ಬೆಂಗಳೂರು ರಾಷ್ಟ್ರೀಯ ಕಾನೂನು ಶಾಲೆ ವಿದ್ಯಾರ್ಥಿಯಿಂದ ಲೈಂಗಿಕ ಕಿರುಕುಳ: ಒಡಿಶಾ ವಿದ್ಯಾರ್ಥಿನಿಯ ʼಮೀ ಟೂʼ ಆರೋಪ

ಟ್ವಿಟರ್‌ನಲ್ಲಿ ವಿದ್ಯಾರ್ಥಿನಿ ಮಾಡಿರುವ ಆರೋಪಗಳನ್ನು ಎನ್ಎಲ್ಎಸ್ಐಯು ವಿದ್ಯಾರ್ಥಿ ನಿರಾಕರಿಸಿದ್ದಾನೆ.
NLSIU
NLSIU

ಬೆಂಗಳೂರಿನ ಭಾರತೀಯ ವಿಶ್ವವಿದ್ಯಾಲಯ ರಾಷ್ಟ್ರೀಯ ಕಾನೂನು ಶಾಲೆಯ ನಾಲ್ಕನೇ ವರ್ಷದ ಕಾನೂನು ವಿದ್ಯಾರ್ಥಿಯೊಬ್ಬ ತನಗೆ ಲೈಂಗಿಕ ಕಿರುಕುಳ ನೀಡಿದ್ದಾನೆ ಎಂದು ಒಡಿಶಾದ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯದ (ಎನ್‌ಎಲ್‌ಯು) ಮೂರನೇ ವರ್ಷದ ವಿದ್ಯಾರ್ಥಿನಿಯೊಬ್ಬರು ಆರೋಪಿಸಿದ್ದಾರೆ.

ತನಗೆ ತಿಂಗಳುಗಟ್ಟಲೆ ಕಿರುಕುಳ ನೀಡಲಾಗಿತ್ತು. ಪರಿಸ್ಥಿತಿ ನಿಯಂತ್ರಣ ತಪ್ಪಿದ್ದರಿಂದ ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿ ಮತ್ತು ಅವನ ಕುಟುಂಬ ಸದಸ್ಯರ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತಾಯಿತು ಎಂದು ವಿದ್ಯಾರ್ಥಿನಿ ಟ್ವೀಟ್‌ ಮಾಡಿದ್ದಾರೆ.

ದೂರು ನೀಡಿದ ಬಳಿಕ ವಿದ್ಯಾರ್ಥಿಯ ಕುಟುಂಬ ಸದಸ್ಯರು ಬೆಂಗಳೂರಿಗೆ ಆಗಮಿಸಿ ದೂರು ಹಿಂಪಡೆಯುವಂತೆ ಮನವೊಲಿಸಿದರು. ಕಿರುಕುಳಕ್ಕೆ ಕಡಿವಾಣ ಹಾಕುವಂತೆ ಷರತ್ತು ವಿಧಿಸಿ, ಒಲ್ಲದ ಮನಸ್ಸಿನಿಂದಲೇ ವಿದ್ಯಾರ್ಥಿನಿ ಇದಕ್ಕೆ ಒಪ್ಪಿದ್ದಳು. ಆದರೆ ತನ್ನ ʼಮೇಕ್‌ ಮೈ ಟ್ರಿಪ್‌ʼ ಖಾತೆಯನ್ನು ಎನ್‌ಎಲ್‌ಎಸ್‌ಐಯು ವಿದ್ಯಾರ್ಥಿ ದುರ್ಬಳಕೆ ಮಾಡಿಕೊಂಡು ಕೊಲ್ಕತ್ತಾ ಪ್ರಯಾಣದ ಟಿಕೆಟ್‌ ರದ್ದುಪಡಿಸಿದ್ದ ವಿಚಾರ ಕಳೆದ ಭಾನುವಾರ ಆಕೆಗೆ ಗೊತ್ತಾಯಿತು.

