[ಅನುಸಂಧಾನ] ವೃತ್ತಿಯಿಂದ ವಕೀಲ, ಪ್ರವೃತ್ತಿಯಿಂದ ರಾಜಕಾರಣಿ: ಪ್ರತಿಪಕ್ಷ ನಾಯಕ ಎಸ್ ಆರ್ ಪಾಟೀಲ್

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
S R Patil, Leader of the Opposition, Karnataka Legislative Council
S R Patil, Leader of the Opposition, Karnataka Legislative Council

ಬಾಗಲಕೋಟೆ ವ್ಯಾಪ್ತಿಯಲ್ಲಿ ಪ್ರಮುಖ ವಕೀಲರಾಗಿ ಗುರುತಿಸಿಕೊಂಡಿದ್ದ ಎಸ್‌ ಆರ್‌ ಪಾಟೀಲ್ ಎಂದೇ ಜನಮಾನಸಕ್ಕೆ ಪರಿಚಿತರಾದ ಶಿವನಗೌಡ ರುದ್ರಗೌಡ ಪಾಟೀಲ್‌ ಅವರು ರಾಜಕಾರಣ ಪ್ರವೇಶಿಸಲು ಕಾರಣವಾಗಿದ್ದು ಮಾಜಿ ಪ್ರಧಾನ ಮಂತ್ರಿ ರಾಜೀವ್ ಗಾಂಧಿ ಅವರ ಕಾಲದಲ್ಲಿ ಜಾರಿಗೆ ಬಂದ ಅಧಿಕಾರ ವಿಕೇಂದ್ರೀಕರಣದ ನಡೆ. ಅಖಂಡ ವಿಜಯಪುರ ಜಿಲ್ಲೆಯಲ್ಲಿ ಪ್ರಭಾವಿ ಕ್ರಿಮಿನಲ್ ಮತ್ತು ಸಿವಿಲ್‌ ನ್ಯಾಯವಾದಿಯಾಗಿ ಗುರುತಿಸಿಕೊಂಡಿದ್ದ ಪಾಟೀಲ್‌ ಅವರು ಜಿಲ್ಲಾ ಪರಿಷತ್‌ ಸದಸ್ಯರಾಗಿ ರಾಜಕೀಯ ಬದುಕು ಆರಂಭಿಸಿ ಇಂದು ವಿಧಾನ ಪರಿಷತ್‌ ಪ್ರತಿಪಕ್ಷ ನಾಯಕರಾಗಿ ಹೊರಹೊಮ್ಮಿದ್ದಾರೆ. ಇದು ಚಾರಿತ್ರಿಕ ನಿಲುವಾದ ಅಧಿಕಾರ ವಿಕೇಂದ್ರೀಕರಣದ ಯಶಸ್ಸು ಎನ್ನುವುದು ಪಾಟೀಲರ ಖಚಿತ ನಂಬುಗೆ.

ಮೂರು ದಶಕಗಳಿಗೂ ಹೆಚ್ಚಿನ ಕಾಲದಿಂದ ಸಕ್ರಿಯ ರಾಜಕಾರಣದಲ್ಲಿರುವ ಮೃದು ಹಾಗೂ ಮಿತಭಾಷಿಯಾದ ಪಾಟೀಲ್‌ ಅವರು ವಿಜಯಪುರ - ಬಾಗಲಕೋಟೆ ಸ್ಥಳೀಯ ಸಂಸ್ಥೆಗಳ ಕ್ಷೇತ್ರದಿಂದ ನಾಲ್ಕು ಬಾರಿ ಪರಿಷತ್‌ ಸದಸ್ಯರಾಗಿ ಆಯ್ಕೆಯಾಗಿದ್ದಾರೆ. ಪರಿಷತ್‌ ಸದಸ್ಯ, ಸಭಾನಾಯಕ, ಮಂತ್ರಿ ಮತ್ತು ಪ್ರತಿಪಕ್ಷ ನಾಯಕರಾಗಿ ಸಮರ್ಥವಾಗಿ ಕೆಲಸ ಮಾಡಲು 15 ವರ್ಷಗಳ ವಕೀಲಿಕೆಯ ಕೊಡುಗೆ ಅಪಾರ ಎನ್ನುವ ಅವರು ವಕೀಲಿಕೆ ಅತ್ಯಂತ ಪ್ರಿಯವಾದ ಕೆಲಸ ಎಂದು ಹೇಳುವುದನ್ನು ಮರೆಯುವುದಿಲ್ಲ. ಕೃಷಿ ಚಟುವಟಿಕೆಗಳ ಮೇಲೂ ತೀವ್ರವಾದ ಒಲವು ಹೊಂದಿರುವ ಪಾಟೀಲರು ಕಾನೂನು ಅಧ್ಯಯನ ಮುಗಿದ ಬಳಿಕ ಎರಡು ಮೂರು ವರ್ಷ ಕೃಷಿಕರಾಗಿದ್ದವರು. ತಂದೆಯ ಸಲಹೆಯಂತೆ ಪ್ರಾಕ್ಟೀಸ್‌ ಆರಂಭಿಸಿದ ಪಾಟೀಲರು ಸಾಗಿ ಬಂದ ದಾರಿಯುದ್ದಕ್ಕೂ ಸಜ್ಜನಿಕೆಯೇ ನಳನಳಿಸಿದೆ. ಅವರೊಂದಿಗೆ “ಬಾರ್‌ ಅಂಡ್‌ ಬೆಂಚ್” ನಡೆಸಿದ ಸಂದರ್ಶನ ಹೀಗಿದೆ:

