ವರ್ಚುವಲ್‌ ಕಲಾಪ ಕೋವಿಡ್‌ ಕೊಟ್ಟ ಕೊಡುಗೆ: ಮಂಗಳೂರು ವಕೀಲರ ಸಂಘದ ಅಧ್ಯಕ್ಷ ನರಸಿಂಹ ಹೆಗ್ಡೆ

“ಕ್ರಿಮಿನಲ್‌ ಪ್ರಕರಣಗಳು ನಗಣ್ಯ ಎನಿಸುವಷ್ಟು ಕಡಿಮೆ ಆಗಿವೆ. ವಾಹನವೇ ಓಡದಿದ್ದರೆ ಅಪಘಾತವಾಗುವುದು ಹೇಗೆ? ಇದೇ ಮಾತು ಬೇರೆ ರೀತಿಯ ಪ್ರಕರಣಗಳಿಗೂ ಅನ್ವಯವಾಗುತ್ತದೆ. ದಾವೆ ಹೂಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ.”
Adovcate Narasimha Hegde
Adovcate Narasimha Hegde

ಮಂಗಳೂರಿನಂತಹ ನಗರಗಳಲ್ಲಿ ಕೋವಿಡ್‌ನಿಂದ ವಕೀಲರ ಸಮುದಾಯ ಸಂಕಷ್ಟ ಎದುರಿಸಿತಾದರೂ ಹೊಸ ಸಾಧ್ಯತೆಗಳೂ ಅದರಿಂದ ತೆರೆದುಕೊಂಡವು ಎನ್ನುತ್ತಾರೆ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾದ ನರಸಿಂಹ ಹೆಗ್ಡೆ. ಭವಿಷ್ಯದಲ್ಲಿ ಕೋವಿಡ್‌ ರೀತಿಯ ಸಂಕಷ್ಟಗಳನ್ನು ಎದುರಿಸಲು ಯಾರೆಲ್ಲಾ ಕೈಜೋಡಿಸಬೇಕು, ನ್ಯಾಯಾಂಗದ ವಿವಿಧ ವಲಯಗಳಿಗೆ ಅದು ತಂದೊಡ್ಡಿದ ಸಂಕಷ್ಟಗಳು, ಮೊದಲ ಹಂತದ ಲಾಕ್‌ಡೌನ್‌ ಸಂದರ್ಭ, ಕಿರಿಯ ವಕೀಲರ ಸ್ಥಿತಿಗತಿ ಇತ್ಯಾದಿ ವಿಚಾರಗಳ ಕುರಿತು ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಮಾತನಾಡಿದ್ದಾರೆ.

ಮಂಗಳೂರಿನ ಸರ್ಕಾರಿ ಕಾಲೇಜಿನಲ್ಲಿ ಬಿಎಸ್ಸಿ ಅಧ್ಯಯನ ಮಾಡಿ ನಂತರ ಮುಂಬೈನ ನ್ಯೂ ಲಾ ಕಾಲೋಜಿನಲ್ಲಿ ಕಾನೂನು ಅಧ್ಯಯನ ಮಾಡಿದ ಹೆಗ್ಡೆ ಅವರು ಎಚ್‌ ಆರ್‌ ತಿಮ್ಮಪ್ಪ ಹೆಗ್ಡೆ ಅವರ ಮೂಲಕ ವಕೀಲಿಕೆಯ ಮೊದಲ ಪಾಠಗಳನ್ನು ಕಲಿತರು. 33 ವರ್ಷಗಳ ಸುದೀರ್ಘ ಅವಧಿಯ ವೃತ್ತಿ ಅನುಭವ ಪಡೆದ ಅವರು 2019ರಿಂದ ಮಂಗಳೂರು ವಕೀಲರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದಾರೆ.

Q

ಕರಾವಳಿ ಭಾಗದಲ್ಲಿ ಅದರಲ್ಲಿಯೂ ಮಂಗಳೂರಿನಂತಹ ಊರುಗಳಲ್ಲಿ ವಕೀಲಿಕೆ ಸವಾಲಿನ ಸಂಗತಿ ಎಂಬ ಮಾತಿದೆ. ಇದಕ್ಕೆ ಕಾರಣಗಳೇನು?

