ನಟಿ ಕಂಗನಾ ಹೇಳಿದ್ದು ರೈತ ಸಮುದಾಯವನ್ನು ಘಾಸಿಗೊಳಿಸುವಂತಹ ಮಾತುಗಳು: ವಕೀಲ ರಮೇಶ್ ನಾಯಕ್

"ಭಿನ್ನಾಭಿಪ್ರಾಯ ಇದೆ ಎಂದ ಮಾತ್ರಕ್ಕೆ ತಲೆಕಡಿಯೋದು ಎಂದರ್ಥವಲ್ಲ. ಭಯೋತ್ಪಾದಕರಿಗೂ ಹಾಗೆ ನೇರವಾಗಿ ಹಣೆಪಟ್ಟಿ ಹಚ್ಚದ ನ್ಯಾಯಾಂಗ ವ್ಯವಸ್ಥೆ ನಮ್ಮದು. ಅವರು ಹೇಳಿದ್ದು ಒಪ್ಪುವಂಥದ್ದಲ್ಲ ಎಂಬ ಕಾರಣಕ್ಕಷ್ಟೇ ಪ್ರಕರಣ ದಾಖಲಿಸಿದ್ದೇನೆ."
ನಟಿ ಕಂಗನಾ ಹೇಳಿದ್ದು ರೈತ ಸಮುದಾಯವನ್ನು ಘಾಸಿಗೊಳಿಸುವಂತಹ ಮಾತುಗಳು: ವಕೀಲ ರಮೇಶ್ ನಾಯಕ್
ಎಲ್. ರಮೇಶ್ ನಾಯಕ್

ಬಾಲಿವುಡ್ ನಟಿ ಕಂಗನಾ ರನೌತ್ ರೈತರ ಕುರಿತಾಗಿ ನೀಡಿದ್ದ ಆಕ್ಷೇಪಾರ್ಹ ಹೇಳಿಕೆಯ ವಿರುದ್ಧ ಕಾನೂನು ಸಮರ ಸಾರಿರುವ ಎಲ್. ರಮೇಶ್ ನಾಯಕ್ ಅವರು ತುಮಕೂರು ಮೂಲದ ಯುವ ವಕೀಲರು. ಜನಪರ ಕಾಳಜಿ ಇರಿಸಿಕೊಂಡು ವಿವಿಧ ನ್ಯಾಯಾಲಯಗಳಲ್ಲಿ ಕಾನೂನು ಹೋರಾಟ ನಡೆಸುತ್ತಿರುವವರು. ಹೈಕೋರ್ಟಿನಲ್ಲಿ ಅವರು ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆಗಳು ಅನೇಕ. ಸ್ವತಃ ರೈತರೂ ಆಗಿರುವ ಅವರು ಕಂಗನಾ ಅವರ ರೈತ ವಿರೋಧಿ ಹೇಳಿಕೆ ಕುರಿತಂತೆ ‘ಬಾರ್ ಅಂಡ್ ಬೆಂಚ್’ ಜೊತೆ ಮಾತಿಗಿಳಿದಿದ್ದಾರೆ.

Q

ನಟಿ ಕಂಗನಾ ಅವರು ಪ್ರತಿಭಟನಾನಿರತ ರೈತರ ಕುರಿತಾಗಿ ನೀಡಿದ ಹೇಳಿಕೆಯನ್ನು ಹೇಗೆ ವ್ಯಾಖ್ಯಾನಿಸುತ್ತೀರಿ? ಸಮಾಜದ ಮೇಲೆ ಅದು ಬೀರಬಹುದಾದ ಪರಿಣಾಮವೇನು?

A

ಕಂಗನಾ ಅವರ ಹೇಳಿಕೆ ನಿಜವಾಗಿಯೂ ದುರದೃಷ್ಟಕರ. Fame and name ಇರುವಂತಹ ವ್ಯಕ್ತಿಗಳು ಇಂತಹ ಹೇಳಿಕೆ ನೀಡಿದರೆ ಅದು ಸಮಾಜದ ಮೇಲೆ ದುಷ್ಪರಿಣಾಮ ಬೀರುತ್ತದೆ. ಶಾಂತಿ ಸಾಮರಸ್ಯ ಕೆಡಿಸುವ ಹೇಳಿಕೆಗಳು ಇವೆಲ್ಲಾ. ಭಿನ್ನ ಧೋರಣೆ ಇದೆ ಎಂದ ಮಾತ್ರಕ್ಕೆ ಅವರ ವಿರುದ್ಧ ಇರುವವರನ್ನೆಲ್ಲಾ ಬೈದರೆ ಹೇಗೆ? ಸಮಂಜಸವಾದ ಟೀಕೆ ಮಾಡಬಹುದಿತ್ತು.

