ಉಪ್ಪು, ಮೆಣಸಿನಕಾಯಿಗೂ ತತ್ವಾರ; ಗೋಬಿ ಮಂಚೂರಿ, ಸೊಪ್ಪು-ತರಕಾರಿ ಮಾರಿದ ವಕೀಲರು ಇದ್ದಾರೆ: ಬಿ ಟಿ ವಿಶ್ವನಾಥ್

“ವಕೀಲರ ಕೋಟಿನ ಹಿಂದೆ ಹೇಳಿಕೊಳ್ಳಲಾಗದ ಅಸಹಾಯಕತೆ, ನೋವುಗಳಿವೆ. ನಿಶ್ಚಿತ ಆದಾಯದ ಭರವಸೆಯಿಲ್ಲದ ಕ್ಷೇತ್ರ ವಕೀಲಿಕೆ. ನಮಗೆ ಬಿಪಿಎಲ್ ಕಾರ್ಡ್ ಸಿಗುವುದಿಲ್ಲ. ಬ್ಯಾಂಕ್‌ಗಳು ಧಾರಾಳವಾಗಿ ಸಾಲ ನೀಡುವುದಿಲ್ಲ,” ಎನ್ನುತ್ತಾರೆ ವಿಶ್ವನಾಥ್.
B T Vishwanath, AILU Mandya District President
B T Vishwanath, AILU Mandya District President

ಅಖಿಲ ಭಾರತ ವಕೀಲರ ಒಕ್ಕೂಟ (ಎಐಎಲ್‌ಯು) ವಕೀಲರ ಸಮಸ್ಯೆಗಳ ಬಗ್ಗೆ ವಿಶೇಷವಾಗಿ ಗಮನಹರಿಸುವ ಸಂಘಟನೆಯಾಗಿದೆ. ಅಷ್ಟೇ ಅಲ್ಲದೆ, ವಕೀಲರ ಜ್ಞಾನಾರ್ಜನೆಗೆ ಒತ್ತು ನೀಡುವ, ಕಾನೂನಿನ ಕುರಿತಾಗಿ ಅರಿವು ಮೂಡಿಸುವ ಕೆಲಸವನ್ನು ಒಕ್ಕೂಟವು ನಿರ್ವಹಿಸುತ್ತಿದೆ. ಪ್ರಭುತ್ವದ ನಿರ್ಣಯಗಳು ಸಮಾಜದ ಮೇಲೆ ಬೀರುವ ಪರಿಣಾಮಗಳ ಕುರಿತು ತಜ್ಞರು, ನಿವೃತ್ತ ನ್ಯಾಯಮೂರ್ತಿಗಳು, ಹಿರಿಯ ವಕೀಲರನ್ನು ಆಹ್ವಾನಿಸಿ ಸಭೆ, ಸಮಾರಂಭಗಳ ಮೂಲಕ ಜಾಗೃತಿ ಮೂಡಿಸುವ ಕೆಲಸವನ್ನೂ ಒಕ್ಕೂಟ ಮಾಡುತ್ತಿದೆ. ಹಾಗೆಂದು ಎಐಎಲ್‌ಎಫ್‌ ವಕೀಲರ ಪರಿಷತ್ತಿಗೆ ಪರ್ಯಾಯವಲ್ಲ. ಅಲ್ಲಿನ ವಕೀಲರೇ ಇಲ್ಲಿಯೂ ಸಕ್ರಿಯವಾಗಿರುತ್ತಾರೆ.

ರಾಜ್ಯದಾದ್ಯಂತ ಎಐಎಲ್‌ಯು ಅಸ್ತಿತ್ವದಲ್ಲಿದ್ದು, ಮಂಡ್ಯದಲ್ಲಿ ಎಐಎಲ್‌ಯುನ ೧೫೦ ಸದಸ್ಯರಿದ್ದಾರೆ. ಲಾಕ್‌ಡೌನ್‌ ಹಾಗೂ ಆನಂತರದ ಸಂದರ್ಭದಲ್ಲಿ ವಕೀಲರ ಸಮುದಾಯ ಎದುರಿಸುತ್ತಿರುವ ಬಿಕ್ಕಟ್ಟು ಹಾಗೂ ಅದಕ್ಕೆ ತಾನು ಸ್ಪಂದಿಸದ ಬಗೆಯ ಕುರಿತು ಅಖಿಲ ಭಾರತ ವಕೀಲರ ಒಕ್ಕೂಟದ ಮಂಡ್ಯ ಜಿಲ್ಲಾ ಘಟಕದ ಅಧ್ಯಕ್ಷರಾದ ಬಿ ಟಿ ವಿಶ್ವನಾಥ್‌ ಅವರು “ಬಾರ್‌ ಅಂಡ್‌ ಬೆಂಚ್”‌ಗೆ ವಿವರಿಸಿದ್ದಾರೆ.

