ಭ್ರಷ್ಟಾಚಾರದ ಬಗ್ಗೆ ಚರ್ಚಿಸದಿದ್ದರೆ, ನ್ಯಾಯಾಂಗದಲ್ಲಿ ಸುಧಾರಣೆ ತರುವುದು ಹೇಗೆ? ಪ್ರಶಾಂತ್ ಭೂಷಣ್

ಹಿರಿಯ ವಕೀಲ ಪ್ರಶಾಂತ್ ಭೂಷಣ್ 'ಬಾರ್ ಅಂಡ್ ಬೆಂಚ್' ಗೆ ನೀಡಿದ ಸಂದರ್ಶನದಲ್ಲಿ ನ್ಯಾಯಾಂಗ ನಿಂದನೆ ಕಾಯಿದೆ ಅಡಿ ನ್ಯಾಯಮೂರ್ತಿಗಳೇ ಆರೋಪಿಸುವವರು, ಕ್ರಮ ಜರುಗಿಸುವವರು ಹಾಗೂ ಅವರ ವಿರುದ್ಧದ ಪ್ರಕರಣಗಳಿಗೆ ಅವರೇ ನ್ಯಾಯಮೂರ್ತಿಗಳು ಎಂದಿದ್ದಾರೆ.
Prashant Bhushan
Prashant Bhushan

ನ್ಯಾಯಾಂಗವನ್ನು ಟೀಕಿಸಿ ಟ್ವೀಟ್ ಮಾಡಿದ್ದಕ್ಕೆ ನ್ಯಾಯಾಂಗ ನಿಂದನೆ ಆರೋಪದಡಿ ದೋಷಿ ಎಂದು ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರನ್ನು ಘೋಷಿಸಿದ ನ್ಯಾ. ಅರುಣ್ ಮಿಶ್ರಾ ನೇತೃತ್ವದ ಸುಪ್ರೀಂ ಕೋರ್ಟ್ ನ ನ್ಯಾಯಪೀಠವು ಅವರಿಗೆ ಒಂದು ರೂಪಾಯಿ ಜುಲ್ಮಾನೆ ವಿಧಿಸಿತ್ತು. ಈ ಕುರಿತು “ಬಾರ್ ಅಂಡ್ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿರುವ ಭೂ‍ಷಣ್, “ನ್ಯಾಯಾಂಗದಲ್ಲಿನ ಭ್ರಷ್ಟಾಚಾರದ ಬಗ್ಗೆ ಬೆರಳು ಮಾಡುವವರ ಬಾಯಿ ಮುಚ್ಚಿಸುವ ಮೂಲಕ ಜನರು ನ್ಯಾಯಾಂಗದ ಮೇಲೆ ಇಟ್ಟಿರುವ ನಂಬಿಕೆಯನ್ನು ನಿರ್ವಹಿಸಲಾಗದು” ಎಂದಿದ್ದಾರೆ.

ಬಾರ್ ಅಂಡ್ ಬೆಂಚ್‌ಗೆ ಸಂದರ್ಶನ ನೀಡಿದ ಪ್ರಶಾಂತ್ ಭೂಷಣ್
ಬಾರ್ ಅಂಡ್ ಬೆಂಚ್‌ಗೆ ಸಂದರ್ಶನ ನೀಡಿದ ಪ್ರಶಾಂತ್ ಭೂಷಣ್

ನ್ಯಾಯಾಂಗ ವಿಮರ್ಶಿಸಿ ಟ್ವೀಟ್ ಮಾಡಿದ್ದಕ್ಕೆ ನ್ಯಾಯಾಂಗ ನಿಂದನೆಗೆ ಗುರಿಯಾಗಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರೆಡೆಗೆ "ಉದಾರತೆ" ತೋರುವ ಮೂಲಕ ಒಂದು ರೂಪಾಯಿ ಜುಲ್ಮಾನೆ ಶಿಕ್ಷೆ ವಿಧಿಸಿ ಅವರನ್ನು ಸುಪ್ರೀಂ ಕೋರ್ಟ್ ಬಿಡುಗಡೆಗೊಳಿಸಿತ್ತು.

“ನ್ಯಾಯಾಂಗ ನಿಂದನೆ ದೋಷಿಯಾದ ಭೂಷಣ್ ಅವರಿಗೆ ಜೈಲು ವಾಸ ಅಥವಾ ವಕೀಲಿಕೆಗೆ ನಿಷೇಧ ಹೇರುವ ಶಿಕ್ಷೆ ವಿಧಿಸಲು ನ್ಯಾಯಪೀಠ ಹೆದರುವುದಿಲ್ಲ. ಆದರೆ, ಪ್ರತಿದಾಳಿ ಮಾಡುವುದರಿಂದ ನ್ಯಾಯಾಲಯ ಅಂತರ ಕಾಯ್ದುಕೊಂಡಿದೆ”, ಎಂದು ನ್ಯಾಯಪೀಠವು ತನ್ನ 82 ಪುಟಗಳ ತೀರ್ಪಿನಲ್ಲಿ ಒತ್ತಿ ಹೇಳಿತ್ತು.

