ಕೋವಿಡ್‌ ಹಿನ್ನೆಲೆಯಲ್ಲಿ ನಾನಾ ಬದಲಾವಣೆಗೆ ನಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದೇವೆ: ಜೆ ಬಸವರಾಜ್‌

ಭಾರತೀಯ ವಕೀಲರ ಪರಿಷತ್‌ನಿಂದ ನಮಗೆ ಯಾವುದೇ ತೆರನಾದ ನೆರವು ಸಿಕ್ಕಿಲ್ಲ. ಕೆಎಸ್‌ಬಿಸಿಯವರು ಆಯ್ದ ಯುವ ವಕೀಲರಿಗೆ ೫ ಸಾವಿರ ರೂಪಾಯಿ ನೆರವು ನೀಡಿದ್ದಾರೆ ಎಂಬುದನ್ನು ಬಿಟ್ಟರೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ.
J Basavaraj
J BasavarajPresident, Raichur Bar Association
Published on

ಕೋವಿಡ್‌ ಸಂಕಷ್ಟ ಮುಗಿಯುತು ಎಂದುಕೊಳ್ಳುತ್ತಿರುವಾಗಲೇ ಸೋಂಕಿನ ಎರಡನೇ ಅಲೆಯ ಆತಂಕ ಭಾರತದಲ್ಲಿ ಆವರಿಸಲಾರಂಭಿಸಿದೆ. ಎರಡನೇ ದರ್ಜೆಯ ನಗರಗಳಲ್ಲಿನ ಸ್ಥಿತಿ ಸುಧಾರಿಸುತ್ತಿದೆ ಎನ್ನುತ್ತಿರುವಾಗಲೇ ಮತ್ತದೇ ಕಾರ್ಮೋಡ ಕವಿಯಲಾರಂಭಿಸಿದೆ. ಇದು ಮತ್ತೊಮ್ಮೆ ವಕೀಲರ ಸಮುದಾಯದಲ್ಲಿ ಅಳುಕು ಸೃಷ್ಟಿಸಿದೆ.

ಆತಂಕ, ದುಗುಡ, ಅನಿಶ್ಚಿತತೆಯನ್ನು ಎದೆಯಲ್ಲಿಟ್ಟುಕೊಂಡೇ ಪರಿಸ್ಥಿತಿ ಎದುರಿಸಲು ಸಿದ್ಧವಾಗಿದ್ದೇವೆ ಎನ್ನುತ್ತಾರೆ ರಾಯಚೂರು ಜಿಲ್ಲಾ ಘಟಕದ ಅಧ್ಯಕ್ಷರಾದ ಜೆ ಬಸವರಾಜ್.‌ ರಾಯಚೂರು ವಕೀಲರ ಸಂಘದಲ್ಲಿ 1,3000ಕ್ಕೂ ಹೆಚ್ಚು ನೋಂದಾಯಿತ ವಕೀಲರಿದ್ದಾರೆ. ಈ ಪೈಕಿ ಸುಮಾರು 700 ಮಂದಿ ಸಕ್ರಿಯವಾಗಿದ್ದಾರೆ. ಕಳೆದ ವರ್ಷದಲ್ಲಿ ಆರಂಭವಾದ ಕೋವಿಡ್‌ ಸಮಸ್ಯೆಗಳು ಜಿಲ್ಲಾ ವಕೀಲರ ಸಮುದಾಯದಲ್ಲಿ ಸೃಷ್ಟಿಸಿರುವ ಸಮಸ್ಯೆಗಳ ಕುರಿತು ಅವರು ಬಾರ್‌ ಅಂಡ್‌ ಬೆಂಚ್‌ ಜೊತೆ ಮಾತನಾಡಿದ್ದಾರೆ.

Q

ಕೋವಿಡ್‌ನಿಂದಾಗಿ ವಕೀಲರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನೇನು?

