Delhi High Court
Delhi High Court 
ಸುದ್ದಿಗಳು

ಮಕ್ಕಳಿಗೆ ಕೋವಿಡ್‌ ಲಸಿಕೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಪಿಐಎಲ್‌

Bar & Bench

ಕೋವಿಡ್ ಸಾಂಕ್ರಾಮಿಕತೆಯ ಹಿನ್ನೆಲೆಯಲ್ಲಿ, 12-17 ವಯೋಮಾನದ ಮಕ್ಕಳಿಗೆ ತಕ್ಷಣವೇ ಕೋವಿಡ್‌ ಲಸಿಕೆ ನೀಡುವಂತೆ ಕೋರಿ ದೆಹಲಿ ಹೈಕೋರ್ಟ್‌ನಲ್ಲಿ ಸಾರ್ವಜನಿಕ ಹಿತಾಸಕ್ತಿ ಮನವಿ ಸಲ್ಲಿಸಲಾಗಿದೆ. ಹನ್ನೆರಡು ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳ ವಿಚಾರದಲ್ಲಿ ಅವರ ಹೆತ್ತವರಿಗೆ ಲಸಿಕೆ ನೀಡುವುದಕ್ಕೆ ಆದ್ಯತೆ ನೀಡುವಂತೆ ಮನವಿಯಲ್ಲಿ ಕೋರಲಾಗಿದೆ.

ಪೋಷಕರಿಂದಾಗಿ ಕೋವಿಡ್‌ ಸೋಂಕು ತಗುಲಿ ಸಾವಿಗೆ ತುತ್ತಾಗುವ ಸಾಧ್ಯತೆ ಇರುವ ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ ಎಂದು 12 ವರ್ಷದ ಬಾಲಕಿ ತಿಯಾ ಗುಪ್ತಾ ಹಾಗೂ 8 ವರ್ಷದ ಮಗುವಿನ ತಾಯಿ ರೋಮಾ ರಹೇಜಾ ಅವರು ಸಲ್ಲಿಸಿರುವ ಮನವಿಯಲ್ಲಿ ಉಲ್ಲೇಖಿಸಲಾಗಿದೆ.

“ವಯಸ್ಕರಂತೆ ಮಕ್ಕಳಿಗೂ ಮೂಲಭೂತ ಹಕ್ಕುಗಳಿವೆ. ಸಾಂಕ್ರಾಮಿಕತೆಯ ಸಂದರ್ಭದಲ್ಲಿ ಮಕ್ಕಳನ್ನು ರಕ್ಷಿಸುವ ಹೊಣೆಗಾರಿಕೆ ಸರ್ಕಾರದ ಮೇಲಿದೆ. 'ವಿಪತ್ತು' ತಗ್ಗಿಸುವುದನ್ನು ಖಚಿತಪಡಿಸಿಕೊಳ್ಳಲು ರೋಗ ತಡೆಗಟ್ಟುವ ವೈದ್ಯಕೀಯ ಮೂಲಸೌಕರ್ಯ ಕ್ರಮಗಳ ಜೊತೆಗೆ ಮಕ್ಕಳಿಗೆ ಲಸಿಕೆ ನೀಡಲು ಅಗತ್ಯ ಕ್ರಮ ಕೈಗೊಳ್ಳಲು ನಿರ್ದೇಶಿಸಬೇಕು” ಎಂದು ಮನವಿಯಲ್ಲಿ ಕೋರಲಾಗಿದೆ.

ಲಸಿಕೆ ಪಡೆಯದ ಮಕ್ಕಳು ಹೊಸದಾದ ಹಾಗೂ ಮತ್ತೂ ಹೆಚ್ಚಿನ ಪ್ರಭಾವ ಹೊಂದಿರುವ ಕೋವಿಡ್‌ ಸೋಂಕಿಗೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂಬ ವಿಚಾರ ಎರಡನೇ ಅಲೆಯಲ್ಲಿ ರುಜುವಾತಾಗಿದೆ ಎಂದು ಅರ್ಜಿದಾರರು ಹೇಳಿದ್ದಾರೆ. ಮೂರನೇ ಅಲೆಯು ಮಕ್ಕಳಿಗೆ ಹೆಚ್ಚಿನ ಹಾನಿ ಉಂಟು ಮಾಡಬಹುದು ಎಂಬ ಅಭಿಪ್ರಾಯ ವೈದ್ಯಕೀಯ ಲೋಕದಲ್ಲಿದೆ. ಲಸಿಕೆ ಪಡೆದ ಮಕ್ಕಳು ಕೋವಿಡ್‌ ಸರಪಳಿಯನ್ನು ತುಂಡರಿಸುವುದರ ಜೊತೆಗೆ ಸಾಮಾನ್ಯ ಜೀವನ ನಡೆಸುವ ಮೂಲಕ ತಮ್ಮ ಬಾಲ್ಯಕ್ಕೆ ಮರಳುತ್ತಾರೆ ಎಂದು ವಿವರಿಸಲಾಗಿದೆ.

“ರೋಗದ ತೀವ್ರತೆ ನಿಯಂತ್ರಿಸಲು ಲಸಿಕಾ ಅಭಿಯಾನ ನಡೆಸಲಾಗುತ್ತಿದ್ದು, ಈ ಹಿನ್ನೆಲೆಯಲ್ಲಿ ಸಾಂಕ್ರಾಮಿಕತೆಯನ್ನು ಕೊನೆಗೊಳಿಸಲು ಮಕ್ಕಳಿಗೆ ಲಸಿಕೆ ನೀಡುವುದನ್ನು ತಕ್ಷಣ ಆರಂಭಿಸಬೇಕಿದೆ. ಇದರಿಂದ ಮಕ್ಕಳ ಜೀವಿಸುವ ಹಕ್ಕಿನ ಚಲಾವಣೆಯ ಜೊತೆಗೆ ಅವರ ಬಾಲ್ಯ, ಸ್ನೇಹಿತರೊಂದಿಗಿನ ಸಂಬಂಧ ಹಾಗೂ ಮನೆಯಲ್ಲಿ ವಯಸ್ಸಾದವರ ಜೊತೆ ಬೆರೆಯಲು ಅನುಕೂಲವಾಗುತ್ತದೆ. ಅಲ್ಲದೆ, ಇಚ್ಛೆಯ ಆಟಗಳು, ಅನ್ವೇಷಣೆಯ ಮೂಲಕ ಮತ್ತು ಬೌದ್ದಿಕ ಬೆಳವಣಿಗೆಯ ಜೊತೆಗೆ ಅಪಾಯದ ಬಗ್ಗೆ ಅನಿವಾರ್ಯ ಆತಂಕವನ್ನು ತೊಡೆದು ನಿರಾತಂಕವಾಗಿರಲು ಅನುಕೂಲವಾಗಲಿದೆ” ಎಂದು ಹೇಳಲಾಗಿದೆ.

ಸಾಂಕ್ರಾಮಿಕ ರೋಗದ ಎಲ್ಲಾ ಪರಿಣಾಮಗಳಿಂದ ಮಕ್ಕಳನ್ನು ರಕ್ಷಿಸಲು ಸಮಗ್ರ ರಾಷ್ಟ್ರೀಯ ಯೋಜನೆ ರೂಪಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಬೇಕೆಂದೂ ಅರ್ಜಿದಾರರು ಮನವಿ ಮಾಡಿದ್ದಾರೆ.