[ಅನುಸಂಧಾನ] ವಕೀಲಿಕೆಯ ಪಟ್ಟು ಕಲಿಯುತ್ತಿರುವಾಗ ರಾಜಕೀಯ ಕೈಬೀಸಿ ಕರೆಯಿತು: ಮಹಾಂತೇಶ ಕೌಜಲಗಿ

ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಹಿನ್ನೆಲೆಯಿಂದ ಬಂದು ಸಮಾಜದ ವಿವಿಧ ವಲಯಗಳಲ್ಲಿ ಗುರುತರ ಸಾಧನೆ ಮಾಡಿದ ಸಾಧಕರೊಂದಿಗಿನ ಮಾತುಕತೆಯೇ ಈ 'ಅನುಸಂಧಾನ'.
Mahantesh S Koujalagi
Mahantesh S KoujalagiBailhongal MLA

ತಾತ ಮತ್ತು ತಂದೆ ಇಬ್ಬರೂ ವಕೀಲರಾಗಿದ್ದ ಕೌಟುಂಬಿಕ ವಾತಾವರಣಕ್ಕೆ ಸಾಕ್ಷಿಯಾಗಿ, ಅದರಿಂದ ಪ್ರೇರಿತರಾಗಿ ಕಾನೂನು ಶಿಕ್ಷಣ ಪಡೆದವರು ಬೆಳಗಾವಿಯ ಜಿಲ್ಲೆಯ ಬೈಲಹೊಂಗಲದ ಶಾಸಕ ಮಹಾಂತೇಶ ಎಸ್‌ ಕೌಜಲಗಿ. ವಕೀಲಿಕೆ ಮಾಡುತ್ತಿರುವಾಗ ಮಹತ್ವದ ಅವಕಾಶವೊಂದು ಒದಗಿ ಬಂದು ಇಪ್ಪತ್ತೇಳನೇ ವಯಸ್ಸಿಗೇ ಮಹಾಂತೇಶ ಕೌಜಲಗಿ ಶಾಸಕರಾಗಿ ಆಯ್ಕೆಯಾಗುವಂತಾಯಿತು. ತಂದೆ ಹಾಗೂ ಮಾಜಿ ಸಚಿವ ಶಿವಾನಂದ ಕೌಜಲಗಿ ಅವರು ಲೋಕಸಭಾ ಸದಸ್ಯರಾಗಿ ಆಯ್ಕೆಯಾಗಿದ್ದರಿಂದ ತೆರವಾದ ಸ್ಥಾನಕ್ಕೆ ನಡೆದ ಉಪಚುನಾವಣೆಯಲ್ಲಿ ಗೆದ್ದು ಸಕ್ರಿಯ ರಾಜಕೀಯಕ್ಕೆ ಮಹಾಂತೇಶ ಕೌಜಲಗಿ ಪ್ರವೇಶಿಸಿದ್ದರು. ಆನಂತರ ನಡೆದ ವಿಧಾನಸಭಾ ಚುನಾವಣೆಯಲ್ಲಿಯೂ ಜನರ ಆಶೀರ್ವಾದ ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ಮುಂದೆ 2010ರಲ್ಲಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರ ಕ್ಷೇತ್ರದಲ್ಲಿ ಗೆದ್ದು ಚಿಂತಕರ ಚಾವಡಿ ಎನ್ನಲಾಗುವ ವಿಧಾನ ಪರಿಷತ್‌ ಪ್ರವೇಶಿಸಿದ್ದರು. 2018ರ ವಿಧಾನಸಭಾ ಚುನಾವಣೆಯಲ್ಲಿ ಗೆದ್ದು ವಿಧಾನಸಭೆ ಪ್ರವೇಶಿಸಿರುವ ಅವರಿಗೆ ಕಿರಿಯ ವಯಸ್ಸಿನಲ್ಲೇ ರಾಜಕಾರಣದತ್ತ ಹೊರಳಿದ್ದರಿಂದ ವಕೀಲಿಕೆಯ ಅನುಭವ ಹೆಚ್ಚಾಗಿ ದಕ್ಕಲಿಲ್ಲ. ಆದರೆ, ಕಾನೂನು ಶಿಕ್ಷಣದ ಹಿನ್ನೆಲೆ ಶಾಸಕರಾಗಿ ಕಾರ್ಯನಿರ್ವಹಿಸಲು ಬಹು ಸಹಕಾರಿಯಾಯಿತು. ಶಿಕ್ಷಣ, ವಕೀಲಿಕೆ, ರಾಜಕಾರಣ, ತಂದೆ-ತಾತನವರ ಪ್ರಭಾವ ಮುಂತಾಗಿ ತಾವು ಸಾಗಿ ಬಂದ ಹಾದಿಯ ಬಗ್ಗೆ “ಬಾರ್‌ ಅಂಡ್‌ ಬೆಂಚ್‌”ಗೆ ನೀಡಿದ ಸಂದರ್ಶನದಲ್ಲಿ ಮಹಾಂತೇಶ್‌ ಕೌಜಲಗಿ ಮೆಲುಕು ಹಾಕಿದ್ದಾರೆ.

