Justice Arun Misra 
ಅಂಕಣಗಳು

ಭೂಸ್ವಾಧೀನ ಕಾಯಿದೆ, ಎಜಿಆರ್, ಮಾಸ್ಟರ್ ಆಫ್ ರೋಸ್ಟರ್: ನ್ಯಾಯಮೂರ್ತಿಯಾಗಿ ಅರುಣ್ ಮಿಶ್ರಾ ನೀಡಿದ ಪ್ರಮುಖ ತೀರ್ಪುಗಳು

ನಿವೃತ್ತ ನ್ಯಾ. ಅರುಣ್ ಮಿಶ್ರಾ ಅವರು ರಾಜಕೀಯ ಸೂಕ್ಷ್ಮದ ಪ್ರಕರಣಗಳು, ನ್ಯಾಯಾಂಗದ ಪ್ರಾಮಾಣಿಕತೆಯ ಪ್ರಶ್ನೆ ಎತ್ತಿದ ಪ್ರಕರಣಗಳು ಸೇರಿದಂತೆ ದೇಶದ ಸಾಮಾಜಿಕ-ಆರ್ಥಿಕ ಬಂಧದ ಮೇಲೆ ಪರಿಣಾಮ ಬೀರಿದಂತಹ ಹಲವು ಪ್ರಕರಣಗಳ ಕುರಿತ ತೀರ್ಪು ನೀಡಿದ್ದರು.

Bar & Bench

ವಕೀಲರೊಂದಿಗಿನ ಜಟಾಪಟಿಯಾಗಲಿ, ಪ್ರಮುಖ ಪ್ರಕರಣಗಳ ವಿಚಾರಣೆಗಳು ಅವರ ಮುಂದೆ ಸಾಲುಗಟ್ಟಿ ಬರುತ್ತಿದ್ದುದೇ ಆಗಲಿ ಹೀಗೆ ಇತ್ತೀಚಿನ ಸುಪ್ರೀಂ ಕೋರ್ಟಿನ ಯಾವುದೇ ವಿದ್ಯಮಾನಗಳಿರಲಿ ಅದರಲ್ಲಿ ಸದಾ ಕೇಂದ್ರಬಿಂದುವಾಗಿದ್ದವರು ಬುಧವಾರ ನಿವೃತ್ತರಾದ ಸುಪ್ರೀಂ ಕೋರ್ಟ್ ನ ಹಿರಿಯ ನ್ಯಾಯಮೂರ್ತಿ ಅರುಣ್ ಮಿಶ್ರಾ.

ಬಹಿರ್ಮುಖಿಯಾದ ನ್ಯಾ. ಮಿಶ್ರಾ ಅವರು ನ್ಯಾಯಾಲಯದಲ್ಲಿ ಎಂದಿಗೂ ಅದು ಮೌಖಿಕವಾಗಿಯಾಗಲಿ ಅಥವಾ ತಮ್ಮ ತೀರ್ಪುಗಳಲ್ಲಾಗಲಿ ನಾಜೂಕಿನಿಂದ ಮಾತನಾಡಿದವರಲ್ಲ. ಅವರು ನೀಡಿದ ಕೆಲವು ತೀರ್ಪುಗಳಿಗೆ ಭಾರಿ ಟೀಕೆ ವ್ಯಕ್ತವಾಗಿದ್ದರೆ, ಮತ್ತೆ ಕೆಲವಕ್ಕೆ ಮಿಶ್ರ ಭಾವನೆ ವ್ಯಕ್ತವಾಗಿದ್ದವು. ಕೆಲವೇ ಕೆಲವು ಮಾತ್ರ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದವು. ಆದರೆ, ಮಿಶ್ರಾ ಇದಾವುದರ ಬಗ್ಗೆಯೂ ತಲೆಕೆಡಿಸಿಕೊಳ್ಳುತ್ತಿರಲಿಲ್ಲ.

ತಮ್ಮ ವಿದಾಯದ ಭಾಷಣದಲ್ಲಿ ಮಾತನಾಡಿದ ಅವರು “ಆತ್ಮಸಾಕ್ಷಿಗೆ” ಅನುಗುಣವಾಗಿ ಪ್ರಕರಣದ ವಿಚಾರಣೆ ನಡೆಸಿರುವುದಾಗಿ ಹೇಳಿದ್ದರು. “ಆತ್ಮಸಾಕ್ಷಿ” ಎಂಬ ಪದ ಅವರು ವಿಚಾರಣೆ ನಡೆಸುತ್ತಿದ್ದ ಕೊಠಡಿಯಲ್ಲಿ ಸಾಮಾನ್ಯವಾಗಿ ಕೇಳಿಬರುತ್ತಿದ್ದ ಪದವಾಗಿತ್ತು. ವರ್ಚುವಲ್ ವಿದಾಯ ಸಮಾರಂಭದಲ್ಲಿ ಮಾತನಾಡುತ್ತಾ ಅವರು “ಪ್ರತಿ ತೀರ್ಪನ್ನೂ ವಿಶ್ಲೇಷಿಸಿ, ಆದರೆ ಅದಕ್ಕೆ ಈ ತರಹ ಅಥವಾ ಆ ತರಹ ಎಂದು ಬಣ್ಣ ಹಚ್ಚಬೇಡಿ” ಎಂದಿದ್ದರು.

