ಸಿಸಿಐ ಮನವಿ ಹಿನ್ನೆಲೆ: ಅಮೆಜಾನ್, ಫ್ಲಿಪ್‌ಕಾರ್ಟ್‌ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿದ ಸುಪ್ರೀಂ

ಮೊಬೈಲ್ ಫೋನ್‌ ಮಾರಾಟ ಮತ್ತು ಖರೀದಿ ಕುರಿತಾಗಿ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸ್ಪರ್ಧಾತ್ಮಕ ಕಾಯಿದೆ ಉಲ್ಲಂಘಿಸಿದ ಆರೋಪದಡಿ ವಿವಿಧ ಹೈಕೋರ್ಟ್‌ಗಳಿಗೆ 24 ಅರ್ಜಿಗಳು ದಾಖಲಾಗಿವೆ.
Amazon and Flipkart
Amazon and Flipkart
Published on

ಇ- ವಾಣಿಜ್ಯ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗಳ ಸ್ಪರ್ಧಾ-ವಿರೋಧಿ ನಡೆಗೆ ಸಂಬಂಧಿಸಿದಂತೆ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ ಎಲ್ಲಾ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಿ ಸುಪ್ರೀಂ ಕೋರ್ಟ್‌ ಆದೇಶಿಸಿದೆ  [ಭಾರತದ ಸ್ಪರ್ಧಾತ್ಮಕ ಆಯೋಗ ಮತ್ತು ಕ್ಲೌಡ್‌ಟೇಲ್‌ ನಡುವಣ ಪ್ರಕರಣ].

ಪ್ರಕರಣಗಳ ವರ್ಗಾವಣೆ ಕೋರಿ ಪ್ರಸ್ತುತ ಸಲ್ಲಿಸಲಾಗಿರುವ ಅರ್ಜಿ 2024ರ ರಿಟ್ ಅರ್ಜಿ ಸಂಖ್ಯೆ 26627 ರಲ್ಲಿ ಒಳಗೊಂಡಿರುವ ವಿಷಯಗಳನ್ನು ಬಹುತೇಕ ಹೋಲುತ್ತದೆ. ಆ ಅರ್ಜಿಯನ್ನು ಇದೀಗ ಕರ್ನಾಟಕ ಹೈಕೋರ್ಟ್‌ ಏಕಸದಸ್ಯ ಪೀಠ ವಿಚಾರಣೆ ನಡೆಸುತ್ತಿದೆ. ಹೀಗಾಗಿ ವರ್ಗಾವಣೆ ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿರುವ ಎಲ್ಲಾ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ ವಿಚಾರಣೆಗೆ ವರ್ಗಾಯಿಸುವುದು ಸೂಕ್ತ ಎಂದು ನ್ಯಾಯಮೂರ್ತಿಗಳಾದ ಅಭಯ್ ಎಸ್ ಓಕಾ ಮತ್ತು ಉಜ್ಜಲ್ ಭುಯಾನ್ ಅವರಿದ್ದ ಪೀಠ ತಿಳಿಸಿದೆ.

Also Read
ಅಮೆಜಾನ್, ಫ್ಲಿಪ್‌ಕಾರ್ಟ್‌ ಪ್ರಕರಣಗಳನ್ನು ಸುಪ್ರೀಂ ಕೋರ್ಟ್‌ ಅಥವಾ ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸುವಂತೆ ಸಿಸಿಐ ಮನವಿ

ಇ- ವಾಣಿಜ್ಯ ದೈತ್ಯ ಸಂಸ್ಥೆಗಳಾದ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ಗೆ ಸಂಬಂಧಿಸಿದಂತೆ ಕರ್ನಾಟಕ ಸೇರಿ ವಿವಿಧ ಹೈಕೋರ್ಟ್‌ಗಳಲ್ಲಿ ಬಾಕಿ ಇರುವ 24 ರಿಟ್ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ಗೆ ಇಲ್ಲವೇ ಯಾವುದಾದರೂ ಒಂದು ಹೈಕೋರ್ಟ್‌ಗೆ ವರ್ಗಾಯಿಸುವಂತೆ ಭಾರತೀಯ ಸ್ಪರ್ಧಾ ಆಯೋಗ (ಸಿಸಿಐ)  ಈಚೆಗೆ ಸರ್ವೋಚ್ಚ ನ್ಯಾಯಾಲಯಕ್ಕೆ ಮನವಿ ಸಲ್ಲಿಸಿತ್ತು.

ತ್ವರಿತವಾಗಿ ತೀರ್ಪು ನೀಡುವಂತಾಗಲು ಮತ್ತು ಪ್ರಕರಣಕ್ಕೆ ಸಂಬಂಧಿಸಿದಂತೆ ವ್ಯತಿರಿಕ್ತ ತೀರ್ಪುಗಳು ಪ್ರಕಟವಾಗುವುದನ್ನು ತಡೆಯುವುದಕ್ಕಾಗಿ ಈ ಅರ್ಜಿಗಳನ್ನು ಸುಪ್ರೀಂ ಕೋರ್ಟ್‌ ತನಗಾಗಲೀ ಅಥವಾ ದೆಹಲಿ ಹೈಕೋರ್ಟ್‌ಗಾಗಲೀ ವರ್ಗಾಯಿಸಿಕೊಳ್ಳಬೇಕು ಎಂದು ಅದು ಕೋರಿತ್ತು.

