Lawyers protest in Bangalore  Bar and Bench
ಸಂದರ್ಶನಗಳು

ಆತ್ಮಹತ್ಯೆಗೆ ಶರಣಾಗಿರುವುದು, ಕುಲಕಸುಬುಗಳಿಗೆ ಮರಳಿರುವುದು ವಕೀಲರ ಸಮಸ್ಯೆಗಳ ಗಂಭೀರತೆಗೆ ಸಾಕ್ಷಿ: ಉಮೇಶ್

"ಶೇ. 60ರಷ್ಟು ಮಂದಿ ವಕೀಲಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಮೊದಲ ತಲೆಮಾರಿನ ವಕೀಲರಾಗಿದ್ದಾರೆ. ಅವರ ಬೆನ್ನಿಗೆ ಯಾವುದೇ ಆಧಾರವಾಗಲಿ ಅಥವಾ ಕೈಹಿಡಿದು ನಡೆಸುವ ಗುರುಗಳಾಗಲಿ ಇಲ್ಲ."

Siddesh M S

“ಕುಟುಂಬದ ಖರ್ಚು-ವೆಚ್ಚಗಳನ್ನು ಭರಿಸಲಾಗದೆ ಯುವ ವಕೀಲರೊಬ್ಬರು ಇತ್ತೀಚೆಗೆ ಆತ್ಮಹತ್ಯೆಗೆ ಶರಣಾಗಿದ್ದಾರೆ. ವಕೀಲಿಕೆ ನಂಬಿ ಜೀವನ ನಡೆಸುವುದು ಕಷ್ಟವಾಗಿ ಮತ್ತೊಬ್ಬ ಯುವ ವಕೀಲ ತಮ್ಮ ಕುಲಕಸುಬಾದ ಕ್ಷೌರಿಕ ವೃತ್ತಿಗೆ ಮರಳಿದ್ದಾರೆ. ಹಿರಿಯ ವಕೀಲರು ಕಕ್ಷಿದಾರರಿಲ್ಲದೆ ಕೊರಗುತ್ತಿದ್ದಾರೆ. ಕನಿಷ್ಠ ಪಕ್ಷ ಭೌತಿಕ ನ್ಯಾಯಾಲಯ ಆರಂಭವಾಗಿದ್ದರೆ ಇಷ್ಟು ಸಮಸ್ಯೆಯಾಗುತ್ತಿರಲಿಲ್ಲ” ಎಂಬುದು ಐದು ವರ್ಷಗಳ ಕಾನೂನು ಅಧ್ಯಯನ ವಕೀಲರ ಸಂಘದ ಅಧ್ಯಕ್ಷ ಡಾ. ಎಸ್ ಉಮೇಶ್ ಅವರ ಅಭಿಪ್ರಾಯ.

