ಯೋಗೀಶ್‌ ಗೌಡ ಕೊಲೆ: ಚನ್ನಕೇಶವ್‌ ಟೆಂಗರಿಕರ್‌ ಜಾಮೀನು ಅರ್ಜಿ ಆದೇಶ ಕಾಯ್ದಿರಿಸಿದ ಹೈಕೋರ್ಟ್‌

“ಕೊಲೆಗೆ ಬಳಸಿದ ಅಸ್ತ್ರಗಳನ್ನು ಬಿಟ್ಟು ಬೇರೆ ಆಯುಧಗಳನ್ನು‌ ವಶಪಡಿಸಿಕೊಂಡು ಅದಕ್ಕೆ ಯೋಗೀಶ್‌ ಗೌಡ ಮರಣೋತ್ತರ ಪರೀಕ್ಷೆಯ ಬಳಿಕ ಸಂಗ್ರಹಿಸಿ ರಕ್ತವನ್ನು ಅದಕ್ಕೆ ಸವರಿದ್ದಾರೆ” ಎಂದು ವಾದಿಸಿದ ಸಿಬಿಐ ವಕೀಲರು.
Yogesh Gowda
Yogesh GowdaFacebook
Published on

ಧಾರವಾಡದ ಬಿಜೆಪಿ‌ ಮುಖಂಡ ಯೊಗೀಶ್ ಗೌಡ ಕೊಲೆ ಪ್ರಕರಣದಲ್ಲಿ ನಕಲಿ ಸಾಕ್ಷಿಗಳನ್ನು ಸೃಷ್ಟಿಸಿದ ಅಪರಾಧ ಸಂಬಂಧ ಏಳು ವರ್ಷ ಜೈಲು ಶಿಕ್ಷೆಗೆ ಗುರಿಯಾಗಿರುವ  ಅಮಾನತುಗೊಂಡಿರುವ ಪೊಲೀಸ್ ಇನ್‌ಸ್ಪೆಕ್ಟರ್‌ ಚನ್ನಕೇಶವ ಟೆಂಗರಿಕರ್ ಶಿಕ್ಷೆ ಅಮಾನತುಪಡಿಸಿ, ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ಪೂರ್ಣಗೊಳಿಸಿರುವ ಕರ್ನಾಟಕ ಹೈಕೋರ್ಟ್ ಗುರುವಾರ ತೀರ್ಪು ಕಾಯ್ದಿರಿಸಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಅಮಾನತ್ತಿನಲ್ಲಿರಿಸಿ ಜಾಮೀನು ಮಂಜೂರು ಮಾಡುವಂತೆ ಕೋರಿ ಚನ್ನಕೇಶವ ಟೆಂಗರಿಕರ್ ಸಲ್ಲಿಸಿರುವ ಮೇಲ್ಮನವಿಯ ವಿಚಾರಣೆಯನ್ನು ನ್ಯಾಯಮೂರ್ತಿಗಳಾದ ಮೊಹಮ್ಮದ್ ನವಾಜ್ ಮತ್ತು ಜಿ ಬಸವರಾಜ ಅವರ ನೇತೃತ್ವದ ವಿಭಾಗೀಯ ಪೀಠ ನಡೆಸಿತು.

ಟೆಂಗರಿಕರ್ ಪರ ಹಿರಿಯ ವಕೀಲ ಪಿ ಪಿ ಹೆಗ್ಡೆ ಅವರು “ಪಿತೂರಿ ನಡೆಸಿದ ಹಾಗೂ ಸರಿಯಾಗಿ ತನಿಖೆ ನಡೆಸಿಲ್ಲ ಎಂಬ ಆರೋಪ ಟೆಂಗರಿಕರ್‌ ವಿರುದ್ಧವಿದೆ. ಅದಕ್ಕೆ ಐಪಿಸಿ ಸೆಕ್ಷನ್‌ 201 ಮತ್ತು 218 ಅಡಿ ಗರಿಷ್ಠ ಏಳು ವರ್ಷ ಶಿಕ್ಷೆ ವಿಧಿಸಲಾಗಿದೆ. ಇವು ಜಾಮೀನುರಹಿತ ಪ್ರಕರಣಗಳಾಗಿವೆ. ಆದ್ದರಿಂದ ಜಾಮೀನು ಮಂಜೂರು ಮಾಡಬೇಕು. ವಿಚಾರಣಾ ಹಂತದಲ್ಲೂ ಟೆಂಗರಿಕರ್‌ ಅವರಿಗೆ ಜಾಮೀನು ಮಂಜೂರಾಗಿತ್ತು” ಎಂದರು.

Also Read
ಜೀವಾವಧಿ ಶಿಕ್ಷೆ ಅಮಾನತುಗೊಳಿಸಿ, ಜಾಮೀನು ಕೋರಿದ ವಿನಯ್‌ ಕುಲಕರ್ಣಿ, ಇಂಡಿ: ಸಿಬಿಐಗೆ ಹೈಕೋರ್ಟ್‌ ನೋಟಿಸ್‌

ಸಿಬಿಐ ಪ್ರತಿನಿಧಿಸಿದ್ದ ಕೇಂದ್ರ ಸರ್ಕಾರದ ಹೆಚ್ಚುವರಿ ಸಾಲಿಸಿಟರ್ ಜನರಲ್ ಎಸ್ ವಿ ರಾಜು ಅವರು “ಅರ್ಜಿದಾರ ಅಧಿಕಾರಿ ಆರೋಪಿಗಳು ಕೊಲೆಗೆ ಬಳಸಿದ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿಲ್ಲ. ‌ಬೇರೆ ಆಯುಧಗಳನ್ನು‌ ವಶಪಡಿಸಿಕೊಂಡು ಅದಕ್ಕೆ ಯೋಗೀಶ್‌ ಗೌಡ ಮರಣೋತ್ತರ ಪರೀಕ್ಷೆಯ ಬಳಿಕ ಸಂಗ್ರಹಿಸಿ ರಕ್ತವನ್ನು ಅದಕ್ಕೆ ಸವರಿದ್ದಾರೆ.‌ ನಿಜವಾದ ಆರೋಪಿಗಳ ಬದಲಿಗೆ ತಪ್ಪು ಮಾಡದ ವ್ಯಕ್ತಿಗಳನ್ನು ಆರೋಪಿಗಳನ್ನಾಗಿ ಮಾಡಲು ಪ್ರಯತ್ನಿಸಿದ್ದು, ನಿಜವಾದ ಕೆಲ ಆರೋಪಿಗಳ ಹೆಸರು ಹೇಳದಂತೆ ಸಾಕ್ಷಿಗಳಿಗೆ ಬೆದರಿಕೆ ಹಾಕಿದ್ದಾರೆ. ನೈಜ ಸಾಕ್ಷ್ಯಗಳನ್ನು ಮರೆಮಾಚಿ ಬದಲಿ ಸಾಕ್ಷ್ಯಗಳನ್ನು ಸಂಗ್ರಹಿಸಿ ತಪ್ಪೆಸಗಿದ್ದಾರೆ. ಘಟನೆ ಸಂಬಂಧ ಪ್ರಮುಖ ಆರೋಪಗಳೊಂದಿಗೆ ಕೈಜೋಡಿಸಿದ್ದಾರೆ” ಎಂದರು.

Kannada Bar & Bench
kannada.barandbench.com