ಆದಾಗ್ಯೂ, ದೇಶದ ಯಾವುದಾದರೊಂದು ನ್ಯಾಯಾಲಯವು ನ್ಯಾಯಾಂಗ ನಿಂದನೆ ಕಾಯಿದೆ 1971ರ ಸೆಕ್ಷನ್ 2(1)(c)ಅನ್ನು ಕೈಬಿಡುವ ಪ್ರಯತ್ನ ಮಾಡಬೇಕು ಎಂದು ಭೂಷಣ್ ಹೇಳಿದ್ದಾರೆ. ಅವರೊಂದಿಗಿನ ಸಂದರ್ಶನದ ಪೂರ್ಣ ಪಾಠ:

ನ್ಯಾಯಾಂಗ ವಿಮರ್ಶಿಸಿದ್ದ ಟ್ವೀಟ್‌ ಗಳನ್ನು ಆಧರಿಸಿ ನ್ಯಾಯಾಲಯ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿದ ದಿನಕ್ಕೆ ಮರಳೋಣ. ಆ ಟ್ವೀಟ್ ಗಳನ್ನು ಮಾಡುವ ಸಂದರ್ಭದಲ್ಲಿ ನಿಮ್ಮ ಮನಸ್ಥಿತಿ ಹೇಗಿತ್ತು? ನ್ಯಾಯಾಂಗ ನಿಂದನೆಗೆ ನಿಮ್ಮನ್ನು ಸಿಲುಕಿಸಬಹುದು ಎಂದು ನಿಮಗನ್ನಿಸಿತ್ತೇ?

ಮೊದಲಿಗೆ, ಮೋದಿ ಸರ್ಕಾರ ಕಳೆದ ಆರು ವರ್ಷಗಳಲ್ಲಿ ಈ ದೇಶದಲ್ಲಿ ಪ್ರಜಾಪ್ರಭುತ್ವವನ್ನು ವ್ಯವಸ್ಥಿತವಾಗಿ ನಾಶಪಡಿಸಿದೆ. ಈ ಕೃತ್ಯ ನಡೆಸಲು ಸುಪ್ರೀಂ ಕೋರ್ಟ್ ಅವಕಾಶ ಮಾಡಿಕೊಟ್ಟಿದೆ ಎಂದು ನಾನು ಹೇಳಿದ್ದೆ. ಬಹುಮುಖ್ಯವಾಗಿ ಹಿಂದಿನ ನಾಲ್ವರು ಮುಖ್ಯ ನ್ಯಾಯಮೂರ್ತಿಗಳ ಪಾತ್ರದ ಬಗ್ಗೆ ಮಾತನಾಡಿದ್ದೆ. ಎಲ್ಲಾ ರೀತಿಯಲ್ಲೂ ಆಲೋಚಿಸಿ ಮಾಡಲಾದ ಟ್ವೀಟ್ ಅದು. ಉಡಾಫೆಯಿಂದ ಅಥವಾ ಅನ್ಯಮನಸ್ಕತೆಯಿಂದ ನಾನು ಟ್ವೀಟ್ ಮಾಡಿರಲಿಲ್ಲ. ಕಳೆದ ಕೆಲವು ವರ್ಷಗಳಲ್ಲಿ ಸ್ಪಷ್ಟವಾಗಿ ಏನು ನಡೆದಿದೆಯೋ ಅದನ್ನೇ ಹೇಳಿದ್ದೇನೆ. ಇದು ನನ್ನ ಅಭಿಪ್ರಾಯವಾಗಿದ್ದು, ಬೇರೆಯರು ಅದನ್ನು ಒಪ್ಪದಿರಬಹುದು.

ಇದು ನ್ಯಾಯಾಂಗ ನಿಂದನೆಯಾಗುತ್ತದೆ ಎಂದು ನಾನು ಭಾವಿಸಲಿಲ್ಲ. ನ್ಯಾಯಾಲಯದಲ್ಲಿನ ಬೆಳವಣಿಗೆಗಳ ಬಗ್ಗೆ ನಾನು ಮುಕ್ತವಾಗಿ ಮಾತನಾಡುತ್ತಿದ್ದುದರಿಂದ ನನ್ನ ಕುಟುಂಬಸ್ಥರು ಮತ್ತು ಸ್ನೇಹಿತರಲ್ಲಿ ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಾಗಬಹುದು ಎಂಬ ಅಳುಕಿದ್ದಿರಬಹುದು. ಆದರೆ, ಇದು ಯಾವುದೇ ಕಾರಣಕ್ಕೂ ನ್ಯಾಯಾಂಗ ನಿಂದನೆಯಲ್ಲ ಎಂದು ಅವರಿಗೆ ವಿವರಿಸಿದ್ದೇನೆ. ಅಲ್ಲದೇ, ನ್ಯಾಯಾಲಯದಲ್ಲಿ ನಡೆಯುತ್ತಿರುವ ಬೆಳವಣಿಗೆಗಳ ಬಗ್ಗೆ ನಾನು ಮಾತನಾಡದಿದ್ದರೆ ಇನ್ನಾರು ಮಾತನಾಡುತ್ತಾರೆ? ಇದರ ಬಗ್ಗೆ ಯಾರಾದರೂ ಮಾತನಾಡಬೇಕು. ನಾನು ಮಾತನಾಡಲು ಅರ್ಹ.

ನ್ಯಾಯಾಲಯ ನಿಮಗೆ ಒಂದು ರೂಪಾಯಿ ಜುಲ್ಮಾನೆ ಹಾಕಿದ್ದೇಕೆ ಎಂದು ನಿಮಗನ್ನಿಸುತ್ತದೆ? ನೀವು ಅಪರಾಧಿ ಎಂಬದುನ್ನು ಸಾಂಕೇತಿಕವಾಗಿ ನಿಮಗೆ ತಿಳಿಸುವುದು ಅದರ ಉದ್ದೇಶವೇ?