Also Read
ರೈತರ ವಿರುದ್ಧದ ಟ್ವೀಟ್ - ಕಂಗನಾ ವಿರುದ್ಧ ಎಫ್‌ಐಆರ್ ದಾಖಲಿಸಲು ತುಮಕೂರು ಜೆಎಂಎಫ್‌ ನ್ಯಾಯಾಲಯ ಆದೇಶ
Q

ಅವರು ಹಾಗೆ ರೈತರನ್ನು ಕರೆದ ಹಿನ್ನೆಲೆ ಏನಿರಬಹುದು?

A

ನನ್ನ ಊಹೆ ಏನೆಂದರೆ ಇತ್ತೀಚಿನವರೆಗೂ ಅವರು ಬಾಲಿವುಡ್ ನಟಿಯಷ್ಟೇ ಆಗಿದ್ದರು. ಕಳೆದ ಎರಡು ಮೂರು ತಿಂಗಳಿನಿಂದ ನಡೆಯುತ್ತಿರುವ ಬೆಳವಣಿಗೆಗಳು ಎಲ್ಲರಿಗೂ ಗೊತ್ತಿರುವಂತಹವೇ. ಆಕೆ ಬಿಜೆಪಿ ಬೆಂಬಲ ಸಿಕ್ಕಿದ್ದಕ್ಕೆ ಹೀಗೆ ಹೇಳಿರಬಹುದು. ಸರ್ಕಾರವನ್ನು ಮೆಚ್ಚಿಸಲು ಹೀಗೆ ಹೇಳಿರಬಹುದು, ಅವರಿಗೆ ಈ ಮಾತು ಅಗತ್ಯ ಇರಲಿಲ್ಲ. ವಿರುದ್ಧವಾದ ಅಭಿಪ್ರಾಯ ಇದ್ದ ಮಾತ್ರಕ್ಕೆ ಭಯೋತ್ಪಾದಕರು ಎಂದರೆ ಏನರ್ಥ? ನಾನೂ ಒಬ್ಬ ರೈತ. ನನ್ನನ್ನು ಯಾರಾದರೂ ಹಾಗೆ ಕರೆದರೆ ಖಂಡಿತ ನನಗೆ ತೀವ್ರ ನೋವಾಗುತ್ತದೆ. ಯಾರನ್ನೋ ಮೆಚ್ಚಿಸಲು ಹೀಗೆ ಹೇಳುವ ಅಗತ್ಯ ಇರಲಿಲ್ಲ. ಅವರು ಆತ್ಮಾವಲೋಕನ ಮಾಡಿಕೊಳ್ಳಬೇಕಿದೆ.

Also Read
ರೈತ ವಿರೋಧಿ ಟ್ವೀಟ್: ಕಂಗನಾ ವಿರುದ್ಧ ಎಫ್‌ಐಆರ್‌ ದಾಖಲು ಕೋರಿಕೆ, ತೀರ್ಪು ಕಾಯ್ದಿರಿಸಿದ ತುಮಕೂರು ನ್ಯಾಯಾಲಯ
Q

ಕ್ಯಾತ್ಸಂದ್ರ ಪೊಲೀಸರು ಮೊದಲು ಪ್ರಕರಣ ಏಕೆ ದಾಖಲಿಸಿಕೊಳ್ಳಲಿಲ್ಲ?