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಹೆಸರಾಂತ ವಕೀಲ ನಾನಿ ಪಾಲ್ಖಿವಾಲಾ ಅವರ ಹೆಸರನ್ನು ಬಹಳ ಕೇಳಿದ್ದೆ. ಅವರೇ ನನಗೆ ಆದರ್ಶ. ಆ ಕಾಲದಲ್ಲಿ ವಕೀಲರಿಗೆ ದೊಡ್ಡ ಗೌರವವಿತ್ತು. ವಕೀಲರು ಎಂದರೆ ಸಮಾಜದ ಕೆನೆಪದರದಲ್ಲಿರುವ ಗಣ್ಯ ವರ್ಗವಾಗಿತ್ತು. ನೊಂದವರ ಪರವಾಗಿ ಕೆಲಸ ಮಾಡುವ ತುಡಿತ ಇಟ್ಟುಕೊಂಡಿದ್ದರಿಂದ ವಕೀಲನಾದೆ. ನಮ್ಮ ಪೋಷಕರಿಗೆ ನಾನೊಬ್ಬನೇ ಮಗ. ವಕೀಲನಾಗಿ ಬಾಗಲಕೋಟೆಯಲ್ಲೇ ಕೆಲಸ ಮಾಡುವ ಇರಾದೆಯಿಂದ ಬಿ ಎಸ್‌ಸಿ ಪದವಿ ಮುಗಿಸಿ, ಎಂ ಎಸ್‌ಸಿ ಸೇರಬೇಕೆಂದಿದ್ದ ನಾನು ಧಾರವಾಡ ವಿಶ್ವವಿದ್ಯಾಲಯದ ಕಾನೂನು ಕಾಲೇಜು ಸೇರಿದೆ. 1974ರಲ್ಲಿ ಕಾನೂನು ಪದವಿ ಪೂರೈಸಿದೆ.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ಕಾಲೇಜಿನಲ್ಲಿ ನಮ್ಮ ಪ್ರೊಫೆಸರ್‌ಗಳ ಪ್ರಭಾವ ಗಾಡವಾಗಿತ್ತು. ಭಾರತೀಯ ದಂಡ ಸಂಹಿತೆ (ಐಪಿಸಿ) ವಿಷಯ ಬೋಧಿಸುತ್ತಿದ್ದ ಸಿ ಕೆ ಎನ್‌ ರಾಜ ಅವರು ಅದ್ಭುತ ಪ್ರೊಫೆಸರ್. ಕಾನೂನಿನ ಕುಣಿಕೆಯಿಂದ ಯಾವುದೇ ಆರೋಪಿ ಸುಲಭವಾಗಿ ಪಾರಾಗಲಾಗದ ರೀತಿಯಲ್ಲಿ ಲಾರ್ಡ್‌ ಮೆಕಾಲೆ ರೂಪಿಸಿರುವ ಐಪಿಸಿ ಮತ್ತು ಪ್ರಜಾಪ್ರಭುತ್ವವೇ ಅವಲಂಬಿತವಾಗಿರುವ ಸಾಂವಿಧಾನಿಕ ಕಾನೂನುಗಳು ನನಗೆ ಅತ್ಯಂತ ಪ್ರಿಯವಾದ ವಿಷಯಗಳು.

Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದಿರಿ?

A

ಕಾನೂನು ಪದವಿ ಪಡೆದ ತಕ್ಷಣ ನಾನು ವಕೀಲಿಕೆ ಆರಂಭಿಸಲಿಲ್ಲ. ಕೃಷಿಯ ಮೇಲಿನ ಪ್ರೀತಿಯಿಂದಾಗಿ ಅತ್ತ ಮುಖ ಮಾಡಿದೆ. ಎರಡು ಮೂರು ವರ್ಷಗಳ ನಂತರ ನಮ್ಮ ತಂದೆಯವರ ಒತ್ತಾಯದ ಮೇರೆಗೆ ವಕೀಲಿಕೆ ಆರಂಭಿಸಿದೆ. ಬಾಗಲಕೋಟೆಯಲ್ಲಿದ್ದ ಹಿರಿಯ ವಕೀಲ ಜಿ ಎಂ ದೇಶಪಾಂಡೆ ಅವರ ಬಳಿ ಪ್ರಾಕ್ಟೀಸ್‌ ಆರಂಭಿಸಿದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ನಾನು ಕ್ರಿಮಿನಲ್‌ ಮತ್ತು ಸಿವಿಲ್‌ ಎರಡೂ ಪ್ರಕರಣಗಳನ್ನು ನಡೆಸುತ್ತಿದ್ದೆ. ಕ್ರಿಮಿನಲ್‌ ಪ್ರಕರಣಗಳ ಮೇಲೆ ನನಗೆ ಹೆಚ್ಚು ಆಸಕ್ತಿ. ಅವಿಭಜಿತ ವಿಜಯಪುರ ಜಿಲ್ಲೆಯ ಸೆಷನ್ಸ್‌ ನ್ಯಾಯಾಲಯದಲ್ಲಿ ಐಪಿಸಿ 302ರ ಅಡಿ ದಾಖಲಾಗಿದ್ದ ಐದು ಪ್ರಕರಣ ನಡೆಸಿದ್ದೆ. ಮೊಟ್ಟಮೊದಲನೆಯದಾಗಿ ಕೊಲೆ ಪ್ರಕರಣ ನಡೆಸಿದ್ದೆ. ಇದರಲ್ಲಿ ಮೂವರು ಆರೋಪಿಗಳಿದ್ದರು. ವ್ಯಕ್ತಿಯೊಬ್ಬ ಪತ್ನಿಯನ್ನು ಕೊಲೆ ಮಾಡಿದ್ದ. ಅಧೀನ ನ್ಯಾಯಾಲಯದಲ್ಲಿ ಆರೋಪಿಯ ಸಹೋದರರು ಖುಲಾಸೆಗೊಂಡಿದ್ದರು. ಆದರೆ ಪತಿ ಅಪರಾಧಿ ಎಂದು ಘೋಷಣೆಯಾಗಿದ್ದರಿಂದ ಆತ ಅಳಲಾರಂಭಿಸಿದ್ದ. ಕೊನೆಗೆ ಆತನ ಪರವಾಗಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸಿ, ಶಿಕ್ಷೆಯಿಂದ ಪಾರು ಮಾಡಿದ್ದೆವು.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆ ಅವರ ಕಾಲದಲ್ಲಿ ಅಧಿಕಾರ ವಿಕೇಂದ್ರೀಕರಣ ಜಾರಿಗೆ ಬಂದಿತ್ತು. ಆ ವೇಳೆಗೆ ನಮ್ಮ ಊರು ಬೀಳಗಿ ತಾಲ್ಲೂಕಿನಲ್ಲಿ ಪ್ರಮುಖ ವಕೀಲನಾಗಿ ಗುರುತಿಸಿಕೊಂಡಿದ್ದೆ. ಭೂಸ್ವಾಧೀನ ಪ್ರಕರಣಗಳು, ರೈತರಿಗೆ ಪರಿಹಾರ ಕೊಡಿಸುವುದು ಸೇರಿದಂತೆ ಸಾಕಷ್ಟು ಪ್ರಕರಣ ನಡೆಸಿ ಹೆಸರು ಮಾಡಿದ್ದೆ. ನಮ್ಮ ಚೇಂಬರ್‌ನಲ್ಲಿ ಏಳೆಂಟು ಮಂದಿ ವಕೀಲರು ಕೆಲಸ ಮಾಡುತ್ತಿದ್ದರು. ಜನರ ಒತ್ತಾಯದ ಮೇರೆಗೆ ಅದೇ ಮೊದಲ ಬಾರಿಗೆ 1987ರಲ್ಲಿ ನಡೆದ ಜಿಲ್ಲಾ ಪರಿಷತ್‌ ಚುನಾವಣೆಗೆ ಸ್ಪರ್ಧಿಸಿದೆ. ಇದಕ್ಕೂ ಮುನ್ನ ಬೀಳಗಿ ತಾಲ್ಲೂಕು ಯುವ ಕಾಂಗ್ರೆಸ್‌ ಅಧ್ಯಕ್ಷನಾಗಿದ್ದೆ. ತುರುಸಿನ ಪೈಪೋಟಿ ಇದ್ದುದರಿಂದ ನನ್ನನ್ನು ಅಭ್ಯರ್ಥಿಯನ್ನಾಗಿಸಿದರು. ಜನರ ನಿರೀಕ್ಷೆಯಂತೆ ಗೆದ್ದ ಬಳಿಕ ನನ್ನನ್ನು ಪ್ರತಿಪಕ್ಷದ ನಾಯಕನನ್ನಾಗಿ ಆಯ್ಕೆ ಮಾಡಿದ್ದರು.

