Chhattisgarh High Court 
ಸುದ್ದಿಗಳು

ಆನ್‌ಲೈನ್‌ನಲ್ಲಿ ಚಾಕು ಮಾರಾಟ: ಛತ್ತೀಸ್‌ಗಢ ಹೈಕೋರ್ಟ್ ಪ್ರಕರಣ ದಾಖಲಿಸಿಕೊಂಡ ಬಳಿಕ 211 ಚಾಕು ವಶಪಡಿಸಿಕೊಂಡ ಪೊಲೀಸರು

ಅಂಗಡಿಗಳಲ್ಲಿ ಚಾಕುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಇರಿತದ ಘಟನೆಗಳು ಹೆಚ್ಚಾಗುತ್ತಿವೆ ಎಂಬ ವರದಿ ಆಧರಿಸಿ ನ್ಯಾಯಾಲಯ ಇತ್ತೀಚೆಗೆ ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

Bar & Bench

ಇ- ವಾಣಿಜ್ಯ ಜಾಲತಾಣಗಳು ಬಹಿರಂಗಪಡಿಸಿದ ಗ್ರಾಹಕರ ಮಾಹಿತಿಯ ಆಧಾರದ ಮೇಲೆ ಈ ವರ್ಷ ಛತ್ತೀಸ್‌ಗಢ ಪೊಲೀಸರು 193 ಜನರಿಂದ 211 ಚಾಕುಗಳನ್ನು ವಶಪಡಿಸಿಕೊಂಡಿರುವುದಾಗಿ ಛತ್ತೀಸ್‌ಗಢ ಹೈಕೋರ್ಟ್‌ಗೆ ಈಚೆಗೆ ಮಾಹಿತಿ ನೀಡಲಾಗಿದೆ.

ಪಾನ್ ಅಂಗಡಿ, ಜನರಲ್ ಸ್ಟೋರ್‌ ಹಾಗೂ ಗಿಫ್ಟ್ ಅಂಗಡಿಗಳಲ್ಲಿ ಚಾಕುಗಳನ್ನು ಬಹಿರಂಗವಾಗಿ ಮಾರಾಟ ಮಾಡಲಾಗುತ್ತಿದ್ದು, ಇದರಿಂದಾಗಿ ಇರಿತದ ಘಟನೆಗಳು ಹೆಚ್ಚಾಗುತ್ತಿವೆ ಎಂಬ ಮಾಧ್ಯಮ ವರದಿ ಆಧರಿಸಿ  ಹೈಕೋರ್ಟ್ ಕಳೆದ ತಿಂಗಳು ಸ್ವಯಂಪ್ರೇರಿತವಾಗಿ ಪ್ರಕರಣ ದಾಖಲಿಸಿಕೊಂಡಿತ್ತು.

ಅಧಿಕಾರಿಗಳು ಶಸ್ತ್ರಾಸ್ತ್ರ ಕಾಯಿದೆಯಡಿ ಕ್ರಮ ಕೈಗೊಂಡಿದ್ದರೂ ಇಂತಹ ಪ್ರವೃತ್ತಿ ತಡೆಯಲು ಹೆಚ್ಚು ಪರಿಣಾಮಕಾರಿ ಕಾರ್ಯತಂತ್ರದ ಅಗತ್ಯವಿದೆ ಎಂದು ನ್ಯಾಯಾಲಯ ಆಗ ಹೇಳಿತ್ತು.

ಈ ಬಗ್ಗೆ ಆಗಸ್ಟ್ 25ರಂದು ಮುಖ್ಯ ನ್ಯಾಯಮೂರ್ತಿ ರಮೇಶ್ ಸಿನ್ಹಾ ಮತ್ತು ನ್ಯಾಯಮೂರ್ತಿ ಬಿಭು ದತ್ತ ಗುರು ಅವರಿದ್ದ ವಿಭಾಗೀಯ ಪೀಠಕ್ಕೆ ಪ್ರತಿಕ್ರಿಯೆ ನೀಡಿರುವ ಪೊಲೀಸರು ಅಡುಗೆಮನೆಗಳಲ್ಲಿ ಬಳಸುವ ಚಾಕು ಹೊರತುಪಡಿಸಿ ಬೇರೆ ಚಾಕುಗಳನ್ನು ಆರ್ಡರ್ ಮಾಡಿದ ವ್ಯಕ್ತಿಗಳ ಪಟ್ಟಿ ಒದಗಿಸುವಂತೆ ಅಮೆಜಾನ್, ಫ್ಲಿಪ್‌ಕಾರ್ಟ್, ಸ್ನ್ಯಾಪ್‌ಡೀಲ್ ಹಾಗೂ ಶಾಪ್‌ಕ್ಲೂಸ್‌ನಂತಹ ಇ-ವಾಣಿಜ್ಯ ಜಾಲತಾಣಗಳಿಗೆ ಪದೇ ಪದೇ ವಿನಂತಿ ಮಾಡಲಾಗುತ್ತಿದೆ ಎಂದು ಹೇಳಿದರು.