A

ನಾನು ಮೊದಲು ಇಮೇಲ್ ಮೂಲಕ ದೂರು ಕೊಟ್ಟಿದ್ದೆ. ತುಮಕೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯವರು ದೂರಿನ ಆಧಾರದ ಮೇಲೆ ಸು ಮೊಟೊ (ಸ್ವಯಂಪ್ರೇರಿತವಾಗಿ) ಪ್ರಕರಣ ದಾಖಲಿಸಿಕೊಳ್ಳಬಹುದಿತ್ತು. ಏಕೆಂದರೆ ಇದು ಸಮುದಾಯದ ಶಾಂತಿ- ನೆಮ್ಮದಿ ಕೆಡಿಸುವ ಕೆಲಸ. ಹತ್ತಾರು ಧರ್ಮ ನೂರಾರು ಜಾತಿ ಸಾವಿರಾರು ಭಿನ್ನ ವಿಚಾರಧಾರೆಗಳಿರುವ ದೇಶ ನಮ್ಮದು. ‘ಭಯೋತ್ಪಾದಕರಿದ್ದಂತೆ’ ಎಂದು ಅವರು (ಕಂಗನಾ) ಹೋಲಿಕೆಯನ್ನೂ ಮಾಡಿಲ್ಲ. ನೇರವಾಗಿ ಭಯೋತ್ಪಾದಕರು ಎಂದು ಬಿಂಬಿಸಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಸಕ್ರಿಯವಾಗಿ ತೊಡಗಿರುವ ನಾನು ಕಂಗನಾ ಅವರ ಹೇಳಿಕೆ ಗಮನಿಸಿದೆ. 22ರಂದು ದೂರು ಕೊಟ್ಟೆ. ಇದಕ್ಕೆ ಪೊಲೀಸರಿಂದ ಪ್ರತಿಕ್ರಿಯೆ ಬರಲಿಲ್ಲ. ನಂತರ ತುಮಕೂರಿನ ಜೆಎಂಎಫ್ ನ್ಯಾಯಾಲಯದ ಮೊರೆ ಹೋದೆ.

Q

ಈ ಪ್ರಕರಣ ರಾಷ್ಟ್ರವ್ಯಾಪಿ ಚರ್ಚೆಯಲ್ಲಿರುವಾಗ ನಿಮಗೆ ಈ ಸಂಬಂಧ ಕರ್ನಾಟಕದಲ್ಲಿ ಅದರಲ್ಲಿಯೂ ತುಮಕೂರಿನಲ್ಲಿ ದೂರು ದಾಖಲಿಸಬೇಕು ಎಂದು ಅನ್ನಿಸಿದ್ದೇಕೆ? ಇದರ ಹಿಂದೆ ಏನಾದರೂ ಕಾರಣವಿದೆಯೇ?

A

ಒಬ್ಬ ರೈತನಾಗಿ ನಟಿ ಕಂಗನಾ ಅವರ ಹೇಳಿಕೆಯಿಂದ ನನಗೆ ಘಾಸಿ ಉಂಟಾಯಿತು. ಹಾಗಾಗಿ ದೂರು ದಾಖಲಿಸಬೇಕೆಂದುಕೊಂಡೆ. ತುಮಕೂರು ತಾಲೂಕು ಕ್ಯಾತ್ಸಂದ್ರ ಬಳಿಯ ಕದರನಹಳ್ಳಿ ತಾಂಡಾ ನಮ್ಮೂರು. ಪ್ರಕರಣದ ನ್ಯಾಯಾಂಗ ವ್ಯಾಪ್ತಿಯ ಬಗ್ಗೆ ಗೊಂದಲಗಳಿದ್ದವು. ನ್ಯಾಯಾಲಯಕ್ಕೆ ಕಾನೂನಾತ್ಮಕ ಮತ್ತು ತಾಂತ್ರಿಕ ಅಂಶಗಳನ್ನು ಅರಿಕೆ ಮಾಡಿದೆ. ಮಾನ್ಯ ನ್ಯಾಯಾಲಯ ತದನಂತರ ಪ್ರಕರಣ ದಾಖಲಿಸಿಕೊಳ್ಳುವಂತೆ ಪೊಲೀಸರಿಗೆ ಸೂಚಿಸಿದೆ.

Q

ಇಂತಹ ಪ್ರಕರಣಗಳನ್ನು ಸಾಮಾನ್ಯವಾಗಿ ಸುದ್ದಿಗಾಗಿ ಮಾಡುವ ಪ್ರಕರಣಗಳು ಎನ್ನಲಾಗುತ್ತದೆ. ಆದರೆ ನಿಮಗೆ ಇದನ್ನು ದಾಖಲಿಸುವ ಹಿಂದೆ ಬಲವಾದ ಕಾರಣಗಳಿವೆಯೇ?

