ಏಮ್ಸ್‌ ಹಲ್ಲೆ ಪ್ರಕರಣ: ಆಪ್ ಶಾಸಕ ಸೋಮನಾಥ್‌ ಭಾರ್ತಿಗೆ ಎರಡು ವರ್ಷ ಜೈಲು ಶಿಕ್ಷೆ ವಿಧಿಸಿದ ದೆಹಲಿ ನ್ಯಾಯಾಲಯ

2016ರಲ್ಲಿ ಗುಂಪಿನ ಜೊತೆ ತೆರಳಿ ಏಮ್ಸ್‌ ವ್ಯಾಪ್ತಿಯ ಗೋಡೆಯನ್ನು ಉರುಳಿಸಿ, ಭದ್ರತಾ ಸಿಬ್ಬಂದಿಯ ಮೇಲೆ ಹಲ್ಲೆ ಮಾಡಿದ ಪ್ರಕರಣದಲ್ಲಿ ಸೋಮನಾಥ್‌ ಭಾರ್ತಿಯನ್ನು ಅಪರಾಧಿ ಎಂದು ನ್ಯಾಯಾಲಯ ಹೇಳಿದೆ.
Somnath Bharti, Rouse Avenue
Somnath Bharti, Rouse Avenue
Published on

ಆಮ್‌ ಆದ್ಮಿ ಪಕ್ಷದ ಶಾಸಕ ಸೋಮನಾಥ್‌ ಭಾರ್ತಿ ಅವರು 2016ರಲ್ಲಿ ನಡೆದಿದ್ದ ಹಲ್ಲೆ ಪ್ರಕರಣದಲ್ಲಿ ಅಪರಾಧಿ ಎಂದು ತೀರ್ಪು ನೀಡಿರುವ ದೆಹಲಿಯ ಜನಪ್ರತಿನಿಧಿಗಳ ನ್ಯಾಯಾಲಯವು ಭಾರ್ತಿ ಅವರಿಗೆ ಎರಡು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ (ರಾಜ್ಯ ವರ್ಸಸ್‌ ಸೋಮನಾಥ್‌ ಭಾರ್ತಿ). ಪ್ರಸ್ತುತ ಭಾರ್ತಿ ಅವರಿಗೆ ಜಾಮೀನು ನೀಡಲಾಗಿದ್ದು, ಅಧೀನ ನ್ಯಾಯಾಲಯದ ತೀರ್ಪು ಪ್ರಶ್ನಿಸಿ ಭಾರ್ತಿ ಅವರು ದೆಹಲಿ ಹೈಕೋರ್ಟ್‌ನಲ್ಲಿ ಮೇಲ್ಮನವಿ ಸಲ್ಲಿಸುವ ಸಾಧ್ಯತೆ ಇದೆ.

“ಭಾರ್ತಿ ಅವರ ವಿರುದ್ಧ ಐಪಿಸಿ ಸೆಕ್ಷನ್‌ 323 (ಉದ್ದೇಶಪೂರ್ವಕವಾಗಿ ಗಾಯ ಮಾಡಿದ್ದಕ್ಕೆ ಶಿಕ್ಷೆ), 353 (ಸರ್ಕಾರಿ ಅಧಿಕಾರಿ ಕರ್ತವ್ಯಕ್ಕೆ ಅಡ್ಡಿ), 149 (ಏಕೈಕ ಉದ್ದೇಶಕ್ಕಾಗಿ ಅಪರಾಧಿಗಳೆಲ್ಲರೂ ಕಾನೂನುಬಾಹಿರವಾಗಿ ಒಂದೇ ಕಡೆ ನೆರೆಯುವುದು), ಸಾರ್ವಜನಿಕ ಆಸ್ತಿಗೆ ಹಾನಿ ನಿಯಂತ್ರಣ ಕಾಯಿದೆಯ ಸೆಕ್ಷನ್‌ 3 (ಸಾರ್ವಜನಿಕ ಆಸ್ತಿಗೆ ಹಾನಿ), ಮತ್ತು ಐಪಿಸಿ ಸೆಕ್ಷನ್‌ 147ಕ್ಕೆ (ದೊಂಬಿಗೆ ಶಿಕ್ಷೆ) ಪೂರಕವಾದ ಸೆಕ್ಷನ್‌ 149ರ ಅಡಿ ಆರೋಪಿಯು ತಪ್ಪೆಸಗಿದ್ದಾರೆ ಎಂಬುದನ್ನು ಪ್ರಾಸಿಕ್ಯೂಷನ್‌ ಅನುಮಾನರಹಿತವಾಗಿ ಸಾಬೀತುಪಡಿಸಿದೆ,” ಎಂದು ಹೆಚ್ಚುವರಿ ಮುಖ್ಯ ಮೆಟ್ರೋಪಾಲಿಟಾನ್‌ ಮ್ಯಾಜಿಸ್ಟ್ರೇಟ್ ರವೀಂದ್ರ ಕುಮಾರ್‌ ಪಾಂಡೆ‌ ತಮ್ಮ ಆದೇಶದಲ್ಲಿ ಹೇಳಿದ್ದಾರೆ.