ಭೌತಿಕ ನ್ಯಾಯಾಲಯ ಆರಂಭಿಸಬೇಕು ಎಂದು ಆಗ್ರಹಿಸಿ ಉಮೇಶ್ ಅವರು ಈಚೆಗೆ (ಅಕ್ಟೋಬರ್ 6ರಂದು) ಬೆಂಗಳೂರಿನ ನಗರ ಸಿವಿಲ್ ನ್ಯಾಯಾಲಯದ ಮುಂದೆ ಹಲವು ಸಹ ವಕೀಲರ ಜೊತೆಗೂಡಿ ಪಕೋಡ, ತರಕಾರಿ ಮಾರಾಟ ಮಾಡುವ ಮೂಲಕ ಕೋವಿಡ್‌ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ವಕೀಲರು ಅನುಭವಿಸುತ್ತಿರುವ ಬವಣೆಯನ್ನು ಬಿಂಬಿಸುವ ಪ್ರತಿಭಟನೆ ನಡೆಸಿದ್ದರು. "ವಕೀಲರ ಸಮಸ್ಯೆಗಳನ್ನು ಸಂಬಂಧಪಟ್ಟವರಿಗೆ ತಲುಪಿಸುವ ಉದ್ದೇಶದಿಂದ, ಹಿಂದೊಮ್ಮೆ ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ಹೇಳಿದಂತೆ ಪಕೋಡ ಮಾರಾಟ ಮಾಡುವ ಮೂಲಕ ಧರಣಿ ನಡೆಸಬೇಕಾಯಿತು" ಎನ್ನುವ ಉಮೇಶ್ ಅವರು ಲಾಕ್‌ಡೌನ್ ಅವಧಿಯಲ್ಲಿ ವಕೀಲರು ಸೇರಿದಂತೆ ಹಲವರಿಗೆ ತಮ್ಮ ಕೈಲಾದಷ್ಟರ ಮಟ್ಟಿಗೆ ಸಹಾಯ ಮಾಡಿದ್ದಾರೆ. ಪರಿಸ್ಥಿತಿ ಗಂಭೀರವಾಗುತ್ತಿದೆ ಎಂದು ಅರಿತು ಪ್ರತಿಭಟನೆಯ ಹಾದಿಯನ್ನೂ ಉಮೇಶ್ ಹಾಗೂ ಅವರ ಸಹ ವಕೀಲರು ಹಿಡಿದರು. ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ ಬೆಂಗಳೂರಿನಂತಹ ನಗರದಲ್ಲಿ ವಕೀಲ ಸಮುದಾಯ ಎದುರಿಸುತ್ತಿರುವ ಬವಣೆಗಳನ್ನು ಉಮೇಶ್‌ ಅವರು ಬಾರ್ ಅಂಡ್ ಬೆಂಚ್ ಜೊತೆ ಹಂಚಿಕೊಂಡಿದ್ದಾರೆ:

ಕೋವಿಡ್‌ ಬಿಕ್ಕಟ್ಟು ವಕೀಲರ ಸಮುದಾಯದ ಮೇಲೆ ಬೀರಿರುವ ಪರಿಣಾಮಗಳೇನು?

ಕರ್ನಾಟಕದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದಾರೆ. ಕೊರೊನಾ ಹಿನ್ನೆಲೆಯಲ್ಲಿ ಕಳೆದ ಎಂಟು ತಿಂಗಳಿಂದ ದೇಶದ ಯಾವುದೇ ನ್ಯಾಯಾಲಯದಲ್ಲಿ ಭೌತಿಕ ಕಲಾಪ ನಡೆಯುತ್ತಿಲ್ಲ. ನಮ್ಮಲ್ಲಿರುವ ಅಂದಾಜು ಶೇ. 40ರಷ್ಟು ವಕೀಲರು ಅನುಕೂಲಕರ ಸ್ಥಿತಿಯಲ್ಲಿದ್ದಾರೆ. ಇವರಲ್ಲಿ ಸರ್ಕಾರಿ ಅಧಿಕಾರಿಗಳು, ಉದ್ಯಮಿಗಳ ಮಕ್ಕಳು, ರಿಯಲ್ ಎಸ್ಟೇಟ್ ಉದ್ಯಮದಲ್ಲಿ ತೊಡಗಿರುವವರು ಇದ್ದಾರೆ. ಇವರಿಗೆ ವಕೀಲಿಕೆಗಿಂತ ತಾವು ಹಾಗೂ ತಮ್ಮ ಕುಟುಂಬಸ್ಥರು ಮಾಡಿಟ್ಟಿರುವ ಆಸ್ತಿ ಕಾಪಾಡಿಕೊಳ್ಳುವುದು ಮುಖ್ಯವಾಗಿದೆ. ಹಲವರಿಗೆ ಉದ್ಯೋಗ ನೆಪಮಾತ್ರವಾಗಿದ್ದು, ಉದ್ಯೋಗದ ಘನತೆ ಸಾಕಾಗಿದೆ. ಸ್ಥಿತಿವಂತ ಕುಟುಂಬಗಳಿಂದ ಬಂದ ವಕೀಲರಿಗೆ ಕೋವಿಡ್‌ನಿಂದ ಯಾವುದೇ ಸಮಸ್ಯೆಯಾಗಿಲ್ಲ.

