[ಅನುಸಂಧಾನ] ಭಾರತದ ಸಂಸದೀಯ ವ್ಯವಸ್ಥೆ ಕುರಿತು ಬಹುತೇಕ ದೇಶದಲ್ಲೇ ಮೊದಲ ಪಿಎಚ್‌ಡಿ ವಿಷಯ ನನ್ನದೇ: ಬಿ ಎಲ್ ಶಂಕರ್

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
B L Shankar, INC Leader
B L Shankar, INC Leader
Published on

ವೈದ್ಯರಾಗುವ ಕನಸು ಕಂಡು ಸೀಟು ಸಿಗದೇ ಕಾನೂನು ಕ್ಷೇತ್ರಕ್ಕೆ ಹೊರಳಿ, ಅಲ್ಲಿಂದ ರಾಜಕೀಯ ಪ್ರವೇಶಿಸಿ ಸಚಿವ, ಸಂಸದ, ಸಭಾಪತಿಯಾಗಿ ಹೆಜ್ಜೆಗುರುತು ಮೂಡಿಸಿದವರು ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆಯ ಬಿ ಎಲ್‌ ಶಂಕರ್.‌ ಸಾರ್ವಜನಿಕ ಬದುಕಿನಲ್ಲಿ ಸೌಮ್ಯ ವ್ಯಕ್ತಿತ್ವ ಹಾಗೂ ಮೌಲಿಕ ರಾಜಕಾರಣದ ಮೂಲಕ ಗುರುತಿಸಿಕೊಂಡಿರುವ ಅವರು ಸಂಸದೀಯ ಪ್ರಜಾಪ್ರಭುತ್ವದ ಬಗ್ಗೆ ಪಿಎಚ್‌ ಡಿ ಮಾಡಿರುವ ಅಪರೂಪದ ರಾಜಕಾರಣಿಯೂ ಹೌದು. ಇದು ಪ್ರಜಾಪ್ರಭುತ್ವ ವ್ಯವಸ್ಥೆಯ ಬಗೆಗಿನ ಅವರ ಬದ್ಧತೆಯ ದ್ಯೋತಕವೂ ಕೂಡ.

ಯಾವುದೇ ವಿಷಯವನ್ನು ಸಮರ್ಪಕವಾಗಿ, ಅಷ್ಟೇ ಪರಿಣಾಮಕಾರಿಯಾಗಿ ಮಂಡಿಸಬಲ್ಲ ಶಂಕರ್‌ ಅವರು ನೀತಿ ನಿರೂಪಣೆಯ ತಂಡದಲ್ಲಿನ ಪ್ರಮುಖ ಸದಸ್ಯರಲ್ಲೊಬ್ಬರು. ಅಧ್ಯಯನಶೀಲತೆ, ಬೋಧನೆಯಲ್ಲಿ ಆಸಕ್ತಿ ಹೊಂದಿರುವ ಅವರು ವಕೀಲಿಕೆಯಲ್ಲೇ ಮುಂದುವರೆದಿದ್ದರೆ ಬಹುಶಃ ನ್ಯಾಯಾಂಗದ ಭಾಗವಾಗಿರುತ್ತಿದ್ದರೇನೋ. ಕೃಷಿಯಲ್ಲಿ ತೊಡಗಿದ್ದರೆ ಮಾದರಿ ರೈತನಾಗುವ ಸಾಧನೆ ಮಾಡುತ್ತಿದ್ದರೇನೋ..

ಬಹುಮುಖಿ ಆಸಕ್ತಿ, ಅಧ್ಯಯನಶೀಲತೆಯಿಂದ ಕೂಡಿದ ತಮ್ಮ ಬದುಕಿನ ಹರಿವಿನ ಬಗ್ಗೆ “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ಬಿ ಎಲ್‌ ಶಂಕರ್‌ ಅವರು 'ಅನುಸಂಧಾನ' ನಡೆಸಿದ್ದು ಹೀಗೆ:

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ಕಾನೂನು ಓದುವುದು ನನ್ನ ಮೊದಲ ಆಯ್ಕೆ ಏನೂ ಆಗಿರಲಿಲ್ಲ. ವೈದ್ಯಕೀಯ ಶಿಕ್ಷಣ ಪಡೆಯಲು ಸೀಟು ಸಿಗಲಿಲ್ಲ ಎಂದು ಕಾನೂನು ಅಧ್ಯಯನಕ್ಕೆ ಸೇರಿದೆ. ಆನಂತರ ಅಲ್ಲಿ ಆಸಕ್ತಿ ಹೆಚ್ಚಾಯಿತು. ಇದು ಉತ್ತಮ ಅನಿಸಲಾರಂಭಿಸಿತು. ಮೊದಲಿಗೆ ನನಗೆ ಕಾನೂನು ಕಾಲೇಜಿನಲ್ಲಿ ಸೀಟು ಸಿಕ್ಕಿರಲಿಲ್ಲ. ಕರ್ನಾಟಕ ಪ್ರದೇಶ ಕಾಂಗ್ರೆಸ್‌ ಅಧ್ಯಕ್ಷರಾಗಿದ್ದ ಕೆ ಎಚ್‌ ರಂಗನಾಥ್‌ ಅವರು ಬೆಂಗಳೂರಿನ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ ಸೀಟು ಕೊಡಿಸಿದರು. ಕಾಲೇಜಿನಲ್ಲಿ ನಮ್ಮ ಊರು ಮೂಡಿಗೆರೆಯವರಾದ ಉಪ ಪ್ರಾಚಾರ್ಯ ಪ್ರೊ. ಬಶೀರ್‌ ಹುಸೇನ್‌ ಇದ್ದರು.