Also Read
ಪುನರಾವರ್ತಿತ ಎಚ್ಚರಿಕೆಗಳ ಹೊರತಾಗಿಯೂ ದೆಹಲಿಯಲ್ಲಿ ಕೋವಿಡ್‌ ನಿಯಂತ್ರಿಸಲು ಆಪ್‌ ಸರ್ಕಾರ ಕ್ರಮಕೈಗೊಳ್ಳಲಿಲ್ಲ: ಕೇಂದ್ರ

ಸಹ ಆರೋಪಿಗಳಾದ ದಿಲೀಪ್‌ ಝಾ, ಜಗತ್‌ ಸೈನಿ, ರಾಕೇಶ್‌ ಪಾಂಡೆ ಮತ್ತು ಸಂದೀಪ್‌ ಅವರ ವಿರುದ್ಧದ ಆರೋಪಗಳನ್ನು ಸಾಬೀತುಪಡಿಸುವಲ್ಲಿ ಪ್ರಾಸಿಕ್ಯೂಷನ್‌ ವಿಫಲವಾಗಿದ್ದು, ಅವರನ್ನು ಆರೋಪ ಮುಕ್ತಗೊಳಿಸಲಾಗಿದೆ.

2016ರ ಸೆಪ್ಟೆಂಬರ್‌ನಲ್ಲಿ ಪೊಲೀಸರು ಸಲ್ಲಿಸಿರುವ ಆರೋಪಪಟ್ಟಿಯಲ್ಲಿ ಉಲ್ಲೇಖಿಸಿರುವಂತೆ ಸಂಬಂಧಪಟ್ಟ ಪ್ರದೇಶದ ಶಾಸಕರಾದ ಆರೋಪಿ ಸೋಮನಾಥ್‌ ಭಾರ್ತಿ ನೇತೃತ್ವದಲ್ಲಿ ಸುಮಾರು 300 ಜನರನ್ನುಒಳಗೊಂಡ ಉದ್ರಿಕ್ತರ ಗುಂಪು ಏಮ್ಸ್‌ನ ಗಡಿ ಗೋಡೆಯ ಬಳಿ ಜಮಾಯಿಸಿತ್ತು. ಏಮ್ಸ್‌ ಗೋಡೆಯನ್ನು ಉರುಳಿಸಿ, ಒಳ ನುಗ್ಗುವ ಉದ್ದೇಶವನ್ನು ಗುಂಪು ಹೊಂದಿತ್ತು. ಇದಕ್ಕಾಗಿ ಉದ್ರಿಕ್ತರ ಗುಂಪು ಜೆಸಿಬಿ ಮತ್ತು ಕೈಗೆ ಸಿಕ್ಕಿದ ಸಾಧನಗಳ ಮೂಲಕ ಗೋಡೆಯನ್ನು ನಾಶಪಡಿಸಿದ್ದರು. ಭದ್ರತಾ ಸಿಬ್ಬಂದಿಯ ಮೇಲೆ ಕಲ್ಲಿನ ದಾಳಿ ನಡೆಸಿದ್ದರು ಎಂದು ಆರೋಪಿಸಲಾಗಿತ್ತು.

Kannada Bar & Bench
kannada.barandbench.com