Justice (Retd) Chandru of the Madras High Court 
ಸಂದರ್ಶನಗಳು

ಎಂದಿಗೂ ಭಯಪಡದಿರಿ, ಪ್ರತಿದಿನ ಸಾಯುತ್ತಿರಲು ಆಗದು: 'ಜೈ ಭೀಮ್' ಸಿನಿಮಾಗೆ ಸ್ಫೂರ್ತಿಯಾದ ನ್ಯಾ. ಚಂದ್ರು ಅವರ ಮಾತು

ಮಾರ್ಕ್ಸ್‌ವಾದಿಯಾಗಿ, ಇದು ಬೂರ್ಜ್ವಾ ಸಂವಿಧಾನ ಎಂದು ವಾದಿಸಿದ್ದೆ - ಅದನ್ನು ಇಡಿಯಾಗಿ ಕಿತ್ತೆಸೆಯಬೇಕು ಎಂದಿದ್ದೆ. ಆದರೆ (ತುರ್ತು ಪರಿಸ್ಥಿತಿ ವೇಳೆ) ಸಂವಿಧಾನವನ್ನೇ ಬುಡಮೇಲು ಮಾಡುತ್ತಿದ್ದಾಗ, ಅದನ್ನು ತಿರಸ್ಕರಿಸಬಾರದು ಎಂದುಕೊಂಡೆವು.

Bar & Bench

ಅದು ಧ್ವನಿ ಇಲ್ಲದವರ ಪರವಾಗಿ ನಡೆಸಿದ ಹೋರಾಟ. ಬುಡಕಟ್ಟು ಸಮುದಾಯಕ್ಕೆ ನ್ಯಾಯ ಕೊಡಿಸುವುದಕ್ಕಾಗಿ ನಡೆಸಿದ ಕಾನೂನು ಸಂಘರ್ಷ. ʼಇರುಳಿಗರʼ ಕತ್ತಲು ಕಳೆಯಲು ವ್ಯವಸ್ಥೆಯ ವಿರುದ್ಧ ನಡೆಸಿದ ಹೋರಾಟ. ಆ ಹೋರಾಟದ ಹಿಂದಿನ ಧೀಮಂತ ಶಕ್ತಿಯೇ ಮದ್ರಾಸ್‌ ಹೈಕೋರ್ಟ್‌ನ ನ್ಯಾಯಮೂರ್ತಿಯಾಗಿ ನಿವೃತ್ತರಾದ ನ್ಯಾ. ಕೆ ಚಂದ್ರು.

ಅವರು ವಕೀಲರಿದ್ದಾಗ ಶೋಷಿತ ಸಮುದಾಯದ ಪರವಾಗಿ ನಡೆಸಿದ ಕಾನೂನು ಸಂಘರ್ಷದ ತಿರುಳು ಇಂದು ಅತ್ಯುತ್ತಮ ಸಿನಿಮಾ ಒಂದಕ್ಕೆ ಸ್ಫೂರ್ತಿಯಾಗಿದೆ. ʼಜೈ ಭೀಮ್‌ʼ ಹೆಸರಿನಲ್ಲಿ ಮೂಡಿ ಬಂದಿರುವ ತಮಿಳು ಸಿನಿಮಾ ಪ್ರಸ್ತುತ ಎಲ್ಲೆಡೆ ಸದ್ದು ಮಾಡುತ್ತಿದೆ. ಚಂದ್ರು ಅವರ ಪಾತ್ರದಲ್ಲಿ ತಮಿಳು ಚಿತ್ರರಂಗದ ಪ್ರಖ್ಯಾತ ನಟ ಸೂರಿಯ ನಟಿಸಿದ್ದಾರೆ.

ನ್ಯಾಯಮೂರ್ತಿಗಳಾಗಿದ್ದ ಆರೂವರೆ ವರ್ಷಗಳ ಅವಧಿಯಲ್ಲಿ 90,000 ಪ್ರಕರಣಗಳನ್ನು ವಿಲೇವಾರಿ ಮಾಡುವ ಮೂಲಕ ದೇಶದಲ್ಲೇ ಅತಿ ಹೆಚ್ಚು ಪ್ರಕರಣಗಳನ್ನು ಇತ್ಯರ್ಥಪಡಿಸಿದ ಕೀರ್ತಿಗೆ ನ್ಯಾ. ಚಂದ್ರು ಅವರು ಭಾಜನರಾಗಿದ್ದಾರೆ.

