ಬಸವರಾಜ ಪಾಟೀಲ ಕ್ಯಾತನಾಳ ಬಾರ್ ಅಂಡ್ ಬೆಂಚ್
ಸಂದರ್ಶನಗಳು

ಕಲ್ಯಾಣ ನಿಧಿಯನ್ನು ಖಾತರಿಯಾಗಿಟ್ಟುಕೊಂಡು ವಕೀಲರಿಗೆ ಬಡ್ಡಿರಹಿತ ಸಾಲ ನೀಡಬೇಕು: ಬಸವರಾಜ ಪಾಟೀಲ ಕ್ಯಾತನಾಳ

“ನಮ್ಮ ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರೂ ತಾಲ್ಲೂಕಿನ ರೀತಿಯಲ್ಲಿಯೇ ಇದೆ. ಬಹುತೇಕ ಹಿರಿಯ ವಕೀಲರಿಗೆ ಮೊಬೈಲ್ ಅಪರೇಟ್ ಮಾಡುವುದೇ ತಿಳಿದಿಲ್ಲ. ಇಲ್ಲಿನ ಶೇ.75ರಷ್ಟು ವಕೀಲರಿಗೆ ವಿಡಿಯೋ ಕಾನ್ಫರೆನ್ಸ್ ಮತ್ತು ವರ್ಚುವಲ್ ಕಲಾಪ ಹೊಸ ಅನುಭವ.”

Siddesh M S

ಅಭಿವೃದ್ಧಿ, ಆರೋಗ್ಯ, ಶಿಕ್ಷಣ, ಉದ್ಯೋಗ, ಮಾನವ ಸಂಪನ್ಮೂಲದ ಬಳಕೆ ಮತ್ತಿತರ ವಿಚಾರಗಳಲ್ಲಿ ಹೈದರಾಬಾದ್ ಕರ್ನಾಟಕದ ಜಿಲ್ಲೆಗಳು ಅತ್ಯಂತ ಹಿಂದುಳಿದಿವೆ ಎಂಬುದಕ್ಕೆ ಸರ್ಕಾರದ ಅಂಕಿಸಂಖ್ಯೆಗಳು ಸಾಕ್ಷಿ ಒದಗಿಸುತ್ತವೆ. ಹೈದರಾಬಾದ್ ಕರ್ನಾಟಕದ ಆರು ಜಿಲ್ಲೆಗಳ ಪೈಕಿ ಯಾದಗಿರಿ ಅತ್ಯಂತ ಹಿಂದುಳಿದ ಜಿಲ್ಲೆ. ಪರಿಸ್ಥಿತಿ ಸುಧಾರಿಸಿದ್ದ ಸಂದರ್ಭದಲ್ಲೇ ಮಲತಾಯಿ ಧೋರಣೆಗೆ ಒಳಗಾಗಿದ್ದ ಯಾದಗಿರಿಯ ಬಗ್ಗೆ ಈಗ ಮಾತನಾಡುವಂತೆಯೇ ಇಲ್ಲ. ಕೋವಿಡ್ ನಂತರದ ಬದುಕು ಇನ್ನಷ್ಟು ಕಠಿಣವಾಗಿದೆ. ಈ ಕರಾಳ ಪರಿಸ್ಥಿತಿಗೆ ಎಲ್ಲ ಸಮುದಾಯಗಳಂತೆ ಇಲ್ಲಿನ ವಕೀಲ ಸಮುದಾಯವೂ ತುತ್ತಾಗಿದೆ.