ಉಳಿದ ಶೇ. 60ರಷ್ಟು ಮಂದಿ ವಕೀಲಿಕೆಯನ್ನೇ ನಂಬಿಕೊಂಡು ಜೀವನ ಸಾಗಿಸುತ್ತಿದ್ದಾರೆ. ಈ ಪೈಕಿ ಬಹುತೇಕರು ಮೊದಲ ತಲೆಮಾರಿನ ವಕೀಲರಾಗಿದ್ದಾರೆ. ಅವರ ಬೆನ್ನಿಗೆ ಯಾವುದೇ ಆಧಾರವಾಗಲಿ ಅಥವಾ ಕೈಹಿಡಿದು ನಡೆಸುವ ಗುರುಗಳಾಗಲಿ ಇಲ್ಲ. ಗ್ರಾಮೀಣ ಪ್ರದೇಶದಲ್ಲಿ ಎಷ್ಟೋ ಮಂದಿ ಶೋಷಣೆಗೆ ಒಳಗಾಗಿ ಅದನ್ನು ಮೆಟ್ಟಿ ನಿಲ್ಲಲು ವಕೀಲರಾಗಿರುತ್ತಾರೆ. ಈಗ ಪರಿಸ್ಥಿತಿ ಹದಗೆಟ್ಟಿರುವುದರಿಂದ ಜೀವನ ನಡೆಸುವುದೇ ದುರ್ಲಭವಾಗಿದ್ದು, ಘನತೆಯ ದೃಷ್ಟಿಯಿಂದ ಬಹುತೇಕರು ಮರಳಿ ಊರುಗಳಿಗೆ ತೆರಳುವ ಸ್ಥಿತಿಯಲ್ಲಿಲ್ಲ. ಆದಾಯವೇ ಇಲ್ಲದಿರುವುದರಿಂದ ಹಲವರಿಗೆ ಜೀವನ ನಡೆಸುವುದು ಅತ್ಯಂತ ಕಷ್ಟವಾಗಿದೆ. ವಕೀಲರಿಗೆ ಸಾಲ-ಸೌಲಭ್ಯ ದೊರೆಯುತ್ತಿಲ್ಲ. ಮನೆ ಬಾಡಿಗೆ ಕಟ್ಟಲಾಗುತ್ತಿಲ್ಲ. ಇದರಿಂದ ಸಾಕಷ್ಟು ಮಂದಿ ಮಾನಸಿಕವಾಗಿ ಕುಗ್ಗಿ ಹೋಗಿದ್ದಾರೆ.

ನನಗೆ ತಿಳಿದಿರುವ ಅನೇಕರು ಕೃಷಿಗೆ ಮರಳಿದ್ದಾರೆ. ನನ್ನ ಸಂಪರ್ಕದಲ್ಲಿದ್ದ ಸವಿತಾ ಸಮಾಜದ ಯುವ ವಕೀಲರೊಬ್ಬರು ಕುಲಕಸುಬಿಗೆ ಮರಳಿದ್ದಾರೆ. ಇತ್ತೀಚೆಗೆ ಯಾರೋ ಅವರನ್ನು ಹಂಗಿಸಿದರು ಎಂದು ತಮ್ಮ ಸ್ಥಳ ಬದಲಾಯಿಸಿದರು. ಇಂತಹ ನೋವುಗಳು, ಅವಮಾನಗಳು ಅಸಂಖ್ಯ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೆ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಜಿಲ್ಲಾ ವಕೀಲರ ಸಂಘ ಯಾವ ರೀತಿಯ ನೆರವು ನೀಡಿದೆ?

