ಸುದ್ದಿಗಳು

ಲೈಂಗಿಕ ಕಿರುಕುಳ ವಿವರ ಬಹಿರಂಗ: ಸಮನ್ವಯಕಾರರ ವಿರುದ್ಧದ ಕ್ರಮ ಖಂಡಿಸಿದ ಎನ್ಎಲ್ಎಸ್ಐಯು ಹಳೆಯ ವಿದ್ಯಾರ್ಥಿಗಳು

Bar & Bench

ಲೈಂಗಿಕ ಕಿರುಕುಳ ಘಟನೆಯ ವಿವರ ಬಹಿರಂಗಪಡಿಸಿದ ಆರೋಪದ ಮೇಲೆ ಬೆಂಗಳೂರಿನ ಭಾರತ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ (ಎನ್‌ಎಲ್‌ಎಸ್‌ಐಯು) ಲೈಂಗಿಕ ಕಿರುಕುಳ ಸಂಹಿತೆಯಡಿಯಲ್ಲಿ ನೇಮಕಗೊಂಡ ಇಬ್ಬರು ಮಹಿಳಾ ವಿದ್ಯಾರ್ಥಿನಿ ಸಮನ್ವಯಕಾರರ (ಸ್ಟೂಡೆಂಟ್‌ ಫೆಸಿಲಿಟೇಟರ್ಸ್‌) ವಿರುದ್ಧ ವಿವಿ ಆಡಳಿತ ಮಂಡಳಿ ತೆಗೆದುಕೊಂಡಿರುವ ಕ್ರಮಕ್ಕೆ ಕಾನೂನು ಶಾಲೆಯ ಹಳೆಯ ವಿದ್ಯಾರ್ಥಿಗಳು ವಿರೋಧ ವ್ಯಕ್ತಪಡಿಸಿದ್ದಾರೆ.

ನಾಲ್ಕನೇ ವರ್ಷದ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿ ತನಗೆ "ಲೈಂಗಿಕವಾಗಿ, ದೈಹಿಕವಾಗಿ ಹಾಗೂ ಮಾನಸಿಕವಾಗಿ" ಕಿರುಕುಳ ನೀಡಿದ್ದಾನೆ ಎಂದು ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ ಮೂರನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಕೆಲ ದಿನಗಳ ಹಿಂದೆ ಮಾಡಿದ್ದ ಆರೋಪಗಳಿಗೆ ಸಂಬಂಧಿಸಿದಂತೆ ಈ ಬೆಳವಣಿಗೆ ನಡೆದಿದೆ.

ಲೈಂಗಿಕ ಕಿರುಕುಳದ ಸಂತ್ರಸ್ತರು ಮತ್ತು ಆಪಾದಿತ ಅಪರಾಧಿಗಳಿಗೆ ಸಹಾಯ ಮಾಡಲು ಮತ್ತು ಸಲಹೆ ನೀಡಲು ಎನ್‌ಎಲ್‌ಎಸ್‌ಐಯು ಸಂಹಿತೆಯಡಿ ಸಮನ್ವಯಕಾರರಾಗಿ ನೇಮಕಗೊಂಡ ಇಬ್ಬರು ವಿದ್ಯಾರ್ಥಿನಿಯರನ್ನು ಸಂತ್ರಸ್ತೆ ಸಂಪರ್ಕಿಸಿ ಘಟನೆ ಕುರಿತು ವಿವರಿಸಿದ್ದರು.

