ಸಮಕಾಲೀನ ರಾಜ್ಯ ರಾಜಕಾರಣದಲ್ಲಿ ಸಾಂವಿಧಾನಿಕ ಮತ್ತು ಕಾನೂನಾತ್ಮಕ ವಿಚಾರಗಳನ್ನು ಸ್ಪಷ್ಟವಾಗಿ ಪ್ರತಿಪಾದಿಸಬಲ್ಲ ಕೆಲವೇ ಕೆಲವು ರಾಜಕೀಯ ನಾಯಕರಲ್ಲಿ ಕಾಂಗ್ರೆಸ್ ಮುಖಂಡ ವಿ ಎಸ್ ಉಗ್ರಪ್ಪ ಪ್ರಮುಖರು. ಕಾನೂನು ಶಿಕ್ಷಣ ಮತ್ತು ವಕೀಲಿಕೆಯ ಅನುಭವವನ್ನು ಶಾಸನಸಭೆಯಲ್ಲಿ ಸಮರ್ಥವಾಗಿ ಬಳಸಿಕೊಂಡ ಅವರು ಉತ್ತಮ ಸದನಪಟುವಾಗಿ ಹೊರಹೊಮ್ಮಿದವರೂ ಕೂಡ. ವಿಧಾನಪರಿಷತ್ ವಿರೋಧ ಪಕ್ಷದ ನಾಯಕರಾಗಿ ಕಾರ್ಯನಿರ್ವಹಿಸಿರುವ ಉಗ್ರಪ್ಪನವರು ಸದನದ ಕಲಾಪಗಳ ನೀತಿ-ನಿಯಮಗಳ ವಿಚಾರದಲ್ಲಿ ಅಧಿಕಾರಯುತ ಧ್ವನಿಯಾಗಿ ಗುರುತಿಸಲ್ಪಡುವವರು. ಕಾನೂನಿನ ವಿಚಾರಗಳನ್ನು ಎಳೆಎಳೆಯಾಗಿ ವಿವರಿಸುವಲ್ಲಿ ಅವರು ಸಿದ್ಧಹಸ್ತರು.
ಕಲ್ಪತರು ನಾಡು ತುಮಕೂರಿನ ಪಾವಗಡ ಮೂಲದವರಾದ ಉಗ್ರಪ್ಪನವರು ರಾಜಕಾರಣ ಮತ್ತು ವಕೀಲಿಕೆಯನ್ನು ಸಮನಾಗಿ ತೂಗಿಸಿಕೊಂಡು ಹೋಗುವ ಪ್ರಯತ್ನ ಮಾಡುತ್ತಿದ್ದಾರೆ. ಪಕ್ಷದ ವಿಚಾರಗಳು ಬಂದಾಗ ಕಪ್ಪು ಕೋಟು ಧರಿಸಿ ನ್ಯಾಯಾಲಯದ ಮೆಟ್ಟಿಲೇರಲು ಅವರು ಹಿಂಜರಿಯುವುದಿಲ್ಲ. ಕೋರ್ಟ್ ಕಲಾಪ, ಸದನ ಕಲಾಪಗಳೆರಡರಲ್ಲೂ ನುರಿತಿರುವ ಉಗ್ರಪ್ಪನವರು “ಬಾರ್ ಅಂಡ್ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ಶಿಕ್ಷಣ, ವಕೀಲಿಕೆ ಮತ್ತು ರಾಜಕಾರಣದೆಡಿಗಿನ ಸೆಳೆತೆದ ಬಗ್ಗೆ ವಿವರವಾಗಿ ಮಾತನಾಡಿದ್ದಾರೆ.
ವಿದ್ಯಾರ್ಥಿ ಜೀವನದಲ್ಲಿ ಕಾನೂನು ಶಿಕ್ಷಣದ ಅಧ್ಯಯನ ಮಾಡಬೇಕು ಎಂದು ನಿಮಗೆ ಅನಿಸಲು ಕಾರಣವೇನು?