“ಭೌಗೋಳಿಕ ಮತ್ತು ಜನಸಂಖ್ಯೆಯ ದೃಷ್ಟಿಯಿಂದ ಯಾದಗಿರಿ ಪುಟ್ಟ ಜಿಲ್ಲೆಯಾದ್ದರಿಂದ ಕಕ್ಷಿದಾರರು ಕಡಿಮೆ, ಲಾಕ್‌ಡೌನ್ ಬಿಗಿ ಹಿಡಿತಗಳು ಬದುಕನ್ನು ಮತ್ತಷ್ಟು ಸಮಸ್ಯೆಗೆ ದೂಡಿವೆ. ಜೀವ-ಜೀವನದಲ್ಲಿ ಜೀವವನ್ನೇ ಆಯ್ಕೆ ಮಾಡಿಕೊಳ್ಳುವ ಸ್ಥಿತಿ ಇರುವಾಗ ಯಾರನ್ನು ತಾನೆ ದೂರುವುದು?” ಎನ್ನುತ್ತಾರೆ ಯಾದಗಿರಿ ಜಿಲ್ಲಾ ವಕೀಲರ ಸಂಘದ ಹಂಗಾಮಿ ಅಧ್ಯಕ್ಷ ಬಸವರಾಜ ಪಾಟೀಲ ಕ್ಯಾತನಾಳ. ಅವರ ಈ ಪ್ರಶ್ನೆಗೆ ಉತ್ತರ ಸುಲಭವಿಲ್ಲ. ಅಂದಹಾಗೆ, ಕೋವಿಡ್ ಪರಿಣಾಮ, ವರ್ಚುವಲ್ ಕಲಾಪ, ವಕೀಲರ ಸ್ಥಿತಿಗತಿ ಕುರಿತು ಬಸವರಾಜ ಪಾಟೀಲ ಅವರು “ಬಾರ್ ಅಂಡ್ ಬೆಂಚ್‌”ನೊಂದಿಗೆ ತಮ್ಮ ಮಾತುಗಳನ್ನು ಹಂಚಿಕೊಂಡಿದ್ದಾರೆ. ಹಿಂದುಳಿದ, ಪುಟ್ಟ ಜಿಲ್ಲಾ ಕೇಂದ್ರದ ವಕೀಲ ಸಮುದಾಯದ ಸುಖದುಃಖಗಳನ್ನು ತೆರೆದಿಡುವ ಅವರೊಂದಿಗಿನ ಮಾತುಕತೆ ನಿಮ್ಮ ಮುಂದೆ:

ಕೋವಿಡ್‌ ಬಿಕ್ಕಟ್ಟು ವಕೀಲರ ಸಮುದಾಯದ ಮೇಲೆ ಬೀರಿರುವ ಪರಿಣಾಮಗಳೇನು?

ಹಿರಿಯ ವಕೀಲರು ನ್ಯಾಯಾಲಯಕ್ಕೆ ಹಾಜರಾಗಬಾರದು ಎಂದು ಸೂಚಿಸಲಾಗಿದ್ದು, ತುರ್ತು ಪ್ರಕರಣಗಳಿದ್ದರೆ ವಿಡಿಯೋ ಕಾನ್ಫರೆನ್ಸ್ ಮೂಲಕ ವಿಚಾರಣೆಯಲ್ಲಿ ಪಾಳ್ಗೊಳ್ಳಬಹುದಾಗಿದೆ. ಕಳೆದ ಮಾರ್ಚ್‌ನಿಂದ ನ್ಯಾಯಾಲಯಗಳು ಬಂದ್ ಆಗಿರುವುದರಿಂದ ಕಕ್ಷಿದಾರರು ಗಣನೀಯವಾಗಿ ಕಡಿಮೆಯಾಗಿದ್ದಾರೆ. ಇದರಿಂದ ಇಡೀ ವಕೀಲರ ಸಮುದಾಯ ಆರ್ಥಿಕ ಸಮಸ್ಯೆಯ ಸುಳಿಯಲ್ಲಿ ಸಿಲುಕಿದೆ. ಸ್ವಾಭಿಮಾನ ಮತ್ತಿತರ ಕಾರಣಕ್ಕಾಗಿ ಬಹುತೇಕರು ಬಹಿರಂಗವಾಗಿ ಮಾತನಾಡುತ್ತಿಲ್ಲ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಜಿಲ್ಲಾ ವಕೀಲರ ಸಂಘ ಯಾವ ರೀತಿಯ ನೆರವು ನೀಡಿದೆ?