A

ಬಹಳ ಒಳ್ಳೆಯ ಪ್ರಶ್ನೆ. ಯಾರೂ ಇಂತಹ ಪ್ರಶ್ನೆ ಕೇಳಿರಲಿಲ್ಲ. ರೈತರಿಗೊಂದು ಘನತೆ ಇದೆ. Fair criticism ಮಾಡಲಿ. ನನಗೆ ಘಾಸಿ ಉಂಟಾಗಿದೆ. ನಾನೊಬ್ಬ ಸಾಫ್ಟ್ ವೇರ್ ಎಂಜಿನಿಯರ್ ಕೂಡ. ನಂತರ ಕಾನೂನು ವ್ಯಾಸಂಗ ಮಾಡಿ ಕೇವಲ ನಾಲ್ಕು ವರ್ಷಗಳ ಹಿಂದೆ ಈ ಕ್ಷೇತ್ರಕ್ಕೆ ಬಂದಿದ್ದೇನೆ. ದುಡ್ಡು-ಗಿಡ್ಡಿನ ಕಾರಣಕ್ಕೆ ಇದನ್ನೆಲ್ಲಾ ಮಾಡಿಲ್ಲ.

Q

ಪ್ರಕರಣ ದಾಖಲಿಸುವ ಹಿಂದೆ ಸೈದ್ಧಾಂತಿಕ ಕಾರಣಗಳೇನಾದರೂ ಇವೆಯೇ?

A

ಭಿನ್ನ ನಿಲುವುಗಳು ಇರಬಹುದು. ಆದರೆ ಅದೆಲ್ಲಾ ಕೋರ್ಟಿನಲ್ಲಿ ನಡೆಯಲ್ಲ. Left- Right- Centre ಎಂಬುದೆಲ್ಲಾ ನನಗೆ ಗೊತ್ತಿಲ್ಲ. ಪ್ರಕರಣಗಳ ಆಧಾರದಲ್ಲಿ, ಸತ್ಯಾಂಶಗಳ ಆಧಾರದಲ್ಲಿ , ಸತ್ಯಪರತೆ, ನ್ಯಾಯಪರತೆ, ಧರ್ಮಪರತೆ ಮೂಲಕ ನಾನು ಪ್ರತಿಯೊಂದನ್ನೂ ತೂಗಿ ನೋಡುತ್ತೇನೆ, ಬೆಲೆ ಕಟ್ಟುತ್ತೇನೆ.

Q

ಹೀಗೆ ಪ್ರಕರಣ ದಾಖಲಿಸುವುದರಿಂದ ಕಂಗನಾ ರೀತಿಯ ಖ್ಯಾತನಾಮರನ್ನು ತಿದ್ದಲು ಸಾಧ್ಯವೇ?

ಒಳ್ಳೆಯ ಪ್ರಶ್ನೆ. ಗಲ್ಲುಶಿಕ್ಷೆ ನೀಡಿದ ಮಾತ್ರಕ್ಕೆ ಅಪರಾಧಗಳು ನಡೆಯುವುದಿಲ್ಲ ಎಂದೇನೂ ಅಲ್ಲ. ಆದರೆ ಖ್ಯಾತನಾಮರು ಹೇಳಿಕೆಗಳನ್ನು ನೀಡುವಾಗ ಎಚ್ಚರಿಕೆಯಿಂದ ಇರಬೇಕು. ಈ ಹೊತ್ತಿನ ಸಂವಹನ ಯುಗದಲ್ಲಿ ಮುಂಬೈನವರೋ ಹಿಮಾಚಲಪ್ರದೇಶದವರೋ ಆದ ಕಂಗನಾ ಮಾಡಿದ ಟ್ವೀಟ್ ಅನ್ನು ಕದರನಹಳ್ಳಿ ತಾಂಡದಲ್ಲಿ ಕುಳಿತ ನಾನು ಕೂಡ ಓದಬಲ್ಲೆ. ಅವರಿಗೆ ಲಕ್ಷಾಂತರ ಜನ ಅಭಿಮಾನಿಗಳು ಇರುತ್ತಾರೆ. ಅದನ್ನು ಅರ್ಥ ಮಾಡಿಕೊಳ್ಳಬೇಕು.

