“ನ್ಯಾಯದಾನ ವಿಳಂಬವಾದಷ್ಟೂ ನ್ಯಾಯವನ್ನು ನಿರಾಕರಿಸಿದಂತೆ. ನ್ಯಾಯದಾನವನ್ನು ಕ್ಷಿಪ್ರಗೊಳಿಸುವಿಕೆಯಿಂದ ಸಮಾಜದಲ್ಲಿ ಸಾಕಷ್ಟು ಸಮಸ್ಯೆ ನಿವಾರಿಸಿ, ಆಡಳಿತ ಯಂತ್ರದ ವೇಗ ಹೆಚ್ಚಿಸಬಹುದು. ಇದುವೇ ಉತ್ತಮ ಸಮಾಜ ನಿರ್ಮಾಣಕ್ಕೆ ತಳಹದಿ” ಎಂಬುದು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಮಾಜಿ ಸಚಿವ ಎಚ್ ಕೆ ಪಾಟೀಲ್ ಅವರ ಖಚಿತ ನುಡಿಗಳು.
ಮೂರೂವರೆ ದಶಕಗಳಿಗೂ ಹೆಚ್ಚು ಕಾಲ ಸಕ್ರಿಯ ರಾಜಕಾರಣದಲ್ಲಿರುವ ಹನುಮಂತಗೌಡ ಕೃಷ್ಣೇಗೌಡ ಪಾಟೀಲರು ಧರ್ಮಸಿಂಗ್ ನೇತೃತ್ವದ ಸಮ್ಮಿಶ್ರ ಸರ್ಕಾರದಲ್ಲಿ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಕೇವಲ 11 ತಿಂಗಳ ಅವಧಿಯಲ್ಲಿ ಹಲವು ಮಹತ್ತರ ನೀತಿ-ನಿರೂಪಣೆ, ಸುಧಾರಣಾ ಕ್ರಮಗಳನ್ನು ಇಲಾಖೆಯ ವ್ಯಾಪ್ತಿಯಲ್ಲಿ ಕೈಗೊಂಡರು ಎಂಬುದು ಸುಲಭಕ್ಕೆ ಗೋಚರಿಸುವಂಥದ್ದು.
ದೇಶದಲ್ಲೇ ಪ್ರಥಮ ಬಾರಿಗೆ ಜಾರಿಗೆ ತಂದ ಉದ್ಯೋಗ, ಆಹಾರ ಭದ್ರತೆ ಮತ್ತು ಮಕ್ಕಳ ಹಕ್ಕುಗಳ ಕಾನೂನುಗಳು ರಾಷ್ಟ್ರೀಯ ನೀತಿಗಳಾಗಿವೆ. ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಬೆಳಗಾವಿಯ ಸುವರ್ಣಸೌಧದಲ್ಲಿ ಪ್ರಥಮ ಬಾರಿಗೆ ಅಧಿವೇಶನ ನಡೆದಿದ್ದು, ಬಳಿಕ ಪ್ರತಿವರ್ಷ ಅಲ್ಲಿ ಅಧಿವೇಶನ ನಡೆಸುವುದು ನಿಯಮವಾಗಿ ಬದಲಾಗಿದೆ.
ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆ (ಕಿಲ್ಪಾರ್), ವಕೀಲರ ಅಕಾಡೆಮಿ ಆರಂಭವಾಗಿದ್ದು, ಹುಬ್ಬಳ್ಳಿಯಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ ತಲೆ ಎತ್ತಿದ್ದು ಹಾಗೂ ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠ ಆರಂಭಿಸಲು ಶಿಲಾನ್ಯಾಸ ನಡೆದಿದ್ದು ಪಾಟೀಲರು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿದ್ದಾಗ ಎಂಬುದು ಗಮನಾರ್ಹ. ಸಿದ್ದರಾಮಯ್ಯನವರ ಸರ್ಕಾರದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಸಚಿವರಾಗಿಯೂ ಅವರು ಮಹತ್ವದ ಕೆಲಸಗಳನ್ನು ಮಾಡಿದ್ದಾರೆ. ತಮಗೆ ವಹಿಸಿದ ಜವಾಬ್ದಾರಿಯನ್ನು ಶ್ರದ್ಧೆಯಿಂದ ನಿರ್ವಹಿಸಿ ಹಲವು ಪ್ರಥಮಗಳ ಮಜಲು ಸೃಷ್ಟಿಸಿದ ಎಚ್ ಕೆ ಪಾಟೀಲ್ ಅವರು “ಬಾರ್ ಅಂಡ್ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?