Q

ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?

A

ನಾನು ಎರಡನೇ ವರ್ಷದ ಕಾನೂನು ವಿದ್ಯಾರ್ಥಿಯಾಗಿದ್ದಾಗ 1975ರಲ್ಲಿ ದೇಶದಲ್ಲಿ ತುರ್ತು ಪರಿಸ್ಥಿತಿ ಜಾರಿಯಾಗಿತ್ತು. ಈ ವೇಳೆಗಾಗಲೇ ಜಯಪ್ರಕಾಶ್‌ ನಾರಾಯಣ್‌ ಅವರ ಸಂಪೂರ್ಣ ಕ್ರಾಂತಿ ಆಂದೋಲನ ದೇಶಾದ್ಯಂತ ಸಂಚಲನ ಮೂಡಿಸಿತ್ತು. ಇದರಲ್ಲಿ ನಾನು, ಪಿಜಿಆರ್‌ ಸಿಂಧ್ಯಾ, ಜೀವರಾಜ್‌ ಆಳ್ವಾ ಸೇರಿದಂತೆ ಹಲವರು ಆಂದೋಲನದ ಭಾಗವಾಗಿದ್ದೆವು.
ನಾನು ಬೆಂಗಳೂರು ವಿಶ್ವವಿದ್ಯಾಲಯದ ಕಾನೂನು ಕಾಲೇಜಿನ ಪ್ರಧಾನ ಕಾರ್ಯದರ್ಶಿ ಹಾಗೂ ಬೆಂಗಳೂರು ವಿಶ್ವವಿದ್ಯಾಲಯದ ವಿದ್ಯಾರ್ಥಿ ಒಕ್ಕೂಟದ ಸದಸ್ಯನಾಗಿದ್ದೆ. ಅಭಿವ್ಯಕ್ತಿ ಸ್ವಾತಂತ್ರ್ಯ, ವೈಯಕ್ತಿಕ ಸ್ವಾತಂತ್ರ್ಯ ಬಹಳ ಮುಖ್ಯ ಎಂದು ನನಗನ್ನಿಸಿತ್ತು. ನ್ಯಾಯಮೂರ್ತಿ ಕೆ ಎಸ್‌ ಹೆಗ್ಡೆ ರಾಜೀನಾಮೆ ನೀಡಿದ್ದರು. ನ್ಯಾಯಾಂಗದಲ್ಲಿನ ಬೆಳವಣಿಗೆಗಳು, ಅಲಾಹಾಬಾದ್‌ ಹೈಕೋರ್ಟ್‌ ತೀರ್ಪು, ಘಟಾನುಘಟಿ ನಾಯಕರ ಬಂಧನ ಪ್ರಮುಖವಾಗಿತ್ತು. ಆಗ ನಾವುಗಳು ಅಖಿಲ ಭಾರತೀಯ ವಿದ್ಯಾರ್ಥಿ ಪರಿಷತ್‌ (ಎಬಿವಿಪಿ) ಜೊತೆ ಒಡನಾಟ ಹೊಂದಿದ್ದೆವು. ಈ ಎಲ್ಲ ಸಂಗತಿಗಳು ನಮ್ಮ ಮೇಲೆ ಗಾಢವಾದ ಪರಿಣಾಮ ಬೀರಿದ್ದವು.

ಮಾಜಿ ಪ್ರಧಾನಿ ಚಂದ್ರಶೇಖರ್‌ ಮತ್ತು ಎಂ ಪಿ ಪ್ರಕಾಶ್‌ ಅವರ ಜೊತೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಬಿ ಎಲ್‌ ಶಂಕರ್‌.
ಮಾಜಿ ಪ್ರಧಾನಿ ಚಂದ್ರಶೇಖರ್‌ ಮತ್ತು ಎಂ ಪಿ ಪ್ರಕಾಶ್‌ ಅವರ ಜೊತೆ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡಿದ್ದ ಬಿ ಎಲ್‌ ಶಂಕರ್‌.
Q

ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್‌ ಮಾಡಿದ್ದೀರಿ?

