[ಅನುಸಂಧಾನ] ಕಾನೂನು ಪದವಿಯ ಕನವರಿಕೆ ಹೆಚ್ಚಿಸಿದ್ದು ಕೇಶವಾನಂದ ಭಾರತಿ ಪ್ರಕರಣ: ಸಿ ಎಂ ನಿಂಬಣ್ಣವರ್‌

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
[ಅನುಸಂಧಾನ] ಕಾನೂನು ಪದವಿಯ ಕನವರಿಕೆ ಹೆಚ್ಚಿಸಿದ್ದು ಕೇಶವಾನಂದ ಭಾರತಿ ಪ್ರಕರಣ: ಸಿ ಎಂ ನಿಂಬಣ್ಣವರ್‌
CM NimbannavarMLA, Kalaghatgi

ಎರಡು ದಶಕಗಳಿಗೂ ಹೆಚ್ಚು ಕಾಲ ಶಿಕ್ಷಕ, ಪ್ರಾಧ್ಯಾಪಕ ಮತ್ತು ಪ್ರಾಚಾರ್ಯರಾಗಿ ಕೆಲಸ ಮಾಡಿದವರು ಧಾರವಾಡ ಜಿಲ್ಲೆಯ ಕಲಘಟಗಿ ವಿಧಾನಸಭಾ ಕ್ಷೇತ್ರದ ಸದಸ್ಯರಾದ ಸಿ ಎಂ ನಿಂಬಣ್ಣವರ್‌. ಪ್ರಾಚಾರ್ಯರಾಗಿದ್ದಾಗಲೇ ಕಾನೂನು ಪದವಿ ಪಡೆದ ಬಿಜೆಪಿಯ ಪ್ರತಿನಿಧಿ!

ಕಾನೂನು ಪದವಿ ಪಡೆದ ಸುಮಾರು ಒಂದೂವರೆ ದಶಕದ ಬಳಿಕ ಸನ್ನದು ಪಡೆದು ವಕೀಲಿಕೆ ಆರಂಭಿಸಿದ್ದ ನಿಂಬಣ್ಣವರ್‌ ಅವರು ಸ್ವಅಧ್ಯಯನಕ್ಕೆ ಹೆಚ್ಚಿನ ಮಹತ್ವ ನೀಡಿದವರು. ಮೊದಲಿನಿಂದಲೂ ಓದಿನ ಹಿನ್ನೆಲೆಯಿದ್ದುದರಿಂದ ಪ್ರಮುಖ ವಕೀಲರು ಪ್ರಕರಣಗಳನ್ನು ನಡೆಸುವ ರೀತಿ-ನೀತಿಗಳನ್ನು ಖುದ್ದು ನ್ಯಾಯಾಲಯದಲ್ಲಿ ಹಾಜರಾಗಿ ಅರಿಯಲು ಪ್ರಯತ್ನಿಸಿದ್ದರು. ವಕೀಲಿಕೆ ಮಾಡುತ್ತಲೇ ರಾಜಕಾರಣದಲ್ಲಿಯೂ ಹೆಜ್ಜೆ ಗುರುತು ಮೂಡಿಸಿದ್ದರು.

