ಕಾನೂನು-ರಾಜಕಾರಣ ಬೇರೆಬೇರೆ ಎಂದೆನಿಸಿಲ್ಲ; ನಟನೆ ನನ್ನ ಆಯ್ಕೆಯೂ ಅಲ್ಲ, ನಿರೀಕ್ಷೆಯೂ ಅಲ್ಲ: ಮಾಳವಿಕಾ ಅವಿನಾಶ್‌

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
Malavika Avinash, Lawyer, Actress, Politician
Malavika Avinash, Lawyer, Actress, Politician

ತೆರೆಯ ಮೇಲೆ ವಕೀಲೆ, ನ್ಯಾಯಾಧೀಶೆ, ಪೊಲೀಸ್‌ ಅಧಿಕಾರಿ ಹೀಗೆ ನಾನಾ ಪಾತ್ರಗಳಲ್ಲಿ ಮಿಂಚುವ ಮೂಲಕ ತಮ್ಮದೇ ಆದ ಅಭಿಮಾನಿ ವಲಯ ಸೃಷ್ಟಿಸಿಕೊಂಡಿರುವವರು ವಕೀಲೆ, ನಟಿ ಮಾಳವಿಕಾ ಅವಿನಾಶ್‌. ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಿಂದ ಕಾನೂನು ಪದವಿ ಪಡೆದಿರುವ ಮಾಳವಿಕಾ ಮಧ್ಯಮ ವರ್ಗದ ಕುಟುಂಬಕ್ಕೆ ನಿಲುಕದ ಕ್ಷೇತ್ರವಾಗಿರುವ ರಾಜಕಾರಣದಲ್ಲಿ ಹೆಜ್ಜೆ ಗುರುತು ಮೂಡಿಸುವ ಪ್ರಯತ್ನ ಮಾಡುತ್ತಿದ್ದಾರೆ. ಮಹತ್ವಾಕಾಂಕ್ಷಿಯಾದ ಮಾಳವಿಕಾ ಅವರ ರಾಜಕೀಯ ಏಳಿಗೆಗೆ ಬೆಳ್ಳಿ ತೆರೆಯ ಯಶಸ್ಸು ತನ್ನದೇ ಆದ ಕೊಡುಗೆ ನೀಡಿದೆ. ಇದು ಅವರ ಬಾಲ್ಯದ ರಾಜಕಾರಣಿಯಾಗುವ ಆಸೆಗೆ ನೀರೆರೆದಿದೆ ಎಂದರೆ ತಪ್ಪಾಗಲಾರದು.