ನ್ಯಾ. ಚಂದ್ರು ಅವರೊಂದಿಗೆ 2013ರ ಜೂನ್‌ನಲ್ಲಿ ʼಬಾರ್‌ ಅಂಡ್‌ ಬೆಂಚ್‌ʼನ ಪತ್ರಕರ್ತ ಅನುಜ್‌ ಅಗರ್‌ವಾಲ್‌ ಅವರು ನಡೆಸಿದ್ದ ಸಂದರ್ಶನದ ಆಯ್ದಭಾಗವನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಿದ್ದೇವೆ. 'ಜೈ ಭೀಮ್‌ʼ ಚಲನಚಿತ್ರ ಬಿಡುಗಡೆಯಾದ ಹಿನ್ನೆಲೆಯಲ್ಲಿ ಆ ಚಿತ್ರಕ್ಕೆ ಸ್ಫೂರ್ತಿಯಾದ ವ್ಯಕ್ತಿ, ಶಕ್ತಿಯ ಬಗೆಗಿನ ಕುತೂಹಲವನ್ನು ತಣಿಸುವ ಕಿರು ಪ್ರಯತ್ನ ಇದು. ತಮ್ಮ ವಿದ್ಯಾರ್ಥಿ ಜೀವನದ ದಿನಗಳು, ಬಂಡಾಯದ ಬದುಕು, ಎರಡು ವರ್ಷ ತಮಿಳುನಾಡಿನಾದ್ಯಂತ ಅಲೆದದ್ದು ಹೀಗೆ ಅನೇಕ ವಿಷಯಗಳನ್ನು ನ್ಯಾಯಮೂರ್ತಿ ಚಂದ್ರು ಅವರು ಇಲ್ಲಿ ಹಂಚಿಕೊಂಡಿದ್ದಾರೆ…

ವಿದ್ಯಾರ್ಥಿ ಜೀವನದುದ್ದಕ್ಕೂ ನೀವು ಹೋರಾಟಗಾರರಾಗಿದ್ದಿರೇ?

ಹೌದು, ನಾನು ಸಿಪಿಐ (ಎಂ) ವಿದ್ಯಾರ್ಥಿ ನಾಯಕನಾಗಿದ್ದೆ. ಇದರಿಂದಾಗಿ ಕಾಲೇಜು ಆಡಳಿತ ಮಂಡಳಿ ನನ್ನ ಮೇಲೆ ಕಣ್ಣಿರಿಸಿತು. ಕೆಲವು ವಿದ್ಯಾರ್ಥಿ ಆಂದೋಲನಗಳನ್ನು ಮುನ್ನಡೆಸಿದ್ದಕ್ಕಾಗಿ ನನ್ನನ್ನು ಲೊಯೊಲಾ ಕಾಲೇಜಿನಿಂದ ಹೊರಹಾಕಲಾಯಿತು. ನಂತರ ನಾನು ನನ್ನ ಮೂರನೇ ವರ್ಷದ ಪದವಿ ಪೂರ್ಣಗೊಳಿಸಲು ಕ್ರಿಶ್ಚಿಯನ್ ಕಾಲೇಜಿಗೆ ಸೇರಿದೆ. ಅದರ ನಂತರ, ಸಾಮಾನ್ಯ ಜನರಿಗಾಗಿ, ಕಾರ್ಮಿಕರಿಗಾಗಿ ಕೆಲಸ ಮಾಡಬೇಕು ಎಂದು ನನಗೆ ಅನಿಸಿದ್ದರಿಂದ ನಾನು ಮುಂದಿನ ಅಧ್ಯಯನದ ಬಗ್ಗೆ ಯೋಚಿಸಲಿಲ್ಲ. ಪೂರ್ಣಾವಧಿಯಾಗಿ ಪಕ್ಷಕ್ಕಾಗಿ ದುಡಿಯತೊಡಗಿದೆ.

ಆಗ ಅಣ್ಣಾ ವಿಶ್ವವಿದ್ಯಾಲಯದಲ್ಲಿ ಲಾಠಿಚಾರ್ಜ್‌ನಿಂದ ವಿದ್ಯಾರ್ಥಿಯೊಬ್ಬ ಸಾವಿಗೀಡಾದರ ಬಗ್ಗೆ ತನಿಖೆ ನಡೆಸಲು ಡಿಎಂಕೆ ಮುಖ್ಯಸ್ಥ ಕರುಣಾನಿಧಿ ಅವರು ತನಿಖಾ ಆಯೋಗ ರಚಿಸಿದ್ದರು. ವಿದ್ಯಾರ್ಥಿಗಳ ಪರವಾಗಿ ನಾನು ಆಯೋಗಕ್ಕೆ ಹಾಜರಾದೆ. ಆಯೋಗದ ಮುಖ್ಯಸ್ಥರಾಗಿ ಮದ್ರಾಸ್ ಹೈಕೋರ್ಟ್‌ನ ಹೆಚ್ಚುವರಿ ನ್ಯಾಯಮೂರ್ತಿಯೊಬ್ಬರನ್ನು ನೇಮಿಸಲಾಯಿತು. ನಾನು ಪ್ರತಿದಿನ ಕೆಲ ಗ್ರೌಂಡ್ ವರ್ಕ್ ಮಾಡಿ ತಯಾರಿಯೊಂದಿಗೆ ಆಯೋಗದ ಮುಂದೆ ಸಿದ್ಧವಾಗಿ ಬರುತ್ತೇನೆ ಎಂಬುದನ್ನು ನ್ಯಾಯಮೂರ್ತಿಗಳು ಗಮನಿಸಿದರು. ಹಾಗಾಗಿ ಅವರು ತಮ್ಮ ಬೆಂಚ್ ಕ್ಲರ್ಕ್ ಮೂಲಕ ನನಗೆ ಕಾನೂನು ಅಧ್ಯಯನ ಮಾಡಬೇಕೆಂದು ಹೇಳಿದ್ದರು…

ಆ ಸಮಯದಲ್ಲಿ ನಿಮಗೆ ಪ್ರೇರಣೆ ನೀಡಿದ್ದು ಏನು?

