ವಿಜಯಪುರದಲ್ಲಿ 11 ವಕೀಲರು ಕೋವಿಡ್‌ಗೆ ಬಲಿ, ಆಸ್ಪತ್ರೆ ವೆಚ್ಚಕ್ಕೆ ಹೌಹಾರಿದ ವಕೀಲರು, ಸಿಂದಗಿಯಲ್ಲಿ ದಕ್ಕದ ಪರಿಹಾರ!

ಜಿಲ್ಲೆಯಾದ್ಯಂತ 50ಕ್ಕೂ ಹೆಚ್ಚು ಮಂದಿ ವಕೀಲರು ಹಾಗೂ ಅವರ ಸಮೀಪದ ಕುಟುಂಬದವರಿಗೆ ಕೊರೊನಾ ಸೋಂಕು ತಗುಲಿ ಗುಣಮುಖರಾಗಿದ್ದಾರೆ. ಮತ್ತೆ ಕೆಲವರು ನಾನಾ ಕಾರಣಗಳಿಂದಾಗಿ ಕೋವಿಡ್ ಸೋಂಕಿಗೆ ತುತ್ತಾಗಿರುವುದನ್ನು ಹೇಳಿಕೊಳ್ಳಲೂ ಹಿಂಜರಿಯುತ್ತಿದ್ದಾರೆ.
Vijayapur's District court complex
Vijayapur's District court complex

ವಿಜಯಪುರ ಜಿಲ್ಲೆಯಾದ್ಯಂತ ಸುಮಾರು 11ಕ್ಕೂ ಹೆಚ್ಚು ಮಂದಿ ವಕೀಲರು ಕೋವಿಡ್‌ ಸೋಂಕಿಗೆ ಬಲಿಯಾಗಿದ್ದು, ವಿಜಯಪುರ ನಗರದಲ್ಲೇ 10 ಮಂದಿ ವಕೀಲರು ಕೋವಿಡ್‌ ಆರ್ಭಟಕ್ಕೆ ಶರಣಾಗಿರುವ ಆತಂಕಕಾರಿ ಬೆಳವಣಿಗೆ ನಡೆದಿದೆ.

“ವಿಜಯಪುರ ಜಿಲ್ಲಾ ವಕೀಲರ ಸಂಘದಲ್ಲಿ 1,400ಕ್ಕೂ ಹೆಚ್ಚು ನೋಂದಾಯಿತ ವಕೀಲರಿದ್ದು, 30ಕ್ಕೂ ಹೆಚ್ಚು ಮಂದಿ ಕೋವಿಡ್‌ ಸೋಂಕಿಗೆ ಒಳಗಾಗಿ ಗುಣಮುಖರಾಗಿದ್ದಾರೆ. 10 ಮಂದಿ ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ರಾಜ್ಯದ ಇನ್ನಿತರೆ ಜಿಲ್ಲಾ ಕೇಂದ್ರಗಳಿಗೆ ಹೋಲಿಕೆ ಮಾಡಿದರೆ ನಮ್ಮಲ್ಲೇ ಹೆಚ್ಚು ವಕೀಲರು ಕೋವಿಡ್‌ಗೆ ಬಲಿಯಾಗಿರುವ ಸಾಧ್ಯತೆ ಇದೆ” ಎಂದು ವಿಜಯಪುರ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಂ ಎಚ್‌ ಖಾಸನೀಸ‌ ಹೇಳಿದ್ದಾರೆ.