ಎರಡು ಕಾರಣಗಳಿಂದಾಗಿ ನಾನು ವಕೀಲನಾಗಲು ಬಯಸಿದೆ. ನಮ್ಮ ಆಸ್ತಿಯ ವಿಚಾರಕ್ಕೆ ಸಂಬಂಧಿಸಿದಂತೆ ನಮ್ಮ ತಂದೆಯವರ ಜೊತೆ ನನಗೆ ಹೆಣ್ಣು ಕೊಟ್ಟಿರುವ ಮಾವನವರಾದ ವಕೀಲರನ್ನು ಭೇಟಿ ಮಾಡಿದ್ದೆ. ಅವರಿಂದ ಮೊದಲಿಗೆ ವಕೀಲನಾಗುವ ಪ್ರೇರೇಪಣೆ ಪಡೆದೆ. ಎರಡನೆಯಾದಗಿ ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ ನಾನೂ ಬಂಧಿಸಲ್ಪಟ್ಟಿದ್ದೆ. ಈ ಸಂದರ್ಭದಲ್ಲಿ ಜೈಲಿನಲ್ಲಿ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ, ಮಾಜಿ ಉಪ ಪ್ರಧಾನಿ ಎಲ್ ಕೆ ಅಡ್ವಾಣಿ, ಮಾಜಿ ಸಚಿವರಾದ ಮಧು ದಂಡವತೆ, ಶ್ಯಾಮ್ ನಂದನ್ ಮಿಶ್ರಾ, ರಾಮಕೃಷ್ಣ ಹೆಗಡೆ, ಎಚ್ ಡಿ ದೇವೇಗೌಡ, ಪಿ ಜಿ ಆರ್ ಸಿಂಧ್ಯಾ, ರಾಮಾ ಜೋಯಿಸ್, ಈಗಿನ ಆರ್‌ಎಸ್‌ಎಸ್ ಪ್ರಮುಖರಾದ ದತ್ತಾತ್ರೇಯ ಹೊಸಬಾಳೆ, ಸುರೇಶ್ ಕುಮಾರ್, ಪಟ್ಟಾಭಿ ಸೇರಿದಂತೆ ಹಲವರು ಸಹ ಕೈದಿಗಳಾಗಿದ್ದೆವು. ವಕೀಲರಾಗಿದ್ದ ರಾಮಾ ಜೋಯಿಸ್ ಅವರು ಜೈಲಿನಲ್ಲೇ ಕುಳಿತು ರಿಟ್ ಆಫ್ ಹೇಬಿಯಸ್ ಕಾರ್ಪಸ್ ಸಿದ್ಧಪಡಿಸಿದ್ದರು. ಆಗ ನನಗೆ ಎಷ್ಟೇ ದೊಡ್ಡ ರಾಜಕಾರಣಿಯಾದರೂ ವಕೀಲರನ್ನು ಅವಲಂಬಿಸಬೇಕಾಗುತ್ತದೆ ಎಂದೆನಿಸಿತು. ಇದರಿಂದ ವಿಜ್ಞಾನದ ವಿದ್ಯಾರ್ಥಿಯಾದ ನಾನು ಎಂ ಎಸ್ಸಿ ಗಣಿತಶಾಸ್ತ್ರ ತೊರೆದು ವಿಶ್ವವಿದ್ಯಾಲಯದ ಕಾನೂನು ಕಾಲೇಜಿಗೆ ಸೇರ್ಪಡೆಯಾದೆ.