ನನ್ನ ಸ್ವಂತ ರಾಜಕೀಯ ತಿಳಿವಳಿಕೆ, ಸ್ವಂತ ನಂಬಿಕೆಗಳು ಮತ್ತು ವೃತ್ತಿಯಲ್ಲಿ ಉತ್ತಮ ಸಾಧನೆ ಮಾಡುವ ಬಯಕೆ ನನಗೆ ಸ್ಫೂರ್ತಿ ನೀಡಿವೆ. ಆದ್ದರಿಂದ ಆ ಎಂಟು ವರ್ಷಗಳಲ್ಲಿ, ನನಗೆ ಸಾಕಷ್ಟು ಅವಕಾಶಗಳು ದೊರೆತವು. ಇದು ಮೂಲತಃ ಕಾರ್ಮಿಕ ಸಂಸ್ಥೆಯಾಗಿರುವುದರಿಂದ, ನಮಗೆ ಹೆಚ್ಚಿನ ಸಂಖ್ಯೆಯ ಕಕ್ಷೀದಾರರು ಇದ್ದರು. ನನ್ನ ಎನ್‌ರೋಲ್‌ಮೆಂಟ್ ದಿನವೇ ನಾನು ಹೈಕೋರ್ಟ್‌ಗೆ ಹಾಜರಾಗಿದ್ದೆ.‌ ಕಚೇರಿ ಅಂತಹ ಅವಕಾಶಗಳನ್ನು ಪ್ರೋತ್ಸಾಹಿಸಿತು.

ನೀವು ಬದುಕುವುದಕ್ಕಾಗಿ ಏನು ಮಾಡುತ್ತಿದ್ದಿರಿ?

ಹಣ ಎಂದಿಗೂ ಮಾನದಂಡವಾಗಿರಲಿಲ್ಲ. ನಾನು ಸಂಪೂರ್ಣವಾಗಿ ವಿಭಿನ್ನ ಜೀವನಶೈಲಿ ನಡೆಸುತ್ತಿದ್ದೆ. ನನ್ನ ಮಹತ್ವಾಕಾಂಕ್ಷೆ ʼಫೈವ್ ಸ್ಟಾರ್‌ ಲಾಯರ್ʼ ಆಗುವುದಾಗಿರಲಿಲ್ಲ. ನಾನು ಒಂದೇ ಕೋಣೆ ಇರುವ ಅಪಾರ್ಟ್‌ಮೆಂಟ್‌ನಲ್ಲಿ ವಾಸಿಸುತ್ತಿದ್ದೆ. ನಾನೇ ಅಡುಗೆ ಮಾಡಿಕೊಳ್ಳುತ್ತಿದ್ದೆ.

ಎರಡು ವರ್ಷದೊಳಗಾಗಿ ನಾನು ಮದ್ರಾಸ್ ಹೈಕೋರ್ಟಿನಲ್ಲಿ ವಕೀಲನಾಗಿ ನೆಲೆಯೂರಿದೆ. ತುರ್ತು ಪರಿಸ್ಥಿತಿಯ ನಂತರ ಮುಕ್ತ ಚುನಾವಣೆಗೆ ಒತ್ತಾಯಿಸಿ ನಾವು ಮೊದಲ ಬಾರಿಗೆ ಹೈಕೋರ್ಟ್‌ನಿಂದ ಮೆರವಣಿಗೆಯನ್ನು ಆಯೋಜಿಸಿದೆವು. 200ಕ್ಕೂ ಹೆಚ್ಚು ವಕೀಲರು ಸಮವಸ್ತ್ರಧಾರಿಗಳಾಗಿ ರಸ್ತೆಗಿಳಿದಿದ್ದರು.

ಆದರೆ ಅಂತಹ ಪ್ರತಿಭಟನೆಗಳಲ್ಲಿ ವಕೀಲರು ಭಾಗವಹಿಸಬೇಕು ಎಂದು ನೀವು ಭಾವಿಸುತ್ತೀರಾ?

