ಸಂದರ್ಶನಗಳು

ರಾಜಕಾರಣಿಗಳಿಗೆ ಒದಗಿಸುವಂತೆ ವಕೀಲರಿಗೂ ವೈದ್ಯಕೀಯ ಸೌಲಭ್ಯ ಒದಗಿಸಬೇಕು: ಗದಗ ವಕೀಲರ ಸಂಘದ ಅಧ್ಯಕ್ಷ ವಿ ಬಿ ಹುಬ್ಬಳ್ಳಿ

Ramesh DK

ವೀರಭದ್ರಪ್ಪ ಬಸಪ್ಪ ಹುಬ್ಬಳ್ಳಿ (ವಿ ಬಿ ಹುಬ್ಬಳ್ಳಿ) ಅವರು ಕಳೆದ ಇಪ್ಪತ್ತು ವರ್ಷಗಳಿಂದ ವಕೀಲಿಕೆಯಲ್ಲಿ ತೊಡಗಿದ್ದಾರೆ. ಗದಗ ಜಿಲ್ಲೆ ಅವರ ಕರ್ಮಭೂಮಿ. ಕಾನೂನು ಅಧ್ಯಯನ ಮಾಡಿದ್ದು ನಗರದ ಎಸ್‌ ಎ ಮಾನ್ವಿ ಕಾನೂನು ಕಾಲೇಜಿನಲ್ಲಿ. ಕ್ರಿಮಿನಲ್‌ ಪ್ರಕರಣಗಳನ್ನು ಹೆಚ್ಚು ನಿಭಾಯಿಸಿದ ಅನುಭವ ಇರುವ ಅವರು ಶಿಕ್ಷಣ ತಜ್ಞರು ಕೂಡ. ಗುರಮ್ಮ ನರ್ಸಿಂಗ್‌ ಕಾಲೇಜು, ವಿಶ್ವೇಶ್ವರಯ್ಯ ಐಟಿಐ ಕಾಲೇಜು, ಫಾರ್ಮಸಿ ಡಿಪ್ಲೊಮಾ ಕಾಲೇಜುಗಳನ್ನು ಇವರು ನಡೆಸುತ್ತಿದ್ದಾರೆ. ಎರಡು ಬಾರಿ ಗದಗ ವಕೀಲರ ಸಂಘದ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸಿದ್ದಾರೆ.

ಕೋವಿಡ್‌ ಸ್ಥಿತಿಯನ್ನು ಗದಗ ಜಿಲ್ಲೆಯ ವಕೀಲರು ಎದುರಿಸಿದ ಬಗೆ ಹೇಗೆ ಎಂಬುದನ್ನು ಅವರು ʼಬಾರ್‌ ಅಂಡ್‌ ಬೆಂಚ್‌ʼ ಜೊತೆ ಚರ್ಚಿಸಿದ್ದಾರೆ. ವಕೀಲರಿಗೆ ಅಗತ್ಯವಾದ ವೈದ್ಯಕೀಯ ನೆರವು, ಅವರನ್ನು ಆರ್ಥಿಕವಾಗಿ ಬಲಪಡಿಸಬೇಕಾದ ಅಂಶಗಳು, ಸರ್ಕಾರ ಹಾಗೂ ಕರ್ನಾಟಕ ರಾಜ್ಯ ವಕೀಲರ ಪರಿಷತ್ತು ನಿರ್ವಹಿಸಬೇಕಾದ ಕರ್ತವ್ಯ ಇತ್ಯಾದಿ ವಿಚಾರಗಳ ಕುರಿತಂತೆ ಅವರು ಮಾತನಾಡಿದ್ದಾರೆ. ಕೋವಿಡ್‌ ರೀತಿಯ ಆಕಸ್ಮಿಕಗಳನ್ನು ಎದುರಿಸಲು ವಕೀಲ ಸಂಘಗಳು ಬೇರೆಯದೇ ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯವಿದೆ ಎಂಬುದು ಅವರ ಮುಖ್ಯ ನಿಲುವು.

ಕೋವಿಡ್‌ ನಂತರದಲ್ಲಿ ಗದಗ ಜಿಲ್ಲೆಯ ವಕೀಲರು ಅನುಭವಿಸಿದ ಕಷ್ಟಗಳು ಏನೇನು?