Q

ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?

A

ನನ್ನ ತಾತ ಮತ್ತು ನನ್ನ ತಂದೆ ಇಬ್ಬರೂ ವಕೀಲರೇ ಆಗಿದ್ದರು. ಹೀಗಾಗಿ ಇದು ನನ್ನ ಮೇಲೆ ಪ್ರಭಾವ ಉಂಟು ಮಾಡಿತ್ತು. ಕಕ್ಷಿದಾರರ ಜೊತೆ ಅವರು ನಡೆದುಕೊಳ್ಳುತ್ತಿದ್ದದ್ದು, ಜನರು ತಮ್ಮ ಅಹವಾಲುಗಳನ್ನು ಹಿಡಿದು ಚೇಂಬರ್‌ಗೆ ಬರುತ್ತಿದ್ದುದು ಎಲ್ಲವೂ ನನ್ನನ್ನು ಪ್ರಭಾವಿಸಿವೆ. ಸಮಸ್ಯೆಯಲ್ಲಿ ಸಿಲುಕಿಕೊಂಡಿರುವ ಜನರಿಗೆ ನೆರವಾಗಬೇಕು ಎಂಬ ಉದ್ದೇಶದಿಂದ ನಾನು ಕಾನೂನು ಶಿಕ್ಷಣ ಪಡೆದೆ. ಧಾರವಾಡ ವಿಶ್ವವಿದ್ಯಾಲಯದ ಕಾನೂನು ಕಾಲೇಜಿನಲ್ಲಿ 1992-95 ರ ಅವಧಿಯಲ್ಲಿ ಕಾನೂನು ಪದವಿ ಪೂರೈಸಿದೆ.

Q

ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟಿಸ್‌ ಮಾಡಿದಿರಿ? ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು?

A

ಬೈಲಹೊಂಗಲದಲ್ಲಿ ಹಿರಿಯ ವಕೀಲರಾಗಿರುವ ಅಲಸಂದಿ ಅವರ ಬಳಿ ಜೂನಿಯರ್‌ ಆಗಿ ಸೇರ್ಪಡೆಯಾದೆ. ಅವರ ಬಳಿ ಆರು ತಿಂಗಳು ವಕೀಲನಾಗಿ ಕೆಲಸ ಮಾಡಿದೆ. ವಕೀಲಿಕೆಯ ಪಟ್ಟುಗಳು ಕರಗತವಾಗುವ ಸಂದರ್ಭದಲ್ಲಿ ರಾಜಕೀಯ ಕ್ಷೇತ್ರ ಕೈ ಬೀಸಿ ಕರೆಯಿತು. ಅಂದಿನ ಪರಿಸ್ಥಿತಿಗೆ ಸ್ಪಂದಿಸುವುದರ ಜೊತೆಗೆ ರಾಜಕೀಯ ಕ್ಷೇತ್ರದ ವ್ಯಾಪ್ತಿ ದೊಡ್ಡದಾಗಿರುವುದರಿಂದ ಹೆಚ್ಚಿನ ಮಟ್ಟದಲ್ಲಿ ಜನಸೇವೆ ಮಾಡಬಹುದು ಎಂದು ರಾಜಕೀಯ ಅವಕಾಶವನ್ನು ಒಪ್ಪಿಕೊಂಡೆ.