ತುರ್ತು ಪರಿಸ್ಥಿತಿ ಒಂದು ಅಪವಾದ. ಸಂವಿಧಾನದ ತಳಹದಿಯನ್ನೇ ಬುಡಮೇಲು ಮಾಡುತ್ತಿರುವಾಗ, ನೀವು ವಕೀಲರಾಗಿ ಪ್ರಾಕ್ಟೀಸ್‌ ಮುಂದುವರೆಸಲು ಸಾಧ್ಯವಿರಲಿಲ್ಲ. ಆದರೂ ಇದು ನನ್ನ ಮೂಲ ನಿಲುವಾಗಿರಲಿಲ್ಲ. ಮಾರ್ಕ್ಸ್‌ವಾದಿ ವಿದ್ಯಾರ್ಥಿ ನಾಯಕನಾಗಿ ನಾನು ಇದು ಬೂರ್ಜ್ವಾ ಸಂವಿಧಾನ ಎಂದು ವಾದಿಸಿದ್ದೆ - ಅದನ್ನು ಇಡಿಯಾಗಿ ಕಿತ್ತೆಸೆಯಬೇಕಿತ್ತು ಎಂದಿದ್ದೆ. ಆದರೆ (ತುರ್ತು ಪರಿಸ್ಥಿತಿಯ ಸಂದರ್ಭದಲ್ಲಿ) ಸಂವಿಧಾನವನ್ನೇ ಬುಡಮೇಲು ಮಾಡುತ್ತಿದ್ದಾಗ, ಜನರು ಅದನ್ನು ತಿರಸ್ಕರಿಸಬಾರದು ಎಂದು ನಾವು ಕಂಡುಕೊಂಡೆವು. ಆದ್ದರಿಂದ ಕನಿಷ್ಠ ಹಕ್ಕುಗಳಿಗಾಗಿ ಸಂವಿಧಾನ ರಕ್ಷಿಸಲು ನಿರ್ಧರಿಸಿದೆವು.

ನಿಜವಾಗಿಯೂ ಮೊದಲ ವರ್ಷದ ವಿದ್ಯಾರ್ಥಿಯಾಗಿದ್ದಾಗ ನಾನು ಸಂವಿಧಾನವನ್ನು ಬಂಗಾಳಕೊಲ್ಲಿಗೆ ಎಸೆಯಬೇಕು ಎಂದು ಹೇಳಿದ್ದೆ. ನಾನು ಚಾರ್ಟಿಸ್ಟ್‌ ಹಾಡೊಂದನ್ನು ಉದ್ಗರಿಸಿದೆ.

“ಜನಸಾಗರಕೆ ಹುರ್ರೆ, ಕತ್ತೆಗಳಂತೆ ವಕೀಲರು
ಜೈಲಿಗೆ ಹೋಗುತಲಿಹರು ನ್ಯಾಯಾಧೀಶರು
ಕಾನೂನೇ ಕಾನೂನು ಬಾಹಿರ, ಸಾಮಾನ್ಯರೇ ಅರಸರು
ಜೈಲಿಗೆ ಹೋಗುತಲಿಹರು ನ್ಯಾಯಾಧೀಶರು

ವಕೀಲರು ಮುಷ್ಕರ ನಡೆಸುವುದು ಸರಿಯಲ್ಲ ಎಂದು ನೀವು ಭಾವಿಸುತ್ತೀರಾ?

ಆಗ ನಾನು ಹಾಗೆ ಭಾವಿಸಿರಲಿಲ್ಲ. ಇದು ಬದುಕಿನ ವಿಚಾರ ಎಂದು ಭಾವಿಸಿದ್ದೆ. ನಂತರ ಮುಖ್ಯ ನ್ಯಾಯಮೂರ್ತಿ ಎ.ಪಿ. ಶಾ ಅವರೊಂದಿಗೆ ಕುಳಿತು ವಕೀಲರು ಮುಷ್ಕರ ನಡೆಸಬಾರದು ಎಂದು ತೀರ್ಪು ನೀಡಿದ್ದೆ. ಆ ತೀರ್ಪಿನಲ್ಲಿ ನಾನು ವಕೀಲರು ಮತ್ತು ಪೊಲೀಸರ ನಡುವೆ ಘರ್ಷಣೆಯಾದ ವಿವಿಧ ಸಂದರ್ಭಗಳನ್ನು, ಸೂಕ್ಷ್ಮಗಳನ್ನು ಪಟ್ಟಿ ಮಾಡಿದ್ದೆ. ಆದ್ದರಿಂದ ನ್ಯಾ. ಶಾ ಅವರು, "ಈ ಎಲ್ಲಾ ಸೂಕ್ಷ್ಮ ವಿವರಗಳು ನಿಮಗೆ ಹೇಗೆ ಗೊತ್ತು?" ಎಂದು ಕೇಳಿದ್ದರು. ಆಗ ನಾನು, "ಈ ಎಲ್ಲಾ ಆಂದೋಲನಗಳ ನಾಯಕ ನಾನೇ!" (ನಗು) ಎಂದು ಹೇಳಿದ್ದೆ. ಆ ತೀರ್ಪು ನಾನು ಮಾಡಿದ ಹಿಂದಿನ ಪಾಪಗಳಿಗೆ ಪ್ರಾಯಶ್ಚಿತ್ತ” ಎಂದೆ.

ನೀವು ಅಂತಿಮವಾಗಿ ಸಿಪಿಐ(ಎಂ) ತೊರೆದಿರಿ ಅಲ್ಲವೇ?

