Karnataka High Court 
ಸುದ್ದಿಗಳು

ಕರ್ನಾಟಕ ಹೈಕೋರ್ಟ್‌ನಲ್ಲಿ ವರ್ಷಾಂತ್ಯಕ್ಕೆ 2.66 ಲಕ್ಷ ಪ್ರಕರಣ ವಿಲೇವಾರಿಗೆ ಬಾಕಿ, ಮಹಿಳೆಯರಿಂದ 1,389 ದಾವೆ ದಾಖಲು

ಕ್ರಿಮಿನಲ್‌ ಪ್ರಕರಣಗಳಿಗೆ ಹೋಲಿಕೆ ಮಾಡಿದರೆ ಬಾಕಿ ಉಳಿದಿರುವ ಪ್ರಕರಣಗಳ ಪಟ್ಟಿಯಲ್ಲಿ ಸಿವಿಲ್‌ ದಾವೆಗಳದ್ದು ಸಿಂಹಪಾಲಾಗಿದೆ ಎಂಬುದು ಎನ್‌ಜೆಡಿಜಿಯಿಂದ ತಿಳಿದುಬಂದಿದೆ.

Bar & Bench

ಕರ್ನಾಟಕ ಹೈಕೋರ್ಟ್‌ನಲ್ಲಿ ವರ್ಷಾಂತ್ಯಕ್ಕೆ ಒಟ್ಟು 2,66,895 ಪ್ರಕರಣಗಳು ಬಾಕಿ ಉಳಿದಿವೆ. ಇದರಲ್ಲಿ 2,26,735 ಸಿವಿಲ್‌ ಮತ್ತು 40,160 ಕ್ರಿಮಿನಲ್‌ ಪ್ರಕರಣಗಳು ಸೇರಿವೆ ಎಂಬುದು ರಾಷ್ಟ್ರೀಯ ನ್ಯಾಯಿಕ ದತ್ತಾಂಶ ಗ್ರಿಡ್‌ನಿಂದ (ಎನ್‌ಜೆಡಿಜಿ) ತಿಳಿದು ಬಂದಿದೆ. ನವೆಂಬರ್‌ ತಿಂಗಳಲ್ಲಿ 3,950 ಸಿವಿಲ್‌ ಮತ್ತು 1,362 ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ 5,312 ಪ್ರಕರಣಗಳನ್ನು ಬೆಂಗಳೂರು, ಧಾರವಾಡ ಮತ್ತು ಕಲಬುರ್ಗಿ ಪೀಠಗಳು ವಿಲೇವಾರಿ ಮಾಡಿವೆ.

ಬೆಂಗಳೂರಿನ ಪ್ರಧಾನ ಪೀಠದಲ್ಲಿ 1,54,083 ಸಿವಿಲ್‌ ಮತ್ತು 32,520 ಕ್ರಿಮಿನಲ್‌ ಪ್ರಕರಣಗಳು ಸೇರಿ ಒಟ್ಟು 1,86,603 ವಿಲೇವಾರಿ ಬಾಕಿ ಇವೆ. ಧಾರಾವಾಡ ಪೀಠದಲ್ಲಿ 49,185 ಸಿವಿಲ್‌ ಮತ್ತು 5,907 ಕ್ರಿಮಿನಲ್‌ ದಾವೆಗಳು ಸೇರಿ ಒಟ್ಟು 55,092 ಪ್ರಕರಣಗಳು ಹಾಗೂ ಕಲಬುರ್ಗಿ ಪೀಠದಲ್ಲಿ 23,467 ಸಿವಿಲ್‌ ಮತ್ತು 1,733 ಕ್ರಿಮಿನಲ್‌ ಮೊಕದ್ದಮೆಗಳು ಸೇರಿದಂತೆ ಒಟ್ಟು 25,200 ಪ್ರಕರಣಗಳು ವಿಲೇವಾರಿಗೆ ಬಾಕಿ ಇವೆ.

ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಕಳೆದ ಒಂದು ವರ್ಷದಲ್ಲಿ 43,404 ಸಿವಿಲ್‌ ಮತ್ತು 9,980 ಕ್ರಿಮಿನಲ್‌ ಪ್ರಕರಣಗಳು ಸೇರಿದಂತೆ ಒಟ್ಟು 53,384 ಪ್ರಕರಣಗಳು ದಾಖಲಾಗಿವೆ ಎಂಬುದು ಎನ್‌ಜೆಡಿಜಿಯಿಂದ ತಿಳಿದು ಬಂದಿದೆ.

ವಿಲೇವಾರಿಗೆ ಬಾಕಿ ಉಳಿದಿರುವ ಪ್ರಕರಣಗಳ ಪೈಕಿ ಒಂದರಿಂದ ಮೂರು ವರ್ಷಗಳಲ್ಲಿ ದಾಖಲಾಗಿರುವ ಪ್ರಕರಣಗಳದ್ದು ಸಿಂಹಪಾಲು. ಈ ಅವಧಿಯಲ್ಲಿ ದಾಖಲಾದ 56,868 ಸಿವಿಲ್‌ ಮತ್ತು 11,089 ಕ್ರಿಮಿನಲ್‌ ದಾವೆಗಳು ಸೇರಿದಂತೆ ಒಟ್ಟು 67,957 ಪ್ರಕರಣಗಳು ವಿವಿಧ ಪೀಠಗಳ ಮುಂದೆ ವಿವಿಧ ಹಂತದ ವಿಚಾರಣೆಯಲ್ಲಿವೆ.

ಮೂರರಿಂದ ಐದು ವರ್ಷಗಳ ಹಿಂದೆ ದಾಖಲಾಗಿರುವ 46,437 ಪ್ರಕರಣಗಳು, ಐದರಿಂದ ಹತ್ತು ವರ್ಷಗಳ ಹಿಂದೆ ದಾಖಲಾಗಿರುವ 58,036, ಹತ್ತರಿಂದ ಇಪ್ಪತ್ತು ವರ್ಷಗಳ ಹಿಂದೆ ದಾಖಲಾಗಿ ವಿಚಾರಣೆಯ ಹಂತದಲ್ಲಿರುವ 40,958 ದಾವೆಗಳು ವಿಲೇವಾರಿಗೆ ಬಾಕಿ ಉಳಿದಿವೆ.

ಮಹಿಳೆಯರು 1,220 ಸಿವಿಲ್‌ ಮತ್ತು 169 ಕ್ರಿಮಿನಲ್‌ ಪ್ರಕರಣ ಸೇರಿ ಒಟ್ಟು 1,389 ದಾವೆಗಳನ್ನು ದಾಖಲಿಸಿದ್ದಾರೆ. ಹಿರಿಯ ನಾಗರಿಕರ ವಿಭಾಗದಲ್ಲಿ ಕ್ರಿಮಿನಲ್‌ ಮತ್ತು ಸಿವಿಲ್‌ ಸೇರಿದಂತೆ ಒಟ್ಟು 9,998 ಮೊಕದ್ದಮೆಗಳು ವಿಲೇವಾರಿಗಾಗಿ ಹೈಕೋರ್ಟ್‌ನ ಮೂರೂ ಪೀಠಗಳಲ್ಲಿ ಬಾಕಿ ಉಳಿದಿವೆ.