A

ಇದೊಂದು ರಾಜಕೀಯ ಪ್ರೇರಿತ ಅನಿಸಿಕೆ ಅನ್ನಿಸುತ್ತದೆ. ಇಂತಹ ಊರುಗಳಲ್ಲಿ ಹೂಡಿಕೆ ಮಾಡುವವರು ಮಂಗಳೂರು ಸೂಕ್ಷ್ಮ ಪ್ರದೇಶ ಎನ್ನುವುದುಂಟು. ಅಂತರರಾಷ್ಟ್ರೀಯ ಮಟ್ಟದಲ್ಲಿಯೂ ಇಂತಹ ಅಭಿಪ್ರಾಯ ಮೂಡಿರುವುದು ಉಂಟು. ಆದರೆ ಭಯಮಿಶ್ರಿತವಾಗಿ ಮಾತನಾಡುವವರು ಕೂಡ ಈ ಊರನ್ನು ಬಯಸುತ್ತಾರೆ. ಹಲವು ನದಿಗಳ ಈ ಊರು ಕೈಗಾರಿಕೆಗಳ ಸ್ಥಾಪನೆಗೆ ಹೇಳಿ ಮಾಡಿಸಿದಂತಿದೆ. ರೈಲು, ರಸ್ತೆ, ಜಲ ಮಾರ್ಗ ಹೀಗೆ ಮೂರೂ ಸಾರಿಗೆ ವಲಯ ಇರುವ ಭಾರತದ ಕೆಲವೇ ನಗರಗಳಲ್ಲಿ ಇದೂ ಒಂದು. ಜಾತಿ- ಧರ್ಮದಂತಹ ವಿಚಾರಗಳು ನಗಣ್ಯವಾಗಬೇಕು. ಶಿಕ್ಷಣ, ವೈದ್ಯಕೀಯ, ವಾಣಿಜ್ಯ ಕ್ಷೇತ್ರಗಳಲ್ಲಿ ಮಂಗಳೂರು ಮುಂದಿದೆ. ವಕೀಲಿಕೆಯ ವಿಚಾರಕ್ಕೆ ಬಂದಾಗ ಎಲ್ಲಾ ಊರುಗಳಲ್ಲೂ ಅದರದೇ ಆದ ಸವಾಲುಗಳಿರುತ್ತವೆ. ವಕೀಲರು ವೃತ್ತಿಗೆ ನಿಷ್ಠೆಯಿಂದ ನಡೆದುಕೊಂಡಾಗ ಸಮಸ್ಯೆ ಇರುವುದಿಲ್ಲ.

Q

ಕೋವಿಡ್‌ ಈ ಭಾಗದ ವಕೀಲ ಸಮುದಾಯದ ಮೇಲೆ ಬೀರಿರುವಂತಹ ಪರಿಣಾಮಗಳೇನು?

A

ವಕೀಲರಿಗೆ ಅನಾನುಕೂಲ ಆಗಿದೆ ನಿಜ. ಆದರೆ ಅದೊಂದು ಸಮಸ್ಯೆ ಎಂದು ನಾನು ಭಾವಿಸುವುದಿಲ್ಲ. ಆರೋಗ್ಯದ ಕಾಳಜಿಯಿಂದ ಕೆಲವರು ನೇರವಾಗಿ ನ್ಯಾಯಾಲಯಗಳಿಗೆ ಹಾಜರಾಗದೆ ವರ್ಚುವಲ್‌ ಕಲಾಪಗಳ ಮೂಲಕ ಭಾಗಿಯಾಗುತ್ತಿದ್ದಾರೆ. ಸಾಗುವಳಿಯಂತಹ ಹಿನ್ನೆಲೆ ಇರುವವರಿಗೆ ಹೆಚ್ಚಿನ ತೊಂದರೆ ಆಗಿಲ್ಲ. ಜೊತೆಗೆ ಪ್ರಕರಣಗಳ ಸಂಖ್ಯೆ ಹೆಚ್ಚಿದ್ದವರಿಗೆ ಕೂಡ ಅನಾನುಕೂಲ ಆಗಿಲ್ಲ. ಆದರೆ ಕಿರಿಯ ವಕೀಲರು ತೊಂದರೆ ಅನುಭವಿಸಿದ್ದಾರೆ.