ವಕೀಲರಿಗೆ ತಲಾ ₹5 ಸಾವಿರ ಪರಿಹಾರ ನೀಡುವ ಯೋಜನೆಯನ್ನು ರಾಜ್ಯ ವಕೀಲರ ಪರಿಷತ್ತು ಜಾರಿಗೆ ತಂದಿತ್ತು. ಇದರ ಅನುಕೂಲ ಪಡೆಯುವಂತೆ ಎಲ್ಲರಿಗೂ ಮಾಹಿತಿ ರವಾನಿಸಿದ್ದೇವೆ. ನಮ್ಮ ನ್ಯಾಯವಾದಿಗಳ ಸಂಘದಲ್ಲಿ 285 ಸದಸ್ಯರಿದ್ದು, ಸುಮಾರು 50 ಮಂದಿಗೆ ಯೋಜನೆಯ ಲಾಭ ದೊರೆತಿದೆ. ಕೆಲವು ನಿರ್ಬಂಧಗಳ ಹಿನ್ನೆಲೆಯಲ್ಲಿ ಬಹುತೇಕರಿಗೆ ಯೋಜನೆಯ ಲಾಭ ದಕ್ಕಿಲ್ಲ. ಇನ್ನು ಕೋವಿಡ್‌ಗೆ ತುತ್ತಾದವರಿಗೆ ವಕೀಲರ ಕಲ್ಯಾಣ ನಿಧಿಯಿಂದ ₹50 ಸಾವಿರ ನೀಡಲಾಗುತ್ತದೆ. ಇದಕ್ಕೆ ಅರ್ಜಿ ಹಾಕುವಂತೆ ಮಾಹಿತಿ ಒದಗಿಸಿದ್ದೇವೆ.

ವರ್ಚುವಲ್‌ ಕಲಾಪಗಳಿಂದ ಆಗಿರುವ ಉಪಯೋಗ, ಸಮಸ್ಯೆಗಳೇನು? ಕಕ್ಷಿದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ?

ನಮ್ಮ ಯಾದಗಿರಿ ಜಿಲ್ಲಾ ಕೇಂದ್ರವಾಗಿದ್ದರೂ ತಾಲ್ಲೂಕಿನ ರೀತಿಯಲ್ಲಿಯೇ ಇದೆ. ಇಲ್ಲಿನ ಶೇ.75ರಷ್ಟು ವಕೀಲರಿಗೆ ವಿಡಿಯೋ ಕಾನ್ಫರೆನ್ಸ್ ಮತ್ತು ವರ್ಚುವಲ್ ಕಲಾಪ ಹೊಸ ಅನುಭವ. ಬಹುತೇಕ ಹಿರಿಯ ವಕೀಲರಿಗೆ ಮೊಬೈಲ್ ಅಪರೇಟ್ ಮಾಡುವುದೇ ತಿಳಿದಿಲ್ಲ. ಇದರರ್ಥ ಅವರು ದಡ್ಡರೆಂದಲ್ಲ, ತಂತ್ರಜ್ಞಾನಕ್ಕೆ ಅವರು ಒಗ್ಗಿಕೊಂಡಿಲ್ಲ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳಲು ಕಿರಿಯ ವಕೀಲರನ್ನು ಹಿರಿಯ ವಕೀಲರು ಕೋರಿಕೊಳ್ಳುತ್ತಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ನಲ್ಲಿ ಪಾಲ್ಗೊಳ್ಳುವಷ್ಟು ತಾಳ್ಮೆ ಹಿರಿಯ ವಕೀಲರಲ್ಲಿ ಉಳಿದಿಲ್ಲ. ಮಧ್ಯಾಂತರದಲ್ಲಿ ತಾಂತ್ರಿಕ ಸಮಸ್ಯೆಗಳಾದರೆ ಕಿರಿಕಿರಿಯಾಗುತ್ತದೆ. ಬಹಳಷ್ಟು ಸಂದರ್ಭದಲ್ಲಿ ಯಾರು ಏನು ಹೇಳುತ್ತಿದ್ದಾರೆ ಎಂಬುದೇ ತಿಳಿಯುವುದಿಲ್ಲ. ಗೌಪ್ಯತೆ, ಸಂಕೋಚ ಮತ್ತಿತರ ಮನೋವೈಜ್ಞಾನಿಕ ಕಾರಣಗಳಿಂದಾಗಿ ಕಕ್ಷಿದಾರರು ವರ್ಚುವಲ್ ಕಲಾಪದಲ್ಲಿ ಮುಕ್ತವಾಗಿ ಭಾಗವಹಿಸುವುದಿಲ್ಲ. ಒಟ್ಟಾರೆ ಹೇಳಬೇಕೆಂದರೆ ನಮ್ಮಲ್ಲಿ ಅತ್ಯಂತ ಕಡಿಮೆ ಸಂಖ್ಯೆಯ ವರ್ಚುವಲ್ ವಿಚಾರಣೆಗಳು ನಡೆದಿವೆ.

ಭೌತಿಕ ನ್ಯಾಯಾಲಯ ಯಾವಾಗ ಆರಂಭವಾಗಬಹುದು?