ಸದ್ಯ ಭಾರತೀಯ ಜನತಾ ಪಕ್ಷದ ವಕ್ತಾರೆಯಾಗಿ ಕಾರ್ಯನಿರ್ವಹಿಸುತ್ತಿರುವ ಮಾಳವಿಕಾ ಅವರು ಕಾನೂನು ಹೊರತಾದ ರಾಜಕಾರಣವನ್ನು ಕಲ್ಪಿಸಿಕೊಳ್ಳಲೂ ಸಾಧ್ಯವಿಲ್ಲ ಎಂದು ನಂಬಿದ್ದಾರೆ. ನಟನೆ ಮತ್ತು ರಾಜಕಾರಣದಲ್ಲಿ ಯಶಸ್ಸೆನ್ನುವುದು ಪರಿಶ್ರಮ ಮತ್ತು ಪ್ರತಿಭೆಗೆ ಅನುಗುಣವಾಗಿರುವುದಿಲ್ಲ. ಎಲ್ಲವನ್ನೂ ಮೀರಿದ ಅಂಶವೊಂದು ಕೆಲಸ ಮಾಡುತ್ತದೆ (ಎಕ್ಸ್‌ ಫ್ಯಾಕ್ಟರ್‌) ಎಂದು ಸ್ಪಷ್ಟವಾಗಿ ನಂಬಿರುವ ಮಾಳವಿಕಾ ಅವರು ತಮ್ಮ ಕಾನೂನು, ಸಿನಿ ಪಯಣ ಹಾಗೂ ರಾಜಕೀಯ ಏಳು-ಬೀಳುಗಳ ಕುರಿತು “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ವಿವರವಾಗಿ ಮಾತನಾಡಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ನಮ್ಮ ತಾತ ವಕೀಲರ ಬಳಿ ಗುಮಾಸ್ತರಾಗಿದ್ದರು. ನಮ್ಮ ತಂದೆಯನ್ನು ವಕೀಲರನ್ನಾಗಿಸುವ ಆಸೆಯನ್ನು ನಮ್ಮ ತಾತ ಇಟ್ಟುಕೊಂಡಿದ್ದರು. ನಮ್ಮ ತಂದೆ ಕಾನೂನು ಶಿಕ್ಷಣ ಪಡೆದಿದ್ದರೂ ಅವರು ವಕೀಲರಾಗುವ ಬದಲು ಬ್ಯಾಂಕ್‌ ಉದ್ಯೋಗಿಯಾದರು. ಈ ಕಾರಣಕ್ಕಾಗಿ ನಾನು ಕಾನೂನು ಓದಿದೆ. ಒಟ್ಟಾರೆ ಹೇಳಬೇಕೆಂದರೆ ಪಿತ್ರಾರ್ಜಿತವಾಗಿ ನಮಗೆ ಕೇವಲ ಆಸ್ತಿಯಲ್ಲ ಆಕಾಂಕ್ಷೆಗಳು ಬರುತ್ತವೆ ಎಂಬುದಾಗಿದೆ. ನಾನು ಯಾರಾಗಬೇಕು ಎಂಬ ನಿರ್ಧಾರಕ್ಕೆ ಆ ಘಟನೆಯೂ ಕಾರಣವಾಗಿದೆ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ನಾನು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ 1993-98ರ ಅವಧಿಯಲ್ಲಿ ಕಾನೂನು ಅಭ್ಯಾಸ ಮಾಡಿದೆ. ನನ್ನ ವಿದ್ಯಾರ್ಥಿ ಬದುಕಿನ ಸಂದರ್ಭದಲ್ಲಿ ವಿದ್ಯಾರ್ಥಿ ಸಂಘಟನೆಗಳು ಪ್ರಭಾವ ಅಷ್ಟಾಗಿ ಇರಲಿಲ್ಲ. ಇದ್ದ ಎಲ್ಲಾ ವಿದ್ಯಾರ್ಥಿ ಸಂಘಟನೆಗಳೂ ಪಕ್ಷಪಾತಿಯಾಗಿದ್ದವು. ಆದ್ದರಿಂದ ಚಳವಳಿಗೆ ಜಾಗವಿರಲಿಲ್ಲ. ಇದರ ಹೊರತಾಗಿ ಹೆಣ್ಣು ಮಕ್ಕಳ ವಿಚಾರಗಳು, ಕಾನೂನು, ಶೋಷಣೆ ಮತ್ತು ಸಂವಿಧಾನದ ಬಗ್ಗೆ ನನಗೆ ಅಪಾರ ಆಸಕ್ತಿ ಇದ್ದುದರಿಂದ ಅವುಗಳು ಹೆಚ್ಚು ಪ್ರಭಾವ ಬೀರಿದವು.