ಶಿಕ್ಷಣ, ಕಾನೂನು ಕ್ಷೇತ್ರದ ಜೊತೆಗೆ ರಾಜಕಾರಣದಲ್ಲೂ ಮಹತ್ವದ ಹೆಜ್ಜೆ ಇಟ್ಟಿರುವ ನಿಂಬಣ್ಣವರ್‌ ಅವರು “ಬಾರ್‌ ಅಂಡ್‌ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ಕಾನೂನು ಓದಲು ಪ್ರೇರಣೆ, ಇಂದಿನ ರಾಜಕಾರಣ, ಶಿಕ್ಷಣ ಕ್ಷೇತ್ರದಿಂದ ವಕೀಲಿಕೆಯಡೆಗಿನ ಪಯಣದ ಕುರಿತು ಮುಕ್ತವಾಗಿ ಮಾತನಾಡಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ದೇಶದ ಎಲ್ಲರೂ ಕಾನೂನಿನ ಅರಿವು ಹೊಂದುವುದು ಅತ್ಯಗತ್ಯ. ಪ್ರಾಧ್ಯಾಪಕನಾಗಿ 25 ವರ್ಷ ಸೇವೆ ಸಲ್ಲಿಸಿ ಸ್ವಯಂ ನಿವೃತ್ತಿ ಬಳಿಕ ನಾನು ವಕೀಲಿಕೆ ಆರಂಭಿಸಿದೆ. ಪ್ರಾಧ್ಯಾಪಕನಾಗಿದ್ದಾಗಲೇ ಹುಬ್ಬಳ್ಳಿಯ ಸಕ್ರಿ ಕಾನೂನು ಕಾಲೇಜಿನಿಂದ ಮೂರು ವರ್ಷಗಳ ಕಾನೂನು ಪದವಿ ಪಡೆದಿದ್ದೆ. 1968ರಲ್ಲಿ ಕಲಘಟಗಿಯ ಮಿಶ್ರಿಕೋಟೆಯಲ್ಲಿ ಸಹಕಾರಿ ಶಿಕ್ಷಣ ಸಂಘದ ಅನುದಾನಿತ ಪ್ರೌಢಶಾಲೆ ಇತ್ತು. ನಾನು ಶಿಕ್ಷಕನಾಗಿ ಸೇರಿ, ಅದಕ್ಕೆ ಸರ್ಕಾರದಿಂದ ಐದು ಎಕರೆ ಭೂಮಿ ಪಡೆದು ಸಂಯುಕ್ತ ಪದವಿ ಪೂರ್ವ ಮಹಾವಿದ್ಯಾಲಯವನ್ನಾಗಿಸಿದೆ. ಇದರ ಮೊದಲ ಪ್ರಾಚಾರ್ಯನಾಗಿ 25 ವರ್ಷ ಕೆಲಸ ಮಾಡಿ ಸ್ವಯಂ ನಿವೃತ್ತಿ ಪಡೆದೆ.

ಬಳಿಕ 1995ರಲ್ಲಿ ಹೈಕೋರ್ಟ್‌ನಿಂದ ಸನ್ನದು ಪಡೆದುಕೊಂಡೆ. ಧಾರವಾಡದ ದೇಶಪಾಂಡೆ ಚಾಳದಲ್ಲಿ ಕಚೇರಿ ಆರಂಭಿಸಿದೆ. ಈ ವೇಳೆಗೆ ಧಾರವಾಡದಲ್ಲಿ ಹೈಕೋರ್ಟ್‌ನ ಸರ್ಕೀಟ್‌ ಪೀಠ ಆರಂಭಿಸಬೇಕೆಂಬ ಕೂಗು ಜೋರಾಯಿತು. ಇದೇ ಸಂದರ್ಭಕ್ಕೆ ಕಲಘಟಗಿಯಲ್ಲಿ ಜೆಎಂಎಫ್‌ಸಿ ನ್ಯಾಯಾಲಯ ಆರಂಭವಾಯಿತು. ನನ್ನೆಲ್ಲಾ ಚಟುವಟಿಕೆಗಳನ್ನು ನನ್ನ ತವರು ಕಲಘಟಗಿಗೆ ವರ್ಗಾಯಿಸಿ, ಎರಡು ಬಾರಿ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷನಾಗಿದ್ದೆ. ಅಲ್ಲಿಂದಲೇ ಸರ್ಕೀಟ್‌ ಪೀಠಕ್ಕಾಗಿ ನಡೆದ ಹೋರಾಟಕ್ಕೆ ಕೈಜೋಡಿಸಿದೆ.

Q

ಪ್ರಾಚಾರ್ಯರಾಗಿದ್ದರೂ ಕಾನೂನು ಪದವಿ ಪಡೆಯಬೇಕೆಂದು ಅನಿಸಿದ್ದೇಕೆ? ಪ್ರೇರಣೆ ಯಾರು?