ಇದಾದ ಬಳಿಕ ವಿಜಯಪುರ-ಬಾಗಲಕೋಟೆ ಅಖಂಡ ಜಿಲ್ಲೆಯ ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್‌ಗೆ ನಾಲ್ಕು ಬಾರಿ ಆಯ್ಕೆಯಾಗಿದ್ದೇನೆ. ಸಭಾ ನಾಯಕನಾಗಿ, ಸಚಿವನಾಗಿ ಈಗಿನದ್ದೂ ಸೇರಿ ಎರಡು ಬಾರಿ ವಿಧಾನ ಪರಿಷತ್‌ ವಿಪಕ್ಷ ನಾಯಕನಾಗಿದ್ದೇನೆ.

Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಕಾನೂನು ಅಧ್ಯಯನ ಜೊತೆಗೆ ಪ್ರಾಕ್ಟೀಸ್‌ ಮಾಡಿದ್ದರೆ ರಾಜಕಾರಣದಲ್ಲಿ ಅನುಕೂಲವಾಗುತ್ತದೆ. ನಾನು 15 ವರ್ಷಗಳ ಕಾಲ ವಕೀಲನಾಗಿ ಕೆಲಸ ಮಾಡಿದ್ದೇನೆ. ಸಂವಿಧಾನದ ವ್ಯಾಪ್ತಿಯಲ್ಲಿ ಕೆಲಸ ಮಾಡಬೇಕಾಗುವುದರಿಂದ ಕಾನೂನಿನ ಹಿನ್ನೆಲೆ ಇದ್ದರೆ ಅನುಕೂಲ. ಬೇರೆ ಕ್ಷೇತ್ರದಿಂದ ರಾಜಕೀಯಕ್ಕೆ ಬಂದವರು ವಕೀಲಿಕೆ ಹಿನ್ನೆಲೆ ಇರುವವರಷ್ಟು ಪರಿಣಾಮಕಾರಿಯಾಗಿ ಮಾತನಾಡಲಾಗದು. ಶಾಸನ ರೂಪಿಸುವಾಗ ಕಾನೂನಿನ ಹಿನ್ನೆಲೆ ಸಹಕಾರಿಯಾಗುತ್ತದೆ.

Q

ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?

A

ಜಿಲ್ಲಾ ಪರಿಷತ್‌ ಸದಸ್ಯನಾದ ಮೇಲೆ ವಕೀಲಿಕೆ ನಿಲ್ಲಿಸಿಬಿಟ್ಟೆ. ಸಾರ್ವಜನಿಕ ಬದುಕಿನಲ್ಲಿ ಒತ್ತಡ ಹೆಚ್ಚಾಗಿದ್ದರಿಂದ ನ್ಯಾಯಾಲಯಕ್ಕೆ ತೆರಳುವಷ್ಟು ಸಮಯ ಇರುತ್ತಿರಲಿಲ್ಲ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

