Lawyers
Lawyers  
ಸುದ್ದಿಗಳು

ಕೋವಿಡ್‌ ಎರಡನೇ ಅಲೆಗೆ ತತ್ತರಿಸಿದ ರಾಜ್ಯದ ವಕೀಲ ಸಮುದಾಯ; ಒಂದೂವರೆ ತಿಂಗಳ ಅವಧಿಯಲ್ಲಿ 175ಕ್ಕೂ ಹೆಚ್ಚು ಸಾವು

Siddesh M S

ಕಳೆದ ಏಪ್ರಿಲ್‌ನಲ್ಲಿ ಆರಂಭವಾದ ಕೋವಿಡ್‌ ಎರಡನೇ ಅಲೆಯಿಂದ ರಾಜ್ಯದಲ್ಲಿ ಈವರೆಗೆ ಅಂದಾಜು 175ಕ್ಕೂ ಹೆಚ್ಚು ವಕೀಲರು ಹಾಗೂ 15ಕ್ಕೂ ಹೆಚ್ಚು ವಿವಿಧ ನ್ಯಾಯಾಲಯಗಳ ಸಿಬ್ಬಂದಿ ಸಾವನ್ನಪ್ಪಿರುವ ಸಂಗತಿ 'ಬಾರ್‌ ಅಂಡ್‌ ಬೆಂಚ್‌'ಗೆ ವಿವಿಧ ಮಾಹಿತಿ ಮೂಲಗಳಿಂದ ಲಭ್ಯವಾಗಿದೆ. ಇದೇ ವೇಳೆ, ರಾಜಧಾನಿ ಬೆಂಗಳೂರಿನಲ್ಲಿಯೇ ಸುಮಾರು 70 ಮಂದಿ ವಕೀಲರು ಕೊರೊನಾಗೆ ಬಲಿಯಾಗಿರುವ ಆಘಾತಕಾರಿ ಮಾಹಿತಿಯೂ ಲಭ್ಯವಾಗಿದೆ.

ರಾಜ್ಯದ ಆರು ಜಿಲ್ಲೆಗಳಲ್ಲಿ ಸಾವನ್ನಪ್ಪಿದ ವಕೀಲರ ಸಂಖ್ಯೆ ಎರಡಂಕಿ ದಾಟಿದೆ. ಬೆಂಗಳೂರಿನ ನಂತರದ ಸ್ಥಾನದಲ್ಲಿ ಬೀದರ್‌ (17), ಬೆಳಗಾವಿ (15), ಮೈಸೂರು (13), ತುಮಕೂರು (12) ಮತ್ತು ಬಾಗಲಕೋಟೆ (11) ಇರುವುದು ತಿಳಿದು ಬಂದಿದೆ.

ರಾಜ್ಯದಾದ್ಯಂತ ಸೋಂಕಿಗೆ ಒಳಗಾಗಿರುವ ವಕೀಲರು ಹಾಗೂ ನ್ಯಾಯಾಂಗ ಸಿಬ್ಬಂದಿಯ ಮಾಹಿತಿಯನ್ನು ಸಲ್ಲಿಸುವಂತೆ ಜಿಲ್ಲಾ ನ್ಯಾಯಾಲಯಗಳಿಗೆ ರಾಜ್ಯ ಹೈಕೋರ್ಟ್‌ ಸೂಚಿಸಿದೆ ಎನ್ನಲಾಗಿದೆ. ಈ ಮಾಹಿತಿ ಸಲ್ಲಿಕೆಯಾದ ಬಳಿಕವಷ್ಟೇ ಅಧಿಕೃತ ಅಂಕಿಅಂಶಗಳ ಮಾಹಿತಿ ಲಭ್ಯವಾಗಲಿದೆ.