ಈ ಹಿನ್ನೆಲೆಯಲ್ಲಿ ಸಂಕ್ಷಿಪ್ತವಾಗಿ ನಾವು ಅವರು ನೀಡಿದ ಕೆಲವು ಪ್ರಮುಖ ತೀರ್ಪುಗಳನ್ನು ನೆನೆಯುವ ಪ್ರಯತ್ನ ನಡೆಸಿದ್ದೇವೆ. ಐದು ವರ್ಷಗಳ ಕಾಲ ಸುಪ್ರೀಂ ಕೋರ್ಟ್‌ ನಲ್ಲಿ ನ್ಯಾಯಮೂರ್ತಿಯಾಗಿದ್ದ ಅರುಣ್ ಮಿಶ್ರಾ ಅವರು ಹೊರಡಿಸಿದ ಪ್ರಮುಖ ಪ್ರಕರಣಗಳ ತೀರ್ಪು ಇಂತಿವೆ. ಇವುಗಳಲ್ಲಿ ಹಲವು ರಾಜಕೀಯ ಸೂಕ್ಷ್ಮದ ಪ್ರಕರಣಗಳಾಗಿದ್ದರೆ, ಮತ್ತೆ ಕೆಲವು ನ್ಯಾಯಾಂಗದ ಪ್ರಾಮಾಣಿಕತೆಯ ಪ್ರಶ್ನೆ ಹುಟ್ಟು ಹಾಕಿದಂತಹ ಪ್ರಕರಣಗಳಾಗಿದ್ದವು. ಕೆಲವು ತೀರ್ಪುಗಳು ದೇಶದ ಸಾಮಾಜಿಕ-ಆರ್ಥಿಕ ಬಂಧದ ಮೇಲೆ ಗಣನೀಯ ಪರಿಣಾಮ ಬೀರಿದಂತಹವು ಕೂಡ.

ಎಜಿಆರ್ (ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ)

Supreme Court, AGR

ತಮ್ಮ ನಿವೃತ್ತಿಯ ಹಿಂದಿನ ದಿನ ನ್ಯಾ. ಮಿಶ್ರಾ ನೇತೃತ್ವದ ತ್ರಿಸದಸ್ಯ ಪೀಠವು ಟೆಲಿಕಾಂ ಕಂಪೆನಿಗಳು ಹತ್ತು ವರ್ಷದೊಳಗೆ ಎಜಿಆರ್ (ಹೊಂದಾಣಿಕೆ ಮಾಡಲಾದ ನಿವ್ವಳ ಆದಾಯ) ಬಾಕಿ ಮೊತ್ತವನ್ನು ಪಾವತಿಸುವಂತೆ ತೀರ್ಪು ನೀಡಿತು.

2019ರ ಅಕ್ಟೋಬರ್‌ ನಲ್ಲಿ ನ್ಯಾಯಾಲಯ ನೀಡಿದ ತೀರ್ಪಿಗೆ ಅನುಗುಣವಾಗಿ ಟೆಲಿಕಾಂ ಕಂಪೆನಿಗಳು ಎಜಿಆರ್ ಬಾಕಿಯನ್ನು ಪಾವತಿಸಬೇಕು ಎಂದು ನ್ಯಾ. ಮಿಶ್ರಾ ನೇತೃತ್ವದ ನ್ಯಾಯಪೀಠ ಹೇಳಿತು. ಪ್ರಕರಣದ ವಿಚಾರಣೆಯ ಸಂದರ್ಭದಲ್ಲಿ ನ್ಯಾ. ಮಿಶ್ರಾ ಅವರು ಹಲವು ಬಾರಿ ಬಾಕಿ ಮೊತ್ತವನ್ನು ಮರು ಹೊಂದಾಣಿಕೆ ಮಾಡಿಕೊಳ್ಳಿ ಎಂದು ಕೋರಿದ್ದ ಟೆಲಿಕಾಂ ಕಂಪೆನಿಗಳನ್ನು ತರಾಟೆಗೆ ತೆಗೆದುಕೊಂಡಿದ್ದರು. ಒಮ್ಮೆಯಂತೂ ಈ ಸಂಸ್ಥೆಗಳ ವ್ಯವಸ್ಥಾಪಕ ನಿರ್ದೇಶಕರೆಲ್ಲರನ್ನೂ ಜೈಲಿಗಟ್ಟುವುದಾಗಿ ಗುಡುಗಿದ್ದರು.