A

ಪದವಿ ವಿದ್ಯಾರ್ಥಿಯಾಗಿದ್ದಾಗ ನನ್ನ ಎಲ್ಲಾ ಪುಸ್ತಕಗಳಲ್ಲಿ ಬಿ ಎ., ಎಲ್‌ಎಲ್‌ಬಿ ಎಂದು ಬರೆದುಕೊಳ್ಳುತ್ತಿದ್ದೆ. ಅದೊಂಥರ ಹುಚ್ಚು. 1970ರಲ್ಲಿ ನಾನು ನೌಕರಿಗೆ ಸೇರಿದ್ದೆ. 1973ರಲ್ಲಿ ಸಂವಿಧಾನದ ಮೂಲರಚನೆಗೆ ತಿದ್ದುಪಡಿಯಾದ ಮಹತ್ವದ ಕೇಶವಾನಂದ ಭಾರತಿ ಪ್ರಕರಣದ (ಕೇಶವಾನಂದ ಭಾರತಿ ಶ್ರೀಪಾದಗಳವರು vs ಕೇರಳ ರಾಜ್ಯ ಪ್ರಕರಣದಲ್ಲಿ ಅರ್ಜಿದಾರರಾಗಿದ್ದ ಸ್ವಾಮೀಜಿ ಅವರು ಎಡನೀರು ಮಠದ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದಂತೆ 1973ರಲ್ಲಿ ಸುಪ್ರೀಂ ಕೋರ್ಟ್ ಮೆಟ್ಟಿಲೇರಿ ಆ ಮೂಲಕ ಸಂವಿಧಾನದ ಅಡಿ ಮೂಲಭೂತ ಹಕ್ಕುಗಳನ್ನು ಸ್ಪಷ್ಟವಾಗಿ ವ್ಯಾಖ್ಯಾನಿಸಲು ಕಾರಣರಾಗಿದ್ದರು.) ವಿಚಾರಣೆ ದಿನನಿತ್ಯ ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿತ್ತು. ಕಾನೂನು ರೂಪಿಸುವ ಮೂಲಕ ಮಠದ ಆಸ್ತಿಯನ್ನು ಪಡೆಯಲು ಕೇರಳ ಸರ್ಕಾರ ಮುಂದಾಗಿದ್ದ ಪ್ರಕರಣ ಇದಾಗಿತ್ತು. ಹೆಸರಾಂತ ವಕೀಲ ನಾನಿ ಪಾಲ್ಖಿವಾಲಾ ಅವರು ಕೇಶವಾನಂದ ಭಾರತಿ ಸ್ವಾಮೀಜಿ ಪರವಾಗಿ ವಕಾಲತ್ತು ಮಾಡುತ್ತಿದ್ದರು.

ಸಂವಿಧಾನದ 368ನೇ ವಿಧಿಗೆ ತಿದ್ದುಪಡಿ ಮಾಡುವ ಪ್ರಕರಣ ಇದಾಗಿತ್ತು. ಪಾಲ್ಖಿವಾಲಾ ಅವರು ಸತತ 30 ದಿನಗಳ ಕಾಲ ಜಗತ್ತಿನ ವಿವಿಧ ದೇಶಗಳ ಸಂವಿಧಾನ ಉಲ್ಲೇಖಿಸಿ ಪ್ರಖರವಾಗಿ ವಾದಿಸಿದ್ದರು. ತಿದ್ದುಪಡಿ ಎಂದರೆ ಏನು? ಸಂವಿಧಾನಕ್ಕೆ ಹೆಚ್ಚಿನ ವಿಚಾರ ಸೇರ್ಪಡೆ ಮಾಡುವುದೋ? ಮೂಲ ರಚನೆ ಬದಲಿಸುವುದೋ? ಹೀಗೆ ನಾನಾ ವಿಚಾರಗಳನ್ನು ಅವರು ಪ್ರಸ್ತಾಪಿಸಿದ್ದರು. ಇದೆಲ್ಲವನ್ನೂ ಪತ್ರಿಕೆಯಲ್ಲಿ ಓದುತ್ತಿದ್ದ ನನ್ನಲ್ಲಿ ಕಾನೂನಿನ ಮೇಲಿನ ಪ್ರೀತಿ ಮತ್ತು ಆಸಕ್ತಿ ಹೆಚ್ಚಿತು.