“ಕೋವಿಡ್‌ನಿಂದ ಮರಣವನ್ನಪ್ಪಿದವರಲ್ಲೆರೂ ಹಿರಿಯ ವಕೀಲರಾಗಿದ್ದಾರೆ. ಸೋಂಕಿತ ವಕೀಲರನ್ನು ಆಸ್ಪತ್ರೆಗೆ ಸೇರಿಸಿಕೊಳ್ಳದೇ ಹಲವು ಕಡೆ ಸತಾಯಿಸಲಾಗಿದೆ. ವಿವಿಧ ರೀತಿಯಲ್ಲಿ ಮನವಿ ಹಾಗೂ ಒತ್ತಡ ಹಾಕಿದ ಬಳಿಕ ಕೆಲವರಿಗೆ ಚಿಕಿತ್ಸೆ ದೊರೆತಿದೆ. ಆಸ್ಪತ್ರೆ ವೆಚ್ಚ ದುಬಾರಿಯಾಗಿದ್ದು, ಅದನ್ನು ಭರಿಸಲಾಗದೇ ಹಲವರು ತೀವ್ರ ತರಹದ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮೃತಪಟ್ಟ ವಕೀಲರ ಕುಟುಂಬದವರದ್ದು ಒಂದೊಂದು ಬಗೆಯ ಕತೆಯಿದೆ. ಹಿರಿಯ ವಕೀಲರೊಬ್ಬರ ಪತ್ನಿಗೆ ಕೋವಿಡ್‌ ಆಗಿತ್ತು. ಸಾಕಷ್ಟು ಪ್ರಯತ್ನಪಟ್ಟು ಪತ್ನಿಯನ್ನು ಉಳಿಸಿಕೊಂಡಿದ್ದರು. ಆದರೆ, ಅವರು ಕೋವಿಡ್‌ಗೆ ಬಲಿಯಾದ ಹೃದಯವಿದ್ರಾವಕ ಘಟನೆಯೂ ನಡೆದು ಹೋಯಿತು. ಸಂಕಷ್ಟದಲ್ಲಿರುವ ವಕೀಲರಿಗೆ ನಿರೀಕ್ಷಿತ ಪ್ರಮಾಣದಲ್ಲಿ ಸ್ಪಂದಿಸಲಾಗದೇ ನಾವೂ ಅಸಹಾಯಕರಾಗಿದ್ದೇವೆ” ಎಂದು ಅವರು ಬೇಸರ ವ್ಯಕ್ತಪಡಿಸಿದ್ದಾರೆ.

“ಈಗ ಆಂಟಿಜೆನ್‌ ಟೆಸ್ಟ್‌ ಮಾಡಿದ ಬಳಿಕವೇ ನ್ಯಾಯಾಲಯದ ಒಳಕ್ಕೆ ಬಿಡಲಾಗುತ್ತದೆ. ಭಯದಿಂದ ಸಾಕಷ್ಟು ಮಂದಿ ಕಕ್ಷಿದಾರರು ತಪಾಣೆಗೆ ಒಪ್ಪುತ್ತಿಲ್ಲ. ಅಲ್ಲದೇ ಕಕ್ಷಿದಾರರು ವಕೀಲರನ್ನೂ ನಂಬುತ್ತಿಲ್ಲ. ಕಕ್ಷಿದಾರರ ಅನುಪಸ್ಥಿತಿಯಲ್ಲಿ ಪ್ರಕರಣ ನಡೆಸುವ ಸ್ಥಿತಿಯಲ್ಲಿ ನಾವಿಲ್ಲ. ಕಕ್ಷಿದಾರರಿಗೆ ಕೋವಿಡ್‌ ಪರೀಕ್ಷೆ ಮಾಡಿಸಿದ ನಂತರ ಅವರಿಗೆ ಕೋವಿಡ್‌ ಪಾಸಿಟಿವ್‌ ಎಂದು ವರದಿ ಬಂದರೆ, ಏನು ಮಾಡಬೇಕು? ಕಕ್ಷಿದಾರರ ಕೊರೊನಾ ವರದಿ ಬರುವ ತನಕ ನಮಗೆ ಸಾಕಷ್ಟು ಒತ್ತಡ ಇರುತ್ತದೆ” ಎನ್ನುತ್ತಾರೆ ಖಾಸನೀಸ‌.

