ಪ್ರತಿಯೊಬ್ಬರೂ ತಮ್ಮ ಇಚ್ಛೆ, ತಮಗಾದ ಅನುಭವ-ಅವಮಾನಗಳನ್ನು ಆಧರಿಸಿ ಅದನ್ನು ಮೆಟ್ಟಿ ನಿಲ್ಲಲು ನಿರ್ದಿಷ್ಟ ಉದ್ಯೋಗಕ್ಕೆ ಸೇರುವ ಸಂಕಲ್ಪ ಮಾಡುವುದು ಸಾಮಾನ್ಯ. ಹೀಗೆ, ತಮ್ಮ ಕುಟುಂಬಕ್ಕಾದ ಅವಮಾನ, ಶೋಷಣೆ, ಅಸಮಾನತೆ, ಅನ್ಯಾಯಗಳನ್ನು ಮೆಟ್ಟಿ ನಿಲ್ಲಲು ಹಾಗೂ ಆ ಮೂಲಕ ವಿಶಿಷ್ಟವಾದ ಬದುಕು ರೂಪಿಸಿಕೊಳ್ಳುವ ಉದ್ದೇಶದಿಂದ ವಕೀಲಿಕೆ ವೃತ್ತಿ ಆಯ್ದು ಕೊಂಡವರು ಚಾಮರಾಜನಗರ ಜಿಲ್ಲೆಯ ಗುಂಡ್ಲುಪೇಟೆ ತಾಲ್ಲೂಕಿನ ಕಗ್ಗಳದ ಹುಂಡಿ ಗ್ರಾಮದ ನಿವಾಸಿ ಗಂಗಾಧರ್. 33 ವರ್ಷ ವಯಸ್ಸಿನ ಈ ಯುವ ವಕೀಲರು ಎರಡು ವರ್ಷಗಳಿಂದ ಮೈಸೂರಿನ ಹಿರಿಯ ವಕೀಲ ಮಾಧವ್ ದೇಶಕ್ ಅವರ ಬಳಿ ಸಹಾಯಕ ವಕೀಲರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಚಾಮರಾಜನಗರ ವಿಭಾಗದ ಪ್ರಕರಣಗಳನ್ನು ಗಂಗಾಧರ್ ಹಾಗೂ ಅವರ ಸಹೋದ್ಯೋಗಿಗಳು ನಿರ್ವಹಿಸುತ್ತಿದ್ದಾರೆ.
ಕಳೆದ ಮಾರ್ಚ್‌ನಲ್ಲಿ ಕೋವಿಡ್‌ನಿಂದಾಗಿ ಲಾಕ್‌ಡೌನ್ ಘೋಷಣೆಯಾದ ಬಳಿಕ ಸೃಷ್ಟಿಯಾದ ಸಮಸ್ಯೆಗಳ ಸುಳಿಗೆ ಸಿಲುಕಿರುವ ಗಂಗಾಧರ್ ಸೇರಿದಂತೆ ಹಲವು ಯುವ ವಕೀಲರು ತತ್ತರಿಸಿ ಹೋಗಿದ್ದಾರೆ. ತಾಲ್ಲೂಕು ಮಟ್ಟದ ವಕೀಲರ ಪಾಡು ಹೇಳ ತೀರದಂತಾಗಿದೆ. ಈ ಹಿನ್ನೆಲೆಯಲ್ಲಿ “ಬಾರ್ ಅಂಡ್ ಬೆಂಚ್” ಜೊತೆ ಮಾತನಾಡುತ್ತಾ ತಮ್ಮ ಬದುಕು ಬವಣೆಯ ಕುರಿತು ಗಂಗಾಧರ್ ಮುಕ್ತವಾಗಿ ಮಾತನಾಡಿದ್ದಾರೆ. ಅವರ ಈ ಪರಿಸ್ಥಿತಿ ಗ್ರಾಮೀಣ ಭಾಗದ ಯುವ ವಕೀಲರ ಬವಣೆಗಳಿಗೆ ಹಿಡಿದ ಕನ್ನಡಿಯಾಗಿದೆ.
ಕೋವಿಡ್‌ನಿಂದಾಗಿ ಯುವ ವಕೀಲ ಸಮುದಾಯಕ್ಕೆ ಆಗಿರುವ ಸಮಸ್ಯೆಗಳು ಏನು?
