ಕೋವಿಡ್‌ ಲಸಿಕೆ ನೀಡಿಕೆ ನಿಲ್ಲಿಸಲು ಕೋರಿದ್ದ ಅರ್ಜಿ ವಜಾ ಮಾಡಿದ ಹೈಕೋರ್ಟ್‌; ಅರ್ಜಿದಾರರಿಗೆ ₹50,000 ದಂಡ

“ಲಸಿಕೆ ನೀಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿರುವ ಈ ಅರ್ಜಿಯನ್ನು ಸಾರ್ವಜನಿಕ ಹಿತಾಸಕ್ತಿಯಿಂದ ಸಲ್ಲಿಸಲಾಗಿಲ್ಲ. ಹೀಗಾಗಿ, ಅರ್ಜಿಯಲ್ಲಿನ ಇತರೆ ಕೋರಿಕೆಗಳನ್ನು ಪರಿಶೀಲಿಸುವ ಅಗತ್ಯವಿಲ್ಲ,” ಎಂದು ಹೇಳಿದ ನ್ಯಾಯಾಲಯ.
Covid Vaccine
Covid Vaccine
Published on

ಕೋವಿಡ್‌ ಲಸಿಕೆ ನೀಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿದ್ದ ಮನವಿಯನ್ನು ಬುಧವಾರ ಹೈಕೋರ್ಟ್‌ ವಜಾಗೊಳಿಸಿದ್ದು, ಅರ್ಜಿದಾರರಿಗೆ 50 ಸಾವಿರ ರೂಪಾಯಿ ದಂಡ ವಿಧಿಸಿದೆ.

“ಲಸಿಕೆ ನೀಡುವುದನ್ನು ನಿಲ್ಲಿಸುವಂತೆ ಕೋರಿ ಸಲ್ಲಿಸಲಾಗಿರುವ ಈ ಅರ್ಜಿಯಲ್ಲಿ ಯಾವುದೇ ಸಾರ್ವಜನಿಕ ಹಿತಾಸಕ್ತಿ ಅಡಗಿಲ್ಲ. ಹೀಗಾಗಿ ಅರ್ಜಿಯಲ್ಲಿನ ಇತರೆ ಕೋರಿಕೆಗಳನ್ನು ಪರಿಶೀಲಿಸುವ ಅಗತ್ಯವಿಲ್ಲ” ಎಂದು ಮುಖ್ಯ ನ್ಯಾಯಮೂರ್ತಿ ಅಭಯ್‌ ಶ್ರೀನಿವಾಸ್‌ ಓಕಾ ಮತ್ತು ನ್ಯಾಯಮೂರ್ತಿ ಅರವಿಂದ್‌ ಕುಮಾರ್‌ ಅವರಿದ್ದ ವಿಭಾಗೀಯ ಪೀಠ ಹೇಳಿದೆ.

ಅರ್ಜಿದಾರರ ಪೈಕಿ ಮೊದಲಿನವರು ಸೇನಾಧಿಕಾರಿಯಾಗಿರುವುದರಿಂದ ಅವರಿಗೆ ದಂಡ ವಿಧಿಸುತ್ತಿಲ್ಲ. ಆದರೆ 2 ಮತ್ತು 3ನೇ ಅರ್ಜಿದಾರರಿಗೆ 50,000 ರೂಪಾಯಿ ದಂಡ ವಿಧಿಸಿದ್ದು, ದಂಡದ ಮೊತ್ತವನ್ನು ಮುಖ್ಯಮಂತ್ರಿ ಪರಿಹಾರ ನಿಧಿಗೆ ಒಂದು ತಿಂಗಳ ಒಳಗಾಗಿ ಪಾವತಿಸುವಂತೆ ಪೀಠ ಆದೇಶಿಸಿದೆ.

ಅರ್ಜಿ ವಿಚಾರಣೆಯ ಆರಂಭದಲ್ಲಿ ಪೀಠವು ಮನವಿದಾರರನ್ನು ಎಚ್ಚರಿಸಿತು. “ಲಸಿಕೆ ಪಡೆಯುವುದಕ್ಕಾಗಿ ಜನರು ಸರತಿ ಸಾಲಿನಲ್ಲಿ ನಿಲ್ಲುತ್ತಿದ್ದಾರೆ. ಆದರೆ, ಈ ಮನವಿಯು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಿದೆ” ಎಂದಿತು.

