ನ್ಯಾಯಿಕ ವ್ಯವಸ್ಥೆಯಲ್ಲಿ ಮಹಿಳೆಗೆ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ನ್ಯಾಯಯುತ ಸಮಾಜ ಸಾಧ್ಯ: ರಾಷ್ಟ್ರಪತಿ ಕೋವಿಂದ್‌

“ಈ ನ್ಯಾಯಾಲಯದಲ್ಲಿ ಮಹಿಳಾ ವಕೀಲರು, ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಲಿ ಎಂದು ನಾನು ಆಶಿಸುತ್ತೇನೆ” ಎಂದು ರಾಷ್ಟ್ರಪತಿ ಕೋವಿಂದ್‌ ಅವರು ಅಲಾಹಾಬಾದ್‌ ಹೈಕೋರ್ಟ್‌ನ ನೂತನ ಕಟ್ಟಡದ ಶಿಲಾನ್ಯಾಸ ಕಾರ್ಯಕ್ರಮದಲ್ಲಿ ಹೇಳಿದರು.
President Ram Nath Kovind
President Ram Nath Kovind

ಲ"ನ್ಯಾಯಯುತ ಮತ್ತು ಸಮ ಸಮಾಜವನ್ನು ನಿರ್ಮಿಸಬೇಕೆಂದರೆ ನ್ಯಾಯಾಂಗ ವ್ಯವಸ್ಥೆಯಲ್ಲಿ ಮಹಿಳೆಯರಿಗೆ ಪ್ರಾತಿನಿಧ್ಯ ಕಲ್ಪಿಸಬೇಕು" ಎಂದು ರಾಷ್ಟ್ರಪತಿ ರಾಮನಾಥ್‌ ಕೋವಿಂದ್‌ ಶನಿವಾರ ಪ್ರತಿಪಾದಿಸಿದರು.

ಉತ್ತರ ಪ್ರದೇಶದಲ್ಲಿ ನೂತನ ರಾಷ್ಟ್ರೀಯ ಕಾನೂನು ವಿಶ್ವವಿದ್ಯಾಲಯ (ಎನ್‌ಎಲ್‌ಯು) ಮತ್ತು ಅಲಾಹಾಬಾದ್‌ ಹೈಕೋರ್ಟ್‌ನ ನೂತನ ಕಟ್ಟಡಕ್ಕೆ ಶಿಲಾನ್ಯಾಸ ನೆರವೇರಿಸಿ ಅವರು ಮಾತನಾಡಿದರು.

“ಇತರೆ ಎಲ್ಲಾ ಕ್ಷೇತ್ರಗಳಲ್ಲಿ ದೊರೆಯಬೇಕಾದಂತೆ ನ್ಯಾಯಾಂಗ ವ್ಯವಸ್ಥೆಯಲ್ಲಿಯೂ ಮಹಿಳೆಯರಿಗೆ ಸೂಕ್ತ ಪ್ರಾತಿನಿಧ್ಯ ಸಿಕ್ಕಾಗ ಮಾತ್ರ ಪೂರ್ಣ ಪ್ರಮಾಣದಲ್ಲಿ ನ್ಯಾಯಯುತ ಸಮಾಜವನ್ನು ನಿರ್ಮಿಸಲು ಸಾಧ್ಯ. ಇಂದು ಸುಪ್ರೀಂ ಕೋರ್ಟ್‌ ಮತ್ತು ಹೈಕೋರ್ಟ್‌ಗಳು ಸೇರಿದಂತೆ ಒಟ್ಟಾರೆ ಶೇ. 12ರಷ್ಟು ಮಂದಿ ಮಾತ್ರ ಮಹಿಳಾ ನ್ಯಾಯಮೂರ್ತಿಗಳು ಇದ್ದಾರೆ” ಎಂದು ಅವರು ಹೇಳಿದರು.