ಕಾನೂನು ಪದವಿ ಪೂರ್ಣಗೊಂಡ ಬಳಿಕ ಆರು ವರ್ಷಗಳ ಕಾಲ ವಿವೇಕಾನಂದ ಕಾನೂನು ಶಾಲೆಯಲ್ಲಿ ಪ್ರಾಧ್ಯಾಪಕನಾಗಿ ಆನಂತರ ಪ್ರೊ. ಎಂ ಆರ್ ಜನಾರ್ಧನ್ ಅವರ ಜನಾರ್ಧನ್ ಅಂಡ್ ಜನಾರ್ಧನ್ ಕಾನೂನು ಸೇವಾ ಸಂಸ್ಥೆಯಲ್ಲಿ 1982ರಲ್ಲಿ ವಕೀಲಿಕೆ ಆರಂಭಿಸಿ, ಹಲವು ವರ್ಷಗಳ ಕಾಲ ಕಿರಿಯ ವಕೀಲನಾಗಿ ಕೆಲಸ ಮಾಡಿದೆ. ಬಳಿಕ ನನ್ನದೇ ಕಚೇರಿ ಆರಂಭಿಸಿದೆ.
ಕಾನೂನು ಶಿಕ್ಷಣದ ವೇಳೆ ನಿಮ್ಮ ಮೇಲೆ ಗಾಢವಾಗಿ ಪ್ರಭಾವ ಬೀರಿದ ಸಂಗತಿಗಳು ಯಾವುವು?
ತುರ್ತು ಪರಿಸ್ಥಿತಿಯ ನಂತರ 1977ರ ಮಾರ್ಚ್ 21ರಂದು ಜೈಲಿನಿಂದ ಬಿಡುಗಡೆಯಾಗಿ ಕಾನೂನು ಶಿಕ್ಷಣ ಪಡೆಯಲು ಸೇರಿದೆ. ಅದಾಗಲೇ ವಿದ್ಯಾರ್ಥಿ ಸಂಘದ ಚಟುವಟಿಕೆಗಳಲ್ಲಿ ಸಕ್ರಿಯನಾಗಿದ್ದೆ. ಮೂರು ವರ್ಷಗಳಲ್ಲಿ ಎರಡು ವರ್ಷ ವಿದ್ಯಾರ್ಥಿ ಸಂಘದ ಪ್ರಧಾನ ಕಾರ್ಯದರ್ಶಿಯಾಗಿ ಕೆಲಸ ಮಾಡಿದ್ದೇನೆ. ಈ ಸಂದರ್ಭದಲ್ಲಿ ಅಣಕು ನ್ಯಾಯಾಲಯ, ಅಣಕು ಸಂಸತ್ತು ಕಾರ್ಯಕ್ರಮಗಳನ್ನು ಆಯೋಜಿಸಿ ಮಾಜಿ ಪ್ರಧಾನಿ ಎಚ್ ಡಿ ದೇವೇಗೌಡ ಮತ್ತು ಹೆಸರಾಂತ ವಕೀಲ ದಿವಂಗತ ರಾಮ್ ಜೇಠ್ಮಲಾನಿ ಅವರನ್ನು ಮುಖ್ಯ ಅತಿಥಿಗಳನ್ನಾಗಿ ಆಹ್ವಾನಿಸಿದ್ದೆ. ಇದರ ಜೊತೆಗೆ ಜೈಲಿನ ಅನುಭವ ಮತ್ತು ವಕೀಲರಾದ ಮಾವನವರ ಪ್ರೇರೇಪಣೆ ಸಾಕಷ್ಟು ಪ್ರಭಾವಿಸಿದ್ದವು.