Q

ಕೋವಿಡ್‌ ಸಂಕಷ್ಟದಿಂದ ರಕ್ಷಣೆ ನೀಡಲು ಮಂಗಳೂರು ವಕೀಲರ ಸಂಘ ಹೇಗೆ ಶ್ರಮಿಸುತ್ತಿದೆ?

A

ಸುಮಾರು ನೂರಕ್ಕೂ ಅಧಿಕ ಕಿರಿಯ ವಕೀಲರಿಗೆ ಆಹಾರ ಕಿಟ್‌ಗಳನ್ನು ವಿತರಿಸಿದ್ದೇವೆ. ಹಿರಿಯ ವಕೀಲರ ಮನೆ ಮನೆಗಳಿಗೂ ತೆರಳಿ ಹಣ ಸಂಗ್ರಹಿಸಿ ಕಿರಿಯ ವಕೀಲರ ನೆರವಿಗೆ ಧಾವಿಸಿದ್ದೇವೆ. ಧನಸಹಾಯ ಮಾಡಿದ್ದೇವೆ. ಹಿರಿಯ ವಕೀಲರಲ್ಲಿ ಕೆಲವರು ಸಹಾಯ ಮಾಡುವಾಗ ತಮ್ಮ ಭವಿಷ್ಯದ ಬಗ್ಗೆಯೂ ಯೋಚಿಸಿದ್ದುಂಟು. ಆಗ ಅವರ ಮನವೊಲಿಸಿದೆವು. ಸ್ಪಂದನೆ ಒಳ್ಳೆಯದಿತ್ತು.

Q

ಪ್ರಕರಣಗಳ ಸಂಖ್ಯೆ ಮೇಲೆ ಕೋವಿಡ್‌ ಹೇಗೆ ಪರಿಣಾಮ ಬೀರಿದೆ?

A

ಕ್ರಿಮಿನಲ್‌ ಪ್ರಕರಣಗಳು ನಗಣ್ಯ ಎನಿಸುವಷ್ಟು ಕಡಿಮೆ ಆಗಿವೆ. ವಾಹನವೇ ಓಡದಿದ್ದರೆ ಅಪಘಾತವಾಗುವುದು ಹೇಗೆ? ಇದೇ ಮಾತು ಬೇರೆ ರೀತಿಯ ಪ್ರಕರಣಗಳಿಗೂ ಅನ್ವಯವಾಗುತ್ತದೆ. ದಾವೆ ಹೂಡುವವರ ಸಂಖ್ಯೆಯಲ್ಲಿ ಇಳಿಮುಖವಾಗಿದೆ. ಕಟೀಲಿನ ಎಕ್ಕಾರ್‌ ಎಂಬ ಹಳ್ಳಿಯಿಂದ ಸಮುದ್ರ ಕಾಣುತ್ತದೆ ಎಂದು ಅಲ್ಲಿನ ಜನ ಹೇಳುತ್ತಿದ್ದರು. ವಾತಾವರಣ ಅಷ್ಟು ಪರಿಶುದ್ಧವಾಗಿದೆ ಎಂಬುದು ಸಣ್ಣ ಸಂಗತಿ ಅಲ್ಲ.

Q

ಕಕ್ಷೀದಾರರು ಕೂಡ ಸಂಕಷ್ಟದಲ್ಲಿ ಇದ್ದಾರಲ್ಲವೇ. ಅವರಿಗೆ ಏನಾದರೂ ರಿಯಾಯ್ತಿ ಘೋಷಿಸಲು ಸಾಧ್ಯವೇ?

