ಸೌಜನ್ಯ ಕೊಲೆಗೆ ಸಂಬಂಧಿಸಿದ 'ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ' ವಿಡಿಯೋ ನಿರ್ಬಂಧ

ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ತೆರನಾದ ಆಧಾರರಹಿತ ಸುದ್ದಿ/ಮಾಹಿತಿ/ವಿಚಾರವನ್ನು ಪ್ರಸಾರ/ಹಂಚಿಕೆ ಮಾಡದಂತೆ ನ್ಯಾಯಾಲಯ ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ
ಸೌಜನ್ಯ ಕೊಲೆಗೆ ಸಂಬಂಧಿಸಿದ 'ಊರಿಗೆ ದೊಡ್ಡವರೆ ಕೊಲೆ ಮಾಡಿದವರಾ' ವಿಡಿಯೋ ನಿರ್ಬಂಧ
Published on

ಬೆಳ್ತಂಗಡಿಯ ವಿದ್ಯಾರ್ಥಿನಿ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ ಕೇಂದ್ರಿತವಾಗಿ ʼಊರಿಗೇ ದೊಡ್ಡವರೆ ಕೊಲೆ ಮಾಡಿದವರಾ?ʼ ಎಂಬ ಹೆಸರಿನಲ್ಲಿ ಯೂಟ್ಯೂಬರ್‌ ಎಂ ಡಿ ಸಮೀರ್‌ ಅಪ್‌ಲೋಡ್‌ ಮಾಡಿದ್ದ ವಿಡಿಯೋವನ್ನು ತೆಗೆದುಹಾಕಲು ಬೆಂಗಳೂರಿನ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಲಯವು ಈಚೆಗೆ ಆದೇಶಿಸಿದ್ದು, ನ್ಯಾಯಾಲಯದ ಆದೇಶದಂತೆ ವಿಡಿಯೋವನ್ನು ಯೂಟ್ಯೂಬ್‌ ನಿರ್ಬಂಧಿಸಿದೆ.

ಧರ್ಮಸ್ಥಳದ ಎಸ್‌ ಸುಕೇಶ್‌ ಮತ್ತು ಶೀನಪ್ಪ ಮೂಲ ದಾವೆಯ ಭಾಗವಾಗಿ ಸಲ್ಲಿಸಿದ್ದ ಮಧ್ಯಂತರ ಅರ್ಜಿಯನ್ನು 6ನೇ ಹೆಚ್ಚುವರಿ ಸಿಟಿ ಸಿವಿಲ್‌ ಮತ್ತು ಸತ್ರ ನ್ಯಾಯಾಧೀಶ ಎಸ್‌ ನಟರಾಜ್‌ ಅವರು ಪುರಸ್ಕರಿಸಿದ್ದಾರೆ.

ಪ್ರತಿವಾದಿಯಾಗಿರುವ ಎಂ ಡಿ ಸಮೀರ್‌, ಧೂತ ಸಮೀರ್‌ ಎಂ ಡಿ ಯೂಟ್ಯೂಬ್‌ ಚಾನಲ್‌, ಸಮೀರ್‌ ಎಂ ಡಿ ಯೂಟ್ಯೂಬ್‌ ಚಾನಲ್‌ ಮತ್ತು ಅವರ ಬೆಂಬಲಿಗರು ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬ ಸದಸ್ಯರ ವಿರುದ್ದ ಯಾವುದೇ ತೆರನಾದ ಆಧಾರರಹಿತ ಸುದ್ದಿ/ಮಾಹಿತಿ/ವಿಚಾರ ಪ್ರಸಾರ/ಹಂಚಿಕೆ ಮಾಡದಂತೆ ನ್ಯಾಯಾಲಯವು ಏಕಪಕ್ಷೀಯ ತಾತ್ಕಾಲಿಕ ಪ್ರತಿಬಂಧಕಾದೇಶ ಮಾಡಿದೆ.