ನನ್ನ ವಿರುದ್ಧದ ಹಲವು ತೀರ್ಪುಗಳು ಕಠಿಣ ಮತ್ತು ಕ್ರೂರವಾಗಿದ್ದ ಕಾರಣಕ್ಕೆ ನನಗೆ ಇದು ಆಶ್ಚರ್ಯವೆನಿಸುತ್ತದೆ. ಆದ್ದರಿಂದ ಅಂತಿಮವಾಗಿ ತೀರ್ಪಿನ ಉಳಿದ ಭಾಗವನ್ನು ಗಮನಿಸಿದರೆ ಒಂದು ರೂಪಾಯಿ ಜುಲ್ಮಾನೆ ಅಸಂಬಂದ್ಧ ಎನಿಸುತ್ತದೆ.

ನನಗೆ ನಿರ್ದಿಷ್ಟ ನೋಟಿಸ್ ನೀಡದೆ ನನ್ನ ಮೇಲೆ ನಿಷೇಧ ಹೇರಲಾಗದು. ನನ್ನ ದೃಷ್ಟಿಯಲ್ಲಿ ನ್ಯಾಯಾಂಗ ನಿಂದನೆ ಕಾಯಿದೆ ಅಡಿ ಅಂಥ ಶಿಕ್ಷೆ ನೀಡಲಾಗದು. ಅದರಲ್ಲೂ ವಾಕ್ ಸ್ವಾತಂತ್ರ್ಯಕ್ಕೆ ಇಲ್ಲವೇ ಇಲ್ಲ. ಕಾನೂನಿನ ಅಡಿ ಸಮಂಜಸ ನಿರ್ಬಂಧಗಳ ಮೂಲಕ ಭಾಷಣ ತಡೆ ವಿಧಿಸಬಹುದು. ನ್ಯಾಯಾಂಗ ನಿಂದನೆ ಕಾಯಿದೆ ಅನ್ವಯ ಆರು ತಿಂಗಳು ಜೈಲು ಶಿಕ್ಷೆ ಮತ್ತು 2 ಸಾವಿರ ರೂಪಾಯಿ ದಂಡ ವಿಧಿಸಿಬಹುದು. ಆದ್ದರಿಂದ ಅದರಿಂದ ಹೊರತಾದ ಯಾವುದೇ ತೆರನಾದ ಶಿಕ್ಷೆಯು ಸಂವಿಧಾನದ ಪರಿಚ್ಛೇದ 19(1)(a) ಕ್ಕೆ ವಿರುದ್ಧವಾಗಿರುತ್ತದೆ.

ನೀವು ಒಂದು ರೂಪಾಯಿ ದಂಡವನ್ನೂ ಪಾವತಿಸಬಾರದು ಎಂಬ ಕುರಿತು ಚರ್ಚೆಗಳು ನಡೆಯುತ್ತಿವೆ. ಹೀಗೆ ಮಾಡುವುದರಿಂದ ಶಿಕ್ಷೆಯನ್ನು ಒಪ್ಪಿಕೊಂಡಂತಾಗುತ್ತದೆ ಎಂಬ ವಾದವಿದೆ. ಇದರ ಬಗ್ಗೆ ನೀವೇನು ಹೇಳುತ್ತೀರಿ?

ಇದು ಯಾವುದೇ ರೀತಿಯಲ್ಲೂ ಶಿಕ್ಷೆಯನ್ನು ಒಪ್ಪಿಕೊಂಡಂತಾಗುವುದಿಲ್ಲ. ತೀರ್ಪು ಮರುಪರಿಶೀಲನೆ, ರಿಟ್ ಅರ್ಜಿ ದಾಖಲು ಇತ್ಯಾದಿಯನ್ನು ಗಣನೆಗೆ ತೆಗೆದುಕೊಂಡು ಪ್ರತಿಭಟನಾತ್ಮಕವಾಗಿ ದಂಡ ಪಾವತಿಸಲಾಗುವುದು. ನನಗೆ ವಿಧಿಸಲಾದ ದಂಡವನ್ನು ನಾನು ಪಾವತಿಸಬೇಕಿದೆ. ನಾನು ದಂಡ ಪಾವತಿಸದೆ, ಜೈಲಿಗೆ ಹೋಗಬೇಕು ಎನ್ನುವವರು, ನಾನು ಜೈಲಿಗೆ ತೆರಳಲು ಹಾತೊರಯುತ್ತಿದ್ದೇನೆ ಎಂದು ಹೇಳುತ್ತಿರುವಂತಿದೆ. ಜೈಲಿಗೆ ಹೋಗುವ ಬಯಕೆ ನನಗಿಲ್ಲ. ಆದರೆ, ಜೈಲಿಗೆ ಹೋಗುವುದೇ ಶಿಕ್ಷೆಯಾಗಿದ್ದರೆ ಅದಕ್ಕೂ ನಾನು ಅಣಿಯಾಗುತ್ತಿದ್ದೆ.

ತೀರ್ಪು ಮರುಪರಿಶೀಲನಾ ಅರ್ಜಿ ಸಿದ್ಧವಾಗುತ್ತಿದೆಯೇ?