A

ಸಾಮಾಜಿಕ ಕಾಳಜಿ ಇರುವುದು ಅಗತ್ಯ. ಮಾನವೀಯ ನೆಲೆಯಲ್ಲಿ ಅಲ್ಲೊಂದು ಇಲ್ಲೊಂದು ವಿನಾಯ್ತಿಗಳನ್ನು ನೀಡಿದ್ದಿದೆ. ಆದರೆ ಸಾಂಘಿಕವಾಗಿ ಆ ಕೆಲಸ ಇನ್ನೂ ಆಗಿಲ್ಲ. ಚಾರಿಟಿ ನೆಲೆಯಲ್ಲಿ ಅಂತಹದ್ದೇನನ್ನೂ ಇದುವೆರೆಗೆ ಮಾಡಿಲ್ಲ.

Q

ಮೊದಲ ಹಂತದ ಲಾಕ್‌ಡೌನ್ ಘೋಷಿಸಿದಾಗ ಇಡೀ ದೇಶವೇ ಒಂದು ರೀತಿ ಸ್ತಬ್ಧವಾಗಿತ್ತು. ಆಗ ವಕೀಲರ ಎದುರಿಸಿದ ಸ್ಥಿತಿ ಹೇಗಿತ್ತು?

A

ಕೆಲ ಹಿರಿಯ ವಕೀಲರ ಕಚೇರಿಗಳಲ್ಲಿ 9- 10 ಮಂದಿ ಕಿರಿಯ ವಕೀಲರಿರುತ್ತಾರೆ. ಅವರಿಗೆ ಇಂತಿಷ್ಟು ಎಂದು ವೇತನ ಪಾವತಿ ಆಗುತ್ತಿದೆ. ಲಾಕ್‌ಡೌನಿನ ಆರಂಭದ ದಿನಗಳು ಅಂತಹ ಕಿರಿಯ ನೌಕರರಿಗೆ ಆತಂಕವನ್ನು, ಹೆದರಿಕೆಯನ್ನು ಉಂಟು ಮಾಡಿತು. ಸಾಮಾನ್ಯ ಜನರು ಎದುರಿಸಿದ ಸಂಕಷ್ಟಗಳೆಲ್ಲಾ ವಕೀಲರಿಗೂ ಎದುರಾದವು. ಆದರೆ ನ್ಯಾಯಾಂಗ ಅಧಿಕಾರಿಗಳು ಸಹಾಯಕ್ಕೆ ಧಾವಿಸಿದರು. ಕ್ರಮೇಣ ಪರಿಸ್ಥಿತಿ ತಿಳಿಯಾಯಿತು.

Q

ನ್ಯಾಯಾಂಗದ ಇತರೆ ಸಿಬ್ಬಂದಿ ಮೇಲೆ ಕೋವಿಡ್‌ ತಂದೊಡ್ಡಿರುವ ಸಂಕಷ್ಟ ಯಾವ ರೀತಿಯದ್ದು?

A

ಸಂಬಳ- ಸಾರಿಗೆಯ ಆತಂಕಗಳು ಇದ್ದವು. ಅವರಿಗೂ ಕೆಲ ತೊಂದರೆಗಳಿದ್ದವು. ಎಲ್ಲರೂ ಎದುರಿಸುವಂತಹ ಸಮಸ್ಯೆಯನ್ನು ಅವರೂ ಎದುರಿಸಿದರು.

Q

ವರ್ಚುವಲ್‌ ಕಲಾಪಗಳಿಂದ ಭೌತಿಕ ಕಲಾಪಗಳಿಗೆ ಕೋರ್ಟುಗಳು ಮರಳಲು ಮನಸ್ಸು ಮಾಡುತ್ತಿವೆ. ಇವೆರಡರಲ್ಲಿ ಯಾವುದು ಒಳ್ಳೆಯದು ಅನ್ನಿಸುತ್ತದೆ?