Q

ಪ್ರಕರಣವನ್ನು ಹೇಗೆ ಮುನ್ನಡೆಸಬೇಕೆಂದಿದ್ದೀರಿ?

A

ನಾನೊಬ್ಬ ಸಾಮಾನ್ಯ ವ್ಯಕ್ತಿಯಲ್ಲ, ಒಬ್ಬ ವಕೀಲ. ಎಫ್ಐಆರ್ ಹಾಕುವಂತೆ ಕೋರ್ಟ್ ನಿರ್ದೇಶನ ನೀಡಿದ್ದು ಸಿಆರ್‌ಪಿಸಿ ಅಡಿ 90 ದಿನದೊಳಗೆ ರಿಪೋರ್ಟ್ ಹಾಕಬೇಕು. ತನಿಖೆಯಲ್ಲಿ ಸತ್ವ ಇದೆ ಎನ್ನಿಸಿದರೆ ಪೊಲೀಸರು ಆರೋಪಪಟ್ಟಿ ಸಲ್ಲಿಸುತ್ತಾರೆ. ಸಾಕ್ಷ್ಯಾಧಾರಗಳಿಲ್ಲದಿದ್ದರೆ ಬಿ ರಿಪೋರ್ಟ್ ಹಾಕುತ್ತಾರೆ. ನನಗೂ ವಾದಿಸಲು ಅವಕಾಶವಿರುತ್ತದೆ.

Q

ಕಂಗನಾ ಅವರಿಗೆ ನೀವು ನೇರವಾಗಿ ಏನನ್ನು ಹೇಳಲು ಬಯಸುತ್ತೀರಿ?

A

ನಾನು ಹೇಳಬೇಕಿರೋದು ಇಷ್ಟೇ. ಅವರು ವಿಷಾದ ವ್ಯಕ್ತಪಡಿಸುವಂತಹ ಒಂದೇ ಒಂದು ಪದ ಹೇಳಿದ್ದರೂ ಸಾಕಿತ್ತು. ಸಾವಿರಾರು ಮಂದಿ ತಪ್ಪು ಮಾಡುತ್ತಾರೆ. ಆದರೆ ಪಶ್ಚಾತ್ತಾಪಕ್ಕೆ ಅವಕಾಶ ಇರುತ್ತದೆ. ಇಲ್ಲಿ ರಾಜಕೀಯ, ಹಣದ ಉದ್ದೇಶದ, ಅಥವಾ ವೈಯಕ್ತಿಕವಾದದ್ದು ಯಾವುದೂ ಇಲ್ಲ. ರೈತರ ವಿರುದ್ಧ ಹಾಗೆ ಹೇಳಿಯೇ ಇಲ್ಲ ಎಂಬರ್ಥದ ಮಾತುಗಳನ್ನಾಡಿದರು. ಅವರು ಹೇಳಿದ್ದು ರೈತರಿಗೆ ಮಾತ್ರವಲ್ಲ. ವಿರೋಧಾಭಿಪ್ರಾಯ ಇರುವ ಎಲ್ಲರನ್ನೂ ಉದ್ದೇಶಿಸಿ ಅವರು ಮಾತನಾಡಿದ್ದಾರೆ. ಭಿನ್ನಾಭಿಪ್ರಾಯ ಇದೆ ಎಂದ ಮಾತ್ರಕ್ಕೆ ತಲೆ ಕಡಿಯೋದು ಎಂದರ್ಥವಲ್ಲ. ಭಯೋತ್ಪಾದಕರಿಗೂ ಹಾಗೆ ನೇರವಾಗಿ ಹಣೆಪಟ್ಟಿ ಹಚ್ಚದ ನ್ಯಾಯಾಂಗ ವ್ಯವಸ್ಥೆ ನಮ್ಮದು. ಅವರು ಹೇಳಿದ್ದು ಒಪ್ಪುವಂಥದ್ದಲ್ಲ ಎಂಬ ಕಾರಣಕ್ಕಷ್ಟೇ ಪ್ರಕರಣ ದಾಖಲಿಸಿದ್ದೇನೆ.

Related Stories

No stories found.
Kannada Bar & Bench
kannada.barandbench.com