Also Read
[ಕೋವಿಡ್ ಲಸಿಕೆ] ಖಾಸಗಿ ಆಸ್ಪತ್ರೆಗಳಲ್ಲಿ ₹1,200 ಪಾವತಿಸಿ ಲಸಿಕೆ ಪಡೆಯುವ ಸ್ಥಿತಿಯಲ್ಲಿ ಬಡವರು ಇಲ್ಲ ಎಂದ ಹೈಕೋರ್ಟ್‌

“ಮೂರನೇ ಕೋರಿಕೆಗೆ (ಲಸಿಕೆ ನೀಡುವುದನ್ನು ನಿಲ್ಲಿಸುವುದು) ನಿಮ್ಮ ಕಕ್ಷಿದಾರರು ಹೆಚ್ಚಿನ ಒತ್ತು ನೀಡಬೇಕು ಎಂದು ಹೇಳುತ್ತಿದ್ದಾರೆಯೇ ಕೇಳಿಕೊಳ್ಳಿ. ಹಾಗಾದರೆ, ಇದು ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾಗಲಿದ್ದು, ನಾವು ಅರ್ಜಿ ವಜಾ ಮಾಡುತ್ತೇವೆ. ಒಂದು ಕೋರಿಕೆ ಸಾರ್ವಜನಿಕ ಹಿತಾಸಕ್ತಿಗೆ ವಿರುದ್ಧವಾದರೆ ಮನವಿ ವಜಾಕ್ಕೆ ಅರ್ಹವಾಗುತ್ತದೆ” ಎಂದು ಪೀಠ ಹೇಳಿತು.

ಅರ್ಜಿದಾರರ ಕೋರಿಕೆಯ ಹಿನ್ನೆಲೆಯಲ್ಲಿ ಪೀಠವು 45 ನಿಮಿಷಗಳ ಕಾಲ ವಿಚಾರಣೆ ನಡೆಸಿ, ಮನವಿಯನ್ನು ವಜಾಗೊಳಿಸಿತು. “ಇತರೆ ಪ್ರಮುಖ ವಿಷಯಗಳ ವಿಚಾರಣೆಗೆ ವಿನಿಯೋಗಿಸಬಹುದಾಗಿದ್ದ 45 ನಿಮಿಷಗಳ ನ್ಯಾಯಾಲಯದ ಅಮೂಲ್ಯ ಸಮಯ ಈ ಅರ್ಜಿಯ ವಿಚಾರಣೆಗೆ ವ್ಯಯವಾಗಿದೆ. ಹೀಗಾಗಿ ದುಬಾರಿ ದಂಡಕ್ಕೆ ಈ ಪ್ರಕರಣ ಅರ್ಹವಾಗಿದೆ” ಎಂದು ಪೀಠವು ಆದೇಶದಲ್ಲಿ ಉಲ್ಲೇಖಿಸಿದೆ.

ಇದಕ್ಕೂ ಮುನ್ನ, ಅರ್ಜಿದಾರರ ಪರ ವಕೀಲ ನಿತಿನ್‌ ಅವರು “ಲಸಿಕೆಯು ಕ್ಲಿನಿಕಲ್‌ ಪರೀಕ್ಷೆಯಲ್ಲಿ ಪಾಸಾಗಿಲ್ಲ. ಲಸಿಕೆ ಪಡೆಯುವುದರಿಂದ ಜ್ವರ ಮಾತ್ರ ಬರಲಿದೆ. ಇದೊಂದೇ ಅಡ್ಡ ಪರಿಣಾಮ ಎಂದು ಮೊದಲಿಗೆ ಕೇಂದ್ರ ಸರ್ಕಾರ ಹೇಳಿತ್ತು. ಐದು ತಿಂಗಳ ಬಳಿಕ 12 ರೀತಿಯ ಅಡ್ಡ ಪರಿಣಾಮಗಳನ್ನು ಉಲ್ಲೇಖಿಸಲಾಗಿದೆ” ಎಂದು ಪೀಠದ ಗಮನಸೆಳೆದರು.

“ಲಸಿಕೆಗೆ ಬಳಸಲಾಗುತ್ತಿರುವ ಔಷಧಗಳು ವಂಶವಾಹಿ ಚಿಕಿತ್ಸಕ ಉತ್ಪನ್ನಗಳ ಅಡಿ ಬರುತ್ತವೆಯೇ ವಿನಾ ಲಸಿಕೆಯ ಅಡಿಯಲ್ಲ” ಎಂದು ನ್ಯಾಯಾಲಯಕ್ಕೆ ತಿಳಿಸಿದರು. ಮುಂದುವರೆದು, “ಇದು ವಿಜ್ಞಾನದ ಕುರಿತಾದ ಮನವಿಯಲ್ಲ. ಇದು ಕಾನೂನಿಗೆ ಸಂಬಂಧಿಸಿದ್ದಾಗಿದೆ. ಇಲ್ಲಿ ಕಾನೂನು ಪಾಲಿಸಲಾಗಿಲ್ಲ” ಎಂದು ಅವರು ವಾದ ಮಂಡಿಸಿದರು. ಆದರೆ, ಪೀಠವು ಅರ್ಜಿದಾರರ ವಾದವನ್ನು ಪುರಸ್ಕರಿಸಲಿಲ್ಲ.

Kannada Bar & Bench
kannada.barandbench.com