A

ಒಂದರ್ಥದಲ್ಲಿ ಕೋವಿಡ್‌-19 ಒಳ್ಳೆಯದನ್ನೇ ಮಾಡಿದೆ. ನೋವಿನೊಂದಿಗೆ ಕೊಂಚ ನಲಿವೂ ಇದೆ. ಮೊದಲೆಲ್ಲಾ ಹೈಕೋರ್ಟ್‌, ಸುಪ್ರೀಂಕೋರ್ಟ್‌ಗೆ ಎಡತಾಕುವುದು ಸವಾಲಿನ ಸಂಗತಿಯಾಗಿತ್ತು. ಕೆಲವು ವಕೀಲರು ಇಲ್ಲೇ ಕುಳಿತು ಕಕ್ಷೀದಾರರ ಪರವಾಗಿ ಹೈಕೋರ್ಟಿನಿಂದ ಜಾಮೀನುಗಳನ್ನು ಪಡೆಯುತ್ತಿದ್ದಾರೆ. ಭೌತಿಕ ಕಲಾಪಗಳನ್ನು ಎಂಜಾಯ್‌ ಮಾಡುತ್ತೇವೆ. ಆದರೆ ವರ್ಚುವಲ್‌ ಕಲಾಪ ಎನ್ನುವುದು ಬೋನಸ್‌ ಇದ್ದಂತೆ.

Q

ವಕೀಲರು ಅಗತ್ಯ ಸೇವಾ ಪೂರೈಕೆದಾರರು ಎಂದು ಮುಂಬೈನಂತೆ ಕರ್ನಾಟಕದಲ್ಲಿಯೂ ಏಕೆ ಪರಿಗಣಿಸಬಾರದು?

A

ಮುಂಬೈನ ಸ್ಥಿತಿ ಬೇರೆ ಇಲ್ಲಿಯ ಸ್ಥಿತಿ ಬೇರೆ. ಅಲ್ಲಿನ ವಕೀಲರು ಸ್ಥಳೀಯ ರೈಲುಗಳಲ್ಲಿ ಸಂಚರಿಸಲಿ ಎಂಬ ಉದ್ದೇಶದಿಂದ ಆ ಮೂಲಕ ಕಕ್ಷೀದಾರರ ನೆರವಿಗೆ ಧಾವಿಸಲು ಸುಲಭವಾಗಲಿ ಎನ್ನುವ ಕಾರಣಕ್ಕೆ ಅವರ ರೈಲು ಸಂಚಾರಕ್ಕೆ ಅನುಕೂಲವಾಗುವ ನಿಟ್ಟಿನಲ್ಲಿ ಬಾಂಬೆ ಹೈಕೋರ್ಟ್‌ ಸೂಚನೆ ಮೇರೆಗೆ ಮಹಾರಾಷ್ಟ್ರ ಸರ್ಕಾರ ಈ ಅವಕಾಶ ಒದಗಿಸಿದೆ. ತಾಂತ್ರಿಕವಾಗಿ ವಕೀಲರನ್ನು ಅಗತ್ಯ ಸೇವಾ ಪೂರೈಕೆದಾರರು ಎಂದು ಸುಪ್ರೀಂಕೋರ್ಟ್‌ ಈಗಾಗಲೇ ಘೋಷಿಸಿಯಾಗಿದೆ.

Q

ಭವಿಷ್ಯದಲ್ಲಿ ಕೋವಿಡ್‌ ರೀತಿಯ ತುರ್ತು ಸ್ಥಿತಿಗಳನ್ನು ಎದುರಿಸಲು ವಕೀಲರ ಸಂಘಗಳು ಎಂತಹ ಕ್ರಮಗಳನ್ನು ಕೈಗೊಳ್ಳಬೇಕು?

A

ವಕೀಲರ ಸಂಘಗಳು ಕೈಲಾದಷ್ಟು ಸಹಾಯವನ್ನು ಮಾಡುತ್ತಿವೆ. ಕೇವಲ ವಕೀಲರ ಸಂಘ ಮಾತ್ರವಲ್ಲ ಸರ್ಕಾರಗಳು ಕೂಡ ವಕೀಲರ ನೆರವಿಗೆ ದೊಡ್ಡಮಟ್ಟದಲ್ಲಿ ಧಾವಿಸಬೇಕಾಗುತ್ತದೆ. ಕೆಲವರಿಗೆ ನ್ಯಾಯಾಲಯದ ಶುಲ್ಕ ಭರಿಸಲು ಕೂಡ ತೊಂದರೆಯಾಗುತ್ತದೆ. ಅಂತಹವರಿಗೆ ರಿಯಾಯ್ತಿಗಳನ್ನು ನೀಡಬೇಕಾಗುತ್ತದೆ.

Kannada Bar & Bench
kannada.barandbench.com