ಕಾನೂನು ವಿದ್ಯಾರ್ಥಿಯಾಗಿದ್ದ ಸಂದರ್ಭದಲ್ಲಿ ಪ್ರಾಚಾರ್ಯರು ಮತ್ತು ನಮ್ಮ ನಡುವೆ ಅನ್ಯ ವಿಚಾರಗಳಿಗೆ ವೈಮನಸ್ಸಿತ್ತು. ಇದನ್ನು ವೈಯಕ್ತಿಕ ದ್ವೇಷವನ್ನಾಗಿಸಿಕೊಂಡಿದ್ದ ಪ್ರಾಚಾರ್ಯರು ನನ್ನನ್ನು ಉದ್ದೇಶಪೂರ್ವಕವಾಗಿ ಅನುತ್ತೀರ್ಣಗೊಳಿಸಲು ಸಾಕಷ್ಟು ಪ್ರಯತ್ನ ಪಟ್ಟಿದ್ದರು. ಆದರೆ, ಅದನ್ನು ಸವಾಲಾಗಿ ಸ್ವೀಕರಿಸಿ ಅಂಕ ಮರು ಎಣಿಕೆ ಮೊರೆ ಹೋಗಿ ಉತ್ತೀರ್ಣನಾಗಿದ್ದೆ. ಈ ಸಂದರ್ಭದಲ್ಲಿ ಪ್ರೊ. ಬಾಲಕೃಷ್ಣ (ನ್ಯಾಯಾಧೀಶರಾಗಿದ್ದರು) ಅವರು ಸಾಕಷ್ಟು ಸಹಾಯ ಮಾಡಿದ್ದರು. ಇದೇ ಪ್ರಾಚಾರ್ಯರು ನಾನು ಬಿಎಸ್ಸಿಯಲ್ಲಿ ಶೇ. 78ರಷ್ಟು ಅಂಕ ಪಡೆದಿದ್ದರೂ ನನಗೆ ಕಾನೂನು ಪದವಿಗೆ ಸೇರಲು ಅವಕಾಶ ಮಾಡಿಕೊಟ್ಟಿರಲಿಲ್ಲ. ಒಟ್ಟಾರೆ ಹೇಳಬೇಕೆಂದರೆ ಕಾನೂನು ಪದವಿಗೆ ಪ್ರವೇಶ ಮತ್ತು ಅಲ್ಲಿಂದ ಪಾಸಾಗಿ ಹೊರಬಂದಿದ್ದು ನನ್ನ ಬದುಕಿನ ಮಹತ್ತರ ಬೆಳವಣಿಗೆ.
ವಕೀಲರಾಗಿ ವೃತ್ತಿ ಜೀವನದ ಆರಂಭದ ದಿನಗಳು ಹೇಗಿದ್ದವು? ಯಾವ ಹಿರಿಯ ವಕೀಲರ ಕೈಕೆಳಗೆ ಪ್ರಾಕ್ಟೀಸ್ ಮಾಡಿದಿರಿ?
ಪ್ರೊ. ಎಂ ಆರ್ ಜನಾರ್ಧನ್ ಅವರ ಬಳಿ ಕಿರಿಯ ವಕೀಲನಾಗಿ ವೃತ್ತಿ ಆರಂಭಿಸಿದೆ. ಆರಂಭದಲ್ಲಿ ಕ್ರಿಮಿನಲ್ ಪ್ರಕರಣಗಳತ್ತ ಒಲವು ಹೊಂದಿದ್ದೆ. ಆ ಸಂದರ್ಭದಲ್ಲಿ ಕೆಲವು ಅಹಿತಕರ ಬೆಳವಣಿಗೆಗಳು ನಡೆದು ಹೋದವು. ಎಂ ಎಸ್ ರಾಮಯ್ಯ ಕಾಲೇಜಿನಲ್ಲಿ ಯುವತಿಯೊಬ್ಬಳ ಕೊಲೆಯಾಗಿತ್ತು. ಕೊಲೆ ಮಾಡಿದವರು ಮಾರನೆಯ ದಿನವೇ ನಮ್ಮ ಕಚೇರಿಗೆ ಜಾಮೀನಿಗಾಗಿ ಅರ್ಜಿ ಸಲ್ಲಿಕೆಗೆ ಕೋರಿ ಬಂದಿದ್ದರು. ನನ್ನ ಸಹೋದ್ಯೋಗಿ ಎಫ್‌ಐಆರ್ ಪ್ರತಿ ತರುವಂತೆ ಸೂಚಿಸಿದರು. ಆದರೆ, ಅದನ್ನು ತರಲು ನನಗೆ ಇಷ್ಟವಿರಲಿಲ್ಲ. ಕಾರಣವಿಷ್ಟೆ, ಅಪರಾಧ ಎಸಗಿದವರಿಗೆ ಇಷ್ಟು ಶೀಘ್ರವಾಗಿ ಜಾಮೀನು ದೊರೆಯಬಾರದು ಎಂಬುದು ನನ್ನ ನಿಲುವಾಗಿತ್ತು. ಇದನ್ನು ನನ್ನ ಹಿರಿಯ ಸಹೋದ್ಯೋಗಿ ಒಪ್ಪಲಿಲ್ಲ. ಆಗ ನಾನು “ವಕೀಲರಿಗೆ ಈ ರೀತಿಯ ಮನೋಭಾವ ಇದ್ದರೆ, ಕ್ರಿಮಿನಲ್‌ಗಳಿಗಿಂತಲೂ ನಾವು ನಿಕೃಷ್ಟರು ಎಂದಿದ್ದೆ.” ಆನಂತರ ಒಂದೆರಡು ಕ್ರಿಮಿನಲ್ ಪ್ರಕರಣಗಳನ್ನು ನಡೆಸಿ, ಸಂವಿಧಾನದ ವಿಚಾರಗಳು, ಭೂ ಸುಧಾರಣೆ, ಭೂ ಕಂದಾಯ, ಸಿವಿಲ್ ಪ್ರಕರಣಗಳತ್ತ ಮುಖ ಮಾಡಿದೆ.
ನೀವು ವಾದ ಮಂಡಿಸಿದ ಮೊದಲ ಕೇಸ್ ಯಾವುದು? ಮೆಲುಕು ಹಾಕುವಂತಹ ಪ್ರಸಂಗಗಳನ್ನು ಹಂಚಿಕೊಳ್ಳಬಹುದೇ?
ವಕಾಲತ್ತು ದಾಖಲಿಸುವುದು, ಸಾಕ್ಷ್ಯ ಮತ್ತು ಆದೇಶದ ಪ್ರತಿಗಳನ್ನು ತೆಗೆದುಕೊಳ್ಳುವಂತೆ ನನ್ನ ಹಿರಿಯ ವಕೀಲರು ಹೇಳುತ್ತಿದ್ದರಿಂದ ಇದೇ ಮೊದಲ ಪ್ರಕರಣ ಎಂದು ಸ್ಪಷ್ಟವಾಗಿ ಹೇಳಲಾಗದು. ನ್ಯಾಯಮೂರ್ತಿಗಳಾಗಿದ್ದ ಚಂದ್ರಕಾಂತ್ ರಾಜ್ ಅರಸ್, ರಾಮಾ ಜೋಯಿಸ್, ದೊಡ್ಡ ಕಾಳೇಗೌಡ ಮತ್ತು ಗೋಪಾಲ ಗೌಡ ಅವರ ಮುಂದೆ ಹಲವು ಪ್ರಕರಣಗಳಲ್ಲಿ ವಾದಿಸಿದ್ದೇನೆ. ನನ್ನ ವಿಶ್ವಾಸಾರ್ಹತೆಯ ಬಗ್ಗೆ ನ್ಯಾಯಾಲಯ ಹಲವು ಸಂದರ್ಭಗಳಲ್ಲಿ ಮೆಚ್ಚುಗೆ ಸೂಚಿಸಿದೆ. ಪ್ರಕರಣವೊಂದರ ಸಂಧಾನಕ್ಕೆ ಸಂಬಂಧಿಸಿದಂತೆ ನ್ಯಾಯಮೂರ್ತಿಗಳಾಗಿದ್ದ ಗೋಪಾಲ ಗೌಡರು ಸೂಚಿಸಿದ್ದರು. ಆಗ ಒಂದು ಕಡೆಯವರು ನಮ್ಮನ್ನು ಸಂಶಯದಿಂದ ನೋಡಲಾರಂಭಿಸಿ, ವಿಚಾರ ಮತ್ತೆ ನ್ಯಾಯಮೂರ್ತಿಗಳ ಬಳಿ ಹೋಗಿತ್ತು. ಆಗ ನ್ಯಾಯಮೂರ್ತಿಗಳಾಗಿದ್ದ ಗೋಪಾಲ ಗೌಡರು “ಉಗ್ರಪ್ಪನವರು ನಿಮಗೆ ಎಷ್ಟು ದಿನದಿಂದ ಗೊತ್ತಿದೆ? ಅವರು ಏನೆಂದು ಈ ನ್ಯಾಯಾಲಯಕ್ಕೆ ಕಳೆದ 25 ವರ್ಷಗಳಿಂದ ಗೊತ್ತಿದೆ” ಎಂದು ಮೌಖಿಕವಾಗಿ ಹೇಳಿದ್ದರು. ಈ ಮಾತುಗಳನ್ನು ಎಂದಿಗೂ ಮರೆಯಲಾಗದು.
