Mumbai Sessions Court and ‘Best Bakery, 2002
Mumbai Sessions Court and ‘Best Bakery, 2002 
ಸುದ್ದಿಗಳು

ಗುಜರಾತ್‌ ಹತ್ಯಾಕಾಂಡ: ಬೆಸ್ಟ್‌ ಬೇಕರಿ ಪ್ರಕರಣದಲ್ಲಿ ಇಬ್ಬರನ್ನು ಖುಲಾಸೆಗೊಳಿಸಿದ ಮುಂಬೈ ನ್ಯಾಯಾಲಯ

Bar & Bench

ಗುಜರಾತ್‌ ಕೋಮು ಗಲಭೆಗೆ ಸಂಬಂಧಿಸಿದ ಬೆಸ್ಟ್‌ ಬೇಕರಿ ಪ್ರಕರಣದಲ್ಲಿನ ಇಬ್ಬರು ಆರೋಪಿಗಳಾದ ಹರ್ಷದ್‌ ಸೋಲಂಕಿ ಮತ್ತು ಮಫತ್‌ ಗೋಹಿಲ್‌ ಅವರನ್ನು ಮಂಗಳವಾರ ಮುಂಬೈನ ವಿಶೇಷ ನ್ಯಾಯಾಲಯವು ಖುಲಾಸೆಗೊಳಿಸಿದೆ.

ಇಬ್ಬರು ಆರೋಪಿಗಳು ದೋಷಿಗಳಲ್ಲ. ತಕ್ಷಣ ಅವರನ್ನು ಬಿಡುಗಡೆ ಮಾಡಬೇಕು ಎಂದು ಸಿಬಿಐ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಎಂ ಜಿ ದೇಶಪಾಂಡೆ ಅವರು ಆದೇಶ ಮಾಡಿದ್ದಾರೆ.

ಗುಜರಾತ್‌ ಗಲಭೆಯ ಸಂದರ್ಭದಲ್ಲಿ 2002ರಲ್ಲಿ ವಡೋದರದಲ್ಲಿ ಉದ್ರಿಕ್ತರ ಗುಂಪು ಬೇಕರಿ ಹಾಗೂ ಧ್ವಂಸಗೊಳಿಸಿ, ಬೆಂಕಿಗೆ ಆಹುತಿ ಮಾಡಲಾಗಿತ್ತು. ಈ ಘಟನೆಯಲ್ಲಿ 14 ಮಂದಿ ಹತ್ಯೆಯಾಗಿದ್ದರು. ಈ ಸಂಬಂಧ ದಾಖಲಾಗಿದ್ದ ಪ್ರಕರಣವನ್ನು ಬೆಸ್ಟ್‌ ಬೇಕರಿ ಪ್ರಕರಣವೆಂದು ಕರೆಯಲಾಗುತ್ತದೆ. ಬೆಸ್ಟ್‌ ಬೇಕರಿ ಮಾಲೀಕನ ಪುತ್ರಿ ಜಹೀರಾ ಶೇಖ್‌ ಅವರು 21 ಮಂದಿಯ ವಿರುದ್ಧ ದೂರು ನೀಡಿದ್ದರು. ಎಲ್ಲಾ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದು, ವಡೋದರದ ತ್ವರಿತಗತಿಯ ನ್ಯಾಯಾಲಯ ವಿಚಾರಣೆ ನಡೆಸಿತ್ತು.

2003ರಲ್ಲಿ ಸಾಕ್ಷ್ಯ ಕೊರತೆಯ ಹಿನ್ನೆಲೆಯಲ್ಲಿ 19 ಮಂದಿಯನ್ನು ಖುಲಾಸೆಗೊಳಿಸಲಾಗಿತ್ತು. ಪ್ರಮುಖ ಸಾಕ್ಷಿ ಸೇರಿದಂತೆ ದೂರುದಾರರು ಪ್ರಾಸಿಕ್ಯೂಷನ್‌ಗೆ ವಿರುದ್ಧವಾಗಿದ್ದರು. ಉಳಿದ ಇಬ್ಬರು ಆರೋಪಿಗಳಾದ ಸೋಲಂಕಿ ಮತ್ತು ಗೋಹಿಲ್‌ ಅವರನ್ನು ಆರೋಪ ಮುಕ್ತಗೊಳಿಸಲಾಗಿತ್ತು.