ದೆಹಲಿ, ಪಂಜಾಬ್, ಕರ್ನಾಟಕ ಹಾಗೂ ಅಲಾಹಾಬಾದ್ ಹೈಕೋರ್ಟ್‌ಗಳಿಗೆ 24 ಅರ್ಜಿಗಳನ್ನು ಸಲ್ಲಿಸಲಾಗಿತ್ತು. ಮೊಬೈಲ್ ಫೋನ್‌ಗಳ ಮಾರಾಟ ಮತ್ತು ಖರೀದಿಗೆ ಸಂಬಂಧಿಸಿದಂತೆ ಅಮೆಜಾನ್ ಮತ್ತು ಫ್ಲಿಪ್‌ಕಾರ್ಟ್‌ ಸ್ಪರ್ಧಾತ್ಮಕ ಕಾಯಿದೆ, 2002 ಅನ್ನುಉಲ್ಲಂಘಿಸಿದ ಹಿನ್ನೆಲೆಯಲ್ಲಿ ಈ ಮೊಕದ್ದಮೆಗಳನ್ನು ಹೂಡಲಾಗಿತ್ತು. ವಿಶೇಷವಾದ ಅವಕಾಶ, ಭಾರೀ ರಿಯಾಯಿತಿ ಹಾಗೂ ಆದ್ಯತಾ ಪಟ್ಟಿಯಲ್ಲಿ ಪ್ರಭಾವ ಬೀರುವ ಮೂಲಕ ಇ-ಕಾಮರ್ಸ್ ಕಂಪನಿಗಳು ಸ್ಪರ್ಧಾ ಕಾಯಿದೆಯನ್ನು ಉಲ್ಲಂಘಿಸಿವೆ ಎಂದು ದೂರಲಾಗಿತ್ತು.

ಈ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸುವುದು ಸೂಕ್ತ ಎಂದು ಡಿಸೆಂಬರ್ 16 ರಂದು ಸುಪ್ರೀಂ ಕೋರ್ಟ್ ತಿಳಿಸಿತ್ತು. ಇದಲ್ಲದೆ, ಜನವರಿ 6 ರವರೆಗೆ ಸಿಸಿಐ ವಿರುದ್ಧದ ಅಮೆಜಾನ್ ಅರ್ಜಿಗಳನ್ನು ವಿಚಾರಣೆ ಮಾಡದಂತೆ ನ್ಯಾಯಾಲಯವು ಹೈಕೋರ್ಟ್‌ಗೆ ನಿರ್ದೇಶಿಸಿತ್ತು.

ಈ ಪ್ರಕರಣಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸಲು ಯಾವುದೇ ಅಭ್ಯಂತರವಿಲ್ಲ ಎಂದು ಸಿಸಿಐ ಪರ ಹಾಜರಿದ್ದ ಅಟಾರ್ನಿ ಜನರಲ್ ಆರ್.ವೆಂಕಟರಮಣಿ ಮತ್ತು ಹೆಚ್ಚುವರಿ ಸಾಲಿಸಿಟರ್ ಜನರಲ್ ಎನ್.ವೆಂಕಟರಾಮನ್ ಅವರು ನ್ಯಾಯಾಲಯಕ್ಕೆ ತಿಳಿಸಿದ್ದರು.

Also Read
ಅಮೆಜಾನ್, ಫ್ಲಿಪ್‌ಕಾರ್ಟ್‌ ವಿರುದ್ಧದ ತಡೆಯಾಜ್ಞೆ ತೆರವು ಕೋರಿಕೆ: ಹೈಕೋರ್ಟ್‌ ಎಡತಾಕಲು ಸೂಚಿಸಿದ ಸುಪ್ರೀಂಕೋರ್ಟ್‌

ವಿಚಾರಣೆಯಲ್ಲಿ, ಕೆಲವು ಕಕ್ಷಿದಾರರನ್ನು ಪ್ರತಿವಾದಿಗಳಾಗಿ ಸೇರಿಸಲಾಗಿಲ್ಲ ಎಂದು ತಿಳಿದ ಸುಪ್ರೀಂ ಕೋರ್ಟ್ ಅರ್ಜಿಗಳನ್ನು ಕರ್ನಾಟಕ ಹೈಕೋರ್ಟ್‌ಗೆ ವರ್ಗಾಯಿಸುವ ಆದೇಶವನ್ನು ತಡೆಹಿಡಿದಿತ್ತು.

ಇದಲ್ಲದೆ, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಹೈಕೋರ್ಟ್‌ಗೆ ಇನ್ನೂ ಎರಡು ಅರ್ಜಿಗಳು ಸಲ್ಲಿಕೆಯಾಗಿದ್ದು, ರಿಟ್ ಅರ್ಜಿಗಳ ಸಂಖ್ಯೆ 26 ಕ್ಕೆ ಏರಿತ್ತು.

ಎಲ್ಲಾ ಪಕ್ಷಕಾರರ ವಿಚಾರಣೆಯ ನಂತರವೇ ಅರ್ಜಿಗಳನ್ನು ವರ್ಗಾಯಿಸುವ ಆದೇಶವನ್ನು ಹೊರಡಿಸಬಹುದು ಎಂದು ಅಭಿಪ್ರಾಯಪಟ್ಟಿದ್ದ ಸುಪ್ರೀಂ ಕೋರ್ಟ್‌ ವಿಚಾರಣೆಯನ್ನು ಇಂದಿಗೆ ( ಜನವರಿ 6) ಮುಂದೂಡಿತ್ತು.

Kannada Bar & Bench
kannada.barandbench.com