ಮರುಪರಿಶೀಲನೆ ಮತ್ತು ರಿಟ್ ಅರ್ಜಿ ಸಿದ್ಧಪಡಿಸುವ ಪ್ರಕ್ರಿಯೆ ನಡೆಯುತ್ತಿದೆ. ಮತ್ತೊಂದು ಪೀಠದ ಮುಂದೆ (ಇಂಟ್ರಾ ಕೋರ್ಟ್) ವಿಚಾರಣೆಗಾಗಿ ಅಥವಾ ಮರುಪರಿಶೀಲನಾ ಅರ್ಜಿಯನ್ನು ಮನವಿಯನ್ನಾಗಿಸಿ ವಿಭಿನ್ನ ನ್ಯಾಯಮೂರ್ತಿಗಳು ವಿಚಾರಣೆ ನಡೆಸಲು ಕೋರಲಾಗುವುದು. ಪರಿಚ್ಛೇದ 21ರ ಅಡಿ ಕನಿಷ್ಠ ಒಂದು ಕ್ರಿಮಿನಲ್ ಅಪರಾಧದ ವಿರುದ್ಧದ ಮೇಲ್ಮನವಿ ಮೂಲಭೂತ ಹಕ್ಕು ಎಂದು ಸುಪ್ರೀಂ ಕೋರ್ಟ್ ಹಿಂದೆ ಹೇಳಿದೆ.

ನಿಮ್ಮ ಮೇಲಿನ ನ್ಯಾಯಾಂಗ ನಿಂದನೆ ಪ್ರಕರಣದ ಶಿಕ್ಷೆ ಪ್ರಮಾಣ ನಿರ್ಧರಿಸುವಲ್ಲಿ ಅಟಾರ್ನಿ ಜನರಲ್ ಕೆ ಕೆ ವೇಣುಗೋಪಾಲ್ ಅವರ ನಿಮ್ಮ ಮೇಲಿನ ನಿಂದನಾ ಪ್ರಕರಣ ಕೈಬಿಡುವಂತೆ ಮಾಡಿದ ಕೋರಿಕೆ ಎಷ್ಟರ ಮಟ್ಟಿಗೆ ಕೆಲಸ ಮಾಡಿದೆ ಎಂದು ನಿಮಗನ್ನಿಸುತ್ತದೆ?

ಅದು ಎಷ್ಟರ ಮಟ್ಟಿಗೆ ಪ್ರಭಾವ ಬೀರಿದೆ ಎಂದು ನನಗೆ ತಿಳಿದಿಲ್ಲ. ಆದರೆ ಅಟಾರ್ನಿ ಜನರಲ್ ಅವರು ನನ್ನ ರಕ್ಷಣೆಗೆ ಧಾವಿಸಿದ್ದು ನನ್ನನ್ನು ಕೃತಜ್ಞನನ್ನಾಗಿಸಿದೆ. ಬಹುಕಾಲದ ಬಳಿಕ ಅಟಾರ್ನಿ ಜನರಲ್ ಅವರು ಸಾಂವಿಧಾನಿಕ ಶಕ್ತಿಯಾಗಿ ಕೆಲಸ ಮಾಡುತ್ತಿರುವುದನ್ನು ನಾವು ನೋಡಿದೆವು. ಅಟಾರ್ನಿಯವರು ಸ್ವತಂತ್ರ ಅಭಿಪ್ರಾಯ ನೀಡುತ್ತಿದ್ದರೇ ವಿನಾ ಸರ್ಕಾರಿ ಅಧಿಕಾರಿಯಾಗಿಯಲ್ಲ. ಇದು ನನ್ನನ್ನು ವಿನೀತನನ್ನಾಗಿಸಿತು.

ಈ ಪ್ರಕರಣವನ್ನು ಮತ್ತೊಂದು ಪೀಠವು ವಿಭಿನ್ನವಾಗಿ ಬಗೆಹರಿಸುತ್ತಿತ್ತು ಎಂದು ನಿಮಗನ್ನಿಸುತ್ತದೆಯೇ?

ಹೌದು. ಹಾಗಾಗಬಹುದಿತ್ತು. ನಿರ್ದಿಷ್ಟ ಪ್ರಕರಣವನ್ನು ನಿರ್ದಿಷ್ಟ ನ್ಯಾಯಮೂರ್ತಿ ವಿಚಾರಣೆ ನಡೆಸುವುದು ಸಮ್ಮತವಲ್ಲ ಎಂದು ಸಲಹೆ ನೀಡಿದ್ದಕ್ಕೆ ಮೂರು ವಿಭಿನ್ನ ಸಂದರ್ಭಗಳಲ್ಲಿ ನ್ಯಾ. ಅರುಣ್ ಮಿಶ್ರಾ ಅವರು ನನ್ನ ವಿರುದ್ಧ ನ್ಯಾಯಾಂಗ ನಿಂದನೆ ಆರೋಪ ಮಾಡಿದ್ದರು ಎಂದು ಸಿಜೆಐಗೆ ಬರೆದ ಪತ್ರದಲ್ಲಿ ತಿಳಿಸಿದ್ದೆ. ಹಾಗೆ ಹೇಳುವುದು ನ್ಯಾಯಾಂಗ ನಿಂದನೆ ಎಂದು ಹೇಳಿ ಅವರು ಸಿಜೆಎಆರ್ ಗೆ 25 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿದ್ದರು.

ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್ ಅವರ ಹೆಸರು ಕೇಳಿಬಂದಿದ್ದ ಬಿರ್ಲಾ-ಸಹರಾ ಪ್ರಕರಣ ನ್ಯಾ. ಮಿಶ್ರಾ ಅವರ ಪೀಠದ ಮುಂದೆ ವಿಚಾರಣೆಗೆ ಇರುವಾಗ ಚೌಹಾಣ್ ಅವರನ್ನು ನ್ಯಾ.ಮಿಶ್ರಾ ಅವರು ತಮ್ಮ ಸೋದರಳಿಯನ ವಿವಾಹಕ್ಕೆ ತಮ್ಮ ಮನೆಗೆ ಆಹ್ವಾನಿಸಿದ್ದನ್ನೂ ನಾನು ಹಿಂದೆ ಟ್ವೀಟ್ ಮಾಡಿದ್ದೆ. ಇದು ನನ್ನಲ್ಲಿ ಸಮಂಜಸವಾದ ಪಕ್ಷಪಾತದ ಆತಂಕ ಸೃಷ್ಟಿಸಿತ್ತು. ಆದ್ದರಿಂದ ಸದರಿ ಪ್ರಕರಣವನ್ನು ಸಿಜೆಐ ಮತ್ತೊಂದು ಪೀಠಕ್ಕೆ ವರ್ಗಾಯಿಸಬೇಕಿತ್ತು. ದುರಾದೃಷ್ಟವಶಾತ್ ನನ್ನ ಮನವಿಗೆ ಸಿಜೆಐ ಕಿವಿಗೊಡಲಿಲ್ಲ.

ನಿಮ್ಮ ವಿರುದ್ಧದ ನ್ಯಾಯಾಂಗ ನಿಂದನೆ ಪ್ರಕರಣ ಶಿಕ್ಷೆ ಪ್ರಮಾಣದ ತೀರ್ಪು ವಾಕ್ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯದ ಇತಿಹಾಸದಲ್ಲಿ ವಿಶಿಷ್ಟ ಗಳಿಗೆ ಎಂದು ನೀವು ಬಣ್ಣಿಸಿದ್ದೀರಿ. ಅದು ಹೇಗೆ?

ಈ ಪ್ರಕರಣವು ಎರಡು ಕಾರಣಗಳಿಗೆ ಬಹುಮುಖ್ಯವಾಗಿದೆ. ನನ್ನ ಟ್ವೀಟ್‌ ಮೂಲಕ ಕಳೆದ ಆರು ವರ್ಷಗಳಲ್ಲಿ ಪ್ರಜಾಪ್ರಭುತ್ವಕ್ಕೆ ಏನಾಗಿದೆ ಮತ್ತು ಇದರಲ್ಲಿ ಸುಪ್ರೀಂ ಕೋರ್ಟ್ ಪಾತ್ರ ಏನಾಗಿದೆ ಎಂಬುದರ ಮೇಲೆ ಬೆಳಕು ಚೆಲ್ಲಲಾಗಿದೆ. ಇದೇ ಹೇಳಿಕೆಯನ್ನು ಉಲ್ಲೇಖಿಸಿ ಹಲವರು ರೀಟ್ವೀಟ್ ಮಾಡಿದ್ದು, ಈ ಹೇಳಿಕೆಗೆ ನಾನು ನ್ಯಾಯಾಂಗ ನಿಂದನೆ ಅಪರಾಧಿ ಎನ್ನುವುದಾದರೆ ಅವರೂ ನ್ಯಾಯಾಂಗ ನಿಂದನಾ ಅಪರಾಧಿಗಳೇ.

ಬಾಯಿ ಮುಚ್ಚಿಸುವ ಪ್ರಯತ್ನ ಎಂಬುದಾಗಿ ಜನರು ಈ ಪ್ರಕರಣವನ್ನು ನೋಡುತ್ತಿದ್ದಾರೆ. ಇದು ಜನರಲ್ಲಿ ವಿರೋಧ ಹುಟ್ಟಿಸಿದ್ದು, ಇಲ್ಲೊಬ್ಬ ವ್ಯಕ್ತಿಯನ್ನು ಅಧಿಕಾರದ ಮುಂದೆ ಸತ್ಯ ಹೇಳಿದ್ದಕ್ಕೆ ಬಾಯಿ ಮುಚ್ಚಿಸಲಾಗುತ್ತಿದೆ. ಆದರೆ, ಆತ ಅದಕ್ಕೆ ಬಗ್ಗುತ್ತಿಲ್ಲ ಎಂಬುದು ಅವರ ಅರಿವಿಗೆ ಬಂದಿದೆ. ಅವರೂ ಸಹ ಬಾಯಿ ಮುಚ್ಚಿಸುವ ಯತ್ನಕ್ಕೆ ಬಗ್ಗುತ್ತಿಲ್ಲ. ಅವರೂ ಅಧಿಕಾರ ವರ್ಗದ ಎದುರು ಸತ್ಯ ಮಾತನಾಡಬೇಕು. ಈ ಹಿನ್ನೆಲೆಯಲ್ಲಿ ಇದು ವಿಶಿಷ್ಟ ಗಳಿಗೆಯಾಗಿದೆ.

