ನ್ಯಾಯವಾದಿ ಸಮುದಾಯಕ್ಕೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಒದಗಿಸಬೇಕು: ಕೋಲಾರ ವಕೀಲರ ಸಂಘದ ಅಧ್ಯಕ್ಷ ಜಿ ಶ್ರೀಧರ್

"ಲಾಕ್‌ಡೌನ್‌ ಸಂದರ್ಭದಲ್ಲಿ ನನಗೆ ಗೊತ್ತಿರುವ ಕೆಲ ವಕೀಲರು ತಾವೇ ಖುದ್ದಾಗಿ ಮನೆಗಳಿಂದ ಅಡುಗೆ ಮಾಡಿಸಿಕೊಂಡು ತಂದು ಬಡಬಗ್ಗರಿಗೆ ಹಂಚಿದರು. ಇದೊಂದು ಸ್ಫೂರ್ತಿಯ ವಿಷಯ."
ನ್ಯಾಯವಾದಿ ಸಮುದಾಯಕ್ಕೆ ಆದ್ಯತೆ ಮೇರೆಗೆ ಕೋವಿಡ್ ಲಸಿಕೆ ಒದಗಿಸಬೇಕು: ಕೋಲಾರ ವಕೀಲರ ಸಂಘದ ಅಧ್ಯಕ್ಷ ಜಿ ಶ್ರೀಧರ್
Published on

ʼಕೋವಿಡ್‌ ರೀತಿಯ ಪರಿಸ್ಥಿತಿ ಬರಬಹುದು ಎಂದು ಯಾರೂ ಕನಸಿನಲ್ಲಿ ಕೂಡ ಎಣಿಸಿರಲಿಲ್ಲʼ ಎನ್ನತ್ತಲೇ ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತಿಗಿಳಿದ ಕೋಲಾರ ವಕೀಲರ ಸಂಘದ ಅಧ್ಯಕ್ಷ ಜಿ ಶ್ರೀಧರ್‌ ಕೋವಿಡ್‌ ಮತ್ತು ಕೋಲಾರದ ಬರದ ಸ್ಥಿತಿ ನಡುವೆ ಇರುವ ಸಂಕಟದ ಎಳೆಗಳನ್ನು ಕಟ್ಟಿಕೊಟ್ಟಿದ್ದಾರೆ. ಅವರು ವಕೀಲ ಸಂಘದ ಅಧ್ಯಕ್ಷರಾದ ಕೇವಲ ಒಂದು ವಾರಕ್ಕೇ ಲಾಕ್‌ಡೌನ್‌ ಘೋಷಣೆಯಾಯಿತು. ಸಂಘದ ಉನ್ನತ ಪದಾಧಿಕಾರಿಯಾಗಿ ಅಂತಹ ಸ್ಥಿತಿಯನ್ನು ನಿಭಾಯಿಸಿದ್ದು ಹೇಗೆ ಎಂಬುದರಿಂದ ಹಿಡಿದು, ದುರ್ಭರ ದಿನಗಳಲ್ಲಿ ವಕೀಲ ಸಮುದಾಯ ಜನರೊಂದಿಗೆ ನಿಂತ ಪರಿಯವರೆಗೆ ವಿವಿಧ ಸಂಗತಿಗಳನ್ನು ಅವರು ವಿವರಿಸಿದ್ದಾರೆ.

ಕೋಲಾರದಲ್ಲಿ ಶಾಲಾ ಅಧ್ಯಯನ ಮಾಡಿದ ಶ್ರೀಧರ್, ಕೆಜಿಎಫ್‌ ಸಂಜೆ ಕಾಲೇಜಿನಿಂದ ಕಾನೂನು ಪದವಿ ಪಡೆದಿದ್ದಾರೆ. 2000ನೇ ಇಸವಿಯಿಂದ ವಕೀಲರಾಗಿ ಸೇವೆ ಸಲ್ಲಿಸುತ್ತಿದ್ದಾರೆ. ಸಿವಿಲ್‌ ಪ್ರಕರಣಗಳನ್ನು ಪರಿಣಾಮಕಾರಿಯಾಗಿ ನಿಭಾಯಿಸಿದ ಅನುಭವ ಹೊಂದಿದ್ದಾರೆ.