ಕಾನೂನು ಓದುವುದರಿಂದ ಸಾರ್ವಜನಿಕ ಜೀವನದಲ್ಲಿ ಅನುಕೂಲವಾಗುತ್ತದೆ ಎನ್ನುವ ಅರಿವಿದ್ದರಿಂದ ಹುಬ್ಬಳ್ಳಿಯ ಜೆಎಸ್‌ಎಸ್ ಸಕ್ರಿ ಕಾನೂನು ಕಾಲೇಜಿನಲ್ಲಿ 1972-76ರಲ್ಲಿ ಎಲ್ ಎಲ್ ಬಿ ಪದವಿ ಪೂರೈಸಿದೆ. ನನ್ನ ತಂದೆ, ಮಾಜಿ ಸಚಿವರಾದ ಕೆ ಎಚ್ ಪಾಟೀಲ್ ಕಾನೂನು ಕಲಿತವರಲ್ಲ. ಆದರೆ, ಆ ಪರಿಣತಿಯನ್ನು ಗಳಿಸಿಕೊಂಡಿದ್ದರು. ವಕೀಲರುಗಳ ಜೊತೆ ತಂದೆಯವರು ಸಮಾಲೋಚನೆ ಮಾಡುತ್ತಿದ್ದರು. ಇದು ನನಗೆ ಆಶ್ಚರ್ಯ ಉಂಟು ಮಾಡುತ್ತಿತ್ತು. ವಕೀಲರಿಗಿಂತಲೂ ಹೆಚ್ಚಿನ ಕಾನೂನು ಜ್ಞಾನ ತಂದೆಯವರಿಗೆ ಇದೆ ಎಂಬ ಮಾತುಗಳು ಚರ್ಚೆಯ ಸಂದರ್ಭದಲ್ಲಿ ಬರುತ್ತಿದ್ದವು. ಇವೆಲ್ಲವೂ ಒಂದಲ್ಲಾ ಒಂದು ರೀತಿಯಲ್ಲಿ ನನ್ನ ಮೇಲೆ ಪ್ರಭಾವ ಬೀರಿವೆ.
ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?
ಸ್ನೇಹಿತರೆಲ್ಲರೂ ಸೇರಿ ಸಂವಿಧಾನ, ಅಂದಿನ ರಾಜಕೀಯ ಸನ್ನಿವೇಶ ಮತ್ತು ಜಾರಿಯಾಗುತ್ತಿದ್ದ ಕಾನೂನುಗಳ ಬಗ್ಗೆ ಚರ್ಚೆ, ವಾದ, ಸಂವಾದ ನಡೆಸುತ್ತಿದ್ದೆವು. ಅಂದಿನ ಕಾಲದಲ್ಲಿ ಭೂ ಸುಧಾರಣಾ ಕಾನೂನು ಜಾರಿಗೆ ಬಂದಿತ್ತು. ಅದರ ಬಗ್ಗೆ ಭಾರಿ ಚರ್ಚೆ ನಡೆಯುತ್ತಿತ್ತು. ಶಾಲಾ-ಕಾಲೇಜು ಶುಲ್ಕಗಳನ್ನು ಹೆಚ್ಚಿಸುವುದರಿಂದ ಗ್ರಾಮೀಣ ಭಾಗದ ವಿದ್ಯಾರ್ಥಿಗಳಿಗೆ ಭಾರಿ ತೊಂದರೆಯಾಗುತ್ತಿತ್ತು. ಇದನ್ನು ಆಧರಿಸಿ ನಾವು ದೊಡ್ಡ ಹೋರಾಟ ನಡೆಸಿದ್ದೆವು. ರಾಷ್ಟ್ರಮಟ್ಟದ ನಾಯಕರುಗಳಾದ ಚಂದ್ರಶೇಖರ್, ಕೃಷ್ಣಕಾಂತ್, ಮೋಹನ್ ಧಾರಿಯಾ ಅಂದಿನ ರಾಜಕೀಯ ಸನ್ನಿವೇಶದ ಬಗ್ಗೆ ತಿಳಿ ಹೇಳುತ್ತಿದ್ದರು. ಆ ವೇದಿಕೆಯಿಂದ ಬಂದ ನುಡಿ, ವಿಚಾರ, ಆಲೋಚನಾ ಪ್ರಕ್ರಿಯೆ ನನ್ನ ಮೇಲೆ ಸಾಕಷ್ಟು ಪರಿಣಾಮ ಬೀರಿತ್ತು.
ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?
ಧಾರವಾಡದ ಸಿ ಬಿ ಪಾಟೀಲ್ ಮತ್ತು ಜಿ ಎಂ ಪಾಟೀಲರು ಹಿರಿಯ ವಕೀಲರು. ಅವರು ನಮಗೆ ವಕೀಲಿಕೆ ಮಾಡಿದ್ದರೆ ಆದರ್ಶವಾಗಿರುತ್ತಿದ್ದರು. ನಾನು ರೆಗ್ಯುಲರ್ ಪ್ರಾಕ್ಟೀಸ್ ಮಾಡಿದವನಲ್ಲ. ವಕೀಲರಾದ ಸಿ ಎಲ್ ಪಾಟೀಲ್ ನನ್ನ ಸ್ನೇಹಿತರೇ ಆಗಿದ್ದರು. ಬೇರೆಬೇರೆ ವಿಚಾರಕ್ಕೆ ಅವರ ಬಳಿ ಹೋಗುತ್ತಿದ್ದವು. ಅವರ ಚೇಂಬರ್‌ಗೆ ಹೋದರೂ ಅಲ್ಲಿಗೆ ಸೇರಿರಲಿಲ್ಲ.
ನೀವು ವಾದ ಮಂಡಿಸಿದ ಮೊದಲ ಕೇಸ್ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?
ಎರಡು ಬಾರಿ ನ್ಯಾಯಾಲಯಕ್ಕೆ ತೆರಳಿದ್ದೆ. ಒಮ್ಮೆ ಕಾರ್ಮಿಕ ಪ್ರಕರಣಕ್ಕಾಗಿ ಮತ್ತೊಮ್ಮೆ ಸಿವಿಲ್ ವಿಚಾರಕ್ಕಾಗಿ ನ್ಯಾಯಾಲಯದ ಮೆಟ್ಟಿಲೇರಿದ್ದೆ. ಅದು ಬಿಟ್ಟು ಎಂದೂ ನಾನು ನ್ಯಾಯಾಲಯಕ್ಕೆ ಕಾಲಿಡಲಿಲ್ಲ. ಕಂಪೆನಿಯಿಂದ ಸಿಗಬೇಕಿದ್ದ ಪಿಎಫ್ ಮತ್ತು ಇಎಸ್‌ಐ ಸೌಲಭ್ಯ ದೊರೆತಿರಲಿಲ್ಲ ಎಂದು ಉದ್ಯೋಗಿಯೊಬ್ಬ ತನ್ನ ಕಂಪೆನಿಯ ವಿರುದ್ಧ ದಾವೆ ಹೂಡಿದ್ದ. ಆತನನ್ನು ಕೆಲಸದಿಂದ ತೆಗೆದು ಹಾಕಿದ್ದರು. ಆತನ ಪರವಾಗಿ ನಾನು ನ್ಯಾಯಾಲಯದಲ್ಲಿ ಒಮ್ಮೆ ವಾದಿಸಿದ್ದೆ. ಆ ಬಳಿಕ ಮೂರ್ನಾಲ್ಕು ಮುದ್ದತ್ತುಗಳಲ್ಲಿ ವಕೀಲರಾದ ಕೆ ಎಲ್ ಪಾಟೀಲ್ ಆತನನ್ನು ಪ್ರತಿನಿಧಿಸಿದ್ದರು.
ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?