ಕೋವಿಡ್‌ಗೂ ಮುನ್ನ ಕನಿಷ್ಠ ₹100, ₹200 ಶುಲ್ಕ ಸಿಗುತ್ತಿತ್ತು. ಈಗ ಅದೂ ಇಲ್ಲದಾಗಿದೆ. ಕೋವಿಡ್‌ನಿಂದಾಗಿ 8-10 ಕಿ.ಮೀ. ಪ್ರಯಾಣ ಮಾಡಲೂ ನಮ್ಮ ಹತ್ತಿರ ಹಣವಿಲ್ಲದಾಗಿದೆ. ಬೈಕಿಗೆ ಒಂದು ಲೀಟರ್ ಪೆಟ್ರೋಲ್ ಹಾಕಿಸಲಾಗುತ್ತಿಲ್ಲ. ಮನೆಯಲ್ಲಿ ಬೆಳಿಗ್ಗೆ ಉಪಾಹಾರ ತಿಂದು ಬಂದರೆ ಸಂಜೆ ಮನೆಗೆ ತೆರಳಿಯೇ ಊಟ ಮಾಡುತ್ತಿದ್ದೇನೆ. ಕನಿಷ್ಠ ಕಿರಾಣಿ ಸಾಮಾನುಗಳನ್ನು ಮನೆಗೆ ಕೊಂಡೊಯ್ಯಲಾಗುತ್ತಿಲ್ಲ. ಸಾಕಷ್ಟು ವಕೀಲರು ಜಿಗುಪ್ಸೆಗೆ ಒಳಗಾಗಿದ್ದಾರೆ. ಬದುಕು ದುಸ್ತರವಾಗಿದೆ. ಪ್ರಕರಣವೊಂದರಲ್ಲಿ ವಾದಿಸಲು ಜಿಲ್ಲಾ ನ್ಯಾಯಾಲಯಕ್ಕೆ ಚಪ್ಪಲಿ ಹಾಕಿಕೊಂಡು ಹೋಗಿದ್ದೆ. ಅವರು ಶೂ ಹಾಕಿಕೊಂಡು ಬರುವಂತೆ ಸೂಚಿಸಿದರು. ಆದರೆ, ಶೂ ಖರೀದಿಸಲು ನನ್ನ ಬಳಿ ಹಣವಿಲ್ಲ. ಸಮವಸ್ತ್ರ ಕೊಳ್ಳಲೂ ಹಣವಿಲ್ಲ. ಪರಿಸ್ಥಿತಿ ತೀರ ಹದಗೆಟ್ಟು ಹೋಗಿದೆ. ಗುಂಡ್ಲುಪೇಟೆಯಲ್ಲಿ ಸುಮಾರು 120 ವಕೀಲರಿದ್ದಾರೆ. ಇವರಲ್ಲಿ 25 ಮಂದಿ ಯುವ ವಕೀಲರು. ನನ್ನ ಸಂಪರ್ಕದಲ್ಲಿರುವವರು ಮತ್ತು ಬಹುತೇಕ ಹಿರಿ ಕಿರಿಯ ವಕೀಲರ ಪರಿಸ್ಥಿತಿ ಇದೇ ರೀತಿ ಇದೆ.
ಕೋವಿಡ್ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ತಾಲ್ಲೂಕು ವಕೀಲರ ಸಂಘದಿಂದ ಯಾವ ತೆರನಾದ ನೆರವು ದೊರೆತಿದೆ?
ರಾಜ್ಯ ವಕೀಲರ ಪರಿಷತ್ತಿನಿಂದ ಕೆಲವೇ ಕೆಲವರಿಗೆ ತಲಾ ₹5 ಸಾವಿರ ನೆರವು ಸಿಕ್ಕಿದೆ. ನಾನೂ ಅದರ ಫಲಾನುಭವಿ. ಒಳ್ಳೆಯ ಸಂದರ್ಭದಲ್ಲಿ ನೆರವು ಸಿಕ್ಕಿತು. ಆದರೆ, ಜೀವನ ವೆಚ್ಚ ದುಬಾರಿಯಾಗಿರುವಾಗ ₹5 ಸಾವಿರ ಸಾಕಾಗುತ್ತದೆಯೇ? ನನ್ನನ್ನು ನಂಬಿ 65 ವಯಸ್ಸಿನ ತಾಯಿ ಮತ್ತು 70 ವರ್ಷದ ತಂದೆ ಇದ್ದಾರೆ. ಹಿಂದೊಮ್ಮೆ ತಾಲ್ಲೂಕು ವಕೀಲರ ಸಂಘದಿಂದ ಸಭೆ ನಡೆಸಿ ತಿಂಗಳಿಗೆ ಆಗುವಷ್ಟು ಆಹಾರ ಪದಾರ್ಥ ವಿತರಿಸುವ ವ್ಯವಸ್ಥೆ ಮಾಡುವುದಾಗಿ ಹೇಳಿದ್ದರು. ಆದರೆ, ಅದು ಕಾರ್ಯಗತವಾಗಲಿಲ್ಲ.