ಕೆಲವು ಕಡೆ ಅಕ್ಟೋಬರ್ 5ರಿಂದ ಮತ್ತು ಕೆಲವು ಕಡೆ ಅಕ್ಟೋಬರ್ 12ರಂದು ಭೌತಿಕ ನ್ಯಾಯಾಲಯಗಳು ಆರಂಭವಾಗಲಿವೆ ಎಂದು ಹೇಳಲಾಗಿದೆ. ನಮ್ಮಲ್ಲಿ ಅಕ್ಟೋಬರ್ 5ರಿಂದ ದಿನಕ್ಕೆ ಐದು ಸಾಕ್ಷಿಗಳನ್ನು ನುಡಿಯಲು ಮಾತ್ರ ಅವಕಾಶ ಕಲ್ಪಿಸಲಾಗುತ್ತದೆ ಎಂಬ ಮಾಹಿತಿ ಇದೆ. ಭೌತಿಕ ನ್ಯಾಯಾಲಯ ನಡೆಸುವ ಸಂಬಂಧ ಗುರುವಾರ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಯವರು ಬಹುತೇಕ ಎಲ್ಲಾ ಜಿಲ್ಲೆಗಳ ವಕೀಲರ ಸಂಘದ ಸದಸ್ಯರ ಜೊತೆ ವಿಡಿಯೋ ಕಾನ್ಫರೆನ್ಸ್ ಮೂಲಕ ಚರ್ಚಿಸಿದ್ದಾರೆ. ವಿಡಿಯೋ ಕಾನ್ಫರೆನ್ಸ್‌ ಆರಂಭವಾದ ಅರ್ಧಗಂಟೆಗೆ ನೆಟ್‌ವರ್ಕ್ ಸಮಸ್ಯೆಯಿಂದ ನಮ್ಮ ಯಾದಗಿರಿ ಸಂಪರ್ಕ ಕಡಿತವಾಯಿತು ಎಂದು ಸಭೆಯಲ್ಲಿ ಭಾಗವಹಿಸಿದ ವಕೀಲರು ಹೇಳಿದರು. ಬಳಿಕ ಸಂಪರ್ಕ ಸಾಧ್ಯವಾಗಲಿಲ್ಲವಂತೆ.

ವರ್ಚುವಲ್ ವಿಚಾರಣೆ ನಡೆಸಲು ರಾಜ್ಯದ ಕೆಳಹಂತದ ನ್ಯಾಯಾಲಯಗಳು ಎಷ್ಟರಮಟ್ಟಿಗೆ ಸಿದ್ಧವಾಗಿವೆ?

ನ್ಯಾಯಾಲಯದಲ್ಲಿ ವರ್ಚುವಲ್ ವಿಚಾರಣೆಗೆ ಅಗತ್ಯವಾದ ಎಲ್ಲಾ ತರಹದ ವ್ಯವಸ್ಥೆ ಇದೆ. ವಿಡಿಯೋ ಕಾನ್ಫೆರನ್ಸ್ ವಿಚಾರಣೆಯಲ್ಲಿ ಭಾಗವಹಿಸಲು ವಕೀಲರಾದ ನಾವುಗಳು ಸಿದ್ಧರಿಲ್ಲ. ನಮ್ಮಲ್ಲಿ ಬಹುತೇಕರಿಗೆ ಭೌತಿಕ ವಾದಸರಣಿಯಲ್ಲಿ ಆಸಕ್ತಿ ಹೆಚ್ಚು.

ಭವಿಷ್ಯದ ದಿನಗಳ ಕುರಿತಾಗಿ ವಕೀಲರ ವಲಯದಲ್ಲಿ ಇರುವ ಚರ್ಚೆಯೇನು? ಕೋವಿಡ್‌ಗೆ ತುತ್ತಾಗಿರುವ ವಕೀಲರ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬಹುದೇ?