ರಾಜಕಾರಣದ ಮೇಲೆ ನನಗೆ ಇದ್ದ ಆಸಕ್ತಿ, ತಂದೆಯವರ ಹಿನ್ನೆಲೆ ಹಾಗೂ ಅಂದಿನ ರಾಜಕೀಯ ಸನ್ನಿವೇಶದ ಜೊತೆಗೆ ಗೆಳೆಯರೆಲ್ಲರೂ ನಾನು ಸಕ್ರಿಯ ರಾಜಕಾರಣಕ್ಕೆ ಪ್ರವೇಶ ಮಾಡಬೇಕು ಎಂದು ಅಪೇಕ್ಷೆ ಪಟ್ಟಿದ್ದರಿಂದ 1984ರಲ್ಲಿ ಪದವೀಧರ ಕ್ಷೇತ್ರದ ಮೂಲಕ ವಿಧಾನ ಪರಿಷತ್ ಪ್ರವೇಶಿಸಿದೆ. ಮಾಜಿ ಪ್ರಧಾನಿ ಇಂದಿರಾ ಗಾಂಧಿ ಅವರ ಕಾಲದಲ್ಲಿ ಕಾಂಗ್ರೆಸ್ ಇಬ್ಬಾಗವಾಗಿ ಶ್ರೀಮಂತರು ಒಂದು ಕಡೆ, ಸಮಾನತೆ ಬಯಸುವವರು ಮತ್ತೊಂದು ಕಡೆಯಾಗಿದ್ದರು. ಇವೆಲ್ಲವೂ ರಾಜಕೀಯ ಪ್ರವೇಶಕ್ಕೆ ಪ್ರಭಾವ ಬೀರಿದ್ದವು.
ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?
ಕಾನೂನು ಶಿಕ್ಷಣ ನಮ್ಮಲ್ಲಿ ಆತ್ಮ ವಿಶ್ವಾಸ ಮೂಡಿಸುತ್ತದೆ. ಕಾನೂನು ರೂಪಿಸಲು, ಅದನ್ನು ಅರ್ಥ ಮಾಡಿಕೊಳ್ಳಲು ಕಾನೂನು ಸಹಾಯ ಮಾಡುತ್ತದೆ.
ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವರಾಗಿ ಕೆಲಸ ಮಾಡಿದ್ದೀರಿ. ಈ ಸಂದರ್ಭದಲ್ಲಿನ ಸವಾಲು, ಅನುಭವ ಮತ್ತು ತಾವು ತಂದ ಸುಧಾರಣಾ ಕ್ರಮಗಳ ಬಗ್ಗೆ ತಿಳಿಸಿ.
ಧರ್ಮಸಿಂಗ್ ನೇತೃತ್ವದ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರದಲ್ಲಿ 2004ರಲ್ಲಿ ನಾನು ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವನಾಗಿದ್ದೆ. ನನ್ನನ್ನು ಸುಮ್ಮನೆ ಕೂಡ್ರಿಸುವ ಉದ್ದೇಶದಿಂದ ಈ ಇಲಾಖೆ ನೀಡಲಾಗಿತ್ತು. ಆದರೆ, ಆ ಕ್ಷೇತ್ರದಲ್ಲಿ ನನಗೆ ಆಸಕ್ತಿ ಮತ್ತು ಹೀಗೂ ಇಲ್ಲಿ ಕೆಲಸ ಮಾಡಬಹುದು ಎಂಬುದನ್ನು ಮಾಡಿ ತೋರಿಸುವ ಛಲವಿತ್ತು. ಒಂದೇ ಸಾಲಿನಲ್ಲಿ ಹೇಳಬೇಕೆಂದರೆ ಕಾನೂನು ಇಲಾಖೆಯ ವ್ಯಾಪ್ತಿಯನ್ನು ಮರು ವ್ಯಾಖ್ಯಾನಿಸಿದೆ. ಬಹುಶಃ 11 ತಿಂಗಳಲ್ಲಿ ಇಷ್ಟು ಕೆಲಸ ಮಾಡಲು ಸಾಧ್ಯವೇ ಎಂಬಷ್ಟು ಕೆಲಸ ಮಾಡಿದ್ದೇನೆ.
ಮೊದಲಿಗೆ ಹುಬ್ಬಳ್ಳಿಯಲ್ಲಿ ಕಾನೂನು ವಿಶ್ವವಿದ್ಯಾಲಯ ಹುಟ್ಟು ಹಾಕಲಾಯಿತು. 100 ನ್ಯಾಯಾಲಯಗಳನ್ನು ಆರಂಭಿಸಲಾಯಿತು. ಹೈಕೋರ್ಟ್‌ನ ಧಾರವಾಡ ಮತ್ತು ಗುಲಬರ್ಗಾ ಪೀಠಕ್ಕೆ ಶಿಲಾನ್ಯಾಸ ಮಾಡಲಾಯಿತು. ನಮ್ಮ ಸಮ್ಮಿಶ್ರ ಸರ್ಕಾರ ಸ್ಥಿರವಾಗಿರಲಿಲ್ಲ. ಸಿಕ್ಕ ಅವಕಾಶದಲ್ಲಿ ಕೆಲಸ ಮಾಡಬೇಕು ಎಂದು ಹಲವು ಸವಾಲುಗಳನ್ನು ಸ್ವೀಕರಿಸಿ ಕೆಲಸ ಮಾಡಿದೆ. ಇದೇ ಅವಧಿಯಲ್ಲಿ ಸುಮಾರು 40 ಸಾವಿರ ಕಡತಗಳನ್ನು ವಿಲೇವಾರಿ ಮಾಡಲಾಯಿತು.