ವಿಜಯಪುರದ ವಕೀಲರ ಸಂಘದ ಸದಸ್ಯರಷ್ಟೇ ಅಲ್ಲದೇ ಜಿಲ್ಲೆಯ ವಿವಿಧ ತಾಲ್ಲೂಕು ವಕೀಲರ ಸಂಘದ ಸದಸ್ಯರೂ ಕೊರೊನಾದಿಂದ ಸಾಕಷ್ಟು ಪಡಿಪಾಟಲು ಪಡುತ್ತಿದ್ದಾರೆ. ಬಸವನ ಬಾಗೇವಾಡಿಯಲ್ಲಿ ನಾಲ್ವರು ಕೋವಿಡ್‌ನಿಂದ ಚೇತರಿಸಿಕೊಂಡಿದ್ದಾರೆ. ಮುದ್ದೇಬಿಹಾಳ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷರೂ ಸೇರಿದಂತೆ 12 ಮಂದಿ ಕೋವಿಡ್‌ಗೆ ತುತ್ತಾಗಿ ಗುಣಮುಖರಾಗಿದ್ದು, 44 ವರ್ಷದ ವಕೀಲರೊಬ್ಬರು ಕೋವಿಡ್‌ನಿಂದ ಸಾವನ್ನಪ್ಪಿದ್ದಾರೆ. ಇಂಡಿ ತಾಲ್ಲೂಕು ವಕೀಲರ ಸಂಘದ ಸದಸ್ಯರೊಬ್ಬರು ಕೊರೊನಾ ಸೋಂಕಿನಿಂದ ಪಾರಾಗಿದ್ದಾರೆ. ಸಿಂದಗಿಯಲ್ಲಿ ಇಬ್ಬರು ವಕೀಲರು ಸಾಕಷ್ಟು ಪಡಿಪಾಟಲು ಪಟ್ಟು ಕೊರೊನಾ ಸೋಂಕಿನಿಂದ ಚೇತರಿಸಿಕೊಂಡಿದ್ದಾರೆ.

ಹೀಗೆ, ಜಿಲ್ಲೆಯಾದ್ಯಂತ ಸುಮಾರು 50ಕ್ಕೂ ಹೆಚ್ಚು ಮಂದಿ ವಕೀಲರು ಹಾಗೂ ಅವರ ಸಮೀಪದ ಕುಟುಂಬದವರಿಗೆ ಕೊರೊನಾ ಸೋಂಕು ತಗುಲಿದ್ದು, ಅವರೆಲ್ಲರೂ ವಿಭಿನ್ನ ರೀತಿಯ ಯಾತನೆ ಅನುಭವಿಸಿ, ಗುಣಮುಖರಾಗಿ ಮನೆಗೆ ತೆರಳಿದ್ದಾರೆ. ಕೆಲ ಸೋಂಕಿತ ವಕೀಲರು ಮತ್ತು ಅವರ ಕುಟುಂಬ ಸದಸ್ಯರ ಆಸ್ಪತ್ರೆ ವೆಚ್ಚವು 16-20 ಲಕ್ಷ ರೂಪಾಯಿ ದಾಟಿರುವುದೂ ಹಲವರನ್ನು ಹೌಹಾರುವಂತೆ ಮಾಡಿದೆ. ಆಸ್ಪತ್ರೆ ವೆಚ್ಚದಿಂದಾಗಿ ಸಾಕಷ್ಟು ಮಂದಿ ಸಾಲದ ಸುಳಿಗೆ ಸಿಲುಕಿದ್ದಾರೆ. ವೃತ್ತಿಗೆ ಬಿದ್ದಿರುವ ಹೊಡೆತ ಒಂದು ಕಡೆಯಾದರೆ, ಖರ್ಚು-ವೆಚ್ಚಗಳು ಹೈರಾಣಾಗಿಸಿವೆ. ಇನ್ನೂ ಕೆಲವರು ನಾನಾ ಕಾರಣಗಳಿಂದಾಗಿ ಕೋವಿಡ್‌ ಸೋಂಕಿಗೆ ತುತ್ತಾಗಿರುವುದನ್ನು ಹೇಳಿಕೊಳ್ಳಲು ಹಿಂಜರಿಯುತ್ತಿದ್ದಾರೆ ಎನ್ನಲಾಗುತ್ತಿದೆ.

