Ummathur Indushekar
Ummathur Indushekar 
ಸಂದರ್ಶನಗಳು

ವಕೀಲರು ಬೀದಿಗೆ ಬೀಳುವಂತಹ ಸ್ಥಿತಿ ನಿರ್ಮಾಣವಾಗಿದೆ; ಭೌತಿಕ ಕಲಾಪ ಶೀಘ್ರ ಆರಂಭವಾಗಲಿ: ಉಮ್ಮತ್ತೂರು ಇಂದುಶೇಖರ್

Siddesh M S

ಕೋವಿಡ್ ಸಾಂಕ್ರಾಮಿಕತೆಯು ಇಡೀ ವಿಶ್ವವನ್ನೇ ತಲ್ಲಣಗೊಳಿಸಿದೆ. ಎಲ್ಲಾ ವಲಯ/ಕ್ಷೇತ್ರಗಳಲ್ಲೂ ಅನಿಶ್ಚಿತತೆ, ನಿರಾಸೆ ವ್ಯಾಪಿಸಿದೆ. ಇದರಿಂದ ವಕೀಲರ ಸಮುದಾಯವೂ ಹೊರತಾಗಿಲ್ಲ. ಅದರಲ್ಲೂ ಎರಡನೇ ದರ್ಜೆ ಹಾಗೂ ಗ್ರಾಮೀಣ ಭಾಗದಲ್ಲಿ ನೆಲೆಸಿರುವ ವಕೀಲರ ಸ್ಥಿತಿ ಹೇಳತೀರದಂತಾಗಿದೆ.

ಉದ್ಯೋಗ ನಷ್ಟ, ಆರ್ಥಿಕ ಚಟುವಟಿಕೆಗಳಿಗೆ ಹೊಡೆತ ಬಿದ್ದುದರಿಂದ ಕಕ್ಷಿದಾರರು ವಕೀಲರನ್ನು ಸಂಪರ್ಕಿಸುವುದು ವಿರಳವಾಗಿದೆ. ನ್ಯಾಯಾಲಯದ ಕಾರ್ಯ-ಕಲಾಪಗಳು ಬಂದ್ ಆಗಿರುವುದರಿಂದ ವಕೀಲರು ನಿರುದ್ಯೋಗಿಗಳಾಗಿದ್ದಾರೆ. ವಕೀಲಿಕೆ ಹೊರತುಪಡಿಸಿ ಬೇರಾವುದೇ ಉದ್ಯೋಗ ಕೈಗೊಳ್ಳುವಂತಿಲ್ಲ ಎಂಬ ನಿಯಮ ಜಾರಿಯಲ್ಲಿರುವುದರಿಂದ ವಕೀಲಿಕೆಯನ್ನೇ ನಂಬಿದವರ ಸ್ಥಿತಿ ದಯನೀಯವಾಗಿದೆ. ಹಿಂದುಳಿದ ಮತ್ತು ಎರಡನೇ ಹಂತದ ನಗರಗಳಲ್ಲಿ ತಾಂತ್ರಿಕ ಮತ್ತು ಆರ್ಥಿಕ ಸಮಸ್ಯೆಗಳಿಂದಾಗಿ ವರ್ಚುವಲ್ ವಿಚಾರಣೆಯೂ ಕಾರ್ಯಸಾಧುವಲ್ಲ ಎನ್ನಲಾಗುತ್ತಿದೆ. ಈ ಎಲ್ಲಾ ವಿಚಾರಗಳ ಕುರಿತು ರಾಜ್ಯದ ಹಿಂದುಳಿದ ಜಿಲ್ಲೆಗಳಲ್ಲಿ ಒಂದಾಗಿರುವ ಚಾಮರಾಜನಗರದ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಉಮ್ಮತ್ತೂರು ಇಂದುಶೇಖರ್ ಅವರು “ಬಾರ್ ಅಂಡ್ ಬೆಂಚ್”ಗೆ ನೀಡಿದ ಸಂದರ್ಶನದಲ್ಲಿ ಮಾತನಾಡಿದ್ದಾರೆ. ಸಂದರ್ಶನದ ಪೂರ್ಣ ಪಾಠ ಇಂತಿದೆ.

ಕೋವಿಡ್‌ ಬಿಕ್ಕಟ್ಟು ವಕೀಲರ ಸಮುದಾಯದ ಮೇಲೆ ಬೀರಿರುವ ಪರಿಣಾಮಗಳೇನು?