“ಮೊದಲ ಅಲೆಯಲ್ಲಿಯೂ ಬೆಂಗಳೂರು ವಕೀಲರ ಸಂಘದಲ್ಲಿ ನೋಂದಾಯಿಸಿದ್ದ 60ಕ್ಕೂ ಹೆಚ್ಚು ವಕೀಲರು ಸಾವನ್ನಪ್ಪಿದ್ದರು. ಇದರಲ್ಲಿ ಹಿರಿಯ ವಕೀಲರ ಸಂಖ್ಯೆ ಹೆಚ್ಚಿತ್ತು. ಈ ಬಾರಿ 70 ಮಂದಿ ಸಾವನ್ನಪ್ಪಿದ್ದು, 35-50 ವಯೋಮಾನದಲ್ಲಿದ್ದ ಶೇ. 80ರಷ್ಟು ವಕೀಲರು ಉಸಿರು ಚೆಲ್ಲಿದ್ದಾರೆ. ಸಾಕಷ್ಟು ಭವಿಷ್ಯ ಹೊಂದಿದ್ದ, ವಿವಾಹವಾಗಿದ್ದ, ಸಣ್ಣ ಮಕ್ಕಳನ್ನು ಹೊಂದಿರುವ ಯುವ ವಕೀಲರು ಕೋವಿಡ್‌ಗೆ ಬಲಿಯಾಗಿದ್ದಾರೆ. ಇದು ಅತ್ಯಂತ ಬೇಸರದ ಸಂಗತಿ” ಎಂದು ಬೆಂಗಳೂರು ವಕೀಲರ ಸಂಘದ ಅಧ್ಯಕ್ಷ ಎ ಪಿ ರಂಗನಾಥ್‌ ಬೆಂಗಳೂರಿನಲ್ಲಿ ಕೋವಿಡ್‌ ಪರಿಸ್ಥಿತಿ ವಕೀಲ ಸಮುದಾಯದ ಮೇಲೆ ಬೀರಿರುವ ಪ್ರಭಾವವನ್ನು ವಿವರಿಸಿದರು.

“ಇಂದಿಗೂ ಎಷ್ಟೋ ಕಡೆ ನೇರವಾಗಿ ತೆರಳಿ ಆಸ್ಪತ್ರೆಯಲ್ಲಿ ಹಾಸಿಗೆ ಪಡೆಯುವ ಸ್ಥಿತಿಯಿಲ್ಲ. ಹಾಸಿಗೆ ಕೊಡಿಸುವಂತೆ ನಮಗೆ ಸಾಕಷ್ಟು ಬಾರಿ ವಕೀಲರು ಕರೆ ಮಾಡುತ್ತಾರೆ. ನಾವು ಅಧಿಕಾರಿಗಳು ಮತ್ತಿತರ ಜೊತೆ ಮಾತನಾಡಿ ವ್ಯವಸ್ಥೆ ಮಾಡುವ ವೇಳೆಗೆ ಅವರು ಸ್ಥೈರ್ಯ ಕಳೆದುಕೊಂಡಿರುತ್ತಾರೆ. ಸರ್ಕಾರ ಈ ಅವ್ಯವಸ್ಥೆಯನ್ನು ಯಾವಾಗ ಸರಿಪಡಿಸುತ್ತದೋ ತಿಳಿಯದಾಗಿದೆ. ಅಲ್ಲದೇ, ವಕೀಲರನ್ನು ಫ್ರಂಟ್‌ಲೈನ್‌ ವಾರಿಯರ್ಸ್‌ ಎಂದು ಪರಿಗಣಿಸಿ ಅವರಿಗೆ ಲಸಿಕೆ ನೀಡುವುದರ ಜೊತೆಗೆ ಜೀವನ ನಿರ್ವಹಣೆಗೆ ಆರ್ಥಿಕ ಪ್ಯಾಕೇಜ್‌ ಘೋಷಿಸುವಂತೆ ಕೋರಿದ್ದ ಮನವಿಯನ್ನೂ ರಾಜ್ಯ ಸರ್ಕಾರ ಪುರಸ್ಕರಿಸಿಲ್ಲ. ನ್ಯಾಯಾಲಯದ ಚಟುವಟಿಕೆಗಳು ಸ್ಥಗಿತವಾಗಿದ್ದು, ಸಾಕಷ್ಟು ಮಂದಿಗೆ ಜೀವನ ನಿರ್ವಹಣೆಯೇ ಸಮಸ್ಯೆಯಾಗಿದೆ. ಇದು ಮುಂದುವರೆದರೆ, ವಕೀಲರ ಸಮುದಾಯ ಮತ್ತಷ್ಟು ಸಂಕಷ್ಟಕ್ಕೆ ಸಿಲುಕಲಿದೆ. ಹೀಗಾಗಿ ರಾಜ್ಯ ಸರ್ಕಾರ ನಮ್ಮ ಮನವಿಯನ್ನು ಪರಿಗಣಿಸಬೇಕು” ಎಂದು ರಂಗನಾಥ್‌ ಮನವಿ ಮಾಡಿದ್ದಾರೆ.