“ಕೋವಿಡ್‌ ಬಾದಿತರಾಗಿ ಗುಣಮುಖರಾದವರ ಸಮಸ್ಯೆ ಒಂದು ರೀತಿಯಿದ್ದರೆ ಉಳಿದವರ ಸಮಸ್ಯೆಗಳು ಮತ್ತಷ್ಟು ಭಿನ್ನವಾಗಿವೆ. ಕೋವಿಡ್‌ ಮಾರ್ಗಸೂಚಿಗಳಲ್ಲಿ ಸಡಿಲಿಕೆ ಮಾಡಲಾಗಿದ್ದರೂ ಹಿಂದಿನಂತೆ ನ್ಯಾಯಾಲಯಗಳಲ್ಲಿ ಕಾರ್ಯ-ಕಲಾಪಗಳು ನಡೆಯುತ್ತಿಲ್ಲ. ಈ ಮಧ್ಯೆ, ನ್ಯಾಯಾಲಯ ಪ್ರವೇಶಿಸುವ ಎಲ್ಲರೂ ಕೋವಿಡ್‌ ಪರೀಕ್ಷೆಗೆ ಒಳಗಾಗಬೇಕು ಎಂದು ನಿಯಮ ವಿಧಿಸಿರುವುದು ವಕೀಲರ ಸಮುದಾಯವನ್ನು ಗೊಂದಲ, ಆತಂಕ ಹಾಗೂ ಒತ್ತಡಕ್ಕೆ ದೂಡಿದೆ” ಎನ್ನುತ್ತಾರೆ ಖಾಸನೀಸ‌.

ವಿತರಣೆಯಾಗದ ಪರಿಹಾರದ ಹಣ?

ಸಂಕಷ್ಟದಲ್ಲಿ ಸಿಲುಕಿರುವ ವಕೀಲರು, ಕೋವಿಡ್‌ ಸೋಂಕಿತ ವಕೀಲರು ಹಾಗೂ ಸೋಂಕಿಗೆ ಬಲಿಯಾದವರಿಗೆ ರಾಜ್ಯ ವಕೀಲರ ಪರಿಷತ್ತು 5ರಿಂದ 50 ಸಾವಿರ ರೂಪಾಯಿವರೆಗೆ ಘೋಷಿಸಿದ್ದ ಪರಿಹಾರದ ಹಣ ಬಹುತೇಕ ಕಡೆ ಇನ್ನೂ ವಿತರಣೆಯಾಗಿಲ್ಲ ಎಂಬ ಆರೋಪ ಕೇಳಿಬಂದಿದೆ.