A

ನಾನು ವೃತ್ತಿಯಿಂದ ನ್ಯಾಯವಾದಿ, ಪ್ರವೃತ್ತಿಯಿಂದ ರಾಜಕಾರಣಿ. ರಾಜಕೀಯ ವೃತ್ತಿಯಲ್ಲ. ಜನರ ಸೇವೆ ಮಾಡಲು ಒದಗಿರುವ ಅವಕಾಶ. ಸದ್ಯ, ರಾಜಕೀಯದಲ್ಲಿ ನ್ಯಾಯ, ನೀತಿ, ಸತ್ಯ ಉಳಿದಿಲ್ಲ. ಆದರೆ, ಅಧಿಕಾರ-ಸ್ಥಾನಮಾನ ದೊರೆತಾಗ ಜನರ ನೋವುಗಳಿಗೆ ಸ್ಪಂದಿಸಿ, ಅವರ ಕಣ್ಣೀರು ಒರೆಸುವ ಕೆಲಸ ಮಾಡಬಹುದು. ಅದು ನನಗೆ ತೃಪ್ತಿ ನೀಡುವ ಕೆಲಸ. ಕೆಟ್ಟವರ ಮಧ್ಯೆ ಒಳ್ಳೆಯ ಕೆಲಸ ಮಾಡುವವರು ಇದ್ದಾಗಲೇ ಅಲ್ಲವೇ ಅವರಿಗೆ ಗೌರವ, ಆದರ ದೊರೆಯುವುದು? ನನಗೆ ನನ್ನದೇ ಆದ ಮಿತಿಗಳಿವೆ. ಅವೆಲ್ಲದರ ನಡುವೆಯೂ ವಿಧಾನ ಪರಿಷತ್‌ ಸದಸ್ಯ, ಮಂತ್ರಿ ಹಾಗೂ ಪರಿಷತ್‌ ಪ್ರತಿಪಕ್ಷದ ನಾಯಕನಾಗಿರುವುದರಿಂದ ಮುಖ್ಯಮಂತ್ರಿ ಭೇಟಿ ಮಾಡಬಹುದು. ಮುಖ್ಯ ಕಾರ್ಯದರ್ಶಿ, ಇಲಾಖೆಯ ಪ್ರಧಾನ ಕಾರ್ಯದರ್ಶಿಗಳು ಸೇರಿದಂತೆ ಪ್ರಮುಖ ಅಧಿಕಾರಿಗಳ ಜೊತೆ ಸಭೆ ನಡೆಸುವ ಅಧಿಕಾರ ಇರುತ್ತದೆ. ಈ ಮೂಲಕ ಜನರ ಸಮಸ್ಯೆಗಳಿಗೆ ಸ್ಪಂದಿಸಬಹುದು.

ನ್ಯಾಯ, ನೀತಿ, ಪ್ರಾಮಾಣಿಕತೆಯಿಂದ ನಡೆಯುವ ರಾಜಕಾರಣಿಗಳಿಗೆ ಗೌರವವಿದೆ. ಸಾರ್ವಜನಿಕ ಬದುಕಿನಲ್ಲಿ ಇರುವುದರಿಂದ ಅಗಾಧವಾದ ಬದಲಾವಣೆ ತರಲು ಅವಕಾಶವಿದೆ. ವಕೀಲನಾದರೆ ನಮ್ಮ ವ್ಯಾಪ್ತಿ ಸೀಮಿತವಾಗಿರುತ್ತದೆ. ಹಾಗೆಂದು ವಕೀಲಿಕೆ ವೃತ್ತಿಯ ಬಗ್ಗೆ ತಾತ್ಸಾರ ಇದೆ ಎಂದಲ್ಲ. ವಕೀಲಿಕೆಯಿಂದ ರಾಜಕೀಯಕ್ಕೆ ನಾನು ಬಂದಿದ್ದೇನೆ. ಏಣಿಯಿಂದ (ವಕೀಲಿಕೆ) ಇಲ್ಲಿಗೆ (ರಾಜಕೀಯ) ಬಂದಿದ್ದೇನೆ. ಅದನ್ನು ಮರೆಯಲಾಗುತ್ತದೆಯೇ? ಚುನಾವಣೆಯಲ್ಲಿ ಹಣದ ಅರಿವು ನೋಡಿದಾಗ ಬೇಜಾರಾಗುತ್ತದೆ.