ರಾಜ್ಯ ನೀತಿಯ ನಿರ್ದೇಶಕ ತತ್ವಗಳ ಗುರಿ ಸಾಧಿಸುವ ನಿಟ್ಟಿನಲ್ಲಿ ನ್ಯಾಯಾಂಗ ವ್ಯವಸ್ಥೆಗೆ ಹೆಚ್ಚಿನ ಮಹಿಳಾ ನ್ಯಾಯಮೂರ್ತಿಗಳನ್ನು ನೇಮಕ ಮಾಡುವುದು ಅಗತ್ಯವಾಗಿದೆ ಎಂದು ರಾಷ್ಟ್ರಪತಿ ವಿವರಿಸಿದರು. “ನಮ್ಮ ಸಂವಿಧಾನ ಹೇಳಿರುವ ರಾಜ್ಯ ನೀತಿಯ ನಿರ್ದೇಶಕ ತತ್ವಗಳನ್ನು ಅನುಷ್ಠಾನಗೊಳಿಸಲು ನ್ಯಾಯಾಂಗದಲ್ಲಿ ಮಹಿಳೆಯರ ಪಾಲುದಾರಿಕೆಯನ್ನು ಹೆಚ್ಚಿಸಬೇಕಿದೆ. ಈ ಹೈಕೋರ್ಟ್‌ನಲ್ಲಿ ಮಹಿಳಾ ವಕೀಲರು, ಅಧಿಕಾರಿಗಳು ಮತ್ತು ನ್ಯಾಯಮೂರ್ತಿಗಳ ಸಂಖ್ಯೆ ಹೆಚ್ಚಲಿ ಎಂದು ಆಶಿಸುತ್ತೇನೆ” ಎಂದು ಹೇಳಿದರು.

ಭಾರತದ ಮೊದಲ ಮಹಿಳಾ ವಕೀಲೆ ಕೊರ್ನೆಲಿಯಾ ಸೊರಾಬ್ಜಿ ಅವರನ್ನು ನೋಂದಾಯಿಸುವ ಮೂಲಕ ಐತಿಹಾಸಿಕ ಮತ್ತು ಭವಿಷ್ಯದ ದೃಷ್ಟಿಯಿಂದ ಮಹತ್ವದ ನಿರ್ಧಾರ ಕೈಗೊಂಡಿದ್ದ ಅಲಾಹಾಬಾದ್‌ ಹೈಕೋರ್ಟ್‌ ಮೇಲೆ ನ್ಯಾಯಾಂಗದಲ್ಲಿ ಮಹಿಳೆಯರ ಪ್ರಾತಿನಿಧ್ಯ ಹೆಚ್ಚಿಸುವ ಜವಾಬ್ದಾರಿಯ ಗುರಿಯನ್ನು ಹೊರಿಸುವುದಾಗಿ ರಾಷ್ಟ್ರಪತಿ ಕೋವಿಂದ್‌ ಹೇಳಿದರು.

ನ್ಯಾಯದಾನ ನೀಡಲು ಮಹಿಳೆಯರು ಹೆಚ್ಚು ಸಜ್ಜುಗೊಂಡಿದ್ದು, ಹೆಚ್ಚು ಉತ್ಸುಕತೆಯುಳ್ಳವರಾಗಿರುವುದು ಸಾಬೀತಾಗಿದೆ. ವಿಭಿನ್ನ ಜವಾಬ್ದಾರಿಗಳ ನಡುವೆಯೂ ಕರ್ತವ್ಯದ ಸ್ಥಳದಲ್ಲಿ ಅವರು ಅಪ್ರತಿಮವಾದ ಸಾಧನೆ ಮಾಡಿದ್ದಾರೆ ಎಂದು ರಾಷ್ಟ್ರಪತಿ ವಿವರಿಸಿದರು. “ನ್ಯಾಯದಾನದ ಬಗ್ಗೆ ಮಹಿಳೆಯರಿಗೆ ಹೆಚ್ಚು ಉತ್ಸುಕತೆ ಇದೆ. ಇದರಲ್ಲಿ ಕೆಲವೊಂದು ಅಪವಾದಗಳಿರಬಹುದು. ಅದಾಗ್ಯೂ, ಅವರು ನ್ಯಾಯದಾನಕ್ಕೆ ಬೇಕಾದ ಗುಣ, ಸ್ವಭಾವ, ಮನಸ್ಥಿತಿ ಹೊಂದಿದ್ದಾರೆ. ಪೋಷಕರು, ಅತ್ತೆ-ಮಾವಂದಿರು, ಪತಿ ಅಥವಾ ಮಕ್ಕಳಿದ್ದರೂ ಉದ್ಯೋಗ ಮಾಡುವ ಮಹಿಳೆಯರು ಎಲ್ಲದರಲ್ಲೂ ಸಮತೋಲನ ಕಾಯ್ದುಕೊಳ್ಳುತ್ತಾರೆ. ಇದೆಲ್ಲದರ ನಡುವೆಯೂ ಕರ್ತವ್ಯದ ಸ್ಥಳದಲ್ಲಿ ಶ್ರೇಷ್ಠತೆಯ ಉದಾಹರಣೆಯಾಗಿ ಹೊರಹೊಮ್ಮುತ್ತಾರೆ” ಎಂದರು.

