ಅನುಸೂಚಿತ ಜಿಲ್ಲೆಗಳು/ ಪ್ರದೇಶದ ಶಿಕ್ಷಕರಿಗೆ ಶೇ 100ರಷ್ಟು ಮೀಸಲಾತಿ ಒದಗಿಸುವುದು ಅಸಾಂವಿಧಾನಿಕವಾಗಿದ್ದು ಇದರಿಂದ ಶಿಕ್ಷಣ ಗುಣಮಟ್ಟದಲ್ಲಿ ರಾಜಿಯಾದಂತಾಗುತ್ತದೆ ಎಂದು ಸುಪ್ರೀಂ ಕೋರ್ಟ್ ಮಂಗಳವಾರ ಅಭಿಪ್ರಾಯಪಟ್ಟಿದೆ [ಸತ್ಯಜಿತ್ ಕುಮಾರ್ ಮತ್ತಿತರರು ಹಾಗೂ ಜಾರ್ಖಂಡ್ ಸರ್ಕಾರ ಇನ್ನಿತರರ ನಡುವಣ ಪ್ರಕರಣ].
ಹೀಗಾಗಿ ಜಾರ್ಖಂಡ್‌ನ 13 ಅನುಸೂಚಿತ ಪ್ರದೇಶಗಳ ನಿವಾಸಿಗಳಿಗೆ ಶೇ 100ರಷ್ಟು ಮೀಸಲಾತಿ ಒದಗಿಸಿ ರಾಜ್ಯ ಸರ್ಕಾರ 2016ರಲ್ಲಿ ಅಧಿಸೂಚನೆ ಹೊರಡಿಸಿತ್ತು. ಈ ಅಧಿಸೂಚನೆ ರದ್ದುಗೊಳಿಸಿ ಜಾರ್ಖಂಡ್ ಹೈಕೋರ್ಟ್ 2020ರ ಸೆಪ್ಟೆಂಬರ್‌ನಲ್ಲಿ ನೀಡಿದ್ದ ತೀರ್ಪನ್ನು ನ್ಯಾಯಮೂರ್ತಿಗಳಾದ ಎಂ ಆರ್ ಶಾ ಮತ್ತು ಬಿ ವಿ ನಾಗರತ್ನ ಅವರಿದ್ದ ಪೀಠ ಎತ್ತಿಹಿಡಿದಿದೆ.
"ಆಯಾ ಅಥವಾ ಕೆಲವು ಜಿಲ್ಲೆಗಳ ಶಿಕ್ಷಕರ ಪರವಾಗಿ 100% ಮೀಸಲಾತಿ ನೀಡುವ ಮೂಲಕ ಮತ್ತು ಹೆಚ್ಚು ಅರ್ಹ ಶಿಕ್ಷಕರ ನೇಮಕಾತಿ ನಿಷೇಧಿಸುವ ಮೂಲಕ ಶಾಲೆಗೆ ಹೋಗುವ ಮಕ್ಕಳ ಶಿಕ್ಷಣದ ಗುಣಮಟ್ಟದಲ್ಲಿ ರಾಜಿ ಮಾಡಿಕೊಳ್ಳಲಾಗದು" ಎಂದು ಸುಪ್ರೀಂ ಕೋರ್ಟ್ ಹೇಳಿದೆ.
ಈಗಾಗಲೇ ಇಂದ್ರ ಸಾಹ್ನಿ ಮತ್ತು ಚೀಬ್ರೋಲು ರಾವ್ ಪ್ರತ್ಯೇಕ ಪ್ರಕರಣಗಳಲ್ಲಿ ಈ ಕುರಿತಾದ ಕಾನೂನನ್ನು ಈಗಾಗಲೇ ಇತ್ಯರ್ಥಪಡಿಸಲಾಗಿದೆ. ಶೇ 100ರಷ್ಟು ಮೀಸಲಾತಿ ಒದಗಿಸುವುದು ತಾರತಮ್ಯದಿಂದ ಕೂಡಿದ್ದು ಇದನ್ನು ಅನುಮತಿಸಲಾಗದು ಎಂದು ಸರ್ವೋಚ್ಚ ನ್ಯಾಯಾಲಯ ವಿವರಿಸಿದೆ.