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ಗಣಿ ಮತ್ತು ಭೂ ವಿಜ್ಞಾನ ಕಾನೂನಿನ ಪ್ರಖ್ಯಾತ ವಕೀಲ ಡಿ ಎಲ್‌ ಎನ್‌ ರಾವ್‌ ನನ್ನ ಸೀನಿಯರ್. ಎರಡು ರೀತಿಯ ಕೆಲಸ ಮಾಡುತ್ತಿದ್ದೆ.‌ ಬೆಳಿಗ್ಗೆ ನ್ಯಾಯಾಲಯದಲ್ಲಿ ಕೆಲಸ. ಮಧ್ಯಾಹ್ನದ ಬಳಿಕ ಸರ್ಕಾರೇತರ ಸಂಸ್ಥೆಯಲ್ಲಿ ವೈವಾಹಿಕ ಕಾನೂನುಗಳ ಕುರಿತ ಸಮಾಲೋಚಕಿಯಾಗಿ ಕೆಲಸ ಮಾಡುತ್ತಿದ್ದೆ. ಈಗಿನ ರೀತಿ ಹಿಂದೆ ಗೂಗಲ್‌ ಅಥವಾ ಇನ್ನಾವುದೇ ಸರ್ಚ್‌ ಎಂಜಿನ್‌ಗಳು ಇರಲಿಲ್ಲ. ವೈಯಕ್ತಿಕ ಕಾನೂನು ವಿಚಾರಗಳ ಕುರಿತು ಜನರಿಗೆ ಮಾಹಿತಿ ಪೂರೈಸುವ ಕೆಲಸ ಮಾಡುತ್ತಿದ್ದೆ. ಕಾಲನಂತರ ಪತ್ರಿಕೆಯೊಂದಕ್ಕೆ ಈ ವಿಚಾರಗಳ ಬಗ್ಗೆ ನಾನೇ ಕಾಲಂ ಬರೆಯುವಂತೆ ಆಯಿತು.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ನಾನು ವಾದ ಮಾಡುವಷ್ಟು ಮುಂದೆ ಹೋಗಲೇ ಇಲ್ಲ. ಒಮ್ಮೆ ನ್ಯಾಯಾಧೀಶರೊಬ್ಬರು ನನ್ನನ್ನು ತಮ್ಮ ಚೇಂಬರ್‌ಗೆ ಆಹ್ವಾನಿಸಿದ್ದರು. ಅವರು ಪ್ರಕರಣಕ್ಕೆ ಸಂಬಂಧಿಸಿದಂತೆ ಏನೋ ಕೇಳಬಹುದು ಎಂದು ಅಲ್ಲಿಗೆ ಹೋದೆ. ಆದರೆ, ಅವರು ಟಿ ಎನ್‌ ಸೀತಾರಾಂ ನಿರ್ದೇಶನದ ಮಾಯಾಮೃಗ ಧಾರಾವಾಹಿಯಲ್ಲಿ ಪ್ರಕರಣ ಮುಂದೆ ಏನಾಗುತ್ತದೆ ಎಂದು ಕೇಳಿದ್ದರು. ಅದೇ ನಾನು ನ್ಯಾಯಾಲಯಕ್ಕೆ ಹೋಗಿದ್ದ ಕೊನೆಯ ದಿನ.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ರಾಜಕೀಯ ಪ್ರವೇಶಿಸಲು ಕಾನೂನು ಓದುವುದನ್ನು ಅರ್ಹತೆಯನ್ನಾಗಿಸಬಹುದು ಎಂದು ನನಗನ್ನಿಸುತ್ತದೆ. ಜನಪ್ರತಿನಿಧಿಯ ಕೆಲಸ ಕಾನೂನು ರೂಪಿಸುವುದು. ಅದಕ್ಕಾಗಿ ಕಾನೂನು ಕಲಿತವರು ಜನಪ್ರತಿನಿಧಿಯಾಗುವುದು ಸೂಕ್ತ ಎಂದು ನನಗೆ ಅನ್ನಿಸುತ್ತದೆ. ಹಾಗೆಂದು ಕಾನೂನು ಓದದವರು ರಾಜಕಾರಣಿಯಾಗಬಾರದು ಎಂದಲ್ಲ. ಸ್ಟೇಟ್‌ಮನ್‌ ಎನಿಸಿಕೊಂಡ ಹಲವರು ಉದಾಹರಣೆಗೆ ಮಹಾತ್ಮ ಗಾಂಧೀಜಿ, ಬಿ ಆರ್‌ ಅಂಬೇಡ್ಕರ್‌, ಅಬ್ರಾಹಂ ಲಿಂಕನ್‌ ಅವರು ವಕೀಲರಾಗಿದ್ದವರು. ರಾಜಕೀಯ ಮತ್ತು ವಕೀಲಿಕೆ ಒಂದೇ ನಾಣ್ಯದ ಎರಡು ಮುಖ. ಇವುಗಳನ್ನು ಬೇರ್ಪಡಿಸಿ ನನಗೆ ನೋಡಲಾಗದು. ಯಾವ ಆಸೆ ಇತ್ತೋ, ಇಲ್ಲವೋ ಗೊತ್ತಿಲ್ಲ. ಆದರೆ, ರಾಜಕಾರಣಿಯಾಗುವ ಆಸೆಯಂಥೂ ನನಗೆ ಇತ್ತು.