ಜಾಲತಾಣಗಳು ಒದಗಿಸಿದ ಮಾಹಿತಿ ಆಧರಿಸಿ ಚಾಕು ಖರೀದಿಸಿದ ವ್ಯಕ್ತಿಗಳಿಗೆ ನೋಟಿಸ್‌ ನೀಡಲಾಗಿದ್ದು ಅಡುಗೆಮನೆ ಚಾಕು/ಉಪಯುಕ್ತತಾ ಚಾಕುಗಳ ಸ್ವರೂಪದಲ್ಲಿ ಇಲ್ಲದ ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ನ್ಯಾಯಾಲಯಕ್ಕೆ ತಿಳಿಸಲಾಯಿತು.

ಒಟ್ಟು 193 ಜನರ ಹೇಳಿಕೆಗಳನ್ನು ದಾಖಲಿಸಿಕೊಳ್ಳಲಾಗಿದ್ದು, ಅವರಿಂದ 211 ಚಾಕುಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. 2024ರಲ್ಲಿ ಶಸ್ತ್ರಾಸ್ತ್ರ ಕಾಯಿದೆಯ ಸೆಕ್ಷನ್‌ಗಳ  ಅಡಿಯಲ್ಲಿ ಒಟ್ಟು 1,399 ಪ್ರಕರಣಗಳು ದಾಖಲಾಗಿದ್ದು ಈ ವರ್ಷದ ಜನವರಿ ಮತ್ತು ಜೂನ್ ನಡುವೆ 677 ಪ್ರಕರಣಗಳು ದಾಖಲಾಗಿವೆ ಎಂದು ನ್ಯಾಯಾಲಯಕ್ಕೆ ವಿವರಣೆ ನೀಡಲಾಗಿದೆ.

ವಾದ ಆಲಿಸಿದ ನ್ಯಾಯಾಲಯ,  ಸಮಾಜದಲ್ಲಿನ ಪ್ರಸ್ತುತ ಪರಿಸ್ಥಿತಿಯ ಆತಂಕಕಾರಿ ಚಿತ್ರಣವನ್ನು ದತ್ತಾಂಶ ತೋರಿಸುತ್ತದೆ. ಆದರೆ ಅಂತಹ ಅಪಾಯಕಾರಿ ಶಸ್ತ್ರಾಸ್ತ್ರಗಳನ್ನು ಮುಕ್ತ ಮಾರುಕಟ್ಟೆ ಮತ್ತು ಆನ್‌ಲೈನ್ ವೇದಿಕೆಗಳಲ್ಲಿ ಮಾರಾಟ ಮಾಡದಂತೆ ಸರ್ಕಾರ ಸಾಕಷ್ಟು ಕ್ರಮಗಳನ್ನು ತೆಗೆದುಕೊಳ್ಳುತ್ತಿರುವಂತೆ ತೋರುತ್ತಿದೆ ಎಂದು ಹೇಳಿದೆ.

"ಸರ್ಕಾರ ಮತ್ತು ಅದರ ಸಂಸ್ಥೆಗಳು ಹೆಚ್ಚು ಜಾಗರೂಕರಾಗಿದ್ದು ಸಮಾಜದಲ್ಲಿ ಶಸ್ತ್ರಾಸ್ತ್ರ ಕಾಯಿದೆಗೆ ಸಂಬಂಧಿಸಿದ ಅಪರಾಧಗಳನ್ನು ಕಡಿಮೆ ಮಾಡಲು ಸಹಾಯಕವಾಗುವಂತೆ ಬೆದರಿಕೆ ನಿಗ್ರಹಿಸುವಲ್ಲಿ ಸಕಾರಾತ್ಮಕ ಕ್ರಮ ತೆಗೆದುಕೊಳ್ಳುತ್ತವೆ ಎಂದು ನಾವು ಮತ್ತಷ್ಟು ಆಶಿಸುತ್ತೇವೆ" ಎಂದ ನ್ಯಾಯಾಲಯ ಸೆಪ್ಟೆಂಬರ್ 22ಕ್ಕೆ ಪ್ರಕರಣ ಮುಂದೂಡಿತು.

[ತೀರ್ಪಿನ ಪ್ರತಿ]

In_The_Matter_Of_Suo_Moto_Public_Interest_Litigation_Versus_State_Of_Chhattisgarh___Others.pdf
Preview