ನಮ್ಮಲ್ಲಿರುವ ವಕೀಲರ ಸಂಖ್ಯೆ 350. ಅದರಲ್ಲಿ ಪ್ರಾಕ್ಟೀಸ್‌ ಮಾಡುತ್ತಿರುವ ವಕೀಲರ ಸಂಖ್ಯೆ ಸುಮಾರು 100ರಷ್ಟಿದೆ. ಇವರಲ್ಲಿ ಸುಮಾರು ಐವತ್ತು ಮಂದಿಯ ಜೀವನಕ್ಕೆ ಕೋವಿಡ್‌ ತೀವ್ರ ತೊಂದರೆ ಉಂಟು ಮಾಡಿದೆ ಎನ್ನಬಹುದು. ಕಿರಿಯ ವಕೀಲರು ಹಾಗೂ ನೋಟರಿಯನ್ನೇ ನೆಚ್ಚಿಕೊಂಡಿದ್ದವರು ಬಹಳ ಕಷ್ಟಪಟ್ಟರು. ಆಗಷ್ಟೇ ಲಗ್ನ ಆದವರು, ಬಾಡಿಗೆ ಮನೆಯಲ್ಲಿದ್ದುಕೊಂಡು ಸಂಸಾರ ನಿಭಾಯಿಸಬೇಕಾದವರು ಅನುಭವಿಸಿದ ತೊಂದರೆ ಅಷ್ಟಿಷ್ಟಲ್ಲ. ಕೊರೊನಾದಿಂದಾಗಿ ಪ್ರಾಕ್ಟೀಸ್‌ ಮಾಡಲಾಗದೇ ಇದುವರೆಗೆ ಸುಮಾರು ಇಪ್ಪತ್ತೈದು ಮಂದಿ ವಕೀಲರು ವೃತ್ತಿ ತೊರೆದಿದ್ದಾರೆ.

ಜಿಲ್ಲೆಯಲ್ಲಿ ಈ ಜಡ್ಡು (ಕೋವಿಡ್‌) ವಕೀಲರ ಜೀವಕ್ಕೂ ತೊಂದರೆ ಕೊಟ್ಟಿದೆ. ಸಾಂಕ್ರಾಮಿಕದಿಂದಾಗಿ ಇಬ್ಬರು ವಕೀಲರು ಅಸುನೀಗಿದ್ದಾರೆ. ಒಬ್ಬರ ಪಾರ್ಥಿವ ಶರೀರ ನೋಡಲು ಕೂಡ ಅವಕಾಶ ಸಿಗದಂತೆ ಅಂತ್ಯಸಂಸ್ಕಾರ ನಡೆಸಲಾಯಿತು. ಇತ್ತ ದವಾಖಾನೆಗಳು ಪರಿಸ್ಥಿತಿಯ ಲಾಭ ಪಡೆದು ಶುಲ್ಕ ಹೆಚ್ಚಿಸಿದವು. ಎಲ್ಲಾ ವಕೀಲರೂ ಲಕ್ಷಗಟ್ಟಲೆ ಹಣ ಖರ್ಚು ಮಾಡುವಷ್ಟು ಸ್ಥಿತಿವಂತರಿರುವುದಿಲ್ಲ.

ಸರ್ಕಾರ ವಕೀಲರಿಗಾಗಿ ಪರಿಹಾರಧನ ಘೋಷಿಸಿತ್ತು ಅಲ್ಲವೇ?

ಸರ್ಕಾರ ಘೋಷಿಸಿದ ಐದು ಸಾವಿರ ರೂಪಾಯಿ ಹಣ ಕರ್ನಾಟಕ ರಾಜ್ಯ ವಕೀಲರ ಪರಿಷತ್ತಿನ ಮೂಲಕ ತಲುಪಿದೆ. ಆದರೆ ಕೆಲ ಪ್ರಕರಣಗಳನ್ನು ಗಮನಿಸಿದರೆ ಸ್ಥಿತಿವಂತರಿಗೆ ಧನಸಹಾಯ ದೊರೆತಿದೆ. ನಿಜಕ್ಕೂ ಪರಿಹಾರ ದೊರೆಯಬೇಕಿದ್ದವರು ಇನ್ನೂ ಅದರ ನಿರೀಕ್ಷೆಯಲ್ಲಿ ಕಾಲ ತಳ್ಳುತ್ತಿದ್ದಾರೆ. ಒಂದು ಉದಾಹರಣೆ ಹೇಳುವುದಾದರೆ ಸಂಬಂಧಪಟ್ವವರಿಗೆ ಮೂರು ಬಾರಿ ಮನವಿ ಸಲ್ಲಿಸಿದ್ದರೂ ಪರಿಹಾರ ದೊರೆಯುವಲ್ಲಿ ವಿಳಂಬವಾಗಿದೆ.