Q

ಕಾನೂನು ಶಿಕ್ಷಣ, ನಟನೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಭಾರತದ ಕಾನೂನಿನ ಪ್ರಕಾರ ರಾಜಕಾರಣಿಯಾಗಲು ಯಾವುದೇ ಶೈಕ್ಷಣಿಕ ಅರ್ಹತೆ ಅಗತ್ಯವಿಲ್ಲ. ಆದರೆ, ನಾನು ಭಾಗವಾಗಿರುವ ಎರಡೂ ಕ್ಷೇತ್ರಗಳಲ್ಲಿ ಶೈಕ್ಷಣಿಕ ಹಿನ್ನೆಲೆ ಇದ್ದರೆ ಅನುಕೂಲ. ಇದು ಪರೋಕ್ಷ ಮತ್ತು ಪ್ರತ್ಯಕ್ಷವಾಗಿ ಆತ್ಮ ವಿಶ್ವಾಸ ಹೆಚ್ಚಿಸುತ್ತದೆ. ವಕೀಲರಾಗಿದ್ದರೆ ನಮ್ಮನ್ನು ಯಾಮಾರಿಸಲಾಗದು ಎಂಬ ಸಣ್ಣ ಎಚ್ಚರಿಕೆ ಜನರಿಗೆ ಇರುತ್ತದೆ. ಅಲ್ಲದೇ ವಕೀಲರಾಗಿರುವುದರಿಂದ ತಮ್ಮ ಸಮಸ್ಯೆಗೆ ಪರಿಹಾರವೂ ದೊರೆಯಬಹುದು ಎಂಬ ನಂಬಿಕೆ ಅವರಿಗೆ ಇರುತ್ತದೆ. ಇದರಿಂದ ಜನರು ನಮ್ಮ ಜೊತೆ ಎಚ್ಚರಿಕೆಯಿಂದ ವ್ಯವಹರಿಸುತ್ತಾರೆ. ನಾನು ನಟನಾ ಕ್ಷೇತ್ರದಿಂದ ರಾಜಕಾರಣಕ್ಕೆ ಪ್ರವೇಶಿಸಿರುವುದರಿಂದ ಎಲ್ಲಾ ರೀತಿಯಲ್ಲೂ ಇತರರಿಗಿಂತ ನನಗೆ ಅನುಕೂಲಕರ ವಾತಾವರಣವಿದೆ. ಜನರಿಗೆ ನಾನು ಯಾರೆಂದು ಗೊತ್ತು. ವಕೀಲೆಯಾಗಿರುವುದರಿಂದ ನನಗೆ ವಿಚಾರವೂ ಗೊತ್ತು. ಸಾಕಷ್ಟು ಕಲಾವಿದರಿಗೆ ಈ ಅವಕಾಶ ಇರುವುದಿಲ್ಲ. ಸಣ್ಣ ವಯಸ್ಸಿನಲ್ಲೇ ಬಹುತೇಕರು ನಟನಾ ಕ್ಷೇತ್ರಕ್ಕೆ ಬಂದು ಬಿಟ್ಟಿರುತ್ತಾರೆ. ಅವರಿಗೆ ಓದುವ ಅವಕಾಶ ಸಿಕ್ಕಿರುವುದಿಲ್ಲ. ಮೊದಲಿಗೆ ಸಿನಿಮಾದಲ್ಲಿ ನಟಿಸಿದಾಗ ನನಗೆ 16 ವರ್ಷ.

Q

ಈಗಲೂ ಕಾನೂನು ಸಲಹೆ ಮುಂದುವರೆಸಿದ್ದೀರಾ?

