ಎಸ್‌ಸಿ ಯುವಕನ ಮೇಲಿನ ಪೊಲೀಸ್‌ ದೌರ್ಜನ್ಯ ಪ್ರಕರಣ ರಾಜಿಯಲ್ಲಿ ಅಂತ್ಯ; ಎಸ್‌ಐ ವಿರುದ್ಧದ ದಾವೆ ವಜಾಗೊಳಿಸಿದ ಹೈಕೋರ್ಟ್

ರಾಜಿ ವಿಚಾರವಾಗಿ “ಯಾರಿಂದಲೂ ಯಾವುದೇ ತೆರನಾದ ಒತ್ತಾಯ, ಬಲವಂತಕ್ಕೆ ಮಣಿದಾಗಲಿ ಅಥವಾ ಪ್ರಭಾವಕ್ಕೆ ಒಳಗಾಗಿಯಾಗಲಿ” ಹೆಜ್ಜೆ ಇರಿಸಿಲ್ಲ ಎಂದು ಉಭಯ ಪಕ್ಷಕಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಂಟಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.
Suspended PSI Arjun K Horakeri
Suspended PSI Arjun K Horakeri

ಪರಿಶಿಷ್ಟ ಜಾತಿಗೆ ಸೇರಿದ ಯುವಕನೊಬ್ಬನನ್ನು ಠಾಣೆಗೆ ಎಳೆದೊಯ್ದು ಹಲ್ಲೆ ನಡೆಸಿ, ಮೂತ್ರ ನೆಕ್ಕಿಸಿದ ಪ್ರಕರಣದಲ್ಲಿ ಉಭಯ ಪಕ್ಷಕಾರರು ರಾಜಿ ಮಾಡಿಕೊಂಡು ಜಂಟಿ ಅಫಿಡವಿಟ್‌ ಸಲ್ಲಿಸಿರುವುದನ್ನು ಪರಿಗಣಿಸಿರುವ ಕರ್ನಾಟಕ ಹೈಕೋರ್ಟ್‌ ಈಚೆಗೆ ವಿಚಾರಣಾಧೀನ ನ್ಯಾಯಾಲದಲ್ಲಿನ ಪ್ರಕರಣವನ್ನು ರದ್ದುಪಡಿಸಿದೆ.

ಪ್ರಕರಣದಲ್ಲಿ ಆರೋಪಿಯಾಗಿದ್ದ ಚಿಕ್ಕಮಗಳೂರು ಜಿಲ್ಲೆ ಗೋಣಿಬೀಡಿನ ಅಂದಿನ ಪೊಲೀಸ್ ಸಬ್ ಇನ್‌ಸ್ಪೆಕ್ಟರ್‌ ಕೆ ಅರ್ಜುನ್ ಹೊರಕೇರಿ ಮತ್ತು ಸಂತ್ರಸ್ತ ಮೂಡಿಗೆರೆ ತಾಲ್ಲೂಕಿನ ಕಿರಗುಂದ ಗ್ರಾಮದ ಪುನೀತ್‌ ಕೆ ಎಲ್‌ ಅವರ ಜಂಟಿ ಅಫಿಡವಿಟ್‌ ಮತ್ತು ಆಕ್ಷೇಪಿತ ಪ್ರಕ್ರಿಯೆ ವಜಾ ಮಾಡಲು ಕೋರಿ ಸಲ್ಲಿಸಿದ್ದ ಮನವಿಯನ್ನು ನ್ಯಾಯಮೂರ್ತಿ ಎಂ ನಾಗಪ್ರಸನ್ನ ಅವರ ನೇತೃತ್ವದ ಏಕಸದಸ್ಯ ಪೀಠವು ಒಪ್ಪಿಕೊಂಡು, ಪ್ರಕರಣ ಇತ್ಯರ್ಥಪಡಿಸಿತು.

ಹೀಗಾಗಿ, ಚಿಕ್ಕಮಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್‌ ನ್ಯಾಯಾಧೀಶರ ಮುಂದೆ ಅರ್ಜುನ್‌ ಅವರ ವಿರುದ್ಧ ಇದ್ದ ಪ್ರಕರಣವು ವಜಾಗೊಂಡಿದೆ. ರಾಜಿಯಾಗುವ ಸಲುವಾಗಿ “ಯಾರಿಂದಲೂ ಯಾವುದೇ ತೆರನಾದ ಒತ್ತಾಯ, ಬಲವಂತಕ್ಕೆ ಮಣಿದಾಗಲಿ ಅಥವಾ ಪ್ರಭಾವಕ್ಕೆ ಒಳಗಾಗಿಯಾಗಲಿ” ಹೆಜ್ಜೆಇರಿಸಿಲ್ಲ ಎಂದು ಉಭಯ ಪಕ್ಷಕಾರರು ನ್ಯಾಯಾಲಯಕ್ಕೆ ಸಲ್ಲಿಸಿರುವ ಜಂಟಿ ಅಫಿಡವಿಟ್‌ನಲ್ಲಿ ತಿಳಿಸಿದ್ದಾರೆ.