ರಾಜ್ಯಶಾಸ್ತ್ರ ಎಂ.ಎ., ಪದವಿಯಲ್ಲಿ ಇಂಗ್ಲಿಷ್‌ ಐಚ್ಛಿಕ ವಿಷಯವಾಗಿತ್ತು. ದೇಶ –ವಿದೇಶಗಳ ಸಂವಿಧಾನಗಳ ತುಲನಾತ್ಮಕ ಅಧ್ಯಯನ, ವಿಶ್ವದ ವಿವಿಧ ರಾಷ್ಟ್ರಗಳ ರಾಜಕಾರಣ ಅಧ್ಯಯನ ಮಾಡುತ್ತಿದ್ದೆ. ಇದರಿಂದಾಗಿ ಕಾನೂನಿನ ಮೇಲೆ ಆಸಕ್ತಿ ಹುಟ್ಟುಕೊಂಡಿತ್ತು. ಶಿಕ್ಷಕ, ಪ್ರಾಧ್ಯಾಪಕ, ಪ್ರಾಚಾರ್ಯನಾಗಿ ಕೆಲಸ ಮಾಡಿದ್ದರಿಂದ ಕಾನೂನು ಪದವಿ ಪಡೆಯಲು ಅನುಕೂಲವಾಯಿತು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ವಕೀಲಿಕೆ ಮಾಡುವ ಉದ್ದೇಶದಿಂದ ಇನ್ನೂ 10 ವರ್ಷ ಬಾಕಿ ಇದ್ದಾಗಲೇ ಪ್ರಾಚಾರ್ಯ ವೃತ್ತಿಯಿಂದ ಸ್ವಯಂ ನಿವೃತ್ತಿ ಪಡೆದೆ. ಧಾರವಾಡದಲ್ಲಿ ಪಿ ಬಿ ಓಲೇಕಾರ ಮತ್ತು ನಾನು ಇಬ್ಬರೂ ಸೇರಿ ಚೇಂಬರ್‌ ಮಾಡಿದ್ದೆವು. ನಾನು ಮೂರ್ನಾಲ್ಕು ವರ್ಷ ವಕೀಲಿಕೆ ಮಾಡಿದ್ದರಬಹುದು ಅಷ್ಟೆ.