ಇದಕ್ಕೆ ಪರಿಹಾರ ಏನು?

ಕೆಎಸ್‌ಬಿಸಿಯಾಗಲೀ ಅಥವಾ ಸಂಬಂಧಪಟ್ಟ ಯಾರೇ ಆಗಲಿ ವಕೀಲರ ಸ್ಥಿತಿಗತಿ ಏನು ಎಂಬುದನ್ನು ತಿಳಿಯಲು ಇಂತಿಷ್ಟು ಜಿಲ್ಲೆಯ ವಕೀಲರ ಕಷ್ಟ- ಸುಖಗಳನ್ನು ಆಲಿಸುವ ಹೊಣೆಗಾರಿಕೆಯನ್ನು ಪರಿಷತ್ತಿನ ಇಂತಿಷ್ಟು ಸದಸ್ಯರಿಗೆ ವಹಿಸಬೇಕು. ಆಗ ಸಮಸ್ಯೆಗಳಿಗೆ ಸುಲಭವಾಗಿ ಉತ್ತರ ಕಂಡುಕೊಳ್ಳಬಹುದು. ಅನೇಕ ಸಮಸ್ಯೆಗಳನ್ನು ಬಹಿರಂಗವಾಗಿ ಹೇಳಿಕೊಳ್ಳಲು ಆಗುವುದಿಲ್ಲ. ಅಂತಹವುಗಳನ್ನು ಪರಿಹರಿಸಲು ಈ ವಿಧಾನದಿಂದ ಅನುಕೂಲವಾಗುತ್ತದೆ.

ಅಂತಹ ಕೆಲಸ ಈವರೆಗೂ ಆಗಿಲ್ಲ ಏಕೆ?

ಚುನಾವಣೆ ಸಂದರ್ಭ ಬಂದಾಗ ಮಾತ್ರ ಪರಿಷತ್ತಿನ ಸದಸ್ಯರು ವಕೀಲರ ಬಳಿಗೆ ಬರುತ್ತಾರೆ. ಕನಿಷ್ಠ ಮೂರು ನಾಲ್ಕು ತಿಂಗಳಿಗೊಮ್ಮೆಯಾದರೂ ವಕೀಲರ ಸ್ಥಿತಿಗಳ ಬಗ್ಗೆ ಪರಿಷತ್ತು ವಿವರ ಸಂಗ್ರಹಿಸಬೇಕು. ಇದರಿಂದ ಪರಿಷತ್‌ ಸದಸ್ಯರ ವರ್ಚಸ್ಸು ಹೆಚ್ಚುತ್ತದೆ. ಇನ್ನಾದರೂ ಈ ನಿಟ್ಟಿನಲ್ಲಿ ಯೋಚಿಸಬೇಕಾದ ಅಗತ್ಯ ಇದೆ.

ಸರ್ಕಾರದಿಂದ ನೀವು ಏನನ್ನು ನಿರೀಕ್ಷಿಸುತ್ತೀರಿ?

ನ್ಯಾಯಾಲಯದ ಆವರಣದಲ್ಲಿಯೇ ಆರೋಗ್ಯ ಕೇಂದ್ರವೊಂದನ್ನು ಖಾಯಂ ಆಗಿ ಸ್ಥಾಪಿಸುವುದು ಒಳಿತು. ಕನಿಷ್ಠ ಜಿಲ್ಲಾ ನ್ಯಾಯಾಲಯಗಳಲ್ಲಿ ಹೀಗೆ ಮಾಡಿದರೂ ವಕೀಲರಿಗೆ ಅನೇಕ ಬಗೆಯಲ್ಲಿ ಅನುಕೂಲ ಸಿಗುತ್ತದೆ.