ವಕೀಲ ವೃತ್ತಿಯಿಂದ ರಾಜಕಾರಣದೆಡೆಗೆ ಹೇಗೆ ಬಂದಿರಿ?
ರಾಜಕಾರಣದಿಂದ ವಕೀಲ ವೃತ್ತಿಗೆ ಬಂದಿದ್ದೇನೆ ಎಂದರೆ ತಪ್ಪಾಗಲಾರದು. ಬುಡಕಟ್ಟು ಸಮುದಾಯದವನಾಗಿರುವುದರಿಂದ ಕಾನೂನು ಕ್ಷೇತ್ರದಲ್ಲಿ ಅವಕಾಶಗಳು ಹೆಚ್ಚಿರುತ್ತವೆ. ಹಾಗಾಗಿ, ಇಲ್ಲೇ ಮುಂದುವರೆಯುವಂತೆ ಹಿರಿಯರು, ಹಿತೈಷಿ ಮಿತ್ರರು ಹೇಳುತ್ತಿದ್ದರು. ಹಾಗೆ ಮಾಡಿದ್ದರೆ ವಕೀಲ, ನ್ಯಾಯಮೂರ್ತಿಯಾಗಿ ನಿರಾಳವಾಗಿ ಇರಬಹುದಿತ್ತು. ಆದರೆ, ಸಾಮಾಜಿಕ ಕಾರ್ಯ, ಆರ್ಥಿಕ ನೀತಿ, ಶಾಸನ ರೂಪಿಸುವುದು ರಾಜಕಾರಣದಲ್ಲಿದ್ದರೆ ಸಾಧ್ಯ ಎಂದು ಇತ್ತ ಬಂದೆ. ಮೊದಲಿಗೆ ಲೋಕ ಸಂಘರ್ಷ ಸಮಿತಿಯಲ್ಲಿ ಜಿಲ್ಲಾ ಸಂಚಾಲಕನಾಗಿದ್ದೆ. ಅದೇ ಸಂದರ್ಭದಲ್ಲಿ ನನ್ನ ಬಂಧನವಾಗಿತ್ತು. ವಿದ್ಯಾರ್ಥಿಯಾಗಿದ್ದಾಗ ಜನತಾ ಪಕ್ಷದ ಯುವ ಘಟಕದ ರಾಜ್ಯ ಪದಾಧಿಕಾರಿಯಾಗಿದ್ದೆ. ವಕೀಲನಾದ ಮೇಲೆ ರಾಮಕೃಷ್ಣ ಹೆಗಡೆಯವರು ಮುಖ್ಯಮಂತ್ರಿ ಇದ್ದಾಗ ಜನತಾ ಪಕ್ಷದ ಯುವ ಘಟಕದ ರಾಜ್ಯಾಧ್ಯಕ್ಷನಾಗಿದ್ದೆ. ನನ್ನ ದೃಷ್ಟಿಯಲ್ಲಿ ರಾಜಕಾರಣ ಬಿಟ್ಟು ವಕೀಲ ವೃತ್ತಿ ಇರಲು ಸಾಧ್ಯವಿಲ್ಲ.
