[ಅನುಸಂಧಾನ] ನಮ್ಮ ಸಮುದಾಯದ ಮಟ್ಟಿಗೆ ಹಾಸನ ಜಿಲ್ಲೆಯಲ್ಲಿ ಕಾನೂನು ಶಿಕ್ಷಣ ಪಡೆದ ಮೊದಲಿಗ ನಾನೇ: ಎಚ್‌ ಕೆ ಕುಮಾರಸ್ವಾಮಿ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
H K Kumaraswamy
H K KumaraswamyPresident, JDS State Unit

ಶಿಕ್ಷಕರಾಗಿದ್ದಾಗಲೇ ವಕೀಲಿಕೆಯ ಕನಸು ಕಂಡು ಅದು ಈಡೇರುತ್ತಲೇ ರಾಜಕಾರಣಕ್ಕೆ ಹೊರಳಿ ಅಲ್ಲಿ ಸೋಲು-ಗೆಲುವುಗಳನ್ನು ಸಮಾನವಾಗಿ ಕಂಡವರು ಜೆಡಿಎಸ್‌ ರಾಜ್ಯ ಘಟಕದ ಅಧ್ಯಕ್ಷ ಎಚ್‌ ಕೆ ಕುಮಾರಸ್ವಾಮಿ. ಖಾಸಗಿ ಅನುದಾನಿತ ಶಾಲೆಯಲ್ಲಿ ಶಿಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಲೇ ಸಂಜೆ ಕಾನೂನು ಪದವಿ ಕಾಲೇಜಿನಲ್ಲಿ ಎಲ್‌ಎಲ್‌ಬಿ ಪದವಿ ಪೂರೈಸಿ, ವಕೀಲಿಕೆಯ ಜೊತೆಗೆ ಹಾಸನ ಜಿಲ್ಲಾ ವಕೀಲರ ಸಂಘದ ಕಾರ್ಯದರ್ಶಿ ಆಗಿಯೂ ಕುಮಾರಸ್ವಾಮಿ ಕೆಲಸ ಮಾಡಿದವರು.