ನನ್ನನ್ನು 1988ರಲ್ಲಿ ಪಕ್ಷದಿಂದ ಹೊರಹಾಕಲಾಯಿತು. ಶ್ರೀಲಂಕಾದಲ್ಲಿ ರಾಜೀವ್ ಗಾಂಧಿಯವರ ಹಸ್ತಕ್ಷೇಪವನ್ನು ನಾನು ವಿರೋಧಿಸಿದೆ, ಜಯವರ್ಧನೆ ಜೊತೆ ಒಪ್ಪಂದ ಮಾಡಿಕೊಳ್ಳುವ ಹಕ್ಕು ಅವರಿಗೆ ಇಲ್ಲ ಎಂದು ವಾದಿಸಿದ್ದೆ. ಆದರೆ ಇದೇ ಉತ್ತಮ ಪರಿಹಾರ ಎಂದು ಸಿಪಿಐ (ಎಂ) ನಿಲುವು ತಳೆಯಿತು. ಅದೇನೇ ಇರಲಿ, ನಾನು ಪಕ್ಷ ತೊರೆದದ್ದರಿಂದ ನನ್ನ ಕ್ಷೇತ್ರ ವಿಸ್ತಾರವಾಯಿತು…

ನೀವು ಹಿರಿಯ ನ್ಯಾಯವಾದಿಯಾಗಲು ಏಕೆ ತೀರ್ಮಾನಿಸಿದಿರಿ?

ನಾನು ರೋ ಅಂಡ್‌ ರೆಡ್ಡಿ ವಕೀಲ ಸಂಸ್ಥೆಯಿಂದ ಹೊರ ನಡೆದಾಗ ಇದ್ದಂತೆಯೇ ನಾನು ಹಿರಿಯ ವಕೀಲನಾದಾಗಲೂ ನನ್ನ ಬಳಿ ಒಂದೇ ಒಂದು ಕೇಸ್‌ ಇರಲಿಲ್ಲ. ನಿಧಾನವಾಗಿ ವಕೀಲರು ನನ್ನ ಬಳಿ ಬರಲಾರಂಭಿಸಿದರು. ನಾನು ಹಿರಿಯ ವಕೀಲರಿಗಿರುವ ನಿರ್ಬಂಧಗಳನ್ನು ಕಟ್ಟುನಿಟ್ಟಾಗಿ ಅನುಸರಿಸುತ್ತಿದ್ದೆ - ನಾನು ಎಂದಿಗೂ ಕಕ್ಷೀದಾರರೊಂದಿಗೆ ಯಾವುದೇ ಸಮಾಲೋಚನೆ ನಡೆಸುತ್ತಿರಲಿಲ್ಲ, ನಾನು ಎಂದಿಗೂ ಕಕ್ಷೀದಾರರೊಂದಿಗೆ ನೇರವಾಗಿ ವ್ಯವಹರಿಸುತ್ತಿರಲಿಲ್ಲ. ಕಿರಿಯ ವಕೀಲರು ನನಗೆ ಮಾಹಿತಿ ನೀಡದ ಹೊರತು, ನಾನು ಯಾವುದೇ ಪ್ರಕರಣದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ.

ನ್ಯಾಯಮೂರ್ತಿಗಳ ಹುದ್ದೆ ಸ್ವೀಕರಿಸಲು ಕಾರಣವೇನು?

ಹಿರಿಯ ವಕೀಲನಾಗಿ ಹತ್ತು ವರ್ಷಗಳಿಂದ ಸಾಕಷ್ಟು ಹಣ ಸಂಪಾದಿಸುತ್ತಿದ್ದೇನೆ ಎಂದೆನಿಸಿದರೂ ಮತ್ತೇನೋ ಬೇಕು ಎನ್ನುವ ಒಂದು ಆಸೆ ಇತ್ತು. ಸ್ವತಂತ್ರ ವಕೀಲರಾಗಿದ್ದಾಗ, ಕಕ್ಷಿದಾರರು ನಿಮ್ಮನ್ನು ನಂಬಿ ಕೇಸುಗಳನ್ನು ನೀಡುತ್ತಾರೆ. ನೀವು ಹಿರಿಯ ನ್ಯಾಯವಾದಿಯಾಗಿದ್ದಾಗ, ನಿಮ್ಮ ಕಾರ್ಯಕ್ಷಮತೆ ಆಧರಿಸಿ ನಿಮ್ಮನ್ನು ಅಳೆಯುವವರು ನಿಮ್ಮ ಸೇವೆ ಬಳಸಿಕೊಳ್ಳುತ್ತಾರೆ. ಇತರರು ನಿಮ್ಮನ್ನು ನಿರ್ಣಯಿಸಲು ಯಶಸ್ಸು ಮಾನದಂಡವಾಗುತ್ತದೆ.

ನನ್ನ ಸಂಪೂರ್ಣ ಶಕ್ತಿ ಬಳಸಲಾಗುತ್ತಿಲ್ಲ ಎನ್ನುವ ಅರಿವು ನನಗಿತ್ತು. ನನ್ನ ಬಳಿ 5-6 ಪ್ರಕರಣಗಳು ಇದ್ದಾಗಲೂ ಅದಕ್ಕಾಗಿ ದಿನದಲ್ಲಿ ಒಂದು ಗಂಟೆಗಿಂತ ಹೆಚ್ಚು ಸಮಯ ಹಿಡಿಯುತ್ತಿರಲಿಲ್ಲ. ಉಳಿದ ಸಮಯವನ್ನು ಏನು ಮಾಡುವುದು ಎನ್ನುವ ಪ್ರಶ್ನೆ ಮೂಡುತ್ತಿತ್ತು.

