ವಕೀಲಿಕೆಯ ಸನ್ನದು ಬಂದಾಗ ನಾನು ಜೈಲಿನಲ್ಲಿದ್ದೆ: ಬಿ ಆರ್ ಪಾಟೀಲ್

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
ವಕೀಲಿಕೆಯ ಸನ್ನದು ಬಂದಾಗ ನಾನು ಜೈಲಿನಲ್ಲಿದ್ದೆ: ಬಿ ಆರ್ ಪಾಟೀಲ್
B R Patil

ವಿದ್ಯಾರ್ಥಿ ಜೀವನದಿಂದಲೇ ಹೋರಾಟಗಳಲ್ಲಿ ಗುರುತಿಸಿಕೊಂಡವರು ಭೋಜರಾಜ್‌ ರಾಮಚಂದ್ರಪ್ಪ ಪಾಟೀಲ್ ಅಲಿಯಾಸ್‌ ಬಿ ಆರ್‌ ಪಾಟೀಲ್‌.‌ ಇಂದಿರಾ ಗಾಂಧಿಯವರು ಪ್ರಧಾನಿಯಾಗಿದ್ದ ಸಂದರ್ಭದಲ್ಲಿ ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿ ಜೈಲು ಸೇರಿದ್ದ ಪಾಟೀಲರ ಹೋರಾಟದ ಬದ್ಧತೆಯಲ್ಲಿ ಅಂದಿಗೂ-ಇಂದಿಗೂ ಯಾವುದೇ ಬದಲಾವಣೆಯಾಗಿಲ್ಲ. ಕೇಂದ್ರ ಸರ್ಕಾರದ ಕೃಷಿ ಕಾಯಿದೆ ವಿರೋಧಿಸಿ ದೆಹಲಿಯಲ್ಲಿ ವಿವಿಧ ರಾಜ್ಯಗಳ ರೈತರು ನಡೆಸುತ್ತಿರುವ ಹೋರಾಟದಲ್ಲಿ ಪಾಲ್ಗೊಂಡು ಈಚೆಗೆ ವಾಪಸ್‌ ಬಂದಿದ್ದಾರೆ. ಸಾಮಾಜಿಕ ಕಾರ್ಯಕರ್ತರಾದ ಮೇಧಾ ಪಾಟ್ಕರ್‌, ಜಲ ತಜ್ಞ ರಾಜೇಂದ್ರ ಸಿಂಗ್‌ ಸೇರಿದಂತೆ ಹಲವರ ಜೊತೆ ಇಂದಿಗೂ ನಿಕಟ ಸಂಪರ್ಕ ಇಟ್ಟುಕೊಂಡು ಚಳವಳಿ, ಆಂದೋಲನಗಳಲ್ಲಿ ಸಕ್ರಿಯವಾಗಿದ್ದಾರೆ.