ಕೋವಿಡ್‌ಗೂ ಮುಂಚಿನ ಬದುಕು ಹೇಗಿತ್ತು?
ನಾನು 2018ರಲ್ಲಿ ಪ್ರಾಕ್ಟೀಸ್ ಆರಂಭಿಸಿದೆ. ಪ್ರಾಕ್ಟೀಸ್ ಮಾಡಿ ಎರಡು-ಮೂರು ವರ್ಷಗಳಲ್ಲಿ ಪ್ರತ್ಯೇಕವಾಗಿ ಕಾರ್ಯಾರಂಭ ಮಾಡಿದರೆ ಬದುಕು ಸರಿ ಹೋಗುತ್ತದೆ ಎಂದು ತಿಳಿದುಕೊಂಡಿದ್ದೆ. ನನಗೆ ಈಗ 33 ವರ್ಷ ವಯಸ್ಸಾಗಿದೆ. ಕೇಂದ್ರ ಸರ್ಕಾರ ಮಾರ್ಚ್‌ನಲ್ಲಿ ಲಾಕ್‌ಡೌನ್ ಘೋಷಿಸಿದಾಗಿನಿಂದ ಇಲ್ಲಿಯವರೆಗೆ ಕೆಲಸ ಕಲಿಯಲೂ ಸಾಧ್ಯವಾಗಿಲ್ಲ, ಸಂಪಾದನೆಯೂ ಇಲ್ಲ. ಆದರೆ, ವಯಸ್ಸು ಉರುಳುತ್ತಿರುವುದರಿಂದ ಅನುಭವಿ ಎನ್ನುವ ಪಟ್ಟ ಮಾತ್ರ ಸಿಗುತ್ತಿದೆ. ನನ್ನದು ಶೂನ್ಯ ಸಾಧನೆ. ಕೇಸುಗಳಿದ್ದರೆ ಮಾತ್ರ ಹಿರಿಯ ವಕೀಲರು ಒಂದಷ್ಟು ಹಣ ನೀಡುತ್ತಾರೆ. ಇಲ್ಲವಾದರೆ ಏನೇನೂ ಇಲ್ಲ.
ನೀವು ವಕೀಲರಾಗುವ ನಿರ್ಧಾರ ಮಾಡಿದ್ದೇಕೆ?