ರಾಜ್ಯ ಸರ್ಕಾರ ₹5 ಕೋಟಿ ನೀಡಿದೆ. ರಾಜ್ಯದಲ್ಲಿ ಒಂದು ಲಕ್ಷಕ್ಕೂ ಅಧಿಕ ವಕೀಲರಿದ್ದು, ಐದು ಕೋಟಿ ರೂಪಾಯಿಯನ್ನು ವಿಭಾಗಿಸಿದರೆ ಒಬ್ಬರಿಗೆ ₹250 ಕೂಡ ಸಿಗುವುದಿಲ್ಲ. ಬೆಂಗಳೂರು ನಗರದಲ್ಲಿ 150 ಮಂದಿಗೆ ಮಾತ್ರ ತಲಾ ₹5 ಸಾವಿರ ಹಂಚಿಕೆ ಮಾಡಲಾಗಿದೆ. ಎಂಟು ತಿಂಗಳಿಂದ ಅತಂತ್ರ ಸ್ಥಿತಿ ಎದುರಿಸುತ್ತಿರುವ ವಕೀಲರ ಸಮುದಾಯಕ್ಕೆ ಇಷ್ಟು ಸಾಕೇ?

ವರ್ಚುವಲ್‌ ಕಲಾಪಗಳಿಂದ ಆಗಿರುವ ಉಪಯೋಗ, ಸಮಸ್ಯೆಗಳೇನು? ಕಕ್ಷಿದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ?

ಸಾಕಷ್ಟು ಮಂದಿಗೆ ವಿಡಿಯೋ ಕಾನ್ಫರೆನ್ಸ್ ನಲ್ಲಿ ಭಾಗವಹಿಸಲು ಅಗತ್ಯವಾದ ವ್ಯವಸ್ಥೆ ಇಲ್ಲ. ಉದಾಹರಣೆಗೆ ಮೊಬೈಲ್ ಅಥವಾ ಕಂಪ್ಯೂಟರ್, ಇಂಟರ್ನೆಟ್ ಸಂಪರ್ಕ ಇರುವುದಿಲ್ಲ. ಹಲವು ಹಿರಿಯ ವಕೀಲರಿಗೆ ಆಧುನಿಕ ತಂತ್ರಜ್ಞಾನದ ಬಗ್ಗೆ ಹೆಚ್ಚಿನ ತಿಳಿವಳಿಕೆ ಇಲ್ಲ. ಆದಾಯದ ಮೂಲಕ್ಕೆ ಹೊಡೆತ ಬಿದ್ದಿರುವುದರಿಂದ ಮಾನಸಿಕ ಕ್ಷೋಭೆ ಉಂಟಾಗಿದ್ದು, ವರ್ಚುವಲ್ ಕಲಾಪದಲ್ಲಿ ಭಾಗವಹಿಸುವ ಸ್ಥಿತಿಯಲ್ಲಿ ಸಾಕಷ್ಟು ವಕೀಲರು ಇಲ್ಲ. ಇನ್ನು ಕಕ್ಷಿದಾರರು ವಕೀಲರ ಬಳಿಗೆ ಬರುತ್ತಲೇ ಇಲ್ಲ. ಹೀಗಿರುವಾಗ ಯಾವ ಸಮಸ್ಯೆ ಹೇಳುವುದು?

ಭೌತಿಕ ನ್ಯಾಯಾಲಯ ಯಾವಾಗ ಆರಂಭವಾಗಬಹುದು?