Q

ಕೋವಿಡ್‌ನಿಂದಾಗಿ ವಕೀಲ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

A

ರಾಜ್ಯಮಟ್ಟದ ವಕೀಲರಿಗೆ ಹೋಲಿಕೆ ಮಾಡಿದರೆ ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಕೀಲರಿಗೆ ಬಿಸಿ ತುಸು ಹೆಚ್ಚು ಎನ್ನುವಷ್ಟೇ ತಟ್ಟಿದೆ. ಉಪ್ಪು-ಮೆಣಸಿನಕಾಯಿಗೂ ತತ್ವಾರವಾಗಿದ್ದು, ಈ ಸಮಸ್ಯೆ ಎದುರಿಸುತ್ತಿರುವರ ಸಂಖ್ಯೆ ಹೆಚ್ಚಿದೆ. ವಕೀಲರ ಕೋಟಿನ, ಸಮವಸ್ತ್ರದ ಹಿಂದೆ ಹೇಳಿಕೊಳ್ಳಲಾಗದ ಅಸಹಾಯಕತೆಯ ಹಲವು ನೋವುಗಳಿವೆ. ನಿಶ್ಚಿತ ಆದಾಯದ ಭರವಸೆಯಿಲ್ಲದ ಕ್ಷೇತ್ರ ವಕೀಲಿಕೆ. ಅಂತೆಯೇ ಕೋಟ್ಯಂತರ ಆದಾಯ ಮಾಡಿಕೊಳ್ಳುವ ವಕೀಲರೂ ಇದ್ದಾರೆ. ಈ ಸಂಖ್ಯೆ ವಿರಳ. ವಕೀಲರಿಗೆ ಬಿಪಿಎಲ್‌ ಕಾರ್ಡ್‌ ಸಿಗುವುದಿಲ್ಲ. ಬ್ಯಾಂಕ್‌ಗಳು ಧಾರಾಳವಾಗಿ ಸಾಲ ನೀಡುವುದಿಲ್ಲ. ವಕೀಲಿಕೆಯ ಆರಂಭದ ದಿನಗಳಂಥೂ ತುಂಬಾ ನಿರಾಶಾದಾಯಕವಾಗಿರುತ್ತವೆ. ಸರ್ಕಾರ ನೀಡುವ ಕನಿಷ್ಠ ಸ್ಟೈಫಂಡ್‌ ಏತಕ್ಕೂ ಸಾಲದು. ಅಂತೆಯೇ ಇದು ಎಲ್ಲರಿಗೂ ದಕ್ಕುವುದಿಲ್ಲ. ಇಂಥ ಅದೆಷ್ಟೋ ವಕೀಲರು ಕೋವಿಡ್‌ ಹೊಡೆತಕ್ಕೆ ಸಿಲುಕಿ ಗೋಬಿ ಮಂಚೂರಿ, ಸೊಪ್ಪು-ತರಕಾರಿ ಮಾರಿದ ಉದಾಹರಣೆಗಳು ನಮ್ಮ ನಡುವೆ ಇವೆ. ಅಪಾರ ಶ್ರಮ, ಗಡಿಯಾರದ ಗಡಿ ಮೀರಿದ ತೊಡಗಿಸಿಕೊಳ್ಳುವಿಕೆ, ನಿರಂತರ ಅಧ್ಯಯನಕ್ಕೆ ಸಮಯ ಮೀಸಲಿಡುವುದು, ಬೇರಾವುದೇ ಉಪವೃತ್ತಿ ಆಯ್ದುಕೊಳ್ಳಲು ಅವಕಾಶವಿಲ್ಲದ ಸ್ಥಿತಿ ಇದೆ. ಕೋವಿಡ್‌ನಿಂದ ನ್ಯಾಯಾಲಯದ ಚಟುವಟಿಕೆಗಳು ಸೀಮಿತಗೊಂಡ ಹಿನ್ನೆಲೆಯಲ್ಲಿ ಕೆಲವು ಪೊಲೀಸ್‌ ಠಾಣೆಗಳ ಆದಾಯ ಹೆಚ್ಚಾಗಿದೆ ಎಂಬುದು ವಾಸ್ತವ. ನ್ಯಾಯಾಲಯದ ಮಧ್ಯಪ್ರವೇಶಿಕೆಯಿಂದ ಪರಿಹಾರ ಸಿಗದೇ ಕಕ್ಷಿದಾರರಿಗೂ ಸಾಕಷ್ಟು ಸಮಸ್ಯೆಗಳಾಗಿವೆ.