ಹಿರಿಯ ವಕೀಲರಾದ ಪಿ ಬಿ ಪಾಟೀಲ್‌, ಹಿರೇಗೌಡರು ನ್ಯಾಯಾಲಯದಲ್ಲಿ ವಾದಿಸುತ್ತಿದ್ದರು. ಅವರ ವಾದ ಸರಣಿಯನ್ನು ಗಂಭೀರವಾಗಿ ಆಲಿಸುತ್ತಿದ್ದೆ. ಎಲ್ಲವನ್ನು ಟಿಪ್ಪಣಿ ಮಾಡಿಕೊಳ್ಳುತ್ತಿದ್ದೆ. ಫೈಲಿಂಗ್‌, ಡ್ರಾಫ್ಟಿಂಗ್‌ ಮತ್ತಿತರ ವಿಧಿ-ವಿಧಾನಗಳ ಬಗ್ಗೆ ಪ್ರಾಧ್ಯಾಪಕನಾಗಿದ್ದರಿಂದ ನಮಗೆ ತಿಳಿಯುತ್ತಿತ್ತು. ಇದರಿಂದ ಮತ್ತೊಬ್ಬರ ಬಳಿ ಹೋಗುವ ಪ್ರಮೇಯ ಉದ್ಭವಿಸಿರಲಿಲ್ಲ. ಸ್ವಯಂ ಅಧ್ಯಯನಕ್ಕೆ ಹೆಚ್ಚು ಒತ್ತು ನೀಡುತ್ತಿದ್ದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಅಭಿವೃದ್ಧಿ, ಸಾರ್ಜನಿಕ ಹಿತಾಸಕ್ತಿ ಹಾಗೂ ನನ್ನ ರಾಜಕೀಯಕ್ಕೂ ಅನುಕೂಲವಾಗುವ ಹಲವು ಪ್ರಕರಣಗಳನ್ನು ನಡೆಸಿದ್ದೇನೆ. ಈ ಪೈಕಿ ಕಲಘಟಗಿ ಜೆಎಂಎಫ್‌ಸಿ ನ್ಯಾಯಾಲಯದಲ್ಲಿ ಹಳ್ಳಿಯೊಂದರ ರಸ್ತೆಗೆ ಸಂಬಂಧಿಸಿದ ಪ್ರಕರಣ ನಡೆಸಿದ್ದೆ. ಪಟ್ಟಭದ್ರ ಹಿತಾಸಕ್ತಿ ಹೊಂದಿರುವ ಕೆಲವರು ರಸ್ತೆ ನಿರ್ಮಾಣವಾಗದಂತೆ ತಡೆದಿದ್ದರು. ಆದರೆ, ನಾವು ರಸ್ತೆ ನಿರ್ಮಾಣ ಮಾಡುವ ಮೂಲಕ ನಮ್ಮ ಗುರಿ ಸಾಧಿಸಿದ್ದೆವು.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ವಕೀಲಿಕೆ ಮಾಡುವ ಉದ್ದೇಶದಿಂದ ಬೋಧನಾ ವೃತ್ತಿ ತೊರೆದರೂ ರಾಜಕಾರಣ ಬಿಡಲಿಲ್ಲ. ಇದಕ್ಕೂ ಮುನ್ನ ಬೋಧಕನಾಗಿದ್ದಾಗಲೂ ಸಮಾಜದ ಕೆಲಸಗಳು, ಧರ್ಮ, ಜನಪರ, ರೈತರಪರ ಕೆಲಸಗಳನ್ನು ಮಾಡುತ್ತಿದ್ದೆ. ರಾಷ್ಟ್ರೀಯ ಕಾರ್ಯಕ್ರಮಗಳಿಗೆ ನನ್ನನ್ನು ಅತಿಥಿಯಾಗಿ ಆಹ್ವಾನಿಸುತ್ತಿದ್ದರು. ನನ್ನ ಓದು ಇಲ್ಲಿ ಸಾಕಷ್ಟು ಕೆಲಸ ಮಾಡಿದೆ. ಇದು ಸಹಜವಾಗಿ ಜನಸಂಪರ್ಕಕ್ಕೆ ನಾಂದಿ ಹಾಡಿತ್ತು. ಇದರ ಜೊತೆ ವಕೀಲಿಕೆ ಸೇರಿಕೊಂಡಿತು. ವಕೀಲಿಕೆ ಮಾಡುತ್ತಲೇ ಕಲಘಟಗಿ ಭಾಗದಲ್ಲಿ ಪಕ್ಷ ಕಟ್ಟುವ ಜವಾಬ್ದಾರಿಯನ್ನು ಬಿಜೆಪಿ ನಾಯಕರು ನನಗೆ ವಹಿಸಿದ್ದರು. ತಳಮಟ್ಟದಿಂದ ಪಕ್ಷದ ವಿವಿಧ ಹುದ್ದೆಗಳನ್ನು ನಿಭಾಯಿಸಿದ್ದೇನೆ. ಹೀಗಾಗಿ, ಪಕ್ಷ ಸಂಘಟನೆಯ ದೃಷ್ಟಿಯಿಂದ ರಾಜಿ, ಸಂಧಾನದ ಪ್ರಕರಣಗಳಿಗೆ ಮಹತ್ವ ನೀಡುತ್ತಿದ್ದೆ.