ನ್ಯಾಯಾಂಗ ಅಕಾಡೆಮಿಯ ಮಾದರಿಯಲ್ಲಿ ವಕೀಲರ ಅಕಾಡೆಮಿ ಮತ್ತು ಪ್ರತಿ ಜಿಲ್ಲೆಯಲ್ಲೂ ವಕೀಲರ ಚೇಂಬರ್‌ಗಳನ್ನು ಆರಂಭಿಸಲಾಯಿತು. ಯುವ ವಕೀಲರು ಹೆಚ್ಚಿನ ಶಕ್ತಿ-ಸಾಮರ್ಥ್ಯ ಗಳಿಸಿ ವೃತ್ತಿ ನೈಪುಣ್ಯತೆ ಸಾಧಿಸಲು ಬೆಂಗಳೂರಿನಲ್ಲಿ ವಕೀಲರ ಅಕಾಡೆಮಿ ಆರಂಭಿಸಲಾಗಿದೆ.
ದೇಶದಲ್ಲಿ ಮೊದಲ ಬಾರಿಗೆ ನಮ್ಮ ಕಾಲದಲ್ಲಿ ಉದ್ಯೋಗ ಭದ್ರತೆ ಮಸೂದೆ 2005 ಸಿದ್ಧಪಡಿಸಲಾಯಿತು. ಆನಂತರ ಇದು ರಾಷ್ಟ್ರೀಯ ನೀತಿಯಾಯಿತು. ಕರ್ನಾಟಕದ ಗ್ರಾಮೀಣ ಭಾಗದಲ್ಲಿರುವ ಕುಟುಂಬದ ಒಬ್ಬರಿಗೆ ಉದ್ಯೋಗ ಭದ್ರತೆ ನೀಡುವುದು ಮಸೂದೆಯ ಉದ್ದೇಶವಾಗಿತ್ತು. ಕರ್ನಾಟಕ ಕಡ್ಡಾಯ ಪ್ರಾಥಮಿಕ ಶಿಕ್ಷಣ ಮಸೂದೆ 2005 ಅನ್ನು ನಮ್ಮ ಕಾಲದಲ್ಲಿ ಸಿದ್ಧಪಡಿಸಲಾಯಿತು. ಇದೂ ಆನಂತರ ರಾಷ್ಟ್ರೀಯ ನೀತಿಯಾಯಿತು.
ಕರ್ನಾಟಕ ಆಹಾರ ಭದ್ರತೆ ಸುಗ್ರೀವಾಜ್ಞೆ 2005 ಹೊರಡಿಸಲಾಯಿತು. ಬಡವರಿಗೆ ಆಹಾರ ಭದ್ರತೆ ಕಲ್ಪಿಸುವುದು ಸುಗ್ರೀವಾಜ್ಞೆಯ ಉದ್ದೇಶವಾಗಿತ್ತು. ದೇಶದಲ್ಲಿ ಮೊದಲ ಬಾರಿಗೆ ಇಂಥ ಕಾನೂನನ್ನು ಸುಗ್ರೀವಾಜ್ಞೆಯ ಮೂಲಕ ಜಾರಿಗೊಳಿಸಲಾಯಿತು. ಸರ್ಕಾರ ಬದಲಾದ ಹಿನ್ನೆಲೆಯಲ್ಲಿ ಸುಗ್ರೀವಾಜ್ಞೆ ಸತ್ವ ಕಳೆದುಕೊಂಡಿತು. ಆದರೆ, 2008ರಲ್ಲಿ ಇದನ್ನು ರಾಷ್ಟ್ರೀಯ ನೀತಿಯನ್ನಾಗಿ ಮನಮೋಹನ್ ಸಿಂಗ್ ನೇತೃತ್ವದ ಯುಪಿಎ ಸರ್ಕಾರ ಜಾರಿಗೊಳಿಸಿತು.