A

ಮಾಧ್ಯಮದ ಮೂಲಕ ಕಾನೂನಿನ ಕುರಿತಾದ ಜಾಗೃತಿ ಮೂಡಿಸುವುದು, ವಿಶೇಷವಾಗಿ ಮಹಿಳೆಯರಿಗೆ ಸಂಬಂಧಿಸಿದ ಕಾನೂನುಗಳ ಬಗ್ಗೆ ಅರಿವು ಮೂಡಿಸುವುದು ನನಗೆ ಇಷ್ಟ. ಇವುಗಳ ಲಿಂಕ್‌ ಅನ್ನು ನಾನು ನಿರಂತರವಾಗಿ ಹುಡುಕುತ್ತಿರುತ್ತೇನೆ. ಎಲ್ಲವೂ ಇದರಲ್ಲಿ ಬಂದು ಬಿಡುತ್ತವೆ. ರಾಜಕೀಯದಲ್ಲಿದ್ದವರಿಗೆ ದಿನನಿತ್ಯ ಕಾನೂನಿನ ಅರಿವು ಅಗತ್ಯ. ಕೃಷಿ ಕಾಯಿದೆ, ಪೌರತ್ವ ತಿದ್ದುಪಡಿ ಕಾಯಿದೆ, ಜಮ್ಮು ಮತ್ತು ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ಕಲ್ಪಿಸಿದ್ದ 370ನೇ ವಿಧಿ ಸೇರಿದಂತೆ ಯಾವುದೇ ವಿಚಾರದ ಬಗ್ಗೆ ಮಾತನಾಡಬೇಕಾದರೆ ಅದರ ಬಗ್ಗೆ ಅರಿವಿರಬೇಕು. ನನಗೆ ಕಾನೂನಿನ ಹೊರತಾಗಿ ಬದುಕನ್ನು ಊಹಿಸುವುದಕ್ಕೂ ಕಷ್ಟ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

A

ಯಾವುದಕ್ಕೂ ಯಾರೂ ನನ್ನನ್ನು ಬಲವಂತ ಮಾಡಿಲ್ಲ. ನನ್ನ ಯಾವುದೇ ತೀರ್ಮಾನದ ಬಗ್ಗೆ ನನಗೆ ಬೇಸರವಿಲ್ಲ. ನಾನು ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿಯಾಗಬೇಕು ಎಂಬುದು ನನ್ನ ತಂದೆಯ ಆಸೆಯಾಗಿತ್ತು. ಆದರೆ, ಅದು ಆಗಲಿಲ್ಲ. ಆದರೆ, ಯಾವಾಗ ಬೇಕಾದರೂ ನಾನು ಕಪ್ಪು ಕೋಟು ಧರಿಸಿ ವಕೀಲಿಕೆ ಮುಂದುವರೆಸಬಹುದು. ಇದನ್ನು ಶೀಘ್ರದಲ್ಲೇ ಮಾಡುವ ಆಸೆ ಇದೆ.

Q

ಅರ್ಹತೆ ಮತ್ತು ಪ್ರತಿಭೆಗೆ ತಕ್ಕಂತೆ ರಾಜಕೀಯದಲ್ಲಿ ನಿರೀಕ್ಷಿತ ಸ್ಥಾನಮಾನ ದೊರೆತಿಲ್ಲ ಎಂಬ ಭಾವನೆ ನಿಮ್ಮಲ್ಲಿ ಇದೆಯೇ?

A

ನಟನೆ ಮತ್ತು ರಾಜಕಾರಣದಲ್ಲಿ ಯಶಸ್ಸು ನಿಮ್ಮ ಪರಿಶ್ರಮ ಮತ್ತು ಪ್ರತಿಭೆಗೆ ಅನುಗುಣವಾಗಿರುವುದಿಲ್ಲ. ಇಲ್ಲಿ ಎಲ್ಲವನ್ನೂ ಮೀರಿದ ಅಂಶವೊಂದು ಕೆಲಸ ಮಾಡುತ್ತದೆ (ಎಕ್ಸ್‌ ಫ್ಯಾಕ್ಟರ್‌). ಇದನ್ನು ಅರ್ಥ ಮಾಡಿಕೊಂಡು, ಒಪ್ಪಿಕೊಳ್ಳದಿದ್ದರೆ ಇಲ್ಲಿ ಇರಲಾಗದು. ಇದು ಬಹುತೇಕವಾಗಿ ಎಲ್ಲಾ ಕ್ಷೇತ್ರಗಳಿಗೂ ಅನ್ವಯಿಸುತ್ತದೆ. ಇದೆಲ್ಲವೂ ವಿಧಿಗೆ ಬಿಟ್ಟ ವಿಚಾರ. ನಾವು ನಮ್ಮ ಆಟವನ್ನು ಆಡುತ್ತಿರಬೇಕು.

