ಕಳೆದ ವಾರ ಕೊರೊನಾ ಪ್ರಕರಣಗಳು ಹೆಚ್ಚಾಗಿ ವರದಿಯಾಗುತ್ತಿದ್ದಂತೆ ಎಚ್ಚೆತ್ತುಕೊಂಡಿದ್ದ ಕರ್ನಾಟಕ ಹೈಕೋರ್ಟ್ ಕಲಬುರ್ಗಿ ಸೇರಿದಂತೆ ಒಂಭತ್ತು ಜಿಲ್ಲೆಗಳಲ್ಲಿ ಭೌತಿಕ ನ್ಯಾಯಿಕ ಚಟುವಟಿಕೆಗಳಿಗೆ ನಿರ್ಬಂಧ ವಿಧಿಸಿತ್ತು. ಕೊರೊನಾದಿಂದಾಗಿ ಕಲಬುರ್ಗಿಯಲ್ಲಿ ಇದುವರೆಗೆ ಸುಮಾರು 50 ಮಂದಿ ವಕೀಲರು ಪ್ರಾಣ ಕಳೆದುಕೊಂಡಿದ್ದಾರೆ ಎಂಬುದು ಕಲಬುರ್ಗಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಅರುಣಕುಮಾರ್ ಕಿಣಿ ಅವರ ವಿವರಣೆ.
ಆರೋಗ್ಯ ಸಮಸ್ಯೆಗಳನ್ನು ಗಂಭೀರವಾಗಿ ಪರಿಗಣಿಸಿರುವ ಅರುಣಕುಮಾರ್ ಮತ್ತು ಅವರ ಸ್ನೇಹಿತರು ಒಟ್ಟಾಗಿ ಸೇರಿ ವಕೀಲರಾಗಿಯೇ ಆಸ್ಪತ್ರೆ ಆರಂಭಿಸುವ ಚಿಂತನೆ ನಡೆಸಿದ್ದಾರೆ. ಕೋವಿಡ್ ಸಂಕಷ್ಟಕಾಲದಲ್ಲಿ ವಕೀಲ ಸಮೂಹ ಎದುರಿಸುತ್ತಿರುವ ಸಮಸ್ಯೆಗಳು, ಕಂಡುಕೊಳ್ಳಬೇಕಾದ ಪರಿಹಾರಗಳ ಕುರಿತು “ಬಾರ್ ಅಂಡ್ ಬೆಂಚ್”ಗೆ ಮಾತನಾಡಿರುವ ಅವರು ತಮ್ಮ ವಿಚಾರಗಳನ್ನು ಹಂಚಿಕೊಂಡಿದ್ದಾರೆ.
ಕೋವಿಡ್ ಎರಡನೇ ಅಲೆಯಿಂದ ವಕೀಲರ ಸಮುದಾಯ ಎದುರಿಸುತ್ತಿರುವ ಸಮಸ್ಯೆಗಳು ಏನು?
ಕಕ್ಷಿದಾರರು ನ್ಯಾಯಾಲಯಕ್ಕೆ ಬರುತ್ತಿಲ್ಲ. ಇದರಿಂದಾಗಿ ವಕೀಲರಿಗೆ ಯಾವುದೇ ತೆರನಾದ ಶುಲ್ಕ ಸಿಗುತ್ತಿಲ್ಲ. ವಾರೆಂಟ್ ಮಾಡಬಾರದು, ಕಕ್ಷಿದಾರರನ್ನು ನ್ಯಾಯಾಲಯಕ್ಕೆ ಕರೆಸಬಾರದು ಎಂದು ಹೈಕೋರ್ಟ್ ನಿರ್ದೇಶನವಿದ್ದರೂ ಅದನ್ನು ಉಲ್ಲಂಘಿಸಲಾಗುತ್ತಿದೆ. ದಂಡವನ್ನೂ ವಿಧಿಸುತ್ತಿದ್ದಾರೆ. ಕಕ್ಷಿದಾರರು ನ್ಯಾಯಾಲಯಕ್ಕೆ ಬಂದಾಗಲೇ ಸಾಕಷ್ಟು ವಕೀಲರಿಗೆ ಶುಲ್ಕ ಸಿಗುವುದಿಲ್ಲ. ಇನ್ನು ಕಕ್ಷಿದಾರರು ಬರದಿರುವಾಗ ಶುಲ್ಕ ಸಿಗುವುದು ಎಲ್ಲಿ?
