ಗೋಧ್ರೋತ್ತರ ಗಲಭೆಗೆ ಸಂಬಂಧಿಸಿದಂತೆ ಸಾಕ್ಷ್ಯಾಧಾರ ತಿರುಚಲಾಗಿದೆ ಎಂದು ಆರೋಪಿಸಿ ವಿಶೇಷ ತನಿಖಾ ತಂಡ (ಎಸ್‌ಐಟಿ) ತನ್ನ ವಿರುದ್ಧ ದಾಖಲಿಸಿರುವ ಪ್ರಕರಣ ರದ್ದುಗೊಳಿಸುವಂತೆ ಕೋರಿ ಸಾಮಾಜಿಕ ಹೋರಾಟಗಾರ್ತಿ, ಮಾಜಿ ಪತ್ರಕರ್ತೆ ತೀಸ್ತಾ ಸೆಟಲ್‌ವಾಡ್ ಸೋಮವಾರ ಗುಜರಾತ್ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ [ತೀಸ್ತಾ ಅತುಲ್ ಸೆಟಲ್‌ವಾಡ್ ಮತ್ತು ಗುಜರಾತ್ ಸರ್ಕಾರ ನಡುವಣ ಪ್ರಕರಣ].
ಈ ವಿಚಾರ ದೃಢಪಡಿಸಿರುವ ಹಿರಿಯ ವಕೀಲ ಮಿಹಿರ್ ಠಾಕೋರ್ ದೂರು ರದ್ದುಗೊಳಿಸುವಂತೆ ತೀಸ್ತಾ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ ಎಂದು ʼಬಾರ್ ಅಂಡ್ ಬೆಂಚ್ʼಗೆ ತಿಳಿಸಿದರು.
"ಕಳೆದ ವರ್ಷ ಜೂನ್‌ನಲ್ಲಿ ತಮ್ಮ ವಿರುದ್ಧ ದಾಖಲಾಗಿದ್ದ ದೂರನ್ನು ರದ್ದುಗೊಳಿಸುವಂತೆ ತೀಸ್ತಾ ಅವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಅವರ ಅರ್ಜಿ ಏಕಸದಸ್ಯ ಪೀಠದೆದುರು ವಿಚಾರಣೆಗೆ ಬರುವ ಸಾಧ್ಯತೆಯಿದೆ" ಎಂದು ಅವರು ಹೇಳಿದರು.
ಗುಜರಾತ್ ಗಲಭೆ ವೇಳೆ ಹತ್ಯೆಗೀಡಾದ ಕಾಂಗ್ರೆಸ್ ಸಂಸದ (ಎಂಪಿ) ಎಹ್ಸಾನ್ ಜಾಫ್ರಿ ಅವರ ಪತ್ನಿ ಜಾಕಿಯಾ ಜಾಫ್ರಿ ಅವರ ಮನವಿಯನ್ನು 2022ರ ಜೂನ್ 24ರಂದು ವಜಾಗೊಳಿಸಿದ ಸುಪ್ರೀಂ ಕೋರ್ಟ್‌ನ ತ್ರಿಸದಸ್ಯ ಪೀಠ ತೀಸ್ತಾ ಅವರ ವಿರುದ್ಧ ಪ್ರತಿಕೂಲ ಅಭಿಪ್ರಾಯ ವ್ಯಕ್ತಪಡಿಸಿತ್ತು. ಅದಾದ ಒಂದು ದಿನದ ಬಳಿಕ ಅವರನ್ನು ಬಂಧಿಸಲಾಗಿತ್ತು. ನಂತರ ಜಾಮೀನಿನ ಮೇಲೆ ಅವರು ಬಿಡುಗಡೆಯಾಗಿದ್ದರು.