ಕಾನೂನು ಶಿಕ್ಷಣ, ವಕೀಲಿಕೆಯ ಹಿನ್ನೆಲೆ ನಿಮ್ಮ ರಾಜಕಾರಣದ ಮೇಲೆ ಹೇಗೆ ಪರಿಣಾಮ ಬೀರಿತು?
ಉಗ್ರಪ್ಪನವರು ಸಂವಿಧಾನವನ್ನು ಚೆನ್ನಾಗಿ ಅರ್ಥಮಾಡಿಕೊಂಡಿರುವ ಬುದ್ದಿವಂತ ರಾಜಕಾರಣಿ ಎಂದು ಜನ ಇಂದು ಭಾವಿಸುತ್ತಾರೆ. ನಾನು ಸಂವಿಧಾನದ ಚೌಕಟ್ಟು ಬಿಟ್ಟು ಮಾತನಾಡುವುದಿಲ್ಲ ಎಂದು ಜನರು ನಂಬಿದ್ದಾರೆ. ನಾಲ್ಕು ಬಾರಿ ಸಂಸತ್ ಚುನಾವಣೆಗೆ ಸ್ಪರ್ಧಿಸಿ ಒಮ್ಮೆ ಲೋಕಸಭಾ ಸದಸ್ಯನಾಗಿ ಕೆಲಸ ಮಾಡಿದ್ದೇನೆ. ಐದು ಬಾರಿ ವಿಧಾನ ಪರಿಷತ್ ಚುನಾವಣೆಯಲ್ಲಿ ಸ್ಪರ್ಧಿಸಿ ಮೂರು ಬಾರಿ ಗೆದ್ದಿದ್ದೇನೆ. ಎರಡು ಬಾರಿ ಸೋತಿದ್ದೇನೆ. ನನ್ನ ರಾಜಕೀಯ ಬದುಕಿಗೆ ವಕೀಲಿಕೆ ಅನುಕೂಲ ಮಾಡಿಕೊಟ್ಟಿದೆ.
ಈಗಲೂ ಕಾನೂನು ಸಲಹೆ, ವಕೀಲಿಕೆ ಮುಂದುವರೆಸಿದ್ದೀರಾ?
ವಿಧಾನಸಭಾ ಉಪಚುನಾವಣೆಯ ಹಿನ್ನೆಲೆಯಲ್ಲಿ ಕಾನೂನು ಬಾಹಿರ ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದ ಬೆಂಗಳೂರಿನ ರಾಜರಾಜೇಶ್ವರಿ ನಗರದ ಬಿಜೆಪಿ ಅಭ್ಯರ್ಥಿ ಮುನಿರತ್ನ ಅವರ ವಿರುದ್ಧ ಎಫ್‌ಐಆರ್ ದಾಖಲಿಸಲು ಪೊಲೀಸರು ಮೀನಮೇಷ ಎಣಿಸುತ್ತಿದ್ದರು. ಈ ಸಂಬಂಧ 21ನೇ ಹೆಚ್ಚುವರಿ ಮೆಟ್ರೊಪಾಲಿಟನ್ ಮ್ಯಾಜಿಸ್ಟ್ರೇಟ್ ನ್ಯಾಯಾಲಯದ ಮುಂದೆ ವಾದಿಸಿ, ಅವರ ವಿರುದ್ಧ ದೂರು ದಾಖಲಾಗುವಂತೆ ಆದೇಶ ಪಡೆದುಕೊಂಡಿದ್ದೇನೆ. ವಕೀಲಿಕೆ ಮುಂದುವರಿಸಿದರೆ ರಾಜಕಾರಣ ಬಿಡಬೇಕಾಗುತ್ತದೆ. ಅದು ನನಗೆ ಇಷ್ಟವಿಲ್ಲ. ಅವಶ್ಯಕತೆ ಬಿದ್ದಾಗ ನ್ಯಾಯಾಲಯಕ್ಕೆ ಹೋಗುತ್ತೇನೆ.