Q

ಸಿನಿಮಾ, ಧಾರಾವಾಹಿಗಳಲ್ಲಿ ವಕೀಲೆ, ನ್ಯಾಯಮೂರ್ತಿಯ ಪಾತ್ರಗಳಲ್ಲಿ ಗಮನಾರ್ಹವಾಗಿ ಅಭಿನಯಿಸಿದ್ದೀರಿ. ಇದು ವೃತ್ತಿ ಬದುಕಿನಲ್ಲಿ ಸಾಧ್ಯವಾಗಲಿಲ್ಲ ಎಂಬ ಭಾವನೆ ಏನಾದರೂ ಇದೆಯೇ?

A

ಹ್ಹಾ.. ಹ್ಹಾ.. ಒಮ್ಮೆ ಸೀತಾರಾಂ ಸರ್‌ ನನಗೆ ನ್ಯಾಯಮೂರ್ತಿಯ ಪಾತ್ರ ಕೊಟ್ಟಾಗ, ನೋಡಿ ಸರ್‌ ಟಿವಿಯಲ್ಲಿ ನಾನು ನ್ಯಾಯಮೂರ್ತಿ, ವಕೀಲೆಯಾಗಿ ಪದನ್ನೋತಿ ಪಡೆದುಬಿಟ್ಟೆ ಎಂದಿದ್ದೆ. ಅವರು ಜೋರಾಗಿ ನಕ್ಕಿದ್ದರು. ವಾಸ್ತವದಲ್ಲಿ ನೀವು ನಟನಾ ಕ್ಷೇತ್ರದಲ್ಲಿರುವುದರಿಂದ ಇದೆಲ್ಲವೂ ಸಾಧ್ಯ. ನಿಜ ಬದುಕಿನಲ್ಲಿ ಅದು ಸಾಧ್ಯವಾಗಬೇಕು ಎಂಬುದು ನಿರೀಕ್ಷೆಯಷ್ಟೆ.

Q

ವಕೀಲಿಕೆ, ನಟನೆ ಮತ್ತು ರಾಜಕಾರಣದಲ್ಲಿ ಅತ್ಯಂತ ಪ್ರಿಯವಾದ ಕ್ಷೇತ್ರ ಯಾವುದು? ರಾಜಕಾರಣದಲ್ಲಿ ಸಕ್ರಿಯವಾಗಿರುವುದರಿಂದ ಯಾವುದನ್ನು ಹೆಚ್ಚಾಗಿ ಮಿಸ್‌ ಮಾಡಿಕೊಳ್ಳುತ್ತಿದ್ದೀರಿ?

A

ಕಾನೂನು ಮತ್ತು ರಾಜಕಾರಣ ಬೇರೆ ಎಂದು ನನಗೆ ಅನ್ನಿಸಿಲ್ಲ. ನನ್ನ ಬದುಕಿನ ಕಾನೂನು ಏನೆಂದರೆ ಕಾನೂನು ರೂಪಿಸುವುದು ಮತ್ತು ಅದನ್ನು ಪ್ರಾಕ್ಟೀಸ್‌ ಮಾಡುವುದು. ಒಟ್ಟಾರೆ ಕಾನೂನಿನ ಜೊತೆ ಇರುವುದು. ನನ್ನ ಮುಂದೆ ನಟನೆ ಮತ್ತು ರಾಜಕಾರಣ ಎರಡು ಆಯ್ಕೆಗಳಿದ್ದವು. ಆದರೆ, ನನ್ನ ಆಯ್ಕೆ ರಾಜಕಾರಣವೇ. ನಟಿಯಾಗಬೇಕು ಎಂಬ ಆಸೆ ಅಥವಾ ನಿರೀಕ್ಷೆ ಇರಲಿಲ್ಲ. ತುಂಬಾ ಚಿಕ್ಕ ವಯಸ್ಸಿನಿಂದಲೂ ಸಂಸತ್‌ ಸದಸ್ಯೆಯಾಗಿ ಮಾತನಾಡಬೇಕು ಎಂಬ ಆಸೆ ಇದೆ.

Related Stories

No stories found.
Kannada Bar & Bench
kannada.barandbench.com