ಗೋಧ್ರಾ ಗಲಭೆ ಪ್ರಕರಣಕ್ಕೆ ಸಂಬಂಧಿಸಿದಂತೆ ಗುಜರಾತ್ ಸರ್ಕಾರದಲ್ಲಿ ಅಂದು ಉನ್ನತ ಸ್ಥಾನದಲ್ಲಿದ್ದವರನ್ನು ಸಿಲುಕಿಸಲು ದಾಖಲೆಗಳನ್ನು ತಿರುಚಿದ ಆರೋಪಕ್ಕೆ ಸಂಬಂಧಿಸಿದ ಪ್ರಕರಣದಲ್ಲಿ ಸಾಮಾಜಿಕ ಹೋರಾಟಗಾರ್ತಿ ತೀಸ್ತಾ ಸೆಟಲ್‌ವಾಡ್ ಅವರಿಗೆ ಭಾರೀ ಹಿನ್ನಡೆಯಾಗಿದ್ದು ಅವರು ಸಲ್ಲಿಸಿದ್ದ ಜಾಮೀನು ಅರ್ಜಿಯನ್ನು ಗುಜರಾತ್ ಹೈಕೋರ್ಟ್ ತಿರಸ್ಕರಿಸಿದೆ [ತೀಸ್ತಾ ಅತುಲ್ ಸೆಟಲ್ವಾಡ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].
ನ್ಯಾಯಮೂರ್ತಿ ನಿರ್ಜರ್ ದೇಸಾಯಿ ಅವರಿದ್ದ ಏಕಸದಸ್ಯ ಪೀಠ ಮುಕ್ತ ನ್ಯಾಯಾಲಯದಲ್ಲಿ ಆದೇಶ ಪ್ರಕಟಿಸಿದರು.
"ಸಾಮಾನ್ಯ ಜಾಮೀನು ಅರ್ಜಿಯನ್ನು ತಿರಸ್ಕರಿಸಲಾಗಿದೆ. ಕಳೆದ ಒಂದು ವರ್ಷದಿಂದ ಸುಪ್ರೀಂ ಕೋರ್ಟ್ ಮಂಜೂರು ಮಾಡಿದಂತೆ ಮಧ್ಯಂತರ ಜಾಮೀನಿನ ಮೇಲಿರುವ ಆಕೆ ಕೂಡಲೇ ತನಿಖಾ ಸಂಸ್ಥೆಯ ಮುಂದೆ ಶರಣಾಗುವಂತೆ ಆದೇಶಿಸಲಾಗಿದೆ" ಎಂದು ಅವರು ಹೇಳಿದರು. ಇದೇ ವೇಳೆ ಆದೇಶಕ್ಕೆ ಕನಿಷ್ಠ 30 ದಿನಗಳ ಕಾಲ ತಡೆ ನೀಡುವಂತೆ ಹಿರಿಯ ವಕೀಲ ಮಿಹಿರ್ ಠಾಕೂರ್ ಮಾಡಿದ ಮನವಿಯನ್ನು ನ್ಯಾಯಾಲಯ ತಿರಸ್ಕರಿಸಿತು.
ಗುಜರಾತ್ ಗಲಭೆ ವೇಳೆ ಹತ್ಯೆಗೀಡಾದ ಕಾಂಗ್ರೆಸ್ ಸಂಸದ (ಎಂಪಿ) ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಮನವಿಯನ್ನು 2022ರ ಜೂನ್ 24ರಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀಸ್ತಾ ಅವರ ವಿರುದ್ಧ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅದಾದ ಒಂದು ದಿನದ ಬಳಿಕ ಅವರನ್ನು ಬಂಧಿಸಲಾಗಿತ್ತು.