Also Read
ಪರೀಕ್ಷೆ ಬರೆಯಲು ವಿದ್ಯಾರ್ಥಿಗೆ ಅನುಮತಿ: ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿದ್ದ ಮೇಲ್ಮನವಿ ಹಿಂಪಡೆದ ಎನ್‌ಎಲ್‌ಎಸ್‌ಐಯು

2019ರಲ್ಲಿ ಸ್ನೇಹಿತರೊಬ್ಬರ ಮೂಲಕ ವಿದ್ಯಾರ್ಥಿಯ ಪರಿಚಯವಾಗಿತ್ತು. ವಿದ್ಯಾರ್ಥಿಯು ಸಂತ್ರಸ್ತೆಯನ್ನು ದೈಹಿಕ ಮತ್ತು ಮಾನಸಿಕ ಕಿರುಕುಳ ನೀಡತೊಡಗಿದ್ದ. ಸಂತ್ರಸ್ತೆಯು ಗರ್ಭಪಾತ ಮಾಡಿಸಿಕೊಳ್ಳುವ ಸನ್ನಿವೇಶ ಉಂಟಾದಾಗ ಆಕೆಯಿಂದ ದೂರ ಉಳಿದಿದ್ದ. ಆನಂತರ ಸಂಭೋಗ ಕ್ರಿಯೆಯಲ್ಲಿ ಪಾಲ್ಗೊಳ್ಳದಂತೆ ವೈದ್ಯರ ಬಲವಾದ ಸಲಹೆಯ ಹೊರತಾಗಿಯೂ ವಿದ್ಯಾರ್ಥಿಯು ತನ್ನ ಮನೆಗೆ ಬಂದು ಬಲವಂತವಾಗಿ ದೈಹಿಕ ಸಂಪರ್ಕ ಮಾಡುತ್ತಿದ್ದ ಎಂದು ಸಂತ್ರಸ್ತೆ ವಿವರಿಸಿದ್ದಾರೆ. ತನಿಖಾಧಿಕಾರಿಯೊಬ್ಬರ ಎದುರು ಕ್ಷಮೆ ಯಾಚಿಸಿ ಕಿರುಕುಳ ನೀಡುವುದಿಲ್ಲ ಎಂದು ಪ್ರತಿಜ್ಞೆ ಮಾಡಿದ್ದರೂ ಆತ ತನಗೆ ಮಾನಸಿಕ ಕಿರುಕುಳ ನೀಡುತ್ತಿದ್ದ ಎಂದು ವಿದ್ಯಾರ್ಥಿನಿ ʼಬಾರ್‌ ಅಂಡ್‌ ಬೆಂಚ್ʼಗೆ ತಿಳಿಸಿದ್ದಾರೆ. ಆಕೆ ಮಾಡಿರುವ ಟ್ವೀಟ್‌ ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗಿದ್ದು 700 ರಿಟ್ವೀಟ್‌ಗಳು 3000 ಲೈಕ್‌ಗಳು ವ್ಯಕ್ತವಾಗಿವೆ.

ಮತ್ತೊಂದೆಡೆ ಆಕೆಯ ಗೆಳೆಯ ಆರೋಪ ನಿರಾಕರಿಸಿದ್ದಾನೆ. “ಪ್ರಕರಣದ ವಿಚಾರಣೆ ನಡೆಯುತ್ತಿರುವುದರಿಂದ ಹೆಚ್ಚಿನ ವಿವರಗಳನ್ನು ನೀಡಲು ಹೋಗುವುದಿಲ್ಲ. ಆದರೂ ವೈದ್ಯಕೀಯ ಪ್ರಕ್ರಿಯೆಗಳು ನಡೆದಾಗಲೆಲ್ಲಾ ನಾನು ದೈಹಿಕವಾಗಿ, ಭಾವನಾತ್ಮಕವಾಗಿ ಮತ್ತು ಆರ್ಥಿಕವಾಗಿ ಆಕೆಯೊಂದಿಗೆ ಇದ್ದೆ. ಟಿಕೆಟ್ ರದ್ದತಿಗೆ ಸಂಬಂಧಿಸಿದಂತೆ, ಪೂರ್ತಿ ತಪ್ಪಾಗಿ ಅರ್ಥ ಮಾಡಿಕೊಳ್ಳಲಾಗಿದೆ” ಎಂದಿದ್ದಾನೆ.

ಇತ್ತ ಎನ್‌ಎಲ್‌ಎಸ್‌ಐಯು “ಲೈಂಗಿಕ ಕಿರುಕುಳ ನೀಡಿದ ಬಗ್ಗೆತನಿಖೆ ಪ್ರಗತಿಯಲ್ಲಿದ್ದು ವಿವರಗಳನ್ನು ವಿಶ್ವವಿದ್ಯಾಲಯ ಯಾರೊಂದಿಗೂ ಹಂಚಿಕೊಳ್ಳುವುದಿಲ್ಲ” ಎಂದು ತಿಳಿಸಿದೆ.

Related Stories

No stories found.
Kannada Bar & Bench
kannada.barandbench.com