ಪುಲ್ವಾಮಾ ದಾಳಿಯ ಹಿನ್ನೆಲೆಯಲ್ಲಿ ಪಾಕಿಸ್ತಾನದಿಂದ ಆಮದಾಗುವ ಉತ್ಪನ್ನಗಳಿಗೆ ಶೇ.200ರಷ್ಟು ಸೀಮಾ ಸುಂಕ ವಿಧಿಸುವ ಕೇಂದ್ರ ಸರ್ಕಾರದ ಅಧಿಸೂಚನೆಯು ಅದರ ಹಿಂದಿನ ದಿನ ಮಧ್ಯರಾತ್ರಿಗೆ ಅನ್ವಯಿಸುವುದಿಲ್ಲ ಎಂದು ಸುಪ್ರೀಂ ಕೋರ್ಟ್ ಸ್ಪಷ್ಟವಾಗಿ ಹೇಳಿದೆ.
ಸೀಮಾ ಮತ್ತು ಸುಂಕ ಕಾಯಿದೆ-1975ರ ಸೆಕ್ಷನ್ 8A ಅಡಿ ಫೆಬ್ರುವರಿ 16, 2019ರ ಸಂಜೆ ಪ್ರಕಟಿಸಲಾದ ಅಧಿಸೂಚನೆಯು ಪೂರ್ವಾನ್ವಯವಾಗುವುದಿಲ್ಲ ಎಂದು ನ್ಯಾಯಾಲಯ ಹೇಳಿದೆ.
ನ್ಯಾಯಮೂರ್ತಿ ಡಿ ವೈ ಚಂದ್ರಚೂಡ್ ನೇತೃತ್ವದ ನ್ಯಾಯಮೂರ್ತಿಗಳಾದ ಕೆ ಎಂ ಜೋಸೆಫ್ ಮತ್ತು ಇಂದೂ ಮಲ್ಹೋತ್ರಾ ಅವರನ್ನು ಒಳಗೊಂಡ ತ್ರಿಸದಸ್ಯ ಪೀಠವು ತೀರ್ಪು ಪ್ರಕಟಿಸಿದೆ. ನ್ಯಾ. ಚಂದ್ರಚೂಡ್ ಮತ್ತು ನ್ಯಾ. ಕೆ ಎಂ ಜೋಸೆಫ್ ಅವರು ಪ್ರತ್ಯೇಕವಾದ ಮತ್ತು ಸಹಮತದ ತೀರ್ಪು ಬರೆದಿದ್ದಾರೆ.
“ಪಾಕಿಸ್ತಾನ ಉತ್ಪನ್ನಗಳನ್ನು ಆಮದು ಮಾಡಿಕೊಳ್ಳುವುದನ್ನು ತಡೆಯಲು ಅಧಿಸೂಚನೆ ಹೊರಡಿಸಲಾಗಿದ್ದು, ಅದು ನಿರೀಕ್ಷಿತ ಪರಿಣಾಮ ಬೀರಿದೆ. ಈಗಾಗಲೇ ಆಮದು ಮಾಡಿಕೊಂಡಿರುವ ಭಾರತೀಯ ಆಮದುದಾರರಿಗೆ ದಂಡ ವಿಧಿಸುವ ಉದ್ದೇಶವನ್ನು ಅಧಿಸೂಚನೆ ಹೊಂದಿಲ್ಲ, ಆಮದುದಾರರು ಗೃಹ ಬಳಕೆ ಪ್ರವೇಶ ಶುಲ್ಕ ಬಿಲ್ ತೋರಿಸಿದ್ದು, ಅಧಿಸೂಚನೆ ಹೊರಡಿಸುವುದಕ್ಕೂ ಮುನ್ನದ ಸೀಮಾ ಸುಂಕ ಕಾಯಿದೆ ಮತ್ತು ನಿಯಂತ್ರಣ ನಿಬಂಧನೆಯ ಅಡಿ ಸ್ವಮೌಲ್ಯಮಾಪನ ಪೂರ್ಣಗೊಳಿಸಿದ್ದಾರೆ.”ಸುಪ್ರೀಂ ಕೋರ್ಟ್
ಮರುಮೌಲ್ಯಮಾಪನ ಸಾಧ್ಯತೆಯನ್ನೂ ನ್ಯಾಯಾಲಯವು ವಜಾಗೊಳಿಸಿದ್ದು” ಸುಂಕ ವಿಧಿಸುವಾಗ ಸ್ವಮೌಲ್ಯಮಾಪನದಲ್ಲಿ ತಪ್ಪಾಗಿದೆ ಎಂದಾಗ ಸೆಕ್ಷನ್ 17(4) ರ ಅಡಿ ಮರು ಪರಿಶೀಲನೆ ಮಾಡಲಾಗುತ್ತದೆ. ಆದರೆ, ಇಲ್ಲಿ ಆ ಸಮಸ್ಯೆಯಾಗಿಲ್ಲ. ಆ ಸಂದರ್ಭ, ಸಮಯದಲ್ಲಿ ಜಾರಿಯಲ್ಲಿದ್ದ ಸುಂಕವನ್ನು ಸ್ವಮೌಲ್ಯಮಾಪನ ವೇಳೆಯಲ್ಲಿ ವಿಧಿಸಲಾಗಿದೆ. ಬಳಿಕ 2009ರ ಮೇನಲ್ಲಿ ಹೊರಡಿಸಲಾದ ಅಧಿಸೂಚನೆಯು ಮರು ಪರಿಶೀಲನೆಗೆ ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿಲ್ಲ” ಎಂದು ಹೇಳಿದೆ.
ಹಿಂದಿನ ದಿನದ ಮಧ್ಯರಾತ್ರಿಗೂ ಅಧಿಸೂಚನೆ ಅನ್ವಯವಾಗುತ್ತದೆ ಎಂದಿರುವ ಕೇಂದ್ರ ಸರ್ಕಾರದ ನಿಲುವಿಗೆ ಪ್ರತಿಕ್ರಿಯಿಸಿರುವ ನ್ಯಾ. ಕೆ ಎಂ ಜೋಸೆಫ್ ಅವರು “ಸಾಮಾನ್ಯ ಷರತ್ತುಗಳ ಕಾಯಿದೆಯ ಸೆಕ್ಷನ್ 5(3) ರ ಅನ್ವಯ 2019ರ ಫೆಬ್ರುವರಿ 15/16ರ ಮಧ್ಯರಾತ್ರಿಯಿಂದಲೇ ಅಧಿಸೂಚನೆಯನ್ನು ಪರಿಗಣಿಸಬೇಕು ಎಂದು ವಾದಿಸಿರುವ ಭಾರತ ಸರ್ಕಾರದ ವಾದದಲ್ಲಿ ತಿರುಳಿಲ್ಲ” ಎಂದು ಹೇಳಿದ್ದಾರೆ.
ಹೆಚ್ಚುವರಿ ಸಾಲಿಸಿಟರ್ ಜನರಲ್ ಕೆ ಎಂ ನಟರಾಜ್ ಅವರು ಕೇಂದ್ರ ಸರ್ಕಾರದ ಪರ, ಹಿರಿಯ ವಕೀಲ ಪಿ ಎಸ್ ನರಸಿಂಹ ಅವರು ಪ್ರತಿವಾದಿಗಳಾದ ಆಮದುದಾರರ ಪರ ವಾದಿಸಿದರು.