ಇನ್ನು, ವಕೀಲರಾಗಿಯೇ ಮುಂದುವರಿಯುವ ಇರಾದೆ ಹೊಂದಿದ್ದ ಬಿ ಆರ್‌ ಪಾಟೀಲ್‌ ಅವರು ಎಸ್‌ ಆರ್‌ ಬೊಮ್ಮಾಯಿ ಅವರ ಒತ್ತಾಯ ಮೇರೆಗೆ ರಾಜಕೀಯಕ್ಕೆ ಪ್ರವೇಶಿಸಿದವರು. ಮೂರು ಬಾರಿ ಶಾಸಕರಾಗಿ, ಒಮ್ಮೆ ವಿಧಾನ ಪರಿಷತ್‌ ಸದಸ್ಯರಾಗಿರುವ‌ ಅವರು ಇಂದಿನ ರಾಜಕಾರಣದಲ್ಲಿ ಹಣ, ಜಾತಿ ಪ್ರಾಬಲ್ಯ ವ್ಯಾಪಕವಾಗಿರುವುದರ ಬಗ್ಗೆ ಬೇಸರ ವ್ಯಕ್ತಪಡಿಸುತ್ತಾರೆ. ಜನ ಸೇವೆಗೆ ರಾಜಕೀಯ ಕ್ಷೇತ್ರ ಉತ್ತಮ ಎನ್ನುವ ಅವರು ವಕೀಲಿಕೆಯಲ್ಲಿಯೇ ಮುಂದುವರೆದಿದ್ದರೆ ನೆಮ್ಮದಿಯ ಬದುಕು ಸಾಗಿಸಬಹುದಿತ್ತು ಎಂದು ಹೇಳಲು ಮರೆಯುವುದಿಲ್ಲ. ಹೀಗೆ, ಸಂಘರ್ಷದ ಹಾದಿಯಲ್ಲಿ ಬಲವಾದ ಹೆಜ್ಜೆ ಇಟ್ಟು ಬದುಕು ಕಟ್ಟಿದ ಬಿ ಆರ್‌ ಪಾಟೀಲ್‌ ಅವರು “ಬಾರ್‌ ಅಂಡ್‌ ಬೆಂಚ್‌” ಜೊತೆಗಿನ ಸಂದರ್ಶನದಲ್ಲಿ ನೆನಪಿನ ಅಂಗಳಕ್ಕೆ ಜಾರುತ್ತಲೇ ಹಲವು ಕುತೂಹಲಕಾರಿ ವಿಚಾರಗಳನ್ನು ಹಂಚಿಕೊಂಡರು.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಕಲಾ ವಿಭಾಗದಲ್ಲಿ ಪದವಿ ಪೂರೈಸಿದ ಮೇಲೆ ಕಾನೂನು ಪದವಿ ಪಡೆಯುವ ಆಸೆಯಿಂದ ಅಂದಿನ ಗುಲ್ಬರ್ಗಾ ಇಂದಿನ ಕಲಬುರ್ಗಿಯ ಎಸ್‌ ಎಸ್‌ ಲಾಹೋಟಿ ಕಾನೂನು ಕಾಲೇಜಿಗೆ ಸೇರಿದೆ. 1972ರಲ್ಲಿ ಕಾನೂನು ಕಾಲೇಜು ಸೇರಿ 1975ರಲ್ಲಿ ಕಾನೂನು ಶಿಕ್ಷಣ ಪೂರೈಸಿದೆ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ಕಾಲೇಜಿನ ದಿನಗಳಲ್ಲಿ ವಿದ್ಯಾರ್ಥಿ ಸಂಘಟನೆಯ ಉಪಾಧ್ಯಕ್ಷ, ಅಧ್ಯಕ್ಷನೂ ಆಗಿದ್ದೆ. ರೈತ ಸಂಘದ ನಾಯಕರಾದ ಪ್ರೊ. ನಂಜುಂಡ ಸ್ವಾಮಿ ಅವರು ಎಲ್ಲಿಂದ ನನ್ನ ಮಾಹಿತಿ ಕಲೆಹಾಕಿದ್ದರೋ ಗೊತ್ತಿಲ್ಲ. ನನಗೆ ತಮ್ಮದೇ ಆದ ಟಿಪಿಕಲ್‌ ಶೈಲಿಯಲ್ಲಿ ಇನ್‌ಲ್ಯಾಂಡ್‌ ಪತ್ರದಲ್ಲಿ ಕೆಂಪು ಶಾಹಿಯಲ್ಲಿ“ನೀವು ಜೆಪಿ (ಜಯಪ್ರಕಾಶ್‌ ನಾರಾಯಣ್‌) ಚಳವಳಿಯಲ್ಲಿ ಭಾಗವಹಿಸುವವರಾ? ಭಾಗವಹಿಸುವುದಾದರೆ ತಿಳಿಸಿ” ಎಂದು ಒಂದೇ ಒಂದು ಸಾಲಿನ ಪತ್ರ ಬರೆದಿದ್ದರು. ಇದರಿಂದ ಪುಳಕಿತನಾದ ನಾನು ಸ್ನೇಹಿತರು, ಹಿತೈಷಿಗಳಿಗೆಲ್ಲರಿಗೂ ಆ ಪತ್ರ ತೋರಿಸಿದ್ದೆ. ಎಲ್ಲರೂ ಉತ್ಸಾಹಿತರಾಗಿದ್ದರು. ಆಗ ಅಂಚೆಯೂ ಸೆನ್ಸಾರ್‌ ಆಗಿತ್ತು. ಈ ವೇಳೆಗೆ ನಾವು ಗುಲ್ಬರ್ಗಾದಲ್ಲಿ ವಿದ್ಯಾರ್ಥಿ ಕಾರ್ಯನಿರ್ವಹಣಾ ಸಮಿತಿ ರಚಿಸಿಕೊಂಡಿದ್ದೆವು. ನಾನೇ ಅದರ ಅಧ್ಯಕ್ಷನಾಗಿದ್ದೆ. ಈ ಮಾಹಿತಿ ಪಡೆದ ಪೊಲೀಸರು ಹೋರಾಟದಲ್ಲಿ ಭಾಗವಹಿಸುವ ಕುರಿತು ನಮ್ಮಿಂದ ಮಾಹಿತಿ ಪಡೆದುಕೊಂಡರು. ನಾವು ಪೊಲೀಸರಿಗೆ ಹೋರಾಟ ನಡೆಸುವುದಾಗಿ ಹೇಳಿ, ಸಕ್ರಿಯವಾಗಿ ಜೆಪಿ ಆಂದೋಲನಕ್ಕೆ ಧುಮುಕಿದೆವು.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ಎಸ್‌ ಎಸ್‌ ಪಾಟೀಲ್‌ ಕುಳಗೇರಿ ನನ್ನ ಸೀನಿಯರ್. ಹನುಮಂತರಾವ್‌ ದೇಸಾಯಿ ಅವರ ಬಳಿ ಕ್ರಿಮಿನಲ್‌ ಮೊಕದ್ದಮೆಗಳ ಕುರಿತು ಪ್ರಾಕ್ಟೀಸ್‌ ಮಾಡುತ್ತಿದ್ದೆ. ಅವರೂ ಒಮ್ಮೆ ಶಾಸಕರಾಗಿದ್ದರು.‌ ನನ್ನ ಸನ್ನದು ಬಂದಿದ್ದು ಗುಲಬರ್ಗಾ ಸೆಂಟ್ರಲ್‌ ಜೈಲಿಗೆ. ಕಾಲೇಜು ಶಿಕ್ಷಣ ಮುಗಿದ ತಕ್ಷಣ ಬೆಂಗಳೂರಿನಲ್ಲಿ ಹೈಕೋರ್ಟ್‌ಗೆ ತೆರಳಿ ನೋಂದಣಿ ಮಾಡಿಸಿದ್ದೆ. ಅದು ಬರುವುದಕ್ಕೆ 15 ದಿನಗಳಾಗಿತ್ತು. ಈ ಸಮಯಕ್ಕಾಗಲೇ ನಾನು ಜೈಲಿನಲ್ಲಿದೆ. ಅದನ್ನು ಜೈಲಿನಲ್ಲಿದ್ದೇ ಪಡೆದುಕೊಂಡೆ.