Q

ನೀವು ವಾದ ಮಂಡಿಸಿದ ಮೊದಲ ಕೇಸ್‌ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?

A

ಒಬ್ಬನೇ ಯಾವುದೇ ಪ್ರಕರಣಗಳನ್ನು ನಡೆಸಿಲ್ಲ. ಹಿರಿಯ ವಕೀಲರ ಜೊತೆ ಸೇರಿಕೊಂಡು ಪ್ರಕರಣಗಳನ್ನು ನಡೆಸಿದ್ದೇನೆ. ಅತ್ಯಂತ ಕಡಿಮೆ ಅವಧಿಗೆ ವಕೀಲಿಕೆ ಮಾಡಿರುವುದರಿಂದ ಹೇಳಿಕೊಳ್ಳುವಂಥ ನೆನಪುಗಳೇನು ಇಲ್ಲ.

Q

ವಕೀಲಿಕೆಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?

A

ರಾಜಕೀಯಕ್ಕೆ ಬರುವುದರ ಬಗ್ಗೆ ಖಚಿತತೆ ಇರಲಿಲ್ಲ. ವಾಣಿಜ್ಯ ಪದವಿ (ಬಿ.ಕಾಂ) ಪಡೆಯುವಾಗ ಮತ್ತು ಕಾನೂನು ಪದವಿ ಪಡೆಯುವಾಗ ನಾನು ಕಾಲೇಜಿನ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ನಮ್ಮ ತಂದೆ ಶಿವಾನಂದ ಕೌಜಲಗಿ ಅವರು ಶಾಸಕರಾಗಿದ್ದರು. ಅವರು ಲೋಕಸಭಾ ಸದಸ್ಯರಾಗಿ ಸಂಸತ್‌ ಪ್ರವೇಶಿಸಿದ್ದರಿಂದ ಉಪಚುನಾವಣೆ ಎದುರಾಗಿತ್ತು. ಅಂದಿನ ಮುಖ್ಯಮಂತ್ರಿಗಳಾಗಿದ್ದ ಜೆ ಎಚ್‌ ಪಟೇಲ್‌ ಮತ್ತು ಪಕ್ಷದ ವರಿಷ್ಠರು ಚುನಾವಣೆಗೆ ಸ್ಪರ್ಧಿಸುವಂತೆ ಸೂಚಿಸಿದ್ದರು. ಇದನ್ನು ಒಪ್ಪಿ ನಾನು ಸ್ಪರ್ಧೆ ಮಾಡಿ, ಗೆದ್ದು ಶಾಸಕನಾಗಿ ಆಯ್ಕೆಯಾಗಿದ್ದೆ. ಅಲ್ಲಿಂದ ರಾಜಕೀಯದ ನಂಟು ಆರಂಭವಾಯಿತು. ಇಲ್ಲಿಯವರೆಗೆ ಮೂರು ಬಾರಿ ಶಾಸಕನಾಗಿದ್ದು, ಒಂದು ಬಾರಿ ಬೆಳಗಾವಿ, ಬಾಗಲಕೋಟೆ, ವಿಜಯಪುರ ಜಿಲ್ಲೆಗಳನ್ನು ಒಳಗೊಂಡ ವಾಯವ್ಯ ಪದವೀಧರರ ಕ್ಷೇತ್ರದಿಂದ ವಿಧಾನ ಪರಿಷತ್‌ಗೆ ಚುನಾಯಿತನಾಗಿದ್ದೇನೆ.

