AIIMS, New Delhi 
ಸುದ್ದಿಗಳು

ಪ್ರಸಕ್ತ ಸಾಲಿನ ಏಮ್ಸ್ ಐಎನ್ಐ ಸಿಇಟಿ ಪರೀಕ್ಷೆ ಮುಂದೂಡಲು ಕೋರಿ ಸುಪ್ರೀಂ ಮೊರೆ ಹೋದ ವೈದ್ಯರು

ಎಲ್ಲಾ ವೈದ್ಯರು ಲಸಿಕೆ ಪಡೆದಿಲ್ಲ ಮತ್ತು ಬಹುತೇಕರು ಕೋವಿಡ್ ಲಸಿಕೆಯ ಮೊದಲ ಡೋಸ್ ಕೂಡ ಹಾಕಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಅವರ ಜೀವಕ್ಕೆ ಅಪಾಯ ಎದುರಾಗಲಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.

Bar & Bench

ಅಖಿಲ ಭಾರತ ವೈದ್ಯಕೀಯ ವಿಜ್ಞಾನ ಸಂಸ್ಥೆ (ಏಮ್ಸ್‌) ಇದೇ ಜೂನ್ 16ರಂದು ನಡೆಸಲಿರುವ ಐಎನ್‌ಐ ಸಿಇಟಿ ಪರೀಕ್ಷೆ ಮುಂದೂಡಬೇಕೆಂದು ಕೋರಿ ಇಪ್ಪತ್ತಾರು ವೈದ್ಯರು ಸುಪ್ರೀಂಕೋರ್ಟ್‌ ಮೆಟ್ಟಿಲೇರಿದ್ದಾರೆ.

ವೈದ್ಯಕೀಯ/ ಸ್ನಾತಕೋತ್ತರ ಅಧ್ಯಯನ ಕ್ಷೇತ್ರದಲ್ಲಿ ಉನ್ನತ ವ್ಯಾಸಂಗ ಪ್ರವೇಶಾತಿಗಾಗಿ ಐಎನ್‌ಐ ಸಿಇಟಿ ಪರೀಕ್ಷೆ ನಡೆಸಲಾಗುತ್ತದೆ. ವಕೀಲರಾದ ಪಲ್ಲವಿ ಪ್ರತಾಪ್ ಅವರ ಮೂಲಕ ಸಲ್ಲಿಸಲಾದ ಅರ್ಜಿಯಲ್ಲಿ ಜೂನ್ 16 ರಂದು ಪರೀಕ್ಷೆ ನಡೆಸುತ್ತಿರುವುದರಿಂದ ಸ್ನಾತಕೋತ್ತರ ಪರೀಕ್ಷೆ ಮುಂದೂಡುವುದಕ್ಕೆ ಸಂಬಂಧಿಸಿದಂತೆ ನೀಟ್‌ ಪರೀಕ್ಷೆಗಳನ್ನು ಮುಂದೂಡುವಾಗ ಪ್ರಧಾನಿ ಕಚೇರಿ ನೀಡಿದ್ದ ಭರವಸೆಯನ್ನು ಸಂಪೂರ್ಣವಾಗಿ ಕಡೆಗಣಿಸಿದಂತಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.

ಈ ಪರೀಕ್ಷೆಗೆ ತಯಾರಿ ನಡೆಸಲು ವಿದ್ಯಾರ್ಥಿಗಳಿಗೆ ಕನಿಷ್ಠ ಒಂದು ತಿಂಗಳ ಸಮಯಾವಕಾಶ ನೀಡಲಾಗುವುದು ಎಂದು ಪ್ರಧಾನಿ ಕಚೇರಿಯು ಮಾಹಿತಿ ನೀಡಿತ್ತು ಆದರೆ, ಕೇವಲ 19 ದಿನಗಳ ಕಾಲಾವಕಾಶ ನೀಡಿ ಪರೀಕ್ಷೆ ಘೋಷಿಸಲಾಗಿದೆ. ಅಲ್ಲದೆ ಪರೀಕ್ಷಾ ಕೇಂದ್ರಗಳು ಬೇರೆ ಬೇರೆ ರಾಜ್ಯಗಳಲ್ಲಿವೆ ಅಥವಾ ಪರೀಕ್ಷಾಂಕ್ಷಿಗಳು ಕೆಲಸ ನಿರ್ವಹಿಸುತ್ತಿರುವ ಸ್ಥಳದಿಂದ ಬಹುದೂರದಲ್ಲಿವೆ. ಅವರು ಪ್ರಯಾಣ ನಿರ್ಬಂಧಗಳನ್ನು ಎದುರಿಸಿ ಅಲ್ಲಿಗೆ ಹೋಗಬೇಕಾದ ಅನಿವಾರ್ಯತೆ ಎದುರಾಗುತ್ತದೆ ಎಂದು ತಿಳಿಸಲಾಗಿದೆ.

ಸಾಂಕ್ರಾಮಿಕ ರೋಗದ ಮಧ್ಯೆ ಪರೀಕ್ಷೆ ನಡೆಸುವುದರಿಂದ ಪದವೀಧರ ವೈದ್ಯರ ಮೇಲೆ ಒತ್ತಡ ಉಂಟು ಮಾಡುತ್ತದೆ ಎಂದು ಅರ್ಜಿಯಲ್ಲಿ ಉಲ್ಲೇಖಿಸಲಾಗಿದ್ದು ಸಿಬಿಎಸ್‌ಇ ಮತ್ತಿತರ ವೃತ್ತಿಪರ ಪರೀಕ್ಷೆಗಳನ್ನು ಮುಂದೂಡಿರುವುದು ಅಥವಾ ರದ್ದಾಗಿರುವುದನ್ನು ಅರ್ಜಿಯಲ್ಲಿ ಪ್ರಸ್ತಾಪಿಸಲಾಗಿದೆ.

ಎಲ್ಲಾ ವೈದ್ಯರು ಲಸಿಕೆ ಪಡೆದಿಲ್ಲ ಮತ್ತು ಬಹುತೇಕರು ಕೋವಿಡ್‌ ಲಸಿಕೆಯ ಮೊದಲ ಡೋಸ್‌ ಕೂಡ ಹಾಕಿಸಿಕೊಂಡಿಲ್ಲ. ಇಂತಹ ಸಂದರ್ಭದಲ್ಲಿ ಪರೀಕ್ಷೆ ನಡೆಸಿದರೆ ಅವರ ಜೀವಕ್ಕೆ ಅಪಾಯ ಎದುರಾಗಲಿದೆ. ಅಲ್ಲದೆ ವಿವಿಧ ಆಸ್ಪತ್ರೆಗಳಲ್ಲಿ ಕೋವಿಡ್‌ ವಿರುದ್ಧ ಮುಂಚೂಣಿ ಹೋರಾಟಗಾರರಾಗಿ ಕೆಲಸ ಮಾಡುತ್ತಿರುವ ಸಾವಿರಾರು ವೈದ್ಯರ ಜೀವಕ್ಕೆ ಅಪಾಯವಿದ್ದು ಇದು ಸಂವಿಧಾನದ ಎಂದು 21ನೇ ವಿಧಿಯ ಸ್ಪಷ್ಟ ಉಲ್ಲಂಘನೆ ಅರ್ಜಿಯಲ್ಲಿ ತಿಳಿಸಲಾಗಿದೆ.