A

ಅಡ್ವೊಕೇಟ್‌ ಜನರಲ್‌ ಆಗಿದ್ದ ಪ್ರೊ. ಎಂ ಆರ್‌ ಜನಾರ್ದನ್‌ ಅವರು ನಮ್ಮ ಗುರುಗಳು. ಕಾನೂನು ಶಿಕ್ಷಣ ಮುಗಿದ ಬಳಿಕ ಅವರ ಬಳಿಗೆ ಹೋದೆ. ಆಗ ಅವರು ಕೆಳಹಂತದ ನ್ಯಾಯಾಲಯ ಮತ್ತು ಹೈಕೋರ್ಟ್‌ ಎರಡರಲ್ಲೂ ವಿಷಯ ತಿಳಿದುಕೊಳ್ಳಬೇಕು ಎಂದರು. ಬೆಂಗಳೂರು ದಂಡುವಿನಲ್ಲಿ (ಕಂಟೋನ್ಮೆಂಟ್‌) ನೆಲೆಸಿದ್ದ ಜನಾರ್ದನ್‌ ಅವರ ಗುರುಗಳಾದ ಎಸ್‌ ವಿ ಸುಬ್ರಹ್ಮಣ್ಯಂ ಅವರು ಕೆಳಹಂತದಲ್ಲಿ ನ್ಯಾಯಾಲಯದಲ್ಲಿ ಪ್ರಾಕ್ಟೀಸ್‌ ಮಾಡುತ್ತಿದ್ದರು. ಕೆಳಹಂತದ ನ್ಯಾಯಾಲಯದಲ್ಲಿನ ಅನುಭವಕ್ಕಾಗಿ ಅವರ ಬಳಿಗೆ ನನ್ನನ್ನು ಕಳುಹಿಸಿದರು. ಹೈಕೋರ್ಟ್‌ ಪ್ರಕರಣಗಳಿಗೆ ನನ್ನ ಬಳಿ ಬಾ ಎಂದು ಹೇಳಿದ್ದರು. ಆದ್ದರಿಂದ ಎರಡೂ ಕಡೆ ಹೋಗುತ್ತಿದ್ದೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಮೊದಲ ಪ್ರಕರಣ ಜ್ಞಾಪಕವಿಲ್ಲ. ಆದರೆ, ಚಿಕ್ಕಮಗಳೂರಿನಲ್ಲಿ ಇಂದಿರಾ ಗಾಂಧಿ ಅವರು ಚುನಾವಣೆಯಲ್ಲಿ ಸ್ಪರ್ಧಿಸಿ ಗೆದ್ದದ್ದನ್ನು ಪ್ರಶ್ನಿಸಿ ಕರ್ನಾಟಕ ಹೈಕೋರ್ಟ್‌ನಲ್ಲಿ ವೀರೇಂದ್ರ ಪಾಟೀಲ್‌ ಅವರ ಪರವಾಗಿ ಅರ್ಜಿದಾರನಾಗಿ ದಾವೆ ಹೂಡಿದ್ದೆ. ನನ್ನ ಪರವಾಗಿ ಹಿರಿಯ ವಕೀಲರಾದ ಪಿ ಎನ್‌ ಲೇಖಿ ಮತ್ತು ಎ ಕೆ ಸುಬ್ಬಯ್ಯ ಅವರು ವಾದಿಸಿದ್ದರು. ಕರ್ನಾಟಕದ ಮಾಜಿ ರಾಜ್ಯಪಾಲರಾಗಿದ್ದ‌ ಎಚ್‌ ಆರ್‌ ಭಾರದ್ವಾಜ್‌ ಅವರು ಇಂದಿರಾ ಗಾಂಧಿಯವರ ವಕೀಲರಾಗಿದ್ದರು. ಬಳಿಕ ವೀರೇಂದ್ರ ಪಾಟೀಲ್‌ ಅವರೇ ಕಾಂಗ್ರೆಸ್‌ ಸೇರಿದ್ದರಿಂದ ನಾನೂ ಆ ಪ್ರಕರಣವನ್ನು ಮುಂದುವರೆಸಲಿಲ್ಲ. ಅಂತಿಮವಾಗಿ ಅದು ಡಿಸ್‌ಮಿಸ್ಡ್ ಫಾರ್‌ ಡಿಫಾಲ್ಟ್‌ ಎಂದಾಯಿತು. ಆ ಬಳಿಕ ಮುಖ್ಯವಾಹಿನಿ ರಾಜಕಾರಣದ ಭಾಗವಾಗಿದ್ದರಿಂದ ನ್ಯಾಯಾಲಯಕ್ಕೆ ಹೋಗುವುದನ್ನು ನಿಲ್ಲಿಸಿದೆ.