ನಮ್ಮಲ್ಲಿ ಸುಮಾರು 3,500 ವಕೀಲರು ಇದ್ದಾರೆ. ಸಾಕಷ್ಟು ಮಂದಿ ವೃತ್ತಿಯನ್ನೇ ತೊರೆದಿದ್ದಾರೆ. ಈ ಪೈಕಿ ಶೇ. 10ರಷ್ಟು ಮಂದಿ ಸುಸ್ಥಿತಿಯಲ್ಲಿದ್ದಾರೆ. ಉಳಿದ ಬಹುತೇಕರು ಸಂಕಷ್ಟದಲ್ಲಿದ್ದಾರೆ. ಒಂದೆಡೆ ಅಗತ್ಯ ವಸ್ತುಗಳ ಬೆಲೆ ಗಗನಮುಖಿಯಾಗಿದೆ. ಇನ್ನೊಂದು ಕಡೆ ವಕೀಲರಂತೆ ಆದಾಯವಿಲ್ಲದ ಹಲವು ಸಮುದಾಯಗಳಿವೆ. ಚುನಾವಣೆಗಾಗಿ ನೀತಿ-ನಿಯಮಗಳಲ್ಲಿ ಸರ್ಕಾರಗಳು ಸಡಿಲಿಕೆ ಮಾಡಿಕೊಂಡು ಇಷ್ಟೊಂದು ದೊಡ್ಡ ದುರಂತವನ್ನು ಜನರ ಮೇಲೆ ಹೇರಿವೆ. ವಕೀಲರೂ ಸಮಾಜದ ಭಾಗ. ನಮ್ಮನ್ನೂ ಒಳಗೊಂಡು ಈ ಸಮಸ್ಯೆಗಳು ಮುಂದೊಂದು ದಿನ ಕೊಲೆ, ಸುಲಿಗೆ ಮತ್ತು ದರೋಡೆಗೆ ನಾಂದಿ ಹಾಡಬಹುದು. ಊಟ, ಬಟ್ಟೆಗೆ ಸಮಸ್ಯೆಯಾದಾಗ ಜನರು ಇನ್ನೇನು ಮಾಡಲು ಸಾಧ್ಯವಿದೆ?
ಕೋವಿಡ್‌ನಿಂದ ಕಲಬುರ್ಗಿಯ ವಕೀಲ ಸಮೂಹದಲ್ಲಿ ಉಂಟಾದ ಸಾವುನೋವಿನ ಮಾಹಿತಿ ಇದೆಯೇ? ಅವರ ಕುಟುಂಬದ ಸ್ಥಿತಿಗತಿಯೇನು?
ಮೊದಲ ಮತ್ತು ಎರಡನೇ ಅಲೆಯ ಕೊರೊನಾದಿಂದಾಗಿ ಸುಮಾರು 40-50 ಮಂದಿ ವಕೀಲರು ನಮ್ಮಲ್ಲಿ ಬಲಿಯಾಗಿದ್ದಾರೆ. ಹಲವು ವಕೀಲರ ಕುಟುಂಬಗಳು ತೀರ ಸಂಕಷ್ಟಕ್ಕೆ ಸಿಲುಕಿವೆ. ಕೆಲವರಿಗೆ ರಾಜ್ಯ ವಕೀಲರ ಪರಿಷತ್‌ನಿಂದ ಒಂದಷ್ಟು ಪರಿಹಾರ ಹಂಚಿಕೆಯಾಗಿದೆ. ಮೊದಲ ಬಾರಿ ಕೋವಿಡ್‌ನಿಂದಾಗಿ ಲಾಕ್‌ಡೌನ್ ಘೋಷಣೆಯಾದಾಗ ನಾವು 750 ಆಹಾರದ ಕಿಟ್‌ಗಳನ್ನು ತೀರ ಅಗತ್ಯವಿದ್ದ ವಕೀಲರಿಗೆ ವಿತರಿಸಿದ್ದೆವು.