ಪುನೀತ್‌ ನೀಡಿದ್ದ ದೂರನ್ನು ಆಧರಿಸಿ ಪೊಲೀಸರು ಅರ್ಜುನ್‌ ಅವರ ವಿರುದ್ಧ ಭಾರತೀಯ ದಂಡ ಸಂಹಿತೆಯ ಸೆಕ್ಷನ್‌ಗಳಾದ 323, 342, 504, 506, 330, 348 ಮತ್ತು ಎಸ್‌ಸಿ ಮತ್ತು ಎಸ್‌ಟಿ (ದೌರ್ಜನ್ಯ ತಡೆ) ತಿದ್ದುಪಡಿ ಕಾಯಿದೆ ಸೆಕ್ಷನ್‌ಗಳಾದ 3(1)(ಎ), 3(1)(ಇ), 3(1)(ಆರ್‌), 3(2)(ವಿಎ), 3(2)(ರೋಮನ್‌ 7) ಪ್ರಕರಣ ದಾಖಲಿಸಿದ್ದರು. ಆನಂತರ ಅಪರಾಧ ತನಿಖಾ ಸಂಸ್ಥೆಯು (ಸಿಐಡಿ) ಪ್ರಕರಣ ಕೈಗೆತ್ತಿಕೊಂಡು, ಆರೋಪ ಪಟ್ಟಿ ಸಲ್ಲಿಸಿತ್ತು. 2021ರ ಸೆಪ್ಟೆಂಬರ್‌ನಲ್ಲಿ ಅರ್ಜುನ್‌ ಅವರನ್ನು ಸಿಐಡಿ ಪೊಲೀಸರು ಬಂಧಿಸಿದ್ದರು.

Also Read
ಪರಿಶಿಷ್ಟ ಜಾತಿ ಯುವಕನಿಗೆ ಮೂತ್ರ ಕುಡಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿ ಬಂಧನ

ಪ್ರಕರಣದ ಹಿನ್ನೆಲೆ: “ಮೇ 10ರಂದು ಬೆಳಿಗ್ಗೆ ಕೆಲವರು ನನ್ನ ಮನೆ ಬಳಿ ಬಂದು ʼಮಹಿಳೆಯೊಬ್ಬರಿಗೆ ಫೋನ್‌ ಮಾಡಿದ್ದೀಯಾ. ನಿನ್ನ ಬಳಿ ಮಾತನಾಡಬೇಕು ಬಾ ಎಂದು ಕರೆದಿದ್ದರುʼ. ಅವರು ತುಂಬಾ ಜನ ಇದ್ದುದರಿಂದ ನಾನು ತೆರಳಲು ನಿರಾಕರಿಸಿದೆ. ಅವರು ನನ್ನ ಮನೆ ಸುತ್ತುವರೆದಿದ್ದರು. ರಕ್ಷಣೆಗಾಗಿ 112ಕ್ಕೆ ಕರೆ ಮಾಡಿದಾಗ ಪೊಲೀಸರು ಬಂದು ವಿಚಾರಿಸಿ ಗೋಣಿಬೀಡು ಠಾಣೆ ಪಿಎಸ್‌ಐ ಅರ್ಜುನ್‌ಗೆ ಕರೆ ಮಾಡಿದರು. ಪಿಎಸ್‌ಐ ಬಂದು ಯಾವುದೇ ವಿಚಾರಣೆ ಮಾಡದೆ ಜೀಪ್‌ ಹತ್ತಲು ಹೇಳಿದರು. ಯಾಕೆ ಎಂದು ಕೇಳಿದಾಗ ಬೈದು ಠಾಣೆಗೆ ಕೊರೆದೊಯ್ದರು. ಠಾಣೆಯಲ್ಲಿ ನನ್ನ ಬಟ್ಟೆ ಬಿಚ್ಚಿಸಿ ಕೈಕಾಲುಗಳನ್ನು ಹಗ್ಗದಿಂದ ಕಟ್ಟಿ ತೊಡೆಯ ಹತ್ತಿರ ಕಬ್ಬಿಣದ ರಾಡ್‌ ಇರಿಸಿ ಮನಬಂದಂತೆ ಹೊಡೆದು ಎಷ್ಟು ದಿನದಿಂದ ಮಹಿಳೆ ಜೊತೆ ಸಂಬಂಧ ಇತ್ತೆಂದು ಕೇಳಿದರು. ಮಹಿಳೆಯೊಂದಿಗೆ ಯಾವುದೇ ಸಂಬಂಧ ಇಲ್ಲ. ಆರು ತಿಂಗಳ ಹಿಂದೆ ಫೋನ್‌ನಲ್ಲಿ ಮಾತನಾಡಿದ್ದೆ. ಆ ಬಗ್ಗೆ ವಿಚಾರಣೆ ನಡೆದು ತೀರ್ಮಾನವಾಗಿತ್ತು. ನಂತರ ಫೋನ್‌ ಮಾಡಿಲ್ಲ” ಎಂಬುದಾಗಿ ತಿಳಿಸಿದ್ದೆ ಎಂದು ಪುನೀತ್‌ ದೂರಿನಲ್ಲಿ ತಿಳಿಸಿದ್ದರು.