ಆಗ ನನ್ನಲ್ಲಿ ಪದೇಪದೇ ಮೂಡುತ್ತಿದ್ದ ಒಂದು ಪ್ರಶ್ನೆಯೆಂದರೆ, "ನನಗೆ ನ್ಯಾಯಮೂರ್ತಿಗಳ ಹುದ್ದೆಯನ್ನು ಯಾರು ನೀಡುತ್ತಾರೆ?" ಎನ್ನುವುದು.

ನ್ಯಾಯಮೂರ್ತಿಗಳಾಗಿ ನೀವು ಕೇವಲ ಆರೂವರೆ ವರ್ಷಗಳಲ್ಲಿ 90,000 ಪ್ರಕರಣಗಳನ್ನು ಇತ್ಯರ್ಥಪಡಿಸಿದ್ದೀರಿ.

ನಾನು 15 ನಿಮಿಷಗಳ ಮೊದಲು ನ್ಯಾಯಾಲಯಕ್ಕೆ ಹೋಗುತ್ತಿದ್ದೆ ಮತ್ತು ನ್ಯಾಯಾಲಯದ ಕಲಾಪಗಳು ಮುಗಿದ ಒಂದು ಗಂಟೆಯ ನಂತರ ನ್ಯಾಯಾಲಯದಿಂದ ಹೊರಬರುತ್ತಿದ್ದೆ. ನಾನು ನ್ಯಾಯಾಲಯ ಕಾರ್ಯಾವಧಿ ಹೆಚ್ಚಳ ಮಾಡಲು ಯತ್ನಿಸಿದೆ.

ಅನೇಕ ನ್ಯಾಯಾಧೀಶರು ದಿನದ ಮುಕ್ಕಾಲು ಭಾಗದಷ್ಟು ಸಮಯವನ್ನು ಪ್ರಕರಣಗಳನ್ನು ಅಂಗೀಕರಿಸುವ ವಿಚಾರದಲ್ಲಿಯೇ ಕಳೆಯುತ್ತಾರೆ. ಆದರೆ ನನ್ನ ನ್ಯಾಯಾಲಯದಲ್ಲಿ, 10:15 ಮತ್ತು 10:30 ರ ನಡುವೆ, ಪ್ರಕರಣ ಅಂಗೀಕಾರದ ಸಂಗತಿಗಳು ಮುಗಿಯುತ್ತಿದ್ದವು. 10:30 ಕ್ಕೆ ಗಂಟೆ ಬಾರಿಸಿದಾಗ, ನಾನು ಅಂತಿಮ ವಿಚಾರಣೆಯ ಪ್ರಕರಣಗಳನ್ನು ಸದಾ ಕೈಗೆತ್ತಿಕೊಳ್ಳುತ್ತಿದ್ದೆ.

ನ್ಯಾಯಾಧೀಶರಾಗಿ ನೀವು ವೈಯಕ್ತಿಕ ಭದ್ರತಾ ಅಧಿಕಾರಿಯನ್ನು ಇರಿಸಿಕೊಳ್ಳುವ ಪರಿಪಾಠದಿಂದ ಹೊರ ಬಂದಿರಿ.

ನೋಡಿ, ಯಾವುದೇ ಬೆದರಿಕೆ ಇಲ್ಲ ಎಂದು ಭಾವಿಸಿದ್ದರಿಂದ ನಾನು ಪಿಎಸ್‌ಒ ಅವರನ್ನು ತೆಗೆದುಹಾಕಿದೆ. ನಾವು ಮೇಲ್ಮನವಿ ಪ್ರಕರಣಗಳಲ್ಲಿ ಮಾತ್ರ ವ್ಯವಹರಿಸುತ್ತೇವೆ. ಒಮ್ಮೆ ಹೀಗಾಯಿತು. ಬಾಂಬೆಯ ರೌಡಿಯೊಬ್ಬ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರ ಮೇಲೆ ಏನನ್ನೋ ಎಸೆದ ಘಟನೆ ನಡೆಯಿತು. ಆ ಘಟನೆ ಪತ್ರಿಕೆಗಳಲ್ಲಿ ಪ್ರಕಟವಾಗಿ ಹೈಕೋರ್ಟ್‌ ನ್ಯಾಯಮೂರ್ತಿಗಳು ಭದ್ರತಾ ಅಧಿಕಾರಿಗಳನ್ನು ಪಡೆದರೇ ವಿನಾ ವಿಚಾರಣಾ ನ್ಯಾಯಾಲಯದ ನ್ಯಾಯಾಧೀಶರಲ್ಲ!