ನ್ಯಾಯಾಲಯದ ಕಾರ್ಯ-ಕಲಾಪಗಳು ನಿರ್ಬಂಧವಾಗಿರುವುದರಿಂದ ಬೆರಳೆಣಿಕೆಯ ವಕೀಲರನ್ನು ಹೊರತುಪಡಿಸಿದರೆ ಬಹುತೇಕ ವಕೀಲರು ಆರ್ಥಿಕವಾಗಿ ಭಾರಿ ಸಂಕಷ್ಟಕ್ಕೆ ಸಿಲುಕಿದ್ದಾರೆ. ವಕೀಲರು ಬೇರೆ ಉದ್ಯೋಗದಲ್ಲಿ ತೊಡಗಿಕೊಳ್ಳುವಂತಿಲ್ಲ ಎಂಬ ನಿಯಮ ಇರುವ ಹಿನ್ನೆಲೆಯಲ್ಲಿ ಬದುಕು ನಡೆಸುವುದೇ ಅತ್ಯಂತ ಕಷ್ಟವಾಗಿದೆ. ಚಾಮರಾಜನಗರ ಹಿಂದುಳಿದ ಜಿಲ್ಲೆಯಾಗಿರುವುದರಿಂದ ಇಲ್ಲಿನ ಜನರ ಪರಿಸ್ಥಿತಿಯೂ ಅಷ್ಟಕಷ್ಟೆ. ಹೀಗಿರುವಾಗ ವಕೀಲರು ಕಕ್ಷಿದಾರರಿಂದ ಹೆಚ್ಚಿನ ನಿರೀಕ್ಷೆ ಇಟ್ಟುಕೊಳ್ಳುವಂತಿಲ್ಲ.

ಕೋವಿಡ್ ಹಿನ್ನೆಲೆಯಲ್ಲಿ ಉದ್ಯೋಗವಿಲ್ಲದೇ ಸಂಕಷ್ಟಕ್ಕೆ ಸಿಲುಕಿರುವ ವಕೀಲರಿಗೆ ಜಿಲ್ಲಾ ವಕೀಲರ ಸಂಘ ಯಾವ ರೀತಿಯ ನೆರವು ನೀಡಿದೆ?

ಚಾಮರಾಜನಗರ ಜಿಲ್ಲಾ ಕೇಂದ್ರದಲ್ಲಿ 350 ನೋಂದಾಯಿತ ವಕೀಲರಿದ್ದಾರೆ. ಈ ಪೈಕಿ 200 ಮಂದಿ ವಕೀಲಿಕೆಯಲ್ಲಿ ಸಕ್ರಿಯವಾಗಿದ್ದಾರೆ. ಆರ್ಥಿಕ ಸಂಕಷ್ಟದಲ್ಲಿರುವ ವಕೀಲರಿಗೆ ರಾಜ್ಯ ಸರ್ಕಾರ ₹5 ಕೋಟಿಯನ್ನು ರಾಜ್ಯ ವಕೀಲರ ಪರಿಷತ್ತಿಗೆ ಬಿಡುಗಡೆ ಮಾಡಿದೆ. ಇದರ ಲಾಭ ಪಡೆದುಕೊಳ್ಳುವಂತೆ ವಕೀಲರಿಗೆ ವಾಟ್ಸ್ ಅಪ್ ಗುಂಪುಗಳ ಮೂಲಕ ಮಾಹಿತಿ ರವಾನಿಸಲಾಗಿದೆ. ಕೆಲವರು ಇದರಿಂದ ವಂಚಿತರಾಗಿದ್ದಾರೆ. ಮೊದಲ ಹಂತದಲ್ಲಿ 95 ಮಂದಿಗೆ ಹಾಗೂ ಎರಡನೇ ಹಂತದಲ್ಲಿ 40 ಮಂದಿಗೆ ತಲಾ ₹5 ಸಾವಿರ ಹಣ ಹಂಚಿಕೆಯಾಗಿದೆ.