ಪ್ರಶಾಂತ್ ಭೂಷಣ್ ಅವರ ನ್ಯಾಯಾಂಗ ನಿಂದನೆ ಪ್ರಕರಣ

Prashant Bhushan

ನ್ಯಾಯಾಂಗವನ್ನು ವಿಮರ್ಶಿಸಿದ್ದ ಹಿರಿಯ ವಕೀಲ ಪ್ರಶಾಂತ್ ಭೂಷಣ್ ಅವರ ಎರಡು ಟ್ವೀಟ್ ಗಳಿಗೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್‌ ಸ್ವಯಂ ಪ್ರೇರಿತವಾಗಿ ಅವರ ವಿರುದ್ಧ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿತ್ತು. ನ್ಯಾ. ಮಿಶ್ರಾ ನೇತೃತ್ವದ ಪೀಠವು ಆಗಸ್ಟ್‌ 14ರಂದು ಭೂಷಣ್ ಅವರನ್ನು ದೋಷಿ ಎಂದು ಘೋಷಿಸಿತ್ತು. ಆಗಸ್ಟ್ 31ರಂದು ಭೂಷಣ್ ಅವರಿಗೆ ಸಾಂಕೇತಿಕವಾಗಿ ಒಂದು ರೂಪಾಯಿ ಜುಲ್ಮಾನೆ ವಿಧಿಸುವ, ತಪ್ಪಿದ್ದಲ್ಲಿ ಮೂರು ತಿಂಗಳು ಜೈಲುವಾಸ ಮತ್ತು ಸುಪ್ರೀಂ ಕೋರ್ಟಿನಲ್ಲಿ ಮೂರು ವರ್ಷ ವಕೀಲಿಕೆಗೆ ನಿಷೇಧ ಹೇರುವ ಶಿಕ್ಷೆಯನ್ನೂ ಪ್ರಕಟಿಸಿತು.

ಇಷ್ಟು ಮಾತ್ರವಲ್ಲದೇ, ನ್ಯಾ. ಮಿಶ್ರಾ ನೇತೃತ್ವದ ಪೀಠವು 11 ವರ್ಷಗಳ ಹಿಂದೆ ಹಿರಿಯ ವಕೀಲ ಹರೀಶ್ ಸಾಳ್ವೆ ಅವರು ಭೂಷಣ್ ವಿರುದ್ಧ ದಾಖಲಿಸಿದ್ದ ನ್ಯಾಯಾಂಗ ನಿಂದನೆ ಪ್ರಕರಣಕ್ಕೆ ಮರು ಜೀವ ನೀಡಿತು. 2009ರ ನ್ಯಾಯಾಂಗ ನಿಂದನೆ ಪ್ರಕರಣದಲ್ಲಿ ಮೂಡುವ ಪ್ರಮುಖ ಪ್ರಶ್ನೆಗಳನ್ನು ವಿಸ್ತೃತ ನ್ಯಾಯಪೀಠದ ಮುಂದಿರಿಸಲು ಆಗಸ್ಟ್‌ 25ರಂದು ನ್ಯಾಯಪೀಠ ನಿರ್ಧರಿಸಿತು.

ಪುತ್ರಿಯರಿಗೂ ಸಮಾನ ಹಕ್ಕು

ಹಿಂದೂ ಅವಿಭಜಿತ ಕುಟುಂಬದ ಆಸ್ತಿಯಲ್ಲಿ ಪುತ್ರಿಯರಿಗೂ ಸಮಾನ ಹಕ್ಕಿದೆ ಎಂದು ಆಗಸ್ಟ್‌ 11ರಂದು ನ್ಯಾಯಾಲಯ ತೀರ್ಪು ನೀಡಿತ್ತು. ಹಿಂದೂ ಉತ್ತರಾದಾಯಿತ್ವ ಕಾಯಿದೆ-1956ಗೆ 2005ರಲ್ಲಿ ತಿದ್ದುಪಡಿ ತರುವುದಕ್ಕೂ ಮುನ್ನ ಹುಟ್ಟಿದ ಹೆಣ್ಣು ಮಕ್ಕಳಿಗೂ, ಕಾಯಿದೆ ತಿದ್ದುಪಡಿಗೂ ಮುನ್ನ ಅವರ ತಂದೆ ಕಾಲವಾಗಿದ್ದರೂ ಸದರಿ ಕಾನೂನು ಅನ್ವಯವಾಗುತ್ತದೆ ಎಂದು ಹೇಳಲಾಗಿತ್ತು.