ಕೋವಿಡ್ ಹಿನ್ನೆಲೆಯಲ್ಲಿ ವರ್ಚುವಲ್ ಕಲಾಪ ಆರಂಭಿಸಲಾಗಿದ್ದು, ಅವುಗಳಿಂದ ನಿಮಗೆ ಏನಾದರೂ ಅನುಕೂಲವಾಗಿತ್ತೇ/ಆಗುತ್ತಿದೆಯೇ?
ವರ್ಚುವಲ್ ವಿಚಾರಣೆ ಅನುಕೂಲಕರವಲ್ಲ. ಸಾಕಷ್ಟು ತಾಂತ್ರಿಕ ಸಮಸ್ಯೆಗಳು ಎದುರಾಗುತ್ತವೆ. ನ್ಯಾಯಮೂರ್ತಿಗಳ ಮುಂದೆ ವಿಚಾರಗಳನ್ನು ಪರಿಣಾಮಕಾರಿಯಾಗಿ ಪ್ರಸ್ತುತಪಡಿಸಲಾಗದು. ಇದರಿಂದ ಕಕ್ಷಿದಾರರಿಗೆ ನ್ಯಾಯಯುತವಾಗಿ ನ್ಯಾಯದಾನ ಮಾಡಲಾಗುತ್ತಿಲ್ಲ ಎಂಬ ಭಾವನೆ ವೈಯಕ್ತಿಕವಾಗಿ ನನ್ನಲ್ಲಿದೆ.
ಕೋವಿಡ್ ವ್ಯಾಪಿಸುತ್ತಿರುವ ಈ ಸಂದರ್ಭದಲ್ಲಿ ವಕೀಲರ ಸಮುದಾಯದಲ್ಲಿ ಯಾವ ತೆರನಾದ ಚರ್ಚೆ ಇದೆ?
ಕೋವಿಡ್ ಅನ್ನು ಪರಿಣಾಮಕಾರಿಯಾಗಿ ನಿಯಂತ್ರಿಸುವ ಕೆಲವನ್ನು ಸರ್ಕಾರ ಮಾಡಿಲ್ಲ ಎಂಬುದು ಬಹುತೇಕರ ಅಭಿಪ್ರಾಯ. ಪದೇ ಪದೇ ನ್ಯಾಯಾಲಯಗಳನ್ನು ಬಂದ್ ಮಾಡುತ್ತಾ, ನಿರ್ಬಂಧಗಳನ್ನು ವಿಧಿಸುತ್ತಿದ್ದರೆ ಎಲ್ಲವೂ ನಾಶವಾಗಲಿದೆ.
ನಿಮ್ಮ ಸಂಕಷ್ಟಕ್ಕೆ ರಾಜ್ಯ ವಕೀಲರ ಪರಿಷತ್ತು, ಬಿಸಿಐ ಸ್ಪಂದನೆಯ ಬಗ್ಗೆ ಏನು ಹೇಳಬಯಸುತ್ತೀರಿ?