ಪರಿಹಾರ ವಿತರಿಸುವ ಕುರಿತು ರಾಜ್ಯ ವಕೀಲರ ಪರಿಷತ್ತಿನ ಬಗ್ಗೆ ಪ್ರಶ್ನೆಗಳು ಎದ್ದಿವೆ. ಈ ಸಂಬಂಧದ ಪ್ರಕರಣ ಹೈಕೋರ್ಟ್ ಮೆಟ್ಟಿಲೇರಿದೆ. ಸ್ಥಳೀಯ ವಕೀಲರಿಗೆ ಪರಿಹಾರ ಲಭ್ಯವಾಗಿದೆಯೇ?

ರಾಜ್ಯಾದ್ಯಂತ ಒಂದು ಲಕ್ಷಕ್ಕೂ ಹೆಚ್ಚು ವಕೀಲರಿದ್ದಾರೆ. ಎಲ್ಲರಿಗೂ ₹5 ಸಾವಿರ ನೀಡುವುದಾದರೆ ರಾಜ್ಯ ಸರ್ಕಾರ ನೀಡಿರುವ ಅನುದಾನ ಸಾಕಾಗುವುದಿಲ್ಲ. ರಾಜ್ಯ ಸರ್ಕಾರದ ನೆರವಿನ ಜೊತೆಗೆ ವಕೀಲರಿಂದ ಪಡೆದ ಸ್ಟಾಂಪ್ ಹಣವನ್ನೂ ಸೇರಿಸಿ ಪರಿಹಾರದ ರೂಪದಲ್ಲಿ ವಿತರಿಸಲಾಗಿದೆ. ವಿಮಾ ಯೋಜನೆಯನ್ನೂ ಕಲ್ಪಿಸಲಾಗಿದೆ. ಪರಿಷತ್ತು ಹಾಗೂ ಸರ್ಕಾರದ ನೆರವು ಎಲ್ಲರಿಗೂ ದೊರೆತಿದೆ ಎಂದು ಹೇಳಲಾಗದು.

ವರ್ಚುವಲ್‌ ಕಲಾಪಗಳಿಂದ ಆಗಿರುವ ಉಪಯೋಗ, ಸಮಸ್ಯೆಗಳೇನು? ಕಕ್ಷಿದಾರರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ತಿಳಿಸಿ?

ಜಾಮೀನು ಅರ್ಜಿಗಳನ್ನು ಹೊರತುಪಡಿಸಿ ಬೇರಾವುದೇ ವಿಚಾರಣೆ ನಡೆಯುತ್ತಿಲ್ಲ. ಆರ್ಥಿಕ ದೃಷ್ಟಿಯಿಂದ ನೋಡಿದರೆ ವಕೀಲರಲ್ಲಿ ನಾಲ್ಕೈದು ವರ್ಗಗಳಿವೆ. ಸಾಕಷ್ಟು ವಕೀಲರು ಆರ್ಥಿಕವಾಗಿ ಸಬಲರಾಗಿಲ್ಲವಾದ್ದರಿಂದ ಸ್ಮಾರ್ಟ್‌ ಫೋನ್ ಖರೀದಿಸುವಷ್ಟು ಅವರು ಸಶಕ್ತರಾಗಿಲ್ಲ. ಪರಿಸ್ಥಿತಿ ಹೀಗಿರುವಾಗ ವರ್ಚುವಲ್ ಕಲಾಪದ ಲಾಭ-ನಷ್ಟದ ಪ್ರಶ್ನೆಯೇ ಉದ್ಭವಿಸುವುದಿಲ್ಲ. ವರ್ಚುವಲ್ ಕಲಾಪಗಳು ಬೆಂಗಳೂರು ಮತ್ತು ಮೈಸೂರಿನಂಥ ಪ್ರಥಮ ದರ್ಜೆ ನಗರಗಳಲ್ಲಿ ಸಾಧ್ಯವಿರಬಹುದು. ನಮ್ಮಲ್ಲಿ ವರ್ಚುವಲ್ ಕಲಾಪಗಳನ್ನು ನಡೆಸುವ ಸ್ಥಿತಿಯಿಲ್ಲ. ಸಾಕ್ಷ್ಯ ನುಡಿಯುವ ಸಂದರ್ಭದಲ್ಲಿ ವರ್ಚುವಲ್ ವಿಚಾರಣೆ ಸಾಧ್ಯವಿಲ್ಲ. ಇದರಿಂದ ಆರೋಪಿಯ ಪರ ವಕೀಲರು ಲಾಭ ಪಡೆಯುವ ಸಾಧ್ಯತೆ ಹೆಚ್ಚು. ಎಲ್ಲಾ ಚಟುವಟಿಕೆಗಳು ಬಂದ್ ಆಗಿರುವುದರಿಂದ ಕಕ್ಷಿದಾರರು ವಕೀಲರ ಬಳಿ ಬರುವುದೇ ಕಡಿಮೆಯಾಗಿದೆ.