ಈ ಮೂಲಕ 2005ರ ತಿದ್ದುಪಡಿ ಕಾಯಿದೆ ಸುತ್ತ ಎದ್ದಿದ್ದ ಅನುಮಾನಗಳಿಗೆ ನ್ಯಾ. ಮಿಶ್ರಾ ನೇತೃತ್ವದ ಪೀಠ ತೆರೆ ಎಳೆಯಿತು. ಇದರಿಂದ ತಿದ್ದುಪಡಿ ಸಂದರ್ಭದಲ್ಲಿ ಬದುಕಿದ್ದ ಹೆಣ್ಣು ಮಕ್ಕಳಿಗೂ ಹಕ್ಕು ಅನ್ವಯವಾಗಲಿದೆ ಎಂದು ತೀರ್ಪು ನೀಡಿತು. ಕಾಯಿದೆ ತಿದ್ದುಪಡಿಗೂ ಮುನ್ನ ಜನಿಸಿದ್ದವರಿಗೂ ಇದು ಪೂರ್ವಾನ್ವಯವಾಗಲಿದೆ.

ಪರಿಶಿಷ್ಟ ಪ್ರದೇಶದಲ್ಲಿ ಶೇ 100 ಮೀಸಲಾತಿ

ಹಿಂದಿನ ಆಂಧ್ರಪ್ರದೇಶ ಸರ್ಕಾರ ಮೀಸಲು ಪ್ರದೇಶದಲ್ಲಿ ಪರಿಶಿಷ್ಟ ಪಂಗಡಕ್ಕೆ ಬೋಧಕ ಹುದ್ದೆಯಲ್ಲಿ ಶೇ 100 ಮೀಸಲಾತಿ ಕಲ್ಪಿಸಿದ್ದನ್ನು ನ್ಯಾ. ಮಿಶ್ರಾ ಅವರನ್ನೊಳಗೊಂಡ ನ್ಯಾಯಪೀಠವು ವಜಾಗೊಳಿಸಿತ್ತು. ಇಂಥ ಮೀಸಲಾತಿಗೆ ಯಾವುದೇ ಸಕಾರಣವಿಲ್ಲ ಎಂದಿದ್ದ ನ್ಯಾಯಾಲಯವು ಸರ್ಕಾರಕ್ಕೆ 5 ಲಕ್ಷ ರೂಪಾಯಿ ಜುಲ್ಮಾನೆ ವಿಧಿಸಿತ್ತು.

ನ್ಯಾಯಾಲಯದ ಆದೇಶವು ತಮ್ಮದೇ ಸಾಮುದಾಯಿಕ ವ್ಯವಸ್ಥೆಯೊಳಗಿನ ಬುಡಕಟ್ಟು ಸಮುದಾಯಗಳು ಮತ್ತು ಇತರೆ ಅಲ್ಪಸಂಖ್ಯಾತರಿಗೆ ಸೂಕ್ತ ಪ್ರಾತಿನಿಧ್ಯ ಪಡೆಯುವ ಹಕ್ಕನ್ನು ವಂಚಿತಗೊಳಿಸುತ್ತದೆ ಎಂದು ವಿವಿಧ ಸಂಘಟನೆಗಳು ಮತ್ತು ಸಾಮಾಜಿಕ ಕಾರ್ಯಕರ್ತರು ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಿದ್ದರು.

ಎಸ್‌ ಸಿ/ಎಸ್‌ ಟಿ ತಿದ್ದುಪಡಿ (ದೌರ್ಜನ್ಯ ತಡೆ) ಕಾಯಿದೆ-1989 ದುರ್ಬಲಗೊಳಿಸುವುದನ್ನು ತಡೆಯಲು ತರಲಾದ ತಿದ್ದುಪಡಿಗಳನ್ನು ಎತ್ತಿ ಹಿಡಿದ ಪೀಠ

ಸುಪ್ರೀಂ ಕೋರ್ಟ್‌ 2018ರ ತನ್ನ ತೀರ್ಪಿನಲ್ಲಿ ಹಿಂದಿನ ಎಸ್‌ ಸಿ/ಎಸ್‌ ಟಿ ತಿದ್ದುಪಡಿ (ದೌರ್ಜನ್ಯ ತಡೆ) ಕಾಯಿದೆಯಲ್ಲಿನ ನಿಬಂಧನೆಯನ್ನು ದುರ್ಬಲಗೊಳಿಸಿದ್ದರಿಂದ ಅದನ್ನು ಸರಿಪಡಿಸಲು ತಿದ್ದುಪಡಿ ಕಾಯಿದೆ ಜಾರಿಗೊಳಿಸಲಾಗಿತ್ತು. 2018ರ ತನ್ನ ತೀರ್ಪಿನಲ್ಲಿ ನ್ಯಾಯಾಲಯವು ಕಾನೂನಿಗೆ ವಿರುದ್ಧವಾಗಿ ನಡೆದುಕೊಂಡ ಅಧಿಕಾರಿಗಳ ವಿಚಾರಣೆ ನಡೆಸಲು ನೇಮಕ ಪ್ರಾಧಿಕಾರದ ಒಪ್ಪಿಗೆ ಅಗತ್ಯ ಎಂದಿತ್ತು.