ಇದರ ಬೆನ್ನಿಗೇ ಸಾಮಾಜಿಕ ಕಾರ್ಯಕರ್ತೆ ತೀಸ್ತಾ ಸೆಟಲ್‌ವಾಡ್‌ ಮತ್ತು ಜಹೀರಾ ಶೇಖ್‌ ಅವರು ಪ್ರಕರಣವನ್ನು ಸುಪ್ರೀಂ ಕೋರ್ಟ್‌ನಲ್ಲಿ ಪ್ರಶ್ನಿಸಿದ್ದರು. 2004ರಲ್ಲಿ ಸರ್ವೋಚ್ಚ ನ್ಯಾಯಾಲಯವು ಪಾರದರ್ಶಕತೆ ಮತ್ತು ನ್ಯಾಯದಾನ ದೃಷ್ಟಿಯಿಂದ ಪ್ರಕರಣವನ್ನು ಮುಂಬೈಗೆ ವರ್ಗಾಯಿಸಿ, ಮರು ವಿಚಾರಣೆಗೆ ಆದೇಶಿಸಿತ್ತು.

ಇತರೆ ಆರೋಪಿಗಳ ವಿಚಾರಣೆ ನಡೆಸುತ್ತಿರುವಾಗಲೇ ಗೋಹಿಲ್‌ ಮತ್ತು ಸೋಲಂಕಿ ಅವರನ್ನು ಅಜ್ಮೀರ್‌ ಬಾಂಬ್‌ ಸ್ಪೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಬಂಧಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಬೆಸ್ಟ್‌ ಬೇಕರಿ ಪ್ರಕರಣದಲ್ಲಿ ಅವರನ್ನು ನಾಪತ್ತೆಯಾಗಿದ್ದಾರೆ ಎಂದು ತೋರಿಸಲಾಗಿತ್ತು.

ಅಂತಿಮವಾಗಿ 2013ರ ಡಿಸೆಂಬರ್‌ 13ರಂದು ಅವರನ್ನು ಮುಂಬೈ ಪೊಲೀಸ್‌ ಕಸ್ಟಡಿಗೆ ಪಡೆಯಲಾಗಿದ್ದು, ಕಳೆದ 10 ವರ್ಷಗಳಿಂದ ಅವರು ಜೈಲಿನಲ್ಲಿದ್ದಾರೆ. ಮುಂಬೈನಲ್ಲಿ 19 ಆರೋಪಿಗಳ ವಿರುದ್ಧ ನಡೆದ ವಿಚಾರಣೆಯಲ್ಲಿ 9 ಆರೋಪಿಗಳನ್ನು ದೋಷಿಗಳು ಎಂದು ಘೋಷಿಸಲಾಗಿತ್ತು.

ಸೋಲಂಕಿ ಮತ್ತು ಗೋಹಿಲ್‌ ಅವರ ಪಾತ್ರ ಸಾಬೀತುಪಡಿಸಲು ಪ್ರಾಸಿಕ್ಯೂಷನ್‌ ಕೇವಲ 10 ಸಾಕ್ಷಿಗಳನ್ನು ಮಾತ್ರ ಹಾಜರುಪಡಿಸಿತ್ತು. ಪ್ರಕರಣದ ವಿಚಾರಣೆ ನಡೆಸುತ್ತಿದ್ದ ಕೆಲವು ಅಧಿಕಾರಿಗಳು ವಿಧಿವಶರಾಗಿದ್ದರು.

ಮೂವರು ಪ್ರತ್ಯಕ್ಷದರ್ಶಿಗಳು ಸೋಲಂಕಿಯನ್ನು ಪತ್ತೆ ಮಾಡಲು ವಿಫಲವಾಗಿದ್ದು, ಒಬ್ಬರು ಪ್ರತ್ಯಕ್ಷದರ್ಶಿ ಮಾತ್ರ ಗೋಹಿಲ್‌ ಅವರನ್ನು ಗುರುತಿಸಿದ್ದರು ಎನ್ನಲಾಗಿದೆ.