Q

ಜೈಲಿಗೆ ಹೋಗುವ ತಪ್ಪು ಏನು ಮಾಡಿದ್ದಿರಿ? ಅಲ್ಲಿಂದ ಹೊರಬಂದಿದ್ದು ಹೇಗೆ?

A

ಇಂದಿರಾ ಗಾಂಧಿಯವರು ದೇಶದ ಮೇಲೆ ಹೇರಿದ್ದ ತುರ್ತು ಪರಿಸ್ಥಿತಿ ವಿರೋಧಿಸಿದ್ದಕ್ಕೆ ಇಡೀ ಭಾರತದಲ್ಲಿ ಡಿಫೆನ್ಸ್‌ ಇಂಡಿಯಾ ರೂಲ್‌ ಪ್ರಕಾರ ನನಗೆ ಮತ್ತು ಕುಸುಮಾಕರ ದೇಸಾಯಿ (ವಿಧಾನ ಪರಿಷತ್‌ ಸದಸ್ಯೆಯಾಗಿ ವಿಧಿವಶರಾದ ಸರಿತಾ ದೇಸಾಯಿ ಅವರ ಪತಿ) ಅವರಿಗೆ ಮಾತ್ರ ಗರಿಷ್ಠ ಆರು ತಿಂಗಳ ಜೈಲು ಶಿಕ್ಷೆ ವಿಧಿಸಲಾಗಿತ್ತು. ನಾವು ಜೈಲು ಶಿಕ್ಷೆ ಪೂರೈಸಿ ಅಲ್ಲಿಂದ ಹೊರಬಂದೆವು.

