ವಕೀಲರ ಸಂಕಷ್ಟಕ್ಕೆ ಜಿಲ್ಲೆಯ ನ್ಯಾಯಾಧೀಶರೂ ನೆರವಾಗಿದ್ದಾರೆ: ಜಗದೀಶ ಜಗತಾಪ

"ಊರುಗಳ ಕಡೆ ಜಮೀನು ಹೊಂದಿರುವವರು ಕೃಷಿಯತ್ತ ಮುಖ ಮಾಡಿದ್ದಾರೆ. ಹಲವರು ಪರ್ಯಾಯ ಉದ್ಯೋಗಗಳತ್ತ ಗಮನಹರಿಸಿದ್ದಾರೆ. ನಮ್ಮ ಸಂಘದ ವಕೀಲರೊಬ್ಬರು ಕಂಪ್ಯೂಟರ್‌, ಜೆರಾಕ್ಸ್‌ ಉದ್ಯಮ ಆರಂಭಿಸಿದ್ದಾರೆ."
Jagadesh Jagatapa
Jagadesh JagatapaPresident, Bidar District Bar Association

“ಕೋವಿಡ್‌ ಸಂದರ್ಭದಲ್ಲಿ ನೆರೆಯ ಮಹಾರಾಷ್ಟ್ರ, ತೆಲಂಗಾಣ, ಆಂಧ್ರಪ್ರದೇಶ ಸರ್ಕಾರಗಳು ವಕೀಲರಿಗೆ ನೆರವಾಗುವ ಮೂಲಕ ಸೂಕ್ತವಾಗಿ ಸ್ಪಂದಿಸಿವೆ. ಆದರೆ, ಇದೇ ಮಾತನ್ನು ನಮ್ಮಲ್ಲಿ ಹೇಳಲಾಗದು,” ಎನ್ನುವುದು ಗಡಿ ಜಿಲ್ಲೆ ಬೀದರ್ ನ ‌ವಕೀಲರ ಸಂಘದ ಅಧ್ಯಕ್ಷ ಜಗದೀಶ ಜಗತಾಪ ಅವರ ನುಡಿಗಳು.

ಕೋವಿಡ್‌ನಿಂದ ತತ್ತರಿಸಿರುವ ಜಿಲ್ಲೆಯ ವಕೀಲರುಗಳಿಗೆ ತಮ್ಮ ಸೀಮಿತ ವ್ಯಾಪ್ತಿಯಲ್ಲಿ ನೆರವಾಗುವ ಪ್ರಾಮಾಣಿಕ ಪ್ರಯತ್ನವನ್ನು ಮಾಡಿರುವ ಭಾವನೆ ಜಗತಾಪ ಅವರ ಮಾತುಗಳಲ್ಲಿ ವ್ಯಕ್ತವಾಗುತ್ತದೆ. ಬೀದರ್‌ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳ ಪ್ರಯತ್ನದಿಂದ ಪ್ರೇರಿತರಾದ ನ್ಯಾಯಾಧೀಶರು ತಮ್ಮ ಕೈಲಾದಷ್ಟು ಸಹಾಯ ಮೂಡುವ ಮೂಲಕ ಸಂಕಷ್ಟದ ಸಂದರ್ಭದಲ್ಲಿ "ಬಾರ್‌"ಗೆ ಬೆಂಬಲವಾಗಿ ನಿಲ್ಲುವುದರೊಂದಿಗೆ ಮಾನವೀಯ ಹೆಜ್ಜೆ ಇಟ್ಟಿದ್ದನ್ನು ಅವರು ಸ್ಮರಿಸುತ್ತಾರೆ. ಕೋವಿಡ್ ಸಂಕಷ್ಟ‌ ಜಿಲ್ಲೆಯ ವಕೀಲ ಸಮುದಾಯದ ಮೇಲೆ ಬೀರಿರುವ ಪರಿಣಾಮದ ಬಗ್ಗೆ “ಬಾರ್‌ ಅಂಡ್‌ ಬೆಂಚ್‌” ಜೊತೆ ಅವರು ಮಾತನಾಡಿದ್ದಾರೆ.