ಮುಂದುವರೆದು “ಸಾರ್ವಜನಿಕ ಉದ್ಯೋಗದ ಅವಕಾಶವನ್ನು ಆಕಾಂಕ್ಷಿಗಳಿಗೆ ಅನ್ಯಾಯುತವಾಗಿ ನಿರಾಕರಿಸಲಾಗದು. ಇದು ಕೆಲವರ ವಿಶೇಷ ಹಕ್ಕಲ್ಲ. ನಾಗರಿಕರಿಗೆ ಸಮಾನ ಹಕ್ಕುಗಳಿವೆ. ಒಂದು ವರ್ಗಕ್ಕೆ ಹೆಚ್ಚು ಅವಕಾಶ ನೀಡಿ ಉಳಿದವರನ್ನು ಸಂಪೂರ್ಣವಾಗಿ ಹೊರಗಿಡುವುದನ್ನು ಸಂವಿಧಾನದ ಪಿತಾಮಹರು ಆಲೋಚಿಸಿರಲಿಲ್ಲ” ಎಂದು ಪೀಠ ತಿಳಿಸಿತು.
ರಾಜ್ಯ ಸರ್ಕಾರದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿದರೂ ಈಗಾಗಲೇ ಮಾಡಿದ ನೇಮಕಾತಿಗಳನ್ನು ತಳ್ಳಿ ಹಾಕುವುದು ವಿಶಾಲವಾದ ಸಾರ್ವಜನಿಕ ಹಿತಾಸಕ್ತಿಗೆ ಅನುಗುಣವಾಗಿಲ್ಲದ ಸಂಕೀರ್ಣ ಪ್ರಕ್ರಿಯೆಯಾಗುತ್ತದೆ ಎಂದು ಅಭಿಪ್ರಾಯಪಟ್ಟಿತು. ಆದ್ದರಿಂದ ಹೈಕೋರ್ಟ್ ತೀರ್ಪಿನಲ್ಲಿ ಮಾರ್ಪಾಡು ತಂದು ಹೊಸ ನೇಮಕಾತಿ ಪ್ರಕ್ರಿಯೆ ಆರಂಭಿಸುವ ಮೊದಲು ತರಬೇತಿ ಪಡೆದ ಪದವೀಧರ ಶಿಕ್ಷಕರಲ್ಲಿ ಕೊನೆಯದಾಗಿ ಆಯ್ಕೆಯಾದ ಅಭ್ಯರ್ಥಿ ಪಡೆದ ಅಂಕಗಳ ಪ್ರಕಾರ ಈಗಾಗಲೇ ಪ್ರಕಟಿಸಿದ ಕಟಾಫ್ ಅಂಕಗಳನ್ನು ಆಧರಿಸಿ ಸರ್ಕಾರ ಪರಿಸ್ಕೃತ ಮೆರಿಟ್ ಪಟ್ಟಿ ಸಿದ್ಧಪಡಿಸಬೇಕೆಂದು ತಿಳಿಸಿತು.