ಭೌತಿಕ ನ್ಯಾಯಾಲಯ ಯಾವಾಗ ಆರಂಭವಾಗಬಹುದು?

ಅಕ್ಟೋಬರ್ 5ರಿಂದ ಭೌತಿಕ ನ್ಯಾಯಾಲಯ ಆರಂಭವಾಗುವ ಸಾಧ್ಯತೆ ಇದೆ. ಜಿಲ್ಲಾ ನ್ಯಾಯಾಧೀಶರು ಸೆಪ್ಟೆಂಬರ್ 28ಕ್ಕೆ ವಕೀಲರ ಸಭೆ ಕರೆದಿದ್ದಾರೆ. ನ್ಯಾಯಾಲಯದ ಸಂಕೀರ್ಣದೊಳಗೆ ಕೋವಿಡ್ ತಪಾಸಣೆಗೋಸ್ಕರ ಪ್ರಾಥಮಿಕ ಆರೋಗ್ಯ ಕೇಂದ್ರ ಸ್ಥಾಪಿಸಲಾಗುತ್ತಿದೆ. ಸಾಕ್ಷ್ಯ ನುಡಿಯುವವರಿಗೂ ಪ್ರತ್ಯೇಕ ವ್ಯವಸ್ಥೆ ಮಾಡಲಾಗುತ್ತಿದೆ. ಜಿಲ್ಲಾ ನ್ಯಾಯಾಲಯದಲ್ಲಿ ಆರು ಪೀಠಗಳಿದ್ದು, ಪ್ರತಿ ಪೀಠಕ್ಕೆ ತಲಾ ಐದು ಪ್ರಕರಣದಂತೆ ಒಟ್ಟು 30 ಸಾಕ್ಷ್ಯಗಳನ್ನು ನುಡಿಯಲು ಅವಕಾಶ ಮಾಡಿಕೊಡಲಾಗುತ್ತದೆ. ಪ್ರಕರಣಕ್ಕೆ ಸಂಬಂಧಿಸಿದ ವಕೀಲರು ಮಾತ್ರ ನ್ಯಾಯಾಲಯಕ್ಕೆ ಭೇಟಿ ನೀಡಲು ಅನುವು ಮಾಡಿಕೊಡಲಾಗುತ್ತದೆ ಎಂದು ತಿಳಿಸಲಾಗಿದೆ.

ವರ್ಚುವಲ್ ವಿಚಾರಣೆ ನಡೆಸಲು ರಾಜ್ಯದ ಕೆಳಹಂತದ ನ್ಯಾಯಾಲಯಗಳು ಎಷ್ಟರಮಟ್ಟಿಗೆ ಸಿದ್ಧವಾಗಿವೆ?

ಕೋವಿಡ್‌ನಿಂದ ಬಳಿಕ ಲಾಕ್‌ಡೌನ್ ಘೋಷಣೆಯಾದ ಬಳಿಕ ನಮ್ಮಲ್ಲಿ ಯಾವುದೇ ತೆರನಾದ ವರ್ಚುವಲ್ ವಿಚಾರಣೆ ನಡೆದಿಲ್ಲ. ನಮ್ಮಲ್ಲೂ ಸೇರಿದಂತೆ ಕೆಲವು ಕಡೆ ಭೌತಿಕ ಕಲಾಪಗಳನ್ನು ನಡೆಸಲಾಗಿದೆ. ಪ್ರತಿ ದಿನ ಬೆಳಿಗ್ಗೆ ಮತ್ತು ಮಧ್ಯಾಹ್ನದ ಬಳಿಕ ತಲಾ 10 ಪ್ರಮುಖ ಪ್ರಕರಣಗಳ ವಿಚಾರಣೆ ನಡೆಸಲು ನ್ಯಾಯಾಲಯ ನಿರ್ಧರಿಸಿತ್ತು. ಈ ಸಂದರ್ಭದಲ್ಲಿ ಆರೋಪಿ ಮತ್ತು ಕಕ್ಷಿದಾರರ ಪರ ವಕೀಲರನ್ನು ಹೊರತುಪಡಿಸಿ ಬೇರಾರು ಭಾಗವಹಿಸುವಂತಿರಲಿಲ್ಲ.