ಪ್ರತಿಯಾಗಿ ಸಂತ್ರಸ್ತೆ ಪರ ಹೇಳಿಕೆ ನೀಡಿದ್ದ ಸಮನ್ವಯಕಾರರು ಆರೋಪಿ ವಿದ್ಯಾರ್ಥಿಯ ಹೆಸರನ್ನು ಮತ್ತು ಸೂಕ್ಷ್ಮವಾದ ವೈಯಕ್ತಿಕ ಮಾಹಿತಿಯನ್ನು ಬಹಿರಂಗಪಡಿಸಿದ್ದರು, ಈ ವಿವರಗಳು ವಿವಿ ವಿದ್ಯಾರ್ಥಿಗಳ ಇ-ಮೇಲ್‌ ಮತ್ತು ಖಾಸಗಿ ಫೇಸ್‌ಬುಕ್‌ ಗುಂಪಿನಲ್ಲಿ ಬಹಿರಂಗಗೊಂಡಿದ್ದವು. ಹೀಗಾಗಿ ಅವರ ವಿರುದ್ಧ ಶಿಸ್ತು ಕ್ರಮಕ್ಕೆ ಆಡಳಿತಮಂಡಳಿ ಆದೇಶಿಸಿತ್ತು. ಇಬ್ಬರೂ ಸಮನ್ವಯಕಾರರು ಸಾರ್ವಜನಿಕವಾಗಿ ಕ್ಷಮೆ ಯಾಚಿಸಬೇಕೆಂದು ಒತ್ತಾಯಿಸಲಾಗಿತ್ತು. ಆದರೆ ಹಾಗೆ ಮಾಡಿದರೆ ಅದು ಪೂರ್ವನಿದರ್ಶನವಾಗಿ ಬಿಡುತ್ತದೆ ಮತ್ತು ಭವಿಷ್ಯದಲ್ಲಿ ಸಂತ್ರಸ್ತರು ತಮ್ಮ ನೋವುಗಳನ್ನು ಹೇಳಿಕೊಳ್ಳಲು ತೊಂದರೆಯಾಗುತ್ತದೆ ಎಂಬ ಕಾರಣ ನೀಡಿ ಇದಕ್ಕೆ ಅವರಿಬ್ಬರೂ ಸಮ್ಮತಿಸಿರಲಿಲ್ಲ. ಹೀಗಾಗಿ ಅವರಿಗೆ ದಂಡ ವಿಧಿಸಿ ಎಲ್ಲಾ ಜವಾಬ್ದಾರಿಯುತ ಸ್ಥಾನಗಳಿಂದ ಬಿಡುಗಡೆ ಮಾಡಲಾಗಿತ್ತು.

ವಿಶ್ವವಿದ್ಯಾಲಯದ ಈ ನಿಲುವನ್ನು ತೀವ್ರವಾಗಿ ಖಂಡಿಸಿ 179 ಹಳೆಯ ವಿದ್ಯಾರ್ಥಿಗಳ ಗುಂಪು ಬಹಿರಂಗ ಪತ್ರ ಬರೆದಿದೆ. ಸಂಹಿತೆಯಡಿ ಯಾವುದೇ ವಿಚಾರಣೆ ನಡೆಯುತ್ತಿರಲಿಲ್ಲವಾದ್ದರಿಂದ ಗೌಪ್ಯತೆಯ ಉಲ್ಲಂಘನೆಯಾಗಿಲ್ಲ. ಸಂತ್ರಸ್ತರ ಕೋರಿಕೆ ಮೇರೆಗೆ ಫೆಸಿಲಿಟೇಟರ್‌ಗಳು ಘಟನೆಯ ವಿವರಗಳನ್ನು ಹಂಚಿಕೊಂಡಿದ್ದಾರೆ ಎಂದು ಪತ್ರದಲ್ಲಿ ತಿಳಿಸಲಾಗಿದೆ. ಅಲ್ಲದೆ, ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯ ವಿವರ ಬಹಿರಂಗಗೊಳಿಸುವುದಕ್ಕೂ ಮುನ್ನ ಈ ಕುರಿತು ವಿವಿಯ ಲೈಂಗಿಕ ದೌರ್ಜನ್ಯ ತಡೆ ನೀತಿಯ ಸಲಹಾಕಾರರ ಜೊತೆ ವಿದ್ಯಾರ್ಥಿಗಳು ಚರ್ಚಿಸಿ, ಅವರ ಆಕ್ಷೇಪಣೆ ಇಲ್ಲವೆಂದು ತಿಳಿದ ನಂತರವೇ ಈ ಹೆಜ್ಜೆ ಇರಿಸಿದ್ದಾರೆ ಎಂದು ಹೇಳಲಾಗಿದೆ.