ನಮ್ಮ ಕುಟುಂಬಕ್ಕೆ ಒಂದು ಎಕರೆ ಜಮೀನಿದೆ. ಅದರದೊಂದು ವಿವಾದವಾಗಿತ್ತು. ಆ ವಿಚಾರದಲ್ಲಿ ನನ್ನ ತಂದೆಯ ಮೇಲೆಯೇ ದಾಳಿ ಮಾಡಿ ಅವರನ್ನು ಪೊಲೀಸ್ ಠಾಣೆಗೆ ಎಳೆದೊಯ್ಯಲಾಗಿತ್ತು. ಇದನ್ನು ಪ್ರಶ್ನಿಸಲು ಠಾಣೆಗೆ ತೆರಳಿದರೆ ಪೊಲೀಸರು ಗದರಿ ನನ್ನನ್ನು ಹಿಂದಕ್ಕೆ ಕಳುಹಿಸುತ್ತಿದ್ದರು. ಪೊಲೀಸ್ ಠಾಣೆಯ ಒಳಗೆ ನುಗ್ಗಲು ಜೀವ ನಡುಗುತ್ತಿತ್ತು. ಹಣವಿರುವವರ ಪರವಾಗಿ ಪೊಲೀಸರು ಕೆಲಸ ಮಾಡುತ್ತಿದ್ದರು. ಕಾಂಪೌಂಡ್ ಹೊರಗೆ ನಿಂತು ಪೊಲೀಸರ ವರ್ತನೆಯನ್ನು ಗಮನಿಸುತ್ತಿದ್ದೆ. ನಮ್ಮ ಆಸ್ತಿ ಪ್ರಕರಣಕ್ಕೆ ಸಂಬಂಧಿಸಿದಂತೆ ವಕೀಲರೊಬ್ಬರು ವಿವಿಧ ದಾಖಲೆಗಳನ್ನು ತರುವಂತೆ ಸೂಚಿಸಿದ್ದರು. ಅದಕ್ಕಾಗಿ ಪಡಿಪಾಟಲು ಪಟ್ಟೆ. ವ್ಯವಸ್ಥೆಯಲ್ಲಿನ ತಾರತಮ್ಯಗಳನ್ನು ಗಮನಿಸಿ ವಕೀಲನಾಗಬೇಕೆಂದು ಹಠ ತೊಟ್ಟು ವಕೀಲನಾದೆ. ಮೈಸೂರಿನ ಶಾರದಾ ವಿಲಾಸ ಕಾನೂನು ಕಾಲೇಜಿನಲ್ಲಿ ಪ್ರಾಂಶುಪಾಲರಾದ ಅನಿತಾ ಮತ್ತು ಪ್ರಾಧ್ಯಾಪಕರಾದ ಶೀಲಾ ಗಣೇಶ್ ಅವರ ನೆರವಿನಿಂದ ಕಾನೂನು ಪದವಿ ಪೂರ್ಣಗೊಳಿಸಿದೆ. ನನ್ನ ಆಸಕ್ತಿ ಹಾಗೂ ಕ್ರಿಯಾಶೀಲತೆ ಗುರುತಿಸಿ ಅವರು ಕಾಲೇಜು ಶುಲ್ಕವನ್ನೂ ಭರಿಸಿದ್ದಾರೆ. ಅವರಿಗೆ ನಾನು ಎಂದೆಂದಿಗೂ ಋಣಿಯಾಗಿರಬೇಕು. ಆದರೆ, ಕೊರೊನಾ ನಮ್ಮ ಬದುಕಿನಲ್ಲಿ ಅಲ್ಲೋಲಕಲ್ಲೋಲ ಸೃಷ್ಟಿಸಿದೆ. ವಕೀಲನಾಗಿ ಮಹಾನ್ ತಪ್ಪು ಮಾಡಿದೆ ಎಂದೆನಿಸುತ್ತಿದೆ. ಕನಿಷ್ಠ ದ್ವಿತೀಯ ದರ್ಜೆ ಸಹಾಯಕನ ವೃತ್ತಿ ಸಿಕ್ಕರೂ ಹೊರಟು ಬಿಡುವ ಹಂತಕ್ಕೆ ತಲುಪಿದ್ದೇನೆ.
ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿದೆಯೇ?
ಹಿರಿಯ ವಕೀಲರಿಗೆ ಕೆಲವು ಪ್ರಕರಣಗಳು ಸಿಕ್ಕಿವೆ ಎಂಬುದನ್ನು ಬಿಟ್ಟರೆ ನಮಂತಹ ಯುವ ವಕೀಲರಿಗೆ ಏನೂ ಸಿಕ್ಕಿಲ್ಲ. ಅದರಿಂದ ಅನುಕೂಲವೂ ಆಗಿಲ್ಲ. ನ್ಯಾಯಾಲಯಗಳಲ್ಲಿ ಇಂಟರ್‌ನೆಟ್‌ಗೆ ಬಿಎಸ್‌ಎನ್‌ಎಲ್ ಬಳಕೆ ಮಾಡುತ್ತಿರುವುದರಿಂದ ನೆಟ್‌ವರ್ಕ್ ಮತ್ತು ವೇಗದ ಸಮಸ್ಯೆಯಿದೆ. ಲೋಕ ಅದಾಲತ್‌ನಲ್ಲಿ ಒಂದು ಪ್ರಕರಣದ ಸಂಧಾನ ನಡೆಸಲು ನೆಟ್‌ವರ್ಕ್ ಸಮಸ್ಯೆಯಿಂದಾಗಿ ಐದು ತಾಸು ಹಿಡಿಯಿತು. ಇದು ವರ್ಚುವಲ್ ಕಲಾಪದ ಸ್ಥಿತಿ!
ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗುತ್ತದೆ ಎನಿಸುತ್ತದೆಯೇ?
ಒಂದು ವಾರದ ಹಿಂದೆ ನಿರ್ಬಂಧಗಳನ್ನು ವಿಧಿಸಿ, ಭೌತಿಕ ನ್ಯಾಯಾಲಯಗಳನ್ನು ಆರಂಭಿಸಲಾಗಿದೆ. ಬೆಳಿಗ್ಗೆ ಹಾಗೂ ಮಧ್ಯಾಹ್ನ ತಲಾ 15 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತಿದೆ. ಸಾಕಷ್ಟು ನಿರ್ಬಂಧಗಳನ್ನು ಹಾಕಿರುವುದರಿಂದ ಕಕ್ಷಿದಾರರು ಮುಕ್ತವಾಗಿ ಕಲಾಪ ವೀಕ್ಷಿಸಲು ಸಾಧ್ಯವಾಗುತ್ತಿಲ್ಲ. ಇದರಿಂದ ಕಕ್ಷಿದಾರರು ವಕೀಲರನ್ನು ನಂಬುತ್ತಿಲ್ಲ. ಶುಲ್ಕವನ್ನೂ ನೀಡುತ್ತಿಲ್ಲ. ಒಂದು ರೀತಿಯಲ್ಲಿ ವಕೀಲರು ಮತ್ತು ಕಕ್ಷಿದಾರರ ನಡುವೆ ಕಂದಕ ಸೃಷ್ಟಿಯಾಗುತ್ತಿದೆ. ಇದೆಲ್ಲದರ ಮಧ್ಯೆ, ಕೊರೊನಾ ಪ್ರಕರಣಗಳು ಹೆಚ್ಚುತ್ತಿರುವುದನ್ನು ನೋಡಿದರೆ ಪರಿಸ್ಥಿತಿ ಸುಧಾರಿಸುತ್ತದೆ ಎನ್ನುವ ನಂಬಿಕೆಯೇ ಹುಟ್ಟುತ್ತಿಲ್ಲ.
ಯುವ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?
ಕೊರೊನಾ ವಿಶೇಷ ಸಂದರ್ಭವಾಗಿರುವುದರಿಂದ ಸರ್ಕಾರಿ ನೌಕರರು ಆಕಸ್ಮಿಕವಾಗಿ ಸಾವನ್ನಪ್ಪಿದರೆ ಒಂದಷ್ಟು ಆರ್ಥಿಕ ಸಹಾಯವನ್ನು ಕುಟುಂಬಕ್ಕೆ ಮಾಡಲಾಗುತ್ತದೆ. ಅದೇ ರೀತಿ ಕನಿಷ್ಠ ಪಕ್ಷ ವಿಮಾ ಸೌಲಭ್ಯವನ್ನಾದರೂ ವಕೀಲರ ಸಮುದಾಯಕ್ಕೆ ವಿಸ್ತರಿಸಬೇಕು. ಈಚೆಗೆ ಜಿಲ್ಲಾ ಹೆಚ್ಚುವರಿ ನ್ಯಾಯಾಧೀಶರು ಮತ್ತು ಹೆಚ್ಚುವರಿ ಸರ್ಕಾರಿ ಅಭಿಯೋಜಕರ ಹುದ್ದೆಗೆ ಪರೀಕ್ಷೆ ನಡೆಸಲಾಯಿತು. ಇದಕ್ಕೆ ಸಿದ್ಧತೆ ನಡೆಸಲು ಕನಿಷ್ಠ ಪುಸ್ತಕಗಳನ್ನೂ ಖರೀದಿಸಲಾಗದ ಸ್ಥಿತಿ ನಮ್ಮದಾಗಿತ್ತು. ಅಸಹಾಯಕತೆ, ಅನಿಶ್ಚಿತತೆ, ನಿರಾಸೆ ನಮ್ಮಂತಹ ಯುವ ವಕೀಲರಲ್ಲಿ ಸಾಮಾನ್ಯವಾಗಿ ಬಿಟ್ಟಿದೆ.