ಮಕ್ಕಳ ಆರೋಗ್ಯ, ಪೌಷ್ಟಿಕತೆ, ಶಿಕ್ಷಣ, ಉದ್ಯೋಗ ಮತ್ತು ಮಕ್ಕಳ ಮೇಲಿನ ದೌರ್ಜನ್ಯ ತಡೆಯುವ ಮೂಲಕ ಮಕ್ಕಳ ಸ್ನೇಹಿಯಾದ ಕರ್ನಾಟಕ ಮಕ್ಕಳ ಹಕ್ಕುಗಳ ಮಸೂದೆ 2005 ಅನ್ನು ಜಾರಿಗೆ ತರಲಾಯಿತು. ಇದನ್ನು ಕೇಂದ್ರ ಸರ್ಕಾರ ಜಾರಿಗೊಳಿಸಿತು.
ಧಾರವಾಡ ಮತ್ತು ಗುಲ್ಬರ್ಗಾದಲ್ಲಿ ಹೈಕೋರ್ಟ್ ಪೀಠಗಳನ್ನು ಆರಂಭಿಸುವ ಸಂಬಂಧ ಅಡಿಗಲ್ಲು ಹಾಕಿದ್ದು, ಗುಲ್ಬರ್ಗಾ ವಿಶ್ವವಿದ್ಯಾಲಯದಲ್ಲಿ ವಿಜ್ಞಾನೇಶ್ವರ ಮಿತಾಕ್ಷರ ಅಧ್ಯಯನ ಕೇಂದ್ರದ ಆರಂಭಕ್ಕೂ ಚಾಲನೆ ನೀಡಲಾಯಿತು.
ಮಾನವ ಹಕ್ಕುಗಳ ಕಾಯಿದೆ ಜಾರಿಗೆ ತಂದು ಹತ್ತು ವರ್ಷಗಳಾಗಿದ್ದರೂ ರಾಜ್ಯದಲ್ಲಿ ನೀತಿ ರೂಪಿಸಲಾಗಿರಲಿಲ್ಲ ಮತ್ತು ರಾಜ್ಯದಲ್ಲಿ ಮಾನವ ಹಕ್ಕುಗಳ ಸಂಸ್ಥೆಯನ್ನು ಆರಂಭಿಸಿರಲಿಲ್ಲ. ನಾನು ಕಾನೂನು ಸಚಿವನಾದ ಬಳಿಕ ರಾಜ್ಯ ಮಾನವ ಹಕ್ಕುಗಳ ಸಂಸ್ಥೆ ಆರಂಭಿಸುವುದರ ಜೊತೆಗೆ ಮಾನವ ಹಕ್ಕುಗಳ ನ್ಯಾಯಾಲಯಗಳನ್ನು ಆರಂಭಿಸಲಾಯಿತು.
ಹುಬ್ಬಳ್ಳಿಯ ನವನಗರದಲ್ಲಿ ರಾಜ್ಯ ಕಾನೂನು ವಿಶ್ವವಿದ್ಯಾಲಯ 2009ರಲ್ಲಿ ಆರಂಭವಾಯಿತು. ಇದು ಅಸ್ತಿತ್ವಕ್ಕೆ ಬರುವಂತೆ ಮಾಡಲು ಸಾಕಷ್ಟು ಶ್ರಮವಹಿಸಿದ್ದೇನೆ. ವಿವಿಧ ವಿಷಯಗಳಲ್ಲಿ ಪದವಿ ಮತ್ತು ಸ್ನಾತಕೋತ್ತರ ಕೋರ್ಸ್‌ಗಳು ವಿಶ್ವವಿದ್ಯಾಲಯದಲ್ಲಿ ಲಭ್ಯವಿದ್ದು, ಸುಮಾರು 97 ಕಾನೂನು ಕಾಲೇಜುಗಳು ಕೆಎಸ್‌ಎಲ್‌ಯುನಿಂದ ಮಾನ್ಯತೆ ಪಡೆದಿವೆ.