ಅಲ್ಲದೇ, ಶ್ರೀ ಕ್ಷೇತ್ರ ಧರ್ಮಸ್ಥಳದ ಮುಖ್ಯಸ್ಥ ವೀರೇಂದ್ರ ಹೆಗ್ಗಡೆ ಮತ್ತು ಅವರ ಕುಟುಂಬದ ವಿರುದ್ದ ಯೂಟ್ಯೂಬ್‌ ಎಲ್‌ಎಲ್‌ಸಿ, ಇನ್‌ಸ್ಟಾಗ್ರಾಂ ಎಲ್‌ಎಲ್‌ಸಿ, ಫೇಸ್‌ಬುಕ್‌, ಗೂಗಲ್‌, ಮೆಟಾದಲ್ಲಿ ಮಾಡಿರುವ ಆಧಾರರಹಿತ ಆರೋಪಗಳನ್ನು ಉಲ್ಲೇಖಿತ ಯುಆರ್‌ಎಲ್‌ಗಳನ್ನು ತೆಗೆದು ಹಾಕಬೇಕು ಎಂದು ಏಕಪಕ್ಷೀಯ ಮಧ್ಯಂತರ ಕಡ್ಡಾಯ ಪ್ರತಿಬಂಧಕಾದೇಶ ಮಾಡಿ ನ್ಯಾಯಾಲಯ ಆದೇಶಿಸಿದೆ.

“ಈಗ ಇಂಟರ್‌ನೆಟ್‌ ಮೂಲಕ ಸಂವಹನವು ತಕ್ಷಣಕ್ಕೆ ಸಾಧ್ಯವಿದ್ದು, ವಿಸ್ತೃತ ನೆಲೆಯಲ್ಲಿ ಸಾಕಷ್ಟು ಪರಿಣಾಮ ಉಂಟು ಮಾಡಲಿದೆ. ತಂತ್ರಜ್ಞಾನದಲ್ಲಿ ಬದಲಾವಣೆಯಾಗಿರುವುದನ್ನು ಪರಿಗಣಿಸಿ ನ್ಯಾಯಾಲಯಗಳು ಹಿಂದೆಂದಿಗಿಂತಲೂ ಈಗ ವಿಶೇಷವಾಗಿ ಮಧ್ಯಂತರ ಪ್ರತಿಬಂಧಕಾದೇಶ ಮಾಡುವಾಗ ಹೆಚ್ಚು ವಾಸ್ತವಿಕವಾಗಬೇಕಾಗುತ್ತದೆ” ಎಂದು ನ್ಯಾಯಾಲಯ ಆದೇಶದಲ್ಲಿ ದಾಖಲಿಸಿದೆ. ಅಲ್ಲದೇ, ಎಲ್ಲಾ ಪ್ರತಿವಾದಿಗಳಿಗೂ ಸಮನ್ಸ್‌ ಜಾರಿ ಮಾಡಿ, ವಿಚಾರಣೆಯನ್ನು ಏಪ್ರಿಲ್‌ 24ಕ್ಕೆ ಮುಂದೂಡಿದೆ.

Also Read
ಯೂಟ್ಯೂಬರ್‌ ಸಮೀರ್‌ಗೆ ಬಳ್ಳಾರಿ ಪೊಲೀಸರು ನೀಡಿದ್ದ ನೋಟಿಸ್‌ಗೆ ತಡೆ; ತನಿಖಾಧಿಕಾರಿ ವಿರುದ್ಧ ಹೈಕೋರ್ಟ್‌ ಕಿಡಿ

