿಯಲ್ಲಿ ಕುಳಿತು ಭ್ರಷ್ಟಾಚಾರ ಚಟುವಟಿಕೆಗಳಿಗೆ ತಡೆ ಒಡ್ಡಬೇಕು ಎಂಬುದು ನನ್ನ ಉದ್ದೇಶವಾಗಿತ್ತು. ಭ್ರಷ್ಟಾಚಾರ ನಿಯಂತ್ರಿಸುವ ಉದ್ದೇಶದಿಂದ ತಾಲ್ಲೂಕು ಮಟ್ಟದ ವಿವಿಧೆಡೆ ಸೂಚನಾ ಫಲಕ ಅಳವಡಿಸಲು ಕ್ರಮವಹಿಸಿದ್ದೆ. ಈ ಫಲಕಗಳು ಇಲ್ಲ ಎಂಬುದು ಕಂಡುಬಂದರೆ ಜಿಲ್ಲಾಧಿಕಾರಿಗಳಿಗೆ ನೋಟಿಸ್‌ ನೀಡುವಂತೆ ಮಾಡುತ್ತಿದ್ದೆ. ಹೀಗೆ ಸಾಕಷ್ಟು ಕೆಲಸಗಳನ್ನು ಮಾಡಿದ್ದೇನೆ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

A

ಕಾನೂನು ಸಚಿವನಾಗಿ ನನ್ನ ಕ್ಷೇತ್ರಕ್ಕೆ 2,500 ಕೋಟಿ ರೂಪಾಯಿ ಅನುದಾನ ಪಡೆದುಕೊಂಡಿದ್ದೆ. ಕ್ಷೇತ್ರದಲ್ಲಿನ ಅಭಿವೃದ್ಧಿ ಕಾರ್ಯದ ಬಗ್ಗೆ ಪಕ್ಷಾತೀತವಾಗಿ ಎಲ್ಲರೂ ಮಾತನಾಡುತ್ತಾರೆ. ಆದರೆ, ಮತ ನೀಡುವಾಗ ಜಾತಿ, ಹಣದ ಪ್ರಭಾವಗಳು ಮುನ್ನಲೆಗೆ ಬರುತ್ತವೆ. ಸಾಕಷ್ಟು ಅಭಿವೃದ್ಧಿ ಕೆಲಸ ಮಾಡಿದಾಗ್ಯೂ ವಿಧಾನಸಭೆಗೆ ನಡೆದ ಚುನಾವಣೆ ಮತ್ತು ತೀರ ಈಚೆಗೆ ನಡೆದ ಉಪಚುನಾವಣೆಯಲ್ಲಿ ಸೋಲನುಭವಿಸಿದೆ. ಅಭಿವೃದ್ಧಿ ಕಾರ್ಯಗಳಿಗೆ ಜನರು ಮಾನ್ಯತೆ ನೀಡಲಿಲ್ಲ ಎಂದು ಬೇಸರವಾಗಿದೆ. ಆದರೂ, ಜನಸೇವೆಯನ್ನು ಬಿಡಲಾಗದು. ಈಗಲೂ ನನ್ನ ಕಚೇರಿ ವಕೀಲರ ಕಚೇರಿಯ ರೀತಿಯಲ್ಲಿಯೇ ಇದೆ. ಕಂದಾಯ ಸಮಸ್ಯೆಗಳಿಗೆ ಈಗಲೂ ಉಚಿತ ಸಲಹೆಗಳನ್ನು ನೀಡುತ್ತೇನೆ.