Q

ಕೋಲಾರ ಸುತ್ತಮುತ್ತಲಿನ ವಕೀಲರ ಸಮುದಾಯದ ಮೇಲೆ ಕೋವಿಡ್‌ ಪರಿಣಾಮ ಹೇಗಿತ್ತು?

A

ಲಾಕ್‌ಡೌನ್‌ ಘೋಷಣೆಯಾದ ಎರಡು ಮೂರು ತಿಂಗಳು - ಅಂದರೆ ಮಾರ್ಚ್‌ನಿಂದ ಮೇ ತನಕ ಸಮಸ್ಯೆಯ ಗಾಢತೆ ಅರ್ಥ ಆಗಿರಲಿಲ್ಲ. ಉಳಿತಾಯ ಮಾಡಿದ ಹಣದಲ್ಲಿ ವಕೀಲ ಸಮುದಾಯ ಅಷ್ಟು ದಿನಗಳ ಕಾಲ ಜೀವನ ತಳ್ಳಿತು. ಆದರೆ ನಂತರವೂ ಲಾಕ್‌ಡೌನ್‌ ಮುಂದುವರಿದಾಗ ಸಂಕಷ್ಟಗಳು ಎದುರಾದವು. ಮುಖ್ಯವಾಗಿ ಕಿರಿಯ ವಕೀಲರು ಬಹಳಷ್ಟು ತೊಂದರೆ ಅನುಭವಿಸಿದರು. ಕೋಲಾರ ಹೇಳಿ ಕೇಳಿ ಬರಪೀಡಿತ ಪ್ರದೇಶ. ಇಲ್ಲಿ ನೀರಿಗೆ ಬಹಳ ಅಭಾವ ಇದೆ. ವಕೀಲ ಸಮುದಾಯಕ್ಕೆ ಸೇರಿದವರು ಹೆಚ್ಚಿನದಾಗಿ ಕೃಷಿ ಹಿನ್ನೆಲೆಯವರು. ಬರದಂತೆಯೇ ಕೋವಿಡ್‌ ಇಲ್ಲಿನ ಜನರಿಗೆ ಮತ್ತೊಂದು ಹೊಡೆತ. ಬರಪೀಡಿತ ಜಿಲ್ಲೆಯಲ್ಲಿ ಕೃಷಿ ಹಿನ್ನೆಲೆಯ ವಕೀಲರು ವ್ಯವಸಾಯದಲ್ಲಿ ತೃಪ್ತಿಪಟ್ಟುಕೊಳ್ಳಲು ಆಗಲಿಲ್ಲ.

Q

ಸಂಘದ ಬಳಿ ಖುದ್ದಾಗಿ ವಕೀಲರು ಅಹವಾಲು ತೋಡಿಕೊಂಡದ್ದು ಇದೆಯೇ?