ವಿಜಯಪುರ ಜಿಲ್ಲಾ ವಕೀಲರ ಸಂಘದಲ್ಲಿ 1,400ಕ್ಕೂ ಹೆಚ್ಚು ಮಂದಿ ನೋಂದಾಯಿತ ವಕೀಲರಿದ್ದು, ಸುಮಾರು 70 ಮಂದಿಗೆ ಮಾತ್ರ 5,000 ರೂಪಾಯಿ ಪರಿಹಾರದ ಹಣ ದೊರೆತಿದೆ. ಬಸವನ ಬಾಗೇವಾಡಿ ವಕೀಲರ ಸಂಘದಲ್ಲಿ 110 ನೋಂದಾಯಿತ ವಕೀಲರಿದ್ದು, ಕೇವಲ ನಾಲ್ಕೈದು ಮಂದಿಗಷ್ಟೇ ಪರಿಹಾರದ ಹಣ ದೊರೆತಿದೆ. ಮುದ್ದೇಬಿಹಾಳ ವಕೀಲರ ಸಂಘದಲ್ಲಿ 222 ಮಂದಿ ನೋಂದಾಯಿತ ವಕೀಲರಿದ್ದು, 200ಕ್ಕೂ ಹೆಚ್ಚು ಮಂದಿ ಸಕ್ರಿಯವಾಗಿ ಪ್ರಾಕ್ಟೀಸ್‌ನಲ್ಲಿ ತೊಡಗಿಸಿಕೊಂಡಿದ್ದಾರೆ. ಈ ಪೈಕಿ ಸುಮಾರು 30 ಮಂದಿಗಷ್ಟೇ 5,000 ರೂಪಾಯಿ ಪರಿಹಾರ ದೊರೆತಿದೆ. ಇಂಡಿ ತಾಲ್ಲೂಕು ವಕೀಲರ ಸಂಘದಲ್ಲಿ 129 ಸದಸ್ಯರಿದ್ದು, ಏಳು ಮಂದಿಗೆ ಮಾತ್ರ 5,000 ರೂಪಾಯಿ ಪರಿಹಾರ ಸಿಕ್ಕಿದೆ. ಇನ್ನು ಸಿಂದಗಿಯಲ್ಲಿ 131 ವಕೀಲರು ನೋಂದಾಯಿಸಿದ್ದು, ಈ ಪೈಕಿ ಯಾರೊಬ್ಬರಿಗೂ 5 ಸಾವಿರ ರೂಪಾಯಿ ಪರಿಹಾರದ ಹಣ ಸಿಕ್ಕಿಲ್ಲ ಎಂದು ಅಲ್ಲಿನ ವಕೀಲರ ಸಂಘಗಳ ಅಧ್ಯಕ್ಷರು “ಬಾರ್‌ ಅಂಡ್‌ ಬೆಂಚ್‌”ಗೆ ಮಾಹಿತಿ ನೀಡಿದ್ದಾರೆ.

ರಾಜ್ಯ ವಕೀಲರ ಪರಿಷತ್ತು ರಾಜ್ಯದ ಸುಮಾರು 1.05 ಲಕ್ಷ ಮಂದಿ ವಕೀಲರ ಪೈಕಿ ಸುಮಾರು 17 ಸಾವಿರ ಮಂದಿಗೆ ಮಾತ್ರ 1 ಲಕ್ಷ ರೂಪಾಯಿ ಮೊತ್ತದ ವಿಮೆ ಸೌಲಭ್ಯ ಕಲ್ಪಿಸಿದೆ. 2010ರಿಂದ ಈಚೆಗೆ ವಕೀಲರಾಗಿ ನೋಂದಾಯಿಸಿಕೊಂಡಿರುವವರಿಗೆ ಲಾಕ್‌ಡೌನ್‌ ಸಂದರ್ಭದಲ್ಲಿ ನೆರವಾಗುವ ದೃಷ್ಟಿಯಿಂದ ತಲಾ 5 ಸಾವಿರ ರೂಪಾಯಿ ಪರಿಹಾರ ನೀಡುವುದಾಗಿ ಘೋಷಣೆ ಮಾಡಿತ್ತು. ಈ ಪೈಕಿ ಸುಮಾರು 12 ಸಾವಿರ ವಕೀಲರಿಗೆ ಮಾತ್ರ ಪರಿಹಾರದ ಹಣ ದೊರೆತಿದೆ ಎನ್ನಲಾಗಿದೆ.

“ಕೋವಿಡ್‌ ಸೋಂಕಿತರಾಗಿ ಗುಣಮುಖರಾಗಿರುವ ಹಲವು ವಕೀಲರ ಆಸ್ಪತ್ರೆ ವೆಚ್ಚವು ಹಲವು ಲಕ್ಷ ದಾಟಿದೆ. ಕಳೆದ ಎಂಟು ತಿಂಗಳಿಂದ ನ್ಯಾಯಾಲಯದ ಕಾರ್ಯಚಟುವಟಿಗೆಗಳು ಸ್ಥಗಿತವಾಗಿವೆ. ಇಂಥ ಸಂದರ್ಭದಲ್ಲಿ ರಾಜ್ಯ ವಕೀಲರು ಪರಿಷತ್ತು ಘೋಷಿಸಿರುವ ವಿಮೆ ಸೌಲಭ್ಯ ಮತ್ತು ಪರಿಹಾರದ ಹಣ ಏತಕ್ಕೆ ಸಾಲುತ್ತದೆ” ಎಂದು ಪ್ರಶ್ನಿಸುತ್ತಾರೆ ಮುದ್ದೇಬಿಹಾಳ ತಾಲ್ಲೂಕು ವಕೀಲರ ಸಂಘದ ಅಧ್ಯಕ್ಷ ಮುತ್ತುರಾಜ್‌ ಹನುಮಂತಪ್ಪ ಕ್ವಾರಿ.