Q

ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ರಾಜಕಾರಣ ಪ್ರವೇಶಿಕೆ ಬಯಸುವವರು ಕಾನೂನು ಅಧ್ಯಯನ ಮಾಡುವುದನ್ನು ಕಡ್ಡಾಯಗೊಳಿಸಬೇಕು. ಇದರಿಂದ ಯಾವುದು ತಪ್ಪು-ಸರಿ ಎಂಬುದು ತಿಳಿಯುತ್ತದೆ. ಸಾಮಾನ್ಯ ಜ್ಞಾನದ ಜೊತೆಗೆ ಕಾನೂನು ಶಿಕ್ಷಣ ಮಿಳಿತಗೊಂಡಾಗ ನಿರ್ಭಿಡೆಯಿಂದ ಮಾತನಾಡಲು ಅನುಕೂಲವಾಗುತ್ತದೆ. ವಿಷಯ ಮಂಡನೆ, ಚರ್ಚೆ, ವಾದ-ಸಂವಾದದಲ್ಲಿ ಸಮರ್ಥವಾಗಿ ಮಾತನಾಡಲು ಅನುಕೂಲವಾಗುತ್ತದೆ. ಕಾನೂನು ಓದಿದವರಿಗೆ ಆತ್ಮಸ್ಥೈರ್ಯ ಹೆಚ್ಚಿರುತ್ತದೆ. ಎಂಥಾ ಸಂದರ್ಭವನ್ನು ಜಯಿಸುವ ಧೈರ್ಯ ಬರುತ್ತದೆ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದೆನಿಸಿದೆಯೇ?

A

ಇಂದಿನ ರಾಜಕಾರಣ ವ್ಯವಸ್ಥೆಯ ಬಗ್ಗೆ ಅತ್ಯಂತ ನಿರಾಸೆಯಾಗಿದೆ. ಚುನಾವಣೆ ಗೆಲ್ಲುವಾಗಿನ ಮನಸ್ಥಿತಿಯೇ ಬೇರೆ ಇರುತ್ತದೆ. ಅಧಿಕಾರ ಪಡೆಯಲು ಏನಾದರೂ ಮಾಡಲು ಸಿದ್ಧವಾಗಿರುತ್ತೇವೆ. “ರಾಜಕಾರಣ ಮೂರ್ಖನ ಕೊನೆಯ ತಾಣ” ಎಂಬ ಮಾತು ಸತ್ಯವಾಗುತ್ತಿದೆ. ರಾಜಕಾರಣ ಎಂದರೆ ಅಧಿಕಾರ ಪಡೆಯವುದೇ ಅಂತಿಮ ಎಂಬಂತಾಗಿದೆ. ಜನಪರವಾದ ನಿಲುವುಗಳಿಲ್ಲ. ವಿಧಾನ ಮಂಡಲದಲ್ಲಿ ಕಾನೂನು ರಚಿಸಲಾಗುತ್ತದೆ. ಮಸೂದೆಯ ಕರಡನ್ನು 15 ದಿನ ಮುಂಚೆ ಶಾಸಕರಿಗೆ ನೀಡಬೇಕು. ಎಲ್ಲರ ಸಲಹೆ-ಸೂಚನೆ ಪಡೆದು ಕಾನೂನು ರೂಪಿಸಬೇಕು ಎಂಬ ನಿಯಮವಿದೆ. ಆದರೆ, ಇಂದು ವಿಧಿ-ವಿಧಾನ ಪಾಲನೆಯಾಗುತ್ತಿಲ್ಲ. ಮಸೂದೆ ತರುವ ದಿನವೇ ಅದನ್ನು ನಮ್ಮ ಕೈಗೆ ಇಡುತ್ತಾರೆ. ಜಾರಿಗೆ ತರಲು ಉದ್ದೇಶಿಸಿರುವ ಕಾನೂನಿನ ಸಾಧಕ-ಬಾಧಕಗಳು ಮಂತ್ರಿಗಳಿಗೇ ಎಷ್ಟು ತಿಳಿದಿರುತ್ತದೆ ಎಂಬುದರ ಬಗ್ಗೆ ನನಗೆ ಅನುಮಾನಗಳಿವೆ.

Related Stories

No stories found.