A

ಹೌದು. ಕೆಲವರು ಖುದ್ದಾಗಿ ಸಮಸ್ಯೆಗಳನ್ನು ಹೇಳಿಕೊಂಡರು. ವಕೀಲರೆಲ್ಲಾ ಸೇರಿ ಅಂತಹವರ ನಿತ್ಯದ ಅವಶ್ಯಕತೆಗೆ ಬೇಕಾದ ಹಣ, ಆಹಾರ ಮತ್ತಿತರ ನಿತ್ಯ ಅವಶ್ಯಕ ಸಾಮಗ್ರಿಗಳನ್ನು ಒದಗಿಸಿದೆವು. ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ಮುಖ್ಯಮಂತ್ರಿ ಯಡಿಯೂರಪ್ಪನವರಿಗೆ ಮನವಿ ಮಾಡಿ ವಕೀಲರಿಗೆ ತಲಾ ರೂ 5000ದಷ್ಟು ಪರಿಹಾರಧನ ಒದಗಿಸಿಕೊಟ್ಟಿತು. ಇದಲ್ಲದೆ ನಾವು ಮೂರ್ನಾಲ್ಕು ಸಾವಿರ ರೂಪಾಯಿ ಹಣ ಸಂಗ್ರಹಿಸಿ ವಕೀಲರಿಗೆ ಸಹಾಯ ಮಾಡಿದ್ದೇವೆ. ಕೋಲಾರದಲ್ಲಿ ಒಟ್ಟು 747 ವಕೀಲರಿದ್ದಾರೆ. ಅದರಲ್ಲಿ 430 ಮಂದಿ ಪ್ರಾಕ್ಟೀಸ್‌ ಮಾಡುತ್ತಿದ್ದಾರೆ. ಕೋವಿಡ್‌ ನಂತರ ಎಪ್ಪತ್ತಕ್ಕೂ ಹೆಚ್ಚು ವಕೀಲರಿಗೆ ಸಹಾಯ ಅತ್ಯಗತ್ಯವಾಗಿತ್ತು. ಅವರಿಗೆ ನೆರವು ಒದಗಿಸಿದ್ದೇವೆ.

ವಕೀಲರ ಸಂಘದ ಅಧ್ಯಕ್ಷನಾಗಿ ಕಳೆದ ಮಾರ್ಚ್‌ 15ರಂದು ಅಧಿಕಾರ ಸ್ವೀಕರಿಸಿದೆ. ಆದರೆ ಅದರ ಮುಂದಿನ ವಾರವೇ ಅಂದರೆ ಮಾರ್ಚ್‌ 23ಕ್ಕೆ ಲಾಕ್‌ಡೌನ್‌ ಘೋಷಣೆಯಾಯಿತು. ಅಧ್ಯಕ್ಷನಾಗಿ ಅದೊಂದು ಸವಾಲಿನ ಸಂಗತಿಯಾಗಿತ್ತು. ಸಭೆ ಸೇರುವಂತಿಲ್ಲ ಎಂದು ಹೈಕೋರ್ಟ್‌ ನಿಯಮ ವಿಧಿಸಿದ್ದರಿಂದ ವಿಧ್ಯುಕ್ತವಾಗಿ ಯಾವುದೇ ಕಾರ್ಯ ಹಮ್ಮಿಕೊಳ್ಳಲಾಗಲಿಲ್ಲ. ಕೋವಿಡ್‌ ಕುರಿತಂತೆಯೇ ಒಂದೆರಡು ಜಾಗೃತಿ ಕಾರ್ಯಕ್ರಮಗಳನ್ನು ನಡೆಸಬೇಕೆಂದಿದ್ದೇನೆ.

Q

ವಕೀಲ ಸಂಘದ ಅಧ್ಯಕ್ಷರಾಗಿ ನೀವು ಸರ್ಕಾರದಿಂದ ನಿರೀಕ್ಷಿಸುತ್ತಿರುವುದು ಏನನ್ನು?