Q

ಕೋವಿಡ್‌ನಿಂದಾಗಿ ವಕೀಲರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?

A

ವಕೀಲರಿಗೆ ಜೀವನ ನಡೆಸುವುದೇ ದುರ್ಲಭವಾಗಿದೆ. ಆರ್ಥಿಕವಾಗಿ ಸಾಕಷ್ಟು ಸಮಸ್ಯೆಗಳಾಗಿವೆ. ಕೆಲವು ವಕೀಲರು ತಮ್ಮ ಪ್ರಕರಣಗಳನ್ನು ಇತರೆ ವಕೀಲರ ಜೊತೆ ಹಂಚಿಕೊಳ್ಳುವ ಮೂಲಕ ತಕ್ಕಮಟ್ಟಿಗೆ ನೆರವಾಗುವ ಕೆಲಸ ಮಾಡುತ್ತಿದ್ದಾರೆ.

Q

ಕೋವಿಡ್‌ನಿಂದ ಜಿಲ್ಲೆಯ ವಕೀಲ ಸಮುದಾಯದಲ್ಲಿ ಸಂಭವಿಸಿದ ಸಾವುನೋವಿನ ಮಾಹಿತಿ ಹಂಚಿಕೊಳ್ಳಬಹುದೇ?

A

ಕೊರೊನಾ ಸೋಂಕು‌ ತಗುಲಿ ಒಬ್ಬರು ವಕೀಲರು ಸಾವನ್ನಪ್ಪಿದ್ದು, ಸುಮಾರು 10 ಮಂದಿ ವಕೀಲರು ಗುಣಮುಖರಾಗಿದ್ದಾರೆ. ಕೆಲವು ವಕೀಲರ ಆಸ್ಪತ್ರೆಯ ವೆಚ್ಚವು ಲಕ್ಷಾಂತರ ರೂಪಾಯಿಗಳಾಗಿವೆ. ಆದಾಯವಿಲ್ಲದ ಸಂದರ್ಭದಲ್ಲಿ ಆಸ್ಪತ್ರೆ ಶುಲ್ಕ ಪಾವತಿಸಲು ಸಾಕಷ್ಟು ವಕೀಲರು ಪಡಿಪಾಟಲು ಪಟ್ಟಿದ್ದಾರೆ.

Q

ಕೋವಿಡ್‌ನಿಂದಾಗಿ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ನಿಮ್ಮ ಸಂಘ ಯಾವ ತೆರನಾದ ನೆರವು ನೀಡಿದೆ?

A

ಸಂಘದ ವತಿಯಿಂದ ತೀರ ಅಗತ್ಯವಿರುವವರಿಗೆ ಆಹಾರದ ಕಿಟ್‌ ನೀಡಿದ್ದೇವೆ. ಇದಕ್ಕೆ ಸಂಘದ ಹಲವು ಹಿರಿಯ ವಕೀಲರು ಆರ್ಥಿಕ ಸಹಾಯ ಮಾಡಿದ್ದಾರೆ. ಕೆಲವು ವಕೀಲರು ತೀರ ಸಂಕಷ್ಟ ಎದುರಿಸುತ್ತಿರುವ ಜ್ಯೂನಿಯರ್‌ಗಳಿಗೆ ತಮ್ಮ ಕಡೆಯಿಂದ ಮಾಡಬಹುದಾದ ಎಲ್ಲಾ ರೀತಿಯ ಸಹಾಯವನ್ನು ಮಾಡಿದ್ದಾರೆ.