A

ಲಾಕ್‌ಡೌನ್‌ ಸಂದರ್ಭದಲ್ಲಿ ವಿಶೇಷವಾಗಿ ಯುವ ವಕೀಲರು ಸೇರಿದಂತೆ ಎಲ್ಲರಿಗೂ ಸಮಸ್ಯೆಯಾಗಿತ್ತು. ಈಗ ಭೌತಿಕ ನ್ಯಾಯಾಲಯ ಆರಂಭವಾಗಿರುವುದರಿಂದ ಸಾಕಷ್ಟು ಸಮಸ್ಯೆಗಳು ನಿವಾರಣೆಯಾಗಿವೆ. ನ್ಯಾಯಾಧೀಶರು ಸಂಘದ ಸದಸ್ಯರಿಗೆ ಉತ್ತಮ ರೀತಿಯಲ್ಲಿ ಸ್ಪಂದಿಸುತ್ತಿದ್ದಾರೆ.

Q

ಕೋವಿಡ್‌ನಿಂದ ರಾಯಚೂರಿನಲ್ಲಿ ಎಷ್ಟು ಮಂದಿ ವಕೀಲರು ಸಾವನ್ನಪ್ಪಿದ್ದಾರೆ. ಅವರ ಕುಟುಂಬದ ಸ್ಥಿತಿಗತಿಯೇನು?

A

ಐದಾರು ಮಂದಿ ಕೋವಿಂಡ್‌ನಿಂದ ಸಾವನ್ನಪ್ಪಿದ್ದಾರೆ. ಒಬ್ಬರು ನ್ಯಾಯಾಲಯದಲ್ಲಿ ಗುಮಾಸ್ತರಿಕೆ ಕೆಲಸ ಮಾಡುತ್ತಿದ್ದರು. ನಿವೃತ್ತಿಯ ಬಳಿಕ ವಕೀಲರಾಗಿ ನೋಂದಣಿ ಮಾಡಿಸಿ, ಪ್ರಾಕ್ಟೀಸ್‌ ಮಾಡುತ್ತಿದ್ದರು. ಸಾವನ್ನಪ್ಪಿದ ಕೆಲವು ವಕೀಲರ ಮನೆಯವರು ಸುಸ್ಥಿತಿಯಲ್ಲಿದ್ದಾರೆ. ಅದಾಗ್ಯೂ, ಸಾವನ್ನಪ್ಪಿದವರು ಮತ್ತು ಚಿಕಿತ್ಸೆ ಪಡೆದವರಿಗೆ ಗರಿಷ್ಠ 50 ಸಾವಿರ ರೂಪಾಯಿವರೆಗೆ ಪರಿಹಾರ ನೀಡುವುದಾಗಿ ರಾಜ್ಯ ವಕೀಲರ ಪರಿಷತ್‌ ಹೇಳಿರುವುದರಿಂದ ಅವರೆಲ್ಲರ ದಾಖಲೆಗಳನ್ನು ಕೇಂದ್ರ ಕಚೇರಿಗೆ ಕಳುಹಿಸಿಕೊಟ್ಟಿದ್ದೇವೆ.

Q

ಕೋವಿಡ್ ಹಿನ್ನೆಲೆಯಲ್ಲಿ ಸಂಕಷ್ಟದಲ್ಲಿ ಸಿಲುಕಿರುವ ವಕೀಲರಿಗೆ ರಾಯಚೂರು ವಕೀಲರ ಸಂಘ ಯಾವ ತೆರನಾದ ನೆರವು ನೀಡಿದೆ?