ರಾಜ್ಯ ಸರ್ಕಾರ ಸೂಚನೆಯ ಮೇರೆಗೆ ತಪ್ಪಾದುದ್ದನ್ನು ತಿದ್ದಲು ಮತ್ತು ಆಗಾಗ್ಗೆ ರಾಜ್ಯದ ಕಾನೂನುಗಳಲ್ಲಿ ಸುಧಾರಣೆ ಮಾಡುವುದರ ಜೊತೆಗೆ ಕಾನೂನು ಮತ್ತು ಸಂಸದೀಯ ಚಟುವಟಿಕೆಗಳಲ್ಲಿ ಸುಧಾರಣೆ ತರುವ ಉದ್ದೇಶದಿಂದ ಕರ್ನಾಟಕ ಕಾನೂನು ಮತ್ತು ಸಂಸದೀಯ ಸುಧಾರಣಾ ಸಂಸ್ಥೆಯನ್ನು (ಕಿಲ್ಪಾರ್) ಆರಂಭಿಸಲಾಗಿದೆ.
ರಾಜ್ಯದ ರಾಜಧಾನಿ ಬೆಂಗಳೂರಿನ ಹೊರಗೆ ಬೆಳಗಾವಿಯ ಸುವರ್ಣ ಸೌಧದಲ್ಲಿ ವಿಧಾನ ಮಂಡಲ ಅಧಿವೇಶ ನಡೆದಿದ್ದು ನಾನು ಕಾನೂನು ಸಚಿವನಾಗಿದ್ದ ಕಾಲದಲ್ಲಿ. ಆ ಬಳಿಕ ಪ್ರತಿ ವರ್ಷ ಬೆಳಗಾವಿಯಲ್ಲಿ ಅಧಿವೇಶ ನಡೆಸುವುದು ನಿಯಮವಾಗಿದೆ.
ನೀತಿ-ನಿರೂಪಣೆಯನ್ನು ಗಂಭೀರವಾಗಿಸುವ ದೃಷ್ಟಿಯಿಂದ ಪ್ರತಿ ವರ್ಷ 60 ದಿನಗಳ ಕಾಲ ಅಧಿವೇಶನವನ್ನು ಕಡ್ಡಾಯವಾಗಿ ನಡೆಸುವ ಸಂಬಂಧ ಕರ್ನಾಟಕ ರಾಜ್ಯ ವಿಧಾನ ಮಂಡಲ ಚಟುವಟಿಕೆಗಳ ಕಾಯಿದೆ 2005 ಜಾರಿಗೆ ತರಲಾಯಿತು.
ನ್ಯಾಯಾಲಯದ ತೀರ್ಪುಗಳನ್ನು ಕಾರ್ಯಗತಗೊಳಿಸುವ ದೃಷ್ಟಿಯಿಂದ ರಾಜ್ಯದ ಇತಿಹಾಸದಲ್ಲೇ ಮೊದಲ ಬಾರಿಗೆ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ನೇತೃತ್ವದಲ್ಲಿ ಉನ್ನತ ಮಟ್ಟದ ಸಮಿತಿ ರಚಿಸಲಾಯಿತು. ಸರ್ಕಾರದ ವಿರುದ್ಧದ ತೀರ್ಪು, ಆದೇಶಗಳನ್ನು ಜಾರಿಗೊಳಿಸುವ ಮೂಲಕ ಫಲಾನುಭವಿಗಳಿಗೆ ಅದರ ಅನುಕೂಲ ಮಾಡಿಕೊಡುವುದರ ಜೊತೆಗೆ ನ್ಯಾಯಾಂಗ ನಿಂದನೆಯ ಮುಜುಗರದಿಂದ ಸರ್ಕಾರವನ್ನು ಪಾರು ಮಾಡುವ ಯತ್ನ ಮಾಡಲಾಯಿತು. ಹೀಗೆ ಸಾಕಷ್ಟು ಸವಾಲುಗಳನ್ನು ಎದುರಿಸುತ್ತಲೇ ಸುಧಾರಣಾ ಕ್ರಮಕೈಗೊಂಡಿದ್ದು, ಆತ್ಮತೃಪ್ತಿ ನೀಡಿದೆ.
ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?
ಹಾಗೇನು ಅನಿಸಿಲ್ಲ. ನನ್ನ ಭಾಗ ಮತ್ತು ನಮ್ಮ ರಾಜ್ಯದ ಜನರ ಸೇವೆ ಮಾಡುವುದಕ್ಕೆ ನನಗೆ ಸಂತೋಷವಿದೆ. ಪರಿಸ್ಥಿತಿಯಿಂದ ತಪ್ಪಿಸಿಕೊಳ್ಳಲಾಗದು.