ಆರಂಭದಲ್ಲಿ ನ್ಯಾಯಾಧೀಶರಾಗುವ ಉದ್ದೇಶದಿಂದ ಗೆಳೆಯರಾದ ಮಾಧವ ರೆಡ್ಡಿ, ಮರಿಯಪ್ಪ (ತೀರಿಕೊಂಡಿದ್ದಾರೆ) ಮತ್ತು ನಾನು ಮುನ್ಸಿಫ್‌‌ ಪರೀಕ್ಷೆ ಬರೆಯಲು ಅರ್ಜಿ ತಂದಿದ್ದೆವು. ಆ ವೇಳೆಗಾಗಲೇ ಚುನಾವಣೆ ಘೋಷಣೆಯಾಗಿದ್ದರಿಂದ ನಾನು ಸ್ಪರ್ಧೆ ಮಾಡಿ 27ನೇ ವಯಸ್ಸಿಗೆ ಶಾಸಕನಾಗಿದ್ದೆ. ಸ್ನೇಹಿತರಿಬ್ಬರೂ ಉತ್ತೀರ್ಣರಾಗಿ ನ್ಯಾಯಾಧೀಶರಾದರು.

Q

ಕೊನೆಯ ಬಾರಿಗೆ ಕಪ್ಪು ಕೋಟ್‌, ಗೌನ್‌ ಧರಿಸಿದ್ದು ಯಾವಾಗ?

A

ಕುಡಿಯಲು ನೀರು ಪೂರೈಸುವ ಸಲುವಾಗಿ ಹೇಮಾವತಿ ನದಿ ನೀರು ಯೋಜನೆಯನ್ನು ಶಿರಾಕ್ಕೆ ಕೊಂಡೊಯ್ದಿದ್ದೆ. ಇದನ್ನು ಪ್ರಶ್ನಿಸಿ ಕುಣಿಗಲ್‌ನ ಕೆಲವರು ಹೈಕೋರ್ಟ್‌ನಲ್ಲಿ ರಿಟ್‌ ಹಾಕಿದ್ದರು. ಶಿರಾ ಮೂಲದವರಾದ ಪ್ರೊ. ರವಿವರ್ಮ ಕುಮಾರ್‌ ನಮ್ಮ ವಕೀಲರಾಗಿದ್ದರು. ನ್ಯಾಯಾಲಯದಲ್ಲಿ ಕ್ಯೂಸೆಕ್ಸ್‌ ಮತ್ತು ಟಿಎಂಸಿ ಬಗ್ಗೆ ಗೊಂದಲವಾಗುತ್ತಿತ್ತು. ಮುಖ್ಯ ಎಂಜಿನಿಯರ್‌ಗಳು ತುಟಿ ಬಿಚ್ಚುತ್ತಿರಲಿಲ್ಲ. ತಾಂತ್ರಿಕ ಅಂಶಗಳನ್ನು ಸಮರ್ಥವಾಗಿ ವಿವರಿಸುವುದು ವಕೀಲರಿಗೆ ಕೆಲವೊಮ್ಮೆ ಕಷ್ಟವಾಗುತ್ತದೆ. ಇದರಿಂದ ಪೀಠಕ್ಕೆ ಸರಿಯಾದ ಸಲಹೆ ಸಿಗದೇ ಹೋಗಬಹುದು ಎಂದು ಅರಿತು ಶಾಸಕನಾಗಿದ್ದ ನಾನು ಕೋಟು, ಗೌನು ಹಾಕಿಕೊಂಡು ಹೈಕೋರ್ಟ್‌ನಲ್ಲಿ ನಿಂತು ಬಿಟ್ಟಿದ್ದೆ. ಇದು 2008-09ರಲ್ಲಿ ನಡೆದ ಘಟನೆ. ಅದೇ ಕೊನೆ ನಾನು ನ್ಯಾಯಾಲಯದ ಮೆಟ್ಟಿಲೇರಿದ್ದು. ಆ ಗೌನ್‌ ಅನ್ನು ನಾನು ಇನ್ನೂ ವಾಷ್‌ ಸಹ ಮಾಡಿಸಿಲ್ಲ. ಹಾಗೆ ಇಟ್ಟಿದ್ದೇನೆ. ಅಂತಿಮವಾಗಿ ಪೀಠವು ಕುಡಿಯುವ ನೀರಿಗೆ ತಕರಾರು ತೆಗೆಯಲಾಗದು ಎಂದು ಐತಿಹಾಸಿಕ ತೀರ್ಪು ನೀಡಿತ್ತು.

No stories found.
Kannada Bar & Bench
kannada.barandbench.com