Q

ವಕೀಲಿಕೆಯ ಆರಂಭದ ದಿನಗಳು ಹೇಗಿದ್ದವು? ವಕೀಲ ವೃತ್ತಿಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ಎಷ್ಟೇ ಆಸಕ್ತಿ, ಕುತೂಹಲವಿದ್ದರೂ ವಕೀಲಿಕೆಯನ್ನು ವೃತ್ತಿಪರವಾಗಿ ಮಾಡಬೇಕು ಎಂಬುದಕ್ಕೆ ನನಗೆ ಕೆಲವು ವಿಚಾರಗಳು ಅಡ್ಡಿಯಾಗಿದ್ದವು.
ಕಾಫಿ ಬೆಳೆಗಾರರ ಕುಟುಂಬವಾದ್ದರಿಂದ ಜೀವನಕ್ಕೆ ತೊಂದರೆ ಇರಲಿಲ್ಲ. ಜೀವನ ಭದ್ರತೆ ಇತ್ತು. ಎರಡನೆಯದಾಗಿ ನಾವು ಜೆಪಿ ಆಂದೋಲನದಲ್ಲಿ ಗುರುತಿಸಿಕೊಂಡಿದ್ದೆವು. ತುರ್ತು ಪರಿಸ್ಥಿತಿ ಹೋಗಿ, ಚುನಾವಣೆ ಬಂದಿತ್ತು. ರಾಜಕಾರಣದ ಸಾಮೀಪ್ಯ ಸಿಕ್ಕಿದ್ದರಿಂದ ನಾವು ರಾಜಕೀಯ ಪಕ್ಷದ ಭಾಗವಾಗಿಯೇ ಬಿಟ್ಟೆವು. ಆದ್ದರಿಂದ ನಾನೇನು ಗಂಭೀರವಾಗಿ ಪ್ರಾಕ್ಟೀಸ್‌ ಮಾಡಿರಲಿಲ್ಲ. ಎರಡು ವರ್ಷ ಪ್ರಾಕ್ಟೀಸ್‌ ಮಾಡಿದೆನಷ್ಟೇ.

ನಾನು ವಿದ್ಯಾರ್ಥಿಯಾಗಿದ್ದು, ಹಾಸ್ಟೆಲ್‌ನಲ್ಲಿರುವಾಗಲೇ 1977ರಲ್ಲಿ ಲೋಕಸಭಾ ಚುನಾವಣೆ ಬಂದಿತು. ನಿವೃತ್ತ ನ್ಯಾ. ಕೆ ಎಸ್‌ ಹೆಗ್ಡೆ ಪರವಾಗಿ ಸಕ್ರಿಯವಾಗಿ ಚುನಾವಣೆ ಕೆಲಸ ಮಾಡಿದೆವು. 1978ರ ವಿಧಾನಸಭಾ ಚುನಾವಣೆಯಲ್ಲಿ ಹಿನ್ನಡೆಯಾಯಿತು. ಅಷ್ಟೊತ್ತಿಗಾಗಲೇ ದೊಡ್ಡದೊಡ್ಡ ನಾಯಕರಾದ ರಾಮಕೃಷ್ಣ ಹೆಗಡೆ, ಎಚ್‌ ಡಿ ದೇವೇಗೌಡ, ಕೆ ಎಸ್‌ ನಿಜಲಿಂಗಪ್ಪ, ಎಸ್‌ ಆರ್‌ ಬೊಮ್ಮಾಯಿ, ವೀರೇಂದ್ರ ಪಾಟೀಲ್‌, ರಾಷ್ಟ್ರೀಯ ಮಟ್ಟದಲ್ಲಿ ಚಂದ್ರಶೇಖರ್‌ ಅವರ ಒಡನಾಟ ಸಿಕ್ಕಿಬಿಟ್ಟಿತ್ತು. ಹೀಗೆ ರಾಜಕಾರಣ ಸೆಳೆದುಕೊಂಡಿತು.

ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಜೊತೆಗೆ ಹೆಜ್ಜೆ ಹಾಕಿದ ಕ್ಷಣ.
ಮಾಜಿ ಪ್ರಧಾನಿ ಎಚ್‌ ಡಿ ದೇವೇಗೌಡರ ಜೊತೆಗೆ ಹೆಜ್ಜೆ ಹಾಕಿದ ಕ್ಷಣ.
Q

ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಇಬ್ಬರಿಗೆ ಕಾನೂನು ಶಿಕ್ಷಣ ಅತ್ಯಂತ ಅವಶ್ಯ. ರಾಜಕಾರಣ/ಸಾರ್ವಜನಿಕ ಬದುಕಿನಲ್ಲಿದ್ದವರಿಗೆ ಮತ್ತು ಪೊಲೀಸ್‌ ಇಲಾಖೆಯಲ್ಲಿ ಕೆಲಸ ಮಾಡುವವರಿಗೆ ಕಾನೂನು ಶಿಕ್ಷಣ ಅಗತ್ಯ. ರಾಮಕೃಷ್ಣ ಹೆಗಡೆ ಅವರ ನೇತೃತ್ವದ ಸರ್ಕಾರದಲ್ಲಿ ಗೃಹ ಸಚಿವರಾಗಿದ್ದ ಬಿ ರಾಚಯ್ಯನವರಿಗೆ ಸಬ್‌ ಇನ್‌ಸ್ಪೆಕ್ಟರ್‌, ಕನಿಷ್ಠ ಪಕ್ಷ ಸರ್ಕಲ್‌ ಇನ್‌ಸ್ಪೆಕ್ಟರ್‌ ಅವರ ಮೇಲಿನ ಎಲ್ಲಾ ಅಧಿಕಾರಿಗಳಿಗೆ ಕಾನೂನು ಪದವಿಯನ್ನು ಕಡ್ಡಾಯಗೊಳಿಸುವಂತೆ ಮನವಿ ಮಾಡಿದ್ದೆ. ಮಂತ್ರಿಯಾಗಿ, ವಿಧಾನ ಸಭೆಯ ಸಭಾಪತಿಯಾಗಿ ಕೆಲಸ ಮಾಡುವಾಗ ನಾನು ಕಾನೂನು ಪದವಿ ಪಡೆದಿದ್ದು ನೆರವಾಗಿದೆ. ಹೀಗಾಗಿಯೇ ನಾನು ಭಾರತದ ಸಂಸತ್‌ ಕುರಿತು ಸಂಶೋಧನೆ ಮಾಡಿ ಪಿಎಚ್‌ ಡಿ (ಡಾಕ್ಟರ್‌ ಆಫ್‌ ಫಿಲಾಸಫಿ) ಮಾಡಿದೆ.

Q

ನಿಮ್ಮ ಪಿಎಚ್‌ ಡಿ ವಿಷಯದ ಕುರಿತು ವಿವರಿಸಿ? ಸಕ್ರಿಯ ರಾಜಕಾರಣದಲ್ಲಿದ್ದುಕೊಂಡು ಅಧ್ಯಯನಕ್ಕೆ ಸಮಯ ಹೇಗೆ ಹೊಂದಿಸುತ್ತಿದ್ದಿರಿ?

A

ಭಾರತದ ಸಂಸತ್‌ ಬಗ್ಗೆ ನನ್ನದು ಮೊದಲ ಪಿಎಚ್‌ಡಿ. ಭಾರತದ ಸಂಸತ್‌ ಕುರಿತು ಬಹುತೇಕ ದೇಶದಲ್ಲೇ ಮೊದಲ ಪಿಎಚ್‌ಡಿ ವಿಷಯ ನನ್ನದೇ. 1953-2006 ವರೆಗೆ ಇಡೀ ಸಂಸತ್‌ನ ಸದಸ್ಯತ್ವ, ಸದಸ್ಯರು, ಚರ್ಚೆಯ ವಿಷಯಗಳು, ಭಾಷೆಯ ಬಳಕೆ, ಕೇಂದ್ರ-ರಾಜ್ಯ ಹಾಗೂ ನ್ಯಾಯಾಂಗ-ಸಂಸತ್‌ನ ಸಂಬಂಧಗಳನ್ನು ವಿಶ್ಲೇಷಿಸಿ, ಸಂಸದೀಯ ವ್ಯವಸ್ಥೆ ಅತ್ಯುತ್ತಮ ಎಂದು “Indian Parliament, It’s Changing Profile” ಎಂಬ ಥೀಸಿಸ್‌ ಮಂಡಿಸಿದೆ, ಬೆಂಗಳೂರು ವಿಶ್ವವಿದ್ಯಾಲಯದಿಂದ ಇದಕ್ಕೆ ಡಾಕ್ಟರೇಟ್‌ ಪದವಿ ಸಂದ ಬಳಿಕ ಅದನ್ನು ಆಕ್ಸ್‌ಫರ್ಡ್‌ ವಿಶ್ವವಿದ್ಯಾಲಯ ಪ್ರೆಸ್,‌ “The Indian Parliament: A Democracy at Work” ಎಂಬ ಪುಸ್ತಕವನ್ನಾಗಿ ಹೊರತಂದಿದೆ.

ಬೆಂಗಳೂರಿನಲ್ಲಿ ಪ್ರೊ. ಎಂ ಜಿ ಕೃಷ್ಣನ್‌ ಮತ್ತು ಜವಾಹರ್‌ಲಾಲ್‌ ನೆಹರೂ ವಿಶ್ವವಿದ್ಯಾಲಯದಲ್ಲಿ ವೆಲೇರಿಯನ್‌ ರೋಡ್ರಿಗ್ಸ್‌ ಅವರು ನನಗೆ ಪಿಎಚ್‌ ಡಿ ಮಾರ್ಗದರ್ಶಕರಾಗಿದ್ದರು. ನಾನು ಮತ್ತು ರೋಡ್ರಿಗ್ಸ್‌ ಅವರು ಜಂಟಿಯಾಗಿ ಆ ಪುಸ್ತಕ ಬರೆದಿದ್ದೇವೆ. ಮಾಜಿ ರಾಷ್ಟ್ರಪತಿ ಅಬ್ದುಲ್‌ ಕಲಾಂ ಅವರಿಂದ ಪಿಎಚ್‌ಡಿ ಪದವಿ ಪಡೆದಿದ್ದು ನನಗೆ ಖುಷಿಯ ವಿಚಾರ.