ಬೀದರ್‌ ಜಿಲ್ಲಾ ವಕೀಲರ ಸಂಘವು ವಕೀಲರಿಗೆ ಆಹಾರದ ಕಿಟ್‌ ವಿತರಿಸುತ್ತಿರುವುದರ ಮಾಹಿತಿ ಪಡೆದ ಜಿಲ್ಲಾ ಪ್ರಧಾನ ಮತ್ತು ಸೆಷನ್ಸ್‌ ನ್ಯಾಯಾಧೀಶರಾದ ಸತ್ಯನಾರಾಯಣ ಕಡ್ಲೂರು ಅವರು ಜಿಲ್ಲೆಯಲ್ಲಿ ಸೇವೆ ಸಲ್ಲಿಸುತ್ತಿರುವ ನ್ಯಾಯಮೂರ್ತಿಗಳ ಜೊತೆ ಸಮಾಲೋಚನೆ ನಡೆಸಿ ವಕೀಲರಿಗೆ ಸುಮಾರು 90 ಸಾವಿರ ರೂಪಾಯಿ ವೆಚ್ಚದಲ್ಲಿ 60ಕ್ಕೂ ಹೆಚ್ಚು ಆಹಾರದ ಕಿಟ್‌ಗಳನ್ನು ನೀಡಿದರು. ಪ್ರತಿ ಆಹಾರದ ಕಿಟ್‌ಗೆ ತಲಾ ಮೂರು ಸಾವಿರ ರೂಪಾಯಿ ಖರ್ಚಾಗಿದೆ. ಇದನ್ನು ವಿತರಿಸಲು ಬರುವಂತೆ ಕೋರಿದರೂ ನ್ಯಾಯಾಧೀಶರು ಅದಕ್ಕೆ ಒಪ್ಪಲಿಲ್ಲ. ನೆರವಿನ ವಿಚಾರವನ್ನು ಖಾಸಗಿಯಾಗಿ ಇಡುವುದು ನ್ಯಾಯಾಧೀಶರ ಉದ್ದೇಶವಾಗಿತ್ತು. ಈ ಮೂಲಕ ನ್ಯಾಯಾಧೀಶರು ಬಾರ್‌ಗೆ (ವಕೀಲರ ಸಂಘ) ನೆರವಾಗಿದ್ದನ್ನು ಮನದುಂಬಿ ನೆನೆಯುತ್ತೇವೆ.

Q

ವರ್ಚುವಲ್ ಕಲಾಪಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

A

ಜಾಮೀನು, ತಡೆಯಾಜ್ಞೆಯಂಥ ಅತ್ಯಂತ ಕಡಿಮೆ ಸಮಯದಲ್ಲಿ ಮುಗಿದು ಹೋಗುವ ಪ್ರಕರಣಗಳನ್ನಷ್ಟೇ ವರ್ಚುವಲ್‌ ವ್ಯವಸ್ಥೆಯಲ್ಲಿ ನಡೆಸಬಹುದು. ಹೆಚ್ಚಿನ ಕಾಲಾವಕಾಶ ಬೇಡುವ ವಾದ ಸರಣಿಯ ಪ್ರಕರಣಗಳನ್ನು ನಡೆಸಲಾಗದು. ನೆಟ್‌ವರ್ಕ್‌ ಸೌಕರ್ಯ ಸೇರಿದಂತೆ ಮೂಲಸೌಕರ್ಯಗಳು ಇಲ್ಲದಿರುವುದರಿಂದ ವರ್ಚುವಲ್‌ ವ್ಯವಸ್ಥೆ ಸೂಕ್ತವಲ್ಲ.

Q

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

A

ಜನರು ನ್ಯಾಯಾಲಯಗಳಿಗೆ ಬರಲು ಹಿಂಜರಿಯುತ್ತಿದ್ದಾರೆ. ಪರಿಸ್ಥಿತಿ ಹೀಗಿರುವಾಗ ಸುಧಾರಣೆಯಾಗಿದೆ ಎಂದು ಹೇಳುವುದು ಹೇಗೆ? ಇದಕ್ಕೆ ಇನ್ನೂ ಸಾಕಷ್ಟು ಸಮಯಬೇಕಿದೆ.