ಎಲ್ಲರಲ್ಲೂ ಇರುವಂತೆ ವಕೀಲರಲ್ಲೂ ಅನಿಶ್ಚಿತತೆ, ಆತಂಕ ಸಹಜವಾಗಿದೆ. ಇದೆಲ್ಲಾ ಯಾವಾಗ ಮುಗಿಯುತ್ತದೆ ಎಂದು ದೇವರಿಗೆ ಮೊರೆ ಇಡುವಂತಾಗಿದೆ. ನಮ್ಮಲ್ಲಿ 7-8 ಮಂದಿ ವಕೀಲರಿಗೆ ಕೋವಿಡ್ ಬಂದಿದೆ. ವಕೀಲರ ಹಲವು ಸಂಬಂಧಿಗಳು ಕೋವಿಡ್‌ಗೆ ತುತ್ತಾಗಿದ್ದಾರೆ. ವಕೀಲರೊಬ್ಬರ ಪತ್ನಿ ಈಚಗೆ ಕೋವಿಡ್‌ಗೆ ಬಲಿಯಾಗಿದ್ದಾರೆ. ಮನೆ ಮಂದಿ, ನೆಂಟರಿಷ್ಟರು ರೋಗಕ್ಕೆ ತುತ್ತಾಗಿರುವುದರಿಂದ ಹಲವು ವಕೀಲರು ಮಾನಸಿಕವಾಗಿ ಘಾಸಿಗೊಂಡಿದ್ದಾರೆ.

ಸರ್ಕಾರ ಮತ್ತು ರಾಜ್ಯ ವಕೀಲರ ಪರಿಷತ್ತಿನಿಂದ ಯಾವ ತೆರನಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ?

ವಕೀಲರ ಸಮುದಾಯವು ಸುಶಿಕ್ಷಿತವಾಗಿದ್ದು, ಸ್ವಾಭಿಮಾನ ಅಡ್ಡಿಬರುವುದರಿಂದ ಸರ್ಕಾರದ ನೆರವನ್ನೂ ಮುಕ್ತವಾಗಿ ಕೇಳಲಾಗದು. ಹೀಗಾಗಿ ₹3-4 ಲಕ್ಷದವರೆಗೆ ಬಡ್ಡಿರಹಿತ ಸಾಲ ನೀಡಬೇಕು. ಇದನ್ನು ಮರುಪಾವತಿಸಲು 2-3 ವರ್ಷ ಅವಕಾಶ ನೀಡಬೇಕು. ಇದು ಸಾಧ್ಯವಾಗದಿದ್ದರೆ ಕಡಿಮೆ ಬಡ್ಡಿಗೆ ಸಾಲ ನೀಡಲು ವ್ಯವಸ್ಥೆ ಮಾಡಬೇಕು. ಇದಕ್ಕೆ ವಕೀಲರ ಕಲ್ಯಾಣ ನಿಧಿಯನ್ನು ಖಾತರಿಯನ್ನಾಗಿ ಮಾಡಿಕೊಳ್ಳಬಹುದು. ಈ ನಿಟ್ಟಿನಲ್ಲಿ ಕೆಲಸವಾಗುವಂತೆ ಮಾಡಲು ಸಂಬಂಧಪಟ್ಟವರ ಮೇಲೆ ರಾಜ್ಯ ವಕೀಲರ ಪರಿಷತ್ತು ಒತ್ತಡ ಹೇರಬೇಕು.

ಯಾದಗಿರಿ ಜಿಲ್ಲಾ ವಕೀಲರ ಸಂಘದ ನಿಮ್ಮ ಅಧ್ಯಕ್ಷ ಅವಧಿ ಜುಲೈ 1ಕ್ಕೆ ಮುಗಿದಿದೆ. ಪದಾಧಿಕಾರಿಗಳೇ ಇಲ್ಲದಿದ್ದಾಗ ಕೋವಿಡ್‌ನಿಂದ ಬಾಧಿತರಾದ ವಕೀಲರಿಗೆ ಜಿಲ್ಲಾ ಸಂಘವು ಯಾವ ರೀತಿ ಸ್ಪಂದಿಸಿದೆ?

ಎಸ್‌ಒಪಿ (ಪ್ರಮಾಣಿತ ಕಾರ್ಯಾಚರಣಾ ವಿಧಾನ) ನಿಯಮಾವಳಿಗಳ ಕಾರಣಕ್ಕೆ ಚುನಾವಣೆ ನಡೆಸಲಾಗಿರಲಿಲ್ಲ. ಈಗ ಅಕ್ಟೋಬರ್ 12ಕ್ಕೆ ಚುನಾವಣೆ ನಿಗದಿಯಾಗಿದೆ. ಇದರ ಹೊರತಾಗಿಯೂ ವಕೀಲರಿಗೆ ಎಲ್ಲ ರೀತಿಯ ಮಾಹಿತಿ ಒದಗಿಸುವುದು ಹಾಗೂ ಸಹಕಾರ ನೀಡುವ ಕೆಲಸವನ್ನು ಮಾಡಿದ್ದೇವೆ.