ವಿಧಾನಸಭಾ ಸಭಾಪತಿಯಾಗಿದ್ದಾಗ ಬಿಎಸ್‌ಸಿ, ಎಲ್‌ಎಲ್‌ಬಿ ಮಾತ್ರ ಮಾಡಿದ್ದೆ. ಸಭಾಪತಿಯಾಗಿದ್ದಾಗ ಸಂಸದೀಯ ವ್ಯವಸ್ಥೆಯ ಬಗ್ಗೆ ನನ್ನ ಬಳಿ ಇರುವ ಮಾಹಿತಿ ಸಾಲದು ಅನಿಸಿತು. ಆಗ ಸಭಾಪತಿಯಾಗಿದ್ದಾಗಲೇ ಬೆಂಗಳೂರು ವಿಶ್ವವಿದ್ಯಾಲಯದಿಂದ ರಾಜಕೀಯ ವಿಜ್ಞಾನ ವಿಷಯದಲ್ಲಿ ಸ್ನಾತಕೋತ್ತರ ಪದವಿ ಪೂರ್ಣಗೊಳಿಸಿದೆ. ಕಾನೂನು ಪದವಿ ಪಡೆದ 25 ವರ್ಷಗಳ ಬಳಿಕ ಸ್ನಾತಕೋತ್ತರ ಪದವಿ ಪೂರೈಸಿದೆ. ಇದಾದ ಬಳಿಕ ಒಮ್ಮೆ ನಾನು, ಪ್ರೊ. ವೆಲೇರಿಯನ್‌ ರೋಡ್ರಿಗ್ಸ್‌, ಪ್ರೊ. ರಾಜಾರಾಂ ತೋಳ್ಪಾಡಿ, ಪ್ರೊ. ಸದಾನಂದ ಶಿವಮೊಗ್ಗ, ಪ್ರೊ. ಎಂ ಜಿ ಕೃಷ್ಣನ್‌ ಹರಟೆ ಹೊಡೆಯುತ್ತಿದ್ದಾಗ, ಆಗ ಅವರೆಲ್ಲಾ”ಸಂಸತ್‌ ಕುರಿತು ಯಾರೂ ಥೀಸಿಸ್‌ ಮಾಡಿಲ್ಲ. ನೀವು ಎಂಎ ಮಾಡಿದ್ದೀರಲ್ಲ. ಥೀಸೀಸ್‌ ಏಕೆ ಮಾಡಬಾರದು” ಎಂದರು. “ನಾನು ಅದಕ್ಕೆ ಸಾಕಷ್ಟು ಪರಿಶ್ರಮ ಹಾಕಬೇಕಾಗುತ್ತದೆ ಆಗಲ್ಲ” ಎಂದೆ. “ನಾವೆಲ್ಲಾ ಸಹಾಯ ಮಾಡುತ್ತೇವೆ. ಸಂಸದರಾಗಿರುವುದರಿಂದ ಅನುಕೂಲವಾಗುತ್ತದೆ ಮಾಡಬಹುದು” ಎಂದರು. ಅವರುಗಳ ಬೆಂಬಲದಿಂದ ಪಿಎಚ್‌ಡಿಗೆ ನೋಂದಾಯಿಸಿದೆ.