ಬಳಿಕ ಪೂರ್ವ ಒಪ್ಪಿಗೆ ಅವಶ್ಯಕತೆ ಕುರಿತ ತಿದ್ದುಪಡಿಯನ್ನು ನ್ಯಾಯಮೂರ್ತಿಗಳಾದ ಅರುಣ್ ಮಿಶ್ರಾ, ವಿನೀತ್ ಶರಣ್ ಮತ್ತು ರವೀಂದ್ರ ಭಟ್ ನೇತೃತ್ವದ ಪೀಠ ಎತ್ತಿಹಿಡಿದಿತ್ತು. ಇದಕ್ಕೂ ಮುನ್ನ, ಕೇಂದ್ರ ಸರ್ಕಾರಕ್ಕೆ 2018ರ ತೀರ್ಪು ಮರುಪರಿಶೀಲನಾ ಅರ್ಜಿ ಸಲ್ಲಿಸಲೂ ನ್ಯಾ. ಮಿಶ್ರಾ ನೇತೃತ್ವದ ಪೀಠ ಅವಕಾಶ ಮಾಡಿಕೊಟ್ಟಿತ್ತು.

ಸಿಜೆಐ ಗೊಗೊಯ್ ವಿರುದ್ಧದ ಲೈಂಗಿಕ ದೌರ್ಜನ್ಯ ಆರೋಪ

Ranjan Gogoi

ಸುಪ್ರೀಂ ಕೋರ್ಟ್‌ ನ ಮಾಜಿ ಸಿಬ್ಬಂದಿಯೊಬ್ಬರು ಅಂದಿನ ಸಿಜೆಐ ರಂಜನ್ ಗೊಗೊಯ್ ವಿರುದ್ಧ ಲೈಂಗಿಕ ದೌರ್ಜನ್ಯ ಆರೋಪ ಮಾಡಿದ್ದರ ಕುರಿತಾದ ವರದಿಗಳು ಮಾಧ್ಯಮಗಳಲ್ಲಿ ಪ್ರಕಟವಾದ ತಕ್ಷಣ ದಾಖಲಿಸಲಾದ ಸ್ವಯಂ ಪ್ರೇರಿತ ದೂರಿನ ವಿಚಾರಣೆಯನ್ನು ಅರುಣ್ ಮಿಶ್ರಾ ಅವರನ್ನೊಳಗೊಂಡ ವಿಶೇಷ ಪೀಠ ನಡೆಸಿತ್ತು. ನ್ಯಾಯಾಲಯ ನೇಮಿಸಿದ್ದ ನಿವೃತ್ತ ನ್ಯಾಯಮೂರ್ತಿ ಎ ಕೆ ಪಟ್ನಾಯಕ್ ನೇತೃತ್ವದ ಸಮಿತಿಯು ಸಿಜೆಐ ಗೊಗೊಯ್ ಅವರನ್ನು ಸಿಲುಕಿಸಲು ದೊಡ್ಡ ಪಿತೂರಿ ನಡೆಯುತ್ತಿದ್ದು, ಅದರ ಕುರಿತು ಹೆಚ್ಚಿನ ತನಿಖೆ ಅಗತ್ಯವಿದೆ ಎಂದು ವರದಿ ನೀಡಿತ್ತು. ಈ ಸಮಿತಿಯು ಇನ್ನಷ್ಟೇ ಅಂತಿಮ ವರದಿ ಸಲ್ಲಿಸಬೇಕಿದೆ. ಇದೇ ವರ್ಷದ ಜನವರಿಯಲ್ಲಿ ಗೊಗೊಯ್ ಅವರ ವಿರುದ್ಧ ಲೈಂಗಿಕ ಆರೋಪ ಮಾಡಿದ್ದ ಮಹಿಳಾ ಸಿಬ್ಬಂದಿಯನ್ನು ಸುಪ್ರೀಂ ಕೋರ್ಟ್ ಕರ್ತವ್ಯಕ್ಕೆ ಮರು ನೇಮಕ ಮಾಡಿತು.