Q

ಕೋವಿಡ್‌ನಿಂದ ಮಂಡ್ಯದಲ್ಲಿ ವಕೀಲರು ಸಾವನ್ನಪ್ಪಿದ ಮಾಹಿತಿ ಇದೆಯೇ? ಅವರ ಕುಟುಂಬದ ಸ್ಥಿತಿಗತಿಯೇನು?

A

ಮಂಡ್ಯದಲ್ಲಿ ಇಬ್ಬರು ಕಿರಿಯ ವಕೀಲರು ತೀರಿಕೊಂಡಿದ್ದಾರೆ ಎಂಬ ಮಾಹಿತಿ ಇದೆ. ಆದರೆ, ಅವರು ನಾನ್‌ ಪ್ರಾಕ್ಟೀಸಿಂಗ್‌ ವಕೀಲರು. ಈ ಇಬ್ಬರೂ ನೋಂದಣಿ ಮಾಡಿಸಿದ್ದರೆ ಕುಟುಂಬದ ಸದಸ್ಯರಿಗೆ ರಾಜ್ಯ ವಕೀಲರ ಪರಿಷತ್ತಿನಿಂದ ನಿರ್ದಿಷ್ಟ ನೆರವು ಸಿಗಬಹುದಾಗಿತ್ತು. ರಾಜ್ಯ ಸರ್ಕಾರದಿಂದ ಯಾವುದೇ ನೆರವು ದೊರೆತಿಲ್ಲ.

Q

ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಕೀಲರಿಗೆ ಎಎಲ್‌ಐಯು ಯಾವ ತೆರನಾದ ನೆರವು ನೀಡಿದೆ?

A

ಹಿರಿಯ ವಕೀಲರಿಂದ ಹಣ, ದಿನಸಿ ಸಂಗ್ರಹಿಸಿ ಅಗತ್ಯವಿರುವ ವಕೀಲರಿಗೆ ಹಂಚಿಕೆ ಮಾಡಲಾಗಿದೆ. ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ಸಂಘಗಳಿಗೆ ಸೀಮಿತ ಆರ್ಥಿಕ ಶಕ್ತಿ ಇರುತ್ತದೆ. ಇದಕ್ಕಿಂತ ಅವರಿಗೆ ಹೆಚ್ಚಿನ ನೆರವು ನೀಡಲು ಸಾಧ್ಯವಾಗುವುದಿಲ್ಲ. ಸರ್ಕಾರಗಳು ಈ ಸಂಘಗಳಿಗೆ ಶಕ್ತಿ ತುಂಬಿದ್ದರೆ ಇನ್ನಷ್ಟು ನೆರವು ಕಲ್ಪಿಸಬಹುದಿತ್ತು.

Q

ಕೋವಿಡ್‌ ಹಿನ್ನೆಲೆಯಲ್ಲಿ ವರ್ಚುವಲ್ ಕಲಾಪ ಆರಂಭಿಸಲಾಗಿದ್ದು, ಅವುಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

A

ವರ್ಚುವಲ್‌ ಕಲಾಪ ಇನ್ನೂ ಶೈಶವಾವಸ್ಥೆಯಲ್ಲಿದೆ. ಇದರಿಂದ ಹಲವು ವಕೀಲರಿಗೆ ತುಂಬಾ ತೊಂದರೆಯಾಗಿದೆ. ಸಾಕಷ್ಟು ವಕೀಲರಿಗೆ ಇದಕ್ಕೆ ಬೇಕಾದ ಅಗತ್ಯ ಸೌಲಭ್ಯವಿಲ್ಲ. ಹಲವರು ತಾಂತ್ರಿಕವಾಗಿ ಅಷ್ಟೇನು ನೈಪುಣ್ಯತೆ ಸಾಧಿಸಿಲ್ಲ. ವಾದ ಮಂಡನೆ ಮತ್ತು ಪಾಟಿ ಸವಾಲಿನ ಸಂದರ್ಭದಲ್ಲಿ ಭೌತಿಕ ಕಲಾಪವೇ ಹೆಚ್ಚು ಸೂಕ್ತ, ಪರಿಣಾಮಕಾರಿ ಮತ್ತು ಪಾರದರ್ಶಕ. ಪ್ರಕರಣ ದಾಖಲಿಸಲು, ನಕಲು ಪಡೆಯಲು ವರ್ಚುವಲ್‌ ವ್ಯವಸ್ಥೆ ಹೆಚ್ಚು ಸಹಕಾರಿ.