ಭವಿಷ್ಯದ ದಿನಗಳ ಕುರಿತಾಗಿ ವಕೀಲರ ವಲಯದಲ್ಲಿ ಇರುವ ಚರ್ಚೆಯೇನು? ಕೋವಿಡ್‌ಗೆ ತುತ್ತಾಗಿರುವ ವಕೀಲರ ಕುಟುಂಬದ ಸಮಸ್ಯೆಗಳ ಬಗ್ಗೆ ಮಾಹಿತಿ ನೀಡಬಹುದೇ?

ವಕೀಲರು ಬೀದಿಗೆ ಬೀಳುವ ಸ್ಥಿತಿ ನಿರ್ಮಾಣವಾಗಿದೆ. ಬಹುತೇಕರು ನಮ್ಮನ್ನು ಗುರಿಯಾಗಿಸಿ ಮಾತನಾಡುತ್ತಿದ್ದಾರೆ. ನೀವು ಸುಸ್ಥಿತಿಯಲ್ಲಿದ್ದೀರಿ ಎನ್ನುತ್ತಿದ್ದಾರೆ. ಸರ್ಕಾರದ ಗಮನಕ್ಕೆ ತಂದು ಪರಿಹಾರ ಕಲ್ಪಿಸುವಂತೆ ಕೋರುತ್ತಿದ್ದಾರೆ. ಅವರೆಲ್ಲರ ಸಮಸ್ಯೆ ಮತ್ತು ಆತಂಕಗಳನ್ನು ಎರಡು ತಿಂಗಳ ಹಿಂದೆ ರಾಜ್ಯ ವಕೀಲರ ಪರಿಷತ್ತು ನಡೆಸಿದ ವಿಡಿಯೋ ಕಾನ್ಫರೆನ್ಸ್ ನಲ್ಲಿ ವಿವರಿಸಿದ್ದೇವೆ. ನಮ್ಮ ವಕೀಲರಿಗೆ ಆರ್ಥಿಕ ಸಹಾಯ ಮಾಡಲು ಮುಂದಾಗಬೇಕು. ಆದಷ್ಟು ಬೇಗ ಭೌತಿಕ ನ್ಯಾಯಾಲಯ ಆರಂಭಿಸುವಂತೆ ಹೈಕೋರ್ಟ್‌ಗೆ ಒತ್ತಾಯ ಮಾಡುವಂತೆಯೂ ರಾಜ್ಯ ವಕೀಲರ ಪರಿಷತ್ತನ್ನು ಕೋರಿದ್ದೇವೆ. ಇನ್ನು ಜಿಲ್ಲೆಯಲ್ಲಿ ಕೋವಿಡ್ ಸೋಂಕಿಗೆ ಯಾವೊಬ್ಬ ವಕೀಲರು ತುತ್ತಾದ ವರದಿಯಾಗಿಲ್ಲ.

ಸರ್ಕಾರ ಮತ್ತು ರಾಜ್ಯ ವಕೀಲರ ಪರಿಷತ್ತಿನಿಂದ ಯಾವ ತೆರನಾದ ನಿರೀಕ್ಷೆಗಳನ್ನು ಇಟ್ಟುಕೊಂಡಿದ್ದೀರಿ?

ರಾಜ್ಯ ಸರ್ಕಾರ ಈಗಾಗಲೇ ₹5 ಕೋಟಿ ನೀಡಿದೆ. ಮುಂದಿನ ದಿನಗಳಲ್ಲಿ ಸಹಾಯ ಮಾಡುವುದಾಗಿಯೂ ಅವರು ಭರವಸೆ ನೀಡಿದೆ. ವಕೀಲರಿಗೆ ಇನ್ನಷ್ಟು ಸವಲತ್ತುಗಳನ್ನು ಕಲ್ಪಿಸುವ ನಿಟ್ಟಿನಲ್ಲಿ ರಾಜ್ಯ ವಕೀಲರ ಪರಿಷತ್ತು ಕಾರ್ಯಪ್ರವೃತ್ತವಾಗಿದೆ. ಇದನ್ನು ಮುಂದುವರಿಸಬೇಕು.