A

ಹಿರಿಯ ವಕೀಲರು, ಸುಸ್ಥಿತಿಯಲ್ಲಿರುವವರು ಸಂಕಷ್ಟದಲ್ಲಿ ಸಿಲುಕಿದ ವಕೀಲರಿಗೆ ತಮ್ಮ ಸೀಮಿತ ವ್ಯಾಪ್ತಿಯಲ್ಲಿ ಹಣಕಾಸು, ಆಹಾರದ ಕಿಟ್‌ ವಿತರಿಸುವ ಮೂಲಕ ನೆರವಾಗಿದ್ದಾರೆ. ನಮ್ಮ ಸಂಘದ ಪದಾಧಿಕಾರಿಗಳೆಲ್ಲರೂ ಸೇರಿಕೊಂಡು ಸುಮಾರು 100ಕ್ಕೂ ಹೆಚ್ಚು ಅಗತ್ಯವಿರುವ ವಕೀಲರಿಗೆ ಆಹಾರದ ಕಿಟ್‌ ವಿತರಿಸಿದ್ದೇವೆ. ಕಿಟ್‌ ಪಡೆಯಲು ಹಿಂಜರಿದವರಿಗೆ ಮನೆಗೆ ತೆರಳಿ ತಲುಪಿಸಿದ್ದೇವೆ.

Q

ಕೋವಿಡ್‌ ಹಿನ್ನೆಲೆಯಲ್ಲಿ ವರ್ಚುವಲ್ ಕಲಾಪ ಆರಂಭಿಸಲಾಗಿದ್ದು, ಅವುಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?

A

ವರ್ಚುವಲ್‌ ಕಲಾಪಗಳಿಂದ ನಮಗೆ ಅನುಕೂಲವಾಗಿಲ್ಲ. ಜಿಲ್ಲಾ ಮಟ್ಟದಲ್ಲಿ ಮೂಲಸೌಲಭ್ಯದ ಸಮಸ್ಯೆಯಿದೆ. ಜಿಲ್ಲಾ ನ್ಯಾಯಾಧೀಶರು ಹೈಕೋರ್ಟ್‌ ನಿರ್ದೇಶನದ ಹಿನ್ನೆಲೆಯಲ್ಲಿ ನಮಗೆ ತರಬೇತಿ ಕಾರ್ಯಕ್ರಮ ಆಯೋಜಿಸಿದ್ದರು. ಆದರೆ, ಸಾಕಷ್ಟು ವಕೀಲರ ಬಳಿ ಸ್ಮಾರ್ಟ್‌ಫೋನ್‌ಗಳೇ ಇಲ್ಲ. ಹೀಗಿರುವಾಗ ವರ್ಚುವಲ್‌ ಕಲಾಪದಲ್ಲಿ ಪಾಲ್ಗೊಳ್ಳುವುದಾದರೂ ಹೇಗೆ?

Q

ಭೌತಿಕ ನ್ಯಾಯಾಲಯದ ಚಟುವಟಿಕೆಗಳು ಆರಂಭವಾಗಿರುವುದರಿಂದ ಸಮಸ್ಯೆ ಕಡಿಮೆಯಾಗಿದೆ ಎನಿಸುತ್ತದೆಯೇ?

A

ಕೊರೊನಾ ಸಂದರ್ಭದಲ್ಲಿದ್ದ ಸಮಸ್ಯೆಗಳು ಈಗ ಇಲ್ಲ. ಹಾಗೆಂದೂ ಸಂಪೂರ್ಣವಾಗಿ ಪರಿಸ್ಥಿತಿ ಬದಲಾಗಿದೆ ಎನ್ನಲಾಗದು. ಎಂದಿನಂತೆ ಭೌತಿಕ ನ್ಯಾಯಾಲಯ ಆರಂಭವಾಗಿದೆ. ಇದರಿಂದ ಕಕ್ಷಿದಾರರು ಬರುತ್ತಿದ್ದು, ವಕೀಲರಿಗೆ ಕನಿಷ್ಠ ಶುಲ್ಕ ಸಿಗುತ್ತಿದೆ. ಪೊಲೀಸರ ಸಹಕಾರದಿಂದ ನ್ಯಾಯಾಲಯದಲ್ಲಿ ಹೆಚ್ಚಿನ ಜನರು ನೆರೆಯಲು ಬಿಡುತ್ತಿಲ್ಲ. ಆರೋಪಿಗಳು ಮತ್ತು ಸಾಕ್ಷಿಗಳ ಸಂಖ್ಯೆ ಹೆಚ್ಚಿದ್ದರೆ ಪ್ರಕರಣಗಳನ್ನು ಮುಂದೂಡಲಾಗುತ್ತಿದೆ.