ಸಕ್ರಿಯ ರಾಜಕಾರಣದಲ್ಲಿ ನಾಲ್ಕೂವರೆ ದಶಕಗಳನ್ನು ಪೂರೈಸಿರುವ ಹಾಸನ ಜಿಲ್ಲೆಯ ಸಕಲೇಶಪುರ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಕುಮಾರಸ್ವಾಮಿ ಅವರು ಆರು ಬಾರಿ ವಿಧಾನ ಸಭೆ ಪ್ರವೇಶಿಸಿದ್ದಾರೆ. ಮಾಜಿ ಪ್ರಧಾನಿ ಹಾಗೂ ಜೆಡಿಎಸ್‌ ರಾಷ್ಟ್ರೀಯ ಅಧ್ಯಕ್ಷ ಎಚ್‌ ಡಿ ದೇವೇಗೌಡರ ಬಳಿಕ ಜೆಡಿಎಸ್‌ನಲ್ಲಿ ಅತಿಹೆಚ್ಚು ಬಾರಿ ಚುನಾಯಿತರಾದ ದಾಖಲೆ ಹೊಂದಿರುವವರು ಕುಮಾರಸ್ವಾಮಿ. ದಲಿತ, ರೈತ ಹೋರಾಟಗಳ ಮೂಲಕ ಬೆಳೆದು ಬಂದ ಕುಮಾರಸ್ವಾಮಿ ಅವರು ಇಂದಿನ ಹೋರಾಟದ ರೂಪುರೇಷೆ ಬದಲಾಗಬೇಕು ಎಂಬುದು ಸೇರಿದಂತೆ ಹಲವು ವಿಚಾರಗಳ ಬಗ್ಗೆ “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಹಾಸನದ ವೆಂಕಟೇಶ್ವರ ವಿದ್ಯಾ ಸಂಸ್ಥೆಯ ಅನುದಾನಿತ ಪ್ರೌಢಶಾಲೆಯಲ್ಲಿ ನಾನು ಶಿಕ್ಷಕನಾಗಿದ್ದೆ. ಎಲ್ಲದಕ್ಕೂ ಕಾನೂನಿನ ತಿಳಿವಳಿಕೆ ಅಗತ್ಯ ಎಂಬುದಕ್ಕಾಗಿ ಇಷ್ಟಪಟ್ಟು ಕಾನೂನು ಓದಲು ಆರಂಭಿಸಿದೆ. ಹಾಸನದ ಎಂ ಕೃಷ್ಣ ಸಂಜೆ ಕಾನೂನು ಕಾಲೇಜಿನಲ್ಲಿ 1978-81ರಲ್ಲಿ ಕಾನೂನು ಪದವಿ ಪಡೆದೆ. ಇಡೀ ಜಿಲ್ಲೆಯಲ್ಲಿ ನಮ್ಮ ಪರಿಶಿಷ್ಟ ಜಾತಿ ಮಟ್ಟಿಗೆ ಕಾನೂನು ಶಿಕ್ಷಣ ಪಡೆದವರಲ್ಲಿ ನಾನೇ ಮೊದಲಿಗ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ದೇಶ-ವಿದೇಶಗಳ ಕಾನೂನುಗಳನ್ನು ಅಧ್ಯಯನ ಮಾಡಿ ಡಾ. ಅಂಬೇಡ್ಕರ್‌ ಅವರು ಸಂವಿಧಾನ ರೂಪಿಸಿದ್ದಾರೆ. ನಮ್ಮ ಸಮಾಜದಲ್ಲಿನ ಸಾಕಷ್ಟು ಸಮಸ್ಯೆಗಳಿಗೆ ಕಾನೂನಿನ ಮೂಲಕ ಉತ್ತರ ಕಂಡುಕೊಳ್ಳಬಹುದು ಎಂಬುದರ ಜೊತೆಗೆ ಸಮಯ ದೂಡುವ ಉದ್ದೇಶವೂ ಅದರಲ್ಲಿ ಅಡಗಿತ್ತು.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ಸರ್ಕಾರಿ ಅಭಿಯೋಜಕರಾದ ಜಿ ಎಲ್‌ ಬೋರಯ್ಯ ಅವರ ಬಳಿ ಪ್ರಾಕ್ಟೀಸ್‌ ಆರಂಭಿಸಿದೆ. ಅನಂತರಾಮಯ್ಯ, ತಿಮ್ಮೇಗೌಡ, ಚಿಕ್ಕೇಗೌಡ, ನರಸಿಂಹಮೂರ್ತಿ, ನಂಜುಂಡಯ್ಯ, ಎಂ ಸಿ ದೊಡ್ಡೇಗೌಡರಂಥ ಘಟಾನುಘಟಿಗಳು ಹಾಸನ ಜಿಲ್ಲಾ ವಕೀಲರ ಸಂಘದಲ್ಲಿದ್ದರು. ಅವರೆಲ್ಲರೂ ನಮಗೆ ಗುರು ಸಮಾನರು. ನಾಲ್ಕು ವರ್ಷಗಳ ವಕೀಲಿಕೆಯಲ್ಲಿ ಎರಡು ವರ್ಷಗಳ ಕಾಲ ಸಂಘದ ಕಾರ್ಯದರ್ಶಿ ಆಗಿಯೂ ನಾನು ಕೆಲಸ ಮಾಡಿದ್ದೆ. ಸಂಘಟನೆಗಳ ಜೊತೆ ನಾವು ಹೆಚ್ಚು ಗುರುತಿಸಿಕೊಂಡಿದ್ದರಿಂದ ರೈತ ಸಂಘ, ದಲಿತ ಸಂಘಟನೆಯ ಪ್ರಕರಣಗಳೇ ಹೆಚ್ಚು ನಮ್ಮ ಬಳಿ ಬರುತ್ತಿದ್ದವು. ಎಲ್ಲ ರೀತಿಯಲ್ಲೂ ಕಷ್ಟವಿತ್ತು. ಹೇಳಿಕೊಳ್ಳುವಂಥ ಸಂಪಾದನೆ ಇರುತ್ತಿರಲಿಲ್ಲ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಸಕಲೇಶಪುರ ತಾಲ್ಲೂಕಿನ ಎಸಳೂರು ಗ್ರಾಮದ ದಲಿತ ವ್ಯಕ್ತಿಯ ಮೇಲೆ ಕೊಲೆ ಆರೋಪದ ಹಿನ್ನೆಲೆಯಲ್ಲಿ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ 302ರ ಅಡಿ ಪ್ರಕರಣ ದಾಖಲಿಸಲಾಗಿತ್ತು. ಆ ಪ್ರಕರಣ ನಡೆಸಿ, ಅದನ್ನು ಗೆದ್ದಿದ್ದೆ. ಇಂಥ ಹಲವಾರು ಸಣ್ಣಪುಟ್ಟ ಪ್ರಕರಣ ನಡೆಸಿದ್ದೇನೆ.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

1985ರಲ್ಲಿ ವಿಧಾನಸಭೆ ಚುನಾವಣೆ ನಡೆಯುವುದಿತ್ತು. ಅಂದಿನ ಬೇಲೂರು ವಿಧಾನಸಭಾ ಕ್ಷೇತ್ರ ಪ್ರತಿನಿಧಿಸುತ್ತಿದ್ದ ಮಲ್ಲೇಶ್‌ ಅವರಿಗೆ ಜನತಾ ಪಕ್ಷದಿಂದ ಟಿಕೆಟ್‌ ಕೊಡಲಿಲ್ಲ. ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರೇ ಜನತಾ ಪಕ್ಷದ ಅಧ್ಯಕ್ಷರಾಗಿದ್ದರು. ವಕೀಲ ಮಿತ್ರರಾದ ಎಂ ಜಿ ದೊಡ್ಡೇಗೌಡರು ಜನತಾ ಪಕ್ಷದ ಜಿಲ್ಲಾ ಘಟಕದ ಅಧ್ಯಕ್ಷರಾಗಿದ್ದರು. ಅವರೇ ಗೌಡರ ಜೊತೆ ಮಾತುಕತೆ ನಡೆಸಿದರು. ಗೌಡರಿಗೂ ನಾನೂ ಇಷ್ಟವಾಗಿ ಟಿಕೆಟ್‌ ನೀಡಿದರು. ಜನರೂ ಆಶೀರ್ವಾದ ಮಾಡಿದರು. ಐದು ಬಾರಿ ಬೇಲೂರು ಕ್ಷೇತ್ರದಲ್ಲಿ ಸ್ಪರ್ಧೆ ಮಾಡಿ ಮೂರು ಬಾರಿ ಹಾಗೂ ಸಕಲೇಶಪುರದಲ್ಲಿ ಮೂರು ಬಾರಿ ಸ್ಪರ್ಧಿಸಿ ಮೂರು ಬಾರಿಯೂ ಗೆದ್ದಿದ್ದೇನೆ. ನಮ್ಮ ಪಕ್ಷದಲ್ಲಿ ದೇವೇಗೌಡರ ಬಳಿಕ ಅತಿಹೆಚ್ಚು ಬಾರಿ ಗೆದ್ದಿರುವುದು ನಾನೇ.