ಎರಡು ವರ್ಷ ಟ್ಯೂಷನ್‌ ತೆಗೆದುಕೊಂಡೆ, ಬರೆಯೋದಕ್ಕೆ ಕಷ್ಟವಾಯಿತು. ವಿದ್ಯಾರ್ಥಿಗಳ ಮಧ್ಯೆ ಕುಳಿತು ಪರೀಕ್ಷೆ ಬರೆಯಬೇಕಿತ್ತು. ಒಮ್ಮೆ ರಾಜಾಜಿನಗರದ ಕಾಲೇಜೊಂದರಲ್ಲಿ, ಮತ್ತೊಮ್ಮೆ ಸುರಾನಾ ಕಾಲೇಜಿನಲ್ಲಿ ಪರೀಕ್ಷೆ ಬರೆದಿದ್ದೆ. ಆ ವೇಳೆಯಲ್ಲಿ ನಾನು ಸಭಾಪತಿಯಾಗಿದ್ದೆ. ಹುಡುಗರೆಲ್ಲಾ “ಏನು, ಇವನು ಬಂದು ಪರೀಕ್ಷೆ ಬರೆಯುತ್ತಿದ್ದಾನಲ್ಲ” ಎಂದುಕೊಳ್ಳುತ್ತಿದ್ದರು. ಬಹಳ ವರ್ಷಗಳ ನಂತರ ಬರೆವಣಿಗೆ ಮಾಡುತ್ತಿದ್ದರಿಂದ ಬರೆಯುವುದಕ್ಕೆ ಹಿಂಸೆಯಾಗುತ್ತಿತ್ತು. ಪಿಎಚ್‌ ಡಿ ಪ್ರವೇಶ ಪರೀಕ್ಷೆ ಪಾಸು ಮಾಡುವುದು ಅತ್ಯಂತ ಕಷ್ಟವಾಗಿತ್ತು. ಆ ಪ್ರಶ್ನೆ ಪತ್ರಿಕೆ ಅತ್ಯಂತ ಕ್ಲಿಷ್ಟವಾಗಿತ್ತು. ಅದನ್ನೆಲ್ಲಾ ಮೀರಿ ಪಿಎಚ್‌ಡಿ ಥೀಸಿಸ್‌ ಸಲ್ಲಿಸಿದ್ದೆ. ಕೆಲವು ವರ್ಷಗಳು ಅದು ವಾಪಸ್‌ ಬಂದಿರಲಿಲ್ಲ. ನಾನು ತಿರಸ್ಕಾರಗೊಂಡಿರಬೇಕು ಎಂದು ಸುಮ್ಮನಿದ್ದೆ. ಸಾಕಷ್ಟು ಸಮಯದ ನಂತರ ಬಂತು. ಈ ವೇಳೆಗೆ ಮೊದಲ ಬಾರಿಗೆ ಬೆಂಗಳೂರು ವಿಶ್ವವಿದ್ಯಾಲಯದ ಉಪಕುಲಪತಿಯಾಗಿದ್ದ ಪ್ರೊ. ರಂಗನಾಥ್‌ ಅವರು ಪಿಎಚ್‌ಡಿ ಥೀಸಿಸ್‌ ಕುರಿತು ಮುಕ್ತ ಚರ್ಚೆಗೆ ಅವಕಾಶ ಮಾಡಿಕೊಟ್ಟಿಬಿಟ್ಟಿದ್ದರು. ಅಂತಿಮವಾಗಿ ಹಲವು ಸವಾಲುಗಳ ನಡುವೆ ಅದನ್ನು ಸಮರ್ಥಿಸುವಲ್ಲಿ ಸಫಲನಾಗಿದ್ದೆ. ಪಿಎಚ್‌ಡಿ ಪದವಿ ಸಿಕ್ಕಿತು.

ಸಾಕಷ್ಟು ಮಂದಿ ರಾಜಕಾರಣಿಗಳು ಹಣ ಕೊಟ್ಟು ಮತ್ತು ಗೌರವಾನ್ವಿತ ಡಾಕ್ಟರೇಟ್‌ ಪದವಿಗಳನ್ನು ಪಡೆದುಕೊಂಡಿರುವುದರಿಂದ ನಮ್ಮನ್ನು ಅದೇ ಲೆಕ್ಕಕ್ಕೇ ಸೇರಿಸಿಬಿಡಬಹುದು ಎಂದು ನಾನು ʼಡಾಕ್ಟರ್‌ʼ ಎಂದು ಬರೆದುಕೊಳ್ಳುವುದಿಲ್ಲವಷ್ಟೆ.

ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎಚ್‌ ವೆಂಕಟಾಚಲಯ್ಯ ಅವರ ಜೊತೆಗೆ ಬಿ ಎಲ್‌ ಶಂಕರ್.
ಸುಪ್ರೀಂ ಕೋರ್ಟ್‌ ನಿವೃತ್ತ ಮುಖ್ಯ ನ್ಯಾಯಮೂರ್ತಿ ಎಂ ಎಚ್‌ ವೆಂಕಟಾಚಲಯ್ಯ ಅವರ ಜೊತೆಗೆ ಬಿ ಎಲ್‌ ಶಂಕರ್.
Q

ಕಾನೂನು ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಲಹೆ-ಸೂಚನೆ ನೀಡುವುದನ್ನು ಮುಂದುವರೆಸಿದ್ದೀರಾ?

A

ನಾನು ನಾನ್‌ ಅಪಿಯರಿಂಗ್‌ ವಕೀಲ. ಲೋಕಾಯುಕ್ತರಾದ ನ್ಯಾಯಮೂರ್ತಿ ವಿಶ್ವನಾಥ್‌ ಶೆಟ್ಟಿ ನಮ್ಮ ಗುರುಗಳು. ಅವರ ಪುತ್ರನ ಶೆಟ್ಟಿ ಅಂಡ್‌ ಹೆಗಡೆ ಅಸೋಸಿಯೇಟ್ಸ್‌ಗೆ ನಮ್ಮ ಪ್ರಕರಣಗಳಿದ್ದರೆ ಕೊಡುತ್ತೇವೆ. ಪ್ರಮುಖ ತೀರ್ಪುಗಳ ಕುರಿತ ಚರ್ಚೆ, ಸೆಮಿನಾರ್‌ ಮತ್ತಿತರ ಕಡೆ ಭಾಗವಹಿಸುತ್ತೇನೆ.