ರಾಜ್ಯ ವಕೀಲರ ಪರಿಷತ್‌ನಿಂದ ನಮಗೆ ನಿರೀಕ್ಷಿತ ಸ್ಪಂದನೆ ಸಿಕ್ಕಿಲ್ಲ. ಕೊರೊನಾ ಮೊದಲ ಅಲೆಯ ಸಂದರ್ಭದಲ್ಲಿ ವಕೀಲರ ನಿಧಿಯಿಂದ ನಿರ್ದಿಷ್ಟ ಮೊತ್ತವನ್ನು ಕಷ್ಟದಲ್ಲಿರುವ ವಕೀಲರಿಗೆ ನೀಡುವ ಮೂಲಕ ಸಹಾಯ ಮಾಡಿ, ಅವರಿಗೆ ವಾಪಸ್ ಮಾಡುವಾಗ ಈಗಾಗಲೇ ನೀಡಿರುವ ಹಣ ಕಡಿತ ಮಾಡಿಕೊಳ್ಳುವಂತೆ ರಾಜ್ಯ ವಕೀಲರ ಪರಿಷತ್‌ಗೆ ಮನವಿ ಮಾಡಿದ್ದೆವು. ಗುಡಿ, ಗುಂಡಾರಗಳಿಗೆ ಸರ್ಕಾರ ಹಣ ನೀಡುತ್ತಿದೆ. ಹೀಗಾಗಿ, ಕೊರೊನಾದ ವಿರುದ್ಧ ಹೋರಾಡುತ್ತಿರುವ ವೈದ್ಯರು, ಪೌರ ಕಾರ್ಮಿಕರು, ಅಂಗನವಾಡಿ ಕಾರ್ಯಕರ್ತೆಯರು ಹಾಗೂ ವಕೀಲರಿಗೆ ನೆರವು ನೀಡುವ ಸಂಬಂಧ ಸರ್ಕಾರದ ಮೇಲೆ ಒತ್ತಡ ಹಾಕುವಂತೆ ಸಲಹೆ ನೀಡಿದ್ದೆವು.
ಕೋವಿಂಡ್ ಸೋಂಕಿನಿಂದ ಆಸ್ಪತ್ರೆ ಸೇರಿದ್ದ ಕೆಲವು ವಕೀಲರ ಆರೋಗ್ಯ ವೆಚ್ಚ ಲಕ್ಷಗಟ್ಟಲೇ ದಾಟಿದೆ. ಕೆಲವು ವಕೀಲರನ್ನು ಆಸ್ಪತ್ರೆಗಳು ಚಿಕಿತ್ಸೆಗೆ ದಾಖಲಿಸದೇ ಸತಾಯಿಸಿದ ಘಟನೆಗಳು ನಡೆದಿವೆ ಎನ್ನುವ ಮಾಹಿತಿ ಇದೆಯೆಲ್ಲಾ?
ಹೌದು. ಇಂಥ ಹಲವು ಘಟನೆಗಳು ನಡೆದಿವೆ. ನಾವೇ ಮಧ್ಯಪ್ರವೇಶಿಸಿ ಅವುಗಳನ್ನು ಬಗೆಹರಿಸಿ, ಚಿಕಿತ್ಸೆ ಕೊಡಿಸುವ ಕೆಲಸವನ್ನು ಮಾಡಿದ್ದೇವೆ. ಹೀಗಾಗಿಯೇ ಈ ಬಾರಿ, ಒಂದಷ್ಟು ಸಮಾನಮನಸ್ಕ ವಕೀಲರು ಸೇರಿಕೊಂಡು ಪ್ರತ್ಯೇಕ ಕಟ್ಟಡ ಬಾಡಿಗೆ ಪಡೆದು 25 ಹಾಸಿಗೆಯ ಆಸ್ಪತ್ರೆ ಮಾಡುವ ಚಿಂತನೆ ನಡೆಸಿದ್ದೇವೆ. ವಕೀಲರು ಮತ್ತು ಅವರ ಕುಟುಂಬಕ್ಕೆ ಆರೋಗ್ಯ ಸೇವೆ ಸಲ್ಲಿಸಲು ಒಂದಿಬ್ಬರು ವೈದ್ಯರು ನೇಮಿಸುವ ಚಿಂತನೆಯಲ್ಲಿದ್ದೇವೆ. ಅಗತ್ಯ ಸೌಲಭ್ಯಗಳನ್ನು ಕಲ್ಪಿಸುವ ಸಂಬಂಧ ಚರ್ಚೆ ನಡೆಯುತ್ತಿದೆ.