Q

ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಕಾನೂನು ರೂಪಿಸುವಾಗ, ತಿದ್ದುಪಡಿ ಮಾಡುವಾಗ ಕಾನೂನಿನ ಹಿನ್ನೆಲೆ ಇದ್ದರೆ ಬಹಳ ಅನುಕೂಲವಾಗುತ್ತದೆ. ಇದರ ಜೊತೆಗೆ ಜನಪ್ರತಿನಿಧಿಗಳ ಬಳಿಗೆ ಸಾಮಾನ್ಯವಾಗಿ ಸಾಕಷ್ಟು ಬಡವರು, ದಲಿತರು ಮತ್ತು ಅಸಹಾಯಕರು ಆಸ್ತಿ ವಿವಾದಗಳು, ಕೌಟುಂಬಿಕ ವಿಚಾರಗಳು ಸೇರಿದಂತೆ ವಿವಿಧ ಸಮಸ್ಯೆಗಳನ್ನು ತರುತ್ತಾರೆ. ಅವುಗಳನ್ನು ಬಗೆಹರಿಸುವ ಕುರಿತು ಸ್ಥಳದಲ್ಲೇ ಅವರಿಗೆ ಮಾಹಿತಿ ನೀಡುತ್ತೇನೆ. ಕಾನೂನಿನ ವ್ಯಾಪ್ತಿಯಲ್ಲಿ ಸಮಸ್ಯೆಗೆ ಪರಿಹಾರ ಸೂಚಿಸುವುದಾದರೆ ನಾನೇ ಹೇಳಿ ಬಿಡುತ್ತೇನೆ. ವಿನಾ ಕಾರಣ ಜನರನ್ನು ಅಲೆಯುವಂತೆ ಮಾಡುವುದಿಲ್ಲ. ಕಾನೂನು ವ್ಯಾಪ್ತಿಗೆ ಒಳಪಡದ ವಿಚಾರವಾದರೆ ಮಾನವೀಯ ನೆಲೆಗಟ್ಟಿನಲ್ಲಿ ಸಮಸ್ಯೆ ಪರಿಹರಿಸುವಂತೆ ಅಧಿಕಾರಿಗಳಿಗೆ ಸೂಚನೆ ಕೊಡುತ್ತೇನೆ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದೆನಿಸಿದೆಯೇ?

A

ವಕೀಲನಾಗಿ ಕಾನೂನು ವ್ಯಾಪ್ತಿಯಲ್ಲಿ ಮಾತ್ರ ಕೆಲಸ ಮಾಡಬೇಕಾಗುತ್ತದೆ. ಕಾನೂನು ಕ್ಷೇತ್ರದ ವ್ಯಾಪ್ತಿಯು ಸೀಮಿತವಾಗಿದ್ದು, ಹೆಚ್ಚು ಜನರಿಗೆ ನೆರವಾಗಲು ಸಾಧ್ಯವಾಗುವುದಿಲ್ಲ. ಇದೇ ಮಾತನ್ನು ರಾಜಕಾರಣಕ್ಕೆ ಹೇಳಲಾಗದು. ಗಣಿ, ರಿಯಲ್‌ ಎಸ್ಟೇಟ್‌ ಉದ್ಯಮಿಗಳು, ದೊಡ್ಡ ದೊಡ್ಡ‌ ಶಿಕ್ಷಣ ಸಂಸ್ಥೆಗಳ ಮಾಲೀಕರು ರಾಜಕಾರಣ ಪ್ರವೇಶಿಸಿ, ರಾಜಕೀಯವನ್ನು ನಿಯಂತ್ರಿಸುವ ಮಟ್ಟಕ್ಕೆ ಬೆಳೆದಿರುವುದನ್ನು ನೋಡಿದರೆ ಬೇಸರವಾಗುತ್ತದೆ. ನಮ್ಮ ಆರಂಭದ ವರ್ಷಗಳಲ್ಲಿ ರಾಜಕಾರಣಿಗಳಿಗೆ ಗೌರವ ಇತ್ತು.

Related Stories

No stories found.
Kannada Bar & Bench
kannada.barandbench.com