“ಕೊರೊನಾದಿಂದ ಇಡೀ ಜನ ಸಮುದಾಯವೇ ಸಂಕಷ್ಟಕ್ಕೆ ಸಿಲುಕಿದೆ. ಅಂತೆಯೇ ನಮ್ಮ ವಕೀಲರ ಸಮುದಾಯವು ಭಾರಿ ಸಂಕಷ್ಟಕ್ಕೆ ಸಿಲುಕಿದೆ. ಹಲವು ತಿಂಗಳುಗಳಿಂದ ನ್ಯಾಯಾಲಯದ ಕಾರ್ಯಕಲಾಪಗಳು ನಿಂತಿವೆ. ಕಠಿಣ ನಿಯಮಗಳನ್ನು ಅನುಸರಿಸುತ್ತಿರುವುದರಿಂದ ಕಕ್ಷಿದಾರರು ನಮ್ಮ ಬಳಿ ಬರುತ್ತಿಲ್ಲ. ಹಲವರು ಜೀವನ ನಡೆಸುವುದು ಕಷ್ಟವಾಗಿ ತಮ್ಮ ಸ್ವಂತ ಸ್ಥಳಗಳಿಗೆ ಮರಳಿ ಕೃಷಿ ಮತ್ತಿತರ ಚಟುವಟಿಕೆಗಲ್ಲಿ ತೊಡಗಿಸಿಕೊಂಡಿದ್ದಾರೆ. ರಾಜ್ಯ ವಕೀಲರ ಕಲ್ಯಾಣ ನಿಧಿಯಲ್ಲಿನ ಸುಮಾರು 100 ಕೋಟಿ ರೂಪಾಯಿಗಳಷ್ಟು ಹಣವನ್ನು ಸ್ಥಿರ ಠೇವಣಿ (ಎಫ್‌ ಡಿ) ಇಡಲಾಗಿದೆ ಎನ್ನುವ ಮಾಹಿತಿ ಇದೆ. ಇಂಥ ತುರ್ತಿನ ಸಂದರ್ಭದಲ್ಲಿ ವಕೀಲರ ಸಮಸ್ಯೆಗೆ ಸ್ಪಂದಿಸುವ ದೃಷ್ಟಿಯಿಂದ ಆ ಹಣವನ್ನು ಹಿಂಪಡೆಯಬೇಕು. ಇದಕ್ಕೆ ವಕೀಲರ ಕಾಯಿದೆಗೆ ತಿದ್ದುಪಡಿ ತರಬೇಕಿದೆ” ಎಂದು ಕ್ವಾರಿ ಸಲಹೆ ನೀಡಿದ್ದಾರೆ.