ಬೀದರ್‌ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಜಗತಾಪ ಅವರು “ಮೊದಲ ಅಲೆಯಲ್ಲಿಯೂ ಹತ್ತಕ್ಕೂ ಹೆಚ್ಚು ಮಂದಿ ಸಾವಿಗೀಡಾಗಿದ್ದರು. ಈ ಬಾರಿ ಇದಾಗಲೇ ಜಿಲ್ಲಾ ಕೇಂದ್ರದಲ್ಲಿ ಹತ್ತಕ್ಕೂ ಹೆಚ್ಚು ವಕೀಲರು ಕೊರೊನಾದಿಂದ ಸಾವನ್ನಪ್ಪಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲೂ ಕೆಲವರು ಕೋವಿಡ್‌ನಿಂದ ಮೃತಪಟ್ಟಿದ್ದಾರೆ. ರೋಗದ ಬಗ್ಗೆ ತಾತ್ಸಾರ ಒಂದು ಕಡೆಯಾದರೆ ಸಮುದಾಯದ ಮಟ್ಟದಲ್ಲಿ ರೋಗ ವ್ಯಾಪಿಸಿರುವುದೂ ಸಾವಿಗೆ ಕಾರಣ. ಸಾಕಷ್ಟು ಮಂದಿಗೆ ಆಸ್ಪತ್ರೆ ವ್ಯವಸ್ಥೆ ಮಾಡಿದ್ದೇವೆ. ಕೊರೊನಾ ಆರ್ಭಟವನ್ನು ನಮಗೆ ಎದುರಿಸಲಾಗದ ಸ್ಥಿತಿ ನಿರ್ಮಾಣವಾಗಿದೆ” ಎನ್ನುತ್ತಾರೆ.

ಮೊದಲನೇ ಅಲೆಯ ಸಂದರ್ಭದಲ್ಲಿ ಮೈಸೂರಿನಲ್ಲಿ 17 ಮಂದಿ ಕೋವಿಡ್‌ನಿಂದ ತೀರಿಕೊಂಡಿದ್ದರು. ಈ ಬಾರಿ ಕಳೆದ ಒಂದೂವರೆ ತಿಂಗಳಲ್ಲಿ ಎಂಟು ಮಂದಿ ವಕೀಲರು ಮೈಸೂರು ಜಿಲ್ಲಾ ಕೇಂದ್ರದಲ್ಲಿಯೇ ತೀರಿಕೊಂಡಿದ್ದಾರೆ. ತಾಲ್ಲೂಕು ಕೇಂದ್ರಗಳಲ್ಲೂ ವಕೀಲರು ಸಾವನ್ನಪ್ಪಿರುವ ಮಾಹಿತಿ ಇದೆ. ಸೋಂಕಿತರಿಗೆ ಹಾಸಿಗೆ, ಆಮ್ಲಜನಕ ಮತ್ತು ಅಗತ್ಯ ಔಷಧ ಒದಗಿಸಲು ನಾವೇ ಟಾಸ್ಕ್‌ ಫೋರ್ಸ್‌ ರಚಿಸಿಕೊಂಡಿದ್ದೇವೆ. ಅಗತ್ಯವಿರುವವರಿಗೆ ನೆರವಾಗುವ ಕೆಲಸ ಮಾಡುತ್ತಿದ್ದೇವೆ.
ಆನಂದ್‌ ಕುಮಾರ್‌, ಮೈಸೂರು ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ

ಉಳಿದಂತೆ ಕಲಬುರ್ಗಿ, ವಿಜಯಪುರ, ಧಾರವಾಡಗಳಲ್ಲಿ ಆರಕ್ಕೂ ಹೆಚ್ಚು ಮಂದಿ, ಬಳ್ಳಾರಿ ಮತ್ತು ರಾಯಚೂರಿನಲ್ಲಿ ತಲಾ 5 ಮಂದಿ ವಕೀಲರು ಕೋವಿಡ್‌ನಿಂದ ಸಾವನ್ನಪ್ಪಿರುವ ಮಾಹಿತಿ ಇದೆ. ಬಹುತೇಕ ಜಿಲ್ಲೆಗಳಲ್ಲಿ 5ಕ್ಕಿಂತ ಕಡಿಮೆ ವಕೀಲರು ಮೃತಪಟ್ಟಿರುವ ಮಾಹಿತಿ ಸ್ಥಳೀಯ ಸಂಘಗಳಿಗಿದೆ. ಲಾಕ್‌ಡೌನ್‌ ಕಾರಣಗಳಿಂದಾಗಿ ಕೆಲ ಪ್ರಕರಣಗಳು ಮುಂದಿನ ದಿನಗಳಲ್ಲಿಯಷ್ಟೇ ಬೆಳಕಿಗೆ ಬರುವ ಸಾಧ್ಯತೆಯನ್ನು ಅಲ್ಲಗಳೆಯಲಾಗದು. ಇದಕ್ಕೆ ಪೂರಕವೆನ್ನುವಂತೆ ಅನೇಕ ಜಿಲ್ಲಾ ಹಾಗೂ ತಾಲ್ಲೂಕು ಕೇಂದ್ರಗಳ ವಕೀಲರ ಸಂಘಗಳಲ್ಲಿ ಈ ಬಗ್ಗೆ ಯಾವುದೇ ಖಚಿತ ಮಾಹಿತಿ ಲಭ್ಯವಿಲ್ಲ.

ಇನ್ನು ಬೆಂಗಳೂರಿನಲ್ಲಿ ನ್ಯಾಯಾಲಯದ ಮೂವರು ಸಿಬ್ಬಂದಿ ಕೊರೊನಾ ವೈರಸ್‌ಗೆ ಪ್ರಾಣ ತೆತ್ತಿರುವ ಮಾಹಿತಿ ಇದ್ದು, ಬಳ್ಳಾರಿ, ರಾಯಚೂರಿನಲ್ಲಿ ತಲಾ ಇಬ್ಬರು ಸಿಬ್ಬಂದಿ ಕೋವಿಡ್‌ಗೆ ಬಲಿಯಾಗಿದ್ದಾರೆ ಎನ್ನಲಾಗಿದೆ. ಬೆಂಗಳೂರು ಗ್ರಾಮೀಣ, ಬಾಗಲಕೋಟೆ, ಬೀದರ್, ಚಿಕ್ಕಬಳ್ಳಾಪುರ, ಧಾರವಾಡ, ಕೊಪ್ಪಳ, ರಾಮನಗರಗಳಲ್ಲಿಯೂ ನ್ಯಾಯಾಲಯದ ಸಿಬ್ಬಂದಿ ವರ್ಗದ ಸಾವಿನ ಪ್ರಕರಣಗಳು ವರದಿಯಾಗಿವೆ.

ಜಿಲ್ಲಾ ನ್ಯಾಯಾಲಯಗಳಿಂದ ಪ್ರತಿಯೊಂದು ಜಿಲ್ಲೆಯಲ್ಲಿಯೂ ಸಂಭವಿಸಿರುವ ವಕೀಲರು ಮತ್ತು ನ್ಯಾಯಾಲಯಗಳ ಸಿಬ್ಬಂದಿವರ್ಗದ ಸಾವಿನ ಮಾಹಿತಿ ರಾಜ್ಯ ಹೈಕೋರ್ಟ್‌ಗೆ ಅಧಿಕೃತವಾಗಿ ಸಲ್ಲಿಕೆಯಾದ ನಂತರವಷ್ಟೇ ನಿಖರ ಮಾಹಿತಿ ಲಭ್ಯವಾಗುವ ನಿರೀಕ್ಷೆ ಇದೆ. ಅಧಿಕೃತ ಅಂಕಿಅಂಶಗಳು ಇನ್ನೂರು ಮುಟ್ಟಬಹುದು ಎನ್ನುವುದು ಸದ್ಯದ ಅಂದಾಜು.