ಇದು ಬೆದರಿಕೆಯ ಅಂಶಕ್ಕಿಂತ ಹೆಚ್ಚಾಗಿ ಪ್ರತಿಷ್ಠೆಯ ವಿಷಯವಾಗಿತ್ತು. ಭದ್ರತಾ ಅಧಿಕಾರಿಗಳು ನ್ಯಾಯಮೂರ್ತಿಗಳು ಬ್ರೀಫ್‌ಕೇಸ್‌ ಅಥವಾ ಕನ್ನಡಕದ ಪೆಟ್ಟಿಗೆಗಳನ್ನು ಒಯ್ಯುವುದು, ಬಾಗಿಲು ತೆರೆಯುವುದು ಇತ್ಯಾದಿಗಳನ್ನು ಮಾಡುವುದನ್ನು ನಾನು ಕಂಡುಕೊಂಡಿದ್ದೇನೆ. ಇದು ಅಲಂಕಾರಿಕ ಕೆಲಸವಾಗಿತ್ತು.

ನಾನು ಭದ್ರತಾ ಅಧಿಕಾರಿಯನ್ನು ನಿರಾಕರಿಸಿದಾಗ, ನನ್ನ ಹೇಳಿಕೆಯನ್ನು ದಾಖಲಿಸಲು ಐಜಿ ಅವರನ್ನು ಕಳುಹಿಸಲಾಯಿತು. ನಮ್ಮಲ್ಲಿ ನಾಲ್ಕು ಕಾನ್‌ಸ್ಟೆಬಲ್‌ಗಳ ಪಾಳಿಯ ಭದ್ರತೆ ಹೊಂದಿರುವ 60 ನ್ಯಾಯಮೂರ್ತಿಗಳಿದ್ದಾರೆ. ಅಂದರೆ 240 ಮಂದಿ ಪೊಲೀಸರು ಎಂದಾಯಿತು. ನಂತರ ಪ್ರತಿ ನ್ಯಾಯಮೂರ್ತಿಗಳಿಗೆ ಒಬ್ಬ ಭದ್ರತಾ ಅಧಿಕಾರಿ ಇರುತ್ತಾರೆ. ಅಂದರೆ ನ್ಯಾಯಮೂರ್ತಿಗಳ ಭದ್ರತೆಗೆ 300 ಜನರಿದ್ದಾರೆ. 300 ಕಾನ್‌ಸ್ಟೆಬಲ್‌ಗಳಿಂದ ಇಡೀ ದಕ್ಷಿಣ ಮದ್ರಾಸನ್ನು ರಕ್ಷಿಸಬಹುದು, ಅವರನ್ನು 60 ನ್ಯಾಯಮೂರ್ತಿಗಳ ಭದ್ರತೆಗೆ ಏಕೆ ಬಳಸಬೇಕು? ಇದು ನನ್ನ ಪ್ರಶ್ನೆಯಾಗಿತ್ತು. ಕಡಿಮೆ ಜನರನ್ನು ಬಳಸಿಕೊಳ್ಳುವಂತಹ ಹೆಚ್ಚು ಪರಿಣಾಮಕಾರಿ ವ್ಯವಸ್ಥೆ ಇರಬೇಕು. ಎಲ್ಲಾ ನ್ಯಾಯಮೂರ್ತಿಗಳು ಒಂದೇ ಕಾಂಪೌಂಡ್‌ನಲ್ಲಿ ಇರುವುದರಿಂದ ಬರೀ ಪ್ರವೇಶ-ನಿರ್ಗಮನ ಪರಿಶೀಲನೆ ನಡೆದರೆ ಸಾಕು.

ನೀವು ರಾಜದಂಡಗ್ರಾಹಿಗಳನ್ನು (ಕೆಂಪು ಟೋಪಿ ಧರಿಸಿ ರಾಜದಂಡ ಹಿಡಿದು ನ್ಯಾಯಮೂರ್ತಿಗಳ ಆಗಮನವನ್ನು ಘೋಷಿಸುವವರು) ಇರಿಸಿಕೊಳ್ಳುವುದನ್ನೂ ಬಯಸಲಿಲ್ಲ.

ರಾಜದಂಡಗ್ರಾಹಿಗಳು ವಸಾಹತುಶಾಹಿಯ ದ್ಯೋತಕ. ನಾವು ಅದನ್ನು ಏಕೆ ಮುಂದುವರಿಸಬೇಕು? ನಮ್ಮಂತಹ ಬಡ ದೇಶದಲ್ಲಿ, ನಮಗೆ 60 ರಾಜದಂಡಗ್ರಾಹಿಗಳು ಇದ್ದಾರೆ. ಮಧುರೈ ಪೀಠದಲ್ಲಿ ನ್ಯಾಯಮೂರ್ತಿಗಳು ತಮ್ಮ ಕೋಣೆಯಿಂದ ನೇರವಾಗಿ ಕೋರ್ಟ್ ಹಾಲ್‌ಗೆ ಪ್ರವೇಶಿಸುವ ರೀತಿಯಲ್ಲಿ ನ್ಯಾಯಾಲಯಗಳನ್ನು ನಿರ್ಮಿಸಲಾಗಿದೆ. ಈಗ ರಾಜದಂಡಗ್ರಾಹಿ ಇದ್ದರೆ, ಅವನು ರಾಜದಂಡವನ್ನು ಎಲ್ಲಿಗೆ ಒಯ್ಯುತ್ತಾನೆ ಹೇಳಿ?