A

ವಕೀಲರ ಸಮುದಾಯ ಜನರೊಂದಿಗೆ ನೇರ ಒಡನಾಟ ಹೊಂದಿರುತ್ತದೆ. ಕಕ್ಷೀದಾರರು, ಸಾಕ್ಷಿಗಳು, ನ್ಯಾಯಾಂಗ ಅಧಿಕಾರಿಗಳು, ಕೋರ್ಟ್‌ ಸಿಬ್ಬಂದಿ, ಪೊಲೀಸರು ಮುಂತಾದವರೊಂದಿಗೆ ನಿರಂತರವಾಗಿ ಸಂಪರ್ಕದಲ್ಲಿರಲೇಬೇಕು. ಹೀಗಾಗಿ ಈ ಸಮುದಾಯಕ್ಕೆ ಕೋವಿಡ್‌ ಲಸಿಕೆ ಅತ್ಯಗತ್ಯವಾಗಿದೆ. ಅಲ್ಲದೆ ಐವತ್ತರ ವಯೋಮಾನ ದಾಟಿದ ವಕೀಲರೇ ನ್ಯಾಯಾಲಯಗಳಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕಂಡು ಬರುತ್ತಾರೆ. ಕೋಲಾರದಲ್ಲಿ 200ರಿಂದ 250 ಮಂದಿ ವಯೋವೃದ್ಧ ವಕೀಲರಿದ್ದಾರೆ. ಅವರಿಗೆ ಲಸಿಕೆ ಒದಗಿಸಲು ಸರ್ಕಾರ ಹೆಚ್ಚಿನ ಪ್ರಾಶಸ್ತ್ಯ ಒದಗಿಸಬೇಕು.

Q

ಕೋವಿಡ್‌ ಸಂದರ್ಭದಲ್ಲಿ ಸ್ಫೂರ್ತಿ ತರುವಂತಹ ಘಟನೆಗಳೇನಾದರೂ ನಡೆದವೇ?

A

ಲಾಕ್‌ಡೌನ್‌ ವೇಳೆ ನನಗೆ ಗೊತ್ತಿರುವ ಕೆಲ ವಕೀಲರು ತಾವೇ ಖುದ್ದಾಗಿ ಮನೆಗಳಿಂದ ಅಡುಗೆ ಮಾಡಿಸಿಕೊಂಡು ತಂದು ಬಡಬಗ್ಗರಿಗೆ ಹಂಚಿದರು. ಇದೊಂದು ಸ್ಫೂರ್ತಿಯ ವಿಷಯ. ಸದಾ ಒಂದಿಲ್ಲೊಂದು ಕಾರಣಕ್ಕೆ ಸಾರ್ವಜನಿಕರ ಜೊತೆ ಒಡನಾಡುವ ವಕೀಲರು ಇನ್ನೊಂದು ರೀತಿಯಲ್ಲಿ ಅದೇ ಜನತೆಗೆ ನೆರವಾದದ್ದು ಸಂತೋಷದ ವಿಷಯ.

Q

ಭವಿಷ್ಯದಲ್ಲಿ ಕೋವಿಡ್‌ ರೀತಿಯ ಘಟನೆಗಳನ್ನು ತಡೆಯಲು ಸಂಘ ಯಾವುದಾದರೂ ಯೋಜನೆಗಳನ್ನು ಹಮ್ಮಿಕೊಂಡಿದೆಯೇ?

A

ಇಂತಹ ಸಂದರ್ಭಗಳನ್ನು ಎದುರಿಸಲು ತುರ್ತು ನಿಧಿಯೊಂದರ ಅಗತ್ಯ ಇರುತ್ತದೆ. ಆಗ ಬೇರೆ ಸಂಘ ಸಂಸ್ಥೆಗಳನ್ನು, ಸರ್ಕಾರವನ್ನು ಅಂಗಲಾಚುವ ಸ್ಥಿತಿ ಬರುವುದಿಲ್ಲ. ಹೀಗಾಗಿ ನಿಧಿ ಸ್ಥಾಪನೆಗೆ ಸಂಘ ಯೋಜನೆ ರೂಪಿಸುತ್ತಿದೆ. ಭವಿಷ್ಯದಲ್ಲಿ ಕೋವಿಡ್‌ ರೀತಿಯ ಪರಿಸ್ಥಿತಿ ಎದುರಿಸಲು ಪ್ರತ್ಯೇಕ ಸಮಿತಿ ಅಸ್ತಿತ್ವಕ್ಕೆ ತರುವ ಚಿಂತನೆ ಇದೆ. ಶೀಘ್ರದಲ್ಲಿಯೇ ಈ ಕುರಿತು ಸಭೆ ಕರೆಯುವೆ.

Kannada Bar & Bench
kannada.barandbench.com