Q

ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಕೃಷಿ ಕಾಯಿದೆಗಳನ್ನು ವಿರೋಧಿಸಿ ದೇಶಾದ್ಯಂತ ರೈತರು ವ್ಯಾಪಕ ಹೋರಾಟ ನಡೆಸುತ್ತಿರುವ ಈ ಸಂದರ್ಭದಲ್ಲಿ ಕೃಷಿಕ, ವಕೀಲ ಹಾಗೂ ರಾಜಕೀಯ ಮುಖಂಡರಾದ ತಮ್ಮ ಅಭಿಪ್ರಾಯವೇನು?

A

ರೈತರ ಆದಾಯ ದ್ವಿಗುಣ ಮಾಡುವುದಾಗಿ ಹೇಳಿದರು. ರೈತ ದೇಶದ ಬೆನ್ನಲುಬು ಎಂದು ಹೇಳಿದರು. ಕೃಷಿ ಪ್ರಧಾನವಾದ ದೇಶದಲ್ಲಿ ಉದ್ಯಮಿಗಳಾದ ಅದಾನಿ, ಅಂಬಾನಿಗೆ ಅನುಕೂಲವಾಗುವ ಕಾನೂನುಗಳನ್ನು ಜಾರಿಗೆ ತಂದಿದ್ದಾರೆ. ಲಕ್ಷಾಂತರ ಟ್ರ್ಯಾಕ್ಟರ್‌ಗಳಲ್ಲಿ ಬಂದಿರುವ ಕೋಟ್ಯಂತರ ರೈತರನ್ನು ದೆಹಲಿಯ ಹೊರಹೊಲಯದಲ್ಲಿ ತಡೆದು ನಿಲ್ಲಿಸಲಾಗಿದೆ. ಇವರೆಲ್ಲಾ ಢೋಂಗಿ ರಾಜಕಾರಣಿಗಳು. ಎಲ್ಲಾ ವೃತ್ತಿಗಳ ನಡುವೆ ಅತ್ಯಂತ ಪ್ರಾಮಾಣಿಕವಾದ ವೃತ್ತಿ ಕೃಷಿ.

ಕೃಷಿ ಕ್ಷೇತ್ರ ಹಾಳಾದರೆ ಪರಿಸ್ಥಿತಿ ಚಿಂತಾಜನಕವಾಗುತ್ತದೆ. ಕೃಷಿ ನಿರ್ಲಕ್ಷಿಸಿದರೆ ಭಿಕ್ಷೆ ಬೇಡುವ ಸ್ಥಿತಿ ನಿರ್ಮಾಣವಾಗುತ್ತದೆ. ಇಂದಿನ ರೈತರ ಹೋರಾಟ ನನಗೆ ಎರಡನೇ ಸ್ವಾತಂತ್ರ್ಯ ಹೋರಾಟದ ರೀತಿ ಗೋಚರಿಸುತ್ತಿದೆ. ರೈತರ ಮೇಲಿನ ದಾಳಿಯನ್ನು ನೋಡಿದಾಗ ಜಲಿಯಾನ್‌ ವಾಲಾಬಾಗ್‌ನಲ್ಲಿ ಅಮಾಯಕರನ್ನು ಕೊಂದ ಜನರಲ್‌ ಡೈಯರ್‌ನ ಆಡಳಿತ ನೆನಪಾಗುತ್ತಿದೆ. ಬಿಎಸ್‌ಎನ್‌ಎಲ್‌ ಮುಚ್ಚಿ, ಜಿಯೋಗೆ ಹಾದಿ ಮಾಡಲಾಗಿದೆ. ಸಂವಿಧಾನಕ್ಕೆ ವ್ಯತಿರಿಕ್ತವಾದ ಕಾನೂನು ತರಲಾಗುತ್ತಿದೆ. ಅವರಿಗೆ ಸಂವಿಧಾನವೇ ಬೇಡವಾಗಿದೆ. ಇಂಥ ಜನ ವಿರೋಧಿ ಕಾನೂನುಗಳನ್ನು ತಡೆಯಲು ಹಾಗೂ ವಿಸ್ತೃತವಾಗಿ ಕೆಲಸ ಮಾಡಲು ರಾಜಕಾರಣ ಸಹಕಾರಿಯಾಗುತ್ತದೆ.

Related Stories

No stories found.
Kannada Bar & Bench
kannada.barandbench.com