ನ್ಯಾಯಾಧೀಶರು ತೀರ್ಪುಗಳನ್ನು ಬರೆಯಲು ನ್ಯಾಯಾಲಯದ ರಜಾದಿನಗಳ ಅಗತ್ಯವಿದೆ ಎಂಬ ವಾದದ ಬಗ್ಗೆ ನಿಮ್ಮ ಅಭಿಪ್ರಾಯವೇನು?

ಅಂದರೆ ನ್ಯಾಯಾಲಯದ ರಜಾದಿನಗಳು ತೀರ್ಪುಗಳನ್ನು ಬರೆಯಲು ಇವೆ ಮತ್ತು ವಿರಾಮ ತೆಗೆದುಕೊಳ್ಳಲು ಅಲ್ಲವೆಂದೇ? ನಾವು ತೀರ್ಪುಗಳನ್ನು ವಾರಾಂತ್ಯದಲ್ಲಿ ಬರೆಯಬಹುದು. ಇದು ನಿಜವಾಗಿಯೂ ನೀವು ಕೆಲಸವನ್ನು ಹೇಗೆ ನಿರ್ವಹಿಸುತ್ತೀರಿ ಎಂಬುದರ ಮೇಲೆ ಅವಲಂಬಿತವಾಗಿರುತ್ತದೆ. ನ್ಯಾಯಾಲಯಗಳು ದಾವೆದಾರರಿಗೆ ಲಭ್ಯವಿರಬೇಕು - ಅದು ಹೆಚ್ಚು ಮುಖ್ಯವಾದ ಅಂಶವಾಗಿದೆ.

ಭಾವೀ ವಕೀಲರಿಗೆ ಏನಾದರೂ ಸಲಹೆ ನೀಡುವಿರೆ?

ನಿಮಗೆ ಗೊತ್ತಾ? ನೀವು ಬಂಡುಕೋರರಾದಾಗ ವಿರೋಧ ಕಟ್ಟಿಕೊಳ್ಳಲು ಆರಂಭಿಸುತ್ತೀರಿ. ನಿಮ್ಮನ್ನು ದೂರವಿರಿಸಲಾಗುತ್ತದೆ. ಆದರೆ ಅದಕ್ಕೆಲ್ಲಾ ನಾವು ತಲೆ ಕೆಡಿಸಿಕೊಳ್ಳಬಾರದು. ನಾನು ಹಲವು ಕಾಲೇಜುಗಳಲ್ಲಿ ಓದಿದೆ. ಅಲ್ಲಿಂದ ನನ್ನನ್ನು ಹೊರಹಾಕಲಾಯಿತು. ಆದರೆ ನಾನು ಬಂಡಾಯಗಾರನಾಗುವುದನ್ನು ಕಲಿತೆ. ನಾನು ನ್ಯಾಯಾಧೀಶನಾದಾಗಲೂ ನನಗಾಗಿ ಏನು ಕಾದಿದೆ ಎಂದು ನನಗೆ ಚೆನ್ನಾಗಿ ಗೊತ್ತಿತ್ತು. ನಾನು ಬಂಡಾಯಗಾರನಾಗುವುದನ್ನು ಕಲಿತು ಅದನ್ನು ಆನಂದಿಸಿದೆ.

ಯಾವುದೇ ಸಮಯದಲ್ಲಿ ನೀವು ಭಯಪಡಲಿಲ್ಲವೇ?

ನಾನು ಕಲಿತದ್ದು ಒಂದೇ. ಎಂದಿಗೂ ಭಯಪಡಬೇಡಿ. ನಾನು ಬೆದರಿಕೆಗಳನ್ನು ಎದುರಿಸಿದ್ದೇನೆ ಆದರೆ ಅಂತಿಮವಾಗಿ ನೀವು ಪ್ರತಿದಿನ ಸಾಯುತ್ತಿರಲೂ ಸಾಧ್ಯವಿಲ್ಲ. ಯಾರಾದರೂ ನನ್ನನ್ನು ಮುಗಿಸಲು ನಿರ್ಧರಿಸಿದರೆ ಅವರು ಅದನ್ನು ಮಾಡುತ್ತಾರೆ ಎಂದು ನಾನು ಐಜಿಪಿಗೆ ಹಿಂದೊಮ್ಮೆ ಹೇಳಿದ್ದು ನೆನಪಿದೆ. ದೇಶದ ಇಬ್ಬರು ಪ್ರಧಾನಿಗಳ ಪ್ರಕರಣವನ್ನೇ ನೋಡಿ, ಎಂದು ನಾನು ಅವರಿಗೆ ಹೇಳಿದ್ದೆ. ಅದಕ್ಕೆ ಅವರು "ನಾನು ಯಾವುದೇ ಪ್ರತಿಕ್ರಿಯೆ ನೀಡುವುದಿಲ್ಲ" ಎಂದರು. (ನಗು)…