ಕುಸುಮಾಕರ ದೇಸಾಯಿ ಅವರು ಅಕ್ಟೋಬರ್‌ 2ರ ಗಾಂಧಿ ಜಯಂತಿಯಂದು ಸ್ವಯಂಪ್ರೇರಣೆಯಿಂದ ಹೋರಾಟ ಮಾಡಿ ಬಂಧನಕ್ಕೆ ಒಳಗಾಗಿದ್ದರು. ನಾನು ಜಯಪ್ರಕಾಶ್‌ ನಾರಾಯಣ್‌ ಅವರ ಹುಟ್ಟಿದ ದಿನವಾದ ಅಕ್ಟೋಬರ್‌ 11ರಂದು ಹೋರಾಟದ ದಿನವನ್ನಾಗಿ ಆಯ್ಕೆ ಮಾಡಿಕೊಂಡಿದ್ದೆ. ನನ್ನ ನಿರ್ಧಾರವನ್ನು ಯಾರಿಗೂ ತಿಳಿಸಿರಲಿಲ್ಲ. ಜನತಾ ಪಕ್ಷದ ನಾಯಕರಾಗಿದ್ದ ಈಗ ಅಫಜಲಪುರದ ಶಾಸಕರಾಗಿರುವ ಎಂ ಆರ್‌ ಪಾಟೀಲ್‌ ಅವರ ಬಳಿ ವಿಷಯ ತಿಳಿಸಿದೆ. ನಾನು ಮತ್ತು ಅವರು ಮತ್ತೊಬ್ಬರು ಸಮಾಜವಾದಿ ನಾಯಕರಾದ ಡಾ. ದೇವಳ್ಗಾಂವ್ಕರ್‌ ಅವರ ಬಳಿಗೆ ತೆರಳಿದೆವು. ಮೂವರು ಕೂಡಿ ಕಲಬುರ್ಗಿಯ ಸೂಪರ್‌ ಮಾರ್ಕೆಟ್‌ ಬಳಿ ತೆರಳಿದೆವು. ಅಲ್ಲಿ ನನ್ನ ಹಣೆಗೆ ಕುಂಕುಮ ಹಚ್ಚಿ, ಹೂವಿನ ಹಾರ ಹಾಕಿ ಅವರು ನನ್ನ ಬಿಟ್ಟುಬಿಟ್ಟರು. ಅಲ್ಲಿಂದ ನಾನು ಜೈಕಾರ, ಘೋಷಣೆ ಹಾಕಿಕೊಂಡು ಒಬ್ಬನೇ ಹೋಗುತ್ತಿರಬೇಕಾದರೆ ನಗರದ ಮಧ್ಯದಲ್ಲಿ ಚೌಕ್‌ ಪೊಲೀಸ್‌ ಠಾಣೆಯ ಬಳಿ ನನ್ನನ್ನು ಪೊಲೀಸರು ಬಂಧಿಸಿದ್ದರು.