“ಸಂವಿಧಾನದ ಮೂರು ಸ್ತಂಭಗಳಾದ ಶಾಸಕಾಂಗ, ನ್ಯಾಯಾಂಗ ಮತ್ತು ಕಾರ್ಯಾಂಗ ಜೊತೆ ನೇರವಾಗಿ ಅಥವಾ ಪರೋಕ್ಷವಾಗಿ ಒಡನಾಡಿರುವ ನಾನು ಅದೃಷ್ಟವಂತ. ಬಡವರು ನ್ಯಾಯ ಪಡೆಯಲು ಹೋರಾಟ ನಡೆಸುವುದನ್ನು ನಾನು ಹತ್ತಿರದಿಂದ ಕಂಡಿದ್ದೇನೆ” ಎಂದು ಅವರು ನೆನೆಪಿಸಿಕೊಂಡರು.

Also Read
ಇಂದಿರಾ ಅವರನ್ನು ಅನರ್ಹಗೊಳಿಸಿದ್ದ ಅಲಾಹಾಬಾದ್ ಹೈಕೋರ್ಟ್‌ ತೀರ್ಪು ದೇಶವನ್ನೇ ಅಲ್ಲಾಡಿಸಿದ ದಿಟ್ಟ ತೀರ್ಪು: ಸಿಜೆಐ

"ಪ್ರತಿಯೊಬ್ಬರೂ ನ್ಯಾಯಾಂಗದಿಂದ ನಿರೀಕ್ಷೆಯನ್ನು ಹೊಂದಿದ್ದಾರೆ. ಆದರೆ ಸಾಮಾನ್ಯ ಜನರು ನ್ಯಾಯಾಂಗದ ಮಧ್ಯಪ್ರವೇಶ ಬಯಸಲು ಹಿಂಜರಿಯುತ್ತಾರೆ. ನ್ಯಾಯಾಂಗದಲ್ಲಿ ಜನರ ನಂಬಿಕೆ ಹೆಚ್ಚಿಸುವ ದೃಷ್ಟಿಯಿಂದ ಪರಿಸ್ಥಿತಿಯನ್ನು ನಾವು ಬದಲಿಸಬೇಕಿದೆ” ಎಂದು ರಾಷ್ಟ್ರಪತಿಯವರು ಹೇಳಿದರು.

“ಎಲ್ಲರಿಗೂ ಕಾಲಮಿತಿಯಲ್ಲಿ ನ್ಯಾಯದಾನ ಸಿಗುವಂತಾಗಬೇಕು; ವ್ಯವಸ್ಥೆಯು ಎಲ್ಲರಿಗೂ ನಿಲುಕುವಂತಿರಬೇಕು, ಸಾಮಾನ್ಯ ಜನರು ತೀರ್ಪುಗಳನ್ನು ಅರ್ಥೈಸಿಕೊಳ್ಳುವಂತಿರಬೇಕು. ಮಹಿಳೆಯರು ಮತ್ತು ಅಸಹಾಯಕ ಸಮುದಾಯಗಳಿಗೆ ನ್ಯಾಯ ದೊರೆಯಬೇಕು, ಇದುವೇ ನಮ್ಮ ಕರ್ತವ್ಯ. ಇದು ಸಾಧ್ಯವಾಗುವುದು ನ್ಯಾಯಾಂಗ ವ್ಯವಸ್ಥೆಯಲ್ಲಿ ಭಾಗೀದಾರರಾದ ಎಲ್ಲರ ಆಲೋಚನಾ ಕ್ರಮದಲ್ಲಿ ಮತ್ತು ಕೆಲಸದ ಸಂಸ್ಕೃತಿಯಲ್ಲಿ ಬದಲಾವಣೆಯಾದಾಗ ಹಾಗೂ ಸೂಕ್ಷ್ಮತೆ ಇದ್ದಾಗ” ಎಂದು ರಾಷ್ಟ್ರಪತಿ ಕೋವಿಂದ್‌ ಅಭಿಪ್ರಾಯಪಟ್ಟರು.

Related Stories

No stories found.
Kannada Bar & Bench
kannada.barandbench.com