ಗುಜರಾತ್ ಗಲಭೆ ಮತ್ತು ಸಂಜೀವ್ ಭಟ್

ಗುಜರಾತ್ ರಾಜ್ಯ ಸರ್ಕಾರವು ತಮ್ಮ ವಿರುದ್ಧ ದಾಖಲಿಸಿದ್ದ ಎರಡು ಪ್ರಥಮ ಮಾಹಿತಿ ವರದಿ (ಎಫ್‌ ಐಆರ್) ಕುರಿತು ಸ್ವತಂತ್ರ ತನಿಖೆ ನಡೆಸುವಂತೆ ಅಮಾನತುಕೊಂಡಿರುವ ಐಪಿಎಸ್ ಅಧಿಕಾರಿ ಸಂಜೀವ್ ಭಟ್ ಸಲ್ಲಿಸಿದ್ದ ಅರ್ಜಿಯನ್ನು ಅಂದಿನ ಸಿಜೆಐ ಎಚ್ ಎಲ್ ದತ್ತು ಹಾಗೂ ನ್ಯಾ. ಅರುಣ್ ಮಿಶ್ರಾ ನೇತೃತ್ವದ ವಿಭಾಗೀಯ ಪೀಠ ತಿರಸ್ಕರಿಸಿತ್ತು. ಇದು ಬಹುದೊಡ್ಡ ವಿವಾದ ಸೃಷ್ಟಿಸಿತ್ತು. ಭಟ್ ಅವರನ್ನು ಹಿರಿಯ ವಕೀಲರಾದ ಪ್ರಶಾಂತ್ ಭೂಷಣ್ ಹಾಗೂ ಇಂದಿರಾ ಜೈಸಿಂಗ್ ಅವರು ಪ್ರತಿನಿಧಿಸಿದ್ದರು. ಗೋಧ್ರಾ ರೈಲು ಬೆಂಕಿ ಅನಾಹುತದಲ್ಲಿ 37 ಹಿಂದೂಗಳು ಸಾವನ್ನಪ್ಪಿದ ಬಳಿಕ ಇಂದಿನ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರು ಮುಸ್ಲಿಮರ ವಿರುದ್ಧ ಪ್ರತೀಕಾರ ತೀರಿಸಿಕೊಳ್ಳಲು ಹಸಿರು ನಿಶಾನೆ ತೋರಿದ್ದರು ಎಂದು ಭಟ್ ಆರೋಪಿಸಿದ್ದರು. 22 ವರ್ಷಗಳ ಹಿಂದಿನ ಅಕ್ರಮ ಮಾದಕ ದ್ರವ್ಯ ಸಂಗ್ರಹ ಪ್ರಕರಣದ ಆರೋಪದಲ್ಲಿ ಭಟ್ ಅವರು ಸದ್ಯ ಜೈಲಿನಲ್ಲಿದ್ದಾರೆ. ಕಳೆದ ವರ್ಷ ಗುಜರಾತ್ ಹೈಕೋರ್ಟ್ 1990ರ ವಿಚಾರಣಾಧೀನ ಕೈದಿಯ ಸಾವಿನ ಪ್ರಕರಣದಲ್ಲಿ ಸಂಜೀವ್ ಭಟ್ ಅವರಿಗೆ ಆಜೀವ ಜೈಲು ಶಿಕ್ಷೆ ವಿಧಿಸಿದೆ.

ಸಿಜೆಐ ದೀಪಕ್ ಮಿಶ್ರಾರ ಮಹಾಭಿಯೋಗ

Dipak Misra

ಏಳು ವಿರೋಧ ಪಕ್ಷಗಳು 2018ರ ಏಪ್ರಿಲ್ 20ರಂದು ಅಂದಿನ ಸಿಜೆಐ ದೀಪಕ್ ಮಿಶ್ರಾ ವಿರುದ್ಧ ರಾಜ್ಯಸಭೆಯಲ್ಲಿ ಮಹಾಭಿಯೋಗಕ್ಕೆ ಅವಕಾಶ ಕೋರಿದ್ದವು. ಮಹಾಭಿಯೋಗದ ಕರಡಿನಲ್ಲಿ ದೀಪಕ್ ಮಿಶ್ರಾ ಅವರ ವಿರುದ್ಧ ಐದು ನ್ಯಾಯಾಂಗ ದುರ್ನಡತೆಯ ಬಗ್ಗೆ ಪ್ರಸ್ತಾಪಿಸಲಾಗಿತ್ತು. ಇದರಲ್ಲಿ ವೈದ್ಯಕೀಯ ಕಾಲೇಜು ಭ್ರಷ್ಟಾಚಾರ ಪ್ರಕರಣವೂ (ಪ್ರಸಾದ್ ಎಜುಕೇಷನಲ್ ಟ್ರಸ್ಟ್‌) ಸೇರಿತ್ತು. ನಕಲಿ ದಾಖಲೆಗಳನ್ನು ಸೃಷ್ಟಿಸಿ ಭೂಸ್ವಾಧೀನ ಪಡಿಸಿಕೊಂಡ ಆರೋಪ ಮತ್ತು ಸುಪ್ರೀಂ ಕೋರ್ಟ್ ನ ಮಾಸ್ಟರ್ ಆಗಿ ರೋಸ್ಟರ್ ಅನ್ನು ತಮಗೆ ದೊರೆತಿದ್ದ ಆಡಳಿತಾತ್ಮಕ ಅಧಿಕಾರದ ಮೂಲಕ ದೀಪಕ್ ಮಿಶ್ರಾ ದುರ್ಬಳಕೆ ಮಾಡಿಕೊಂಡರು ಎಂಬ ಗಂಭೀರ ಆರೋಪವೂ ಸೇರಿತ್ತು.