Q

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

A

ಭೌತಿಕ ನ್ಯಾಯಾಲಯಗಳು ಆರಂಭವಾಗಿರುವುದು ಸಮಸ್ಯೆಯನ್ನು ಕಡಿಮೆ ಮಾಡಿದೆ. ನ್ಯಾಯಾಲಯಗಳು ಪೂರ್ಣ ಪ್ರಮಾಣದಲ್ಲಿ ಕಲಾಪ ನಿರತವಾಗುವುದು ಸಂದರ್ಭದ ತುರ್ತಾಗಿದೆ.

Q

ಕೋವಿಡ್‌ ವ್ಯಾಪಿಸಿದ್ದ ಸಂದರ್ಭದಲ್ಲಿ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇತ್ತು?

A

ಕೋವಿಡ್‌ ಹಿನ್ನೆಲೆಯಲ್ಲಿ ಎದುರಿಸಿದ ಆರ್ಥಿಕ ಸಮಸ್ಯೆಗಳ ಬಗ್ಗೆಯೇ ಬಹುತೇಕ ಚರ್ಚೆ ನಡೆಯುತ್ತಿತ್ತು. ನ್ಯಾಯಾಲಯದ ಕಲಾಪಗಳು ಸ್ಥಗಿತವಾಗಿದ್ದನ್ನೇ ಕಾದು ಕೂತು ಪ್ರಭುತ್ವವು ತರಾತುರಿಯಲ್ಲಿ ಜಾರಿಗೆ ತರಲು ಮುಂದಾದ ಅವಕಾಶವಾದಿ, ಜನವಿರೋಧಿ ಕಾನೂನುಗಳ ಬಗ್ಗೆಯೂ ಸಾಕಷ್ಟು ಚರ್ಚೆ ನಡೆದಿದೆ. ನ್ಯಾಯಾಂಗದಲ್ಲಿ ಪ್ರಭುತ್ವದ ಮೂಗುತೂರಿಸುವಿಕೆ ಬಗ್ಗೆಯೂ ಚರ್ಚೆಯಾಗಿದೆ.

Q

ನಿಮ್ಮ ಸಂಕಷ್ಟಕ್ಕೆ ರಾಜ್ಯ ವಕೀಲರ ಪರಿಷತ್ತು, ಬಿಸಿಐ ಸ್ಪಂದನೆಯ ಬಗ್ಗೆ ಏನು ಹೇಳಬಯಸುತ್ತೀರಿ?

A

ಭಾರತೀಯ ವಕೀಲರ ಪರಿಷತ್ತು ಮತ್ತು ರಾಜ್ಯ ವಕೀಲರ ಪರಿಷತ್ತುಗಳು ಜಿಲ್ಲಾ ಮತ್ತು ತಾಲ್ಲೂಕು ಮಟ್ಟದ ವಕೀಲರಿಗೆ ನಿರೀಕ್ಷಿಸಿದ ಮಟ್ಟದಲ್ಲಿ ಸ್ಪಂದಿಸಿಲ್ಲ. ವಕೀಲರಿಗೆ ನೆರವಾಗುವ ನಿಟ್ಟಿನಲ್ಲಿ ಸರ್ಕಾರಗಳ ಮೇಲೆ ಈ ಸಂಸ್ಥೆಗಳು ಮತ್ತಷ್ಟು ಒತ್ತಡ ತರಬೇಕಿತ್ತು ಎಂಬ ಅಭಿಪ್ರಾಯ ವಕೀಲರ ಸಮುದಾಯದಲ್ಲಿದೆ.

Q

ನೀವು ಅಖಿಲ ಭಾರತ ವಕೀಲರ ಒಕ್ಕೂಟದಲ್ಲಿ ಸಕ್ರಿಯರಾಗಿರುವುದರಿಂದ ರಾಜ್ಯದ ವಕೀಲರ ಸಮುದಾಯದ ಸಮಸ್ಯೆಗಳನ್ನು ಬಗೆಹರಿಸಲು ಯಾವ ರೀತಿಯಲ್ಲಿ ತೊಡಗಿಸಿಕೊಂಡಿದ್ದೀರಿ?