Q

ಕೋವಿಡ್‌ ಎರಡನೇ ಅಲೆ ಸೃಷ್ಟಿಯಾಗಿರುವ ಸಂದರ್ಭದಲ್ಲಿ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?

A

ಲಾಕ್‌ಡೌನ್‌ ಬಳಿಕ ನ್ಯಾಯಾಲಯದ ಕಾರ್ಯ-ಕಲಾಪಗಳು ಆರಂಭವಾಗಿರುವುದರಿಂದ ಶೇ. ೮೦ರಷ್ಟು ಚಟುವಟಿಕೆಗಳು ಪುನಾರಂಭವಾಗಿವೆ. ಮತ್ತೆ ಕೋವಿಡ್‌ ವ್ಯಾಪಿಸಿದರೆ ನಾವು ಈಗಿರುವ ಪರಿಸ್ಥಿತಿಯಿಂದ ಕೆಳಗಿಳಿದು ಬಿಡುತ್ತೇವೆಯೇ ಎಂಬ ಆತಂಕ ಇದ್ದೇ ಇದೆ. ಸದ್ಯಕ್ಕೆ ರಾಯಚೂರಿನಲ್ಲಿ ಕೋವಿಡ್‌ ಎರಡನೇ ಅಲೆಯ ಬಗ್ಗೆ ಅಂತಹ ಪರಿಯ ಆತಂಕವೇನು ಇಲ್ಲ. ಮಾಧ್ಯಮಗಳ ವರದಿಯಿಂದ ವಕೀಲರು ಗಾಬರಿಯಾಗುತ್ತಿದ್ದಾರೆಯೇ ವಿನಾ ಬದಲಾವಣೆ ಏನು ಕಾಣುತ್ತಿಲ್ಲ. ನಾನಾ ರೀತಿಯ ಮಾರ್ಪಾಡು, ಬದಲಾವಣೆಗೆ ನಮ್ಮನ್ನು ಒಗ್ಗಿಸಿಕೊಳ್ಳುತ್ತಿದ್ದೇವೆ.

Q

ನಿಮ್ಮ ಸಂಕಷ್ಟಕ್ಕೆ ರಾಜ್ಯ ವಕೀಲರ ಪರಿಷತ್ತು, ಬಿಸಿಐ ಸ್ಪಂದನೆಯ ಬಗ್ಗೆ ಏನು ಹೇಳಬಯಸುತ್ತೀರಿ?

A

ಭಾರತೀಯ ವಕೀಲರ ಪರಿಷತ್‌ನಿಂದ ನಮಗೆ ಯಾವುದೇ ತೆರನಾದ ನೆರವು ಸಿಕ್ಕಿಲ್ಲ. ಕೆಎಸ್‌ಬಿಸಿಯವರು ಆಯ್ದ ಯುವ ವಕೀಲರಿಗೆ 5 ಸಾವಿರ ರೂಪಾಯಿ ನೆರವು ನೀಡಿದ್ದಾರೆ ಎಂಬುದನ್ನು ಬಿಟ್ಟರೆ ನಿರೀಕ್ಷಿತ ಪ್ರಮಾಣದಲ್ಲಿ ಕೆಲಸ ಮಾಡಿಲ್ಲ. ಆದರೆ, ಕೆಎಸ್‌ಬಿಸಿಯ ಸದಸ್ಯರಾಗಿರುವ ರಾಯಚೂರು ಉಸ್ತುವಾರಿ ವಕೀಲ ಕೋಟೇಶ್ವರ ರಾವ್‌ ನಮ್ಮ ಕೋರಿಕೆಗಳಿಗೆ ಸೂಕ್ತವಾಗಿ ಸ್ಪಂದಿಸಿದ್ದಾರೆ.

Kannada Bar & Bench
kannada.barandbench.com