ಧರ್ಮಸ್ಥಳದ ವಿದ್ಯಾರ್ಥಿನಿ ಸೌಜನ್ಯ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ 'ಧರ್ಮಸ್ಥಳ ವಿಲೇಜ್ ಹಾರರ್ ಪಾರ್ಟ್ 2' ಸಾಕ್ಷ್ಯ ನಾಶ ತಲೆಬರಹದ ಅಡಿ ಪ್ರಸಾರ ಮಾಡಲಾಗಿರುವ ವಿಡಿಯೋ ಡಿಲೀಟ್ ಮಾಡುವಂತೆ ಯೂಟ್ಯೂಬರ್ ಎಂ ಡಿ ಸಮೀರ್ ಸೇರಿ ಮೂವರ ವಿರುದ್ಧ ಬೆಂಗಳೂರಿನ ಸತ್ರ ನ್ಯಾಯಾಲಯವು ಶುಕ್ರವಾರ ಏಕಪಕ್ಷೀಯ ಕಡ್ಡಾಯ ಪ್ರತಿಬಂಧಕಾದೇಶ ಮಾಡಿದೆ.
₹10 ಕೋಟಿ ಪರಿಹಾರ ಹಾಗೂ ಪ್ರತಿವಾದಿಗಳ ವಿರುದ್ಧ ಶಾಶ್ವತ ಮತ್ತು ಕಡ್ಡಾಯ ಪ್ರತಿಬಂಧಕಾದೇಶ ಕೋರಿ ಡಿ ನಿಶ್ಚಲ್ ಮತ್ತು ಡಿ ಹರ್ಷೇಂದ್ರ ಕುಮಾರ್ ಸಲ್ಲಿಸಿರುವ ಮೂಲ ದಾವೆಯ ವಿಚಾರಣೆ ನಡೆಸಿದ 6ನೇ ಹೆಚ್ಚುವರಿ ಸಿಟಿ ಸಿವಿಲ್ ಮತ್ತು ಸತ್ರ ನ್ಯಾಯಾಧೀಶ ಎಸ್ ನಟರಾಜ್ ಆದೇಶ ಮಾಡಿದ್ದಾರೆ.
ಎಂ ಡಿ ಸಮೀರ್, ಧೂತ ಸಮೀರ್ ಎಂ ಡಿ, ಸಮೀರ್ ಎಂ ಡಿ ವಿರುದ್ಧ ಏಕಪಕ್ಷೀಯ ಕಡ್ಡಾಯ ಪ್ರತಿಬಂಧಕಾದೇಶ ಮಾಡಲಾಗಿದ್ದು, https://www.youtube.com/watch? v=68lkvBlHcwYನಲ್ಲಿನ ವಿಡಿಯೋ ತೆಗೆಯಬೇಕು ಎಂದು ನ್ಯಾಯಾಲಯ ನಿರ್ದೇಶಿಸಿದೆ. ಅಲ್ಲದೇ, ಮೂವರು ಪ್ರತಿವಾದಿಗಳಿಗೆ ಸಮನ್ಸ್ ಜಾರಿ ಮಾಡಲಾಗಿದ್ದು, ವಿಚಾರಣೆಯನ್ನು ಜೂನ್ 9ಕ್ಕೆ ಮುಂದೂಡಲಾಗಿದೆ.
ಸಮೀರ್ ವಿರುದ್ಧ 06-03-2025ರಂದು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಲಾಗಿದ್ದು, ಯುಆಎರ್‌ಎಲ್ ವಿಡಿಯೊ ತೆಗೆಯುವಂತೆ ಆದೇಶಿಸಲಾಗಿತ್ತು. ಇದನ್ನು ಉಲ್ಲಂಘಿಸಿ ಸಮೀರ್ ಅವರು ಫಿರ್ಯಾದಿಗಳು, ಧರ್ಮಸ್ಥಳ ದೇವಸ್ಥಾನ ಮತ್ತು ಅದರ ಮುಖ್ಯಸ್ಥರು ಹಾಗೂ ಅವರ ಕುಟುಂಬದವರ ಮಾನಹಾನಿ ಮಾಡುವಂಥ ಎರಡನೇ ವಿಡಿಯೊ ಅಪ್‌ಲೋಡ್ ಮಾಡಿದ್ದಾರೆ ಎಂದು ಆರೋಪಿಸಲಾಗಿದೆ. ವಿಶೇಷ ಸಂದರ್ಭದಲ್ಲಿ ಮಾತ್ರ ಏಕಪಕ್ಷೀಯ ಕಡ್ಡಾಯ ಪ್ರತಿಬಂಧಕಾದೇಶ ಮಾಡಲಾಗುತ್ತದೆ. ಮೇಲ್ನೋಟಕ್ಕೆ ದಾಖಲೆಯಲ್ಲಿ ಸಲ್ಲಿಸಿರುವುದನ್ನು ಪರಿಶೀಲಿಸಿದ್ದು, ಫಿರ್ಯಾದಿಗೆ ಆಗುವ ಸರಿಪಡಿಸಲಾಗದ ಹಾನಿಯನ್ನು ತಡೆಯಲು https://www.youtube.com/watch? v=68lkvBlHcwYನಲ್ಲಿನ ವಿಡಿಯೋ ಡಿಲೀಟ್ ಮಾಡಲು ಎಂ ಡಿ ಸಮೀರ್‌ಗೆ ನಿರ್ದೇಶಿಸುವ ಮೂಲಕ ಏಕಪಕ್ಷೀಯ ಕಡ್ಡಾಯ ಪ್ರತಿಬಂಧಕಾದೇಶ ಮಾಡುವುದು ಅಗತ್ಯವಾಗಿದೆ ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ.
ಧೂತ ಸಮೀರ್ ಎಂ ಡಿ, ಸಮೀರ್ ಎಂ ಡಿ ಯೂಟ್ಯೂಬ್ ಚಾನಲ್‌ಗಳಲ್ಲಿ ಧರ್ಮಸ್ಥಳ ವಿಲೇಜ್ ಹಾರರ್ ಪಾರ್ಟ್ 2/ಸಾಕ್ಷಿ ನಾಶ/ಸೌಜನ್ಯ ಕೇಸ್ ಹೆಸರಿನಲ್ಲಿ ಪ್ರಕಟಿಸಿರುವ ವಿಡಿಯೋ ಲಿಂಕ್ ತೆಗೆಯಲು ಆದೇಶಿಸಬೇಕು ಎಂದು ಅರ್ಜಿದಾರರು ಕೋರಿದ್ದರು. ಅರ್ಜಿದಾರರ ಪರವಾಗಿ ವಕೀಲ ಎಸ್ ರಾಜಶೇಖರ್ ವಕಾಲತ್ತು ಹಾಕಿದ್ದಾರೆ.