ರಾಜ್ಯ ಸರ್ಕಾರ 2016ರಲ್ಲಿ ಹೊರಡಿಸಿದ್ದ ಜಾಹೀರಾತಿಗೆ ಸಂಬಂಧಿಸಿದಂತೆ ಜಾರ್ಖಂಡ್ ಹೈಕೋರ್ಟ್ ಸೆಪ್ಟೆಂಬರ್ 2020ರಲ್ಲಿ ಅನುಸೂಚಿತ ಜಿಲ್ಲೆಗಳ ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ 2,400ಕ್ಕೂ ಹೆಚ್ಚು ಟಿಜಿಟಿ ಶಿಕ್ಷಕರ ನೇಮಕಾತಿ ರದ್ದುಗೊಳಿಸಿತ್ತು. ತಾವು ಅನುಸೂಚಿತ ಜಿಲ್ಲೆಗಳ ನಿವಾಸಿಗಳಲ್ಲದ ಕಾರಣ ಜಾರ್ಖಂಡ್‌ನ 13 ಅನುಸೂಚಿತ ಜಿಲ್ಲೆಗಳಲ್ಲಿರುವ ಶಾಲೆಗಳಲ್ಲಿ ತಮ್ಮನ್ನು ನೇಮಕ ಮಾಡಿಕೊಳ್ಳುತ್ತಿಲ್ಲ ಎಂದು ಹಲವರು ಹೈಕೋರ್ಟ್ ಮೊರೆ ಹೋಗಿದ್ದರು ಈ ಹಿನ್ನೆಲೆಯಲ್ಲಿ ನ್ಯಾಯಾಲಯದ ತೀರ್ಪು ಹೊರಬಿದ್ದಿತ್ತು. ಆದರೆ ಈ ತೀರ್ಪು ಪ್ರಶ್ನಿಸಿ 13 ಅನುಸೂಚಿತ ಜಿಲ್ಲೆಗಳ ಅಭ್ಯರ್ಥಿಗಳು ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದರು.
ನೇಮಕಾತಿ ಸಂಬಂಧ ರಾಜ್ಯಪಾಲರು ಹೊರಡಿಸಿದ ಅಧಿಸೂಚನೆ ಸಂವಿಧಾನದ ಶೆಡ್ಯೂಲ್‌ನ ಪ್ಯಾರಾಗ್ರಾಫ್ 5 (1) ಅಡಿಯಲ್ಲಿ ನೀಡಲಾದ ಅಧಿಕಾರವನ್ನು ಚಲಾಯಿಸುವುದರಿಂದ ಅದು ಕಾನೂನುಬದ್ಧವಾಗಿದೆ ಎಂದು ಸರ್ಕಾರದ ಪರ ವಕೀಲರು ಹೇಳಿದರು. ಇದಕ್ಕೆ ಸುಪ್ರೀಂ ಕೋರ್ಟ್, ರಾಜ್ಯಪಾಲರು ಮೂಲಭೂತ ಹಕ್ಕುಗಳನ್ನು ಒದಗಿಸುವುದರ ಮೇಲೆ ನಕಾರಾತ್ಮಕ ಪರಿಣಾಮ ಬೀರಲಾಗದು ಎಂದು ತಿಳಿಸಿತು.
ಅರ್ಜಿದಾರರ ಪರವಾಗಿ ಹಿರಿಯ ವಕೀಲರಾದ ರಾಜೀವ್ ಧವನ್, ವಿಕಾಸ್ ಸಿಂಗ್, ಆರ್ ವೆಂಕಟರಮಣಿ ಹಾಗೂ ವಿಭಾ ದತ್ತಾ ಮಖಿಜಾ, ಜಾರ್ಖಂಡ್ ರಾಜ್ಯದ ಪರವಾಗಿ ಹಿರಿಯ ವಕೀಲರಾದ ಕಪಿಲ್ ಸಿಬಲ್ ಮತ್ತು ಸುನಿಲ್ ಕುಮಾರ್, ಪ್ರತಿವಾದಿಗಳ ಪರವಾಗಿ ಹಿರಿಯ ವಕೀಲರಾದ ರಂಜಿತ್ ಕುಮಾರ್ ಮತ್ತು ಗೋಪಾಲ್ ಶಂಕರನಾರಾಯಣನ್ ಹಾಗೂ ಭಾಗೀದಾರರ ಪರವಾಗಿ ಹಿರಿಯ ವಕೀಲರಾದ ಅಜಿತ್ ಕುಮಾರ್ ಸಿನ್ಹಾ, ಕಾಲಿನ್ ಗೊನ್ಸಾಲ್ವೇಸ್ ಮತ್ತು ಪಲ್ಲವ್ ಸಿಸೋಡಿಯಾ ವಾದ ಮಂಡಿಸಿದರು.