ರಾಜಕಾರಣಿಗಳು ಪಗಾರ ಪಡೆಯುತ್ತಾರೆ. ಅವರಿಗೆ ವೈದ್ಯಕೀಯ ಸೇವೆ ಉಚಿತವಾಗಿ ದೊರೆಯುತ್ತದೆ. ಪಗಾರವೇ ಇಲ್ಲದೆ ವೃತ್ತಿ ಗೌರವವನ್ನೂ ಕಾಪಾಡಿಕೊಂಡು ಕೆಲಸ ಮಾಡುವ ವಕೀಲರಿಗೆ ಅದೇ ರೀತಿಯ ಅನುಕೂಲ ಕಲ್ಪಿಸಬೇಕು. ಕೆಲ ವಕೀಲರು ವಯೋವೃದ್ಧರಿದ್ದು ಆರೋಗ್ಯ ಸಮಸ್ಯೆಗಳನ್ನು ಎದುರಿಸುತ್ತಿರುತ್ತಾರೆ. ಅಂತಹವರಿಗೆ ಕನಿಷ್ಠ ಪಕ್ಷ ಅರ್ಧ ಬೆಲೆಗಾದರೂ ಔಷಧಗಳು ದೊರೆಯುವಂತಾಗಬೇಕು.

ಕೋವಿಡ್‌ ಪರಿಸ್ಥಿತಿ ಎದುರಿಸಲು ಗದಗ ವಕೀಲರ ಸಂಘ ಕೈಗೊಂಡ ಕ್ರಮಗಳು ಯಾವುವು?

ಕೈಲಾದಷ್ಟು ಹಣವನ್ನು ನಾವು ಕೊಟ್ಟಿದ್ದೇವೆ. ಆಹಾರ ವಿತರಣೆ, ಮಾಸ್ಕ್‌, ಸ್ಯಾನಿಟೈಸರ್‌ ರೀತಿಯ ಸಾಮಗ್ರಿಗಳನ್ನು ಪೂರೈಸಿದ್ದೇವೆ. ಸಂಘಕ್ಕೆ ದಾನಿಗಳ ಕೊರತೆ ಇದೆ. ಕೆಲವೊಮ್ಮೆ ನಮ್ಮ ಜೇಬಿನಿಂದಲೇ ಹೆಚ್ಚು ಹಣ ಖರ್ಚು ಮಾಡಿದ್ದಿದೆ. ಕೆಎಸ್‌ಬಿಸಿ ಧನಸಹಾಯ ಮಾಡುತ್ತದೆ. ಆದರೆ ಅದು ಸಾಲುವುದಿಲ್ಲ. ಸಂಘದ ಸಿಬ್ಬಂದಿ ವರ್ಗದ ವೇತನ ಸರಿದೂಗಿಸಲು ಸಾಕಷ್ಟು ಹಣ ಬೇಕಾಗುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಕೋವಿಡ್‌ ರೀತಿಯ ಆಕಸ್ಮಿಕಗಳನ್ನು ಎದುರಿಸಲು ಬೇರೆಯದೇ ಪರಿಹಾರೋಪಾಯ ಕಂಡುಕೊಳ್ಳುವ ಅಗತ್ಯ ವಕೀಲರ ಸಂಘಗಳಿಗೆ ಇದೆ.

ಪ್ರಮಾಣಿತ ಕಾರ್ಯಾಚರಣಾ ವಿಧಾನ ಬೀರಿದ ಪರಿಣಾಮಗಳು ಏನು?

ಹೈಕೋರ್ಟ್‌, ಸುಪ್ರೀಂಕೋರ್ಟ್‌ಗಳಿಂದ ಬಂದ ಮಾರ್ಗಸೂಚಿಗಳು ಸಾಕಷ್ಟು ಅನುಕೂಲಗಳನ್ನು ಮಾಡಿಕೊಟ್ಟಿವೆ. ನ್ಯಾಯಾಲಯದ ಕಲಾಪಗಳು ವ್ಯವಸ್ಥಿತವಾಗಿ ನಡೆಯಲು ಇದರಿಂದ ಅನುಕೂಲವಾಗಿದೆ.