Q

ನೀವು ನಡೆಸಿದ ಪ್ರಮುಖ ಪ್ರಕರಣಗಳ ಬಗ್ಗೆ ವಿವರಿಸಬಹುದೇ?

A

ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ಬಂಧಿತರಾಗಿದ್ದ ಕೆಲವರ ಹೇಬಿಯಸ್‌ ಕಾರ್ಪಸ್‌ ಅರ್ಜಿಗಳ ಕುರಿತಾದ ಪ್ರಕರಣಗಳನ್ನು ನಡೆಸಲು ಪ್ರಯತ್ನ ಮಾಡಿದ್ದೇನೆ. ವಕೀಲನಾಗಿ ನನ್ನ ಸಾಧನೆ ದೊಡ್ಡದೇನೂ ಇಲ್ಲ. ಕಾನೂನು ಕ್ಷೇತ್ರದ ಜ್ಞಾನವನ್ನು ರಾಜಕೀಯ ಕ್ಷೇತ್ರದಲ್ಲಿ ಬಳಸಿಕೊಂಡಿದ್ದೇನೆ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

A

ವಕೀಲನಾಗಿ ಮುಂದುವರೆದಿದ್ದರೆ ಹೈಕೋರ್ಟ್‌, ಸುಪ್ರೀಂ ಕೋರ್ಟ್‌ ನ್ಯಾಯಮೂರ್ತಿ ಆಗುವವರೆಗೆ ಹೋಗಬಹುದಿತ್ತು ಎಂದು ಆಗಾಗ್ಗೆ ಅನಿಸಿರುವುದುಂಟು. ಚಿತ್ರಕಲಾ ಪರಿಷತ್‌ನ ನಮ್ಮ ಕಾಲೇಜಿನಲ್ಲಿ ಸಂವಿಧಾನದ ಕುರಿತು ಈಗಲೂ ನಾನು ಬೋಧನೆ ಮಾಡುತ್ತೇನೆ. ಪ್ರೊಫೆಸರ್‌ ಆಗಿದ್ದರೆ ಒಂದಷ್ಟು ಒಳ್ಳೆಯ ಯುವಕರನ್ನು ತಯಾರು ಮಾಡಬಹುದಿತ್ತು ಎಂದೂ ಅನಿಸಿದೆ. ಕೃಷಿ ಕ್ಷೇತ್ರದಲ್ಲಿ ತೊಡಗಿಸಿಕೊಂಡಿದ್ದರೆ ವ್ಯಕ್ತಿಗತವಾಗಿ ಮಲೆನಾಡು ಭಾಗದಲ್ಲಿ ಪರಿಸರದ ಕುರಿತು ಇನ್ನೊಂದಷ್ಟು ಕೆಲಸ ಮಾಡಬಹುದಿತ್ತು ಎಂದೂ ಅನಿಸಿದೆ. ಸಾರ್ವಜನಿಕ ಬದುಕಿನಲ್ಲಿ ನಮ್ಮಂಥವರೂ ಇರಬಹುದು ಎಂದು ಹೇಳಲು ರಾಜಕಾರಣ ನೆರವಾಗಿದೆ. ಈ ಕಾರಣದಿಂದ ಸ್ವಲ್ಪ ಸಮಾಧಾನವಿದೆ. ರಾಜಕೀಯಕ್ಕೆ ಬಂದಿದ್ದುದರಿಂದ ಸಾಕಷ್ಟು ಮಂದಿಗೆ ಪರಿಚಿತನಾಗಿ ಒಡನಾಟ ದೊರೆತಿದೆ. ನನಗೆ ರಾಜಕಾರಣ ಪ್ರವೃತ್ತಿಯೇ ವಿನಾ ವೃತ್ತಿಯಲ್ಲ. ನನ್ನ ವೃತ್ತಿ ಕುರಿತಾದ ಮಾಹಿತಿ ನೀಡುವ ವಿಚಾರದಲ್ಲಿ ನಾನೆಂದೂ ರಾಜಕಾರಣ ಅಥವಾ ಸಮಾಜ ಸೇವೆ ಎಂದು ಉಲ್ಲೇಖಿಸಿಲ್ಲ. ಬದಲಿಗೆ ಕಾಫಿ ಪ್ಲಾಂಟರ್‌ ಮತ್ತು ವಕೀಲ ಎಂದು ಬರೆದಿದ್ದೇನೆ ಏಕೆಂದರೆ ರಾಜಕಾರಣ ಮತ್ತು ಸಮಾಜ ಸೇವೆ ಪ್ರವೃತ್ತಿಯೇ ಹೊರತು ವೃತ್ತಿಯಲ್ಲ.

Kannada Bar & Bench
kannada.barandbench.com