“ಆಡಳಿತರೂಢರು ತಮ್ಮ ಹಿತಾಸಕ್ತಿ ಕಾಯ್ದುಕೊಳ್ಳಲು ಕಾಯಿದೆಗಳಿಗೆ ತಿದ್ದುಪಡಿ ತರುತ್ತಿರುವ ಇಂದಿನ ಸಂದರ್ಭದಲ್ಲಿ ನಮ್ಮ ವಕೀಲರು ಸಾವು-ಬದುಕಿನ ನಡುವೆ ಹೋರಾಡುತ್ತಿರುವಾಗ ಅವರ ಬದುಕಿನ ದೃಷ್ಟಿಯಿಂದ ವಕೀಲರ ಕಾಯಿದೆಗೆ ಏಕೆ ತಿದ್ದುಪಡಿ ತರಬಾರದು? ಆ ಮೂಲಕ ಹಣವನ್ನು ಬಾಧಿತ ವಕೀಲರಿಗೆ ಏಕೆ ವಿತರಿಸಬಾರದು? ಸ್ಟಾಂಪ್‌ ಹಣ ಪಾವತಿಸದಿದ್ದರೆ ಅದಕ್ಕೆ ನಮ್ಮನ್ನು ಪ್ರಶ್ನಿಸುವ ಪರಿಷತ್ತು ವಕೀಲರ ಸಮಸ್ಯೆಗಳಿಗೆ ಏಕೆ ಸರಿಯಾದ ರೀತಿಯಲ್ಲಿ ಸ್ಪಂದಿಸುತ್ತಿಲ್ಲ? ವಕೀಲರು ಜೀವಂತವಾಗಿದ್ದರೆ ಆ ಹಣವನ್ನು ತುಂಬುತ್ತಾರೆ. ಅಪಾರ ಮೊತ್ತ ಖಾಲಿಯಾಗುತ್ತದೆ ಎಂದು ಇದನ್ನು ಮಾಡಲು ವಕೀಲರ ಪರಿಷತ್ತು ಮುಂದಾಗುತ್ತಿಲ್ಲ” ಎಂದು ಕ್ವಾರಿ ಆರೋಪಿಸಿದ್ದಾರೆ.
Also Read
ಕೋವಿಡ್‌ ಸಂಕಷ್ಟ ನೀಗಲು ವಕೀಲರಿಗೆ ಆರ್ಥಿಕ ನೆರವು, ವಿಮಾಯೋಜನೆ ಕಲ್ಪಿಸಿದ್ದೇವೆ: ಕೆಎಸ್‌ಬಿಸಿ ಅಧ್ಯಕ್ಷ ಅನಿಲ್ ಕುಮಾರ್

ʼಲಕ್ಷ ವಕೀಲರಿಗೆ 80 ಕೋಟಿ ರೂಪಾಯಿ ಹಂಚಿದರೆ 800 ರೂಪಾಯಿ ಬರಬಹುದುʼ

“ಕೋವಿಡ್‌ ಬಾದಿತರಾದವರ ದತ್ತಾಂಶ ಇನ್ನೂ ಸಂಗ್ರಹಿಸಲಾಗಿಲ್ಲ. ಪರಿಹಾರಕ್ಕೆ ಈಗ ಅರ್ಜಿಗಳನ್ನು ಸ್ವೀಕರಿಸಲಾಗುತ್ತಿದೆ. ವಕೀಲರ ಸಂಘಗಳ ಕಾರ್ಯಚಟುವಟಿಕೆಗಳು ಹಾಗೂ ನ್ಯಾಯಾಲಯದ ಕಾರ್ಯ ಕಲಾಪಗಳು ಇನ್ನೂ ಆರಂಭವಾಗಿಲ್ಲ. ಮಂಗಳೂರು, ಹುಬ್ಬಳಿ, ಬೆಳಗಾವಿ, ಕಲಬುರ್ಗಿ ಮತ್ತು ಮೈಸೂರಿನ ಸಂಘಗಳು ದೊಡ್ಡದಾಗಿದ್ದು, ಎಲ್ಲಿ ಎಷ್ಟು ಮಂದಿಗೆ ಏನಾಗಿದೆ ಎಂಬ ಮಾಹಿತಿ ಸಂಗ್ರಹಿಸಲಾಗಿಲ್ಲ” ಎಂದು ರಾಜ್ಯ ವಕೀಲರ ಪರಿಷತ್‌ ಅಧ್ಯಕ್ಷ ಜೆ ಎಂ ಅನಿಲ್‌ ಕುಮಾರ್‌ ಕೈಚೆಲ್ಲುತ್ತಾರೆ.