ನಮ್ಮನ್ನು 80 ಸೀಟುಗಳ ದೊಡ್ಡ ಬ್ಯಾರಕ್‌ನಲ್ಲಿ ಇಡಲಾಗಿತ್ತು. ನಮ್ಮ ಜೊತೆ ಒಬ್ಬರು ನಕ್ಸಲ್‌, ಒಬ್ಬರು ಆನಂದ ಮಾರ್ಗಿ, ಜಮಾತೆ ಇಸ್ಲಾಂ ಸದಸ್ಯರೊಬ್ಬರು, ಇಬ್ಬರು ಆರ್‌ಎಸ್‌ಎಸ್‌ನವರು ಇದ್ದರು. ವಿಭಿನ್ನ ನೆಲೆಗಟ್ಟು, ವಿಚಾರಧಾರೆಯವರು ಒಂದೇ ಬ್ಯಾರಕ್‌ನಲ್ಲಿದ್ದರೂ ನಮ್ಮಲ್ಲಿ ಪ್ರೀತಿ, ವಿಶ್ವಾಸಕ್ಕೆ ಕೊರತೆ ಇರಲಿಲ್ಲ. ಆಮೇಲೆ ಜೆ ಎಚ್‌ ಪಟೇಲ್‌, ಎ ಕೆ ಸುಬ್ಬಯ್ಯ ಸೇರಿದಂತೆ ಹಲವು ರಾಜಕೀಯ ಕೈದಿಗಳು ನಮ್ಮ ಜೊತೆಗೂಡಿದರು. ವೀರೇಂದ್ರ ಪಾಟೀಲ, ಬಾಪುಗೌಡ ದರ್ಶನಾಪುರ ಅವರು "ಆರು ತಿಂಗಳ ಜೈಲು ಶಿಕ್ಷೆ ಜಾಸ್ತಿಯಾಯಿತು. ಇದನ್ನು ಪ್ರಶ್ನಿಸಿ ಮೇಲ್ಮನವಿ ಸಲ್ಲಿಸೋಣ" ಎಂದರು. ಆದರೆ, ಅದಕ್ಕೆ ನಾನು ಮತ್ತು ಕುಸುಮಾಕರ ದೇಸಾಯಿ ಅವರು ಒಪ್ಪಲಿಲ್ಲ. ನ್ಯಾಯಾಲಯದಲ್ಲಿ ನಾವು ಏನನ್ನು ಹೇಳಿದ್ದೇವೋ ಅದಕ್ಕೆ ಬದ್ಧವಾಗಿರುವುದರಿಂದ ಮೇಲ್ಮನವಿ ಸಲ್ಲಿಸುವುದಿಲ್ಲ ಎಂದು ಖಂಡತುಂಡವಾಗಿ ಹೇಳಿದ್ದೆವು.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ನಾನು ಜೈಲಿನಲ್ಲಿರುವಾಗ ಬೀದರ್‌ನ ಸಮಾಜವಾದಿ ಕಾಶಿನಾಥರಾವ್‌ ಬೇಲೂರೆ ಅವರ ಪರಿಚಯವಾಯಿತು. ವಿವಿಧ ಅಪರಾಧಗಳಿಗಾಗಿ ಹಲವರು ಜೈಲಿನಲ್ಲಿದ್ದರು. ಒಬ್ಬಾತ ಎಮ್ಮೆ ಕಳುವು ಮಾಡಿದ್ದಕ್ಕೆ ಆರು ತಿಂಗಳು ಜೈಲು ಶಿಕ್ಷೆಗೆ ಗುರಿಯಾಗಿದ್ದ. ಇದನ್ನು ಆಧರಿಸಿ ಬೇಲೂರೆ ಅವರು ನ್ಯಾಯಾಲಯಕ್ಕೆ ಪತ್ರ ಬರೆದಿದ್ದರು. ಜೈಲಿನಿಂದ ಬಿಡುಗಡೆಯಾದ ಬಳಿಕ ಎಮ್ಮೆ ಕಳವು ಮಾಡಿದ ಆರೋಪಿಯನ್ನು ಪ್ರತಿನಿಧಿಸುವಂತೆ ಸೂಚಿಸಿದ್ದರು. ಅದರಂತೆಯೇ ನಾನು ನ್ಯಾಯಾಲಯದ ಮೆಟ್ಟಿಲೇರಿದ್ದೆ. ಆಗ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರಾಗಿ ನಾವದಗಿ ಇದ್ದರು. ಈಗಿನ ಅಡ್ವೊಕೇಟ್‌ ಜನರಲ್‌ ಪ್ರಭುಲಿಂಗ ನಾವದಗಿ ಅವರ ತಂದೆ. ವಾದ-ಪ್ರತಿವಾದ ಆಲಿಸಿದ ನ್ಯಾಯಾಧೀಶರು ಬಳಿಕ ಎಮ್ಮೆ ಕಳುವು ಮಾಡಿದ್ದಾತನಿಗೆ ಆರು ತಿಂಗಳಿಂದ ಮೂರು ತಿಂಗಳಿಗೆ ಶಿಕ್ಷೆ ಕಡಿತ ಮಾಡಿದ್ದರು.