A

ಲಾಕ್‌ಡೌನ್‌ ಸಂದರ್ಭದಲ್ಲಿ ಅಖಿಲ ಭಾರತ ವಕೀಲರ ಒಕ್ಕೂಟವೂ ಕಿರಿಯ ವಕೀಲರ ಜ್ಞಾನಾರ್ಜನೆಗಾಗಿ ನಿರಂತರವಾಗಿ ವೆಬಿನಾರ್‌ಗಳು, ವರ್ಚುವಲ್‌ ಉಪನ್ಯಾಸ ಮಾಲಿಕೆಗಳನ್ನು ಏರ್ಪಡಿಸಿತ್ತು. ಸ್ಪರ್ಧಾತ್ಮಕ ಪರೀಕ್ಷೆಗಳು, ಸರ್ಕಾರಿ ಅಭಿಯೋಜಕರು, ಮ್ಯಾಜಿಸ್ಟ್ರೇಟ್‌ ನೇಮಕಾತಿಗಾಗಿ ನಡೆಯುವ ಪೂರ್ವಭಾವಿ ಪರೀಕ್ಷೆಗಳಿಗೆ ತಯಾರಿ ನಡೆಸುವ ವಕೀಲರಿಗೆ ವೆಬಿನಾರ್‌ಗಳನ್ನು ಏರ್ಪಡಿಸಲಾಗಿದೆ. ಜಿಲ್ಲೆಯಲ್ಲಿ ನಡೆದ ಇಬ್ಬರು ವಕೀಲರ ಕೊಲೆ, ಇನ್ನಿತರರ ಮೇಲಿನ ಹಲ್ಲೆಯನ್ನು ವಿಚಾರಣೆ ನಡೆಸಿ, ಕ್ರಮಕೈಗೊಳ್ಳುವ ಕುರಿತು ಸಂಬಂಧ ಪಟ್ಟ ಇಲಾಖೆಗಳ ಮೇಲೆ ಒತ್ತಡ ತರುವ ಪ್ರಯತ್ನ ಮಾಡಿದ್ದೇವೆ. ಇದರ ಜೊತೆಗೆ ಸಮಾಜದ ಸಮಸ್ಯೆಗಳಿಗೆ ಧ್ವನಿಯಾಗುವ ಕೆಲಸವನ್ನೂ ಮಾಡಿದ್ದೇವೆ. ಸರ್ಕಾರಗಳು ತಾಲ್ಲೂಕು ಮತ್ತು ಜಿಲ್ಲಾ ಮಟ್ಟದ ವಕೀಲರಿಗೆ ಮೂಲಸೌಲಭ್ಯ ಮತ್ತು ಸವಲತ್ತುಗಳನ್ನು ಕಲ್ಪಿಸುವ ಕೆಲಸ ಮಾಡಬೇಕಿದೆ.

Q

ನ್ಯಾಯಾಂಗದಲ್ಲಿನ ಇತ್ತೀಚೆಗಿನ ಬೆಳವಣಿಗೆಗಳಿಗೆ ಎಐಎಲ್‌ಯು ಹೇಗೆ ಸ್ಪಂದಿಸಿದೆ?

A

ನ್ಯಾಯಾಂಗದಲ್ಲಿ ಈಚೆಗೆ ಅಲ್ಲೋಲಕಲ್ಲೋಲ ಸೃಷ್ಟಿಸಿದ್ದ ಸಿಬಿಐ ವಿಶೇಷ ನ್ಯಾಯಾಧೀಶ ಬಿ ಎಚ್‌ ಲೋಯಾ ಅವರ ಅನುಮಾನಾಸ್ಪದ ಸಾವಿನ ತನಿಖೆಗೆ ಎಐಎಲ್‌ಯು ಆಗ್ರಹಿಸಿತ್ತು. ಸುಪ್ರೀಂ ಕೋರ್ಟ್‌ ಹಿಂದಿನ ಮುಖ್ಯ ನ್ಯಾಯಮೂರ್ತಿ ದೀಪಕ್‌ ಮಿಶ್ರಾ ಅವರ ಕಾರ್ಯಚಟುವಟಿಕೆಗೆ ಆಕ್ಷೇಪಿಸಿ ಐತಿಹಾಸಿಕ ಸುದ್ದಿಗೋಷ್ಠಿ ನಡೆಸಿದ್ದ ಸುಪ್ರೀಂ ಕೋರ್ಟ್‌ನ ನಾಲ್ವರು ನ್ಯಾಯಮೂರ್ತಿಗಳ ನಡೆಗೆ ಎಐಎಲ್‌ಎಫ್‌ ಬೆಂಬಲ ವ್ಯಕ್ತಪಡಿಸಿತ್ತು ಎನ್ನುವುದನ್ನು ನೆನೆಯಬಹುದು.

Kannada Bar & Bench
kannada.barandbench.com