ಸುಕೇಶ್‌ ಮತ್ತು ಶೀನಪ್ಪ ಅವರನ್ನು ಪ್ರತಿನಿನಿಧಿಸಿದ್ದ ವಕೀಲ ಎಸ್‌ ರಾಜಶೇಖರ್‌ ಅವರು “ಸಮೀರ್‌ ಮಾಡಿರುವ ವಿಡಿಯೋವನ್ನು ವೀರೇಂದ್ರ ಹೆಗ್ಗಡೆ ಅವರ ವಿರುದ್ಧವಾಗಿರುವವರು ಪ್ರಾಯೋಜಕತ್ವ ವಹಿಸಿದ್ದಾರೆ. ಸಮೀರ್‌ ಅವರು ಹೆಗ್ಗೆಡೆ ಕುಟುಂಬದ ವಿರುದ್ಧ ಹಗೆತನ ಹೊಂದಿರುವವರ ಜೊತೆ ಸೇರಿ ಪಿತೂರಿ ನಡೆಸಿದ್ದಾರೆ. ಸಂವಿಧಾನದ 19(1)(ಎ) ವಿಧಿಯಡಿ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಲಭ್ಯವಿದ್ದರೂ ಸಂವಿಧಾನದ 19(2)ನೇ ವಿಧಿ ಅಡಿ ಪರಿಪೂರ್ಣವಲ್ಲ. ಸಕಾರಣಗಳಿದ್ದಾಗ ಅದನ್ನು ನಿರ್ಬಂಧ ವಿಧಿಸಬಹುದಾಗಿದ್ದು, ಮಾನಹಾನಿಯಂಥ ಸಂದರ್ಭದಲ್ಲಿ ನಿರ್ಬಂಧಿಸಬಹುದಾಗಿದೆ. ಸಮೀರ್‌ ವಿಡಿಯೋದಲ್ಲಿನ ವಿಷಯವು ಸುಳ್ಳಾಗಿದ್ದು, ಅದು ಮಾನಹಾನಿಯಾಗಿದೆ” ಎಂದು ಆಕ್ಷೇಪಿಸಿದ್ದರು.

Also Read
ಸೌಜನ್ಯ ಕೊಲೆ ಪ್ರಕರಣ: ಯೂಟ್ಯೂಬರ್‌ ಸಮೀರ್‌ ವಿರುದ್ಧದ ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ

ಈ ಹಿನ್ನೆಲೆಯಲ್ಲಿ ಸಮೀರ್‌ ಯೂಟ್ಯೂಬ್‌ ಚಾನಲ್‌ನಿಂದ ʼಊರಿಗೆ ದೊಡ್ಡವರೆ ಕೊಲೆ ಮಾಡಿದವರಾ?ʼ ತೆಗೆದು ಹಾಕಲಾಗಿದ್ದು, ನ್ಯಾಯಾಲಯದ ಆದೇಶದ ಹಿನ್ನೆಲೆಯಲ್ಲಿ ವಿಡಿಯೋ ತೆಗೆಯಲಾಗಿದೆ ಎಂಬ ಒಕ್ಕಣೆ ಬರುತ್ತಿದೆ. 27-02-2025ರಂದು ಯೂಟ್ಯೂಬ್‌ಗೆ ಅಪ್‌ಲೋಡ್‌ ಮಾಡಲಾಗಿದ್ದ‌ ಈ ವಿಡಿಯೋವನ್ನು ಸರಿಸುಮಾರು 2 ಕೋಟಿ ಮಂದಿ ವೀಕ್ಷಿಸಿದ್ದಾರೆ.

Also Read
ಸೌಜನ್ಯ ಪ್ರಕರಣ: ಶಾಂತಿಯುತ ಪ್ರತಿಭಟನೆ ನಡೆಸಲು ಹೈಕೋರ್ಟ್‌ ಅನುಮತಿ

ಸಮೀರ್‌ ವಿಡಿಯೊ ಹಿನ್ನೆಲೆಯಲ್ಲಿ ಬಳ್ಳಾರಿ ಪೊಲೀಸರು ಆತನ ವಿರುದ್ಧ ಪ್ರಕರಣ ದಾಖಲಿಸಿ, ಪೊಲೀಸ್‌ ನೋಟಿಸ್‌ ಜಾರಿ ಮಾಡಿದ್ದರು. ಪೊಲೀಸ್‌ ನೋಟಿಸ್‌ ಮತ್ತು ಎಫ್‌ಐಆರ್‌ಗೆ ಹೈಕೋರ್ಟ್‌ ತಡೆಯಾಜ್ಞೆ ವಿಧಿಸಿದೆ. ಇನ್ನು, ಸೌಜನ್ಯಗೆ ನ್ಯಾಯ ಹೆಸರಿನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸಲು ನಿರಾಕರಿಸಿದ್ದ ಸರ್ಕಾರದ ಕ್ರಮವನ್ನು ಬದಿಗೆ ಸರಿಸಿ, ಪ್ರತಿಭಟನೆಗೆ ಹೈಕೋರ್ಟ್‌ ಅನುಮತಿಸಿರುವುದನ್ನು ಇಲ್ಲಿ ನೆನೆಯಬಹುದಾಗಿದೆ.

Kannada Bar & Bench
kannada.barandbench.com