ಅಗತ್ಯವಿರುವವರಿಗೆ ಮಾತ್ರ ಪರಿಹಾರ ನೀಡಲು ಅರ್ಜಿ ಆಹ್ವಾನಿಸಲಾಗಿತ್ತು. ಇದಕ್ಕಾಗಿ ಹೆಚ್ಚು ಹಣ ನೀಡುವಂತೆ ನಾವು ರಾಜ್ಯ ಸರ್ಕಾರಕ್ಕೆ ಮನವಿ ಮಾಡಿದ್ದೆವು. ಆದರೆ, ಅವರು ಅನುದಾನ ನೀಡಲಿಲ್ಲ. ಭಾರತೀಯ ವಕೀಲರ ಪರಿತ್ತು (ಬಿಸಿಐ) ಒಂದು ಕೋಟಿ ರೂಪಾಯಿ ನೀಡಿದ್ದು, ರಾಜ್ಯ ಸರ್ಕಾರದ ಐದು ಕೋಟಿ ರೂಪಾಯಿಯ ಜೊತೆಗೆ ರಾಜ್ಯ ವಕೀಲರ ಪರಿಷತ್ತು ಎರಡು ಕೋಟಿ ರೂಪಾಯಿ ಸೇರಿಸಿ ಒಟ್ಟಾರೆ ಎಂಟು ಕೋಟಿ ರೂಪಾಯಿಯಲ್ಲಿ ಬಹುತೇಕ ಹಣವನ್ನು ಅಗತ್ಯವಿರುವ ವಕೀಲರಿಗೆ ವರ್ಗಾಯಿಸಲಾಗಿದೆ. ವಿಮೆಗಾಗಿ ಪ್ರತ್ಯೇಕವಾಗಿ ಒಂದು ಕೋಟಿ ರೂಪಾಯಿ ವೆಚ್ಚ ಮಾಡಲಾಗಿದೆ ಎಂದು ಹೇಳಿದ್ದಾರೆ.

ಸ್ಥಿರ ಠೇವಣಿಯಲ್ಲಿ 70-80 ಕೋಟಿ ರೂಪಾಯಿ ಹಣವಿದೆ. ಇದರ ಮೇಲಿನ ಬಡ್ಡಿಯಿಂದಲೇ ವಕೀಲರು ಮರಣ ಹೊಂದಿದರೆ, ವೈದ್ಯಕೀಯ ಮತ್ತು ನಿವೃತ್ತಿ ಪರಿಹಾರಗಳನ್ನು ಪಾವತಿಸುತ್ತಿದ್ದೇವೆ. ಇದಕ್ಕೆ ಪ್ರತಿ ವರ್ಷ 8-12 ಕೋಟಿ ರೂಪಾಯಿ ಬೇಕಾಗುತ್ತದೆ. ಒಂದೊಮ್ಮೆ ಕೆಲವರ ಒತ್ತಾಯದಂತೆ ವಕೀಲರ ಕಾಯಿದೆ ತಿದ್ದುಪಡಿ ಮಾಡಿ ಸ್ಥಿರ ಠೇವಣಿ ಹಣವನ್ನು ತೆಗೆದರೂ ಸುಮಾರು ಒಂದು ಲಕ್ಷ ವಕೀಲರಿಗೆ 80 ಕೋಟಿ ರೂಪಾಯಿಯನ್ನು ಹಂಚಿದರೆ 800 ರೂಪಾಯಿ ಬರುತ್ತದೆಯಷ್ಟೆ. ಸ್ಥಿರ ಠೇವಣಿ ಹಣ ಹಿಂಪಡೆದು ಹಂಚಿಕೆ ಮಾಡುವ ಸಂಬಂಧ ಸಲ್ಲಿಕೆಯಾಗಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ಹೈಕೋರ್ಟ್‌ ಈಚೆಗೆ ವಜಾಗೊಳಿಸಿದೆ ಎಂದು ಅನಿಲ್‌ ಕುಮಾರ್‌ ವಿವರಿಸುತ್ತಾರೆ.

Related Stories

No stories found.
Kannada Bar & Bench
kannada.barandbench.com