ಹೈಕೋರ್ಟ್ ಮತ್ತು ನಗರ ಸಿವಿಲ್ ನ್ಯಾಯಾಲಯದಲ್ಲಿ ಸೋಮವಾರದಿಂದ ಭೌತಿಕ ವಿಚಾರಣೆ ಆರಂಭವಾಗಲಿದೆ ಎಂಬ ಮಾಹಿತಿ ಇದೆ. ಎರಡೂ ನ್ಯಾಯಾಲಯಗಳಲ್ಲಿ ಬೆಳಿಗ್ಗೆ ಮತ್ತು ಮಧ್ಯಾಹ್ನ ತಲಾ 15 ಪ್ರಕರಣಗಳ ವಿಚಾರಣೆ ನಡೆಸಲಾಗುತ್ತದೆ ಎಂದು ಹೇಳಲಾಗುತ್ತಿದೆ. ಕಕ್ಷಿದಾರರಿಗೆ ವಿಚಾರಣೆಯಲ್ಲಿ ಭಾಗವಹಿಸಲು ಅವಕಾಶವಿಲ್ಲ. ನ್ಯಾಯಾಲಯದ ಒಂದು ಕೊಠಡಿಯಲ್ಲಿ ಐವರು ವಕೀಲರು ಮಾತ್ರ ಭಾಗವಹಿಸಬಹುದು ಎಂದು ಹೇಳಲಾಗುತ್ತಿದೆ. ಮಾಸ್ಕ್‌, ಗ್ಲೌಸ್, ಸ್ಯಾನಿಟೈಸರ್ ಬಳಕೆ ಕಡ್ಡಾಯಗೊಳಿಸಲಾಗಿದೆ. ಕಕ್ಷಿದಾರರು ವಿಚಾರಣೆಯಲ್ಲಿ ಪಾಲ್ಗೊಳ್ಳುವುದಕ್ಕೆ ನಿರ್ಬಂಧ ವಿಧಿಸಿರುವುದರಿಂದ ಸಹಜವಾಗಿ ಅವರಿಗೆ ಅನುಮಾನ ಮೂಡುತ್ತದೆ. ಇದು ವಕೀಲರು-ಕಕ್ಷಿದಾರರ ನಡುವೆ ಅಪನಂಬಿಕೆಗೆ ಕಾರಣವಾಗುವ ಸಾಧ್ಯತೆ ಇದೆ.

ವರ್ಚುವಲ್ ವಿಚಾರಣೆ ನಡೆಸಲು ರಾಜ್ಯದ ನ್ಯಾಯಾಲಯಗಳು ಎಷ್ಟರಮಟ್ಟಿಗೆ ಸಿದ್ಧವಾಗಿವೆ?

ವರ್ಚುವಲ್ ವಿಚಾರಣೆಗೆ ನಗರ ಪ್ರದೇಶಗಳ ನ್ಯಾಯಾಲಯದಲ್ಲಿ ಅಷ್ಟಾಗಿ ಸಮಸ್ಯೆಯಾಗುತ್ತದೆ ಎನಿಸುವುದಿಲ್ಲ. ಆದರೆ, ಇದೇ ಮಾತನ್ನು ತಾಲ್ಲೂಕು ಹಾಗೂ ಜಿಲ್ಲಾ ಮಟ್ಟದ ನ್ಯಾಯಾಲಯಗಳಿಗೆ ಅನ್ವಯಿಸಿ ಹೇಳಲಾಗದು. ನಗರ ಮತ್ತು ಗ್ರಾಮೀಣ ಪ್ರದೇಶದಲ್ಲಿನ ನ್ಯಾಯಾಲಯದ ಸಮಸ್ಯೆಗಳಿಗೆ ತಾಳಮೇಳವೇ ಇಲ್ಲ.

ಭವಿಷ್ಯದ ದಿನಗಳ ಕುರಿತಾಗಿ ವಕೀಲರ ವಲಯದಲ್ಲಿ ಇರುವ ಚರ್ಚೆಯೇನು?

ಮರ್ಯಾದೆ ಪ್ರಶ್ನೆಯಿಂದಾಗಿ ಸಾಕಷ್ಟು ವಕೀಲರು ಬಹಿರಂಗವಾಗಿ ತಮ್ಮ ಸಮಸ್ಯೆಗಳನ್ನು ಚರ್ಚಿಸಲು ಸಿದ್ಧರಿಲ್ಲ. ವಕೀಲರ ನಡೆ-ನುಡಿಗಳಲ್ಲಿ ಅನಿಶ್ಚಿತತೆ ಸ್ಪಷ್ಟವಾಗಿ ಗೋಚರಿಸುತ್ತದೆ. ಹಿರಿಯ ವಕೀಲರುಗಳೇ ಕಕ್ಷಿದಾರರು ದೊರೆಯದೆ ಹಲವು ರೀತಿಯ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಇನ್ನು ಕಿರಿಯ ವಕೀಲರ ಬಗ್ಗೆ ಮಾತನಾಡುವಂತೆಯೇ ಇಲ್ಲ.