ಜೈಲಿನಲ್ಲಿ ನಮಗೆ ಅಡುಗೆ ಮಾಡುತ್ತಿದ್ದ ನಾಗಪ್ಪನ ಮೇಲೆ ಸುಮಾರು 80 ಮೊಕದ್ದಮೆಗಳು ಇದ್ದವು. ಆತ ವೃತ್ತಿಪರ ಅಪರಾಧಿಯಾಗಿದ್ದ. ಆತನ ವಿರುದ್ಧದ ಹಲವು ಪ್ರಕರಣಗಳನ್ನು ಉಚಿತವಾಗಿ ನಡೆಸಿದ್ದೆ.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ಮೊದಲಿನಿಂದಲೂ ರಾಜಕಾರಣದಲ್ಲಿದ್ದೆ. ತುರ್ತು ಪರಿಸ್ಥಿತಿಯ ಬಳಿಕ ಜನತಾ ಪಕ್ಷ ಶುರುವಾಯಿತು. ಅಲ್ಲಿ ನಾನು ಜಿಲ್ಲಾ ಪ್ರಧಾನ ಕಾರ್ಯದರ್ಶಿ, ಜಿಲ್ಲಾ ಯುವ ಘಟಕದ ಅಧ್ಯಕ್ಷ, ರಾಜ್ಯ ಕಾರ್ಯದರ್ಶಿಯಾಗಿದ್ದೆ. 1978ರಲ್ಲಿ ತಾಲ್ಲೂಕು ಬೋರ್ಡ್‌ ಸದಸ್ಯನಾಗಿ ಆಯ್ಕೆಯಾಗಿದ್ದೆ. ಎಲ್‌ಐಸಿ, ಕೆಇಬಿ, ನ್ಯಾಷನಲ್‌ ಇನ್ಯೂರೆನ್ಸ್‌ ಕಂಪೆನಿಗಳಿಗೆ ಕಾನೂನು ಸಲಹೆಗಾರನಾಗಿದ್ದೆ.

ಕಾನೂನು ವೃತ್ತಿಯಲ್ಲಿಯೇ ಮುಂದುವರಿಯುವ ಆಸೆ ನನಗಿತ್ತು. 1983ರಲ್ಲಿ ಆಳಂದದಿಂದ ಅಭ್ಯರ್ಥಿಯಾಗುವಂತೆ ಎಸ್‌ ಆರ್‌ ಬೊಮ್ಮಾಯಿ ಒತ್ತಾಯ ಮಾಡಿ ಟಿಕೆಟ್‌ ನೀಡಿದ್ದರು. ನನಗೆ ರಾಜಕೀಯ ವಿಜ್ಞಾನ ಬೋಧಿಸಿದ ನನ್ನ ಪ್ರೊಫೆಸರ್‌ ಬಿ ವಿ ಪಾಟೀಲ್ ಹೋಕಳೆ‌ ಅವರು ನನ್ನ ವಿರುದ್ಧ ಸ್ಪರ್ಧಿಸಿದ್ದರು. ಇಂದಿರಾ ಗಾಂಧಿಯವರು ನನ್ನ ಕ್ಷೇತ್ರದಲ್ಲಿ ಪ್ರಚಾರ ಮಾಡಿದ್ದರು. ಅದಾಗ್ಯೂ ನಾನು 3,500 ಮತಗಳಿಂದ ಚುನಾಯಿತನಾಗಿದ್ದೆ.

Q

ಕಾನೂನು ಶಿಕ್ಷಣ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಯಾವುದೇ ವಿಧೇಯಕ ಮತ್ತು ತಿದ್ದುಪಡಿ ಮಸೂದೆ ವಿಚಾರದ ಮೇಲೆ ಮಾತನಾಡುವಾಗ ಕಾನೂನಿನ ಹಿನ್ನೆಲೆ ಅತ್ಯಗತ್ಯ. ಈ ನಿಟ್ಟಿನಲ್ಲಿ ನನಗೆ ಕಾನೂನು ಶಿಕ್ಷಣ ತುಂಬಾ ನೆರವಾಗಿದೆ.

Q

ಈಗಲೂ ಕಾನೂನು ಸಲಹೆ ಮುಂದುವರೆಸಿದ್ದೀರಾ?

A

1982ರ ವರೆಗೂ ಕಾನೂನು ಚಟುವಟಿಕೆಗಳಲ್ಲಿ ತೊಡಗಿಕೊಂಡಿದ್ದೆ. ಈಗ ಇಲ್ಲ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದೆನಿಸಿದೆಯೇ?

A

ರಾಜಕಾರಣದಲ್ಲಿ ಅಂದಿದ್ದ ಮೌಲ್ಯ, ತತ್ವ ಸಿದ್ಧಾಂತ ಈಗ ಉಳಿದಿಲ್ಲ. ಹಣ, ಸ್ವಾರ್ಥ ರಾಜಕಾರಣ ವಿಜೃಂಭಿಸುತ್ತಿದೆ. ಇದನ್ನು ನೋಡಿದರೆ ಏತಕ್ಕಾಗಿ ರಾಜಕಾರಣಕ್ಕೆ ಬಂದೆನೋ ಅನಿಸುತ್ತದೆ. ಕನಿಷ್ಠ ಪಕ್ಷ ವಕೀಲಿಕೆಯಲ್ಲಿದ್ದರೆ ಜೀವನವನ್ನಾದರೂ ನೆಮ್ಮದಿಯಾಗಿ ನಡೆಸಬಹುದಿತ್ತು ಅನಿಸಿದ್ದುಂಟು. ಆದರೆ, ನಾನು ಜನಪರ ಹೋರಾಟಗಳ ಬಗ್ಗೆ ನಂಬಿಕೆ ಇಟ್ಟುಕೊಂಡಿದ್ದೇನೆ. ಅದಕ್ಕಾಗಿಯೇ ದೆಹಲಿಯಲ್ಲಿ ಕೇಂದ್ರ ಸರ್ಕಾರದ ಕೃಷಿ ಕಾಯಿದೆಗಳನ್ನು ವಿರೋಧಿಸಿ ನಡೆಯುತ್ತಿರುವ ಹೋರಾಟದಲ್ಲಿ ಭಾಗವಹಿಸಿ ಬಂದೆ. ಇದರ ಜೊತೆಗೆ ಸಾಮಾಜಿಕ ಹೋರಾಟಗಾರ್ತಿ ಮೇಧಾ ಪಾಟ್ಕರ್‌ ಅವರ ರಾಷ್ಟ್ರೀಯ ಜನಾಂದೋಲನ ಒಕ್ಕೂಟ (ಎನ್‌ಎಪಿಎಂ), ಜಲ ತಜ್ಞ ರಾಜೇಂದ್ರ ಸಿಂಗ್‌ ಅವರ ಜಲಸಂವರ್ಧನೆ, ಅಖಿಲ ಭಾರತ ಮಟ್ಟದಲ್ಲಿ ಸಮಾಜವಾದಿ ಕಾರ್ಯ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದೇನೆ.

Q

ವಕೀಲಿಕೆ ಮತ್ತು ರಾಜಕಾರಣದಲ್ಲಿ ಅತ್ಯಂತ ಪ್ರಿಯವಾದ ಕ್ಷೇತ್ರ ಯಾವುದು?

A

ಒಳ್ಳೆಯ ಕೆಲಸ ಮಾಡಲು ರಾಜಕಾರಣದಲ್ಲಿ ಸಾಕಷ್ಟು ಅವಕಾಶಗಳಿವೆ. ಆದರೆ, ವ್ಯವಸ್ಥೆ ಕಲುಷಿತಗೊಂಡಿದೆ. ಹಣ ಮತ್ತು ಜಾತಿ ಪ್ರಾಮುಖ್ಯತೆ ಪಡೆದುಕೊಂಡಿವೆ. ಜನರು ನಿರ್ಧಾರ ಮಾಡಬೇಕಿದೆ. ಜಯಪ್ರಕಾಶ್‌ ನಾರಾಯಣ್‌ ಅವರ ಸಂಪೂರ್ಣ ಕ್ರಾಂತಿ, ಪ್ರೊ. ನಂಜುಂಡ ಸ್ವಾಮಿ ಅವರ ನೇತೃತ್ವದಲ್ಲಿ ನಡೆದ ರೈತ ಸಂಘದ ಹೋರಾಟ, ತೀರ ಈಚೆಗೆ ಪೌರತ್ವ ತಿದ್ದುಪಡಿ ಕಾಯಿದೆ ವಿರೋಧಿ ಹೋರಾಟ, ಈಗ ದೆಹಲಿಯಲ್ಲಿ ರೈತ ಚಳವಳಿ ಆರಂಭವಾಗಿದೆ. ಇವುಗಳು ಯಾವ ರೂಪ ಪಡೆದುಕೊಳ್ಳುತ್ತವೆ ಎಂದು ಹೇಳಲಾಗದು.

Related Stories

No stories found.
Kannada Bar & Bench
kannada.barandbench.com