Also Read
ಮೂತ್ರ ನೆಕ್ಕಿಸಿದ ಪ್ರಕರಣ: ಆರೋಪಿ ಪಿಎಸ್ಐ ಅರ್ಜುನ್ ಹೊರಕೇರಿ ಅರ್ಜಿ ವಜಾಗೊಳಿಸಿದ ರಾಜ್ಯ ಹೈಕೋರ್ಟ್‌

“ಆದರೆ, ನಾನು ಎಷ್ಟು ಬೇಡಿಕೊಂಡರೂ ಕೇಳಲಿಲ್ಲ ಒಪ್ಪಿಕೋ ಎಂದು ಹಿಂಸಿಸಿದರು. ನನ್ನನ್ನು ಬಿಡಿ ಎಂದು ಕೇಳಿಕೊಂಡೆ. ನಂತರ ಬಿಡುತ್ತೇನೆ ಒಪ್ಪಿಕೋ ಎಂದು ಹೊಡೆದರು. ದೇಹದಲ್ಲಿ ರಕ್ತ ಸುರಿಯುತ್ತಿದ್ದುದರಿಂದ ಅವರು ಹೇಳಿದಂತೆ ಒಪ್ಪಿಕೊಂಡೆ. ನನ್ನ ಜಾತಿ ಯಾವುದು ಎಂದು ಪಿಎಸ್‌ಐ ಕೇಳಿದರು. ಪರಿಶಿಷ್ಟ ಜಾತಿಗೆ ಸೇರಿರುವುದಾಗಿ ತಿಳಿಸಿದೆ. ಅವರು ಅವಾಚ್ಯ ಶಬ್ದಗಳಿಂದ ಕೆಟ್ಟದಾಗಿ ನಿಂದಿಸಿದರು. ಬಾಯಾರಿಕೆಯಾಗಿದೆ ನೀರು ಕೊಡಿ ಎಂದಾಗ ಕಳ್ಳತನ ಪ್ರಕರಣದಲ್ಲಿ ಸಿಲುಕಿಕೊಂಡಿದ್ದ ಚೇತನ್‌ ಎಂಬ ವ್ಯಕ್ತಿಯನ್ನು ಕರೆಸಿ ಬಾಯಿಗೆ ಮೂತ್ರ ಮಾಡಿಸಿದರು. ನೆಲದಲ್ಲಿ ಬಿದ್ದ ಮೂತ್ರ ನೆಕ್ಕಿಸಿದರು. ಬಳಿಕ ಹಿಂಸೆ ನೀಡಿದ ವಿಚಾರವನ್ನು ಯಾರಿಗೂ ಹೇಳಬಾರದು ಎಂದು ಬೆದರಿಕೆ ಹಾಕಿದ್ದರು” ಎಂದು ಪುನೀತ್‌ ದೂರಿನಲ್ಲಿ ಆರೋಪಿಸಿದ್ದರು.

Also Read
[ಮೂತ್ರ ಕುಡಿಸಿದ ಪ್ರಕರಣ] ಆರೋಪಿ ಪಿಎಸ್ಐ ಅರ್ಜುನ್ ನಿರೀಕ್ಷಣಾ ಜಾಮೀನಿಗೆ ಅರ್ಹರಲ್ಲ ಎಂದ ಪಬ್ಲಿಕ್ ಪ್ರಾಸಿಕ್ಯೂಟರ್

ಘಟನೆ ರಾಜ್ಯಾದ್ಯಂತ ಸಂಚಲನ ಸೃಷ್ಟಿಸಿತ್ತು. ಪಿಎಸ್‌ಐ ಅರ್ಜುನ್‌ ಅವರನ್ನು ಅಮಾನತು ಮಾಡಲಾಗಿತ್ತು. ಜೊತೆಗೆ ಉಡುಪಿ ಜಿಲ್ಲೆಗೆ ವರ್ಗಾಯಿಸಲಾಗಿತ್ತು. ಘಟನೆಯನ್ನು ವಿವಿಧ ಸಂಘಟನೆಗಳು ಖಂಡಿಸಿದ್ದವು. ಸರ್ಕಾರ ಪ್ರಕರಣವನ್ನು ಸಿಐಡಿಗೆ ಒಪ್ಪಿಸಿತ್ತು.

Related Stories

No stories found.
Kannada Bar & Bench
kannada.barandbench.com