ಬಹುತೇಕ ವಕೀಲರು ರಾಜಕೀಯ ಇಷ್ಟ-ನಿಷ್ಠೆಗಳಿಗೆ ಶರಣಾಗಿದ್ದಾರೆ. ಪಕ್ಷ ರಾಜಕಾರಣದಲ್ಲಿ ಹಲವರು ಗುರುತಿಸಿಕೊಂಡಿದ್ದಾರೆ. ಒಂದು ಪಕ್ಷದ ಸರ್ಕಾರ ಅಧಿಕಾರದಲ್ಲಿರುವುದರಿಂದ ಆ ಪಕ್ಷದ ಬಗ್ಗೆ ಒಲವು ಹೊಂದಿರುವ ವಕೀಲರ ಗುಂಪು ಹೋರಾಟ ಮಾಡಲು ಬಯಸುವುದಿಲ್ಲ. ಆ ಪಕ್ಷದ ಸರ್ಕಾರದಿಂದ ಸಿಗಬಹುದಾದ ಸ್ಥಾನಮಾನಗಳು ತಪ್ಪಿ ಹೋಗಬಹುದು ಎಂಬ ಆತಂಕ ಅವರಲ್ಲಿದೆ. ಒಟ್ಟಾರೆಯಾಗಿ ವಕೀಲರ ಸಮುದಾಯ ಒಡೆದ ಮನೆಯಂತಾಗಿದ್ದು, ಇಲ್ಲಿನವರ ಸಮಸ್ಯೆಗಳನ್ನು ಗಟ್ಟಿಯಾಗಿ ಅಧಿಕಾರಸ್ಥರಿಗೆ ತಿಳಿಸಿ ಪರಿಹಾರ ಕಂಡುಕೊಳ್ಳುವ ಸ್ಥಿತಿ ಇಲ್ಲ.

ಕೋವಿಡ್‌ಗೆ ತುತ್ತಾಗಿರುವ ವಕೀಲರ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬಹುದೇ?

ಬೆಂಗಳೂರಿನಲ್ಲಿ ನನಗೆ ತಿಳಿದ ಹಾಗೆ ಹಲವು ಮಂದಿ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ಕೊರೊನಾ ಸೋಂಕಿತರಾದವರು ಆಸ್ಪತ್ರೆಗೆ ದಾಖಲಾದ ಬಿಲ್ ಗಳನ್ನು ಸಲ್ಲಿಸಿದರೆ ಅವರಿಗೆ ರಾಜ್ಯ ವಕೀಲರ ಪರಿಷತ್ತಿನ ವಕೀಲರ ಕಲ್ಯಾಣ ನಿಧಿಯಿಂದ ಒಂದಷ್ಟು ಹಣ ನೀಡಲಾಗುತ್ತಿದೆ. ಬಾಡಿಗೆ, ಮಕ್ಕಳ ಶಾಲಾ ಶುಲ್ಕ ಪಾವತಿಸಲಾಗದೆ ಹಲವು ಮಂದಿ ಯಾತನೆ ಅನುಭವಿಸುತ್ತಿದ್ದಾರೆ. ಬೆಂಗಳೂರಿನ ವಿಜಯನಗರದಲ್ಲಿ ಆದಾಯ ಕೊರತೆಯಿಂದ ಕೌಟುಂಬಿಕ ಸಮಸ್ಯೆಗಳನ್ನು ಪರಿಹರಿಸಲಾಗದೆ ಯುವ ವಕೀಲರೊಬ್ಬರು ಆತ್ಮಹತ್ಯೆಗೆ ಶರಣಾದರು. ಇದಕ್ಕಿಂತ ಸಮಸ್ಯೆಯನ್ನು ಹೇಗೆ ಸ್ಪಷ್ಟವಾಗಿ ಹೇಳುವುದೋ, ವಿವರಿಸುವುದೋ ನನಗಂತೂ ಗೊತ್ತಾಗುತ್ತಿಲ್ಲ...