Q

ಕೋವಿಡ್‌ ವ್ಯಾಪಿಸಿದ್ದ ಸಂದರ್ಭದಲ್ಲಿ ಹಾಗೂ ಆ ಬಳಿಕ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

A

ಊರುಗಳ ಕಡೆ ಜಮೀನು ಹೊಂದಿರುವವರು ಕೃಷಿಯತ್ತ ಮುಖ ಮಾಡಿದ್ದಾರೆ. ಹಲವರು ಪರ್ಯಾಯ ಉದ್ಯೋಗಗಳತ್ತ ಗಮನಹರಿಸಿದ್ದಾರೆ. ನಮ್ಮ ಸಂಘದ ವಕೀಲರೊಬ್ಬರು ಕಂಪ್ಯೂಟರ್‌, ಜೆರಾಕ್ಸ್‌ ಉದ್ಯಮ ಆರಂಭಿಸಿದ್ದಾರೆ. ಇದಕ್ಕಿಂತ ಹೆಚ್ಚೇನು ಹೇಳುವುದು...

Q

ರಾಜ್ಯ ಸರ್ಕಾರ ಅಥವಾ ಕೆಎಸ್‌ಬಿಸಿಯಿಂದ ಸಂಕಷ್ಟದಲ್ಲಿ ದೊರೆತಿರುವ ನೆರವಿನ ಬಗ್ಗೆ ಏನು ಹೇಳಬಯಸುತ್ತೀರಿ?

A

ಬೀದರ್‌ ಜಿಲ್ಲಾ ವಕೀಲರ ಸಂಘದಲ್ಲಿ ಸುಮಾರು 450 ನೋಂದಾಯಿತ ಸದಸ್ಯರಿದ್ದಾರೆ. ಈ ಪೈಕಿ ಸುಮಾರು 90 ಕಿರಿಯ ವಕೀಲರಿಗೆ ಕರ್ನಾಟಕ ರಾಜ್ಯ ವಕೀಲರ ಪರಿಷತ್‌ನಿಂದ ಸಣ್ಣ ಪ್ರಮಾಣದ ಆರ್ಥಿಕ ನೆರವು ಸಿಕ್ಕಿದೆ. ಕೊರೊನಾದಿಂದ ತೀರಿಕೊಂಡವರ ಕುಟುಂಬ ಮತ್ತು ಸೋಂಕು ತಗುಲಿ ಗುಣಮುಖರಾದವರಿಗೆ 50 ಸಾವಿರ ರೂಪಾಯಿ ನೆರವು ಇನ್ನೂ ಬಂದಿಲ್ಲ.

ಕೊರೊನಾದಿಂದಾಗಿ ವಕೀಲರ ಸಮುದಾಯ ತೀವ್ರ ತರಹದ ಸಮಸ್ಯೆಗಳನ್ನು ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೆಎಸ್‌ಬಿಸಿಯಲ್ಲಿ ಇರುವ ಕೋಟ್ಯಂತರ ರೂಪಾಯಿ ಹಣವನ್ನು ಅಗತ್ಯವಿರುವ ವಕೀಲರಿಗೆ ಕಡಿಮೆ ಬಡ್ಡಿ ದರದಲ್ಲಿ ಸಾಲದ ರೂಪದಲ್ಲಿ ನೀಡುವ ಕೆಲಸವನ್ನು ಪರಿಷತ್ತು ಮಾಡಬೇಕಿತ್ತು. ಕಷ್ಟದ ಕಾಲದಲ್ಲಿ ನೆರವಿಗೆ ಬರದೇ ಇದ್ದರೆ ಹೇಗೆ? ವಕೀಲರು ಆ ಹಣವನ್ನು ಯಾವುದೇ ಕಾರಣಕ್ಕೂ ಇಟ್ಟುಕೊಳ್ಳುತ್ತಿರಲಿಲ್ಲ. ಆದರೆ, ಆ ರೀತಿಯ ಉದಾರ ನೀತಿಯನ್ನು ನಮ್ಮ ಪರಿಷತ್ತು ಅಳವಡಿಸಿಕೊಳ್ಳಲಿಲ್ಲ ಎಂಬುದರ ಬಗ್ಗೆ ಬೇಸರವಿದೆ.

Related Stories

No stories found.
Kannada Bar & Bench
kannada.barandbench.com