ಸಿಜೆಐ ದೀಪಕ್ ಮಿಶ್ರಾ ಅವರನ್ನು ವಜಾಗೊಳಿಸುವ ಮಹಾಭಿಯೋಗ ಅರ್ಜಿಯನ್ನು ತಿರಸ್ಕರಿಸಿದ ರಾಜ್ಯಸಭಾ ಅಧ್ಯಕ್ಷ ವೆಂಕಯ್ಯ ನಾಯ್ಡು ಅವರ ನಿರ್ಧಾರವನ್ನು ಪ್ರಶ್ನಿಸಿ ಸಲ್ಲಿಸಲಾಗಿದ್ದ ಅರ್ಜಿ ವಿಚಾರಣೆಯನ್ನು ನಡೆಸಲು ರಚಿಸಲಾಗಿದ್ದ ಸಾಂವಿಧಾನಿಕ ಪೀಠದಲ್ಲಿ ನ್ಯಾ. ಅರುಣ್ ಮಿಶ್ರಾ ಸಹ ಇದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ಒಂದು ವಿಚಾರಣೆಯ ಬಳಿಕ ಸಾಂವಿಧಾನಿಕ ಪೀಠ ರಚಿಸುವುದಕ್ಕೆ ಸಂಬಂಧಿಸಿದ ಆಡಳಿತಾತ್ಮಕ ಆದೇಶದ ವಿವರಣೆ ನೀಡಲು ನ್ಯಾಯಪೀಠ ನಿರಾಕರಿಸಿದ ಹಿನ್ನೆಲೆಯಲ್ಲಿ 2018ರ ಮೇ ನಲ್ಲಿ ಅರ್ಜಿ ಹಿಂಪಡೆಯಲಾಗಿತ್ತು.

ವೈದ್ಯಕೀಯ ಕಾಲೇಜು ಭ್ರಷ್ಟಾಚಾರ ಪ್ರಕರಣ ಮತ್ತು ಮಾಸ್ಟರ್ ಆಫ್ ರೋಸ್ಟರ್

2017ರಲ್ಲಿ ವೈದ್ಯಕೀಯ ಕಾಲೇಜು ಭ್ರಷ್ಟಾಚಾರ ಪ್ರಕರಣ/ಪ್ರಸಾದ್ ಎಜುಕೇಷನ್ ಟ್ರಸ್ಟ್‌ ಪ್ರಕರಣಗಳ ಕುರಿತು ವಿಶೇಷ ತನಿಖಾ ತಂಡದಿಂದ (ಎಸ್ ಐಟಿ) ತನಿಖೆ ನಡೆಸುವಂತೆ ಕೋರಿದ್ದ ಅರ್ಜಿಗಳು ಸುಪ್ರೀಂ ಕೋರ್ಟ್‌ ನಲ್ಲಿ ವಿವಾದ ಸೃಷ್ಟಿಸಿದ್ದವು. ಅನುಕೂಲಕರ ತೀರ್ಪು ಪಡೆಯಲು ನ್ಯಾಯಮೂರ್ತಿಗಳಿಗೆ ಲಂಚ ನೀಡಲಾಗುತ್ತದೆ ಎಂಬ ಆರೋಪ ಮಾಡಲಾಗಿತ್ತು. ಸುಪ್ರೀಂ ಕೋರ್ಟ್‌ ನಲ್ಲಿ ಅನುಕೂಲಕರ ತೀರ್ಪು ಪಡೆಯಲು ಸಾರ್ವಜನಿಕ ಬದುಕಿನಲ್ಲಿ ಉನ್ನತ ಸ್ಥಾನದಲ್ಲಿರುವವರ ಸಹಕಾರ ಪಡೆಯಲಾಗುತ್ತದೆ ಎಂಬ ಆರೋಪದ ಆಧಾರದಲ್ಲಿ ಕೇಂದ್ರೀಯ ತನಿಖಾ ಸಂಸ್ಥೆ (ಸಿಬಿಐ) ದಾಖಲಿಸಿದ್ದ ಎಫ್‌ಐಆರ್‌ ಆಧರಿಸಿ ಅರ್ಜಿ ಸಲ್ಲಿಸಲಾಗಿತ್ತು. ಎರಡೂ ಅರ್ಜಿಗಳನ್ನು ನ್ಯಾ. ಮಿಶ್ರಾ ಅವರನ್ನೊಳಗೊಂಡಿದ್ದ ಪೀಠವು ವಜಾಗೊಳಿಸಿತ್ತು.