Q

ಕಾನೂನು ಶಿಕ್ಷಣದ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?

A

ಕ್ಷೇತ್ರದ ಜನರು ವಿಭಿನ್ನವಾದ ಸಮಸ್ಯೆಗಳನ್ನು ನಮ್ಮ ಬಳಿಗೆ ತರುತ್ತಾರೆ. ಅವರ ದುಃಖ, ದುಮ್ಮಾನಗಳಿಗೆ ಸಾಂತ್ವನ ಹೇಳುವುದರ ಜೊತೆಗೆ ಕೆಲವು ಸಮಸ್ಯೆಗಳನ್ನು ಕಾನೂನಿನ ಪರಿಧಿಯಲ್ಲೇ ಬಗೆಹರಿಸಬೇಕಾಗುತ್ತದೆ. ಈ ಸಂದರ್ಭದಲ್ಲಿ ಕಾನೂನಿನ ಅರಿವು ಬಹಳ ಮುಖ್ಯವಾಗುತ್ತದೆ. ಕಾನೂನಿನ ಹಿನ್ನೆಲೆ ಇರುವುದರಿಂದ ನಮ್ಮ ಮಿತಿಯಲ್ಲಿ ನೊಂದವರಿಗೆ ಸಲಹೆ-ಸೂಚನೆ ನೀಡಲು ಸಹಾಯಕವಾಗುತ್ತದೆ. ಹಾಗೆಂದು ಕಾನೂನು ಪದವಿ ಕಡ್ಡಾಯವಾಗಬೇಕು ಎಂದು ಹೇಳುತ್ತಿಲ್ಲ. ಹಲವು ಹಿರಿಯ ರಾಜಕಾರಣಿಗಳು ಕಾನೂನಿನ ಹಿನ್ನೆಲೆ ಅಥವಾ ಯಾವುದೇ ಪದವಿ ಪಡೆಯದೇ ಸಾಕಷ್ಟು ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ. ಶಾಸನ ರೂಪಿಸುವಾಗ ಕಾನೂನು ಜ್ಞಾನ ಹೆಚ್ಚು ಮಹತ್ವ ಪಡೆಯುತ್ತದೆ. ಹೀಗಾಗಿ ಕಾನೂನಿನ ಹಿನ್ನೆಲೆ ಇದ್ದರೆ ಅನುಕೂಲ.

Q

ರಾಜಕಾರಣಕ್ಕೆ ಬರಬಾರದಿತ್ತು, ವಕೀಲಿಕೆಯಲ್ಲಿಯೇ ಮುಂದುವರಿಯಬೇಕಿತ್ತು ಎಂದಿನಿಸಿದೆಯೇ?

A

ನಾನು ಸ್ಪರ್ಧಿಸಿದ್ದ ಮೊದಲ ಚುನಾವಣೆಗೂ ಇವತ್ತಿನ ಚುನಾವಣೆಗೂ ಸಾಕಷ್ಟು ವ್ಯತ್ಯಾಸವಿದೆ. ಚುನಾವಣೆಯ ಖರ್ಚು, ಬಾಬತ್ತುಗಳು ವಿಪರೀತವಾಗಿವೆ. ಆದರೆ, ಸಾಕಷ್ಟು ಮಂದಿ ಕಾರ್ಯಕರ್ತರು ಪಕ್ಷದ ಮೇಲಿನ ಅಭಿಮಾನದಿಂದ ಕೆಲಸ ಮಾಡುತ್ತಿರುತ್ತಾರೆ. ಅವರಿಗಾಗಿ ನಾವು ಕೆಲಸ ಮಾಡಬೇಕಾಗುತ್ತದೆ.

Related Stories

No stories found.
Kannada Bar & Bench
kannada.barandbench.com