ನ್ಯಾಯಾಂಗ ನಿಂದನೆ ಕಾಯಿದೆಯ ಸೆಕ್ಷನ್ 2(c)(i) ಪ್ರಶ್ನಿಸಿ ನೀವು, ಎನ್ ರಾಮ್, ಅರುಣ್ ಶೌರಿ ಅರ್ಜಿ ಸಲ್ಲಿಸಿದ್ದ ಅರ್ಜಿಯನ್ನು ಹಿಂಪಡೆದಿದ್ದಕ್ಕೆ ಕಾರಣಗಳೇನು?

ಹೌದು. ಈ ಅರ್ಜಿಯ ವಿಚಾರಣೆಯನ್ನು ನ್ಯಾ. ಅರುಣ್ ಮಿಶ್ರಾ ಅವರ ಮುಂದೆ ಇಟ್ಟಿದ್ದರಿಂದ ಹಿಂಪಡೆಯಲಾಯಿತು. ನ್ಯಾ. ಮಿಶ್ರಾ ಅವರು ಅದಾಗಲೇ ತಮ್ಮ ಅಭಿಪ್ರಾಯವನ್ನು ಸ್ಪಷ್ಟವಾಗಿ, ಯಥೇಚ್ಛವಾಗಿ ತೋರ್ಪಡಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರಕರಣವನ್ನು ಮುಂದುವರಿಸುವುದು ಅರ್ಥವಿಲ್ಲ ಎಂದು ನಿರ್ಧರಿಸಿದೆವು. ಮೊದಲಿಗೆ ಇದನ್ನು ನ್ಯಾ. ಡಿ ವೈ ಚಂದ್ರಚೂಡ್ ಅವರ ಪೀಠದ ಮುಂದೆ ಇರಿಸಲಾಗಿತ್ತು. ಬಳಿಕ ಉದ್ದೇಶಪೂರ್ವಕವಾಗಿ ಹಿಂಪಡೆದು ನ್ಯಾ. ಅರುಣ್ ಮಿಶ್ರಾ ಅವರ ಪೀಠದ ಮುಂದೆ ಇಡಲಾಯಿತು.

Also Read
ನ್ಯಾಯಬದ್ಧ ವಿಮರ್ಶೆ ಮಾಡುವ ಅಧಿಕಾರ ವಕೀಲರಿಗಿದೆ: ಪ್ರಶಾಂತ್ ಭೂಷಣ್ ಪರ ಧ್ವನಿ ಎತ್ತಿದ ಬಿಎಚ್ಆರ್‌ಸಿ

ನ್ಯಾಯಾಂಗ ನಿಂದನೆ ಕಾಯಿದೆಯ ಈ ನಿರ್ದಿಷ್ಟ ಸೆಕ್ಷನ್ ಅನ್ನು ಇಂದು ನ್ಯಾಯಾಲಯಗಳು ರದ್ದುಗೊಳಿಸುವ ಸ್ಥಿತಿಯಲ್ಲಿವೆಯೇ? ಮುಂದಿನ ದಿನಗಳಲ್ಲಾದರೂ ಈ ಸೆಕ್ಷನ್ ಅನ್ನು ರದ್ದುಗೊಳಿಸಬಹುದು ಎಂದು ನಿಮಗೆ ಅನ್ನಿಸುತ್ತದೆಯೇ?

ಇದನ್ನು ರದ್ದುಗೊಳಿಸಬೇಕು. ಇದನ್ನು ಜಗತ್ತಿನ ಎಲ್ಲಾ ನಾಗರಿಕ ರಾಷ್ಟ್ರಗಳು ಹಿಂಪಡೆದಿವೆ. ಯಾವುದೇ ತೆರನಾದ ನ್ಯಾಯಾಲಯ ಅಥವಾ ನ್ಯಾಯಮೂರ್ತಿಗಳ ಟೀಕೆಯನ್ನು ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವ ಯತ್ನ ಎಂದು ನೋಡಲಾಗುತ್ತದೆ. ಇದು ನಿಂದನಾ ವ್ಯಾಪ್ತಿಗೆ ಕೈಹಾಕುವಂತೆ ಮಾಡುತ್ತದೆ. ಇದರಲ್ಲಿ ನ್ಯಾಯಮೂರ್ತಿಗಳು ತಮ್ಮದೇ ಹಿತಾಸಕ್ತಿಯ ವಿಷಯದಲ್ಲಿ ತಾವೇ ಕುಳಿತುಕೊಳ್ಳುತ್ತಾರೆ.

ಒಂದೇ ಪ್ರಕರಣದಲ್ಲಿ ನ್ಯಾಯಮೂರ್ತಿಗಳೇ ಆರೋಪಿಸುವವರು, ಅವರೇ ಕ್ರಮ ಜರುಗಿಸುವವರು ಮತ್ತು ಅವರೇ ನ್ಯಾಯದಾನ ಮಾಡುವವರಾಗಿರುತ್ತಾರೆ. ವಾಕ್ ಸ್ವಾತಂತ್ರ್ಯದ ಮೇಲೆ ಸಕಾರಣಗಳಿಲ್ಲದ ನಿರ್ಬಂಧವನ್ನು ಈ ಮೂಲಕ ಹೇರಲಾಗಿದೆ. ಆದ್ದರಿಂದ ಇದನ್ನು ರದ್ದುಗೊಳಿಸಬೇಕಿದೆ. ಶೀಘ್ರದಲ್ಲೇ ಭಾರತದಲ್ಲಿನ ಯಾವುದಾದರೊಂದು ನ್ಯಾಯಾಲಯ ಇದನ್ನು ರದ್ದುಗೊಳಿಸಲಿದೆ.