ಸದರಿ ಪ್ರಕರಣಗಳ ವಿಚಾರಣೆ ವೇಳೆ ಅರ್ಜಿದಾರರಾದ ವಕೀಲೆ ಕಾಮಿನಿ ಜೈಸ್ವಾಲ್ ಮತ್ತು ಸರ್ಕಾರೇತರ ಸಂಸ್ಥೆಯಾದ ನ್ಯಾಯಾಂಗ ಹೊಣೆಗಾರಿಕೆ ಮತ್ತು ಸುಧಾರಣಾ ಚಳವಳಿಯನ್ನು (ಸಿಜೆಎಆರ್) ಪ್ರತಿನಿಧಿಸಿದ್ದ ಪ್ರಶಾಂತ್ ಭೂಷಣ್ ಅವರ ನಡತೆಯ ಕುರಿತು ಟೀಕೆ ವ್ಯಕ್ತವಾಗಿತ್ತಲ್ಲದೇ, ವಕೀಲರ ನಡೆ ನ್ಯಾಯಾಂಗ ನಿಂದನೆಗೆ ಸಮ ಎಂದಿತ್ತು. ಅರ್ಜಿ ವಜಾಗೊಳಿಸಿದ್ದ ನ್ಯಾಯಪೀಠವು ಎನ್ ಜಿಒಗೆ ಜುಲ್ಮಾನೆ ವಿಧಿಸಿತ್ತು. ಈ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್‌ ನಲ್ಲಿ ಮುಖ್ಯ ನ್ಯಾಯಮೂರ್ತಿಯವರೇ ಮಾಸ್ಟರ್ ಆಫ್ ರೋಸ್ಟರ್ ಎಂಬುದು ಮತ್ತೊಮ್ಮೆ ಸಾಬೀತಾಯಿತು.

ಭೂಸ್ವಾಧೀನ ಕಾಯಿದೆ ಮತ್ತು ಹಿಂದೆ ಸರಿಯಲು ನಕಾರ

ನ್ಯಾಯಸಮ್ಮತವಾದ ಪರಿಹಾರ ಮತ್ತು ಭೂಸ್ವಾಧೀನದಲ್ಲಿ ಪಾರದರ್ಶಕತೆ, ಪುನರ್ವಸತಿ ಮತ್ತು ಮರು ಹೊಂದಾಣಿಕೆ ಕಾಯಿದೆ-2013 (ಭೂಸ್ವಾಧೀನ ಕಾಯಿದೆ-2013) ಹಕ್ಕಿನ ಅಡಿ ಸೆಕ್ಷನ್ 24ರ ವ್ಯಾಖ್ಯಾನದ ಕುರಿತು ಸಲ್ಲಿಸಲಾದ ಅರ್ಜಿ ವಿಚಾರಣೆಯ ಸಂದರ್ಭದಲ್ಲಿ ಬೌದ್ಧಿಕ ಪಕ್ಷಪಾತದ ಹಿನ್ನೆಲೆಯಲ್ಲಿ ನ್ಯಾ. ಅರುಣ್ ಮಿಶ್ರಾ ಅವರನ್ನು ವಿಚಾರಣೆಯಿಂದ ಹಿಂದೆ ಸರಿಯುವಂತೆ ಕೋರಿದ್ದಕ್ಕೆ ನ್ಯಾಯಾಲಯದಲ್ಲಿ ಹೈಡ್ರಾಮಾ ನಡೆದು ಹೋಗಿತ್ತು.

ಸದರಿ ಪ್ರಕರಣದಲ್ಲಿ ಎರಡು ನ್ಯಾಯಪೀಠಗಳು ಹೊರಡಿಸಿದ್ದ ತೀರ್ಪು ಸಂಘರ್ಷಕ್ಕೆ ಎಡೆಮಾಡಿಕೊಟ್ಟಿದ್ದರಿಂದ ನ್ಯಾ. ಅರುಣ್ ಮಿಶ್ರಾ ಅವರನ್ನೊಳಗೊಂಡ ಸಾಂವಿಧಾನಿಕ ಪೀಠಕ್ಕೆ ಪ್ರಕರಣವನ್ನು ವರ್ಗಾಯಿಸಲಾಗಿತ್ತು. ಆಶ್ಚರ್ಯವೆಂದರೆ ನ್ಯಾ. ಮಿಶ್ರಾ ಅವರನ್ನೊಳಗೊಂಡ ತ್ರಿಸದಸ್ಯ ಪೀಠವೊಂದು ಸದರಿ ಪ್ರಕರಣದಲ್ಲಿ ಈಗಾಗಲೇ ತೀರ್ಪು ಪ್ರಕಟಿಸಿತ್ತು. ಪ್ರಕರಣದ ವಿಚಾರಣೆಯಿಂದ ಹಿಂದೆ ಸರಿಯಲು ನ್ಯಾ.ಮಿಶ್ರಾ ನಿರಾಕರಿಸಿದ್ದರು.