ಪ್ರಕರಣದಲ್ಲಿ ವಿಶೇಷ ತನಿಖಾ ತಂಡ ಸಲ್ಲಿಸಿದ್ದ ಮುಕ್ತಾಯ ವರದಿಯನ್ನು ಸಮ್ಮತಿಸುವ ಮ್ಯಾಜಿಸ್ಟ್ರೇಟ್ ನಿರ್ಧಾರವನ್ನು ಗುಜರಾತ್ ಹೈಕೋರ್ಟ್ 2017ರಲ್ಲಿ ಎತ್ತಿ ಹಿಡಿದಿತ್ತು. ಈ ಆದೇಶ ಪ್ರಶ್ನಿಸಿ ಝಾಕಿಯಾ ಸುಪ್ರೀಂ ಮೆಟ್ಟಿಲೇರಿದ್ದರು.
ಅರ್ಜಿಯನ್ನು ವಜಾಗೊಳಿಸುವಾಗ, ಸೆಟಲ್ವಾಡ್ ಮತ್ತು ಮಾಜಿ ಪೊಲೀಸ್ ಮಹಾನಿರ್ದೇಶಕ ಶ್ರೀಕುಮಾರ್ ವಿರುದ್ಧ ಸುಪ್ರೀಂ ಕೋರ್ಟ್ ಕೆಲವು ಅವಲೋಕನಗಳನ್ನು ಮಾಡಿದ್ದು, ಅವರನ್ನು "ಅಸಂತೃಪ್ತರು" ಎಂದು ಕರೆದಿತ್ತು. ತರುವಾಯ, ಸೆಟಲ್‌ವಾಡ್ ಅವರನ್ನು ಗುಜರಾತ್ ಭಯೋತ್ಪಾದನಾ ನಿಗ್ರಹ ದಳ ಮುಂಬೈನಿಂದ ಬಂಧಿಸಿ ಗುಜರಾತ್‌ಗೆ ಕರೆದೊಯ್ಯಿತು. ಗುಜರಾತಿನಲ್ಲಿ ಶ್ರೀಕುಮಾರ್‌ರನ್ನು ಬಂಧಿಸಲಾಗಿತ್ತು.
ಗುಜರಾತ್ ಸರ್ಕಾರವನ್ನು "ಅಸ್ಥಿರಗೊಳಿಸುವ" ಗುರಿಯನ್ನು ಹೊಂದಿದ್ದರು ಮತ್ತು ದುಷ್ಟ ಉದ್ದೇಶಗಳಿಗಾಗಿ ಪ್ರಭುತ್ವವನ್ನು ದೂಷಿಸುವ ಉದ್ದೇಶ ಹೊಂದಿದ್ದರು ಎಂದ ಅಹಮದಾಬಾದ್ ಸೆಷನ್ಸ್ ನ್ಯಾಯಾಲಯ ಜುಲೈ 30, 2022ರಂದು ತೀಸ್ತಾ ಅವರಿಗೆ ಜಾಮೀನು ನಿರಾಕರಿಸಿತ್ತು.
ನಂತರ ತೀಸ್ತಾ ಅವರು ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು, ಆಗಸ್ಟ್ 2 ರಂದು ತನ್ನ ಮನವಿಗೆ ಪ್ರತಿಕ್ರಿಯಿಸುವಂತೆ ಎಸ್‌ಐಟಿಗೆ ನೋಟಿಸ್ ಜಾರಿ ಮಾಡಿದ ಹೈಕೋರ್ಟ್ ವಿಚಾರಣೆಯನ್ನು ಸೆಪ್ಟೆಂಬರ್ 19, 2022ಕ್ಕೆ ಮುಂದೂಡಿತ್ತು.
ಈ ವಿಳಂಬ ಅವಧಿಯನ್ನು ಆಕೆ ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. ಕಳೆದ ವರ್ಷ ಸೆಪ್ಟೆಂಬರ್ 2ರಂದು ಸರ್ವೋಚ್ಚ ನ್ಯಾಯಾಲಯ ತೀಸ್ತಾ ಅವರಿಗೆ ಮಧ್ಯಂತರ ಜಾಮೀನು ನೀಡಿತ್ತು.