Also Read
“ನಾನು ಬಿರುನುಡಿದರೆ ಅದರ ಹಿಂದೆ ಯಾವುದೇ ಉದ್ದೇಶ ಇರುವುದಿಲ್ಲ”: ನ್ಯಾ.ಅರುಣ್ ಮಿಶ್ರಾ ಅವರ ವಿವಾದಾತ್ಮಕ ಹೇಳಿಕೆಗಳು

ನಿಮ್ಮ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣ ಮತ್ತು ಆರು ತಿಂಗಳ ಜೈಲು ಶಿಕ್ಷೆಗೆ ಗುರಿಯಾಗಿದ್ದ ನಿವೃತ್ತ ನ್ಯಾ. ಕರ್ಣನ್ ವಿರುದ್ಧದ ನ್ಯಾಯಾಂಗ ನಿಂದನಾ ಪ್ರಕರಣವನ್ನು ಹೋಲಿಕೆ ಮಾಡಲಾಗುತ್ತಿದೆ. ನಿಮಗೆ ವಕೀಲ ವೃಂದ, ನಾಗರಿಕ ಸಮಾಜದ ಅಪಾರ ಬೆಂಬಲವಿತ್ತು. ಆದರೆ, ನ್ಯಾ. ಕರ್ಣನ್ ಅವರ ಬೆಂಬಲಕ್ಕೆ ಯಾರೂ ಇರಲಿಲ್ಲ. ಇದಕ್ಕೆ ಕಾರಣಗಳೇನು ಎಂದು ನಿಮಗೆ ಅನ್ನಿಸುತ್ತದೆ?

ನನ್ನ ಪ್ರಕಾರ ಎರಡೂ ಪ್ರತ್ಯೇಕ ಪ್ರಕರಣಗಳು. ನನ್ನ ಪ್ರಕರಣದಲ್ಲಿ ನ್ಯಾಯಾಂಗದಲ್ಲಿನ ಬೆಳವಣಿಗೆಗಳ ಬಗ್ಗೆ ಪ್ರಾಮಾಣಿಕ ಅಭಿಪ್ರಾಯ ವ್ಯಕ್ತಪಡಿಸಿದ್ದಕ್ಕೆ ನ್ಯಾಯಾಂಗ ನಿಂದನಾ ಪ್ರಕರಣ ದಾಖಲಿಸಲಾಗಿದೆ. ತಮ್ಮ ಕಚೇರಿ ದುರ್ಬಳಕೆ ಮಾಡಿಕೊಂಡಿದ್ದು ಮತ್ತು ಸುಪ್ರೀಂ ಕೋರ್ಟ್ ನ್ಯಾಯಮೂರ್ತಿಗಳನ್ನು ಬಂಧಿಸಿ ಅವರನ್ನು ತಮ್ಮ ಮುಂದೆ ತಂದು ನಿಲ್ಲಿಸಬೇಕು ಎಂಬ ಆದೇಶ ಹೊರಡಿಸಿದ್ದಕ್ಕೆ ನ್ಯಾ. ಕರ್ಣನ್ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಲಾಗಿತ್ತು.

ಕರ್ಣನ್ ಅವರು ಸ್ಪಷ್ಟವಾಗಿ ನ್ಯಾಯಾಂಗದ ಆಡಳಿತದಲ್ಲಿ ಮಧ್ಯಪ್ರವೇಶಿಸಿದ್ದರು. ಕ್ರಿಮಿನಲ್ ನ್ಯಾಯಾಂಗ ನಿಂದನೆಯಲ್ಲಿ ಎರಡು ವಿಧ. ಒಂದು ನ್ಯಾಯಾಂಗದ ಆಡಳಿತಕ್ಕೆ ಕೈಹಾಕುವುದು ಮತ್ತೊಂದು ನ್ಯಾಯಾಲಯವನ್ನು ವಿವಾದಾತ್ಮಕಗೊಳಿಸುವುದು. ಕರ್ಣನ್ ಅವರನ್ನು ಜೈಲಿಗಟ್ಟುವುದೋ, ಬಿಡುವುದೋ ಎಂಬುದು ಮುಕ್ತ ಪ್ರಶ್ನೆ. ತಾವು ಮಾಡಿದ್ದರಿಂದ ಅವರು ಅಂತರ ಕಾಯ್ದುಕೊಳ್ಳಬೇಕಿತ್ತು ಮತ್ತು ಅವರ ಕಚೇರಿ ದುರ್ಬಳಕೆ ಮಾಡಿಕೊಳ್ಳಬಾರದಿತ್ತು. ಆದರೂ ಅವರನ್ನು ಜೈಲಿಗೆ ಅಟ್ಟಬಾರದಿತ್ತು.

Also Read
ನ್ಯಾಯಾಂಗ ನಿಂದನೆ ವ್ಯಾಪ್ತಿಯ ಅರ್ಥೈಸುವಿಕೆ, ವಿಶ್ಲೇಷಣೆ, ತಾರ್ಕಿಕತೆಯಲ್ಲಿ ಸುಪ್ರೀಂ ಕೋರ್ಟ್ ಎಡವಿದೆ: ಸೀರ್ವಾಯ್

ನ್ಯಾಯಾಲಯ ಅಥವಾ ಅದರ ಕಾರ್ಯವೈಖರಿಯನ್ನು ಟೀಕಿಸುವುದು ನ್ಯಾಯಾಂಗ ನಿಂದನೆಯಾಗುವುದಾದರೆ ಸುಪ್ರೀಂ ಕೋರ್ಟ್ ನ ರಚನಾತ್ಮಕ ವಿಮರ್ಶೆಗೆ ಉಳಿದಿರುವ ಪರ್ಯಾಯ ಹಾದಿ ಯಾವುದು?

ನ್ಯಾಯಾಂಗದ ಸುಧಾರಣೆಯನ್ನು ದೃಷ್ಟಿಯಲ್ಲಿಟ್ಟುಕೊಂಡು ನೋಡುವುದಾದರೆ ನ್ಯಾಯಾಂಗದ ಬಗ್ಗೆ ಮುಕ್ತ ಚರ್ಚೆ ಅಗತ್ಯ. ನ್ಯಾಯಾಂಗದಲ್ಲಿ ಯಾವುದು ತಪ್ಪು ಮತ್ತು ಯಾವುದು ಸರಿ ಎಂಬುದರ ಕುರಿತು ಮುಕ್ತವಾದ ಅಭಿಪ್ರಾಯ ಅಭಿವ್ಯಕ್ತಿಗೊಳಿಸಬೇಕು. ಇದು ತಪ್ಪು ಅಥವಾ ಭ್ರಷ್ಟಾಚಾರ ನಡೆಯುತ್ತಿದೆ ಅಥವಾ ನ್ಯಾಯಮೂರ್ತಿಗಳ ಸ್ವಾತಂತ್ರ್ಯ ಹರಣವಾಗಿದೆ ಎಂಬುದು ನ್ಯಾಯಾಂಗ ನಿಂದನೆ ಎಂದಾದರೆ ನ್ಯಾಯಾಂಗದಲ್ಲಿ ಯಾವುದೇ ತೆರನಾದ ಚರ್ಚೆ ಅಥವಾ ಸುಧಾರಣೆ ನಡೆಯುವುದಿಲ್ಲ. ಸುಧಾರಣೆಯ ಮೊದಲ ಆದ್ಯತೆ ಮುಕ್ತ ಮತ್ತು ನ್ಯಾಯಸಮ್ಮತ ಚರ್ಚೆ.

Also Read
ನ್ಯಾ.ಮಿಶ್ರಾ ಬೀಳ್ಕೊಡುಗೆಯಲ್ಲಿ ಮಾತನಾಡಲು ಅವಕಾಶ ನಿರಾಕರಣೆ: ವಕೀಲ ವೃಂದ ಕಂಡರೆ ನ್ಯಾಯಮೂರ್ತಿಗಳಿಗೆ ಭಯವೇ ಎಂದ ದವೆ

ನ್ಯಾಯಮೂರ್ತಿ ಅರುಣ್ ಮಿಶ್ರಾ ಅವರು ನಿವೃತ್ತರಾಗಿದ್ದು, ಅವರ ಬಗ್ಗೆ ನಿಮ್ಮ ಅನಿಸಿಕೆಗಳೇನು?

ಸುಪ್ರೀಂ ಕೋರ್ಟ್ ವಕೀಲರ ಪರಿಷತ್ತಿನ ಅಧ್ಯಕ್ಷ ದುಷ್ಯಂತ್ ದವೆ ಅವರಿಗೆ ಬೀಳ್ಕೊಡುಗೆ ಸಮಾರಂಭದಲ್ಲಿ ಮಾತನಾಡಲು ಅವಕಾಶ ನೀಡಿಲ್ಲ ಎಂಬುದನ್ನು ನಾನು ಓದಿದ್ದೇನೆ. ನ್ಯಾ. ಮಿಶ್ರಾ ಅವರಿಗೆ ಶುಭ ಹಾರೈಸಲು ದವೆ ಬಯಸಿದ್ದರು. ಆದರೆ ಅವರಿಗೆ ಅಲ್ಲಿ ಮಾತನಾಡಲು ಅವಕಾಶ ನೀಡದಿದ್ದದ್ದು ದುರದೃಷ್ಟಕರ. ನಾನೂ ಕೂಡ ಅವರಿಗೆ ಶುಭ ಕೋರುತ್ತೇನೆ.

ನಿವೃತ್ತ ನ್ಯಾಯಮೂರ್ತಿಗಳು ಅದರಲ್ಲೂ ಸರ್ಕಾರಕ್ಕೆ ಮಹತ್ವದ್ದಾದ ಹಲವು ರಾಜಕೀಯ ಸೂಕ್ಷ್ಮ ಪ್ರಕರಣಗಳಲ್ಲಿ ಭಾಗಿಯಾಗಿದ್ದವರು ಯಾವುದೇ ಕಾರಣಕ್ಕೂ ನಿವೃತ್ತಿಯ ಬಳಿಕ ಸರ್ಕಾರದ ಪಾತ್ರವಿರುವ ಹುದ್ದೆಗಳನ್ನು ಅಲಂಕರಿಸಬಾರದು. ಸರ್ಕಾರದ ಪಾತ್ರ ಇರುವ ಯಾವುದೇ ಹುದ್ದೆಯನ್ನು ಸರ್ಕಾರ ಅವರಿಗೆ ನೀಡಬಾರದು, ಅವರೂ ಅವುಗಳನ್ನು ಅಲಂಕರಿಸಬಾರದು ಎಂದು ಭಾವಿಸುತ್ತೇನೆ.

Kannada Bar & Bench
kannada.barandbench.com